Sri Gurubhyo Logo

ನಕ್ಷತ್ರ ದೋಷ, ಪಂಚಮಾರಿಷ್ಟ, ಅಮಾವಾಸ್ಯೆ ಜನನ ಇತರ ಜನನ ಕಾಲದ ದೋಷಗಳು ಯಾವುವು, ಅವುಗಳಿಗೆ ಪರಿಹಾರ ಏನು?

Janana Kaala Dosha Shanti
ಜನನ ಕಾಲ ದೋಷ ಶಾಂತಿ (ಸಾಂದರ್ಭಿಕ ಚಿತ್ರ)

ಒಂದು ಮಗು ಹುಟ್ಟಿ ತಕ್ಷಣ ಅದರ ಜಾತಕ ನೋಡಬಾರದು ಎಂಬ ಅಭಿಪ್ರಾಯ ಇದೆ. ಆದರೆ ಇದು ಪೂರ್ಣವಾಗಿ ಸತ್ಯ ಅಲ್ಲ. ಮಗು ಹುಟ್ಟಿದಾಗ ಅದರ ಜನನ ಸಮಯವನ್ನು ಹಾಗೂ ಆ ಸಮಯದಲ್ಲಿನ ಗ್ರಹ ಸ್ಥಿತಿಗಳನ್ನು ಹಾಗೂ ಜನನ ಕಾಲದ ದೋಷಗಳನ್ನು ಕಡ್ಡಾಯವಾಗಿ ಗಮನಿಸಿ, ಜನನ ಕಾಲದ ಶಾಂತಿಯನ್ನು ಮಾಡಿಸಲೇಬೇಕು. ಜಾತಕವನ್ನು ಸಿದ್ಧ ಮಾಡಬೇಕು ಅಂತೇನೂ ಇಲ್ಲ. ಆದರೆ ಜನನವಾದ ನಕ್ಷತ್ರ, ಆ ದಿನದ ತಿಥಿ, ಗ್ರಹ ಸ್ಥಿತಿ ಇತ್ಯಾದಿಗಳನ್ನು ಗಮನಿಸಿ, ಅಗತ್ಯ ಶಾಂತಿಗಳನ್ನು ಮಾಡಿಸಿಕೊಳ್ಳುವುದು ಶ್ರೇಯಸ್ಕರ. ಯಾವ ಯಾವ ಸನ್ನಿವೇಶದಲ್ಲಿ ಶಾಂತಿ ಮಾಡಿಸಿಕೊಳ್ಳಬೇಕು ಎಂಬ ಬಗೆಗಿನ ವಿವರಣೆಯನ್ನು ಇಲ್ಲಿ ನೀಡಲಾಗುತ್ತಿದೆ.

ಜನ್ಮ ನಕ್ಷತ್ರ ಈ ಕೆಳಗಿನ ನಕ್ಷತ್ರಗಳು ಇರುವಾಗ ಶಾಂತಿ ಮಾಡಿಸಿಕೊಳ್ಳಬೇಕು;

ಜ್ಯೇಷ್ಠಾ ನಕ್ಷತ್ರ

ಆ ಮಗುವು ಜನಿಸಿದ ದಿನದಂದು ಜ್ಯೇಷ್ಠಾ ನಕ್ಷತ್ರ ಒಟ್ಟು ಎಷ್ಟು ಘಳಿಗೆ ಇದೆ ಎಂಬುದನ್ನು ಲೆಕ್ಕ ಮಾಡಿಕೊಳ್ಳಬೇಕು. ಅದನ್ನು ಹತ್ತರಿಂದ ಭಾಗ ಮಾಡಬೇಕು. ಇದರಲ್ಲಿ ಮಗುವು ಯಾವ ಭಾಗದಲ್ಲಿ ಜನಿಸಿದೆ ಎಂಬುದನ್ನು ನೋಡಬೇಕು. ಮೊದಲ ಭಾಗದಲ್ಲಿಯಾದರೆ ತಾಯಿಯ ತಾಯಿಗೆ ಕೆಡುಕು. ಎರಡನೇ ಭಾಗದಲ್ಲಿಯಾದರೆ ತಾಯಿಯ ತಂದೆಗೆ, ಮೂರರಲ್ಲಾದರೆ ತಾಯಿಯ ಸಹೋದರ, ನಾಲ್ಕರಲ್ಲಾದರೆ ಮಗುವಿನ ತಾಯಿಗೆ, ಐದರಲ್ಲಿ ಸ್ವತಃ ಆ ಮಗುವಿಗೆ, ಆರನೇ ಭಾಗದಲ್ಲಿಯಾದರೆ ಆ ಮಗುವಿನ ಕುಲಕ್ಕೇ ಕೆಡುಕು. ಇನ್ನು ಏಳನೇ ಭಾಗದಲ್ಲಿಯಾದರೆ ತಂದೆ- ತಾಯಿ ಇಬ್ಬರ ಕುಲಗಳಿಗೂ ಕೆಡುಕು, ಎಂಟರಲ್ಲಿ ವಂಶಕ್ಕೇ ಕೇಡು, ಒಂಬತ್ತನೇ ಭಾಗದಲ್ಲಿ ಸೋದರ ಮಾವನಿಗೆ ಹಾಗೂ ಹತ್ತನೇ ಭಾಗದಲ್ಲಿ ಆದಲ್ಲಿ ಎಲ್ಲರಿಗೂ- ಎಲ್ಲಕ್ಕೂ ಕೆಡುಕು. ಇನ್ನು ಮಂಗಳವಾರದ ದಿನ ಜ್ಯೇಷ್ಠಾ ನಕ್ಷತ್ರದಲ್ಲಿ ಹೆಣ್ಣು ಮಗುವಿನ ಜನನ ಆದಲ್ಲಿ  ಅದರ ಅಣ್ಣನಿಗೆ ಕೆಡುಕು. ಭಾನುವಾರದಂದು ಮೂಲಾ ನಕ್ಷತ್ರದಲ್ಲಿ ಹುಟ್ಟಿದ ಹೆಣ್ಣಿನಿಂದ ಮಾವನಿಗೆ ಕೆಡುಕು ಎಂದು ಹೇಳಲಾಗಿದೆ. ಅದೇ ರೀತಿ ಜ್ಯೇಷ್ಠಾ ನಕ್ಷತ್ರದ ಒಂದನೇ ಪಾದದಲ್ಲಿ ಮಗು ಜನಿಸಿದರೆ ಅದರ ಅಣ್ಣನಿಗೆ ಕೆಡುಕು, ಎರಡನೇ ಪಾದದಲ್ಲಿ  ಆ ಮಗುವಿಗೆ ಮುಂದೆ ಆಗಲಿರುವ ತಮ್ಮನಿಗೆ ಕೆಡುಕು, ಮೂರರಲ್ಲಿ ತಂದೆಗೆ ಹಾಗೂ ನಾಲ್ಕರಲ್ಲಿ ಸ್ವತಃ ಆ ಮಗುವಿಗೇ ಕೆಡುಕು ಆಗುತ್ತದೆ ಎಂದು ಹೇಳಲಾಗಿದೆ.

ಮೂಲಾ ನಕ್ಷತ್ರ

ಈ ನಕ್ಷತ್ರದ ಒಂದನೇ ಪಾದದಲ್ಲಿ ಜನಿಸಿದ ಮಗುವಿನ ತಂದೆಗೆ ಕೆಡುಕು ಉಂಟಾಗುತ್ತದೆ. ಎರಡನೇ ಪಾದದಲ್ಲಿ ಜನಿಸಿದಲ್ಲಿ ತಾಯಿಗೆ ಒಳಿತಲ್ಲ. ಇನ್ನು ಮೂರನೇ ಪಾದದಲ್ಲಿ ಜನಿಸಿದರೆ ಹಣಕಾಸು ನಷ್ಟ ಉಂಟಾಗುತ್ತದೆ. ಆದ್ದರಿಂದ ಮೂಲಾ ನಕ್ಷತ್ರ ಜನನ ಶಾಂತಿಯನ್ನು ಮಾಡಿಸಿಕೊಳ್ಳಬೇಕಾಗುತ್ತದೆ. ಇನ್ನು ಮೂಲಾ ನಕ್ಷತ್ರ ಎಷ್ಟು ಸಮಯ ಇರುತ್ತದೋ ಅದನ್ನು ಹದಿನೈದು ಭಾಗವಾಗಿ ಮಾಡಿಕೊಳ್ಳಬೇಕು. ಮೊದಲನೇ ಭಾಗದಲ್ಲಿ ಜನನ ಆದಲ್ಲಿ ತಂದೆಗೆ, ಎರಡರಲ್ಲಿ ತಂದೆಯ ಸಹೋದರ, ಮೂರರಲ್ಲಿ ತಂದೆಯ ತಂಗಿ ಗಂಡ, ನಾಲ್ಕರಲ್ಲಿ ತಂದೆಯ ತಂದೆ, ಐದರಲ್ಲಿ ತಾಯಿಗೆ, ಆರರಲ್ಲಿ ತಾಯಿಯ ಸಹೋದರಿ, ಏಳರಲ್ಲಿ ಸೋದರ ಮಾವ, ಎಂಟರಲ್ಲಿ ತಂದೆಯ ಸಹೋದರ ಪತ್ನಿ, ಒಂಬತ್ತರಲ್ಲಿ ಎಲ್ಲವೂ ನಾಶ, ಹತ್ತರಲ್ಲಿ ಮನೆಯಲ್ಲಿ ಸಾಕಿದ ಪ್ರಾಣಿಗಳಿಗೆ, ಹನ್ನೊಂದರಲ್ಲಿ ಮನೆಯಲ್ಲಿನ ಕೆಲಸಗಾರರಿಗೆ, ಹನ್ನೆರಡರಲ್ಲಿ ಆ ಮಗುವಿಗೇ, ಹದಿಮೂರರಲ್ಲಿ ಅಣ್ಣನಿಗೆ, ಹದಿನಾಲ್ಕರಲ್ಲಿ ಅಕ್ಕನಿಗೆ, ಹದಿನೈದನೇ ಭಾಗದಲ್ಲಿ ಜನನ ಆಗಿದ್ದಲ್ಲಿ ಆ ಮಗುವಿನ ತಾಯಿಯ ತಂದೆಗೆ ಕೆಡುಕು ಎಂದು ಹೇಳಲಾಗಿದೆ. ಜ್ಯೇಷ್ಠಾ ನಕ್ಷತ್ರದ ಅಂತ್ಯದ ಕೊನೆ ನಲವತ್ತೆಂಟು ನಿಮಿಷ ಹಾಗೂ ಮೂಲಾ ನಕ್ಷತ್ರದ ಆರಂಭದ ನಲವತ್ತೆಂಟು ನಿಮಿಷ, ಅಂದರೆ ತಲಾ ಎರಡು ಘಳಿಗೆಗಳನ್ನು ಅಭುಕ್ತ ಮೂಲ ಎನ್ನುವರು. ಕೆಲವು ಶಾಸ್ತ್ರಕಾರರ ಪ್ರಕಾರವಾಗಿ ಜ್ಯೇಷ್ಠಾ ಹಾಗೂ ಮೂಲ ಎರಡೂ ತಂದೆ- ತಾಯಿಗೆ ದೋಷಕರ ಹಾಗೂ ತಲಾ ಎಪ್ಪತ್ತೆರಡು ನಿಮಿಷ ಸಮಯವನ್ನು ಹೀಗೆ ಪರಿಗಣಿಸಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಆಶ್ಲೇಷಾ ನಕ್ಷತ್ರ

ಆಶ್ಲೇಷಾ ನಕ್ಷತ್ರದ ಒಂದನೇ ಪಾದಕ್ಕೆ ದೋಷವಿಲ್ಲ. ಎರಡನೇ ಪಾದದಲ್ಲಿ ಹುಟ್ಟಿದಲ್ಲಿ ಧನ ನಷ್ಟ, ಮೂರನೇ ಪಾದದಲ್ಲಿಯಾದರೆ ತಾಯಿಗೆ ಕೆಡುಕು, ನಾಲ್ಕನೇ ಪಾದದಲ್ಲಿ ಮಗುವಿನ ಜನನ ಆದಲ್ಲಿ ತಂದೆಗೆ ಕೆಡುಕು ಉಂಟಾಗುತ್ತದೆ. ಇದಕ್ಕಾಗಿ ಆಶ್ಲೇಷಾ ನಕ್ಷತ್ರ ಶಾಂತಿ ಮಾಡಿಸಬೇಕು.

ಇತರ ದೋಷಗಳು

ಭದ್ರಾ ತಿಥಿ ಕ್ಷಯ, ವ್ಯತೀಪಾತ, ಪರಿಘ, ವಜ್ರ, ಯಮಘಂಟ ಇವುಗಳು ಜನನ ಕಾಲದಲ್ಲಿ ಇದ್ದರೆ ದೋಷಪ್ರದ ಎಂಬ ಅಭಿಮತ ಇದೆ. ಇನ್ನು ಸಂಕ್ರಾಂತಿಗಳದು ಜನನವಾದಲ್ಲಿ, ವರ್ಷದಲ್ಲಿ ಹನ್ನೆರಡು ಸಂಕ್ರಮಣ ದಿನಗಳು ಬರುತ್ತವೆ, ಆ ದಿನಗಳಂದು ಜನನವಾಗಿದ್ದಲ್ಲಿ ಸಹ ಅದು ದೋಷಯುಕ್ತ ಎನಿಸಿಕೊಳ್ಳುತ್ತವೆ.

ತ್ರೀತರ ಜನನ ದೋಷ 

ಮೂರು ಗಂಡುಮಕ್ಕಳು ಹುಟ್ಟಿದ ನಂತರದಲ್ಲಿ ಒಂದು ಹೆಣ್ಣುಮಗು ಜನಿಸುವುದು ಹಾಗೂ ಮೂರು ಹೆಣ್ಣುಮಕ್ಕಳು ಹುಟ್ಟಿದ ನಂತರದಲ್ಲಿ ಗಂಡು ಮಗು ಹುಟ್ಟುವುದು ಸಹ ದೋಷಯುಕ್ತ ಎನಿಸಿಕೊಳ್ಳುತ್ತದೆ. ಇದರಿಂದ ಆ ಮಗುವಿನ ತಂದೆ- ತಾಯಿ ಎರಡೂ ಕುಲಗಳಿಗೆ ಬಾಧಕ. ಇದಕ್ಕೆ ತ್ರಿಕ ಪ್ರಸವ ಶಾಂತಿಯನ್ನು ಮಾಡಿಸಿಕೊಳ್ಳಬೇಕು.

ಗ್ರಹಣ ಕಾಲದಲ್ಲಿನ ಜನನ ದೋಷ

ಸೂರ್ಯ ಅಥವಾ ಚಂದ್ರ ಗ್ರಹಣ ಕಾಲದಲ್ಲಿ ಮಗುವಿನ ಜನನ ಆದಲ್ಲಿ ಅದು ದೋಷಯುಕ್ತ ಎನಿಸಿಕೊಳ್ಳುತ್ತದೆ. ಹೀಗಾದಲ್ಲಿ ಉಪರಾಗ ಜನನ ಶಾಂತಿಯನ್ನು ಮಾಡಿಸಬೇಕಾಗುತ್ತದೆ. 

ಏಕ ನಕ್ಷತ್ರ ಶಾಂತಿ

ಹುಟ್ಟಿದ ಮಗು ಹಾಗೂ ಅದರ ತಂದೆಯದು ಮತ್ತು ಮಗು ಹಾಗೂ ಅದರ ಸಹೋದರರದು ಒಂದೇ ನಕ್ಷತ್ರ ಆದಲ್ಲಿ ಏಕ ನಕ್ಷತ್ರ ಶಾಂತಿಯನ್ನು ಮಾಡಿಸಬೇಕಾಗುತ್ತದೆ. ಕೆಲವರ ಅಭಿಪ್ರಾಯದ ಪ್ರಕಾರ, ಮಗು ಹಾಗೂ ತಾಯಿಯದು ಏಕನಕ್ಷತ್ರ ಆದಾಗಲೂ ಈ ಶಾಂತಿಯನ್ನು ಮಾಡಿಸಬೇಕು ಎಂದು ಹೇಳಿದ್ದಾರೆ.

ಇನ್ನಷ್ಟು ಮಾಹಿತಿ

ರೇವತಿ, ಅಶ್ವಿನಿ, ಆಶ್ಲೇಷಾ, ಮಖಾ, ಜ್ಯೇಷ್ಠಾ, ಮೂಲಾ- ಈ ನಕ್ಷತ್ರಗಳ ಕೊನೆಯ ಇಪತ್ನಾಲ್ಕು ನಿಮಿಷ ಹಾಗೂ ಆರಂಭದ ಇಪ್ಪತ್ನಾಲ್ಕು ನಿಮಿಷದಲ್ಲಿ ಜನನ ಆದಲ್ಲಿ ದೋಷಯುಕ್ತ ಎನ್ನಲಾಗಿದೆ.

ಪಂಚಮಿ, ದಶಮಿ, ಪೌರ್ಣಮಿ  ತಿಥಿಯ ಅಂತ್ಯದ ನಲವತ್ತೆಂಟು ನಿಮಿಷ ಹಾಗೂ ಪಾಡ್ಯ, ಷಷ್ಠಿ ಹಾಗೂ ಏಕಾದಶಿ ತಿಥಿಯ ನಲವತ್ತೆಂಟು ನಿಮಿಷವನ್ನು ದೋಷಪ್ರದ ಎನ್ನಲಾಗಿದೆ.

ಮೀನ, ಮೇಷ, ಕರ್ಕಾಟಕ, ಸಿಂಹ, ವೃಶ್ಚಿಕ, ಧನುಸ್ಸು ಈ ಲಗ್ನಗಳ ಕೊನೆ ಹನ್ನೆರಡು ನಿಮಿಷ ಗಂಡಾಂತ ಎನ್ನಲಾಗಿದ್ದು, ಈ ಸಮಯದಲ್ಲಿ ಜನನವಾದಲ್ಲಿ ಗಂಡಾಂತ ಶಾಂತಿಯನ್ನು ಮಾಡಿಸಬೇಕಾಗುತ್ತದೆ.

ಪೂರ್ವಾಷಾಢ ನಕ್ಷತ್ರ ಹಾಗೂ ಧನುರ್ ಲಗ್ನದಲ್ಲಿ ಜನಿಸಿದ ಮಗುವಿನಿಂದ ತಂದೆಗೆ ಶ್ರೇಯಸ್ಕರವಲ್ಲ. ಅದೇ ರೀತಿ ಪುಷ್ಯಾ ನಕ್ಷತ್ರ, ಕರ್ಕಾಟಕ ಲಗ್ನದಲ್ಲಿ ಜನಿಸಿದಲ್ಲಿ ತಾಯಿಗೆ ಶ್ರೇಯಸ್ಸಲ್ಲ. (ಶಾಸ್ತ್ರದ ಪ್ರಕಾರ ಕರ್ಕ- ವೃಶ್ಚಿಕಾಂಶ ಇರಬೇಕು).

ಪಂಚಮಾರಿಷ್ಠ ಶಾಂತಿ

ಜನ್ಮ ಜಾತಕದಲ್ಲಿ ಲಗ್ನದಿಂದ ಪಂಚಮ ಸ್ಥಾನದಲ್ಲಿ ಪಾಪ ಗ್ರಹಗಳು ಇದ್ದಲ್ಲಿ ಪಂಚಮಾರಿಷ್ಠ ಎನ್ನಲಾಗುತ್ತದೆ. ಅಂದ ಹಾಗೆ ಪಾಪ ಗ್ರಹಗಳು ಅಂದರೆ ಶನಿ, ಕುಜ, ರಾಹು, ಕೇತು ಹಾಗೂ ರವಿ. ಕೆಲ ಶಾಸ್ತ್ರಕಾರರ ಅಭಿಪ್ರಾಯದಂತೆ ಒಂಬತ್ತನೇ ಸ್ಥಾನದಲ್ಲಿ ಪಾಪ ಗ್ರಹಗಳಿದ್ದರೂ ಅವು ಕೆಡುಕನ್ನು ಉಂಟು ಮಾಡುತ್ತವೆ. ಇನ್ನು ಲಗ್ನ ಪಂಚಮದಲ್ಲಿ  ರಾಹು ಅಥವಾ ಕೇತುವಿದ್ದರೆ ಬಾಲಾರಿಷ್ಟ ಎನ್ನಲಾಗುತ್ತದೆ.

ಅಮಾವಾಸ್ಯೆ ಜನನ ದೋಷ

ಅಮಾವಾಸ್ಯೆಯಂದು ಮಗುವಿನ ಜನನವಾದಲ್ಲಿ ತಂದೆ- ತಾಯಿಗೆ ದಾರಿದ್ರ್ಯ ಎಂಬುದು ಶಾಸ್ತ್ರಕಾರರ ಅಭಿಮತ. ಆದ್ದರಿಂದ ಅಮಾವಾಸ್ಯೆ ಜನನ ಶಾಂತಿಯನ್ನು ಮಾಡಿಸಬೇಕಾಗುತ್ತದೆ.

ಕೃಷ್ಣ ಪಕ್ಷದ ಚತುರ್ದಶಿ ಜನನ ದೋಷ

ಕೃಷ್ಣ ಪಕ್ಷದ ಚತುರ್ದಶಿ ಒಟ್ಟು ಎಷ್ಟು ಸಮಯ ಇದೆ ಎಂಬುದನ್ನು ಲೆಕ್ಕ ಹಾಕಿಕೊಳ್ಳಬೇಕು. ಅದನ್ನು ಆರರಿಂದ ಭಾಗಿಸಬೇಕು. ಮೊದಲ ಭಾಗದಲ್ಲಿ ಮಗುವಿನ ಜನನ ಆಗಿದ್ದರೆ ಶುಭ ಫಲ ಎಂದು ತಿಳಿಯಬೇಕು. ಇನ್ನು ಎರಡನೇ ಭಾಗದಲ್ಲಿ ತಂದೆಗೆ ಅರಿಷ್ಠ, ಮೂರರಲ್ಲಿ ತಾಯಿಗೆ, ನಾಲ್ಕರಲ್ಲಿ ಸೋದರ ಮಾವನಿಗೆ, ಐದರಲ್ಲಿ ವಶಕ್ಕೇ ಕೇಡು, ಆರರಲ್ಲಿ ಧನ ಹಾನಿ ಎಂದು ಹೇಳಲಾಗಿದೆ. 

ಸಿನೀವಾಲಿ ಕುಹೂಜನನ ದೋಷ

ಚತುರ್ದಶೀ ಮೇಲೆ ಅಮಾವಾಸ್ಯೆ ಬಂದು, ಅಂದು ಸ್ವಲ್ಪವಾದರೂ ಚಂದ್ರ ದರ್ಶನವು ಆದಲ್ಲಿ ಅದು ಸಿನೀವಾಲಿ. ಚಂದ್ರನೇ ತೋರದ ಅಮಾವಾಸ್ಯೆ ಕುಹೂ. ಈ ರೀತಿಯ ದಿನದಂದು ಜನಿಸಿದಲ್ಲಿ ಇದಕ್ಕೂ ಜನನ ಶಾಂತಿ ಮಾಡಿಸಬೇಕು.

ಅರಿಷ್ಟ ಭಂಗ ಯೋಗಗಳು

ಜನ್ಮ ಜಾತಕದ ಲಗ್ನದಲ್ಲಿ ಅಥವಾ ಯಾವುದಾದರೂ ಕಾರ್ಯ ಮಾಡುವುದಕ್ಕೆ ಲಗ್ನವನ್ನು ಇಟ್ಟಾಗ ಆ ಲಗ್ನಕ್ಕೆ ಕೇಂದ್ರ ಸ್ಥಾನದಲ್ಲಿ (ಒಂದು, ನಾಲ್ಕು, ಏಳು ಅಥವಾ ಹತ್ತರಲ್ಲಿ) ಗುರು ಗ್ರಹ ಇದ್ದಲ್ಲಿ ಲಕ್ಷ ದೋಷಗಳು ಪರಿಹಾರ, ಶುಕ್ರನಿದ್ದಲ್ಲಿ ಐವತ್ತು ಸಾವಿರ ದೋಷಗಳು ಪರಿಹಾರ, ಬಲಿಷ್ಠ ಬುಧನಿದ್ದಲ್ಲಿ ಇಪ್ಪತ್ತೈದು ಸಾವಿರ ದೋಷ ಪರಿಹಾರ ಇನ್ನು ಬಲಿಷ್ಠ ಚಂದ್ರನಿದ್ದಲ್ಲಿ ಎಲ್ಲ ದೋಷವೂ ಪರಿಹಾರ ಎಂದು ಹೇಳಲಾಗಿದೆ. ಲಗ್ನಕ್ಕೆ ಗುರುವಿನ ದೃಷ್ಟಿ ಇದ್ದರೂ ಅರಿಷ್ಟಗಳು ಭಂಗ ಆಗುವುದು ಎಂದು ಹೇಳಲಾಗಿದೆ.   

ಲೇಖಕರು- ವಿದ್ವಾನ್ ಮಂಜುನಾಥ್ ಭಾರದ್ವಾಜ್ (ಜ್ಯೋತಿಷಿಗಳು- ಪುರೋಹಿತರು), ಜಾತಕಗಳನ್ನು ಮಾಡಿಸಲು, ಪೌರೋಹಿತ್ಯಕ್ಕೆ ಹಾಗೂ ಜ್ಯೋತಿಷಕ್ಕೆ ಸಂಬಂಧಿಸಿದಂತೆ ವೈಯಕ್ತಿಕವಾಗಿ ಭೇಟಿ ಮಾಡುವುದಕ್ಕೆ ಮೊಬೈಲ್ ಫೋನ್ ಸಂಖ್ಯೆ- 8050789904 ಸಂಪರ್ಕಿಸಿ.

Latest News

Related Posts