Sri Gurubhyo Logo

ಪಾಕಿಸ್ತಾನ, ಅಫ್ಗಾನಿಸ್ತಾನದಲ್ಲಿ ಏಪ್ರಿಲ್ ತಿಂಗಳಲ್ಲಿ ಮಹಾ ವಿಪತ್ತು; ಕರ್ನಾಟಕದ ಖ್ಯಾತ ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ ಭವಿಷ್ಯ

ಪ್ರಕಾಶ್ ಅಮ್ಮಣ್ಣಾಯ
ಪ್ರಕಾಶ್ ಅಮ್ಮಣ್ಣಾಯ

“ಮಿಥುನ ರಾಶಿಯಲ್ಲಿ ಕುಜ ಇರುವಾಗ, ಮೇಷ ರಾಶಿಯಲ್ಲಿ ಉಚ್ಚ ರವಿಯ ಸಂಚಾರ- ಅಂದರೆ ಈ ಎರಡು ಗ್ರಹಗಳು ಎಂಬತ್ತು ಡಿಗ್ರಿಯೊಳಗೆ ಬಂದಾಗ ಅದನ್ನು ಭೂಕಂಪ ಲಗ್ನ ಎನ್ನಲಾಗುತ್ತದೆ. ಈಗಲೇ ಬರೆದಿಟ್ಟುಕೊಳ್ಳಿ; ಪಾಕಿಸ್ತಾನ, ಅಫ್ಗಾನಿಸ್ತಾನಗಳಿಗೆ ಮಹಾವಿಪತ್ತು. ಅದು ಏಪ್ರಿಲ್ ಹದಿನೇಳನೇ ತಾರೀಕಿನಂದು ಇಪ್ಪತ್ತನೇ ತಾರೀಕು ಏನು ಬೇಕಾದರೂ ಸಂಭವಿಸಬಹುದು. ಅಂದರೆ, ಅಗ್ನಿ ಅವಘಡ, ಪ್ರಾಕೃತಿಕ ವಿಪತ್ತು, ಮನುಷ್ಯರ ವಿಚಿತ್ರ ನಿರ್ಧಾರದಲ್ಲಿ ಮಾನವೀಯ ಬಿಕ್ಕಟ್ಟು ಸೃಷ್ಟಿ ಹೀಗೆ ಏನು ಬೇಕಾದರೂ ಸಂಭವಿಸಬಹುದು. ಅಫ್ಗಾನಿಸ್ತಾನ ಹಾಗೂ ಪಾಕಿಸ್ತಾನದ ಮಧ್ಯೆ ಕಾದಾಟವೇ ಆಗಿ, ದೊಡ್ಡ ಸಂಖ್ಯೆಯ ಜೀವಹಾನಿ, ಸೇನಾ ಕಾರ್ಯಾಚರಣೆ, ನಾಗರಿಕ ದಂಗೆ, ಭೂಕಂಪ, ಅಗ್ನಿ ಅನಾಹುತ ಈ ಪೈಕಿ ಯಾವುದಾದರೂ ಆ ದೇಶದ ಭೂಮಿ, ಜನರು, ಬದುಕಿಗೆ ದೊಡ್ಡ ಮಟ್ಟದ ಘಾತ ಮಾಡಲಿದೆ,” ಎಂದು ಶ್ರೀಗುರುಭ್ಯೋ.ಕಾಮ್ ಜತೆ ಮಾತನಾಡುತ್ತಾ ಹೇಳಿದ ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ ಅವರು ಅರೆಕ್ಷಣ ಮೌನವಾದರು.

ಆ ನಂತರ ನಮ್ಮ ಮುಂದಿನ ಪ್ರಶ್ನೆ ಏನು ಎಂಬುದನ್ನು ಊಹಿಸಿದಂತೆಯೇ ಉಡುಪಿಯ ಕಾಪು ಮೂಲದ ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ ಮಾತನ್ನು ಮುಂದುವರಿಸಿದರು. ಏಪ್ರಿಲ್ ತಿಂಗಳಲ್ಲಿ ಮೇಷ ರಾಶಿಗೆ ರವಿ ಪ್ರವೇಶಿಸುತ್ತಾನೆ. ಅಲ್ಲಿ ಆರೋಹಿ ಗ್ರಹ ರವಿ. ಇನ್ನು ಆ ತಿಂಗಳಲ್ಲಿ ರವಿ ಬಹಳ ಬಲಿಷ್ಠ. ಅಂಥ ರವಿಯಿಂದ ಎಪ್ಪತ್ತೆಂಟರಿಂದ ಎಂಬತ್ತು ಡಿಗ್ರಿಯೊಳಗೆ ಕುಜ ಗ್ರಹ ಇರುತ್ತದೆ. ಇಂಥ ಕುಜ ಗ್ರಹದ ಪೂರ್ಣ ದೃಷ್ಟಿ- ಅಂದರೆ ಏಳನೇ ಮನೆಯ ಮೇಲೆ ದೃಷ್ಟಿ ಇರುತ್ತದೆ. ಯಾವಾಗಲೂ ಗ್ರಹದ ಸ್ಥಿತಿಗಿಂತ ಅದರ ದೃಷ್ಟಿ ಬಹಳ ವಿಶೇಷ. ಆದ್ದರಿಂದ ಕುಜನ ವೀಕ್ಷಣೆ ಧನುಸ್ಸು ರಾಶಿಯ ಮೇಲೆ ಬೀರುವುದರಿಂದ ವಾಯವ್ಯ ಭಾಗದಲ್ಲಿ ಆಗುವ ಅನಾಹುತವನ್ನು ಸೂಚಿಸುತ್ತದೆ.

2023 Yearly Horoscope: ಖ್ಯಾತ ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯರಿಂದ 2023ರ ದ್ವಾದಶ ರಾಶಿಗಳ ವರ್ಷ ಭವಿಷ್ಯ

ಇನ್ನು ಇದನ್ನು ಆರಂಭದಲ್ಲೇ ಹೇಳಿದಂತೆ ಭೂಕಂಪ ಲಗ್ನ ಅನ್ನುವುದು ಒಂದು ಕಡೆ ಆಯಿತು. ಮತ್ತೊಂದು ಕಡೆಯಿಂದ ಶನಿಯ ಪಂಚಮ ದೃಷ್ಟಿ ಸಹ ಬೀರುತ್ತದೆ. ಶನಿಗೆ ಮೂರು, ಏಳು, ಹತ್ತು ಈ ಸ್ಥಾನಗಳ ದೃಷ್ಟಿಯಷ್ಟೇ ಅಲ್ಲ, ಪಂಚಮ ಸ್ಥಾನ ವೀಕ್ಷಣೆ ಮಾಡುತ್ತಾ ಈ ಘಟನೆಗೆ ಬಲ ತುಂಬುತ್ತಾನೆ. ಇದು ಹೇಗೆಂದರೆ ಜೋರು ಬೆಂಕಿ ಹೊತ್ತಿಕೊಂಡು ಉರಿಯುವಾಗ ಅದಕ್ಕೆ ನೀರು ಬಿದ್ದಲ್ಲಿ ಆರಿಹೋಗುತ್ತದೆ. ಆದರೆ ಅದಕ್ಕೆ ಗಾಳಿ ಬೀಸಿದರೆ ಅದಿನ್ನೂ ವ್ಯಾಪಿಸುತ್ತದೆ.  

Planetary Position
ಗ್ರಹಸ್ಥಿತಿ (ಏಪ್ರಿಲ್ ತಿಂಗಳಿನದು)

ಸ್ಥಳವನ್ನು ಗುರುತಿಸಿ, ನಿರ್ದಿಷ್ಟವಾಗಿ ಹೇಳಬೇಕಾದರೆ, ಸಿಂಧೂ ನದಿಯ ಪಶ್ಚಿಮ ಭಾಗಕ್ಕೆ ಈ ಅನಾಹುತ ಸಂಭವಿಸುತ್ತದೆ. ಒಂದು ವೇಳೆ ಮಿಥುನದಲ್ಲಿ ಕುಜನೊಟ್ಟಿಗೆ ಬೇರೆ ಯಾವುದಾದರೂ ಗ್ರಹರಿದ್ದರೆ, ಅಥವಾ ಒಂದು ವೇಳೆ ಧನುಸ್ಸು ರಾಶಿಯಲ್ಲಿಯಾದರೂ ಈ ಸನ್ನಿವೇಶಕ್ಕೆ ತಡೆಯೊಡ್ಡಬಹುದಾದ ಗ್ರಹರಿದ್ದರೆ ಇದೇನೂ ಸಮಸ್ಯೆ ಮಾಡಲಿಕ್ಕಿಲ್ಲ ಎನ್ನಬಹುದಿತ್ತು. ಆದರೆ ಪರಿಸ್ಥಿತಿ ಹಾಗಿಲ್ಲ. ಮಿಥುನದಲ್ಲಿ ಕುಜನ ಒಟ್ಟಿಗೆ ಬೇರೆ ಯಾವ ಗ್ರಹವೂ ಇಲ್ಲ. ಸಪ್ತಮ ದೃಷ್ಟಿ ಬೀರುವ ಧನುಸ್ಸಿನಲ್ಲೂ ಯಾವ ಗ್ರಹವೂ ಇಲ್ಲ. ಇನ್ನು ಕುಜ ಗ್ರಹವನ್ನು ಕುಂಭ ರಾಶಿಯಲ್ಲಿ ನಿಂತಿರುವ ಶನಿ ವೀಕ್ಷಣೆ ಮಾಡುತ್ತದೆ. ಮೇಷ ರಾಶಿಯಲ್ಲಿ ರವಿಯು ಕುಜನ ಎಂಬತ್ತು ಡಿಗ್ರಿಯೊಳಗೆ ಬರುವುದರಿಂದ ಇದಕ್ಕೆ ನೀವು ಪರಿಹಾರ ಅಂತೇನೂ ನಿರೀಕ್ಷಿಸುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಿದರು.

ಈ ಸಮಯ ಮುಗಿದ ಮೇಲೆ ಜಾಗತಿಕ ಸಮುದಾಯಗಳು ಅಥವಾ ವಿಶ್ವಸಂಸ್ಥೆಯು ಮಧ್ಯಪ್ರವೇಶಿಸಿ, ಪರಿಸ್ಥಿತಿಯನ್ನು ಹತೋಟಿಗೆ ತರಲಿವೆ. ಪಾಕಿಸ್ತಾನದಲ್ಲಿನ ಪರಿಸ್ಥಿತಿ ಡೋಲಾಯಮಾನ ಆಗಲಿದೆ. ಆ ದೇಶದ ಮೇಲೆ ಯಾರ್ಯಾರೋ ಹತೋಟಿಗೆ ತೆಗೆದುಕೊಳ್ಳುವ ಅಥವಾ ಯಾರ ಹತೋಟಿಗೆ ಸಿಗದಂಥ ಸನ್ನಿವೇಶ ಸೃಷ್ಟಿ ಆಗಲಿದೆ. ಇದರ ಜತೆಗೆ ಪ್ರಾಕೃತಿಕ ವಿಕೋಪಗಳು, ಭೂಕಂಪನಗಳು ಇಂಥದ್ದೆಲ್ಲ ಆಗಲಿವೆ ಎಂದು ಮಾತು ಮುಗಿಸಿದರು ಪ್ರಕಾಶ್ ಅಮ್ಮಣ್ಣಾಯ.

ಲೇಖಕರು: ಪ್ರಕಾಶ್ ಅಮ್ಮಣ್ಣಾಯ, ಉಡುಪಿ ಜಿಲ್ಲೆಯ ಕಾಪು ಮೂಲದ ಜ್ಯೋತಿಷಿಗಳು. ವಿವಿಧ ಚುನಾವಣೆಗಳ ಸಂದರ್ಭದಲ್ಲಿ ಕರಾರುವಾಕ್ ಭವಿಷ್ಯ ನುಡಿದು, ಇಡೀ ರಾಜ್ಯದ ಗಮನ ಸೆಳೆದವರು. ವಿವಿಧ ಜ್ಯೋತಿಷ್ಯ ಸಮಸ್ಯೆಗಳಿಗೆ ಪರಿಣಾಮಕಾರಿಯಾದ ಪರಿಹಾರವನ್ನು ಸೂಚಿಸುವುದಕ್ಕೆ ಖ್ಯಾತಿ ಪಡೆದಿದ್ದಾರೆ. 

 

Latest News

Related Posts