ನರಸಿಂಹ ಜಯಂತಿಯ ವಿಶೇಷದ ಪ್ರಯುಕ್ತ ಈ ಲೇಖನದಲ್ಲಿ ವಿಜಯಪುರ ಜಿಲ್ಲೆಯ ಪ್ರಸಿದ್ಧ ಪುಣ್ಯಕ್ಷೇತ್ರವಾದ ತೊರವಿ ಶ್ರೀ ಲಕ್ಷ್ಮೀ ನರಸಿಂಹ ದೇವಾಲಯದ ಬಗ್ಗೆ ವಿವರವಾಗಿ ಪರಿಚಯಿಸಲಾಗುವುದು. ಕರ್ನಾಟಕದ ವಿಜಯಪುರ (ಈ ಹಿಂದಿನ ಹೆಸರು ಬಿಜಾಪುರ) ಪುಣ್ಯಕ್ಷೇತ್ರಗಳಿಗೂ ಹೆಸರುವಾಸಿ. ಅಂತಹ ಪ್ರಮುಖ ಕ್ಷೇತ್ರಗಳಲ್ಲಿ ವಿಜಯಪುರ ನಗರದಿಂದ ಪಶ್ಚಿಮಕ್ಕೆ ಸುಮಾರು 4 ಮೈಲು ದೂರದಲ್ಲಿ ತೊರವಿ ಎಂಬ ಗ್ರಾಮವಿದೆ. ಅಲ್ಲಿನ ಶ್ರೀ ಲಕ್ಷ್ಮೀ ನರಸಿಂಹ ದೇವಾಲಯ ಅತ್ಯಂತ ವಿಶಿಷ್ಟವಾದುದು.
ಕ್ಷೇತ್ರದ ಹಿನ್ನೆಲೆ ಮತ್ತು ಹೆಸರಿನ ವಿಶೇಷ
‘ತೊರವಿ’ ಎಂಬ ಹೆಸರು ಬಂದಿರುವುದು ಸಂಸ್ಕೃತದ ‘ತ್ವರಿತಾಲಯ’ ಎಂಬ ಪದದಿಂದ. ‘ತ್ವರಿತವಾಗಿ’ (ಬೇಗನೇ) ಭಕ್ತರನ್ನು ಪೊರೆಯುವ ಅಥವಾ ರಕ್ಷಿಸುವ ದೇವರ ಆಲಯವೇ ‘ತ್ವರಿತಾಲಯ’, ಇದು ಕಾಲಕ್ರಮೇಣ ತೊರವಿ ಅಥವಾ ತೊರವೆ ಎಂದು ಬದಲಾಯಿತು. ಮುಸಲ್ಮಾನರ ಆಳ್ವಿಕೆಯ ಕಾಲದಲ್ಲಿ ಈ ಪ್ರದೇಶವನ್ನು ‘ನೌಲಾಖಪುರ’ ಎಂದೂ ಕರೆಯಲಾಗುತ್ತಿತ್ತು.
ಗುಹಾಂತರ ದೇವಾಲಯದ ವೈಶಿಷ್ಟ್ಯ
ಈ ದೇವಾಲಯದ ವಿಶೇಷ ಏನೆಂದರೆ, ಇದೊಂದು ಗುಹಾಂತರ ದೇವಾಲಯ. ಹೊರಗಿನಿಂದ ನೋಡಿದಾಗ ಕೇವಲ ಒಂದು ಗೋಡೆಯಂತೆ ಕಾಣುವ ಈ ದೇವಾಲಯಕ್ಕೆ ಭವ್ಯವಾದ ಗೋಪುರಗಳಿಲ್ಲ. ಮೆಟ್ಟಿಲುಗಳ ಮೂಲಕ ನೆಲಮಟ್ಟದಿಂದ ಕೆಳಕ್ಕೆ ಇಳಿದು ಗುಹೆಯನ್ನು ಪ್ರವೇಶಿಸಬೇಕು. ಈ ಗುಹೆಯಲ್ಲಿ ನರಸಿಂಹ ದೇವರ ವಿಗ್ರಹವಿದೆ.
ನರಸಿಂಹ ದೇವರಿಗೆ ಜೇನುತುಪ್ಪದ ಅಭಿಷೇಕದ ಫಲಗಳೇನು? ಪೂರ್ಣ ಮನ್ಯುಸೂಕ್ತದ ವಿವರ ಇಲ್ಲಿದೆ
ಮೂರ್ತಿಯ ವಿವರ:
- ಇಲ್ಲಿನ ನರಸಿಂಹ ದೇವರು ಅಷ್ಟಭುಜಗಳನ್ನು (ಎಂಟು ಕೈಗಳು) ಹೊಂದಿದ್ದು, ಹಿರಣ್ಯಕಶಿಪುವನ್ನು ತನ್ನ ತೊಡೆಯ ಮೇಲೆ ಹಾಕಿಕೊಂಡು ಸಂಹರಿಸುತ್ತಿರುವ ಭಂಗಿಯಲ್ಲಿದ್ದಾನೆ.
- ದೇವರ ಕೈಗಳಲ್ಲಿ ಶಂಖ, ಚಕ್ರ ಸೇರಿದಂತೆ ವಿವಿಧ ಆಯುಧಗಳಿವೆ.
- ಪೀಠದ ಬಲಭಾಗದಲ್ಲಿ ಲಕ್ಷ್ಮೀ ದೇವಿ ಮತ್ತು ಎಡಭಾಗದಲ್ಲಿ ಪ್ರಹ್ಲಾದನ ಮೂರ್ತಿಗಳಿವೆ.
- ವಿಗ್ರಹದ ಹಿಂಭಾಗದಲ್ಲಿ ದಶಾವತಾರಗಳ ಚಿತ್ರಣವಿರುವ ಪ್ರಭಾವಳಿ ಹಾಗೂ ದೊಡ್ಡ ಚಕ್ರವಿದೆ. ಈ ವಿಗ್ರಹವು ಸಾಲಿಗ್ರಾಮ ಶಿಲೆಯದು ಎಂದು ಹೇಳಲಾಗುತ್ತದೆ.
- ಗರ್ಭಗುಡಿಯ ಎದುರು ಭೀಮಾಶಂಕರ ಎಂಬ ಶಿವಲಿಂಗವೂ ಇದೆ.
ಐತಿಹ್ಯ ಮತ್ತು ಮೂರ್ತಿ ಸ್ಥಾಪನೆ
ಸ್ಥಳೀಯರ ಪ್ರಕಾರ, ಈ ಗುಹೆಯಲ್ಲಿ ಮೊದಲು ನರಸಿಂಹ ದೇವರ ದೊಡ್ಡ ಸಾಲಿಗ್ರಾಮವಿತ್ತು. ಅರ್ಚಕರ ಕನಸಿನಲ್ಲಿ ಬಂದ ದೇವರು, ತಾನು ಕೃಷ್ಣಾ ನದಿಯಲ್ಲಿ ಹೋಗುವುದಾಗಿ ತಿಳಿಸಿ, ಕೃಷ್ಣಾ ನದಿಯ ದಡದಲ್ಲಿ ಎಲ್ಲಿ ಹಸಿಹುಲ್ಲು ಹಾಕಿದಾಗ ಅದು ಸುಡುತ್ತದೆಯೋ ಅಲ್ಲಿ ತನ್ನ ವಿಗ್ರಹ ಸಿಗುತ್ತದೆ ಎಂದು ಹೇಳಿದಂತೆ ಆಯಿತು. ಅದರಂತೆ ಬಾಗೇವಾಡಿ ತಾಲ್ಲೂಕಿನ ಚಿಮ್ಮಲಗಿ ಗ್ರಾಮದಲ್ಲಿ ವಿಗ್ರಹವು ದೊರೆಯಿತು. ಅಲ್ಲಿಂದ ಭಕ್ತರು ಮೆರವಣಿಗೆಯ ಮೂಲಕ ತಂದು ಈ ಗುಹೆಯಲ್ಲಿ ಪ್ರತಿಷ್ಠಾಪಿಸಿದರು. ಇಂದಿಗೂ ಚಿಮ್ಮಲಗಿ ಗ್ರಾಮದ ಅನೇಕ ಕುಟುಂಬಗಳಿಗೆ ತೊರವಿ ನರಸಿಂಹನೇ ಕುಲದೇವರು.
ರಕ್ಷಣಾತ್ಮಕ ವಿನ್ಯಾಸ
ಮುಸಲ್ಮಾನರ ಆಳ್ವಿಕೆಯಲ್ಲಿ ದೇವಾಲಯವನ್ನು ಆಕ್ರಮಣಕಾರರಿಂದ ರಕ್ಷಿಸಲು ಇದನ್ನು ಗುಹೆಯ ರೂಪದಲ್ಲಿ ನಿರ್ಮಿಸಲಾಗಿತ್ತು. ಗುಹೆಯ ದ್ವಾರವನ್ನು ಬಂಡೆಗಲ್ಲಿನಿಂದ ಮುಚ್ಚುವ ವ್ಯವಸ್ಥೆಯೂ ಇತ್ತು. ಅಲ್ಲದೆ, ಗುಹೆಯೊಳಗೆ ಒಂದು ರಹಸ್ಯ ಸುರಂಗ ಮಾರ್ಗವಿದ್ದು, ಅದು ಸಮೀಪದ ನರಸಿಂಹ ತೀರ್ಥಕ್ಕೆ ಸಂಪರ್ಕ ಕಲ್ಪಿಸುತ್ತದೆ ಎಂದು ನಂಬಲಾಗಿದೆ.
ಸಾಹಿತ್ಯಿಕ ಮಹತ್ವ: ತೊರವೆ ರಾಮಾಯಣ
ಕನ್ನಡ ಸಾಹಿತ್ಯ ಲೋಕದಲ್ಲಿ ಅತ್ಯಂತ ಪ್ರಸಿದ್ಧವಾದ ‘ತೊರವೆ ರಾಮಾಯಣ’ ರಚನೆ ಆದದ್ದು ಇದೇ ಕ್ಷೇತ್ರದಲ್ಲಿ. ಸುಮಾರು ಕ್ರಿ.ಶ. 1500ರಲ್ಲಿ ಕವಿ ನರಹರಿ ಈ ಗುಹೆಯಲ್ಲಿ ನರಸಿಂಹ ದೇವರ ಸನ್ನಿಧಿಯಲ್ಲಿ ಕುಳಿತು ರಾಮಾಯಣವನ್ನು ರಚಿಸಿದ. ಗ್ರಂಥದ ಆರಂಭ ಮತ್ತು ಅಂತ್ಯದಲ್ಲಿ ಈತ ತೊರವಿ ನರಸಿಂಹನನ್ನು ಅತ್ಯಂತ ಭಕ್ತಿಯಿಂದ ಸ್ತುತಿಸಿದ್ದಾನೆ.
ಭಕ್ತರ ನಂಬಿಕೆ
ಆದಿಲ್‌ಶಾಹಿ ರಾಜರ ಪೈಕಿ ಒಬ್ಬ ರಾಜನು ಈ ನರಸಿಂಹನ ಪರಮ ಭಕ್ತನಾಗಿದ್ದನೆಂಬ ಪ್ರತೀತಿ ಇದೆ. ಇಂದಿಗೂ ವಿಜಯಪುರ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳ ಸಾವಿರಾರು ಭಕ್ತರು ಈ ಕ್ಷೇತ್ರಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆಯುತ್ತಾರೆ.
ತಲುಪುವ ಹಾದಿ:
ವಿಜಯಪುರ ನಗರದಿಂದ ಅಥಣಿ ರಸ್ತೆಯಲ್ಲಿ ಕೇವಲ 6 ಕಿ.ಮೀ ಪ್ರಯಾಣಿಸಿದರೆ ಈ ಪವಿತ್ರ ಕ್ಷೇತ್ರವನ್ನು ತಲುಪಬಹುದು.
ದೇವಸ್ಥಾನದ ದರ್ಶನ ಮತ್ತು ಪೂಜಾ ಸಮಯ
ತೊರವಿ ಶ್ರೀ ಲಕ್ಷ್ಮೀ ನರಸಿಂಹ ದೇವಾಲಯವು ಪ್ರತಿದಿನ ಭಕ್ತರಿಗಾಗಿ ತೆರೆದಿರುತ್ತದೆ. ಸಾಮಾನ್ಯವಾಗಿ ಸಮಯ ಈ ಕೆಳಗಿನಂತಿರುತ್ತದೆ:
- ಬೆಳಗ್ಗೆ: 7ರಿಂದ ಮಧ್ಯಾಹ್ನ 1.30 ರವರೆಗೆ.
- ಸಂಜೆ: 4ರಿಂದ ರಾತ್ರಿ 8.30 ರವರೆಗೆ.
- ವಿಶೇಷ ದಿನಗಳಲ್ಲಿ: ಶನಿವಾರ, ಭಾನುವಾರ ಮತ್ತು ಹಬ್ಬದ ದಿನಗಳಲ್ಲಿ (ವಿಶೇಷವಾಗಿ ನರಸಿಂಹ ಜಯಂತಿ) ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುವುದರಿಂದ ಸಮಯದ ಅವಧಿಯನ್ನು ವಿಸ್ತರಿಸಲಾಗುತ್ತದೆ.
ವರ್ಷದ 364 ದಿನ ಶ್ರೀಗಂಧದ ಲೇಪನದಲ್ಲಿರುವ ನರಸಿಂಹ! ಸಿಂಹಾಚಲಂ ಕ್ಷೇತ್ರದ ಪೌರಾಣಿಕ ಹಿನ್ನೆಲೆ ನಿಮಗೆ ಗೊತ್ತೇ?
ವಿಶೇಷ ಸೇವೆಗಳು ಮತ್ತು ಉತ್ಸವಗಳು
- ನಿತ್ಯ ಪೂಜೆ: ಪ್ರತಿದಿನ ಬೆಳಗ್ಗೆ ದೇವರಿಗೆ ಪಂಚಾಮೃತ ಅಭಿಷೇಕ, ಅರ್ಚನೆ ಮತ್ತು ಮಹಾಮಂಗಳಾರತಿ ನಡೆಯುತ್ತದೆ. ಭಕ್ತರು ತಮ್ಮ ಹೆಸರಿನಲ್ಲಿ ಅರ್ಚನೆ ಮಾಡಿಸಬಹುದು.
- ನರಸಿಂಹ ಜಯಂತಿ: ಪ್ರತಿವರ್ಷ ವೈಶಾಖ ಶುದ್ಧ ಚತುರ್ದಶಿಯಂದು ‘ನರಸಿಂಹ ಜಯಂತಿ’ಯನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಅಂದು ದೇವರಿಗೆ ವಿಶೇಷ ಅಲಂಕಾರ, ಹವನ ಮತ್ತು ರಥೋತ್ಸವ ನಡೆಯುತ್ತವೆ.
- ಲಕ್ಷ್ಮೀ ನರಸಿಂಹ ಹೋಮ: ಭಕ್ತರು ತಮ್ಮ ಕಷ್ಟಕಾರ್ಪಣ್ಯಗಳ ನಿವಾರಣೆಗಾಗಿ ಮತ್ತು ಇಷ್ಟಾರ್ಥ ಸಿದ್ಧಿಗಾಗಿ ಇಲ್ಲಿ ನರಸಿಂಹ ಹೋಮವನ್ನು ಮಾಡಿಸುತ್ತಾರೆ.
- ಪಲ್ಲಕ್ಕಿ ಸೇವೆ: ವಿಶೇಷ ದಿನಗಳಲ್ಲಿ ದೇವರ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಕೂರಿಸಿ ದೇವಾಲಯದ ಆವರಣದಲ್ಲಿ ಮೆರವಣಿಗೆ ಮಾಡಲಾಗುತ್ತದೆ.
- ಸುತ್ತಮುತ್ತಲಿನ ಭಕ್ತರ ಸೇವೆ: ಉತ್ತರ ಕರ್ನಾಟಕದ ಅನೇಕ ಭಾಗಗಳಲ್ಲಿ ಈ ದೇವರು ಕುಲದೈವವಾಗಿರುವುದರಿಂದ, ಮಕ್ಕಳಿಗೆ ಚೌಲ (ಮುಂಡನ) ಮಾಡಿಸುವುದು ಮತ್ತು ತುಲಾಭಾರ ಸೇವೆಗಳೂ ಇಲ್ಲಿ ಕಂಡುಬರುತ್ತವೆ.
ಭಕ್ತರಿಗೆ ಸೌಲಭ್ಯಗಳು
- ದೇವಸ್ಥಾನದ ಸಮೀಪವೇ ‘ನರಸಿಂಹ ತೀರ್ಥ’ ಎಂಬ ಪುಷ್ಕರಣಿ (ಕೆರೆ) ಇದೆ. ಭಕ್ತರು ಇಲ್ಲಿ ಕೈಕಾಲು ತೊಳೆದುಕೊಂಡು ದೇವರ ದರ್ಶನಕ್ಕೆ ಹೋಗುವ ಸಂಪ್ರದಾಯವಿದೆ.
- ದೂರದ ಊರುಗಳಿಂದ ಬರುವ ಭಕ್ತರಿಗಾಗಿ ದಾಸೋಹದ (ಪ್ರಸಾದದ) ವ್ಯವಸ್ಥೆ ಇರುತ್ತದೆ (ವಿಶೇಷ ದಿನಗಳಲ್ಲಿ ಮತ್ತು ಆಡಳಿತ ಮಂಡಳಿಯ ನಿರ್ಧಾರದಂತೆ).
ಲೇಖನ- ಶ್ರೀನಿವಾಸ ಮಠ









