Sri Gurubhyo Logo

Jupiter – Venus Conjunction: ಗುರು- ಶುಕ್ರ ಸಂಯೋಗದಿಂದ ಮೇಷದಿಂದ ಮೀನದ ತನಕ ಯಾರಿಗೆ ಶುಭ- ಯಾರಿಗೆ ಅಶುಭ?

Prakash Ammannaya-2
ಜ್ಯೋತಿರ್ವಿಜ್ಞಾನಿ ಪ್ರಕಾಶ್ ಅಮ್ಮಣ್ಣಾಯ

ಇದೇ ಫೆಬ್ರವರಿ 15ನೇ ತಾರೀಕು ಮೀನ ರಾಶಿಗೆ ಶುಕ್ರ ಗ್ರಹದ ಪ್ರವೇಶ ಆಗಲಿದೆ. ಅಲ್ಲಿಂದ ಮಾರ್ಚ್ 12ರ ತನಕ ಅದೇ ರಾಶಿಯಲ್ಲಿ ಶುಕ್ರ ಸಂಚಾರವಿದೆ. ಆ ದಿನ, ಅಂದರೆ ಹನ್ನೆರಡನೇ ತಾರೀಕಿನಂದು ಮೇಷಕ್ಕೆ ಶುಕ್ರ ಪ್ರವೇಶ ಆಗುತ್ತದೆ. ಅಲ್ಲಿಗೆ ಮೀನ ರಾಶಿಯಲ್ಲೇ ಇರುವ ಗುರು, ತನ್ನ ಪರಮೋಚ್ಚ ಕ್ಷೇತ್ರಕ್ಕೆ ಪ್ರವೇಶ ಮಾಡಲಿರುವ ಶುಕ್ರನಿಂದಾಗಿ ಅದ್ಭುತಗಳು ನಡೆದು ಹೋಗುತ್ತವೆ ಎಂದು ಒಬ್ಬೊಬ್ಬ ಜ್ಯೋತಿಷಿ ಒಂದೊಂದು ರೀತಿಯಲ್ಲಿ ಹೇಳುತ್ತಿದ್ದಾರೆ. ಆದರೆ ಈ ಗುರು- ಶುಕ್ರ ಯುತಿ (ಒಟ್ಟಿಗಿರುವುದು) ಯಾವ ರೀತಿಯ ಫಲವನ್ನು ನೀಡುತ್ತದೆ ಎಂಬ ಬಗ್ಗೆ ಉಡುಪಿಯ ಕಾಪು ಮೂಲದ ಖ್ಯಾತ ಜ್ಯೋತಿಷಿಗಳಾದ ಪ್ರಕಾಶ್ ಅಮ್ಮಣ್ಣಾಯ ಅವರು ಹನ್ನೆರಡೂ ರಾಶಿಗಳಿಗೆ ಭವಿಷ್ಯ ನುಡಿದಿದ್ದಾರೆ. ಇದರ ಜತೆಗೆ ಇಡೀ ಜಗತ್ತಿನಾದ್ಯಂತ ಈ ಬೆಳವಣಿಗೆಯಿಂದ ಆಗುವ ಪರಿಣಾಮ ಏನು ಎಂಬುದನ್ನೂ ಶ್ರೀಗುರುಭ್ಯೋ.ಕಾಮ್ ವೆಬ್ ಸೈಟ್ ಜತೆಗೆ ಹಂಚಿಕೊಂಡಿದ್ದಾರೆ. ಅದನ್ನೇ ಇಲ್ಲಿ ವಿವರಿಸಲಾಗುತ್ತಿದೆ.

ಗುರು- ಶುಕ್ರರು ಮೀನ ರಾಶಿಯಲ್ಲಿ ಇರುವುದರಿಂದ ಒಂದು ಗ್ರಹಕ್ಕೆ ಸ್ವಕ್ಷೇತ್ರವಾದರೆ, ಮತ್ತೊಂದಕ್ಕೆ ಉಚ್ಚ ಕ್ಷೇತ್ರ ಆಗುತ್ತದೆ. ಈ ಅವಧಿಯಲ್ಲಿ ಮಿಥುನ, ಕನ್ಯಾ, ಧನು, ಮೀನ ಲಗ್ನದಲ್ಲಿ ಜನಿಸುವಂಥ ಮಕ್ಕಳಿಗೆ ಗುರುವಿನಿಂದಾಗಿ ಹಂಸ ಯೋಗ, ಶುಕ್ರನಿಂದ ಮಾಲವ್ಯ ಯೋಗ ಆಗುತ್ತದೆ (ಪಂಚ ಮಹಾಪುರುಷ ಯೋಗ).

ಜಗತ್ತಿನ ಮೇಲೆ ಪರಿಣಾಮ: ತುಂಬ ಅದ್ಭುತ ಎನಿಸುವಂಥ ತೀರ್ಮಾನಮ ನಿರ್ಧಾರಗಳನ್ನು ತೆಗೆದುಕೊಂಡರೂ ಅದನ್ನು ಜಾರಿಗೆ, ಅನುಷ್ಠಾನಕ್ಕೆ ತರಲಾಗುವುದಿಲ್ಲ. ತುಂಬ ಚಂದಕ್ಕೆ ಬಂದಿದೆ, ಯೋಜನೆ ಚೆನ್ನಾಗಿದೆ, ಇನ್ನೇನು ಅನುಷ್ಠಾನಕ್ಕೆ ತರುತ್ತೇನೆ ಎಂದು ಹೊರಡುವ ಹಲವು ಯೋಜನೆಗಳು ಹಳ್ಳ ಹಿಡಿಯುತ್ತವೆ. ಎಷ್ಟೇ ಚೆಂದಕ್ಕೆ ಚೌಕಟ್ಟು ಹಾಕಿದ ಚಿತ್ರವಾದರೂ ತನ್ನ ರೂಪವನ್ನು ಕಳೆದುಕೊಂಡ ಮೇಲೆ ನೋಡುವುದಕ್ಕೆ ಏನು ಚೆನ್ನಾಗಿದ್ದೀತು? ಹಾಗೆಯೇ ಈ ಅವಧಿಯಲ್ಲಿ ಇಡೀ ಜಗತ್ತಿನ ಪರಿಸ್ಥಿತಿ ಆಗುತ್ತದೆ.

ಪಾಕಿಸ್ತಾನ, ಅಫ್ಗಾನಿಸ್ತಾನದಲ್ಲಿ ಏಪ್ರಿಲ್ ತಿಂಗಳಲ್ಲಿ ಮಹಾ ವಿಪತ್ತು; ಕರ್ನಾಟಕದ ಖ್ಯಾತ ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ ಭವಿಷ್ಯ

ಗುರುವಿಗೆ ಮೀನ ಸ್ವಕ್ಷೇತ್ರ, ಶುಕ್ರನಿಗೆ ಪರಮೋಚ್ಚ ಸ್ಥಿತಿ. ಆದರೂ ಮನೆ ಯಜಮಾನನನ್ನು ಮೀರಿ ಏನು ಫಲ ನೀಡಲಾದೀತು? ಒಬ್ಬ ದೇವ ಗುರು ಹಾಗೂ ಮತ್ತೊಬ್ಬ ರಾಕ್ಷಸ ಗುರು. ಇವರಿಬ್ಬರ ಮೇಲಾಟದಲ್ಲಿ ಪ್ರಪಂಚವೇ ಬಡವಾಗುತ್ತದೆ. ಇದನ್ನು ಜ್ಯೋತಿಷ್ಯ ರೀತಿಯಲ್ಲಿ ವಿವರಿಸುವ ಪ್ರಯತ್ನವನ್ನು ಮಾಡಲಾಗಿದೆ. ಹನ್ನೆರಡು ರಾಶಿಗಳ ಮೇಲೆ ಶುಕ್ರ- ಗುರು ಗ್ರಹರ ಯುತಿ ಫಲವನ್ನು ವಿವರಿಸಲಾಗುವುದು, ಮುಂದೆ ಓದಿ.

ಮೇಷ: ನಿಮ್ಮ ರಾಶಿಗೆ ವ್ಯಯ ಸ್ಥಾನದಲ್ಲಿ ಆಗುತ್ತಿರುವ ಈ ಯುತಿಯಿಂದ ಏನು ಫಲ ಅಂತ ಹೇಳಿದರೆ, ಹನ್ನೆರಡನೇ ಮನೆಯಲ್ಲಿ ಶುಕ್ರ ಬೇಕಾದಷ್ಡು ಹಣವನ್ನು ಕೊಡುತ್ತಾನೆ. ಆದರೆ ಅದನ್ನು ಗುರು ವ್ಯಯ ಮಾಡಿಸುತ್ತಾನೆ. ಅಲ್ಲಿಗೆ ಬಂದ ಹಣ ಕೈಯಲ್ಲಿ ಉಳಿಯುವುದಿಲ್ಲ. ಕೊಡುವವನು ಬಲಿಷ್ಠನಾಗಿ ಕೊಡಬಹುದು. ಆದರೆ ಕಳೆಯುವವನ ಜತೆಯಲ್ಲೇ, ಅವನ ಮನೆಯಲ್ಲಿ ನಿಂತು ಕೊಟ್ಟರೆ ಉಳಿಯಲು ಬಿಟ್ಟಾನೆಯೇ? ಗುರು- ಶುಕ್ರ ಒಟ್ಟಿಗೆ ಇರುವ ಈ ಅವಧಿಯಲ್ಲಿ ಹೀಗೇ ಆಗುತ್ತದೆ. ಶುಕ್ರ ಕೊಟ್ಟಿದ್ದನ್ನು ಗುರು ಕಳೆಯುತ್ತಾನೆ.

 ವೃಷಭ: ನಿಮಗೆ ಏಕಾದಶದಲ್ಲಿ ಗುರು- ಶುಕ್ರರ ಯುತಿ ಆಗುವುದರಿಂದ ಶುಕ್ರನು ರೋಗ ತರುತ್ತಾನೆ. ಎಂಥ ಕಾಯಿಲೆಗಳು ಅಂತ ನೋಡಿದರೆ, ಗುಪ್ತಾಂಗ ಸಮಸ್ಯೆಗಳು, ಕಿಡ್ನಿ ಸಮಸ್ಯೆ, ವೀರ್ಯಾಣುಗಳ ಸಂಖ್ಯೆಯಲ್ಲಿ ಕೊರತೆ, ಲೈಂಗಿಕ ಆಸಕ್ತಿ ಕಡಿಮೆ ಮಾಡುವುದು, ಮೂತ್ರ ಸೋಂಕು ಇಂಥವೆಲ್ಲ ಕಾಣಿಸಿಕೊಳ್ಳಬಹುದು. ಆದರೆ ಏಕಾದಶದಲ್ಲಿ ಇರುವ ಗುರುವಿನಿಂದಾಗಿ ಈ ವ್ಯಾಧಿಯನ್ನು ನಿವಾರಿಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ. ಈ ಸಮಸ್ಯೆಯು ತಾತ್ಕಾಲಿಕವಾಗಿಯಷ್ಟೇ ಇರುತ್ತದೆ. ಹೆದರಿಸಿ- ಆತಂಕ ಸೃಷ್ಟಿಸಿ, ಶುಕ್ರನು ಮುಂದೆ ಹೋಗುತ್ತಾನೆ.

ಮಿಥುನ: ನಿಮ್ಮ ರಾಶಿಗೆ ಕರ್ಮ ಸ್ಥಾನದಲ್ಲಿ ಗುರು- ಶುಕ್ರರ ಭೆಟ್ಟಿ ಆಗುತ್ತಿದೆ. ಈ ಅವಧಿಯಲ್ಲಿ ಮನೆಯ ಹಿರಿಯರು, ತುಂಬ ಹತ್ತಿರದ ಬಂಧುಗಳು ಅಗಲುವಂಥ ಯೋಗ ಕರ್ಮಸ್ಥಾನದ ಗುರುವಿನಿಂದಾಗಿ ಇದೆ. ಒಂದು ವೇಳೆ ಚಿಕ್ಕಪ್ಪ, ದೊಡ್ಡಪ್ಪ, ತಾತ- ಅಜ್ಜಿ, ಗುರು ಸಮಾನರು, ತೀರಾ ಆಪ್ತರನ್ನು ದೂರ ಮಾಡಬಹುದು. ಕರ್ಮ ಸ್ಥಾನದಲ್ಲಿ ಅಥವಾ ಕೇಂದ್ರ ಸ್ಥಾನದಲ್ಲಿ ನಿಂತ ಶುಕ್ರ ಏನೋ ಒಳ್ಳೆ ಫಲ ನೀಡುತ್ತಾನೆ ಎಂದು ಅಂದುಕೊಳ್ಳುವಂತಿಲ್ಲ. ಇಲ್ಲಿ ಗುರುವಿಗೆ ಸ್ವಕ್ಷೇತ್ರದ ಬಲ ಹಾಗೂ ಅಂಶ ಬಲಿಷ್ಠ ಇರುವುದರಿಂದ ಶುಕ್ರನು ದುರ್ಬಲನಾಗುತ್ತಾನೆ.

ಕರ್ಕಾಟಕ: ಇನ್ನು ನಿಮ್ಮ ರಾಶಿಗೆ ಒಂಬತ್ತನೇ ಮನೆ, ಅಂದರೆ ಭಾಗ್ಯ ಸ್ಥಾನದಲ್ಲಿ ಗುರು- ಶುಕ್ರರು ಇರುತ್ತಾರೆ. ಈ ಸಂದರ್ಭದಲ್ಲಿ ಗುರು ತನ್ನ ಫಲವನ್ನು ಚೆನ್ನಾಗಿ ಕೊಡುತ್ತಾನೆ. ಕರ್ಕಾಟಕ ರಾಶಿಯವರಿಗೆ ಶುಕ್ರನು ಲಾಭಾಧಿಪತಿಯೂ ಹೌದು, ಸುಖ ಸ್ಥಾನಾಧಿಪತಿಯೂ ಹೌದು. ಆದರೂ ಶುಕ್ರನಿಗೆ ಸಂಪೂರ್ಣ ಫಲವನ್ನು ನೀಡುವುದಕ್ಕೆ ಸಾಧ್ಯವಾಗುವುದಿಲ್ಲ. ಈ ಅವಧಿಯಲ್ಲಿ  ಗುರುವಿನಿಂದ ಗೃಹ, ವಾಹನ ಸೌಖ್ಯ ಮೊದಲಾದವು ನೀಡಿ ಶುಭ ಫಲಗಳನ್ನು ನೀಡಿದರೆ, ಶುಕ್ರನಿಂದಾಗಿ ಇದನ್ನು ಬಳಸಿಕೊಳ್ಳುವುದಕ್ಕೆ ಆಗುವುದಿಲ್ಲ.  

ಸಿಂಹ: ನಿಮಗೆ ಎಂಟನೇ ಮನೆಯಲ್ಲಿ ಗುರು- ಶುಕ್ರರು ಯುತಿ ಆಗುತ್ತಾರೆ. ಈ ಸಂದರ್ಭದಲ್ಲಿ ಶುಕ್ರನು ಧನ- ಕನಕಗಳನ್ನು ನೀಡುತ್ತಾನೆ. ಎಂಟನೇ ಮನೆಯ ಶುಕ್ರ ಸಂಚಾರ ಒಳ್ಳೆಯದು. ಆದರೆ ಗುರು ಅಷ್ಟಮದಲ್ಲಿ ಇರುವುದರಿಂದ ಅನಾರೋಗ್ಯಗಳು ಕಾಡಲಿವೆ. ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳು ಕಾಡಲಿವೆ. ಗ್ಯಾಸ್ಟ್ರಿಕ್ ಸಮಸ್ಯೆಗಳು ಎದುರಾಗುತ್ತವೆ, ಶುಕ್ರನ ಅನುಗ್ರಹದಿಂದ ಬಂದ ಹಣವು ಗುರುವಿನ ಫಲದಿಂದ ವ್ಯಯ ಆಗುತ್ತದೆ. ಶುಕ್ರ ನೀಡಿದ ಫಲವನ್ನು ಅನುಭವಿಸುವುದಕ್ಕೆ ಸಂತೋಷದ ವಾತಾವರಣ ಇರುವುದಿಲ್ಲ.

ಕನ್ಯಾ: ನಿಮ್ಮ ರಾಶಿಗೆ, ಸಪ್ತಮ ಸ್ಥಾನದಲ್ಲಿ- ಅಂದರೆ ಕಳತ್ರ ಸ್ಥಾನದಲ್ಲಿ ಗುರು- ಶುಕ್ರ ಯುತಿ ಆಗುತ್ತದೆ. ವಿವಾಹ ಯೋಗ ಉಂಟು. ಇವರಿಗೆ ತುಂಬ ಅದ್ಧೂರಿಯಾಗಿ ವಿವಾಹ ಆಗಬೇಕು ಎಂದಿದ್ದರೂ ಹಾಗೆ ಆಗುವುದಕ್ಕೆ ಸಾಧ್ಯವಾಗುವುದಿಲ್ಲ. ಅಂದರೆ ಅಪೇಕ್ಷಿತ ಮಟ್ಟದಲ್ಲಿ ವೈಭವಗಳು ಕಾಣುವುದಿಲ್ಲ. ಇಲ್ಲಿ ವಿವಾಹ ಕಾರಕತ್ವ ಶುಕ್ರನದಾದರೆ, ಅವನ ಜತೆಗೆ ಇರುವ ಗುರು ಗ್ರಹವು ಭಾವ ನಿರ್ಣಯ ಕಾರಕ ಗ್ರಹ ಆಗುತ್ತದೆ. ಆದ್ದರಿಂದ ಬಹಳ ಆಸೆಯಿಟ್ಟುಕೊಂಡು, ದೊಡ್ಡ ಮಟ್ಟದ ಸಿದ್ಧತೆ ಮಾಡಿಕೊಂಡರೂ ಮದುವೆಯಲ್ಲಿ ಓರೆ- ಕೋರೆಗಳು ಆಗುತ್ತವೆ.

ತುಲಾ: ಆರನೇ ಮನೆಯಲ್ಲಿ ಗುರು- ಶುಕ್ರರ ಯುತಿ ಆಗುತ್ತದೆ. ಆರನೇ ಮನೆಯಲ್ಲಿ ಇರುವ ಗುರುವಿನಿಂದಾಗಿ ರೋಗ ಸೂಚಕ, ರೋಗ ಭಯ ಹಾಗೂ ಆತಂಕ ತರುವವನು.ಶುಕ್ರ ಆರನೇ ಮನೆಯಲ್ಲಿ ಇರುವುದು ಕೂಡ ರೋಗ ಸೂಚಕವೇ. ಆದ್ದರಿಂದ ಮಾನಸಿಕ ನೆಮ್ಮದಿ ಇರುವುದಿಲ್ಲ. ಯಾವುದಾದರೂ ಒಂದು ಕಾಯಿಲೆ ಕಾಣಿಸಿಕೊಂಡಿತೋ ಅದಕ್ಕೆ ಚಿಕಿತ್ಸೆ ಪಡೆದುಕೊಳ್ಳುತ್ತೀರಿ. ಅದರ ಜತೆಗೆ ಮತ್ತೊಂದು ಸಮಸ್ಯೆ ಎದುರಾಗುತ್ತದೆ. ಒಂದು ಸರಿಹೋಯಿತು ಅಂದುಕೊಳ್ಳುವ ಹೊತ್ತಿಗೆ ಮತ್ತೊಂದು ಶುರು ಆಗುವುದರಿಂದ ಮನಸ್ಸಿಗೆ ಚಿಂತೆ ಕಾಡುತ್ತದೆ.

ವೃಶ್ಚಿಕ: ನಿಮ್ಮ ರಾಶಿಗೆ ಪಂಚಮದಲ್ಲಿ ಗುರು- ಶುಕ್ರರ ಯುತಿ ಆಗುತ್ತದೆ. ಇದರಿಂದಾಗಿ ಗುರುವಿನ ಮೂಲಕ ಫಲ ನೋಡಬೇಕಾದರೆ ಬುದ್ಧಿ ಸ್ಥಾನವಾದ ಇಲ್ಲಿದ್ದು, ವಿದ್ಯೆಗೆ, ಉನ್ನತ ವ್ಯಾಸಂಗಕ್ಕೆ, ಹೊಸ ಕೋರ್ಸ್ ಮಾಡುವುದಕ್ಕೆ ಅನುಕೂಲ ಆಗುತ್ತದೆ. ಆದರೆ ಶುಕ್ರ ಇರುವುದರಿಂದ ಇವರಿಗೆ ವ್ಯಯ ಸ್ಥಾನಾಧಿಪತಿ ಆಗುತ್ತದೆ. ಆ ಕಾರಣಕ್ಕೆ ಹತ್ತು ರೂಪಾಯಿ ಆಗುವ ಖರ್ಚಿನ ಜಾಗದಲ್ಲಿ ಸಾವಿರ ರೂಪಾಯಿ ಆಗಲಿದೆ. ಆದ್ದರಿಂದ ಇವರು ಖರ್ಚು ಮಾಡುವಾಗ ಆರಂಭದಲ್ಲಿಯೇ ಒಂದು ಬಜೆಟ್ ಇಟ್ಟುಕೊಂಡು ಮುಂದುವರಿಯಬೇಕು.

ಧನುಸ್ಸು: ನಿಮ್ಮ ರಾಶಿಗೆ ನಾಲ್ಕನೇ ಮನೆಯಲ್ಲಿ ಗುರು- ಶುಕ್ರರು ಇರುತ್ತಾರೆ. ಇದರ ಫಲ ಚಿಂತನೆ ಏನೆಂದರೆ, ಮನೆ ಖರೀದಿ ಮಾಡುವುದು, ವಾಹನ ಖರೀದಿ ಮಾಡುವುದು ಈ ರೀತಿಯ ಶುಭ ಫಲಗಳನ್ನು ಕಾಣಲಿದ್ದೀರಿ. ಆದರೆ ನೀವು ಅಂದುಕೊಂಡಂಥ ಬಣ್ಣದ್ದೇ ಕಾರು ಸಿಗುವುದು ಕಷ್ಟ ಅಥವಾ ನೀವು ಕೇಳಿದ ವೇರಿಯಂಟ್ ಬದಲು ಬೇರೆ ಸಿಗಬಹುದು. ಒಟ್ಟಿನಲ್ಲಿ ನಿಮ್ಮ ಬಯಕೆ ಶೇಕಡಾ ನೂರರಷ್ಟು ಈಡೇರಿತು ಅಂತಿಲ್ಲ. ಆದರೆ ಹೊಂದಾಣಿಕೆ ಮಾಡಿಕೊಂಡೇ ಖರೀದಿ ಮಾಡಬೇಕಾಗುತ್ತದೆ.

ಮಕರ: ನಿಮ್ಮ ರಾಶಿಗೆ ಮೂರನೇ ಮನೆಯಲ್ಲಿ ಗುರು- ಶುಕ್ರರ ಯುತಿ ಆಗುತ್ತದೆ. ಗುರುವಿನಿಂದ ವಿಪರೀತ ಆತಂಕ ತರುತ್ತಾನೆ. ಇಲ್ಲಿ ಮಕರ ರಾಶಿಯವರಿಗೆ ಶುಕ್ರನು ಯೋಗಕಾರಕ. ಆದರೆ ಗುರುವಿನ ಜತೆಗೆ ಅವನದೇ ಮನೆಯಲ್ಲಿ ಇರುವುದರಿಂದ ದುರ್ಬಲನಾಗಿರುತ್ತಾನೆ. ಎಲ್ಲಿಯ ತನಕ ಶುಕ್ರನು ಮುಂದಿನ ರಾಶಿಗೆ ಹೋಗುವುದಿಲ್ಲವೋ ಅಲ್ಲಿಯ ತನಕ ಮನೋಕಾಮನೆಗಳು ಈಡೇರುವುದಿಲ್ಲ. ಆದ್ದರಿಂದ  ತಾಳ್ಮೆ, ಸಂಯಮ ಬಹಳ ಮುಖ್ಯ ಆಗುತ್ತದೆ. ಈ ಅವಧಿಯಲ್ಲಿ ವಿಪರೀತ ನಿರೀಕ್ಷೆ ಒಳ್ಳೆಯದಲ್ಲ.

ಕುಂಭ: ನಿಮ್ಮ ರಾಶಿಗೆ ಎರಡನೇ ಮನೆಯಲ್ಲಿ ಗುರು- ಶುಕ್ರ ಒಟ್ಟಿಗೆ ಇರುತ್ತಾರೆ. ಗುರು ಒಳ್ಳೆ ಫಲವನ್ನು ನೀಡುತ್ತಾನೆ. ಶುಕ್ರನೂ ಎರಡನೇ ಮನೆಯಲ್ಲಿ ಗೋಚಾರದಿಂದ ಶುಭ ಫಲವೇ. ಆದರೆ ಇಲ್ಲಿ ಇಬ್ಬರಿಗೂ ತಿಕ್ಕಾಟ ಇದೆ. ಆದ್ದರಿಂದ ಹೂಡಿಕೆ ಮಾಡುವಾಗ ಮೈಯೆಲ್ಲ ಕಣ್ಣಾಗಿರಬೇಕು. ಇನ್ನೊಬ್ಬರ ಪರವಾಗಿ ನೀವು ಹೂಡಿಕೆ ನಿರ್ಧಾರಗಳನ್ನು ಮಾಡಬೇಡಿ. ಇನ್ನು ನಿಮ್ಮದೇ ಯಾವುದಾದರೂ ಹಣವಿದ್ದಲ್ಲಿ ಈ ಅವಧಿಯಲ್ಲಿ ತುಂಬ ಸುರಕ್ಷಿತವಾಗಿ, ಸುರಕ್ಷಿತವಾದ ಬ್ಯಾಂಕ್ ಖಾತೆಯಲ್ಲಿ ಇಟ್ಟುಕೊಂಡಿರಿ, ಎಲ್ಲೂ ಹೂಡಿಕೆಯನ್ನೂ ಮಾಡಲಿಕ್ಕೆ ಹೋಗದಿರಿ. 

ಮೀನ : ನಿಮ್ಮ ರಾಶಿಗೆ ಜನ್ಮ ಗುರು. ಅಂದರೆ ಜನ್ಮ ಗುರು ದುಃಖದಾಯಕ ಆಗುತ್ತದೆ. ಇನ್ನು  ಶುಕ್ರನು ಅದೇ ಮನೆಯಲ್ಲಿ ಇದ್ದು, ನೀಡುವ ಫಲ ಅಷ್ಟರಲ್ಲೇ ಇದೆ. ಏಕೆಂದರೆ ಶುಕ್ರನು ಮೀನ ರಾಶಿಯವರಿಗೆ ಅಷ್ಟಮಾಧಿಪತಿ ಆಗುತ್ತದೆ. ಇನ್ನು ಈ ರಾಶಿಯ ಜಾತಕರಿಗೆ ಸದ್ಯಕ್ಕೆ ಏನಾದರೂ ಶುಕ್ರ ದಶೆಯು ನಡೆಯುತ್ತಿದ್ದಲ್ಲಿ ವಾಯು ಪ್ರಕೋಪ, ನರಗಳಿಗೆ ಸಂಬಂಧಿಸಿದ ವ್ಯಾಧಿ, ಪಾರ್ಶ್ವವಾಯುವಿನ ಆತಂಕ ಕಾಡಲಿದೆ. ಇಲ್ಲಿ ಆತಂಕ ಸೃಷ್ಟಿ ಆಗುತ್ತದೆ. ವೈದ್ಯರು ಕೆಲವು ಎಚ್ಚರಿಕೆಗಳನ್ನು ನೀಡಬಹುದು. ಇದರಿಂದ ಆತಂಕ ಆಗುತ್ತದೆ.

ಲೇಖಕರು: ಪ್ರಕಾಶ್ ಅಮ್ಮಣ್ಣಾಯ, ಉಡುಪಿ ಜಿಲ್ಲೆಯ ಕಾಪು ಮೂಲದ ಜ್ಯೋತಿಷಿಗಳು. ವಿವಿಧ ಚುನಾವಣೆಗಳ ಸಂದರ್ಭದಲ್ಲಿ ಕರಾರುವಾಕ್ ಭವಿಷ್ಯ ನುಡಿದು, ಇಡೀ ರಾಜ್ಯದ ಗಮನ ಸೆಳೆದವರು. ವಿವಿಧ ಜ್ಯೋತಿಷ್ಯ ಸಮಸ್ಯೆಗಳಿಗೆ ಪರಿಣಾಮಕಾರಿಯಾದ ಪರಿಹಾರವನ್ನು ಸೂಚಿಸುವುದಕ್ಕೆ ಖ್ಯಾತಿ ಪಡೆದಿದ್ದಾರೆ. 

Latest News

Related Posts