Sri Gurubhyo Logo

ರುದ್ರಪ್ರಶ್ನದ ಅರ್ಥಾನುಸಂಧಾನ: ನಮ್ಮ ಮನಸ್ಸೇ ಮಹದೇವನ ನೆಲೆವೀಡು

Rudra
ರುದ್ರ ರೂಪ ಕಂಡು ಕೈಮುಗಿಯುತ್ತಿರುವ ಋಷಿ. (Courtesy: sreenivasaraos.com and commons.wikimedia.org)

ದೇವರನ್ನು ಪ್ರತ್ಯಕ್ಷ ಕಂಡವರ ಭಾವನೆಗಳ ಅಭಿವ್ಯಕ್ತಿಯೇ ರುದ್ರಪ್ರಶ್ನ. ಇದು ಗದ್ಯರೂಪದ ವೇದಮಂತ್ರವಾಗಿದ್ದರೂ ಪಾರಾಯಣ ಮಾಡುವಾಗ ಒಮ್ಮೊಮ್ಮೆ ಭಾವಗೀತೆ ಎನ್ನಿಸುವುದು ಉಂಟು. ರುದ್ರಸೂಕ್ತ ಎಂಬ ಮತ್ತೊಂದು ಭಾಗವಿದ್ದರೂ, ರುದ್ರಪ್ರಶ್ನವನ್ನೂ ರುದ್ರಸೂಕ್ತ, ರುದ್ರ, ನಮಕ ಎಂದೆಲ್ಲಾ ಕರೆಯುವುದು ವಾಡಿಕೆ. ‘ಇಲ್ಲಿದ್ದಾನೆ ದೇವರು, ಹೀಗಿದ್ದಾನೆ ದೇವರು” ಎನ್ನುವ ಸ್ಪಷ್ಟ ತಿಳಿವಿನ ರುದ್ರಮಂತ್ರಗಳು, ಜಡ–ಚರ ಎಲ್ಲದರಲ್ಲಿಯೂ ಶಿವನನ್ನು ಕಾಣುವ ಕಾಣಿಸುವ ಪ್ರಯತ್ನ. ಚಲನೆಯಿಲ್ಲದ್ದೂ, ಚಲನೆ ಇರುವುದು ಎಲ್ಲವೂ ದೇವರೇ ಎಂದು ಉದಾಹರಣೆಗಳಿಂದ ಪ್ರತಿಪಾದಿಸುವುದು ಈ ಮಂತ್ರಗಳ ವೈಶಿಷ್ಟ್ಯ.

ಈಶ್ವರನ ಪೂಜೆಗೂ ರುದ್ರಾಧ್ಯಯ ಎನಿಸಿಕೊಂಡಿರುವ ನಮಕ–ಚಮಕಗಳ ಪಾರಾಯಣಕ್ಕೂ ಅವಿನಾಭಾವ ಸಂಬಂಧ. ತಲೆಯ ಮೇಲೆ ಗಂಗೆಯೇ ಇದ್ದರೂ ಮುಕ್ಕಣ್ಣ ಮಾತ್ರ ಅಭಿಷೇಕ ಪ್ರಿಯ. ರುದ್ರಪ್ರಶ್ನದ ಪಾರಾಯಣವಿಲ್ಲದೇ ಅಭಿಷೇಕ ಕಳೆಗಟ್ಟುವುದೇ? ರುದ್ರದ ಪಾರಾಯಣದೊಂದಿಗೆ ಶಿವಲಿಂಗಕ್ಕೆ ಮಾಡುವ ಅಭಿಷೇಕವನ್ನು ರುದ್ರಾಭಿಷೇಕ ಎಂದು ಕರೆಯುತ್ತಾರೆ. ಇದರಲ್ಲಿ ಹಲವು ಕ್ರಮಗಳು, ಸಂಪ್ರದಾಯಗಳು ಬೆಳೆದುಬಂದಿವೆ.

ವೇದವನ್ನು ಕ್ರಮಬದ್ಧವಾಗಿ ಅಭ್ಯಾಸ ಮಾಡಿ, ಸ್ವರ ಒಲಿಸಿಕೊಂಡು ಮಾಡುವ ಪಾರಾಯಣಕ್ಕೆ ವಿಶೇಷ ಅರ್ಥವಿದೆ. ಅದನ್ನು ಶ್ರದ್ಧೆಯಿಂದ ಕೇಳುವವರ ಮನಃಪಟಲದಲ್ಲಿ ಅದ್ಭುತ ಆವರಣವನ್ನು ಸೃಷ್ಟಿಸುವ ಸಾಮರ್ಥ್ಯ ಆ ಮಂತ್ರ-ನಾದಗಳಿಗೆ ಇವೆ. ವೈದಿಕ ಸಂಸ್ಕೃತ ಅರ್ಥವಾಗದಿದ್ದರೂ, ಮಂತ್ರೋಚ್ಚಾರಣೆಯ ನಾದದ ಲಯದಲ್ಲಿ ಋಷಿಗಳು ಕಟ್ಟಿಕೊಡುವ ಭಾವನೆಗಳು ನಮ್ಮ ಮನಸ್ಸನ್ನು ತಟ್ಟುತ್ತವೆ. ರುದ್ರಮಂತ್ರಗಳನ್ನು ಪಠಿಸಲು ಅವಕಾಶವಿಲ್ಲದವರು ಶ್ರದ್ಧೆಯಿಂದ ಆಲೈಸಿ ಶ್ರವಣ ಮಾಡಿದರೂ ಫಲವುಂಟು.

ಒಳಿತು ಮಾಡುವುದು ಮಾತ್ರವಲ್ಲ, ಒಳಿತಿನ ಸಂಕಲ್ಪವೂ ಎಂದಿಗೂ ವ್ಯರ್ಥವಾಗದು ಎಂಬುದು ಭಾರತೀಯ ತತ್ವಜ್ಞಾನ ಜಗತ್ತಿಗೆ ನೀಡಿರುವ ಭರವಸೆ. ನಾವು ಸ್ವತಃ ರುದ್ರಮಂತ್ರಗಳನ್ನು ಪಾರಾಯಣ ಮಾಡಿದರೆ, ಅಭಿಷೇಕ ಮಾಡಿದರೆ ಖಂಡಿತ ಫಲವಿದೆ. ಒಂದು ವೇಳೆ ಸ್ವತಃ ಮಾಡಲು ಆಗದಿದ್ದರೆ ಅದನ್ನು ಮಾಡುವವರಿಗೆ ನೆರವಾಗಬೇಕು, ಅದೂ ಸಾಧ್ಯವಾಗದಿದ್ದರೆ ಮನಸ್ಸಿನಲ್ಲಿಯಾದರೂ ಮಾಡಬೇಕಿತ್ತು, ಮಾಡುತ್ತೇನೆ ಎಂದುಕೊಳ್ಳಬೇಕು. ಈ ಎಲ್ಲ ಕಾರ್ಯಗಳಿಗೂ ಶುಭಫಲ ಕಟ್ಟಿಟ್ಟಬುತ್ತಿ.

ರುದ್ರಾಧ್ಯಾಯ ಪಾರಾಯಣಕ್ಕೆ ಮಂಗಲ ಉಂಟು ಮಾಡುವ ಶಕ್ತಿಯಿದೆ. ಪಾಪ ಪರಿಹರಿಸುವ, ಅಪಮೃತ್ಯು ನಿವಾರಣೆ ಮಾಡುವ, ಶುಭಫಲಗಳನ್ನು ಕೊಡುವ ಮಂತ್ರ. ಈ ವಿಚಾರದಲ್ಲಿ ಸಂದೇಹ ಸ್ವಲ್ಪವೂ ಬೇಡ. ಈ ಮಂತ್ರಗಳಲ್ಲಿ ಸಾಕ್ಷಾತ್ ಪರಬ್ರಹ್ಮನನ್ನೇ ರುದ್ರನೆಂಬ ಹೆಸರಿನಿಂದ ನಾನಾರೂಪಗಳಲ್ಲಿ ಸ್ತುತಿಸಲಾಗಿದೆ.

ಯಾರು ಈ ರುದ್ರ?

ರುದ್ ಎಂದರೆ ಅಳುವಿಕೆ. ದ್ರಾ ಎಂದರೆ ತಡೆಯುವಿಕೆ. ಮಗು ಹುಟ್ಟಿದಾಗ ಅಳುತ್ತದೆ. ಬೆಳೆಯುವ ಪ್ರತಿಹಂತದಲ್ಲಿಯೂ ಒಂದಲ್ಲ ಒಂದು ಕಾರಣಕ್ಕೆ ಅಳುತ್ತಲೇ ಇರುತ್ತದೆ. ಬೆಳೆದವರು ಎಂದುಕೊಳ್ಳುವ ನಾನು-ನೀವೆಲ್ಲರೂ ಇಂದಿಗೂ ಅತೃಪ್ತಿಯಿಂದ ಅಳುತ್ತಲೇ ಇದ್ದೇವೆ. ‘ಇಷ್ಟು ದೊರಕಿದರೆ ಮತ್ತಷ್ಟು ಬೇಕೆಂಬ ಆಸೆ, ಕಷ್ಟ ಬೇಡೆಂಬ ಆಸೆ, ಕಡುಸುಖವ ಕಾಂಬಾಸೆ, ನಷ್ಟ ಜೀವನದಾಸೆ, ಪುರಂದರವಿಠಲ’ ದೇವರ ಕೃಪಾದೃಷ್ಟಿ ಬೀಳದೆ ನಮ್ಮ ಅಳು ಎಂದಿಗೂ ನಿಲ್ಲುವುದೇ ಇಲ್ಲ. ಆದರೆ ಒಮ್ಮೆ ಅವನ ಕೃಪಾದೃಷ್ಟಿ ಬಿತ್ತೋ, ‘ಆನಂದ ಆನಂದವೇ, ಪರಮಾನಂದ ಆನಂದವೇ’. 

ದೇವರ ಕೃಪಾದೃಷ್ಟಿ ನಮ್ಮ ಮೇಲೆ ಬಿದ್ದಾಗ ಏನಾಗುತ್ತೆ? ಉತ್ತರ ತೀರಾ ಸರಳ. ಮಾಯೆಯ ಪರದೆ ಕಳಚಿ ಜ್ಞಾನದ ಕಣ್ಣು ತೆರೆದುಕೊಳ್ಳುತ್ತೆ. ದೇವರು ಎಲ್ಲೆಲ್ಲೂ ವ್ಯಾಪಿಸಿದ್ದಾನೆ ಎಂಬ ಬಾಯ್ಮಾತಿನ ಮಾತು ಆಗ ನಿಜವಾಗಿಯೂ ದರ್ಶನ ಮಟ್ಟಕ್ಕೇರಿ ಅರ್ಥವಾಗುತ್ತದೆ. ಅದು ಬೇಕು ಇದು ಬೇಕು ಇನ್ನೊಂದೂ ಬೇಕು ಎನ್ನುತ್ತಾ ಭೌತಿಕ ಜಗತ್ತಿನಲ್ಲಿ ಕ್ಷಣಿಕ ಸುಖಕ್ಕೆ ಹಾತೊರೆಯುವ ಮನಸ್ಸು ದೇವರಿದ್ದಾನೆ, ದೇವರು ಸಾಕು, ದೇವರಷ್ಟೇ ಸಾಕು ಎನ್ನುತ್ತಾ ನಿಜವಾದ ಸುಖ ಅನುಭವಿಸುತ್ತದೆ. ಒಮ್ಮೆ ಪರಮಾತ್ಮನ ದರ್ಶನದ ಅನುಭವ ಪಡೆದವರಿಗೆ ಭೌತಿಕ ಸುಖ ನಗಣ್ಯ. ಅದು ವಿಷ್ಣುವಿನ ಶಂಖಸ್ಪರ್ಶವಾದಾಗ ಧ್ರುವ ಅನುಭವಿಸಿದ ಸುಖ, ನರಸಿಂಹನ ದರ್ಶನದಿಂದ ಪ್ರಹ್ಲಾದ ಅನುಭವಿಸಿದ ಸುಖ. 

ಸಕಾಮಿಕವಾಗಿ ಪಾರಾಯಣ, ಹೋಮಾದಿಗಳನ್ನು ಮಾಡುವುದು ತಪ್ಪಲ್ಲ. ಆದರೆ ಅದನ್ನೊಂದು ವ್ಯಾಪಾರ ಮಾಡಿಕೊಂಡವರಿಗೆ ರುದ್ರಮಂತ್ರಗಳ ನಿಜವಾದ ಫಲ ಮಾತ್ರ ಎಂದಿಗೂ ಸಿಗುವುದಿಲ್ಲ. ನಾವು ಬೇಡಿ ಕೈಮುಗಿದರೆ ದೇವರು ಬೇಡಿದ್ದನ್ನು ಮಾತ್ರ ಕೊಡುತ್ತಾನೆ. ಈ ಬದುಕು ನಿನ್ನ ಭಿಕ್ಷೆ. ನನಗೇನೂ ಬೇಡ, ನೀನಷ್ಟೇ ಸಾಕು ಎಂದು ಕೈಮುಗಿದರೆ ಏನು ಕೇಳಬೇಕೆಂಬ ಬುದ್ಧಿಯೂ ಇಲ್ಲದ ನಮ್ಮ ಎಲ್ಲ ಆಗುಹೋಗುಗಳನ್ನು ಅವನೇ ನೋಡಿಕೊಳ್ಳುತ್ತಾನೆ.

ರುದ್ರಪ್ರಶ್ನದ ಮಂತ್ರಗಳು ಮುಖ್ಯವಾಗಿ ಬಳಕೆಯಾಗುವುದು ಶಿವಪೂಜೆಗೆ. ರುದ್ರ ಮತ್ತು ಶಿವ ಎಂಬ ಎರಡು ವೈರುಧ್ಯಗಳನ್ನು ಏಕತ್ರ ಬೆಸೆಯುವ ವೇದಮಂತ್ರವಿದು. ರುದ್ರ ಎಂದರೆ ಕೋಪವುಳ್ಳವನು ಎಂಬ ಅರ್ಥವೂ ಇದೆ. ಅವನ ಸಿಟ್ಟು ಯಾರ ಬಗ್ಗೆ? ಅನ್ಯಾಯ-ಅಕ್ರಮ ಎಸಗುವ ಪಾಪಿಗಳ ಬಗ್ಗೆ. ಅಂಥವನು ನಮ್ಮ ಬಗ್ಗೆ ಶಿವನಾಗಿ ಅಂದರೆ ಮಂಗಳಪ್ರದನಾಗಿ ವರ್ತಿಸಬೇಕೆಂದರೆ ನಾವೇನು ಮಾಡಬೇಕು? ‘ಸ್ವೋಚಿತ ಕರ್ಮಗಳನ್ನು ಆಚರಿಸಬೇಕು’. ನಮ್ಮನಮ್ಮ ಕರ್ತವ್ಯಗಳನ್ನು ಅತ್ಯಂತ ನಿಷ್ಠೆಯಿಂದ ನಿರ್ವಹಿಸಬೇಕು. ಮನೆಯಲ್ಲಾಗಲಿ, ಕೆಲಸ ಮಾಡುವ ಸ್ಥಳದಲ್ಲಾಗಲಿ ಪ್ರಾಮಾಣಿಕವಾಗಿ ಬದುಕಬೇಕು.

ರುದ್ರ ಶಬ್ದಕ್ಕೆ ಇನ್ನೂ ಕೆಲವು ಅರ್ಥಗಳಿವೆ

  • ಸಂಸಾರವೆಂಬ ಸುಖದುಃಖಭೋಗರೂಪವಾದ ಕರ್ಮಫಲಗಳ ಸಂತಾನವನ್ನು ನಾಶಗೊಳಿಸುವನಾದ್ದರಿಂದ ರುದ್ರನು ಸಂಸಾರ ದುಃಖನಾಶಕ. 
  • ಶಬ್ದರೂಪವಾದ ವೇದರಾಶಿಯನ್ನು ಜಗತ್ತಿಗೆ ಅನುಗ್ರಹಿಸಿದವನು
  • ರೋಧಕ (ಪಾಪಿಗಳನ್ನು ಬಂಧಿಸುವವನು), ಬಂಧಕ (ಅನಧಿಕಾರಿಗಳನ್ನು ಬಂಧಿಸುವವನು), ಮೋಹಕ (ಶಾಶ್ವತವಾದ ಮೋಕ್ಷ ಸುಖ ಪಡೆಯಲು ಸಾಧನೆಯ ದಾರಿ ತೋರುವವನು) ರುದ್ರನೇ ಆಗಿದ್ದಾನೆ.
  • ವೇದರೂಪವಾದ ವಾಕ್ಕಿನಿಂದ ಅಂದರೆ ಮಾತಿನಿಂದ ಧರ್ಮಾಧರ್ಮಗಳನ್ನು ನಿಯಮನ ಮಾಡುತ್ತಾ ಅವುಗಳಿಗೆ ತಕ್ಕಂತೆ ಫಲಗಳನ್ನು ಕೊಡುವವನು ರುದ್ರನೇ ಆಗಿದ್ದಾನೆ.

‘ದೇವರು ಜಗತ್ತಿನ ಎಲ್ಲೆಡೆ ವ್ಯಾಪಿಸಿದ್ದಾನೆ, ಎಲ್ಲರಲ್ಲಿಯೂ ಇದ್ದಾನೆ, ಎಲ್ಲವೂ ಆಗಿದ್ದಾನೆ…’ ಎನ್ನುವುದು ವೇದಾಂತದ ಪ್ರತಿಪಾದನೆ. ‘ಎಲ್ಲೆಡೆ’, ‘ಎಲ್ಲರಲ್ಲಿ’ ಮತ್ತು ‘ಎಲ್ಲವೂ’ ಎನ್ನುವ ಈ ಮೂರು ಪರಿಕಲ್ಪನೆಗಳನ್ನು ಆಳವಾಗಿ ಪರಿಶೋಧಿಸುವ ಪ್ರಯತ್ನ ರುದ್ರಪ್ರಶ್ನದಲ್ಲಿದೆ. ರುದ್ರ ಎನ್ನುವ ಶಬ್ದಕ್ಕೆ ಜಗತ್ತಿನ ದುಃಖವನ್ನು ಹೊಡೆದೋಡಿಸುವವ (ರು–ದುಃಖ, ದ್ರಾ–ತಡೆಯುವವ) ಎನ್ನುವ ಅರ್ಥವಿದೆ. ಇಂಥವನನ್ನು ‘ಶಿವನಾಗು’ (ಮಂಗಳನಾಗು) ಎಂದು ಪ್ರಾರ್ಥಿಸುತ್ತದೆ ರುದ್ರಸೂಕ್ತ.

ರುದ್ರನನ್ನು ಶಿವನಾಗು ಎಂದು ಪ್ರಾರ್ಥಿಸಲು ಇಷ್ಟುದೊಡ್ಡ ಮಂತ್ರಭಾಗವನ್ನೇ ದ್ರಷ್ಟಾರ ಋಷಿ ಜಗತ್ತಿಗೆ ಅನುಗ್ರಹಿಸಿದ್ದಾರೆ. 

ಹಾಗಿದ್ದರೆ ಆ ಶಿವ ಯಾರು? ಅವನು ಹೇಗಿದ್ದಾನೆ?

ಶಿವ ಎಂದರೆ 16 ಶಿವಗುಣಗಳನ್ನು ಉಳ್ಳವನು. ಯಾವುದು ಆ 16 ಗುಣಗಳು? ಸರ್ವಜ್ಞತ್ವ, ತೃಪ್ತಿ, ಅನಾದಿಜ್ಞಾನ, ಸ್ವಾತಂತ್ರ್ಯ, ಅಲುಪ್ತಶಕ್ತಿ, ಅನಂತಶಕ್ತಿ – ಈ ಆರೂ ಷಡಂಗಗಳು. ಜ್ಞಾನ, ವೈರಾಗ್ಯ, ಐಶ್ವರ್ಯ, ತಪಸ್ಸು, ಸತ್ಯ, ಕ್ಷಮೆ, ಧೃತಿ, ಸೃಷ್ಟತ್ವ, ಆತ್ಮಜ್ಞಾನ, ಅಧಿಷ್ಠಾತೃತ್ವ – ಈ ಹತ್ತು ಅವ್ಯಯಗಳು.

ಶಿವ ಎಂದರೆ ಮಲರಹಿತ – ಅತಿಶುದ್ಧ: ಆಣವ (ಅವಿದ್ಯೆ), ಕಾರ್ಮಣ (ಕರ್ಮವಾಸನೆ), ಮಾಯೇಯ (ಆವರಣ) ಇಲ್ಲದವನು

ಈತನನ್ನೇ ಜಗತ್ತೆಲ್ಲವೂ ಆಧಾರವಾಗಿ ಇರಿಸಿಕೊಂಡಿದೆ. ಆದ್ದರಿಂದ ಈತ ಶಿವ

ಸದಾ ಲೋಕಹಿತವನ್ನು ಬಯಸುವವನು ಶಿವ

ಶಿವ – ಎಂದರೆ ಸಕಲರಿಗೂ ಸದಾ ಮಂಗಳವನ್ನು ಉಂಟು ಮಾಡುವವನು

ಶಿವ ಶಬ್ದದ ಪರ್ಯಾಯಗಳು- ಶ್ರೇಯಸಮ್, ಶಿವಮ್, ಭದ್ರಮ್, ಕಲ್ಯಾಣಮ್, ಮಂಗಳಮ್, ಶುಭಮ್

ಶುಕಮುನಿಗಳ ರೂಪದಿಂದ ಭೂಮಿಗೆ ಭಾಗವತದ ಮೂಲಕ ಭಕ್ತಿಯನ್ನು ಪರಚಿಯಿಸಿದವನು ಈಶ್ವರ. ಶಿವ ಎಂದರೆ ಆರ್ದ್ರ, ಅಂದರೆ ಒಂದು ರೀತಿಯ ಜೌಗು ಭೂಮಿ. ಭಾವುಕ ಮನಸ್ಸು, ಸುಲಭವಾಗಿ ಕರಗುವ ಮನಸ್ಸು. ಇಂದಿಗೂ ಯಾವುದಾದರೂ ಮನಕಲಕುವಂಥದ್ದ ನಡೆದಾಗ ಹೃದಯ ಆರ್ದ್ರವಾಯಿತು ಎನ್ನುತ್ತೇವೆ. ಹೀಗಿ ಆರ್ದ್ರವಾಗು ಮನಸ್ಸಿನವರಿಗೆ ಮಾತ್ರ ಅಧ್ಯಾತ್ಮ ಅರ್ಥವಾಗುತ್ತೆ. 

ಶಿವ ಎಂದರೆ ಅರ್ಧನಾರೀಶ್ವರ. ಹೆಣ್ಣಿನ ಮನಸ್ಸು, ಮಾಗುವಿಕೆ, ಶರಣಾಗತಿ ಬಾರದೆ ಗಂಡಿನ ಅಹಂ ಕಳೆಯದು. ನಾನೇ ಸರ್ವಶಕ್ತ, ನಾನೇ ಸ್ವತಂತ್ರ್ಯ ಎಂಬ ಅಹಂ ಕಳೆಯದೆ ದೇವರು ಒಲಿಯುವುದಿಲ್ಲ. ನೀನು ದೇವರನ್ನು ನೋಡಬೇಕು ಎಂಬ ಆಸೆಯಿದ್ದರೆ ನಿನ್ನ ಮನಸ್ಸು ಆರ್ದ್ರವಾಗಬೇಕು, ಮೃದುವಾಗಬೇಕು ಎಂದು ತನ್ನ ರೂಪದಿಂದಲೇ ಸಾರಿ ಹೇಳುತ್ತಿದ್ದಾನೆ ಧರ್ಮದ ಪ್ರತಿರೂಪವಾದ ನಂದಿಯ ಮೇಲೆ ಕುಳಿತ ಪರಮಶಿವ.

ರುದ್ರಾಧ್ಯಾಯದ ಪರಿಚಯ

ರುದ್ರಾಧ್ಯಾಯವು ತೈತ್ತರೀಯ ಕೃಷ್ಣ ಯಜು ಸಂಹಿತೆಯ ನಾಲ್ಕನೇ ಕಾಂಡದ 5ನೇ ಪ್ರಪಾಠ. ಅದೇ ಕಾಂಡದ 7ನೇ ಪ್ರಪಾಠವಾದ ಚಮಕಪ್ರಶ್ನವನ್ನು ರುದ್ರದ ಜೊತೆಗೇ ಪಠಿಸುವುದು ವಾಡಿಕೆ. ರುದ್ರಾಧ್ಯಾಯದಲ್ಲಿ 11 ಅನುವಾಕಗಳಿವೆ (ಪ್ರಘಟ್ಟ–ಪ್ಯಾರಾ). ‘ನಮಃ’ ಶಬ್ದವು ನೂರಾರು ಬಾರಿ ಪುನರುಕ್ತವಾಗುವುದರಿಂದ ಇದನ್ನು ‘ನಮಕ’ ಎಂದೂ ಕರೆಯುತ್ತಾರೆ. ಚಮಕಪ್ರಶ್ನದಲ್ಲಿ ಚ ಮತ್ತು ಮೇ ಎಂಬ ಶಬ್ದಗಳು ಬಹಳ ಸಲ ಪುನರುಕ್ತಿಯಾಗಿವೆ. ಇದೇ ಕಾರಣಕ್ಕೆ ‘ಚಮೇ’ ಹೆಸರು ರೂಢಿಗೆ ಬಂದಿದೆ.

ರುದ್ರ ಪಾರಾಯಣ ಎಂದರೆ ನಮಕ ಮತ್ತು ಚಮಕಗಳೆರಡೂ ಸೇರುತ್ತವೆ. ಇಂದು ನಾವು ನಮಕದ ಅರ್ಥಾನುಸಂಧಾನ ಪ್ರಯತ್ನವನ್ನು ಮಾತ್ರ ಮಾಡೋಣ.

ರುದ್ರಾಧ್ಯಾಯದ 11 ಅನುವಾಕಗಳನ್ನು ನಾಲ್ಕು ಭಾಗಗಳಾಗಿ ವಿಂಗಡಿಸುತ್ತಾರೆ. ಮೊದಲನೆಯದರಲ್ಲಿ ಭಗವಂತನನ್ನು ಪ್ರಸನ್ನನಾಗು ಎಂದು ಋಷಿಗಳು ಪ್ರಾರ್ಥಿಸುತ್ತಾರೆ. ಎರಡರಿಂದ ಒಂಬತ್ತನೇ ಅನುವಾಕದವರೆಗೆ ಭಗವಂತನ ಸರ್ವೇಶ್ವರತ್ವ, ಸರ್ವಾಕತ್ವ, ಸರ್ವಾಂತರ್ಯಾಮತ್ವಗಳನ್ನು ತಿಳಿಸಲಾಗಿದೆ. ಹತ್ತನೆಯದರಲ್ಲಿ ಭಗವಂತನ ಪ್ರಾರ್ಥನೆಯಿದೆ. ಹನ್ನೊಂದನೆಯದರಲ್ಲಿ ರುದ್ರರ ಸ್ತುತಿಯಿದೆ.

ಬ್ರಹ್ಮಾಂಡ ವ್ಯಾಪ್ತ ದೇಹ

ರುದ್ರಾಧ್ಯಾಯಕ್ಕೆ ನಮಕ ಎಂಬ ಮತ್ತೊಂದು ಹೆಸರು ಇದೆ. ಇಲ್ಲಿ ‘ನಮ’ ಶಬ್ದವು ನೂರಾರು ಸಲ ಪುನರುಕ್ತವಾಗುತ್ತದೆ. ನಮಃ ಎಂದರೆ ನಮಸ್ಕಾರ ಎಂದು ಅರ್ಥ. ನಮಗಿಂತ ದೊಡ್ಡವರಿಗೆ ತಾನೆ ನಾವು ನಮಸ್ಕಾರ ಮಾಡುವುದು. ಜೀವನಿಗಿಂತ ಪರಮಾತ್ಮ ದೊಡ್ಡವನು. ಹೀಗಾಗಿ ಅವನಿಗೆ ನಾವು ಮನಃಪೂರ್ವಕ ನಮಸ್ಕಾರ ಮಾಡುತ್ತಿದ್ದೇವೆ ಎಂದು ಋಷಿಗಳು ಘೋಷಿಸುತ್ತಾರೆ. ನಾನು ಮತ್ತು ನನ್ನದು ಎಂಬ ಅಹಂಕಾರಗಳನ್ನು ತ್ಯಾಗ ಮಾಡಿ, ನನಗಿಂತ ದೊಡ್ಡದಾದ ಮತ್ತೊಂದು ಶಕ್ತಿಯಿದೆ ಎಂಬ ಭಾವ ತೀವ್ರತೆಯೇ ಶಬ್ದಗಳಾಗಿ ಹರಿದ ಮಂತ್ರ ರುದ್ರಪ್ರಶ್ನ. ಹೀಗಾಗಿಯೇ ಇದು ನಮಸ್ಕಾರದ ನಮಕ.

ಸುಮ್ಮನೆ ಅವರು ದೊಡ್ಡವರು ಎಂದರೆ ಭಕ್ತಿಯೋ, ಶರಣಾಗತಿಯ ಭಾವನೆಯೋ ಹುಟ್ಟುವುದಿಲ್ಲ. ಹೀಗಾಗಿಯೇ ಅವರೆಷ್ಟು ದೊಡ್ಡವರು, ಅವರಿಗಿರುವ ಶಕ್ತಿಯ ಸ್ವರೂಪ ಎಂಥದ್ದು ಎಂದು ವಿವರಿಸಲು ಋಷಿಗಳು ಮುಂದಾಗುತ್ತಾರೆ.

ತನ್ನೆದುರು ಉದ್ದಾನುದ್ದ ನಿಂತು, ಬಲಿಷ್ಠ ತೋಳುಗಳಲ್ಲಿ ಬಿಲ್ಲುಬಾಣ ಧರಿಸಿದವನಿಗೆ ಕೈಮುಗಿದ ಭಕ್ತ ‘ಓಂ ನಮೋ ಭಗವತೇ ರುದ್ರಾಯ | ನಮಸ್ತೇ ರುದ್ರ ಮನ್ಯವ ಉತೋ ತ ಇಷವೇ ನಮಃ | ನಮಸ್ತೇ ಅಸ್ತು ಧನ್ವನೇ ಬಾಹುಭ್ಯಾಮುತ ತೇ ನಮಃ’ (ಎಲೈ ರುದ್ರನೇ ನಿನಗೆ ಮತ್ತು ನಿನ್ನ ಕೋಪಕ್ಕೆ ನಮಸ್ಕಾರ, ನಿನ್ನ ಬಾಣಗಳಿಗೆ, ಬಿಲ್ಲಿಗೆ ಮತ್ತು ತೋಳುಗಳಿಗೆ ನಮಸ್ಕಾರ) ಎಂದು ಬೇಡುವುದರೊಂದಿಗೆ ರುದ್ರಪ್ರಶ್ನವು ಆರಂಭವಾಗುತ್ತದೆ. ರುದ್ರದ ಮೊದಲ ಪದ ಓಂ ಆದರೆ ಎರಡನೇ ಪದವೇ ನಮಸ್ಕಾರ ಎಂದು. ಅಹಂಕಾರ ತ್ಯಾಗದ ಆಶಯವನ್ನು ಇಷ್ಟು ಸೊಗಸಾಗಿ ಸಾರಿ ಹೇಳಿದ್ದಾರೆ ನೋಡಿ. ಇದು ರು‌ದ್ರದ ಮೊದಲ ಮಂತ್ರವೂ ಹೌದು. ಅಧ್ಯಾತ್ಮದ ಹಾದಿಯಲ್ಲಿ ಮುನ್ನಡೆಯಲು ಬಯಸುವವರಿಗೆ ಮೊದಲ ಮೆಟ್ಟಿಲೂ ಹೌದು.

ರುದ್ರ ಸೂಕ್ತ ಪಾರಾಯಣಕ್ಕೆ ಮೊದಲು ಪಠಿಸುವ ಪ್ರಾರ್ಥನಾ ಶ್ಲೋಕಗಳು ರುದ್ರವು ಪ್ರತಿಪಾದಿಸುವ ದೇವತೆಗೆ ರೂಪವೊಂದನ್ನು ಕಟ್ಟಿಕೊಡುತ್ತದೆ. ಮೂಲದಲ್ಲಿ ಒಬ್ಬನೇ ಆದ ರುದ್ರನು ತನ್ನ ಮಹಿಮೆಗಳನ್ನು ನಾನಾರೂಪಗಳಿಂದ ಪ್ರಕಟಿಸಿಕೊಂಡು ಸಾವಿರಾರು ರೂಪಗಳನ್ನು ತಾಳುತ್ತಾನೆ.

ಎಲ್ಲೆಡೆ, ಎಲ್ಲರಲ್ಲಿ ಮತ್ತು ಎಲ್ಲವೂ ಆಗಿಬಿಡುತ್ತಾನೆ. ಆ ರೂಪ ಹೇಗಿದೆ 

ಆಪಾತಾಳನ-ಭಃಸ್ಥಲಾಂತ ಭುವನ ಬ್ರಹ್ಮಾಂಡ ಮಾವಿಸ್ ಫುರತ್

ಜ್ಯೋತಿಃ(ಸ್) ಸ್ಫಾಟಿಕ ಲಿಂಗ ಮೌಲಿ ವಿಲಸತ್ ಪೂರ್ಣೇಂದು-ವಾಂತಾಮೃತೈಃ |

ಅಸ್ತೋ ಕಾಪ್ಲುತ ಮೇಕ ಮೀಶ ಮನಿಶಂ ರುದ್ರಾನು ವಾಕಾಂಜಪನ್

ಧ್ಯಾಯೇ ದೀಪ್ಸಿತ ಸಿದ್ಧಯೇ ದ್ರುವ ಪದಂ ವಿಪ್ರೋ ಭಿಷಿಞ್(ಜ್)-ಜೇಚ್ಛಿವಂ ||

ಬ್ರಹ್ಮಾಂಡ(ವ್) ವ್ಯಾಪ್ತ ದೇಹಾ ಭಸಿತ ಹಿಮರುಚಾ ಭಾಸಮಾನಾ ಭುಜಂಗೈಃ

ಕಂಠೇ ಕಾಲಾಃ ಕಪರ್ದಾಃ ಕಲಿತ ಶಶಿಕಲಾಶ್ ಚಂಡ ಕೋದಂಡ ಹಸ್ತಾಃ |

ತ್ರ್ಯಕ್ಷಾ ರುದ್ರಾಕ್ಷ ಮಾಲಾಃ ಪ್ರಕಟಿತ ವಿಭವಾಃ ಶಾಮ್ಭವಾ ಮೂರ್ತಿ ಭೇದಾಃ

ರುದ್ರಾಃ ಶ್ರೀ-ರುದ್ರ ಸೂಕ್ತ(ಪ್) ಪ್ರಕಟಿತ ವಿಭವಾ ನಃ(ಪ್) ಪ್ರಯಚ್ಛಂತು ಸೌಖ್ಯಂ ||

‘ಬ್ರಹ್ಮಾಂಡವನ್ನೆಲ್ಲಾ ವ್ಯಾಪಿಸಿಕೊಂಡ ಶರೀರವುಳ್ಳವರು, ಹಿಮದಂತೆ ಬಿಳುಪಾದ ವಿಭೂತಿಯಿಂದಲೂ ಹಾವುಗಳಿಂದಲೂ ಅಲಂಕೃತರಾದವರು, ಕಂಠದಲ್ಲಿ ಕಪ್ಪುಳ್ಳವರೂ, ಜಟಾಜೂಟವನ್ನು ಧರಿಸಿದವರು ಮತ್ತು ಮೌಳಿಯಲ್ಲಿ ಚಂದ್ರಕಲೆಯನ್ನುಳ್ಳವರು, ತೀಕ್ಷ್ಣವಾದ ಬಿಲ್ಲುಗಳನ್ನು ಹಿಡಿದ ಕೈಗಳುಳ್ಳವರು, ಮುಕ್ಕಣ್ಣರು, ರುದ್ರಾಕ್ಷಿಯ ಆಭರಣಗಳುಳ್ಳವರು, ನಮಸ್ಕಾರ ಮಾಡಿದವರನ್ನು ಭಯದಿಂದ ಕಾಪಾಡುವವರು…’ ಎಂಬುದು ರುದ್ರ ಪಾರಾಯಣ ಮಾಡುವವರು ಚಿಂತಿಸಬೇಕಾದ ಭಗವಂತನ ರೂಪ. 

ಜಗತ್ತಿನ ಎಲ್ಲೆಡೆಯೂ ರುದ್ರನನ್ನು ಗುರುತಿಸುವ ಭಾವ ನಮ್ಮನ್ನು ಆವರಿಸಿಕೊಳ್ಳಬೇಕು ಎನ್ನುವುದನ್ನು ಇದು ಒತ್ತಿ ಹೇಳುತ್ತದೆ.

ಈ ಮಂತ್ರದಲ್ಲಿ ಮತ್ತೊಂದು ಸೂಕ್ಷ್ಮ ಸಂದೇಶವೂ ಇದೆ. ಶಿವನು ಚಂದ್ರನನ್ನು ತಲೆಯ ಮೇಲೆ ಹೊತ್ತಿರುವಂತೆ ನಾವು ಮತ್ತೊಬ್ಬರ ಒಳ್ಳೇ ಗುಣಗಳನ್ನು ಎತ್ತಿ ಆಡಬೇಕು, ಶಿವನು ವಿಷವನ್ನು ಕಂಠದಲ್ಲಿ ತಡೆದಿಟ್ಟುಕೊಂಡಿರುವಂತೆ ಮತ್ತೊಬ್ಬರ ಅವಗುಣಗಳನ್ನು ಗೌಪ್ಯವಾಗಿರಿಸಬೇಕು. ಶಿವನಿಗಿರುವ ಹಲವು ಕಣ್ಣುಗಳು ಅವನ ಪರಿಶೀಲನಾ ಸಾಮರ್ಥ್ಯವನ್ನು ಬಿಂಬಿಸುತ್ತದೆ. ಪ್ರತ್ಯಕ್ಷ ಕಂಡೂ ಪ್ರಮಾಣಿಸಿ ನೋಡಿ ಮನವರಿಕೆ ಮಾಡಿಕೊಳ್ಳುವುದು ಅವನ ಸ್ವಭಾವ. ಅದೇ ರೀತಿ ನಾವು ಸಹ ಸತ್ಯಕ್ಕಿರುವ ಹಲವು ಮುಖಗಳನ್ನು ಪರಿಶೀಲಿಸಿ, ಯಥೋಚಿತ ಅರಿಯಬೇಕು ಎನ್ನುವುದನ್ನು ಸಹ ಈ ರೂಪ ಸೂಚ್ಯವಾಗಿ ಬಿಂಬಿಸುತ್ತದೆ.

ರುದ್ರ ಅಥವಾ ಶಿವನ ಆಯುಧ ಎಂದು ತ್ರಿಶೂಲದ ಬದಲು ಇಲ್ಲಿ ಬಿಲ್ಲುಬಾಣವನ್ನು ವರ್ಣಿಸಿರುವುದು ಈ ಶ್ಲೋಕದ ಮತ್ತೊಂದು ವಿಶೇಷ.

ಪ್ರಕೃತಿ–ಪರಮೇಶ್ವರ

ಬಿಂಬೋಪಾಸನೆ ಮತ್ತು ವ್ಯಾಪ್ತೋಪಾಸನೆ ಎನ್ನುವುದು ಉಪಾಸನಾ ಕ್ರಮ ಅಂದರೆ ದೇವರಪೂಜೆಯ ಪದ್ಧತಿಯಲ್ಲಿರುವ ಎರಡು ಮುಖ್ಯ ವಿಧಗಳು. ಒಂದು ವಿಗ್ರಹದಲ್ಲಿ ದೇವರನ್ನು ಕಲ್ಪಿಸಿಕೊಳ್ಳುವುದು ಒಂದು ಕ್ರಮವಾದರೆ, ಎಲ್ಲೆಲ್ಲೂ-ಎಲ್ಲರಲ್ಲೂ ದೇವರನ್ನು ಕಾಣುವುದು ಮತ್ತೊಂದು ಕ್ರಮ. ಕೆಲ ಸಾಧಕರು ಎರಡನ್ನೂ ಸಾಧಿಸುತ್ತಾರೆ. ಮೊದಲನೆಯದು ಅಂದರೆ ಬಿಂಬೋಪಾಸನೆಯಿಂದ ನಾವು ವ್ಯಾಪ್ತೋಪಾಸನೆಯ ಮಟ್ಟಕ್ಕೆ ಏರಬೇಕು ಎಂದು ನಮ್ಮ ಅನುಭಾವಿ ಹಿರಿಯರು ಕಿವಿಮಾತು ಹೇಳಿದ್ದಾರೆ. 

ಎಲ್ಲವನ್ನೂ ಆವರಿಸಿಕೊಂಡಿರುವ ಮತ್ತು ಎಲ್ಲವೂ ಆಗಿರುವ ದೇವನ ವ್ಯಾಪ್ತೋಪಾಸನೆಯ ಅದ್ಭುತ ಸಾಧ್ಯತೆಯನ್ನು ರುದ್ರಸೂಕ್ತ ಕಟ್ಟಿಕೊಡುತ್ತದೆ. ಶಿವನು ನಮ್ಮ ಮಾತಿನಲ್ಲಿದ್ದಾನೆ. ಮಾತಿನ ಮೂಲಕ ಹೊರಬರುವ ಶಬ್ದವು, ಅದರ ಅರ್ಥವೂ, ಮಾತನಾಡಬೇಕು ಎಂದು ಮನದಿಂದ ಹೊಮ್ಮುವ ಇಚ್ಛೆಯೂ ಅವನೇ ಆಗಿದ್ದಾನೆ.

ಇಂಥ ರುದ್ರನ ದರ್ಶನ ಪಡೆದ ದ್ರಷ್ಟಾರರು ಅಂದರೆ ವೇದ ಕಾಲದ ಋಷಿಗಳು ತಾವು ಕಂಡ ರೂಪವನ್ನು ಸೂರ್ಯನಿಗೆ ಹೋಲಿಸುತ್ತಾನೆ. 

ಅಸೌಯಸ್ ತಾಮ್ರೋ ಅರುಣ ಉತ ಬಭ್ರುಃ(ಸ್) ಸುಮಂಗಲಃ |

ಯೇ ಚೇಮಾಗ್ಂ ರುದ್ರಾ ಅಭಿತೋ ದಿಕ್ಷು ಶ್ರಿತಾಃ ಸಹಸ್ರಶೋವೈ ಷಾಗ್ ಹೇಡ ಈಮಹೇ

ಎಷ್ಟಾದರೂ ಸೂರ್ಯ ಎಂದರೆ ಜಗತ್ತಿಗೆ ಸಾಕ್ಷಿದೇವತೆ ಅಲ್ಲವೇ? ಉಚ್ಚ–ನೀಚ, ಬಡವ–ಶ್ರೀಮಂತನೆಂಬ ಭೇದವಿಲ್ಲದೆ ಎಲ್ಲರಿಗೂ ಸುಲಭವಾಗಿ ದಕ್ಕುವ, ದರ್ಶನಕೊಡುವ ದೇವತೆ ಸೂರ್ಯ. ಮತ್ತು ಸೂರ್ಯನು ಇಲ್ಲ ಎಂದು ಯಾರೂ ಹೇಳಲಾರರು. ಹೀಗೆ ದೇವರು ಎಂಬ ಶಕ್ತಿಯೂ ಸದಾ ನಮ್ಮನ್ನು ನೋಡುತ್ತಿರುತ್ತದೆ. ಕಾಪಾಡುತ್ತಿರುತ್ತದೆ. ರುದ್ರನೆಂಬ ದೇವನೂ ಹೀಗೆಯೇ ಎಲ್ಲರಿಗೂ ಸುಲಭ ಸಾಧ್ಯ. ಭಕ್ತಿಯನ್ನು ಹೊರತುಪಡಿಸಿ ಬೇರೆ ಮಾನದಂಡದಿಂದಲೂ ಅವನು ಜೀವರನ್ನು ಅಳೆಯುವುದಿಲ್ಲ. ಜಗತ್ತಿನ ತಂದೆಯೂ–ತಾಯಿಯೂ ಆಗಿರುವವನಿಗೆ ಮಕ್ಕಳಲ್ಲಿ ಭೇದವೇ?

ರುದ್ರನನ್ನು ಈ ಹಿಂದೆ ಕಂಡವರು, ಈಗ ಕಾಣುತ್ತಿರುವವರು ಯಾರು ಎಂಬ ಮತ್ತೊಂದು ಜಿಜ್ಞಾಸೆಯನ್ನೂ ಋಷಿಗಳು ಮಾಡುತ್ತಾರೆ.

ಅಸೌಯೋ ವಸರ್ಪತಿ ನೀಲಗ್ರೀವೋ ವಿಲೋಹಿತಃ |

ಉತೈನಂ ಗೋಪಾ ಅದೃಶನ್-ಅದೃಶನ್ನುದ ಹಾರ್ಯಃ |

ಉತೈನಂ ವಿಶ್ವಾ ಭೂತಾನಿ ಸದೃಷ್ಟೋ ಮೃಡಯಾತಿನಃ || ೧.೮||

ಯಾವ ನೀಲಗ್ರೀವನೂ, ವಿಶೇಷವಾಗಿ ಕೆಂಪಾಗಿರುವವನೂ ಆದ ಈ ಸಂಚರಿಸುವ ಆದಿತ್ಯ ರೂಪನಾದ ರುದ್ರನನ್ನು ದನಕಾಯುವವರೂ, ನೀರು ತರುವವರು ನೋಡಿರುತ್ತಾರೆ. ಗೋವು, ಎಮ್ಮೆಯಂಥ ಪ್ರಾಣಿಗಳು ಕಂಡಿವೆ. ಎಲ್ಲರಿಗೂ ಕಾಣಿಸುವ ಆತನು ತನ್ನನ್ನು ಧ್ಯಾನಿಸುವವರಿಗೆ ಸುಖ ಕೊಡುತ್ತಾನೆ ಎನ್ನುತ್ತದೆ ಈ ಮಂತ್ರ.

ದೇವರನ್ನು ನೋಡಬೇಕು ಎಂಬ ಆಸೆಯಿದ್ದರೆ ಮೊದಲು ಪಾಂಡಿತ್ಯ ಅಹಂಕಾರ ಕಳೆದುಕೊಂಡು ವಿನಯಶೀಲತೆ ಬೆಳೆಸಿಕೊಳ್ಳಬೇಕು ಎನ್ನುವುದು ಈ ಮಂತ್ರದ ಮುಖ್ಯ ಅರ್ಥ. ಸದಾ ಕಾಲವೂ ನಿನ್ನ ಪಾಲಿಗೆ ಒದಗಿದ ವಿಹಿತ, ಸ್ವೋಚಿತ ಕರ್ಮ ಆಚರಿಸು ಎನ್ನುವುದನ್ನು ದನಕಾಯುವವರ ಉದಾಹರಣೆಯೊಂದಿಗೆ ಹೇಳಿದ್ದಾರೆ. ಹೊತ್ತಿಗೆ ಹಸುವನ್ನು ಮೇಯಲು ಬಿಡಬೇಕು, ಹಾಲು ಕರೆಯಬೇಕು. ಕಾಲಧರ್ಮ ತಪ್ಪುವಂತಿಲ್ಲ. ನೀರುವವರು ಎನ್ನುವುದನ್ನು ಕರ್ತವ್ಯನಿಷ್ಠ ಹೆಂಗಸರು ಎಂಬ ಅರ್ಥದಲ್ಲಿ ಬಳಸಲಾಗಿದೆ. ಈ ಮೊದಲೇ ಹೇಳಿದಂತೆ ಹೆಣ್ಣು ಎನ್ನುವುದು ಮಾಗುವಿಕೆಗೆ, ಕೋಮಲತನಕ್ಕೆ, ಆರ್ದ್ರ ಭಾವನೆಗಳಿಗೆ ಪ್ರತೀಕ. ಮನೆ ನಡೆಸುವ ಹೆಣ್ಣಿನಂತೆ ನಿನ್ನಲ್ಲಿ ಸಮರ್ಪಣಾ ಭಾವನೆ ಬರಬೇಕು ಎನ್ನುವುದು ತಾತ್ಪರ್ಯ. ಇನ್ನು ಗೋವು-ಎಮ್ಮೆಯಂಥ ಪ್ರಾಣಿಗಳು ಎನ್ನುವ ಮೂಲಕ ಮುಗ್ಧತೆ, ಅಹಿಂಸೆ, ಪರೋಪಕಾರಗಳನ್ನು ಹೇಳುತ್ತಾರೆ. ದೇವರನ್ನು ಕಾಣುವ ಆಸೆಯಿದ್ದವರು ಹೇಗಿರಬೇಕು ಎಂಬ ವಿವರಣೆಯೊಂದಿಗೆ ದೇವರನ್ನು ಖಂಡಿತ ನೋಡಲು ಸಾಧ್ಯವಿದೆ. ಇಂತಿಂಥವರು ಅವನನ್ನು ಈಗಾಗಲೇ ನೋಡಿಬಿಟ್ಟಿದ್ದಾರೆ. ನೀನೂ ಪ್ರಯತ್ನ ಮಾಡು ಎನ್ನುತ್ತಿದ್ದಾರೆ ನಮ್ಮ ಋಷಿಗಳು.

ಪ್ರಕೃತಿಯೇ ಪರಮೇಶ್ವರ ಎಂಬ ಮಾತೊಂದು ಇದೆ. ರುದ್ರದ ಕೆಲ ಮಂತ್ರಗಳಲ್ಲಿ ‘ಹರಿಕೇಶ’ (ಹಸಿರು ಕೂದಲು) ಎಂಬ ಪದಪ್ರಯೋಗವಿದೆ. ಸಸ್ಯಗಳಿಗೆ ಎಲೆಗಳು ಎಷ್ಟು ಮುಖ್ಯ ಎಂಬುದು ಸಸ್ಯಶಾಸ್ತ್ರದ ಪ್ರಾಥಮಿಕ ಜ್ಞಾನವಿದ್ದವರಿಗೂ ಗೊತ್ತು. ಅದೇ ರೀತಿ ಜೀವಂತಿಕೆಯನ್ನು ಹಸಿರಿನಿಂದಲೇ ಬಿಂಬಿಸುವ ಕ್ರಮವೂ ರೂಢಿಯಲ್ಲಿದೆ. ಈ ನಿಟ್ಟಿನಿಂದ ನೋಡಿದರೆ ಪ್ರಕೃತಿಯ ಮತ್ತು ಜೀವಂತಿಕೆಯ ಸಾರಸರ್ವಸ್ವವೂ ರುದ್ರನೇ ಎಂಬ ಭಾವನೆ ಸ್ಫುರಿಸುತ್ತದೆ. ಸಂಸಾರವನ್ನು ಮರಕ್ಕೆ ಹೋಲಿಸುವುದು ವಾಡಿಕೆ. ಅದನ್ನು ಅನ್ವಯಿಸಿ ನೋಡಿ, ನಮ್ಮ ಜೀವನದ ಸೂತ್ರ ಹಿಡಿದವನೂ ರುದ್ರನೇ ಆಗಿದ್ದಾನೆ ಅನ್ನಿಸುವುದಿಲ್ಲವೇ? ಇದು ನಮ್ಮ ಭಾವುಕ ಮನಸ್ಸು ವೇದ ಮಂತ್ರಗಳಿಗೆ ಸ್ಪಂದಿಸುವ ಪರಿ.

ಕೇವಲ ಹಸಿರು ಮಾತ್ರವಲ್ಲ, ಅದನ್ನು ಆಧರಿಸಿರುವ ಸಮಸ್ತ ಜೀವರಾಶಿಗಳನ್ನೂ ರುದ್ರ ಆವರಿಸಿದ್ದಾನೆ. ಹಸುವಾಗಿ ಹುಲ್ಲು ಮೇಯುತ್ತಾನೆ, ಹಾಲಾಗಿ ಕರುವಿನ ಹೊಟ್ಟೆ ತುಂಬಿಸುತ್ತಾನೆ. ನೀರಾವಿಯಾಗಿ ಭೂಮಿಯಿಂದ ಮೇಲೇರುತ್ತಾನೆ, ಮೋಡವಾಗಿ ಘನೀಭವಿಸುತ್ತಾನೆ, ಮಳೆಯಾಗಿ ಕೆರೆಕುಂಟೆಗಳಿಗೆ ಇಳಿಯುತ್ತಾನೆ, ನದಿಯಾಗಿ ಹರಿಯುತ್ತಾನೆ, ಸಾಗರದಲ್ಲಿ ಶಾಂತನಾಗುತ್ತಾನೆ. ನೀರನ್ನು ಹಿಡಿದಿಡುವ ಕೆರೆ, ಕುಂಟೆ, ನದಿ, ಸಾಗರಗಳು ಮತ್ತು ಅದರಲ್ಲಿರುವ ನೀರು ಸಹ ಅವನೇ ಆಗಿದ್ದಾನೆ. ಪ್ರಕೃತಿ ಮತ್ತು ಜೀವಸೃಷ್ಟಿಯ ಆಧಾರ ಎನಿಸಿರುವ ಹಸಿರು ಮತ್ತು ನೀರನ್ನು ಅನ್ವಯಿಸಿ ರುದ್ರನನ್ನು ಉಪಾಸನೆಯನ್ನು ರುದ್ರಸೂಕ್ತ ಸಾರಿ ಹೇಳುತ್ತದೆ.

ರುದ್ರದ ಪ್ರಕೃತಿ ವರ್ಣನೆಯ ಬಗ್ಗೆ ಚಿಂತನೆ ಮಾಡುವುದು ನಿಜಕ್ಕೂ ಅತ್ಯಂತ ಖುಷಿಕೊಡುವ ಸಂಗತಿ.

ನೀನಲ್ಲದವ ಯಾರು ಸ್ವಾಮಿ?

ದೇವರನ್ನು ಕಂಡ ಯಾರೋ ಒಬ್ಬರು, ಮತ್ತೊಬ್ಬರಿಗೆ ಹೇಳಿದ ವರದಿಯಲ್ಲ ರುದ್ರಸೂಕ್ತ. ದೇವರು ಎದುರು ನಿಂತಾಗ ಅದನ್ನು ಕಂಡವನ ಭಾವನೆಗಳು ಹೊಮ್ಮಿಸಿದ ಶಬ್ದಗಳ ಮೊತ್ತವಿದು. ಅಂದರೆ, ಈ ಕಾಲದ ಮಾಧ್ಯಮ ಪರಿಭಾಷೆಯಲ್ಲಿ ಹೇಳುವುದಾದರೆ ಇದು ನಾವು ಟಿವಿ ಅಥವಾ ವೆಬ್​ಸೈಟ್​ಗಳಲ್ಲಿ ನೋಡುವ ಲೈವ್ ರಿಪೋರ್ಟಿಂಗ್. ಮಾರನೇ ಪತ್ರಿಕೆಯಲ್ಲಿ ಓದುವ ಸುದ್ದಿಯಲ್ಲ. ಹೀಗಾಗಿಯೇ ದೇವರು ಹೀಗಿದ್ದ ಎನ್ನುವ ಭೂತಕಾಲ ಪ್ರಯೋಗಕ್ಕಿಂತಲೂ ‘ಇಲ್ಲಿದ್ದಾನೆ ದೇವರು, ಹೀಗಿದ್ದಾನೆ ದೇವರು’ ಎನ್ನುವ ಇದಮಿತ್ಥಂ ಎನ್ನುವ ವರ್ತಮಾನದ ಖಚಿತ ನಿಲುವಿನ ಸ್ಪಷ್ಟ ಸಾಲುಗಳು ಇಲ್ಲಿವೆ. ಗೊಂದಲಕ್ಕೆ, ಸಂಶಯಕ್ಕೆ ಆಸ್ಪದವೇ ಇಲ್ಲದಷ್ಟು ಖಾಚಿತ್ಯ ಇದರ ವೈಶಿಷ್ಟ್ಯ.

‘ನೀವು ಪ್ರತ್ಯಕ್ಷ ಕಂಡು ಬರುತ್ತಿದ್ದೀರಿ, ನಿಮಗೆ ನಮಸ್ಕಾರವು’ ಎಂಬ ಸಾಲೊಂದು ರುದ್ರದಲ್ಲಿದೆ. ಈ ಸಾಲಿನಲ್ಲಿರುವ ‘ನೀವು’ ಎಂಬುದು ವಿಸ್ತಾರವಾಗುತ್ತಾ ಆಗುತ್ತಾ…

ಆಸೀನೇಭ್ಯಃ ಶಯಾನೇಭ್ಯಶ್ಚ ವೋ ನಮೋ ನಮಃ

ಸ್ವಪದ್ಭ್ಯೋ ಜಾಗ್ರದ್ಭ್ಯಶ್ಚ ವೋ ನಮೋ ನಮ

ಸ್ತಿಷ್ಠದ್ಭ್ಯೋ ಧಾವದ್ಭ್ಯಶ್ಚ ವೋ ನಮೋ ನಮಃ

ಸಭಾಭ್ಯಃ ಸಭಾಪತಿಭ್ಯಶ್ಚ ವೋ ನಮೋ ನಮೋ

ಅಶ್ವೇಭ್ಯೋ(ಶ್) ಶ್ವಪತಿಭ್ಯಶ್ಚ ವೋ ನಮಃ

ಎಂಬಲ್ಲಿಗೆ ಮುಟ್ಟುತ್ತದೆ.  ‘ಕುಳಿತಿರುವವರು, ನಿಂತಿರುವವರು, ಮಲಗಿರುವವರು, ಎಚ್ಚೆತ್ತಿರುವವರು, ಓಡುತ್ತಿರುವವರು, ಸಭಿಕರು, ಸಭಾಧ್ಯಕ್ಷರು, ದೇವರ ವಿಚಾರದಲ್ಲಿ ಆಸಕ್ತರಾದವರು, ನಿರಾಸಕ್ತರು, ಆಸೆ ಗೆದ್ದವರು, ಆಸೆಗೆ ಶರಣಾದವರು, ವಿರೂಪರು, ಸುಂದರಾಂಗರು, ಜನರು, ಜನಪ್ರತಿನಿಧಿಗಳು…’ ಎಂದೆಲ್ಲಾ ಮುಂದುವರಿಯುತ್ತದೆ.

ಒಂದು ಹಂತದಲ್ಲಿಯಂತೂ 

ನಮಃ ಕುಲಾಲೇಭ್ಯಃ ಕರ್ಮಾರೇಭ್ಯಶ್ಚ ವೋ ನಮೋ ನಮಃ

ಪುಂಜಿಷ್ಟೇಭ್ಯೋ ನಿಷಾದೇಭ್ಯಶ್ಚ ವೋ ನಮೋ ನಮ

ಇಷುಕೃದ್ಭ್ಯೋ ಧನ್ವಕೃದ್ಭ್ಯಶ್ಚ ವೋ ನಮೋ ನಮೋ

ಮ್ರುಗಯುಭ್ಯಃ ಶ್ವನಿಭ್ಯಶ್ಚ ವೋ ನಮೋ ನಮಃ

ಶ್ವಭ್ಯಃ ಶ್ವಪತಿಭ್ಯಶ್ಚ ವೋ ನಮಃ

ಕುಂಬಾರರಿಗೂ, ಕಮ್ಮಾರರಿಗೂ, ಹಕ್ಕಿಗಳ ಗುಂಪನ್ನು ಹೊಡೆಯುವವರಿಗೂ ನಾಯಿಯನ್ನು ಬೇಯಿಸಿ ತಿನ್ನುವವರಿಗೂ, ಬಾಣಗಳನ್ನು ತಯಾರಿಸುವವರಿಗೂ ನಾಯಿಗಳಿಗೂ, ನಾಯಿಗಳನ್ನು ಹಿಡಿದುಕೊಂಡವರಿಗೂ, ನಾಯಿಗಳ ಒಡೆಯರಿಗೂ, ಕಳ್ಳರಿಗೂ, ಕಳ್ಳರ ನಾಯಕರಿಗೂ ನಮಸ್ಕಾರ’ ಎನ್ನುವ ಮೂಲಕ ಸಮಾಜದಲ್ಲಿ ಕಂಡುಬರುವ ಉಚ್ಚ–ನೀಚ ಭಾವನೆಗಳನ್ನು ಸಾರಾಸಗಟಾಗಿ ನಿರಾಕರಿಸಿ, ‘ಎಲ್ಲವೂ ದೇವನೇ ಆಗಿದ್ದಾನೆ ಎನ್ನುವ ಎಚ್ಚರ ಮೂಡಿಸಿಕೊ ಸಾಧಕನೇ’ ಎಂದು ವೇದಋಷಿಗಳು ನಮಗೆ ಪ್ರೀತಿಯಿಂದ ಕಿವಿಮಾತು ಹೇಳುತ್ತಾರೆ.

ಭೂಮಿಯನ್ನು ಮತ್ತು ಸಹಜೀವಿಗಳನ್ನು ನಿನ್ನಂತೆಯೇ ಕಾಣು, ಪ್ರಕೃತಿಯನ್ನು ಗೌರವಿಸು. ಮನುಷ್ಯರ ಜೊತೆಗೆ ಭೂಮಂಡಲದಲ್ಲಿರುವ ಎಲ್ಲ ಜೀವಿಗಳನ್ನೂ ಪ್ರೀತಿಸು. ಇಲ್ಲದಿದ್ದರೆ ಹರ ಮುನಿದಾನು. ಮುನಿದ ಶಿವನು ಯಾರನ್ನೂ–ಯಾವುದನ್ನೂ ಉಳಿಸುವುದಿಲ್ಲ. ಆದರೆ ಅವನು ಒಲಿದು ಮಂಗಳನಾದರೆ ನಿನ್ನನ್ನು–ನಿನ್ನ ಸಂತಾನವನ್ನೂ ಕಾಪಾಡುವ ಭರವಸೆಯಾಗುತ್ತಾನೆ. ‘ರುದ್ರನನ್ನು ಶಿವನನ್ನಾಗಿ, ಮಂಗಳಕರನನ್ನಾಗಿ ಮಾಡಿಕೊ’ ಎನ್ನುವುದು ಒಟ್ಟಾರೆಯಾಗಿ ರುದ್ರಸೂಕ್ತದ ಮೂಲಕ ಋಷಿಗಳು ಮನಗಾಣಿಸಲು ಯತ್ನಿಸುವ ವಿಚಾರ.

ರುದ್ರ ಮತ್ತು ಮನಸ್ಸು

ಶಿವನನ್ನು ಮನೋನಿಯಮಕ, ಮನಸ್ಸಿನ ಪ್ರತೀಕ ಎಂದು ದ್ವೈತ ಸಿದ್ಧಾಂತವು ಪ್ರತಿಪಾದಿಸುತ್ತದೆ. ನಾನು ಈ ಮೊದಲೇ ಉಲ್ಲೇಖಿಸಿದ ವಿಜಯದಾಸರ ಕೈಲಾಸವಾಸ ಗೌರೀಶ ಈಶ ಕೃತಿಯೂ ಇದನ್ನೇ ಹೇಳುತ್ತದೆ. ನಾವು ಏನು ಸಾಧಿಸಲು ಹೊರಟರು ಮನಸ್ಸು ಬಹಳ ಮುಖ್ಯ. ಇಡೀ ಜಗತ್ತನ್ನು ವ್ಯಾಪಿಸಿರುವ ದೇವರು ಹೇಗೆ ನಮ್ಮೊಳಗೆ ಇದ್ದಾನೆಯೋ, ಹಾಗೆಯೇ ನಮ್ಮ ಮನಸ್ಸು ಎನ್ನುವುದು ಇಡೀ ಜಗತ್ತನ್ನು ವ್ಯಾಪಿಸಿರುವ, ನಾವು ಊಹಿಸಲೂ ಆಗದ ರೀತಿಯಲ್ಲಿ ನಮ್ಮ ಭಾಗವೇ ಆಗಿದೆ. ಮನಸ್ಸನ್ನು ನಾವು ನಿಯಂತ್ರಿಸುತ್ತೇವೆ ಎನ್ನುವುದು ಅಹಂಕಾರದ ಮಾತಾಗುತ್ತದೆ. ಕಡಿವಾಣ ಹಾಕಲು ಯತ್ನಿಸಿದಷ್ಟೂ ಬಂಡೇಳುವ ಪ್ರವೃತ್ತಿ ಅದರದ್ದು. ಹೀಗಾಗಿಯೇ ಅತ್ಯಂತ ಅನುನಯದಿಂದ, ಪ್ರೀತಿಯಿಂದ, ಮಗುವನ್ನು ಸಂಭಾಳಿಸುವಂತೆ ನಾವು ನಮ್ಮ ಮನಸ್ಸನ್ನು ಸಂಭಾಳಿಸಬೇಕು. ಇದು ಸಾಧ್ಯವಾಗಲು ಶಿವನ ದಯೆಬೇಕು. ಇಡೀ ರುದ್ರಾಧ್ಯಯಕ್ಕೆ ಮನಸ್ಸನ್ನೇ ಕೇಂದ್ರವಾಗಿಟ್ಟುಕೊಂಡು ಅರ್ಥವಿವರಿಸುವ ಸಾಧ್ಯತೆಗಳು ಸಾಕಷ್ಟಿವೆ. ವೇದ ಪಂಡಿತರು ಇಂಥದ್ದೊಂದು ಪ್ರಯತ್ನ ಮಾಡುವುದು ಅತ್ಯಗತ್ಯವಾಗಿದೆ.

ನೀವು ಗಮನಿಸಿರಬಹುದು, ರುದ್ರಮಂತ್ರದ ಪಾರಾಯಣದ ನಂತರ ಒಂದು ರೀತಿಯ ಮೌನ ನೆಲೆಗೊಳ್ಳುತ್ತದೆ. ಹೇಳಿದವರು, ಕೇಳಿಸಿಕೊಂಡವರಿಗೆ ಒಂದೆರೆಡು ನಿಮಿಷ ಮಾತು ಬೇಡ ಎನ್ನಿಸುತ್ತದೆ. ಆ ಮಂತ್ರಗಳು ಸೃಷ್ಟಿಸುವ ಆವರಣ ನಮ್ಮ ಮನಸ್ಸಿನ ಮೇಲೆ ಬೀರುವ ಪರಿಣಾಮ ಅಂಥದ್ದು. ಪ್ರತಿದಿನ ಪಾರಾಯಣ ಮಾಡುವುದರಿಂದ ಖಂಡಿತ ನಮ್ಮ ಮನಸ್ಸು ಮಾಗುತ್ತದೆ. ದೇವರನ್ನೇ ನೆನಪಿಸಿಕೊಂಡು, ದೇವರನ್ನು ತೋಯಿಸಿ, ದೇವರನಾಮದಲ್ಲಿ ನೆಂದ ಮನಸ್ಸಿಗೆ ದೇವರೂ ಸಹ ಹತ್ತಿರವಾಗುತ್ತಾನೆ. ನಮ್ಮ ಮನಸ್ಸು ನಮ್ಮ ಮಾತು ಕೇಳಲು, ನಮ್ಮನ್ನು ದೇವರ ಬಳಿಗೆ ಕೊಂಡೊಯ್ಯಲು ರುದ್ರಪಾರಾಯಣ ಅತ್ಯಂತ ಸೂಕ್ತವಾದ, ಸುಲಭಮಾರ್ಗ.

ನಮಕ–ಚಮಕ ತಿಳಿಯಬೇಕೆ?

ವೇದವನ್ನು ಗುರುಮುಖೇನ ಕಲಿಯುವುದು ಅತ್ಯುತ್ತಮ ಕ್ರಮ. ನಾವು ಇರುವ ಊರಿನಲ್ಲಿ ವೇದಪಾಠ ಮಾಡುವ ಗುರುಗಳು ಲಭ್ಯರಿಲ್ಲ ಎನ್ನುವವರಿಗೆ ಈಗ ತಂತ್ರಜ್ಞಾನದ ನೆರವು ಲಭ್ಯ.

ರುದ್ರ ಪಾರಾಯಣ ಮಾಡಲಿಚ್ಛಿಸುವವರು ಮೊಬೈಲ್​ಗಳಲ್ಲಿ mantradeepika ಆ್ಯಪ್‌ನಲ್ಲಿರುವ ‘ಶ್ರೀ ರುದ್ರಪ್ರಶ್ನಃ’ ಮತ್ತು ‘ಚಮಕಪ್ರಶ್ನಃ’ ಗಮನಿಸಬಹುದು. archive.org ವೆಬ್‌ಸೈಟ್‌ನಲ್ಲಿ ರಾಮಕೃಷ್ಣಾಶ್ರಮದ ಸ್ವಾಮಿ ಚಿದಾನಂದರು ಸಂಪಾದಿಸಿರುವ ‘ಸಸ್ವರ ವೇದಮಂತ್ರಾಃ’ ಪುಸ್ತಕ ಉಚಿತ ಲಭ್ಯ.

ಉದಾತ್ತ, ಅನುದಾತ್ತ, ಸ್ವರಿತದಂಥ ವೇದಮಂತ್ರಗಳ ಉಚ್ಚಾರಣಾ ಕ್ರಮಗಳನ್ನು ಅರಿತುಕೊಳ್ಳಲು ಇಚ್ಛಿಸುವವರಿಗೆ ‘ಚಳ್ಳಕೆರೆ ಸೋದರರು’ ಎಂದೇ ಖ್ಯಾತರಾದ ಎಂ.ಎಸ್.ವೇಣುಗೋಪಾಲ್ ಮತ್ತು ಎಂ.ಎಸ್.ಶ್ರೀನಿವಾಸನ್ ಅವರ ‘ಪರಾತ್ಪರ ಪರಮೇಶ್ವರ’ ಆಲ್ಬಂ ಸಹಾಯಕ್ಕೆ ಬರುತ್ತದೆ. ಇದು ಯೂಟ್ಯೂಬ್‌ನಲ್ಲಿದೆ.

ರುದ್ರದ ಪಠ್ಯ, ಉಚ್ಚಾರಣೆ ಧಾಟಿಯನ್ನು ತಿಳಿದ ನಂತರ ಅರ್ಥಾನುಸಂಧಾನದತ್ತ ಗಮನ ಹರಿಯದಿದ್ದರೆ ಏನು ಪ್ರಯೋಜನ? ಇಂಥವರು ಎಚ್.ಎಸ್.ಲಕ್ಷ್ಮೀನರಸಿಂಹಮೂರ್ತಿಗಳ ‘ರುದ್ರಭಾಷ್ಯಪ್ರಕಾಶ’ ಮತ್ತು ‘ಚಮಕಾಧ್ಯಾಯಭಾಷ್ಯ’ ಪುಸ್ತಕಗಳನ್ನು ಗಮನಿಸಬಹುದು. ಈ ಎರಡೂ ಪುಸ್ತಕಗಳು adhyatmaprakasha.org ವೆಬ್‌ಸೈಟ್‌ನಲ್ಲಿ ಪಿಡಿಎಫ್ ರೂಪದಲ್ಲಿವೆ. ರುದ್ರ ಮತ್ತು ಚಮಕಗಳ ಬಗ್ಗೆ ಇರುವ ಹಲವು ಭಾಷ್ಯಗಳನ್ನು ಸಮಕಾಲೀನ ಸಂದರ್ಭಗಳಿಗೆ ಒಗ್ಗಿಸಿ, ಸರಳವಾಗಿ ಕಟ್ಟಿಕೊಡುವುದು ಈ ಪುಸ್ತಕಗಳ ವೈಶಿಷ್ಟ್ಯ.

(ಗಮನಿಸಿ: ಹೊಳೆನರಸಿಪುರ ಅಧ್ಯಾತ್ಮ ಪ್ರಕಾಶ ಕಾರ್ಯಾಲಯ ಪ್ರಕಟಿಸಿರುವ ರುದ್ರಭಾಷ್ಯಪ್ರಕಾಶ ಪುಸ್ತಕದಲ್ಲಿ ವಿವರಿಸಿರುವ ಮಂತ್ರಾರ್ಥಗಳನ್ನು ಈ ಲೇಖನಕ್ಕೆ ಆಧಾರವಾಗಿ ಬಳಸಲಾಗಿದೆ).

Latest News

Related Posts