Sri Gurubhyo Logo

2024 Aries Yearly Horoscope: 2024ನೇ ಇಸವಿಯ ಮೇಷ ರಾಶಿ ವಾರ್ಷಿಕ ಜ್ಯೋತಿಷ ಭವಿಷ್ಯ

Aries 2024 Yearly Horoscope
Aries

ಹನ್ನೆರಡು ರಾಶಿಯವರಿಗೆ ಜ್ಯೋತಿಷ ರೀತಿಯಾಗಿ 2024ನೇ ಇಸವಿ ಹೇಗಿರುತ್ತದೆ ಎಂಬುದನ್ನು ವಿವರಿಸುವ ಸರಣಿಯನ್ನು ಆರಂಭಿಸಲಾಗುತ್ತಿದೆ. ಸಾಮಾನ್ಯವಾಗಿ ಯುಗಾದಿಗೆ ಆ ಸಂವತ್ಸರದ ಫಲವನ್ನು ಹೇಳುವುದು ರೂಢಿ. ಆದರೆ ಏನು ಮಾಡುತ್ತೀರಿ, ಈಗೆಲ್ಲ ಕ್ಯಾಲೆಂಡರ್ ವರ್ಷಕ್ಕೆ ಹೆಚ್ಚು ಪ್ರಾಮುಖ್ಯ ನೀಡಲಾಗುತ್ತಿದೆ. ಆದ್ದರಿಂದ 2024ನೇ ಇಸವಿಯಲ್ಲಿ ಮೇಷದಿಂದ ಆರಂಭವಾಗಿ ಮೀನ ರಾಶಿಯವರ ತನಕ ಯಾವ ರಾಶಿಯ ಜನರಿಗೆ ಏನು ಫಲ ಎಂಬುದನ್ನು ತಿಳಿದುಕೊಳ್ಳಿ.

ಅದಕ್ಕೂ ಮೊದಲು ಕೆಲವು ವಿಚಾರಗಳನ್ನು ಹೇಳಿಬಿಡುವುದು ಉತ್ತಮ. ಏನೆಂದರೆ, ಇದು ಗೋಚಾರ ಫಲ. ಅಂದರೆ ಗ್ರಹಗಳು, ಅದರಲ್ಲೂ ದೀರ್ಘಾವಧಿಗೆ ಒಂದೇ ರಾಶಿಯಲ್ಲಿ ಇರುವಂಥ ಶನಿ, ಗುರು ಹಾಗೂ ರಾಹು- ಕೇತು ಇವುಗಳನ್ನು ಮಾತ್ರ ಗಣನೆಗೆ ತೆಗೆದುಕೊಂಡು ಹೇಳುವಂಥ ಸಾಮಾನ್ಯ ಫಲ. ನಿರ್ದಿಷ್ಟವಾಗಿ ಆಯಾ ವ್ಯಕ್ತಿಗೆ ಆಯಾ ಸಮಯ ಹೇಗಿದೆ ಎಂಬುದನ್ನು ತಿಳಿಸಬೇಕಾದರೆ ವ್ಯಕ್ತಿಗತವಾದ ಜನ್ಮ ಜಾತಕದ ಪರಿಶೀಲನೆ ಮಾಡಲೇಬೇಕು. ಹಾಗೂ ಅದರಲ್ಲಿ ದಶಾ- ಭುಕ್ತಿ ಹಾಗೂ ಮತ್ತಿತರ ಅಂಶಗಳ ತುಲನೆಯನ್ನು ಮಾಡಲೇಬೇಕಾಗುತ್ತದೆ. 

ಆದ್ದರಿಂದ ಇಲ್ಲಿ ನೀಡಲಾಗಿರುವ ಗೋಚಾರ ಫಲದ ಜತೆಗೆ ನಿಮ್ಮ ಭವಿಷ್ಯದ ಬಗ್ಗೆ ನಿಖರವಾಗಿ ತಿಳಿದುಕೊಳ್ಳಬೇಕು ಎಂದಾದಲ್ಲಿ ವೈಯಕ್ತಿಕ ಜಾತಕ ಪರಿಶೀಲನೆಯನ್ನು ಮಾಡಿಸಿಕೊಳ್ಳಿ. ಅಂದರೆ ನಿಮ್ಮ ಬಳಿ ಜನ್ಮ ಜಾತಕ ಇರಬೇಕಾಗುತ್ತದೆ. ಒಂದು ವೇಳೆ ನಿಮ್ಮ ಬಳಿ ಜನ್ಮ ಜಾತಕ ಇಲ್ಲ ಎಂದಾದಲ್ಲಿ ಅದನ್ನು ಮೊದಲು ಮಾಡಿಸಿಟ್ಟುಕೊಳ್ಳಿ. ಷೋಡಶ ವರ್ಗ, ಅಷ್ಟಕ ವರ್ಗ, ರಾಶಿ ಕುಂಡಲಿ, ನವಾಂಶ ಕುಂಡಲಿ ಹೀಗೆ ಎಲ್ಲ ಮಾಹಿತಿ ಒಳಗೊಂಡಂಥ ಸಂಪೂರ್ಣ ಜಾತಕ ಮಾಡಿಸಿಟ್ಟುಕೊಳ್ಳುವುದು ಉತ್ತಮ. 

ಅಶ್ವಿನಿ ನಕ್ಷತ್ರದ ಒಂದು, ಎರಡು, ಮೂರು ಹಾಗೂ ನಾಲ್ಕನೇ ಪಾದ, ಭರಣಿ ನಕ್ಷತ್ರದ ಒಂದು ಎರಡು ಮೂರು ನಾಲ್ಕನೇ ಪಾದ ಹಾಗೂ ಕೃತ್ತಿಕಾ ನಕ್ಷತ್ರದ ಒಂದನೇ ಪಾದ ಸೇರಿ ಮೇಷ ರಾಶಿ ಆಗುತ್ತದೆ. ಇನ್ನು ಮೇಷ ರಾಶಿಯ ಅಧಿಪತಿ ಕುಜ ಗ್ರಹ ಆಗುತ್ತದೆ. ಆಯಾ ನಕ್ಷತ್ರದ ಅಧಿಪತಿಗಳು ಯಾರ್ಯಾರು ಅಂತು ನೋಡುವುದಾದರೆ ಅಶ್ವಿನಿ ನಕ್ಷತ್ರದ ಅಧಿಪತಿ ಕೇತು, ಭರಣಿಗೆ ಶುಕ್ರ ಹಾಗೂ ಕೃತ್ತಿಕಾಗೆ ರವಿ ಅಧಿಪತಿ ಆಗುತ್ತದೆ.

Kaal Sarp Yoga: ಕಾಳಸರ್ಪ ಯೋಗ ಅಂದರೇನು, ಎಷ್ಟು ವಿಧಗಳಿವೆ, ಅದರ ಪರಿಣಾಮಗಳ ವಿವರ ಇಲ್ಲಿದೆ

ಇನ್ನು ಮೇಷ ರಾಶಿಯವರ 2024ರ ವರ್ಷ ಭವಿಷ್ಯವನ್ನು ಓದಿಕೊಳ್ಳಿ.

ರಾಹು (ಜನವರಿಯಿಂದ ಡಿಸೆಂಬರ್ ತನಕ ಮೀನ ರಾಶಿಯಲ್ಲಿ)

ಇಡೀ ವರ್ಷ ನಿಮ್ಮ ರಾಶಿಗೆ ವ್ಯಯ ಸ್ಥಾನದಲ್ಲಿ ರಾಹು ಗ್ರಹದ ಸಂಚಾರ, ಅಂದರೆ ಮೀನ ರಾಶಿಯಲ್ಲಿ ರಾಹುವಿನ ಸಂಚಾರ ಇರುತ್ತದೆ. ವ್ಯಯ ಸ್ಥಾನ ಅಂದರೆ ಖರ್ಚು. ಅದರಲ್ಲೂ ರಾಹು ಅಲ್ಲಿದೆ ಎಂದಾದಲ್ಲಿ ವಿಪರೀತ ಖರ್ಚಾಗುತ್ತದೆ. ಕಿಡ್ನಿ ಸ್ಟೋನ್, ಗಾಲ್ ಬ್ಲಾಡರ್, ಮೂತ್ರ ಸೋಂಕು, ಕಣ್ಣಿನ ಸಮಸ್ಯೆ, ಹೊಟ್ಟೆಯುಬ್ಬರ, ಅನ್ನಾಂಗದಲ್ಲಿ ಸಮಸ್ಯೆ ಈ ರೀತಿಯ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಒಂದು ವೇಳೆ ಈಗಾಗಲೇ ಆ ಸಮಸ್ಯೆಗಳಿಂದ ಬಳಲುತ್ತಿದ್ದೀರಿ ಎಂದಾದರೆ ಅದು ಉಲ್ಬಣ ಆಗಬಹುದು. ಇನ್ನು ಭೂಮಿಗೆ ಸಂಬಂಧಿಸಿದ ವ್ಯಾಜ್ಯಗಳು ಕಾಣಿಸಿಕೊಂಡು ಅಥವಾ ಅದರಲ್ಲಿ ನೀವೇ ಕೋರ್ಟ್ ಮೆಟ್ಟಿಲೇರುವಂತೆ ಆಗಬಹುದು ಅಥವಾ ನಿಮ್ಮ ವಿರುದ್ಧ ಕೋರ್ಟ್ ಗೆ ದಾವೆ ಹೂಡಬಹುದು. ಶತ್ರುಗಳ ಹಿಡಿತ ಬಲವಾಗುತ್ತದೆ. ನೀವು ಆಲೋಚಿಸುವ ಯೋಜನೆ, ಯೋಚನೆಗಳು ಮುಂಚೆಯೇ ಅವರಿಗೆ ತಿಳಿದುಹೋಗಿದೆ ಎಂಬಂತೆ ನಿಮ್ಮ ವಿರೋಧಿಗಳ ನಡೆ ಇರಲಿದೆ. ನಿಮ್ಮ ಬುದ್ಧಿಗೆ ಮಂಕು ಬಂಡಿದಂತೆ ಕೆಲವು ಸಲ ಆಗುತ್ತದೆ. ಯಾವುದನ್ನು ನೀವು ಮಾಡಬಾರದು ಅಂದುಕೊಂಡಿರುತ್ತೀರೋ ಅದನ್ನೇ ಮಾಡುತ್ತೀರಿ, ಸಮಸ್ಯೆಯನ್ನು ತಂದುಕೊಳ್ಳುತ್ತೀರಿ. 

ಪರಿಹಾರ: ದುರ್ಗಾ ಹೋಮ ಮಾಡಿಸಿಕೊಳ್ಳಬಹುದು ಅಥವಾ ದುರ್ಗಾ ದೀಪ ನಮಸ್ಕಾರವನ್ನು ಮಾಡಿಸಿಕೊಳ್ಳಿ. ಒಟ್ಟಿನಲ್ಲಿ ದುರ್ಗಾ ಪರಮೇಶ್ವರಿ ಆರಾಧನೆಯನ್ನು ಮಾಡಬೇಕು.

ಕೇತು (ಜನವರಿಯಿಂದ ಡಿಸೆಂಬರ್ ತನಕ ಕನ್ಯಾ ರಾಶಿಯಲ್ಲಿ)

ಆಧ್ಯಾತ್ಮ ಕ್ಷೇತ್ರವನ್ನೇ ವೃತ್ತಿಯನ್ನಾಗಿ ಮಾಡಿಕೊಂಡವರಿಗೆ ಇದು ಅನುಕೂಲಕರವಾದ ಸಮಯ ಆಗಿರಲಿದೆ. ತಮ್ಮ ಕ್ಷೇತ್ರಕ್ಕೆ ಸಂಬಂಧಿಸಿದ ಸಂಘ- ಸಂಸ್ಥೆಗಳಲ್ಲಿ ಪ್ರಮುಖವಾದ ಹುದ್ದೆಯನ್ನು ಅಲಂಕರಿಸುವ ಸಾಧ್ಯತೆ ಇದೆ. ಆದರೆ ಯಾವುದು ಸಹ ಸುಲಭಕ್ಕೆ ದಕ್ಕುವುದಿಲ್ಲ. ಉಳಿದಂತೆ ನಿಮ್ಮಲ್ಲೇ ಒಂದು ಬಗೆಯ ವೈರಾಗ್ಯ ಬಂದಂತಾಗುತ್ತದೆ. ಅದೇ ವೇಳೆ ಕೆಲವು ಸಲ ನಿಮ್ಮ ಮನಸ್ಸು ಹತೋಟಿ ಕಳೆದುಕೊಂಡು, ವಿಪರೀತ ಆಕ್ರಮಣಕಾರಿಯಾಗಿ ಆಲೋಚನೆ ಮಾಡುತ್ತೀರಿ. ಇನ್ನು ನಿಮ್ಮ ಜಾತಕದಲ್ಲಿ ಕೇತುವಿನ ಸ್ಥಿತಿಯನ್ನು ಗಮನಿಸುವುದು ಮುಖ್ಯ. ಒಂದು ವೇಳೆ ದುಸ್ಥಾನದಲ್ಲೋ ಅಥವಾ ನೀಚ ಸ್ಥಿತಿಯಲ್ಲೋ ಇದ್ದಲ್ಲಿ ರಕ್ತಕ್ಕೆ ಸಂಬಂಧಿಸಿದ ಅನಾರೋಗ್ಯ ಸಮಸ್ಯೆಗಳು ತೀವ್ರವಾಗಬಹುದು ಅಥವಾ ವಿಷಪೂರಿತವಾದ ಪ್ರಾಣಿಗಳು ಕಡಿತಕ್ಕೆ ಗುರಿ ಆಗಬಹುದು. ಆದರೆ ನಿಮ್ಮ ಹಣಕಾಸಿನ ಸ್ಥಿತಿಯಲ್ಲಂತೂ ಸಕಾರಾತ್ಮಕವಾದ ಬೆಳವಣಿಗೆ ಕಾಣಬಹುದು. ಸುಲಭವಾಗಿ ಸಾಲ ದೊರೆತುಬಿಡುತ್ತದೆ. ನೀವು ಇತರರಿಗಾಗಿ ಸುಮ್ಮನೆ ಎಂಬಂತೆ ಪ್ರಯತ್ನ ಪಟ್ಟರೂ ಸಾಲ ಸಿಕ್ಕಿಬಿಡುತ್ತದೆ.

ಗುರು (ಜನವರಿಯಿಂದ ಏಪ್ರಿಲ್ ಮೇಷದಲ್ಲಿ ಹಾಗೂ ಮೇ ತಿಂಗಳಿಂದ ಡಿಸೆಂಬರ್ ತನಕ ವೃಷಭದಲ್ಲಿ)

ವರ್ಷದ ಮೊದಲ ನಾಲ್ಕು ತಿಂಗಳು ನಿಮ್ಮದೇ ರಾಶಿಯಲ್ಲಿ ಗುರು ಸಂಚರಿಸುವಾಗ ಒಂದಲ್ಲ ಒಂದು ಬಗೆಯಲ್ಲಿ ಚಿಂತೆ, ದುಃಖ, ಅನಾರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಇನ್ನು ನೀವು ತೆಗೆದುಕೊಳ್ಳುವ ಔಷಧಗಳು ಸಹ ಅಷ್ಟೇನೂ ಪರಿಣಾಮಕಾರಿ ಆಗುವುದಿಲ್ಲ. ಅದೃಷ್ಟ ಪರೀಕ್ಷೆಯಂಥ ವ್ಯಾಪಾರ, ವ್ಯವಹಾರ, ಜೂಜು, ಸಟ್ಟಾ ವ್ಯವಹಾರ ಇಂಥದ್ದರಲ್ಲಿ ಹಣ ಹೂಡಿ, ಅದನ್ನು ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ದೇಹದ ತೂಕದ ಬಗ್ಗೆ ಲಕ್ಷ್ಯ ನೀಡಿ. ಯಾರು ಮಧುಮೇಹ, ರಕ್ತದೊತ್ತಡ ಇತ್ಯಾದಿ ಸಮಸ್ಯೆಗಳಿಂದ ಬಳಲುತ್ತಿದ್ದೀರಿ ಅಂಥವರಿಗೆ ಸಮಸ್ಯೆ ಇನ್ನಷ್ಟು ಉಲ್ಬಣ ಆಗುವ ಸಾಧ್ಯತೆಗಳಿವೆ.

Kadandale Subrahmanya Swamy Temple: ತ್ರೇತಾಯುಗದ ವಾಲಿಯಿಂದ ಪೂಜೆ ಆಗಿರುವ ಕಡಂದಲೆ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಬಗ್ಗೆ ಇಲ್ಲಿದೆ ಮಾಹಿತಿ

ಮೇ ಒಂದನೇ ತಾರೀಕಿನಿಂದ ನಿಮ್ಮ ರಾಶಿಗೆ ಎರಡನೇ ಮನೆಯಲ್ಲಿ ಗುರು ಸಂಚಾರ ಮಾಡುವಾಗ ವಿವಾಹ ವಯಸ್ಕರಾಗಿ, ಮದುವೆಗೆ ಪ್ರಯತ್ನಿಸುತ್ತಿರುವವರಿಗೆ ಮದುವೆ ಆಗಬಹುದು, ಸಂತಾನ ಅಪೇಕ್ಷಿತರಿಗೆ ಸಂತಾನ ಭಾಗ್ಯ ಸಿಗಬಹುದು. ಇನ್ನು ಹಣಕಾಸಿನ ಹರಿವು ಸರಾಗವಾಗಿ ಆಗಲಿದೆ. ಸಂಸಾರದಲ್ಲೂ ಸಂತಸದ ವಾತಾವರಣ ಇರಲಿದೆ. ನಿಮ್ಮ ಮಾತಿನಲ್ಲಿ ಒಂದು ಬಗೆಯ ಆಕರ್ಷಣೆ, ಪ್ರಭಾವ ಬೀರುವ ಶಕ್ತಿ ಬರಲಿದೆ. ಉದ್ಯೋಗ, ಶಿಕ್ಷಣ, ವಿದೇಶ ಪ್ರವಾಸ, ಆರೋಗ್ಯ, ಸಂಸಾರ ಹೀಗೆ ಎಲ್ಲದರಲ್ಲೂ ಸಕಾರಾತ್ಮಕ ಬೆಳವಣಿಗೆಯನ್ನು ನಿರೀಕ್ಷೆ ಮಾಡಬಹುದು. ನಿಮ್ಮ ಆತ್ಮವಿಶ್ವಾಸ ಸಹ ಜಾಸ್ತಿ ಆಗಲಿದೆ.

ಪರಿಹಾರ: ರಾಘವೇಂದ್ರ ಸ್ವಾಮಿ ವೃಂದಾವನಕ್ಕೆ, ಶಿರಡಿ ಸಾಯಿಬಾಬ ಹೀಗೆ ಗುರುಗಳಿಗೆ ವಸ್ತ್ರ ಸಮರ್ಪಣೆ ಮಾಡಿ (ಗುರುವಾರದಂದು).

ಶನಿ (ಜನವರಿಯಿಂದ ಡಿಸೆಂಬರ್ ತನಕ ಕುಂಭ ರಾಶಿಯಲ್ಲಿ)

ನಿಮ್ಮ ರಾಶಿಗೆ ಲಾಭ ಸ್ಥಾನವಾದ ಕುಂಭ ರಾಶಿಯಲ್ಲಿ ಅದೇ ರಾಶಿಯ ಅಧಿಪತಿಯ ಸಂಚಾರ ಇರುತ್ತದೆ. ಭೂಮಿ ಖರೀದಿ, ವಾಹನ ಖರೀದಿ, ಮನೆ ಖರೀದಿ, ಪ್ರಭಾವದ ವಿಸ್ತರಣೆ, ಹೊಸ ವ್ಯವಹಾರಗಳ ಆರಂಭ ಹೀಗೆ ನಾನಾ ಶುಭ ಫಲಗಳು ಅನುಭವಕ್ಕೆ ಬರಲಿವೆ. ಆದರೆ ಎಲ್ಲವೂ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ. ಅಂದರೆ ನಿಮಗೆ ಬರಬೇಕಾದ ನಿಮ್ಮದೇ ಹಣ ಕೈ ಸೇರುತ್ತದೆ, ಆದರೆ ಸಮಯಕ್ಕೆ ಬರದೆ ತಡವಾಗುತ್ತದೆ. ಅಂದ ಹಾಗೆ ನಿಮ್ಮ ಜನ್ಮ ಜಾತಕದಲ್ಲಿ ಶನಿ ಗ್ರಹ ಎಲ್ಲಿದೆ ಎಂಬುದನ್ನು ಒಮ್ಮೆ ಪರಿಶೀಲನೆ ಮಾಡಿಕೊಳ್ಳಿ ಹಾಗೂ ಸದ್ಯಕ್ಕೆ ನಿಮಗೆ ನಡೆಯುತ್ತಿರುವ ದಶಾ- ಭುಕ್ತಿ ಯಾವುದು ಎಂಬುದನ್ನು ಸಹ ಸರಿಯಾಗಿ ಪರಿಶೀಲನೆ ಮಾಡಿಕೊಳ್ಳಿ. 

(ಲೇಖಕರು- ವಿದ್ವಾನ್ ಮಂಜುನಾಥ್ ಭಾರದ್ವಾಜ್ (ಜ್ಯೋತಿಷಿಗಳು- ಪುರೋಹಿತರು), ಜಾತಕಗಳನ್ನು ಮಾಡಿಸಲು, ಪೌರೋಹಿತ್ಯಕ್ಕೆ ಹಾಗೂ ಜ್ಯೋತಿಷಕ್ಕೆ ಸಂಬಂಧಿಸಿದಂತೆ ವೈಯಕ್ತಿಕವಾಗಿ ಭೇಟಿ ಮಾಡುವುದಕ್ಕೆ ಮೊಬೈಲ್ ಫೋನ್ ಸಂಖ್ಯೆ- 8050789904, 9980300790 ಸಂಪರ್ಕಿಸಿ.)

Latest News

Related Posts