ಸನಾತನ ಧರ್ಮದಲ್ಲಿ ಶಿವನು ಕೇವಲ ಒಬ್ಬ ದೇವನಲ್ಲ, ಆತ ಅನಂತವಾದ ಶಕ್ತಿ ಮತ್ತು ವೈರಾಗ್ಯದ ಸಂಕೇತ. ಶಿವನ ರೂಪವನ್ನು ಸೂಕ್ಷ್ಮವಾಗಿ ಗಮನಿಸಿದರೆ ಆತ ಧರಿಸಿರುವ ಪ್ರತಿಯೊಂದು ವಸ್ತುವು ಬದುಕಿನ ಸತ್ಯವನ್ನು ಸಾರುವ ಸಂಕೇತಗಳಾಗಿ ಕಾಣುತ್ತವೆ. ರುದ್ರಾಕ್ಷಿ, ವಿಭೂತಿ, ತ್ರಿಶೂಲ ಮತ್ತು ಡಮರುಗಗಳು ಕೇವಲ ಅಲಂಕಾರಿಕ ವಸ್ತುಗಳಲ್ಲ, ಅವುಗಳ ಹಿಂದೆ ಆಳವಾದ ತತ್ವವಿದೆ.
ರುದ್ರಾಕ್ಷಿ: ದೈವಿಕ ಕಣ್ಣೀರು ಮತ್ತು ರಕ್ಷಣೆ
ರುದ್ರಾಕ್ಷಿಯು ಶಿವನ ಭಕ್ತರಿಗೆ ಅತ್ಯಂತ ಪ್ರಿಯವಾದ ವಸ್ತು. ಪುರಾಣಗಳ ಪ್ರಕಾರ, ಶಿವನು ಒಮ್ಮೆ ಲೋಕಕಲ್ಯಾಣಕ್ಕಾಗಿ ದೀರ್ಘಕಾಲ ಕಣ್ಣು ಮುಚ್ಚಿ ಧ್ಯಾನಸ್ಥನಾದನು. ದೀರ್ಘಕಾಲದ ನಂತರ ಕಣ್ಣು ತೆರೆದಾಗ, ಆತನ ಕಣ್ಣಿನಿಂದ ಆನಂದದ ಹನಿಗಳು ಭೂಮಿಗೆ ಬಿದ್ದವು. ಆ ಹನಿಗಳೇ ರುದ್ರಾಕ್ಷಿ ಮರಗಳಾಗಿ ಬೆಳೆದವು ಎಂಬ ನಂಬಿಕೆಯಿದೆ.
ಆಧ್ಯಾತ್ಮಿಕವಾಗಿ ರುದ್ರಾಕ್ಷಿಯು ಮನುಷ್ಯನ ಮನಸ್ಸನ್ನು ಕೇಂದ್ರೀಕರಿಸಲು ಮತ್ತು ನಕಾರಾತ್ಮಕ ಶಕ್ತಿಗಳಿಂದ ರಕ್ಷಿಸಿಕೊಳ್ಳಲು ಸಹಾಯ ಮಾಡುತ್ತದೆ. ವೈಜ್ಞಾನಿಕವಾಗಿ ಇದು ದೇಹದ ರಕ್ತದೊತ್ತಡವನ್ನು ಸಮತೋಲನದಲ್ಲಿಡಲು ಮತ್ತು ಒತ್ತಡವನ್ನು ಕಡಿಮೆ ಮಾಡಲು ನೆರವಾಗುತ್ತದೆ ಎಂದು ಹೇಳಲಾಗುತ್ತದೆ. ಏಕಮುಖಿಯಿಂದ ಹಿಡಿದು ಚತುರ್ದಶ ಮುಖಿಯವರೆಗಿನ ವಿವಿಧ ರುದ್ರಾಕ್ಷಿಗಳು ಮನುಷ್ಯನ ಜೀವನದ ಬೇರೆ ಬೇರೆ ಹಂತದ ಸಮಸ್ಯೆಗಳಿಗೆ ಪರಿಹಾರ ನೀಡುತ್ತವೆ ಎಂಬ ನಂಬಿಕೆ ಇದೆ.
ಶ್ರೀ ರುದ್ರಪ್ರಶ್ನ: ಜಡ-ಚೇತನಗಳೆಲ್ಲೆಡೆ ಶಿವನನ್ನು ಕಾಣಿಸುವ ಅದ್ಭುತ ವೇದಮಂತ್ರದ ಒಳಾರ್ಥ ಇಲ್ಲಿದೆ!
ವಿಭೂತಿ: ಅಂತಿಮ ಸತ್ಯದ ಸ್ಮರಣೆ
ಶಿವನು ತನ್ನ ಮೈಯಿಡೀ ಭಸ್ಮ ಅಥವಾ ವಿಭೂತಿಯನ್ನು ಲೇಪಿಸಿಕೊಂಡಿರುತ್ತಾನೆ. ಇದು “ವೈರಾಗ್ಯ”ದ ಅತ್ಯುನ್ನತ ಸಂಕೇತ. ಪ್ರಪಂಚದಲ್ಲಿರುವ ಎಲ್ಲಾ ಸುಂದರ ವಸ್ತುಗಳು, ಸಂಪತ್ತು ಮತ್ತು ಈ ಭೌತಿಕ ದೇಹವು ಅಂತಿಮವಾಗಿ ಸುಟ್ಟು ಬೂದಿಯಾಗಲೇಬೇಕು ಎನ್ನುವ ಕಟು ಸತ್ಯವನ್ನು ವಿಭೂತಿ ನೆನಪಿಸುತ್ತದೆ.
ವಿಭೂತಿಯನ್ನು ಹಣೆಯ ಮೇಲೆ ಧರಿಸುವುದರಿಂದ ನಮ್ಮ ಆಲೋಚನೆಗಳು ಪವಿತ್ರವಾಗುತ್ತವೆ ಎಂಬ ನಂಬಿಕೆಯಿದೆ. ಆಧ್ಯಾತ್ಮಿಕವಾಗಿ ಇದು ನಮ್ಮ ಅಹಂಕಾರವನ್ನು ಸುಟ್ಟುಹಾಕುವುದನ್ನು ಪ್ರತಿನಿಧಿಸುತ್ತದೆ. ಅಲ್ಲದೆ, ಶಾಸ್ತ್ರೀಯವಾಗಿ ತಯಾರಿಸಿದ ವಿಭೂತಿಯು ದೇಹದ ಉಷ್ಣತೆಯನ್ನು ನಿಯಂತ್ರಿಸುವ ಮತ್ತು ಚರ್ಮದ ರಂಧ್ರಗಳ ಮೂಲಕ ತೇವಾಂಶವನ್ನು ಹೀರಿಕೊಳ್ಳುವ ವೈದ್ಯಕೀಯ ಗುಣವನ್ನು ಹೊಂದಿದೆ.
ಸ್ಮಶಾನದ ಬೂದಿಯಿಂದ ಮೋಕ್ಷದವರೆಗೆ – ಅಘೋರಿಗಳ ಪವಿತ್ರ 20 ಸ್ಥಳಗಳ ದರ್ಶನ
ತ್ರಿಶೂಲ ಮತ್ತು ಡಮರುಗ: ಶಕ್ತಿ ಮತ್ತು ಸೃಷ್ಟಿಯ ನಾದ
ಶಿವನ ಕೈಯಲ್ಲಿರುವ ತ್ರಿಶೂಲವು ಮೂರು ಗುಣಗಳಾದ ಸತ್ವ, ರಜ ಮತ್ತು ತಮಸ್ಸಿನ ಸಂಕೇತವಾಗಿದೆ. ಮನುಷ್ಯನು ಈ ಮೂರೂ ಗುಣಗಳನ್ನು ಮೀರಿ ಮುಕ್ತಿಯನ್ನು ಪಡೆಯಬೇಕು ಎಂಬುದನ್ನು ಇದು ಸೂಚಿಸುತ್ತದೆ. ಹಾಗೆಯೇ ಇದು ಭೂತ, ವರ್ತಮಾನ ಮತ್ತು ಭವಿಷ್ಯದ ಮೇಲಿನ ಶಿವನ ಹಿಡಿತವನ್ನು ತೋರಿಸುತ್ತದೆ.
ಇನ್ನೊಂದೆಡೆ, ಡಮರುಗವು ಬ್ರಹ್ಮಾಂಡದ ಸೃಷ್ಟಿಯ ನಾದವಾದ ‘ಓಂಕಾರ’ವನ್ನು ಪ್ರತಿನಿಧಿಸುತ್ತದೆ. ಡಮರುಗದಿಂದ ಹೊರಹೊಮ್ಮುವ ಶಬ್ದವು ವಿಶ್ವದ ಲಯವನ್ನು ಸೂಚಿಸುತ್ತದೆ. ಇದು ಶಬ್ದ ಮತ್ತು ಮೌನದ ನಡುವಿನ ಸಮತೋಲನವಾಗಿದೆ.
ಚಂದ್ರ ಮತ್ತು ಗಂಗೆ: ಶಾಂತಿ ಮತ್ತು ಜ್ಞಾನ
ಶಿವನ ಜಟೆಯಲ್ಲಿ ಗಂಗೆಯಿದ್ದರೆ, ಹಣೆಯ ಮೇಲೆ ಅರ್ಧಚಂದ್ರನಿದ್ದಾನೆ. ಅರ್ಧಚಂದ್ರನು ಕಾಲದ ನಿಯಂತ್ರಣ ಮತ್ತು ಮನಸ್ಸಿನ ಶಾಂತಿಯ ಸಂಕೇತ. ಮನಸ್ಸು ಚಂದ್ರನಂತೆ ಚಂಚಲವಾಗಿದ್ದರೂ ಅದನ್ನು ಜ್ಞಾನದ ಮೂಲಕ ಶಿವನಂತೆ ಸ್ಥಿರವಾಗಿಟ್ಟುಕೊಳ್ಳಬೇಕು ಎಂಬುದು ಇದರ ಅರ್ಥ. ಜಟೆಯಿಂದ ಹರಿಯುವ ಗಂಗೆಯು ನಿರಂತರವಾಗಿ ಹರಿಯುವ ಜ್ಞಾನದ ಸಂಕೇತವಾಗಿದೆ. ಜ್ಞಾನವು ಗಂಗೆಯಂತೆ ಪವಿತ್ರವಾಗಿದ್ದು, ಅದು ಅಜ್ಞಾನವೆಂಬ ಕೊಳೆಯನ್ನು ತೊಳೆಯುತ್ತದೆ.
ಶಿವತಾಂಡವ ಸ್ತೋತ್ರ: ಅಹಂಕಾರವನ್ನು ಅಳಿಸಿ ಆಧ್ಯಾತ್ಮಿಕ ಶಕ್ತಿ ತುಂಬುವ ರಾವಣ ವಿರಚಿತ ಸ್ತುತಿ
ನಾಗಾಭರಣ: ಭಯದ ಮೇಲೆ ವಿಜಯ
ಶಿವನು ಕುತ್ತಿಗೆಗೆ ಹಾವನ್ನು ಧರಿಸಿರುವುದು ನೋಡುಗರಿಗೆ ಭಯ ಹುಟ್ಟಿಸಬಹುದು. ಆದರೆ ಇದು ಭಯದ ಮೇಲಿನ ವಿಜಯ ಮತ್ತು ಕುಂಡಲಿನಿ ಶಕ್ತಿಯ ಜಾಗೃತಿಯನ್ನು ಸೂಚಿಸುತ್ತದೆ. ಅತ್ಯಂತ ವಿಷಕಾರಿಯಾದ ಹಾವನ್ನು ಆಭರಣವನ್ನಾಗಿ ಮಾಡಿಕೊಂಡಿರುವುದು ಎಂತಹ ಕೆಟ್ಟ ಸನ್ನಿವೇಶವನ್ನೂ ನಿಯಂತ್ರಿಸಬಹುದು ಎಂಬ ಆತ್ಮವಿಶ್ವಾಸದ ಸಂಕೇತವಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಶಿವನ ಸಂಕೇತಗಳು ಮನುಷ್ಯನಿಗೆ ಅಹಂಕಾರವನ್ನು ಬಿಟ್ಟು, ಸರಳತೆಯನ್ನು ಅಪ್ಪಿಕೊಂಡು, ಜ್ಞಾನದ ಹಾದಿಯಲ್ಲಿ ನಡೆಯಲು ಪ್ರೇರೇಪಿಸುತ್ತವೆ.
ಲೇಖನ- ಶ್ರೀನಿವಾಸ ಮಠ





