Sri Gurubhyo Logo

Saturn transit in Aquarius: ಕುಂಭ ರಾಶಿಯ ಶನಿ ಸಂಚಾರದಿಂದ ಮೇಷ ರಾಶಿಯಿಂದ ಮೀನದ ತನಕ ಶುಭಾಶುಭ ಫಲಗಳೇನು?

Manjunath Bharadwaj
ಮಂಜುನಾಥ್ ಭಾರದ್ವಾಜ್

ಜನವರಿ 17, 2023ಕ್ಕೆ ಕುಂಭ ರಾಶಿಗೆ ಶನಿ ಗ್ರಹದ ಪ್ರವೇಶ ಆಗಿದೆ. 2025ನೇ ಇಸವಿಯ ಮಾರ್ಚ್ ತನಕ ಇದೇ ರಾಶಿಯಲ್ಲಿ ಶನಿ ಸಂಚಾರ ಆಗಲಿದೆ. ಸಾಮಾನ್ಯವಾಗಿ ಶನಿ ಗ್ರಹವು ಒಂದು ರಾಶಿಯಲ್ಲಿ ಎರಡೂವರೆ ವರ್ಷ ಇರುತ್ತದೆ. ಕೆಲವು ಬಾರಿ ವೇಗವಾಗಿ ಚಲಿಸಿ, ಮುಂದಿನ ರಾಶಿಗೆ ಹೋದರೂ ವಕ್ರೀ ಆಗಿ ಮತ್ತೆ ಹಿಂದೆ ಬಂದು, ಒಂದು ರಾಶಿಯಲ್ಲಿ ಎರಡೂವರೆ ವರ್ಷದ ಪೂರ್ಣಾವಧಿ ಲೆಕ್ಕವನ್ನು ಪೂರೈಸುತ್ತದೆ. ಇಷ್ಟು ಸಮಯ ಮಕರ ರಾಶಿಯಲ್ಲಿ ಶನಿ ಸಂಚಾರ ಇತ್ತು. ಇನ್ನು ಮುಂದೆ ಕುಂಭದಲ್ಲಿ ಇರುತ್ತದೆ. ಈ ಎರಡೂ ರಾಶಿಗಳು ಶನಿ ಗ್ರಹದ ಸ್ವಕ್ಷೇತ್ರಗಳು. ತುಲಾ ರಾಶಿಯು ಶನಿಯ ಉಚ್ಚ ಕ್ಷೇತ್ರವಾದರೆ, ಮೇಷ ರಾಶಿ ಶನಿಗೆ ನೀಚ ಕ್ಷೇತ್ರವಾಗುತ್ತದೆ.

ಕುಂಭ ರಾಶಿಗೆ ಶನಿ ಪ್ರವೇಶ ಆಗುತ್ತಿದ್ದಂತೆ ಮಿಥುನ ರಾಶಿಯವರಿಗೆ ಅಷ್ಟಮ ಶನಿಯ ಪ್ರಭಾವ, ಕನ್ಯಾದವರಿಗೆ ಪಂಚಮ ಶನಿ, ಧನುಸ್ಸು ರಾಶಿಯವರಿಗೆ ಸಾಡೇಸಾತ್ (ಏಳರಾಟ ಶನಿ) ದೂರವಾಗುತ್ತದೆ. ಈ ಪೈಕಿ ಕನ್ಯಾ ಮತ್ತು ಧನುಸ್ಸು ರಾಶಿಯವರು ಉತ್ತಮ ಫಲಗಳನ್ನು ನಿರೀಕ್ಷೆ ಮಾಡಬಹುದು.

ಮಕರ, ಕುಂಭ, ಮೀನ ರಾಶಿಯವರಿಗೆ ಸಾಡೇಸಾತ್ (ಏಳರಾಟ ಶನಿ), ಕರ್ಕಾಟಕ ರಾಶಿಯವರಿಗೆ ಅಷ್ಟಮ ಶನಿ, ತುಲಾ ರಾಶಿಯವರಿಗೆ, ಪಂಚಮ ಶನಿ ಹಾಗೂ ವೃಶ್ಚಿಕ ರಾಶಿಯವರಿಗೆ ಅರ್ಧಾಷ್ಟಮ ಇರುತ್ತದೆ. ಅಂದ ಹಾಗೆ, ಈ ಆರು ರಾಶಿಯಲ್ಲಿ ಜನಿಸಿದವರು ಶನಿಯ ಆರಾಧನೆ ಮಾಡುವುದು ಬಹಳ ಮುಖ್ಯ. ನರಸಿಂಹ, ಆಂಜನೇಯ, ಶಿವನ ಆರಾಧನೆಯನ್ನು ಮಾಡಬಹುದು. ದಶರಥ ಕೃತ ಶನಿ ಸ್ತೋತ್ರವನ್ನು ಪಠಿಸಬಹುದು, ವಿಷ್ಣು ಸಹಸ್ರನಾಮ ಪಠಣ, ಶ್ರವಣ ಮಾಡಬಹುದು. ಇದರಿಂದೆಲ್ಲ ಸ್ವಲ್ಪ ಮಟ್ಟಿಗೆ ಶನಿಯ ದುಷ್ಪ್ರಭಾವ ಕಡಿಮೆ ಆಗುತ್ತದೆ.

ಯಾರಿಗೆ ಜನ್ಮ ಜಾತಕದಲ್ಲಿ ಶನಿಯು ದುರ್ಬಲನಾಗಿರುತ್ತಾನೋ ನೀಚ ಸ್ಥಿತಿಯಲ್ಲಿ ಇರುತ್ತಾನೋ ಅಂಥವರಿಗೆ ಗೋಚಾರದಲ್ಲೂ ಕ್ರೂರವಾದಾಗ ಪರಿಸ್ಥಿತಿ ಹೆಚ್ಚು ಬಿಗಡಾಯಿಸುತ್ತದೆ. ಶನಿ ಸಂಚಾರ ನಿಮ್ಮ ರಾಶಿಗೆ ಎಷ್ಟನೇ ಮನೆಯಲ್ಲಿ ಆಗಲಿದೆ ಎಂಬುದನ್ನು ಗಮನಿಸಿ. ಹಿಂದೆಂದಿಗಿಂತಲೂ ಧಾರ್ಮಿಕವಾಗಿ, ಧರ್ಮ ಮಾರ್ಗದಲ್ಲಿ  ಶ್ರದ್ಧಾ- ಭಕ್ತಿಯಿಂದ ನಡೆದುಕೊಳ್ಳಿ.

ಮೇಷ ರಾಶಿಯಿಂದ ಮೀನ ರಾಶಿಯ ತನಕ ದ್ವಾದಶ ರಾಶಿಯವರಿಗೆ ಕುಂಭ ರಾಶಿಯಲ್ಲಿ ಶನಿ ಸಂಚರಿಸುವಾಗ ಏನೇನು ಫಲ ಎಂಬುದನ್ನು ತಿಳಿಯಿರಿ.

ಮೇಷ ರಾಶಿ: ಅಶ್ವಿನಿ ನಕ್ಷತ್ರ ನಾಲ್ಕೂ ಪಾದಗಳು, ಭರಣಿ ನಕ್ಷತ್ರ ನಾಲ್ಕೂ ಪಾದಗಳು ಹಾಗೂ ಕೃತ್ತಿಕಾ ನಕ್ಷತ್ರ ಒಂದನೇ ಪಾದ

ನಿಮ್ಮ ರಾಶಿಗೆ ಹನ್ನೊಂದನೇ ಮನೆಯಲ್ಲಿ ಶನಿ ಸಂಚಾರ ಆಗುತ್ತಿದೆ. ಇದರಿಂದ ನಿಮಗೆ ಉತ್ತಮ ಫಲಗಳು ದೊರೆಯುತ್ತವೆ. ಈ ಹಿಂದೆ ನೀವು ಹೂಡಿಕೆ ಮಾಡಿದ್ದರಲ್ಲಿ ನಷ್ಟ ಆಗಿದೆ ಎಂಬ ಕಾರಣಕ್ಕೆ ಹಾಗೇ ಇರಿಸಿಕೊಂಡಿರುವ ಷೇರು, ಮ್ಯೂಚುವಲ್ ಫಂಡ್ಸ್, ಭೂಮಿ ಅಥವಾ ಮತ್ಯಾವುದೇ ಆಸ್ತಿಗಳಿಗೆ ಉತ್ತಮವಾದ ಬೆಲೆ ದೊರೆಯುತ್ತದೆ. ಅಥವಾ ಈ ಹಿಂದೆ ನೀವು ಕೆಲಸ ಮಾಡಿದ ಸಂಸ್ಥೆಯವರು ಮತ್ತೆ ನಿಮ್ಮನ್ನು ಕರೆದು, ಉತ್ತಮ ಸ್ಥಾನ- ಮಾನ ನೀಡಬಹುದು. ಒಟ್ಟಿನಲ್ಲಿ ನಿಮ್ಮ ಶ್ರಮಕ್ಕೆ ಬೆಲೆ- ಗೌರವ ದೊರೆಯುತ್ತದೆ. ಆದರೆ ನಿಮಗೆ ಬರಬೇಕಾದ ಲಾಭ ಬರುವುದು ನಿಧಾನ ಆಗಬಹುದು. ಹತ್ತು ರೂಪಾಯಿ ಬರಬೇಕಾದ ಕಡೆ ಎಂಟು ರೂಪಾಯಿ ಬರಬಹುದು. ಉದ್ಯೋಗಿಯ ಹಂತದಲ್ಲಿ ಇರುವ ನಿಮ್ಮಲ್ಲಿ ಕೆಲವರಿಗೆ ಸಂಸ್ಥೆಯ ಲಾಭದಲ್ಲೂ ಪಾಲು ಸಿಗುವಂತೆ ಆಗುತ್ತದೆ. ಈ ಅವಧಿಯಲ್ಲಿ ಕೊಟ್ಟ ಮಾತಿನಂತೆ ನಡೆದುಕೊಳ್ಳಿ. ಪಾಲುದಾರಿಕೆ ವ್ಯವಹಹಾರಗಳನ್ನು ಮಾಡುತ್ತಿರುವರರು ನಿಮ್ಮ ಪಾಲುದಾರರರಿಗೆ ಸೇರಬೇಕಾದದ್ದನ್ನು ಕೊಟ್ಟುಬಿಡಿ. ಇನ್ನು ಸಾಲಗಳು ಇದ್ದಲ್ಲಿ  ತೀರಿಸಿಕೊಳ್ಳಿ. ಹೇಗೂ ಹಣದ ಹರಿವು ಚೆನ್ನಾಗಿದೆಯಲ್ಲಾ ಎಂದು ಎಲ್ಲವನ್ನೂ ಹೂಡಿಕೆ ಮಾಡಿಬಿಡೋಣ ಅಂತ ಯೋಚಿಸದಿರಿ.

ವೃಷಭ ರಾಶಿ: ಕೃತ್ತಿಕಾ ನಕ್ಷತ್ರ ಎರಡು, ಮೂರು, ನಾಲ್ಕನೇ ಪಾದ, ರೋಹಿಣಿ ನಕ್ಷತ್ರದ ನಾಲ್ಕೂ ಪಾದ ಹಾಗೂ ಮೃಗಶಿರಾ ನಕ್ಷತ್ರದ ಒಂದು, ಎರಡನೇ ಪಾದ 

ನಿಮ್ಮ ರಾಶಿಗೆ ಹತ್ತನೇ ಮನೆಯಲ್ಲಿ ಶನಿ ಸಂಚಾರ ಆಗುತ್ತಿದೆ. ಉದ್ಯೋಗ ಸ್ಥಳದಲ್ಲಿ ಮೇಲಧಿಕಾರಿಗಳ ಜತೆಗೆ ಮಾತನಾಡುವಾಗ ಎಚ್ಚರಿಕೆಯಿಂದ ಇರಬೇಕು. ನಿಮ್ಮ ವಿರುದ್ಧ ಇತರರು ದೂರುಗಳನ್ನು ನೀಡುವ ಸಾಧ್ಯತೆ ಇರುತ್ತದೆ. ಅದರಲ್ಲೂ ನೀವು ಟೀಮ್ ಲೀಡ್, ಮ್ಯಾನೇಜರ್ ಇಂಥ ಹುದ್ದೆಗಳಲ್ಲಿ ಇರುವವವರಾದಲ್ಲಿ ಕೈ ಕೆಳಗೆ ಕೆಲಸ ಮಾಡುವವರು ಆಕ್ಷೇಪ ವ್ಯಕ್ತಪಡಿಸಬಹುದು, ನಿಮ್ಮ ಯೋಜನೆ, ತಂತ್ರಗಾರಿಕೆಹಗಳಿಗೆ ಸಮ್ಮತಿ ಸೂಚಿಸದೆ ಇರಬಹುದು. ಆದ್ದರಿಂದ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿಸುವ ಬಗ್ಗೆ ಯೋಜನೆ ರೂಪಿಸುವುದು ಉತ್ತಮ. ಹೊಸ ಕೆಲಸಗಳಿಗೆ ಸೇರಬೇಕು ಎಂದಿರುವವರು ಆ ಸ್ಥಳದಲ್ಲಿ ಕೆಲಸ ಮಾಡುವುದು ಸಾಧ್ಯವಾ, ಆ ಜವಾಬ್ದಾರಿಯನ್ನು ನಿರ್ವಹಿಸುವುದಕ್ಕೆ ಸಾಧ್ಯವಾ ಎಂಬುದನ್ನು ಖಾತ್ರಿ ಮಾಡಿಕೊಳ್ಳಿ. ಯಾವುದೇ ಹೊಸ ಹುದ್ದೆಯನ್ನು ಕಾಗದದ ಮೇಲೆ ಇರುವಂತೆ, ಅಧಿಕೃತವಾಗಿ ಖಾತ್ರಿ ಪಡಿಸುವಂತೆ ನೋಡಿಕೊಳ್ಳಿ. ತಂದೆ- ತಾಯಿ ಆರೋಗ್ಯದ ಮೇಲೆ ಹೆಚ್ಚಿನ ಜಾಗ್ರತೆ ವಹಿಸುವುದು ಮುಖ್ಯ. ಈ ಅವಧಿಯಲ್ಲಿ ದೈವ ನಿಂದನೆ, ಗುರು- ಹಿರಿಯರ ಬಗ್ಗೆ ತಾತ್ಸಾರದ ಮಾತುಗಳು ಬಾಯಿತಪ್ಪಿನಿಂದ ಕೂಡ ಬಾರದಂತೆ ಎಚ್ಚರಿಕೆಯನ್ನು ವಹಿಸಿ.

ಮಿಥುನ ರಾಶಿ: ಮೃಗಶಿರಾ ನಕ್ಷತ್ರ ಮೂರು, ನಾಲ್ಕನೇ ಪಾದ, ಆರಿದ್ರಾ ನಕ್ಷತ್ರದ ನಾಲ್ಕೂ ಪಾದ, ಪುನರ್ವಸು ನಕ್ಷತ್ರದ ಒಂದು, ಎರಡು, ಮೂರನೇ ಪಾದ

ನಿಮ್ಮ ರಾಶಿಗೆ ಒಂಬತ್ತನೇ ಮನೆಯಲ್ಲಿ ಶನಿ ಸಂಚಾರ ಆಗಲಿದೆ. ಈ ಅವಧಿಯಲ್ಲಿ ನಿಮ್ಮ ತಂದೆಯವರು ಹಾಗೂ ತಂದೆ ಸಮಾನರಾದವರ ಆರೋಗ್ಯದ ಬಗ್ಗೆ ಜಾಸ್ತಿ ಜಾಗ್ರತೆಯನ್ನು ವಹಿಸಬೇಕು. ಅದೃಷ್ಟದ ಅಗತ್ಯ ಇರುವಂಥ ಹೂಡಿಕೆ, ವೃತ್ತಿ, ಕೆಲಸಗಳಲ್ಲಿ ಪಾಲ್ಗೊಳ್ಳಬೇಡಿ. ಒಂದೇ ಕೆಲಸಕ್ಕಾಗಿ ಪದೇ ಪದೇ ಅಲೆದಾಟ, ಪ್ರಯತ್ನವನ್ನು ಮಾಡಬೇಕಾಗುತ್ತದೆ. ನಿಮ್ಮ ಜವಾಬ್ದಾರಿಗಳನ್ನು ಬೇರೆಯವರಿಗೆ ವರ್ಗಾಯಿಸಬೇಡಿ. ನಿಮ್ಮಿಂದ ಅದನ್ನು ಮುಗಿಸಲು ಸಾಧ್ಯವಿಲ್ಲ ಅಂತಾದಲ್ಲಿ ಸಂಬಂಧಪಟ್ಟವರ ಗಮನಕ್ಕೆ ತಂದು, ನನ್ನಿಂದ ಇದು ಆಗುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿಬಿಡಿ. ಇನ್ನು ಈ ಅವಧಿಯಲ್ಲಿ ನಿಮಗೆ ಸ್ನೇಹಿತರಾಗುವವರು ಯಾರು ಎಂಬ ಬಗ್ಗೆಯೂ ಸರಿಯಾಗಿ ನೋಡಿಕೊಳ್ಳಿ. ಯಾರೊಂದಿಗಾದರೂ ಗುರುತಿಸಿಕೊಳ್ಳುವ ಮುನ್ನ ಅವರ ಪೂರ್ವಾಪರವನ್ನು ತಿಳಿದುಕೊಳ್ಳಿ. ಒಂದು ವೇಳೆ ಮೇಲ್ನೋಟದ ನಡವಳಿಕೆಯಿಂದಾಗಿ ಹತ್ತಿರವಾದಲ್ಲಿ ನಿಮ್ಮದೇ ವರ್ಚಸ್ಸಿಗೆ ಹಾನಿ ಆಗಲಿದೆ. ಸಾರ್ವಜನಿಕರ ಜೀವನದಲ್ಲಿ  ಇರುವವರಿಗೆ, ಪ್ರಮುಖ ಹುದ್ದೆಗಳಲ್ಲಿ ಇರುವವರಿಗೆ ಸ್ನೇಹಿತರ ವಲಯದಲ್ಲಿ ಗುರುತಿಸಿಕೊಂಡವರ ಕಾರಣಕ್ಕೆ ಆರೋಪಗಳನ್ನು ಹೊರಬೇಕಾಗುತ್ತದೆ. ಅವಕಾಶಗಳು ತಪ್ಪಿಹೋಗುವ ಸಾಧ್ಯತೆಗಳು ಸಹ ಇವೆ.

ಕರ್ಕಾಟಕ ರಾಶಿ: ಪುನರ್ವಸು ನಕ್ಷತ್ರದ ನಾಲ್ಕನೇ ಪಾದ, ಪುಷ್ಯ ನಕ್ಷತ್ರದ ನಾಲ್ಕೂ ಪಾದ ಹಾಗೂ ಆಶ್ಲೇಷಾ ನಕ್ಷತ್ರದ ನಾಲ್ಕೂ ಪಾದ

ನಿಮ್ಮ ರಾಶಿಗೆ ಎಂಟನೇ ಮನೆಯಲ್ಲಿ ಶನಿಯ ಸಂಚಾರ ಆಗಲಿದೆ. ಈ ಅವಧಿಯಲ್ಲಿ ಎಚ್ಚರಿಕೆಯ ಸರಮಾಲೆಯನ್ನೇ ನಿಮಗೆ ಹೇಳಬೇಕಾಗುತ್ತದೆ. ಮೊದಲನೆಯದು ಹಾಗೂ ಅತಿ ಮುಖ್ಯವಾದದ್ದು ಆರೋಗ್ಯದ ಬಗ್ಗೆ ಬಹಳ ಜಾಗ್ರತೆಯನ್ನು ವಹಿಸಿ. ಕಾಲು ನೋವು ವಿಪರೀತ ಜಾಸ್ತಿ ಆಗಬಹುದು, ಕಿವಿಯ ನರಗಳು ದುರ್ಬಲ ಆಗಬಹುದು, ಕೆಲವರಿಗೆ ಅನಾರೋಗ್ಯ ಸಮಸ್ಯೆಗೆ ಏನು ಕಾರಣ ಎಂದು ವೈದ್ಯಕೀಯವಾಗಿ ಪತ್ತೆ ಹಚ್ಚುವುದಕ್ಕೆ ಸಾಧ್ಯವಾಗದೇ ಹೋಗಬಹುದು. ಹಲವು ವೈದ್ಯಕೀಯ ಪರೀಕ್ಷೆಗಳನ್ನು ಮಾಡಿಸಿಕೊಂಡ ನಂತರವೂ ಸಮಸ್ಯೆ ಏನು ಎಂಬುದನ್ನು ಪತ್ತೆ ಮಾಡುವುದಕ್ಕೆ ವೈದ್ಯರಿಂದ ಸಾಧ್ಯವಾಗದೇ ಹೋಗಬಹುದು. ಆದರೆ ಇದರ ಸಲುವಾಗಿ ದೊಡ್ಡ ಮೊತ್ತದ ಹಣ ಖರ್ಚಾಗಲಿದೆ. ಇನ್ನು ಮೇಲಿಂದ ಮೇಲೆ ಅವಮಾನಗಳು ಆಗುತ್ತವೆ. ಸಂಬಂಧಿಕರು, ಸ್ನೇಹಿತರು ಹಾಗೂ ಆಪ್ತರೇ ನಿಮ್ಮ ಮೇಲೆ ವೃಥಾ ಆರೋಪಗಳನ್ನು ಮಾಡುತ್ತಾರೆ. ನಿಮ್ಮದು ತಪ್ಪಿಲ್ಲ ಎಂಬುದನ್ನು ಸಾಬೀತು ಮಾಡಿಕೊಳ್ಳುವುದರಲ್ಲಿಯೇ ಹೈರಾಣಾಗುತ್ತೀರಿ. ನಾಜೂಕಾಗಿ ಮುಗಿಸಬೇಕಾದ ವ್ಯವಹಾರಗಳು ರಂಕಲಾಗುತ್ತವೆ. ಪಾಪ ಕರ್ಮಾಸಕ್ತಿ ಹೆಚ್ಚಾಗುತ್ತದೆ. ಯಾರದೋ ಮಾತನ್ನು ನಂಬಿ, ಅವರು ಹೇಳಿದ ಚಾಡಿ ಮಾತುಗಳಿಂದಾಗಿ ಆಪ್ತರನ್ನು ದೂರ ಮಾಡಿಕೊಳ್ಳುತ್ತೀರಿ. ಈ ಅವಧಿಯಲ್ಲಿ ಕೆಲಸ ಬಿಟ್ಟಲ್ಲಿ ಅಥವಾ ಹೋದಲ್ಲಿ ಮತ್ತೆ ಸಿಗುವುದು ಕಷ್ಟ.

ಸಿಂಹ ರಾಶಿ: ಮಖಾ ನಕ್ಷತ್ರದ ನಾಲ್ಕೂ ಪಾದ, ಪುಬ್ಬಾ ನಕ್ಷತ್ರದ ನಾಲ್ಕೂ ಪಾದ, ಉತ್ತರಾ ನಕ್ಷತ್ರದ ಒಂದು ಪಾದ

ನಿಮ್ಮ ರಾಶಿಗೆ ಏಳನೇ ಮನೆಯಲ್ಲಿ ಶನಿಯ ಸಂಚಾರ ಆಗಲಿದೆ. ಸಂಗಾತಿ ಜತೆಗೆ ಪಾರದರ್ಶಕವಾಗಿ ಇರುವುದಕ್ಕೆ ಪ್ರಯತ್ನಿಸಿ. ನಿಮ್ಮ ರಾಶಿಯವರಿಗೆ ಸ್ವಭಾವತಃ ಪ್ರಶ್ನೆಗಳನ್ನು ಮಾಡುವುದು ಇಷ್ಟವಾಗಲ್ಲ, ಸಂಗಾತಿಗೆ ಅನುಮಾನ ಬಂದು ಪ್ರಶ್ನೆ ಕೇಳಿದಾಗ, ಹೌದು ಏನಿವಾಗ ಎಂದು ಸಿಟ್ಟಿನಿಂದ ಕೇಳಿದ ಪ್ರಶ್ನೆಯು ಸಂಬಂಧಗಳಲ್ಲಿ ಬಿರುಕಿಗೆ ಕಾರಣ ಆಗುತ್ತದೆ. ಆದ್ದರಿಂದ ಕೂತು ಮಾತನಾಡಿಕೊಂಡು, ಸಂದೇಹಗಳನ್ನು ಪರಿಹರಿಸಿಕೊಳ್ಳುವುದು ಉತ್ತಮ. ಇನ್ನು ಪಾಲುದಾರಿಕೆ ವ್ಯವಹಾರ ಶುರು ಮಾಡಬೇಕು ಎಂದುಕೊಂಡಿರುವವರು ಆ ಕಡೆಗೆ ಆಲೋಚನೆ ಸಹ ಮಾಡಬೇಡಿ. ಒಂದು ವೇಳೆ ಈಗಾಗಲೇ ಅಂಥದ್ದೊಂದು ವ್ಯವಹಾರ ಮಾಡುತ್ತಿದ್ದೀರಿ ಅಂತಾದರೆ ಕಾಗದ- ಲೆಕ್ಕ, ಪತ್ರಗಳು ಸರಿಯಾಗಿವೆಯೇ ಎಂದು ನೋಡಿಕೊಳ್ಳಿ. ಗೆಳೆಯರು ಅಥವಾ ಗೆಳತಿಯರ ಜತೆಗೂಡಿ ಪಾಲುದಾರಿಕೆಯಲ್ಲಿ ಸೈಟು ತಗೊಂಡೆ, ಜಮೀನು ತಗೊಂಡೆ ಇಂಥದ್ದೆಲ್ಲ ಬೇಡವೇ ಬೇಡ. ಇದರಿಂದ ಸ್ನೇಹವು ಹದಗೆಡುವುದರ ಜತೆಗೆ ಹಣವನ್ನೂ ಕಳೆದುಕೊಳ್ಳಬೇಕಾದೀತು, ಎಚ್ಚರ. ವಿದೇಶ ಪ್ರಯಾಣಗಳು, ವಿದೇಶದಲ್ಲಿ ಕೆಲಸದ ಅವಕಾಶಗಳು ಬಂದವು ಅಂತ ತಕ್ಷಣವೇ ಹೂಂ ಅಂದು ಬಿಡಬೇಡಿ. ಆ ಸಂಸ್ಥೆಯ ಹಿನ್ನೆಲೆ, ನಿಮ್ಮ ಜವಾಬ್ದಾರಿ, ಕೆಲಸದ ಸ್ವರೂಪ ಇತ್ಯಾದಿಗಳ ಬಗ್ಗೆ ಸಮಾಧಾನದಿಂದ ವಿಚಾರಿಸಿಕೊಳ್ಳಿ.

ಕನ್ಯಾ ರಾಶಿ: ಉತ್ತರಾ ನಕ್ಷತ್ರ ಎರಡು, ಮೂರು, ನಾಲ್ಕನೇ ಪಾದ, ಹಸ್ತಾ ನಕ್ಷತ್ರದ ನಾಲ್ಕೂ ಪಾದ, ಚಿತ್ತಾ ನಕ್ಷತ್ರದ ಒಂದು, ಎರಡನೇ ಪಾದ

ನಿಮ್ಮ ರಾಶಿಗೆ ಆರನೇ ಮನೆಯಲ್ಲಿ ಶನಿ ಗ್ರಹದ ಸಂಚಾರ ಆಗಲಿದೆ. ಆದಾಯದಲ್ಲಿ ಹೆಚ್ಚಳ ಆಗಲಿದೆ. ಸಹಜವಾಗಿಯೇ ಆದಾಯದ ಮೂಲಗಳನ್ನು ಜಾಸ್ತಿ ಮಾಡಿಕೊಳ್ಳಲಿದ್ದೀರಿ. ಹೊಸ ಹೊಸ ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರಲಿವೆ. ಆದರೆ ಈ ಅವಧಿಯಲ್ಲಿ ಆಲಸ್ಯ ಹೆಚ್ಚಾಗುತ್ತದೆ. ದೈಹಿಕ- ಮಾನಸಿಕ ವಿಶ್ರಾಂತಿಯನ್ನು ಪದೇಪದೇ ಬಯಸುತ್ತೀರಿ. ಸಣ್ಣ- ಸಣ್ಣ ಗೆಲುವಿನ ಸಂಭ್ರಮಾಚರಣೆಗೂ ಹೆಚ್ಚೆಚ್ಚು ಸಮಯವನ್ನು ಕಳೆದುಬಿಡುತ್ತೀರಿ. ಈ ಅವಧಿಯಲ್ಲಿ ಶತ್ರುಗಳ ಬಗ್ಗೆ ನಿಮ್ಮಲ್ಲೊಂದು ನಿರ್ಲಕ್ಷ್ಯ ಬೆಳೆಯಲಿದೆ. ಇದು ಒಂದು ರೀತಿಯಲ್ಲಿ ಒಳ್ಳೆಯದೇ ಆದರೂ ದಶಾ- ಭುಕ್ತಿಗಳು ಸರಿ ಇಲ್ಲದಿದ್ದಾಗ ಅದರಿಂದ ಸಮಸ್ಯೆಗಳು ಉದ್ಭವಿಸುತ್ತವೆ, ಜಾಗ್ರತೆಯಿಂದ ಇರುವವರಿಗೆ ಭಯದ ಅಗತ್ಯ ಇಲ್ಲ ಎಂಬ ಮಾತನ್ನು ಸದಾ ನೆನಪಿನಲ್ಲಿ ಇಟ್ಟುಕೊಳ್ಳಿ. ಆದಾಯದಲ್ಲಿ ಹೆಚ್ಚಳ, ಆದಾಯ ಮೂಲಗಳು ಜಾಸ್ತಿ ಆಗುವುದು, ಶತ್ರುಗಳು ತಾವಾಗಿಯೇ ಸಮಸ್ಯೆಗಳಲ್ಲಿ ಸಿಲುಕಿಕೊಳ್ಳುವುದು ಇತ್ಯಾದಿ ಫಲಗಳನ್ನು ಪಡೆಯಲಿದ್ದೀರಿ. ಇದೇ ವೇಳೆ ಸರ್ಕಾರ ಕಟ್ಟಬೇಕಾದ ತೆರಿಗೆ, ಜಿಎಸ್ಟಿ, ಶುಲ್ಕಗಳು, ಬ್ಯಾಂಕಿಂಗ್ ವ್ಯವಹಾರದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಿ. ಏಕೆಂದರೆ ಈ ವಿಚಾರಗಳಲ್ಲಿ ದಂಡವನ್ನು ಪಾವತಿಸಬೇಕಾದ ಸನ್ನಿವೇಶ ಸೃಷ್ಟಿ ಆಗಬಹುದು.

ತುಲಾ ರಾಶಿ: ಚಿತ್ತಾ ನಕ್ಷತ್ರದ ಮೂರು, ನಾಲ್ಕನೇ ಪಾದ, ಸ್ವಾತಿ ನಕ್ಷತ್ರದ ನಾಲ್ಕೂ ಪಾದ, ವಿಶಾಖ ನಕ್ಷತ್ರದ ಒಂದು, ಎರಡು, ಮೂರನೇ ಪಾದ

ನಿಮ್ಮ ರಾಶಿಗೆ ಐದನೇ ಮನೆಯಲ್ಲಿ ಶನಿ ಸಂಚಾರ ಆಗಲಿದೆ. ಈ ಹಿಂದೆ ನೀವು ಮಾಡಿದಂಥ ಕೆಲಸಗಳು, ಆಗಿರುವಂಥ ತಪ್ಪುಗಳು, ಪಡೆದುಕೊಂಡಿರುವ ಸಾಲದ ರೂಪದಲ್ಲಿನ ಹಣ, ಕೊಟ್ಟ ಮಾತು ಇವೆಲ್ಲವನ್ನೂ ನೆನಪಿಸಿಕೊಳ್ಳಿ. ನಿಮ್ಮಿಂದ ಸಾಧ್ಯವಾದಷ್ಟು ಮಟ್ಟಿಗೆ ಈ ಹಿಂದಿನ ತಪ್ಪುಗಳನ್ನು ಸರಿಪಡಿಸುವುದಕ್ಕೆ ಪ್ರಯತ್ನಿಸಿ. ಸಾಲವನ್ನು ತೀರಿಸುವುದಕ್ಕೆ ಪ್ರಯತ್ನಿಸಿ. ನಾನು ಮಾಡಿದ್ದು ಸರಿ ಎಂಬ ಆತ್ಮವಿಶ್ವಾಸ ತಪ್ಪಲ್ಲ, ನಾನು ಮಾಡಿದ್ದೇ ಸರಿ ಎಂಬ ಧೋರಣೆ ಖಂಡಿತಾ ಸರಿಯಲ್ಲ. ಸ್ಪರ್ಧೆಗಳಲ್ಲಿ ಭಾಗೀ ಆಗುವವರು, ಚುನಾವಣೆಗಳಲ್ಲಿ ಸ್ಪರ್ಧಿಸುವವರಿಗೆ ಗೆಲುವು ಬಹಳ ಶ್ರಮ ಬೇಡುತ್ತದೆ. ನಿಮ್ಮ ಆತ್ಮವಿಶ್ವಾಸವೇ ಅಡಗಿ ಹೋಗುವಂಥ ಬೆಳವಣಿಗೆಗಳು ಆಗುತ್ತವೆ. ಆದ್ದರಿಂದ ಪ್ರತಿಷ್ಠೆಗಾಗಿ ಕಠಿಣವಾದ ಸ್ಪರ್ಧಾ ಕಣವನ್ನು ಆರಿಸಿಕೊಳ್ಳದಿರಿ. ಅಥವಾ ಈಗಾಗಲೇ ಸ್ಪರ್ಧಿಸುತ್ತಿರುವ ಕ್ಷೇತ್ರವೇ ಆದರೂ ಗೆಲುವು ಸಲೀಸಾಗಿ ದೊರೆಯಲಿದೆ ಎಂಬ ಮೈ ಮರೆವು ಯಾವುದೇ ಕಾರಣಕ್ಕೂ ಸರಿಯಲ್ಲ. ಮಕ್ಕಳ ಶಿಕ್ಷಣ, ಭವಿಷ್ಯ, ಮದುವೆ ಇಂಥ ವಿಚಾರಗಳಲ್ಲಿ ಆತುರದ ನಿರ್ಧಾರಗಳನ್ನು ಮಾಡಬೇಡಿ. ಈ ಅವಧಿಯಲ್ಲಿ ಆಗಾಗ ಆರೋಗ್ಯ ಕೈ ಕೊಡಬಹುದು. ಮುಖ್ಯವಾಗಿ ಈ ಹಿಂದೆ ಇದ್ದ ಕಾಯಿಲೆಗಳು ಉಲ್ಬಣ ಆಗಬಹುದು. ಪದೇ ಪದೇ ವೈದ್ಯರನ್ನು, ವೈದ್ಯಕೀಯ ಪದ್ಧತಿಗಳನ್ನು ಬದಲಾವಣೆ ಮಾಡಿಕೊಳ್ಳಬೇಡಿ. ಹೀಗೆ ಮಾಡುವುದರಿಂದ ಸಮಸ್ಯೆ ಇನ್ನೂ ಜಾಸ್ತಿ ಆಗುತ್ತದೆಯಾ ವಿನಾ ಕಡಿಮೆ ಆಗಲ್ಲ.

ವೃಶ್ಚಿಕ ರಾಶಿ: ವಿಶಾಖ ನಕ್ಷತ್ರದ ನಾಲ್ಕನೇ ಪಾದ, ಅನೂರಾಧ ನಕ್ಷತ್ರದ ನಾಲ್ಕೂ ಪಾದ, ಜ್ಯೇಷ್ಠಾ ನಕ್ಷತ್ರದ ನಾಲ್ಕೂ ಪಾದ

ನಿಮ್ಮ ರಾಶಿಯಿಂದ ನಾಲ್ಕನೇ ಮನೆಯಲ್ಲಿ ಶನಿ ಸಂಚಾರ ಆಗುತ್ತದೆ. ಇದನ್ನು ಅರ್ಧಾಷ್ಟಮ ಎನ್ನಲಾಗುತ್ತದೆ. ಅಷ್ಟಮದ ಶನಿಯು ಎಂಥ ಫಲವನ್ನು ನೀಡುತ್ತಾನೋ ಅದರ ಅರ್ಧದಷ್ಟಾದರೂ ನೀವು ಅನುಭವಕ್ಕೆ ಪಡೆಯುತ್ತೀರಿ. ಈ ಅವಧಿಯಲ್ಲಿ ನಿಮ್ಮ ಮಾತಿನ ಮೂಲಕ ಸಮಸ್ಯೆಗಳನ್ನು ತಂದುಕೊಳ್ಳುತ್ತೀರಿ. ಆಪ್ತರು, ಸಂಬಂಧಿಕರು, ಸ್ನೇಹಿತರ ಜತೆಗೆ ಜಗಳಗಳು ಆಗುತ್ತವೆ, ಯಾವ ಮಾತನ್ನು ಎಲ್ಲಿ, ಯಾವಾಗ ಆಡಬಾರದೋ ಅಂಥಲ್ಲಿಯೇ ಆಡುತ್ತೀರಿ. ಆದ್ದರಿಂದ ಮೌನವಾಗಿ ಇರುವುದು ಬಹಳ ಮುಖ್ಯ. ನಿಮಗೆ ಸಂಬಂಧಿಸದ ವಿಷಯದಲ್ಲಿ ಮೂಗು ತೂರಿಸಬೇಡಿ. ನಿಮ್ಮ ಮಾತುಗಳು ಸಾರ್ವಜನಿಕವಾಗಿ ಟೀಕೆಗೆ ಗುರಿ ಆಗಲಿದೆ. ಇನ್ನು ನಿಮ್ಮ ತಾಯಿ ಅಥವಾ ತಾಯಿ ಸಮಾನರಾದವರ ಅನಾರೋಗ್ಯವು ಚಿಂತೆಗೆ ಗುರಿ ಮಾಡುತ್ತದೆ. ಅದರಲ್ಲೂ ದೀರ್ಘ ಕಾಲದ ಕಾಯಿಲೆಗಳಿಂದ ಬಳಲುತ್ತಿರುವಂಥವರಿಗೆ ಅದರ ಅಡ್ಡ ಪರಿಣಾಮಗಳು ಕಾಣಿಸಿಕೊಳ್ಳಲಿವೆ. ಆದ್ದರಿಂದ ತಾಯಿಯ ಹಾಗೂ ತಾಯಿ ಸಮಾನರಾದವರ ಆರೋಗ್ಯದ ಬಗ್ಗೆ ಹೆಚ್ಚಿನ ಗಮನವನ್ನು ನೀಡಿ. ಇನ್ನು ನಿಮ್ಮ  ವಾಹನಗಳನ್ನು ಆಯಾ ಕಾಲಕ್ಕೆ ಸರ್ವೀಸ್ ಮಾಡಿಸಿಟ್ಟುಕೊಳ್ಳಿ. ಯಾವುದೇ ಕಾರಣಕ್ಕೂ ಸೆಕೆಂಡ್ ಹ್ಯಾಂಡ್ ವಾಹನ ಖರೀದಿ ಮಾಡಬೇಡಿ. ನಿಮ್ಮ ಕೆಲಸಗಳ ಬಗ್ಗೆ ಟೀಕೆ ಬಂದಾಗ ಸಮರ್ಥನೆಗೆ ನಿಲ್ಲಲೇಬೇಕು ಎಂಬ ಭರದಲ್ಲಿ ಬಳಸುವ ಮಾತಿನ ಮೇಲೆ ಹಿಡಿತ ಕಳೆದುಕೊಳ್ಳಬೇಡಿ.

ಧನುಸ್ಸು ರಾಶಿ: ಮೂಲಾ ನಕ್ಷತ್ರದ ನಾಲ್ಕೂ ಪಾದ, ಪೂರ್ವಾಷಾಢ ನಕ್ಷತ್ರದ ನಾಲ್ಕೂ ಪಾದ, ಉತ್ತರಾಷಾಢ ನಕ್ಷತ್ರದ ಒಂದು ಪಾದ

ನಿಮ್ಮ ರಾಶಿಗೆ ಇದರೊಂದಿಗೆ ಸಾಡೇಸಾತ್ ಮುಕ್ತಾಯ ಆಗುತ್ತದೆ, ಮೂರನೇ ಮನೆಯಲ್ಲಿ ಶನಿ ಸಂಚಾರ ಆಗುತ್ತಿದೆ. ಹಣದ ಹರಿವು ಉತ್ತಮಗೊಳ್ಳುತ್ತದೆ. ಸಾಂಸಾರಿಕವಾಗಿ ಇಷ್ಟು ಸಮಯ ಎದುರಿಸಿದ ಅವಮಾನ, ಭಿನ್ನಾಭಿಪ್ರಾಯ ದೂರವಾಗುತ್ತದೆ. ಸೋದರ- ಸೋದರಿಯರು ಇದ್ದಲ್ಲಿ ಅವರು ನಿಮ್ಮ ಕೆಲಸಕ್ಕೆ ದೊಡ್ಡ ಮಟ್ಟದಲ್ಲಿ ನೆರವಿಗೆ ನಿಲ್ಲುತ್ತಾರೆ. ಅಥವಾ ಸೋದರ- ಸೋದರಿ ಸಮಾನರ ಬೆಂಬಲ ನಿಮಗೆ ದೊರೆಯಲಿದೆ. ಮುಖ್ಯವಾಗಿ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಏನು ಮಾಡಬೇಕು, ಯಾವುದನ್ನು ಆರಿಸಿಕೊಳ್ಳಬೇಕು ಎಂಬ ಬಗ್ಗೆ ನಿಮಗೆ ಇಷ್ಟು ಸಮಯ ಇದ್ದ ಗೊಂದಲ ದೂರವಾಗುತ್ತದೆ. ಈ ಹಿಂದೆ ನೀವು ನೆರವು ನೀಡಿದ್ದವರು ಈಗ ನಿಮ್ಮ ನೆರವಿಗೆ ಬರಲಿದ್ದಾರೆ. ಅವಕಾಶಗಳು ಬಂದಾಗ ಹೆದರುತ್ತಾ, ಆಲೋಚನೆ ಮಾಡುತ್ತಾ ಸಮಯ ವ್ಯರ್ಥ ಮಾಡಬೇಡಿ. ಇನ್ನು ಆಸ್ತಿ ಮಾರಾಟಕ್ಕೆ ಇಟ್ಟವರಿಗೆ ಒಳ್ಳೆ ಬೆಲೆಗೆ ಮಾರುವುದಕ್ಕೆ ಸಾಧ್ಯ ಆಗುತ್ತದೆ. ಜತೆಗೆ ಸಾಲಗಳು ಕೂಡ ತೀರುತ್ತವೆ. ಹೇಗಿದ್ದರೂ ಸಮಸ್ಯೆಗಳು ಬಗೆಹರಿಯುತ್ತಿದೆಯಲ್ಲಾ ಎಂದುಕೊಂಡು, ಮೈ ಮರೆಯಬೇಡಿ. ಏಕೆಂದರೆ ಈ ಅವಧಿಯಲ್ಲಿ ಎಷ್ಟು ಸಾಧ್ಯವೋ ಅಷ್ಟು ದುಡಿಮೆ ಹಾಗೂ ಉಳಿತಾಯ ಎರಡನ್ನೂ ಮಾಡಿಟ್ಟುಕೊಳ್ಳಿ. ಜವಾಬ್ದಾರಿಗಳನ್ನು ನೀವಾಗಿಯೇ ವಹಿಸಿಕೊಳ್ಳಿ. ಮುಖ್ಯವಾಗಿ ಯಾರ ಜತೆಗೂ ನಿಮ್ಮನ್ನು ನೀವು ಹೋಲಿಕೆ ಮಾಡಿಕೊಳ್ಳದಿರಿ. 

ಮಕರ ರಾಶಿ: ಉತ್ತರಾಷಾಢ ನಕ್ಷತ್ರದ ಎರಡು, ಮೂರು, ನಾಲ್ಕನೇ ಪಾದ, ಶ್ರವಣ ನಕ್ಷತ್ರದ ನಾಲ್ಕೂ ಪಾದ, ಧನಿಷ್ಠಾ ನಕ್ಷತ್ರದ ಒಂದು, ಎರಡನೇ ಪಾದ

ನಿಮ್ಮ ಪಾಲಿಗೆ ಸಾಡೇಸಾತ್ ಶನಿಯ ಕೊನೆಯ ಹಂತ ಇದಾಗಿದೆ. ಎರಡನೇ ಮನೆಯಲ್ಲಿ ಶನಿ ಸಂಚಾರ ಆಗುತ್ತಿದೆ. ಸಾಂಸಾರಿಕವಾಗಿ ಕಲಹಗಳು, ಭಿನ್ನಾಭಿಪ್ರಾಯಗಳು ಕಾಣಿಸಿಕೊಳ್ಳುತ್ತವೆ. ಹಣದ ಹರಿವಿನಲ್ಲಿ ಅಡೆತಡೆಗಳು ಎದುರಾಗುತ್ತವೆ. ಮಾನಸಿಕ ಚಿಂತೆಗಳು ಹೆಚ್ಚಾಗುತ್ತವೆ. ನಿಮ್ಮ ಕೈ ಸೇರದ ದುಡ್ಡನ್ನು ನಂಬಿಕೊಂಡು ಯಾರಿಗೂ ಮಾತು ನೀಡಬೇಡಿ. ಏಕೆಂದರೆ ಹೇಳಿದ ಸಮಯಕ್ಕೆ ಮಾತಿನಂತೆ ನಡೆದುಕೊಳ್ಳುವುದಕ್ಕೆ ಆಗದೆ ವರ್ಚಸ್ಸಿಗೆ ಧಕ್ಕೆ ಆಗಲಿದೆ. ಮಧುಮೇಹ, ರಕ್ತದೊತ್ತಡದಂಥ ಸಮಸ್ಯೆಗಳನ್ನು ಈಗಾಗಲೇ ಅನುಭವಿಸುತ್ತಿದ್ದಲ್ಲಿ ಅವು ಉಲ್ಬಣ ಆಗಲಿವೆ. ಈ ಅವಧಿಯಲ್ಲಿ ಮಾಸ್ಟರ್ ಚೆಕಪ್ ಮಾಡಿಸಿಕೊಳ್ಳುವುದು ಕ್ಷೇಮ. ಇನ್ನು ಪೂರ್ಣ ಮಾಹಿತಿ ಇಲ್ಲದ ವಿಷಯಗಳನ್ನು ಸಾರ್ವಜನಿಕ ವೇದಿಕೆಗಳಲ್ಲಿ ಹೇಳದಿರಿ. ಸಾಕ್ಷ್ಯಾಧಾರ ಇಲ್ಲದೆ ಆಡಿದ ಮಾತಿನಿಂದ ಟೀಕೆಗೆ ಗುರಿ ಆಗಲಿದ್ದೀರಿ. ಹೊಸ ವ್ಯಾಪಾರ, ಉದ್ಯಮ ಆರಂಭಿಸುವ ಸಲುವಾಗಿಯೇ ಸಾಲ ಮಾಡುವ ಆಲೋಚನೆ ಇದ್ದಲ್ಲಿ ಈ ಅವಧಿಯಲ್ಲಿ ಯಾವ ಕಾರಣಕ್ಕೂ ಮಾಡದಿರಿ. ಇನ್ನು ಕೆಲಸ ಬದಲಾಯಿಸುವುದಕ್ಕೆ ಪ್ರಯತ್ನ ಮಾಡುತ್ತಿದ್ದಲ್ಲಿ ಒಳ್ಳೆ, ಹುದ್ದೆ, ಸಂಬಳ ಎಂದುಕೊಂಡು ಈಗಷ್ಟೇ ಆರಂಭವಾಗಿರುವ ಸಂಸ್ಥೆಗಳಿಗೆ ಸೇರಿಕೊಳ್ಳದಿರಿ. ನಿಮ್ಮ ಪಾಲಿಗೆ ತಾತ್ಕಾಲಿಕವಾಗಿಯಾದರೂ ನಿರುದ್ಯೋಗ ಸ್ಥಿತಿಯನ್ನು ಅನುಭವಿಸಬೇಕಾಗುತ್ತದೆ.

ಕುಂಭ ರಾಶಿ: ಧನಿಷ್ಠಾ ನಕ್ಷತ್ರ ಮೂರು, ನಾಲ್ಕನೇ ಪಾದ, ಶತಭಿಷಾ ನಕ್ಷತ್ರ ನಾಲ್ಕು ಪಾದ, ಪೂರ್ವಾಭಾದ್ರ ನಕ್ಷತ್ರ ಒಂದು, ಎರಡು, ಮೂರನೇ ಪಾದ

ನಿಮ್ಮ ರಾಶಿಗೆ ಸಾಡೇಸಾತ್ ಶನಿಯ ಎರಡನೇ ಹಂತ ಆರಂಭವಾಗುತ್ತಿದೆ. ಜನ್ಮ ರಾಶಿಗೆ ಅಥವಾ ಒಂದನೇ ಮನೆಗೆ ಶನಿ ಸಂಚಾರ ಆಗುತ್ತಿದೆ. ಈ ಅವಧಿಯಲ್ಲಿ ಸಾಲ ಮಾಡುವುದರಿಂದ ತಪ್ಪಿಸಿಕೊಂಡಲ್ಲಿ ಸಾಧನೆ ಮಾಡಿದಂತೆಯೇ. ಲೆಕ್ಕಾಚಾರ, ಬಜೆಟ್ ಇಲ್ಲದೇ ಯಾವ ಯೋಜನೆಯಲ್ಲೂ ಮುಂದುವರಿಯಬೇಡಿ. ಏಕೆಂದರೆ, ಹತ್ತು ರೂಪಾಯಿಯಲ್ಲಿ ಮುಗಿಯುತ್ತದೆ ಅಂದುಕೊಳ್ಳುವ ಕೆಲಸಕ್ಕೆ ಹದಿನೈದರಿಂದ ಇಪ್ಪತ್ತು ರೂಪಾಯಿ ಖರ್ಚಾಗಲಿದೆ. ಇಂಥ ಸನ್ನಿವೇಶದಲ್ಲಿ ಹಣ ಹೊಂದಿಸುವುದರಲ್ಲಿ ಹೈರಾಣಾಗುತ್ತೀರಿ. ಮಾನಸಿಕ ಖಿನ್ನತೆ ಸಹ ಆಗುತ್ತದೆ. ಈ ಅವಧಿಯಲ್ಲಿ ಸಣ್ಣದಾದರೂ ಶಸ್ತ್ರಚಿಕಿತ್ಸೆ ಆಗಬಹುದು. ಆದ್ದರಿಂದ ಯಾವುದೇ ಅನಾರೋಗ್ಯ ಕಾಡಿದಲ್ಲಿ ಆರಂಭದಲ್ಲೇ ಚಿಕಿತ್ಸೆ ಪಡೆದುಕೊಳ್ಳಿ. ಸುಲಭಕ್ಕೆ ಸಾಲ ಸಿಗುತ್ತದೆ, ಕಡಿಮೆ ಬಡ್ಡಿಗೆ ಸಾಲ ಸಿಗುತ್ತದೆ ಎಂಬ ಕಾರಣಕ್ಕೆ ಕಾರು, ಗೃಹೋಪಯೋಗಿ ವಸ್ತುಗಳು, ಸೈಟು, ಮನೆಗಳ ಖರೀದಿ ಮಾಡುವುದಕ್ಕೆ ಮುಂದಾಗಬೇಡಿ. ಈಗ ಒಂದು ವೇಳೆ ಸಾಲ ಮಾಡಿದರೆ ಆ ಆಸ್ತಿಯನ್ನು ಉಳಿಸಿಕೊಳ್ಳುವುದು ಸಹ ಕಷ್ಟ ಆಗುತ್ತದೆ ಹಾಗೂ ಇದರ ಜತೆಗೆ ಬಡ್ಡಿಯನ್ನೂ ಕಟ್ಟಬೇಕಾಗುತ್ತದೆ. ವಿದ್ಯಾರ್ಥಿಗಳು ಓದಿನ ಮೇಲೆ ಏಕಾಗ್ರತೆಯನ್ನು ನೀಡಿ, ಉನ್ನತ ಶಿಕ್ಷಣದ ಕೋರ್ಸ್ ಆಯ್ಕೆ ಮಾಡಿಕೊಳ್ಳುವಾಗ ಸರಿ- ತಪ್ಪುಗಳ ಬಗ್ಗೆ ಸರಿಯಾದ ಆಲೋಚನೆ ಮಾಡಿ, ಮುಂದುವರಿಯಿರಿ.

ಮೀನ ರಾಶಿ: ಪೂರ್ವಾಭಾದ್ರ ನಕ್ಷತ್ರ ನಾಲ್ಕನೇ ಪಾದ, ಉತ್ತರಾಭಾದ್ರ ನಕ್ಷತ್ರ ನಾಲ್ಕೂ ಪದ, ರೇವತಿ ನಕ್ಷತ್ರ ನಾಲ್ಕೂ ಪದ

ನಿಮಗೆ ಇದರೊಂದಿಗೆ ಸಾಡೇಸಾತ್, ಅಂದರೆ ಏಳರಾಟ ಶನಿ ಆರಂಭವಾಗುತ್ತದೆ. ಹನ್ನೆರಡನೇ ಮನೆಯಲ್ಲಿ ಶನಿ ಸಂಚಾರ ಆಗುತ್ತದೆ. ಹನ್ನೆರಡನೇ ಮನೆ ಅಂದರೆ ವ್ಯಯ ಸ್ಥಾನ. ಆದ್ದರಿಂದ ಖರ್ಚಿನ ಪ್ರಮಾಣ ಸಿಕ್ಕಾಪಟ್ಟೆ ಜಾಸ್ತಿ ಆಗುತ್ತದೆ. ಮನೆಯಲ್ಲಿ ಕುಟುಂಬದವರ ಅನಾರೋಗ್ಯಕ್ಕೆ ವೆಚ್ಚಗಳಾಗುತ್ತವೆ. ಈ ಅವಧಿಯಲ್ಲಿ ನಾನಾ ಹೂಡಿಕೆ ಪ್ರಸ್ತಾವವಗಳು ನಿಮಗೆ ಬರಲಿವೆ. ಆಕರ್ಷಕವಾದ ಬಡ್ಡಿಯೋ ಅಥವಾ ರಿಟರ್ನ್ ನೀಡುತ್ತೇವೆ ಎಂದರೆ ಹೂಡಿಕೆ ಮಾಡಬೇಡಿ. ಏಕೆಂದರೆ ಕೆಲವು ಸಮಯ ನಿಮಗೆ ಅದಕ್ಕೆ ಹಣ ಬರಬಹುದು, ಆದರೆ ಅಸಲಿಗೇ ಮೋಸ ಆಗಬಿಡಬಹುದು ಅಥವಾ ಕೆಲ ಸಮಯದ ನಂತರ ಬಡ್ಡಿ, ರಿಟರ್ನ್ ಏನೂ ಬಾರದಿರುವಂಥ ಸನ್ನಿವೇಶ ಸೃಷ್ಟಿ ಆಗಬಹುದು. ಅದೇ ರೀತಿ ಹೊಸದಾಗಿ ಸೈಟು, ಜಮೀನು, ಮನೆ ಕೊಳ್ಳಬೇಕು ಎಂದಿದ್ದಲ್ಲಿ ಕಾಗದ- ಪತ್ರಗಳನ್ನು ಸರಿಯಾಗಿ ನೋಡಿಕೊಳ್ಳಿ. ಕಾನೂನು ಪರಿಣತರ ಸಲಹೆಯನ್ನು ಪಡೆದುಕೊಳ್ಳಿ. ಒಂದು ವೇಳೆ ಈಗಾಗಲೇ ಖರೀದಿಸಿದ ಆಸ್ತಿಯ ಮಾರಾಟ ಮಾಡಬೇಕು ಎಂದಿದ್ದಲ್ಲಿ ಅದರ ಸರಿಯಾದ ಬೆಲೆಯನ್ನು ತಿಳಿದುಕೊಂಡು, ಮಾರುವುದಕ್ಕೆ ಮುಂದಾಗಿ. ಏಕೆಂದರೆ ಮಾರಾಟದಲ್ಲೂ ನಿಮಗೆ ನ್ಯಾಯಯುತವಾದ ಬೆಲೆ ಸಿಗದಂತೆ ಆಗಬಹುದು. ಸಾಡೇಸಾತ್ ಆರಂಭದ ಘಟ್ಟವಾದ್ದರಿಂದ ಪ್ರಭಾವ ದೊಡ್ಡ ಮಟ್ಟದಲ್ಲೇ ಆಗಬೇಕು ಎಂದೇನಿಲ್ಲ. ಆದರೆ ಇನ್ನೂ ಅಷ್ಟು ದೊಡ್ಡದಲ್ಲವಲ್ಲ ಎಂದು ನಿರ್ಲಕ್ಷ್ಯ ಮಾಡಿದಲ್ಲಿ ದೀರ್ಘಾವಧಿಯಲ್ಲಿ ಬೆಲೆ ತೆರಬೇಕಾದೀತು.  

ಲೇಖಕರು- ವಿದ್ವಾನ್ ಮಂಜುನಾಥ್ ಭಾರದ್ವಾಜ್ (ಜ್ಯೋತಿಷಿಗಳು- ಪುರೋಹಿತರು), ಜಾತಕಗಳನ್ನು ಮಾಡಿಸಲು, ಪೌರೋಹಿತ್ಯಕ್ಕೆ ಹಾಗೂ ಜ್ಯೋತಿಷಕ್ಕೆ ಸಂಬಂಧಿಸಿದಂತೆ ವೈಯಕ್ತಿಕವಾಗಿ ಭೇಟಿ ಮಾಡುವುದಕ್ಕೆ ಮೊಬೈಲ್ ಫೋನ್ ಸಂಖ್ಯೆ- 8050789904 ಸಂಪರ್ಕಿಸಿ.

Saturn entered zodiac sign Aquarius on January 17th, 2023. What are the effects on 12 zodiac signs explained here.

Saturn transit in aquarius, saturn transit 2023, sade sati effects, astrology articles in kannada, ಕುಂಭ ರಾಶಿಯಲ್ಲಿ ಶನಿ ಸಂಚಾರ, ಏಳರಾಟ ಶನಿ, ಕನ್ನಡದಲ್ಲಿ ಜ್ಯೋತಿಷ್ಯ ಲೇಖನ, ದ್ವಾದಶ ರಾಶಿಗಳಿಗೆ ಶನಿ ಸಂಚಾರ ಫಲ

Latest News

Related Posts