Sri Gurubhyo Logo

ಜಾತಕದಲ್ಲಿ ಅದ್ಭುತ ಯೋಗವಿದ್ದರೂ ಫಲ ಸಿಗುತ್ತಿಲ್ಲವೇ? ಲಕ್ಷ ಜಾತಕ ವಿಶ್ಲೇಷಿಸಿದ ಪ್ರಕಾಶ್ ಅಮ್ಮಣ್ಣಾಯ ಬಿಚ್ಚಿಟ್ಟ ರಹಸ್ಯಗಳಿವು!

Well-known astrologer Kapu Prakash Ammannaya receiving a framed traditional painting as a gift from a revered Hariharapura Mutt Swamiji in a traditional setting.
ಉಡುಪಿಯ ಕಾಪು ಮೂಲದ ಖ್ಯಾತ ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ ಅವರು ಹರಿಹರಪುರ ಮಠದ ಸ್ವಾಮೀಜಿಯಿಂದ ಸ್ಮರಣಿಕೆ ಸ್ವೀಕರಿಸುತ್ತಿರುವ ಕ್ಷಣ

ಇದುವರೆಗೆ ಲಕ್ಷಕ್ಕೂ ಹೆಚ್ಚು ಜಾತಕಗಳನ್ನು ವಿಶ್ಲೇಷಣೆ ಮಾಡಿರುವ ಅನುಭವಿ ಜ್ಯೋತಿಷಿಗಳೂ ಹಾಗೂ ಅಧ್ಯಾತ್ಮ ಚಿಂತಕರೂ ಆದಂಥ ಉಡುಪಿ ಜಿಲ್ಲೆಯ ಕಾಪುವಿನ ಪ್ರಕಾಶ್ ಅಮ್ಮಣ್ಣಾಯ ಅವರನ್ನು ‘ಶ್ರೀಗುರುಭ್ಯೋ.ಕಾಮ್’ಗಾಗಿ ಇಂಟರ್ ವ್ಯೂ ಮಾಡಲಾಗಿದೆ. ಜ್ಯೋತಿಷ್ಯ ವಿಚಾರವನ್ನು ಅಕೆಡಮಿಕ್ ಆಗಿ ಈಗಲೂ ಅಧ್ಯಯನ ಮಾಡುತ್ತಿರುವ ಅಮ್ಮಣ್ಣಾಯ ಅವರ ಜ್ಯೋತಿಷ್ಯ ಫಲ ವಿಶ್ಲೇಷಣೆ ಬಹಳ ವಿಶಿಷ್ಟವಾದದ್ದು. ಇನ್ನು ಗ್ರಹಗತಿಗಳ ಫಲವನ್ನು ವ್ಯಾಖ್ಯಾನ ಮಾಡುವಾಗ ಪುರಾಣಗಳು, ಮಹಾಕಾವ್ಯಗಳು, ಶಕುನಗಳು ಇವುಗಳೆಲ್ಲವನ್ನೂ ಆಧಾರವಾಗಿಟ್ಟುಕೊಂಡು, ಪರಿಹಾರವನ್ನು ಸೂಚಿಸುವ ಪರಿ ಬಹಳ ಪರಿಣಾಮಕಾರಿಯಾದದ್ದು. ಅಷ್ಟಮಂಗಲ ಪ್ರಶ್ನೆ ಮೂಲಕ ಹಲವಾರು ಪ್ರತಿಷ್ಠಿತ ಕುಟುಂಬಗಳು, ದೇವಸ್ಥಾನಗಳ समस्याಗಳನ್ನು ಮೂಲದಲ್ಲಿಯೇ ಪರಿಹರಿಸಿಕೊಟ್ಟ ಸಾರ್ಥಕ್ಯ ಅವರದು. ಇವತ್ತಿಗೆ ಕರ್ನಾಟಕದಲ್ಲಿಯೇ ಹೆಸರಾದ ಪ್ರಕಾಶ್ ಅಮ್ಮಣ್ಣಾಯ ಅವರು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಬಹಳ ಮುಖ್ಯವಾದ ಪ್ರಶ್ನೆಗಳಿಗೆ ಅತ್ಯುತ್ತಮವಾದ ಮಾರ್ಗದರ್ಶನ ನೀಡಿದ್ದಾರೆ; ಒಪ್ಪಿಸಿಕೊಳ್ಳಿ.

ಭಾಗ 1: ಜ್ಯೋತಿಷ್ಯದ ಮೂಲತತ್ವ ಮತ್ತು ಗ್ರಹಗತಿಗಳು

1. ಒಬ್ಬ ವ್ಯಕ್ತಿಯ ಜಾತಕದಲ್ಲಿ ಅದ್ಭುತ ಯೋಗಗಳಿವೆ ಅಂತಾದಲ್ಲಿ, ಅದು ಫಲ ನೀಡುವ ಕಾಲ ಯಾವುದು?

  • ಪ್ರಕಾಶ್ ಅಮ್ಮಣ್ಣಾಯ: ಯಾವುದೇ ಜಾತಕವಿರಲಿ ಗುರುವೇ ಫಲ ನೀಡುವವನು. ಮೇಷಾದಿ ದ್ವಾದಶ ಭಾವಗಳು ಆ ವ್ಯಕ್ತಿಗೆ ಯಾವ ಭಾವ ಆಗಿಬರುತ್ತೋ ಅದು ಅವರವರ ಯೋಗಕ್ಕನುಗುಣವಾಗಿ ಫಲ ಬರುತ್ತದೆ. ಗುರುವು ಕರ್ಮ ನಿರ್ಧಾರಕನೂ, ಕರ್ಮ ಸಫಲಾಸಫಲತೆಯನ್ನೂ, ಪ್ರಾಪ್ತಿಯನ್ನೂ ಗೋಚರದಲ್ಲಿ ಕೊಡುತ್ತಾನೆ. ಇನ್ನು ಫಲ ಸ್ವರೂಪವು ದಶಾಭುಕ್ತಿನಾಥರ ಭಾವಕ್ಕನುಗುಣವಾಗಿಯೇ ಇರುತ್ತದೆ. ಇಲ್ಲಿ ಇನ್ನೊಂದು ವಿಮರ್ಶೆಯನ್ನೂ ಜತೆಜತೆಯಲ್ಲೇ ಮಾಡಿಕೊಳ್ಳಬೇಕು. ಇಲ್ಲವಾದರೆ ಹೇಳುವ ಫಲ ಭಾಗವು ಸರಿಯಾಗಿ ಬರಲಾರದು. ಏನು ವಿಮರ್ಶೆ? ಆತ್ಮಕಾರಕನು ಯಾರೋ ಅಲ್ಲಿಂದ ವಿಮರ್ಶೆ. ಚಂದ್ರ, ಚಂದ್ರ ರಾಶ್ಯಾಧಿಪತಿ, ಲಗ್ನ, ಲಗ್ನ ರಾಶ್ಯಾಧಿಪತಿಗಳ ಸ್ಥಿತಿ ಮತ್ತು ಅವರ ಬಲಾಬಲಗಳ ಆಧಾರದಲ್ಲೇ ನೋಡಬೇಕು. ಉದಾಹರಣೆಗೆ, ಸಿಂಹ ಲಗ್ನವಾಗಿ ಲಗ್ನಾಧಿಪತಿ ರವಿಯು ಉಚ್ಚನಾಗಿ ಇದ್ದರೆ ಎರಡೂ ಸ್ಥಿತಿಗಳನ್ನು ಗಮನಿಸಲೇ ಬೇಕು.

2. ಜನ್ಮಜಾತಕ, ಗೋಚಾರ, ದಶಾ- ಭುಕ್ತಿ ಎಲ್ಲ ಚೆನ್ನಾಗಿದ್ದರೂ ಕೆಲವರಿಗೆ ಶುಭ ಫಲ ಅನುಭವಕ್ಕೆ ಬರುವುದೇ ಇಲ್ಲ, ಯಾಕೆ?

  • ಪ್ರಕಾಶ್ ಅಮ್ಮಣ್ಣಾಯ: ಶುಭಾಶುಭಕ್ಕೆ ಕಾರಣ ಇರುತ್ತದೆ. ಉದಾಹರಣೆಗೆ, ದೀಪಕ್ಕೆ ಎಣ್ಣೆ, ಬತ್ತಿ, ದೀಪದ ಪಾತ್ರೆ, ಬೆಂಕಿ ಪೊಟ್ಟಣ ಎಲ್ಲವೂ ಇದೆ. ಉರಿಸಿಯೂ ಆಯ್ತು. ಆದರೆ ಗಾಳಿ ಬಾರದಂತೆ ರಕ್ಷಣೆ ಮಾಡದಿದ್ದರೆ ದೀಪ ಆರಬಹುದು. ಅಂದರೆ ಜನ್ಮಾಂತರ ದೋಷ, ಈ ಜನ್ಮದ ಕೆಲ mismanagement, ಅಪರಾಧಗಳಿದ್ದರೆ ಅದರ ಬಗ್ಗೆ ವಿಮರ್ಶೆ ಮಾಡಿಕೊಳ್ಳಬೇಕು.

3. ಜನನ ಸಮಯದ ಬಗ್ಗೆ ಮಾಹಿತಿಯೇ ಗೊತ್ತಿಲ್ಲದ ವ್ಯಕ್ತಿಯ ನಕ್ಷತ್ರ, ಜನ್ಮರಾಶಿ ಹಾಗೂ ಜನನ ಕಾಲದ ಗ್ರಹಸ್ಥಿತಿ ಹೇಗೆ ತಿಳಿಯಬಹುದು?

  • ಪ್ರಕಾಶ್ ಅಮ್ಮಣ್ಣಾಯ: ವ್ಯಕ್ತಿಯು ಜ್ಯೋತಿಷ್ಯರಲ್ಲಿಗೆ ಬಂದು ಫಲ ತಾಂಬೂಲ ದಕ್ಷಿಣೆ ಇಟ್ಟು, ನಮಸ್ಕರಿಸಿ, ನಿವೇದನೆ ಮಾಡಿಕೊಳ್ಳಬೇಕು. ಆಗ ತತ್ಕಾಲ ಲಗ್ನ, ತಾಂಬೂಲಾದಿಗಳ ಸಂಖ್ಯೆ, ಪ್ರಾರ್ಥನೆಯ ಸಮಯದ ಆ ವ್ಯಕ್ತಿಯ ಚೇಷ್ಟೆ (activities), ಮೊದಲ ಅಕ್ಷರ ಇತ್ಯಾದಿ ಆಧಾರದಲ್ಲಿ ಹೇಳುವ ಪದ್ಧತಿ ಜ್ಯೋತಿಷ್ಯ ಶಾಸ್ತ್ರದಲ್ಲಿದೆ.

4. ವಾಸ ಇರುವ ಮನೆಯಲ್ಲಿ ವಾಸ್ತು ದೋಷ ಇದ್ದುಬಿಟ್ಟಲ್ಲಿ ಗ್ರಹಸ್ಥಿತಿ ಎಷ್ಟೇ ಚೆನ್ನಾಗಿದ್ದರೂ ಯಾವುದೇ ಫಲ ಸಿಗುವುದಿಲ್ಲವಂತೆ, ಹೌದಾ?

  • ಪ್ರಕಾಶ್ ಅಮ್ಮಣ್ಣಾಯ: ಫಲ ಸಿಗುತ್ತದೆ. ಆದರೆ ವ್ಯರ್ಥಾದೀತು. ರೋಗ, ಕಳವು, ಕೋರ್ಟು, ರಾಜ ದಂಡ ಇತ್ಯಾದಿ ಹೀಗೆ. ಹೊಳೆಯಲ್ಲಿ ಹುಣಸೇಹಣ್ಣು ತೊಳೆದಂತೆ ಯಾವುದಕ್ಕೂ ಪ್ರಯೋಜನಕ್ಕೆ ಬರುವುದಿಲ್ಲ.

ಗ್ರಹಣಗಳ ಸಾಲು, ಗ್ರಹಗತಿಗಳ ಏರುಪೇರು: ಜಗತ್ತಿಗೆ ಕಾದಿದೆಯೇ ಸಂಕಷ್ಟದ ಕಾಲ?

ಭಾಗ 2: ದೋಷಗಳು ಮತ್ತು ಸಂಸ್ಕಾರಗಳು

1. ಪಿತೃದೋಷ, ಮನೆ ದೇವರ ಪೂಜೆ-ಪುರಸ್ಸರಾದಿಗಳನ್ನು ಮಾಡದಿರುವುದು ಇವೆಲ್ಲ ಜಾತಕದಲ್ಲಿ ಗೊತ್ತಾಗುತ್ತದೆಯಾ? ಅದರ ಪರಿಣಾಮ- ಪ್ರಭಾವ ಯಾರ ಮೇಲೆ ಹೆಚ್ಚು?

  • ಪ್ರಕಾಶ್ ಅಮ್ಮಣ್ಣಾಯ: ಮಾನವ ಜನ್ಮವು ಒಂದು ರೀತಿಯ ಸೈಕ್ಲಿಂಗ್. ಪುನರಪಿ ಜನನಂ.. ಪುನರಪಿ…ಜಠರೇ ಶಯನಂ. ಮರಣ ಕಾಲದಲ್ಲಿ ಅಜ್ಞಾನಿಯಾಗಿ ದೇಹ ತ್ಯಾಗ ಮಾಡಿದರೆ ಮುಂದಿನ ಜನ್ಮಕ್ಕೆ ಅರ್ಹತೆ ಕಡಿಮೆಯಾಗಿ ಬಹುಕಾಲ ಒದ್ದಾಡಬೇಕು. ಅದುವೇ ಪ್ರೇತ ದೋಷ.

2. ಹೆಣ್ಣುಮಕ್ಕಳ ಜಾತಕದಲ್ಲಿನ ಕುಜದೋಷ ಅಥವಾ ಗಂಡು ಮಕ್ಕಳ ಜಾತಕದಲ್ಲಿನ ಕುಜದೋಷ, ಇವೆರಡರಲ್ಲಿ ಯಾವುದು ಹೆಚ್ಚು ತೀಕ್ಷ್ಣ?

  • ಪ್ರಕಾಶ್ ಅಮ್ಮಣ್ಣಾಯ: ಕುಜದೋಷವು ಒಂದೇ ರೀತಿ. ಆದರೆ ಗಂಡು- ಹೆಣ್ಣುಗಳ ಸ್ವರೂಪ ವ್ಯತ್ಯಾಸ ಇರುತ್ತದೆ. ಅದಕ್ಕನುಗುಣವಾಗಿ ಫಲ.

3. ಸರ್ಪದೋಷ- ಕಾಳಸರ್ಪದೋಷ ವ್ಯತ್ಯಾಸ ಏನು? ಒಬ್ಬ ವ್ಯಕ್ತಿಯ ಜೀವನದ ಮೇಲೆ ಇದು ಹೇಗೆ ಪರಿಣಾಮ ಬೀರುತ್ತದೆ?

  • ಪ್ರಕಾಶ್ ಅಮ್ಮಣ್ಣಾಯ: ಕಾಳ ಸರ್ಪ ಎಂದರೆ ರಾಹು- ಕೇತುಗಳ ಹಿಂದೆಯೋ ಮುಂದೆಯೋ ಗ್ರಹ ಶೂನ್ಯ ಇರಬೇಕು. ಮಧ್ಯೆ ಲಗ್ನ ಇದ್ದರೂ ಫಲ ವ್ಯತ್ಯಾಸ ನೋಡಬೇಕು. ಇದು ಭಾವಕ್ಕನುಗುಣವಾಗಿ ಒಂದು ಕ್ರಾಂತಿಕಾರಿ ವರ್ತನೆ.

4. ದಶಾಸಂಧಿ ಶಾಂತಿಗಳನ್ನು (ಕುಜ-ರಾಹು, ರಾಹು-ಬೃಹಸ್ಪತಿ, ಶುಕ್ರ-ಆದಿತ್ಯ) ಮಾಡಿಸಲೇಬೇಕಾ?

  • ಪ್ರಕಾಶ್ ಅಮ್ಮಣ್ಣಾಯ: ದಶೆ ಎಂದರೆ mentality. ಬೇರೆ ಬೇರೆ ಗ್ರಹರ ಲಕ್ಷಣ ಬೇರೆ ಬೇರೆ ಇರುತ್ತದೆ. ಪಾಪ ಗ್ರಹರದ್ದು ತೀವ್ರಗಾಮಿ (ಸಂಕರ್ಷಣ ಶಕ್ತಿ), ಶುಭಗ್ರಹರದ್ದು ಮಂದ ಗಾಮಿ (soft. ಅನಿರುದ್ಧ ಶಕ್ತಿ). ಇವುಗಳ ಬದಲಾವಣೆಯು ಸುಮಾರು ಆರು ತಿಂಗಳಲ್ಲಿ ಯಥಾಸ್ಥಿತಿಗೆ ಬರುತ್ತದೆ. ಈ ಮಧ್ಯೆ ಹೆಚ್ಚು- ಕಡಿಮೆ ಅನಾಹುತ ಆಗಬಾರದು ಎಂದು ಸಂಧಿಶಾಂತಿ ಮಾಡಿಸೋದು. ಇದರಲ್ಲಿ ಮತ್ತೊಂದೆಡೆ ಆಳವಾದ ಪಾರಮಾರ್ಥಿಕ ತತ್ವವಿದೆ.

ಹಿಟ್ಲರ್ ಪುನರಾವತಾರವೇ ಟ್ರಂಪ್? ಪ್ರಕಾಶ್ ಅಮ್ಮಣ್ಣಾಯ ಆಘಾತಕಾರಿ ಜ್ಯೋತಿಷ್ಯ ವಿಶ್ಲೇಷಣೆ

ಭಾಗ 3: ಜೀವನದ ಪ್ರಮುಖ ಸಮಸ್ಯೆಗಳು ಮತ್ತು ಜ್ಯೋತಿಷ್ಯ ಕಾರಣ

1. ಮದುವೆ ವಿಳಂಬ- ಸಂತಾನ ವಿಳಂಬ ಈ ಎರಡಕ್ಕೂ ಸಾಮಾನ್ಯವಾಗಿ ಎಲ್ಲರೂ ಮಾಡಬಹುದಾದ ಪರಿಹಾರಗಳೇನು?

  • ಪ್ರಕಾಶ್ ಅಮ್ಮಣ್ಣಾಯ: ಸಕಲ ಗ್ರಹಬಲನೂ ನೀನೆ ಸರಸಿಜಾಕ್ಷ ಎಂಬಂತೆ ವಿಷ್ಣು ಸಹಸ್ರನಾಮ ನಿತ್ಯವೂ ಒಂದೇ ಕಾಲದಲ್ಲಿ ಪಾರಾಯಣ ಮಾಡಬೇಕು.

2. ಪರಸ್ಪರ ಪ್ರೀತಿಸಿ ಮದುವೆಯಾದವರು ಅಥವಾ ಜಾತಕ ಹೊಂದಾಣಿಕೆ ಮಾಡಿ ಮದುವೆಯಾದವರಿಗೂ ಡಿವೋರ್ಸ್ ಆಗುತ್ತಿದೆ, ಇದಕ್ಕೆ ಜ್ಯೋತಿಷ್ಯದ ದೃಷ್ಟಿಕೋನವೇನು?

  • ಪ್ರಕಾಶ್ ಅಮ್ಮಣ್ಣಾಯ: ಡೈವೊರ್ಸ್ ಗಳ ರೂಪ ಹಲವಿದೆ. ಯಾವುದೇ ಸುಯೋಗ ಪ್ರಾಪ್ತಿಯಾಗಲೂ, ದುರ್ಯೋಗ ಬಾರದಿರಲು ಮೊದಲು ಅದು ಹೇಗೆ ಭಂಗ ಆಗುತ್ತದೆ, ಯಾವುದರಿಂದ ವೃದ್ಧಿ ಮಾಡಬಹುದು, ಯಾವುದರಿಂದ ಭಂಗ ನಿವಾರಣೆ ಮಾಡಬಹುದು ಎಂಬ ಪರಿಜ್ಞಾನ ಬೇಕು. ಉದಾಹರಣೆಗೆ, ಕಾಲಿಗೆ ಏನೋ ಚುಚ್ಚಿದರೆ ಅದು ಕಬ್ಬಿಣದ ಆಣಿಯೂ ಇರಬಹುದು, ಸಾಮಾನ್ಯ ಮುಳ್ಳೂ ಇರಬಹುದು, ಕಡಿತವಾಗಿದ್ದು ವಿಷ ಪೂರಿತ ಹಾವುಗಳಿಂದಲೂ ಇರಬಹುದು. ಅದನ್ನು ನೋಡದೆ, ತಿಳಿಯದೆ ಔಷಧಿ ಮಾಡಿದರೆ ಹೇಗೆ? ಜಾತಕ ವಿಶ್ಲೇಷಣೆಯಿಂದ ಪ್ರತಿ ವ್ಯಕ್ತಿಗೂ ಭಿನ್ನ ಭಿನ್ನ ದೃಷ್ಟಿಕೋನ.

3. ಕೆಲವರು ವಿಪರೀತ ಬುದ್ಧಿವಂತರು, ಸಾಮರ್ಥ್ಯವಿದ್ದರೂ ಉದ್ಯೋಗ-ವ್ಯವಹಾರದಲ್ಲಿ ಯಶಸ್ಸು ಕಾಣುವುದಿಲ್ಲ, ಇದಕ್ಕೆ ಕಾರಣವೇನು?

  • ಪ್ರಕಾಶ್ ಅಮ್ಮಣ್ಣಾಯ: ವಿಪರೀತವೇ ಅನಾಹುತಕ್ಕೆ ಕಾರಣ.

4. ತಂದೆ-ತಾಯಿಗಳಿಗೆ ಮಕ್ಕಳ ಜೊತೆ ಇರುವುದಕ್ಕೆ ಯೋಗವೇ ಕೂಡಿಬರುವುದಿಲ್ಲ, ಇದಕ್ಕೆ ಜಾತಕದಲ್ಲಿ ಯಾವ ಗ್ರಹಗತಿ ಕಾರಣ?

  • ಪ್ರಕಾಶ್ ಅಮ್ಮಣ್ಣಾಯ: ರವಿ ಚಂದ್ರರು ಷಷ್ಟಾಷ್ಟಮ, ದ್ವಿರ್ದ್ವಾದಶ ಇದ್ದರೆ ಅಂದರೆ ಲಗ್ನಕ್ಕೆ ಈ ಸೂಚನೆ. ಇಲ್ಲಿಯೂ ನವಾಂಶದಲ್ಲಿ ಸರಿ ಇದ್ದರೆ ಆರಂಭದಲ್ಲಿ ಸರಿ ಇಲ್ಲದೆ, ನಂತರ ಸರಿಯಾಗುವ ಲಕ್ಷಣ. ಅದರಲ್ಲೂ ಲಗ್ನಾಧಿಪತಿಗೆ ಸರಿ ಇದ್ದಾಗಲೂ ಇದೇ ಫಲ.

5. ಮಕ್ಕಳು ವಿಪರೀತ ಹಠ ಮಾಡುವುದು ಮತ್ತು ವಿದ್ಯಾಭ್ಯಾಸದಲ್ಲಿ ಆಸಕ್ತಿ ತೋರದಿರುವುದಕ್ಕೆ ಅನ್ವಯವಾಗುವ ಸಾಮಾನ್ಯ ಪರಿಹಾರಗಳೇನು?

  • ಪ್ರಕಾಶ್ ಅಮ್ಮಣ್ಣಾಯ: ಉನ್ಮಾದ ರೋಗ. ಷಷ್ಟದಲ್ಲಿ ರಾಹು ಅಥವಾ ಕೇತು ಶತ್ರುಗಳ ಯುತಿಯಲ್ಲಿದ್ದು, ಶನಿಯೂ ವ್ಯಯದಲ್ಲಿ ದುರ್ಬಲ ಇದ್ದಾಗ ಹೀಗಾಗುತ್ತದೆ.

6. ವ್ಯಾಪಾರ- ಸ್ವಂತ ವ್ಯವಹಾರಗಳನ್ನು ಯಾವ ರೀತಿಯ ಜಾತಕರು ಮಾಡಬಹುದು? ಯಾರು ಮಾಡಲೇಬಾರದು?

  • ಪ್ರಕಾಶ್ ಅಮ್ಮಣ್ಣಾಯ: ಅದನ್ನು ದಶಮಾಧಿಪತಿಯಿಂದ ನೋಡಬೇಕು. ಚಂದ್ರ ದಶಮ, ಚಂದ್ರ ರಾಶ್ಯಾಧಿಪತಿಯ ದಶಮ, ಲಗ್ನ, ಲಗ್ನಾಧಿಪತಿಯ ದಶಮದಿಂದ ಅವರವರ ಬಲಾಬಲ ನೋಡಿ ವಿಮರ್ಶೆ ಮಾಡಬೇಕು.

7. ಆರೋಗ್ಯ ಸಮಸ್ಯೆ, ಹಣಕಾಸು ಸಮಸ್ಯೆ ಅಥವಾ ಕಾನೂನು ಸಮಸ್ಯೆಗಳನ್ನು ಮುಂಚಿತವಾಗಿಯೇ ತಿಳಿಯಬಹುದೇ? ಅದು ಯಾವ ಗ್ರಹ ಸ್ಥಿತಿಯಿಂದ?

  • ಪ್ರಕಾಶ್ ಅಮ್ಮಣ್ಣಾಯ: ಆರನೆಯ ಮನೆ, ಅದರ ಅಧಿಪತಿ, ಮೇಲೆ ಹೇಳಿದಂತೆ ಚಂದ್ರ, ಲಗ್ನ ಅದರ ಅಧಿಪತಿಗಳ ಬಲಾಬಲದಲ್ಲಿ ನಿರ್ಧರಿಸಬಹುದು.

ಭೃಗು-ಅಂಗಾರಕ ಯುತಿಯಿಂದ ಜಾಗತಿಕ ಸಂಘರ್ಷ, ಆರೋಗ್ಯದ ಮೇಲೆ ಪ್ರಭಾವ

ಭಾಗ 4: ವಿಶಿಷ್ಟ ಪರಿಹಾರಗಳು ಮತ್ತು ಪ್ರಶ್ನಾ ಜ್ಯೋತಿಷ್ಯ

1. ಸೈಟು ಖರೀದಿ ಅಥವಾ ಮನೆ ನಿರ್ಮಾಣಕ್ಕೆ ಎಷ್ಟು ಪ್ರಯತ್ನ ಪಟ್ಟರೂ ಸಾಧ್ಯವಾಗದವರಿಗೆ ಏನು ಪರಿಹಾರ?

  • ಪ್ರಕಾಶ್ ಅಮ್ಮಣ್ಣಾಯ: ಭೂ ವರಾಹ ಹೋಮ, ಪೂಜೆ. 1008 ನೈದಿಲೆಯನ್ನು ಜೇನು ತುಪ್ಪದಲ್ಲಿ ಮುಳುಗಿಸಿ ಆಹುತಿ ನೀಡಿದರೆ ಭೂಪತಿತ್ವ ಸಿಗುತ್ತದೆ. ಭೂಪತಿತ್ವಂ ಮೇ ದಧಾಪಯ ಸ್ವಾಹಾ ಮಂತ್ರದ ಅಂತ್ಯದಲ್ಲಿ ಹೇಳಿ ಆಹುತಿ.

2. ಎಲ್ಲ ವೈದ್ಯಕೀಯ ಪ್ರಯತ್ನಗಳು ವಿಫಲವಾಗಿ ಮೃತ್ಯುಭಯ ಎದುರಿಸುತ್ತಿರುವವರಿಗೆ ಇರುವ ಪರಿಣಾಮಕಾರಿ ವೈದಿಕ ಪರಿಹಾರವೇನು?

  • ಪ್ರಕಾಶ್ ಅಮ್ಮಣ್ಣಾಯ: ಯಕ್ಷ್ಮನಾಶ ಹೋಮ. ಇದನ್ನು ಮಾಡೋದು ಸುಲಭವೇನಲ್ಲ. ಸಮಪ್ರಮಾಣದ ಪಂಚಗವ್ಯದಲ್ಲಿ ಜಾತಕನನ್ನು ಕಂಠ ಪೂರ್ತಿ ಮುಳುಗಿಸಿ ಮತ್ತೊಂದೆಡೆ ಹೋಮ ಮಾಡಬೇಕು.

3. ಅಷ್ಟಮಂಗಲ ಪ್ರಶ್ನೆ ಅಂದರೇನು? ಯಾವ ಸಂದರ್ಭದಲ್ಲಿ ಇದನ್ನು ಕೇಳಲಾಗುತ್ತದೆ?

  • ಪ್ರಕಾಶ್ ಅಮ್ಮಣ್ಣಾಯ: ಇದೆಲ್ಲ ಪುರಾತನ ಸಂಪ್ರದಾಯಸ್ಥ ಕುಟುಂಬ, ದೇವಸ್ಥಾನ, ದೈವಸ್ಥಾನಗಳಿಗೆ ಸಂಬಂಧಿಸಿದಂತೆ ಮಾಡುವುದು. ವಾರಗಟ್ಟಲೆ ವಿಮರ್ಶೆಯೂ ಇರುತ್ತದೆ.

ಕೇರಳೀಯ ಜ್ಯೋತಿಷ್ಯ ಪದ್ಧತಿ: ಏನಿದು ನೀಗಡ ದ್ರೇಕ್ಕಾಣದ ರಹಸ್ಯ?

ಭಾಗ 5: ಜ್ಯೋತಿಷಿಗಳ ವೈಯಕ್ತಿಕ ಅನುಭವ ಮತ್ತು ಸಲಹೆ

1. ಮುಖ್ಯವಾದ ತೀರ್ಮಾನ ತೆಗೆದುಕೊಳ್ಳುವಾಗ ಒಬ್ಬ ವ್ಯಕ್ತಿ ಎಷ್ಟು ಬಾರಿ ಜಾತಕ ಪರಾಮರ್ಶೆ ಮಾಡಿಸಿಕೊಳ್ಳಬೇಕು?

  • ಪ್ರಕಾಶ್ ಅಮ್ಮಣ್ಣಾಯ: ಇದು ಕೂಡ ಮಾಸ್ಟರ್ ಚೆಕಪ್, ಜನರಲ್ ಚೆಕಪ್ ಇದ್ದಂತೆ. ಅನಾರೋಗ್ಯ ಇದ್ದಾಗ, ಅನಾರೋಗ್ಯ ಮುನ್ಸೂಚನೆ ಇದ್ದಾಗ ತೋರಿಸಿಕೊಳ್ಳಬೇಕು. ಕ್ವಾಲಿಫೈಡ್, ಅನುಭವಿ ಹಾಗೂ ಕೈಗುಣ ಚೆನ್ನಾಗಿರುವ ವೈದ್ಯರಂತೆಯೇ ಈ ಎಲ್ಲವೂ ಇರುವ ಜ್ಯೋತಿಷಿಗಳ ಬಳಿ ಹೋಗಬೇಕು. ಈಗ ಹೇಳಿ ಯಾವಾಗೆಲ್ಲ ವೈದ್ಯರ ಬಳಿ ಹೋಗಬೇಕು? ಜ್ಯೋತಿಷಿಗಳ ಬಳಿಗೆ ಯಾವಾಗ ಹೋಗಬೇಕು ಎಂಬುದಕ್ಕೂ ಅದೇ ಉತ್ತರ.

2. ಇಲ್ಲಿಯ ತನಕ ನೀವು ಎಷ್ಟು ಜನರ ಜಾತಕ ವಿಶ್ಲೇಷಣೆ ಮಾಡಿದ್ದೀರಿ? ಆ ಅನುಭವದ ಆಧಾರದಲ್ಲಿ ಸಮಾಜಕ್ಕೆ ನಿಮ್ಮ ಸಲಹೆಯೇನು?

  • ಪ್ರಕಾಶ್ ಅಮ್ಮಣ್ಣಾಯ: ಸಂಖ್ಯೆ ಹೇಳುವಷ್ಟರ ಮಟ್ಟಿಗೆ ನೆನಪಿಲ್ಲ, ನೆನಪಿಟ್ಟಿಲ್ಲ. ಇನ್ನು ಸಲಹೆ ಏನೆಂದರೆ, ಸತ್ಕರ್ಮದ ದಾರಿಯಲ್ಲಿ ನಡೆಯಿರಿ. ಇನ್ನೊಬ್ಬನಿಗೆ ನೋವು ನೀಡಬೇಡಿ. ಕಾಲ ಕಾಲಕ್ಕೆ ಉಪಾಸನೆ, ಉಪಾಹಾರವೇ ಸೂಕ್ತ ಔಷಧ.

3. ನಿಮ್ಮ ಬಳಿ ಸೆಲೆಬ್ರಿಟಿಗಳು ಹೆಚ್ಚು ಬರುತ್ತಾರೆ ಎಂಬ ಮಾತಿದೆ, ಸಾಮಾನ್ಯ ಜನರಿಗೂ ನೀವು ಲಭ್ಯವಿದ್ದೀರಾ? ನಿಮ್ಮನ್ನು ಸಂಪರ್ಕಿಸುವುದು ಹೇಗೆ?

  • ಪ್ರಕಾಶ್ ಅಮ್ಮಣ್ಣಾಯ: ಅದೆಲ್ಲ ದೈವ ಪ್ರೇರಿತ. ನಾವು ಎಲ್ಲರನ್ನೂ ಸಮಾನವಾಗಿ ನೋಡುವವರು. ಯೋಗ ಇದ್ದರೆ ಬರುತ್ತಾರೆ. ನಾವಂತೂ ಪ್ರಚಾರ ಕೊಡೋದಿಲ್ಲ. ಒಬ್ಬ ಪ್ರಖ್ಯಾತ- ಪ್ರಬುದ್ಧ ಜ್ಯೋತಿಷಿ, ವಕೀಲ, ವೈದ್ಯರು, ಪುರೋಹಿತರು ಪ್ರಚಾರ ಕೊಡಲು ಹಿಂಜರಿಯುತ್ತಾರೆ. ಯಾಕೆಂದರೆ rush ಜಾಸ್ತಿ ಆದರೆ ನಮ್ಮ ಧಾರಣಾ ಶಕ್ತಿ ಸಾಲದು.

ಎಡಿಟರ್ಸ್ ನೋಟ್: ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ ಅವರ ಸಂಪರ್ಕ ಮಾಹಿತಿಯನ್ನು ಕೇಳಿ, ಹಲವಾರು ಮಂದಿ ಕರೆ ಮಾಡಿದ್ದಾರೆ. ಇಷ್ಟು ಸುದೀರ್ಘವಾದ ಸಂದರ್ಶನದ ಮೂಲಕ ಸಾಧ್ಯವಾದಷ್ಟು ಉತ್ತರ ದೊರಕಿಸಿಕೊಡಲು ಪ್ರಯತ್ನಿಸಲಾಗಿದೆ. ಆದರೆ ಅಮ್ಮಣ್ಣಾಯ ಅವರೇ ಹೇಳುವಂತೆ, ಯೋಗ ಇದ್ದರೆ ಬಂದೇ ಬರುತ್ತಾರೆ, ಆದರೆ ನಾವಾಗಿಯೇ ಪ್ರಚಾರ ನೀಡುವುದಿಲ್ಲ ಎಂಬ ವಿಚಾರದಲ್ಲಿ ಅವರು ಪಟ್ಟು ಸಡಿಲಿಸಲಿಲ್ಲ. ಹಾಗೊಂದು ವೇಳೆ ಮುಂದಿನ ದಿನಗಳಲ್ಲಿ ಅವರು ಒಪ್ಪಿದಲ್ಲಿ, ಅಮ್ಮಣ್ಣಾಯ ಅವರ ಸಂಪರ್ಕ ವಿಳಾಸ, ಮೊಬೈಲ್ ನಂಬರ್ ಇತ್ಯಾದಿ ವಿವರಗಳನ್ನು ನೀಡಲಾಗುವುದು.

ಸಂದರ್ಶನ: ಶ್ರೀನಿವಾಸ ಮಠ

ಶ್ರೀನಿವಾಸ ಮಠ

ಸಂಪಾದಕರು, ಶ್ರೀಗುರುಭ್ಯೋ.ಕಾಮ್

ಪತ್ರಿಕೋದ್ಯಮದಲ್ಲಿ ಹದಿನೆಂಟು ವರ್ಷಕ್ಕೂ ಹೆಚ್ಚು ಅನುಭವ ಇರುವ ಲೇಖಕ. ಕನ್ನಡದ ಪ್ರಮುಖ ದಿನಪತ್ರಿಕೆಗಳು ಹಾಗೂ ವಾರಪತ್ರಿಕೆ ಮತ್ತು ಆನ್ ಲೈನ್ ವೆಬ್ ಪೋರ್ಟಲ್ ಗಳಲ್ಲಿ ವಿವಿಧ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ವೈದಿಕ ಜ್ಯೋತಿಷ್ಯವನ್ನು ಪದ್ಧತಿಯಿಂದ ಅಭ್ಯಾಸ ಮಾಡಿರುವಂಥ ಇವರು, ಈ ತನಕ ಮೂರು ಸಾವಿರಕ್ಕೂ ಹೆಚ್ಚು ಜ್ಯೋತಿಷ್ಯ ಲೇಖನಗಳನ್ನು ವಿವಿಧ ವೆಬ್ ಪೋರ್ಟಲ್ ಗಳಿಗಾಗಿ ಬರೆದಿದ್ದಾರೆ. ಅಧ್ಯಾತ್ಮ, ಜ್ಯೋತಿಷ್ಯ ಹಾಗೂ ಧಾರ್ಮಿಕ ವಿಷಯಗಳಲ್ಲಿ ಅಳವಾದ ಜ್ಞಾನ ಮತ್ತು ನಿರಂತರ ಅಧ್ಯಯನ ಇರುವಂಥ ಶ್ರೀನಿವಾಸ ಮಠ ಸದ್ಯಕ್ಕೆ ಬೆಂಗಳೂರಿನಲ್ಲಿ ವಾಸವಿದ್ದು, ಜ್ಯೋತಿಷ್ಯವನ್ನು ವೃತ್ತಿಯಾಗಿ ಸ್ವೀಕರಿಸಿದ್ದಾರೆ.

Latest News

Related Posts