Sri Gurubhyo Logo

2026 ನ್ಯೂಮರಾಲಜಿ ಭವಿಷ್ಯ: ಮದುವೆ, ಉದ್ಯೋಗ, ಹಣಕಾಸು, ಆರೋಗ್ಯ – ಜನ್ಮಸಂಖ್ಯೆ 1ರಿಂದ 9ರವರೆಗೆ

Numerology Yearly Horoscope
ಸಂಖ್ಯಾಶಾಸ್ತ್ರದ ವರ್ಷಭವಿಷ್ಯ ಚಿಹ್ನೆ

2026ನೇ ಇಸವಿ ವರ್ಷಭವಿಷ್ಯ ಹೇಗಿದೆ? ಮದುವೆ ಆಗುತ್ತಾ? ಸಾಲ ತೀರುತ್ತಾ? ಮಕ್ಕಳ ನಿರೀಕ್ಷೆಯಲ್ಲಿ ಇರುವವರಿಗೆ ಅದು ಈಡೇರುತ್ತಾ? ಒಳ್ಳೆ ಉದ್ಯೋಗ ಸಿಗುತ್ತಾ, ವೃತ್ತಿ ಬದುಕಲ್ಲಿ ಏಳ್ಗೆ ಇದೆಯಾ? ವ್ಯಾಪಾರ- ವ್ಯವಹಾರ ಕೈ ಹಿಡಿಯುತ್ತಾ? ಪ್ರೀತಿ- ಪ್ರೇಮದ ವಿಚಾರ ಹೇಗಿರುತ್ತದೆ? ಸಾಲ ತೀರಬೇಕು, ಆದಾಯ ಹೆಚ್ಚು ಮಾಡಿಕೊಳ್ಳಬೇಕು, ಆರೋಗ್ಯ ಸುಧಾರಿಸಬೇಕು ಹೀಗೆ ಅಂದುಕೊಳ್ಳುತ್ತಾ ಇರುವವರಿಗೆ ಇಲ್ಲಿದೆ. 2026ನೇ ಇಸವಿಯ ವರ್ಷಭವಿಷ್ಯವನ್ನು ನೀಡಲಾಗುತ್ತಿದೆ. ಸಂಖ್ಯಾಶಾಸ್ತ್ರದ ಆಧಾರದಲ್ಲಿ, ಅದರೆ 2026ನೇ ಇಸವಿಯಲ್ಲಿ 1ರಿಂದ 9ನೇ ಸಂಖ್ಯೆಯ ತನಕ ಇಡೀ ವರ್ಷ ಹೇಗಿರುತ್ತದೆ ಎಂಬುದರ ಭವಿಷ್ಯ ಇದು. ಒಬ್ಬ ವ್ಯಕ್ತಿಯ ಜನ್ಮದಿನ- ಅಂದರೆ ಹುಟ್ಟಿದ ದಿನಕ್ಕೆ ಒಂದು ಸಂಖ್ಯೆ ಬರುತ್ತದೆ. ಅದರ ಆಧಾರದಲ್ಲಿ ಜನ್ಮಸಂಖ್ಯೆ ತಿಳಿದುಕೊಳ್ಳುವುದನ್ನು ಸಹ ಈ ಲೇಖನದಲ್ಲಿಯೇ ಉಲ್ಲೇಖಿಸಲಾಗಿದೆ. 

ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1:

ಈ ಜನ್ಮ ಸಂಖ್ಯೆಯಲ್ಲಿ ಹುಟ್ಟಿದವರ ಅಧಿಪತಿ ಸೂರ್ಯ. ಈ ವರ್ಷ ನೀವು ಅಂದುಕೊಂಡಿದ್ದನ್ನು ಕಾರ್ಯರೂಪಕ್ಕೆ ತರಲಿದ್ದೀರಿ. ಹಣದ ವಿಚಾರದಲ್ಲಿ ತೆಗೆದುಕೊಂಡ ನಿರ್ಧಾರವನ್ನು ಸರಿಯಾಗಿದೆ ಎಂದು ಸಾಬೀತು ಮಾಡುತ್ತೀರಿ. ಈ ವರ್ಷ ಮದುವೆ ಆಗಬೇಕು ಎಂದುಕೊಂಡಿದ್ದವರು ನಿರ್ಧಾರವನ್ನು ಮುಂದೂಡಲು ತೀರ್ಮಾನಿಸುತ್ತೀರಿ. ಗುರಿ ಮೊದಲು ಈಡೇರಲಿ ಎಂಬುದು ಆದ್ಯತೆ ಆಗುತ್ತದೆ. ಸಂತಾನಕ್ಕಾಗಿ ಪ್ರಯತ್ನ ಮಾಡುತ್ತಿರುವವರಿಗೆ ಜೂನ್ ನಂತರ ಒಳ್ಳೆ ಬೆಳವಣಿಗೆ ಇದೆ. ಉದ್ಯೋಗ ಬದಲಾವಣೆ ಉದ್ದೇಶ ಆಗಿದ್ದಲ್ಲಿ ಮಾರ್ಚ್ ನಂತರ ಪ್ರಯತ್ನಿಸಿ. ವಿದೇಶದಲ್ಲಿ ಉದ್ಯೋಗ- ವ್ಯಾಸಂಗ ಮಾಡಬೇಕು ಎಂದಿರುವವರು ಕೆಲವು ಕಷ್ಟದ ಸನ್ನಿವೇಶಕ್ಕೆ ಹೊಂದಿಕೊಳ್ಳಬೇಕಾಗುತ್ತದೆ. ದೇಹದಲ್ಲಿನ ವಿಟಮಿನ್ ಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆ ಕಾಡಬಹುದು. ಸಾಲ ತೀರಿಸುವುದಕ್ಕಾಗಿ ಮತ್ತೆ ಸಾಲ ಮಾಡುವ ಆಲೋಚನೆ ಬೇಡ. ವ್ಯವಹಾರ- ವ್ಯಾಪಾರ ಮಾಡುವವರಿಗೆ ಮುಖ್ಯವಾದ ತೀರ್ಮಾನ ತೆಗೆದುಕೊಳ್ಳುವುದು ಒತ್ತಡವಾಗಲಿದೆ. ಮನೆ- ಸೈಟು ಖರೀದಿ ಸಾಧ್ಯತೆ ಇದೆ.

ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2:

ಈ ಜನ್ಮ ಸಂಖ್ಯೆಯಲ್ಲಿ ಹುಟ್ಟಿದವರ ಅಧಿಪತಿ ಚಂದ್ರ. ಪದೇಪದೇ ನಿಮ್ಮ ಪ್ಲಾನಿಂಗ್, ಬಜೆಟ್ ವಿಚಾರದಲ್ಲಿ ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ. ಪಿತ್ರಾರ್ಜಿತ ಆಸ್ತಿ ಹಂಚಿಕೆ ಆಗದೆ ಹಾಗೇ ಉಳಿದಿದೆ ಅಂದರೆ ಅದಕ್ಕಾಗಿ ಒತ್ತಡ ಹಾಕಲಿದ್ದೀರಿ. ಮದುವೆ ಪ್ರಯತ್ನಗಳು ಯಶಸ್ವಿ ಆಗುತ್ತವೆ. ಉದ್ಯೋಗಕ್ಕಿಂತ ಸ್ವಂತ ಉದ್ಯಮ ಮಾಡುವ ಕಡೆಗೆ ಒಲವು ಹೆಚ್ಚಿರುತ್ತದೆ. ಕೃಷಿ ಭೂಮಿ ಖರೀದಿ ಪ್ರಯತ್ನ ಮಾಡುತ್ತಾ ಇದ್ದೀರಿ ಅಂತಾದಲ್ಲಿ ಸಫಲರಾಗುತ್ತೀರಿ. ಸಂತಾನಕ್ಕೆ ಪ್ರಯತ್ನಿಸುತ್ತಾ ಇರುವವರಿಗೆ ಸೆಪ್ಟೆಂಬರ್ ನಂತರ ಶುಭವಾದ ಬೆಳವಣಿಗೆ ಇದೆ. ವಿದೇಶ ವ್ಯವಹಾರಗಳು ಮುಂದಕ್ಕೆ ಸಾಗದೆ ನಿಮ್ಮ ಮೇಲೆ ಒತ್ತಡಕ್ಕೆ ಕಾರಣ ಆಗಲಿವೆ. ಅದರಲ್ಲೂ ಈ ಹಿಂದೆ ನಿಮಗೆ ಮಾತು ನೀಡಿದವರು ಕೊನೆ ಕ್ಷಣದಲ್ಲಿ ತಮ್ಮಿಂದ ಸಾಧ್ಯವಿಲ್ಲ ಎಂದು ಹೇಳಿಬಿಡುತ್ತಾರೆ. ಮಸಾಲೆಯುಕ್ತ ಪದಾರ್ಥಗಳು, ಜಿಡ್ಡಿನ ಪದಾರ್ಥಗಳ ಸೇವನೆ, ಜಂಕ್ ಫುಡ್ ನಿಮ್ಮ ಆರೋಗ್ಯದ ಮೇಲೆ ಪರಿಣಾಮವನ್ನು ಬೀರುತ್ತವೆ. ನಿಮಗೆ ಬರುವ ಯಾವುದೇ ಆಫರ್ ಗೆ ‘ಇಲ್ಲ’ ಎನ್ನುವ ಮುಂಚೆ ನಾಲ್ಕಾರು ಬಾರಿ ಆಲೋಚಿಸಿ.

ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3:

ಈ ಜನ್ಮ ಸಂಖ್ಯೆಯಲ್ಲಿ ಹುಟ್ಟಿದವರ ಅಧಿಪತಿ ಗುರು. ಬ್ಯಾಂಕ್ ವ್ಯವಹಾರಗಳನ್ನು ಮಾಡುವಾಗ ನಿಮ್ಮ ಲೆಕ್ಕಾಚಾರ ಸರಿಯಾಗಿದೆ ಎಂಬುದನ್ನು ಖಾತ್ರಿ ಮಾಡಿಕೊಳ್ಳಿ. ಶುರುವಿನಲ್ಲಿ ನಿಮಗೆ ಇದ್ದಂಥ ಉತ್ಸಾಹ- ಆಸಕ್ತಿ ಕೆಲವು ಪ್ರಾಜೆಕ್ಟ್ ಗಳ ಮೇಲೆ ಹೊರಟುಹೋಗುತ್ತದೆ. ಆರ್ಥಿಕ ಸ್ಥಿರತೆ, ಹಣಕಾಸು ವಿಚಾರದಲ್ಲಿ ಬಲಿಷ್ಠರಾಗುವುದಕ್ಕೆ ಆದ್ಯತೆ ನೀಡುತ್ತೀರಿ. ಖರ್ಚಿನ ವಿಚಾರದಲ್ಲಿ ಇತರರು ನಿಮ್ಮನ್ನು ಜಿಗುಟು ಅಂದುಕೊಳ್ಳುವ ಮಟ್ಟಕ್ಕೆ ಕಠಿಣರಾಗುತ್ತೀರಿ. ಪ್ರೀತಿಯಲ್ಲಿ ಇರುವವರಿಗೆ ಉದ್ಯೋಗ- ವ್ಯಾಸಂಗ ಅಥವಾ ಬೇರೆ ಯಾವುದಾದರೂ ಕಾರಣಕ್ಕಾಗಿ ಅಂತರ ಬರಲಿದೆ. ಐವಿಎಫ್ ಮೂಲಕ ಸಂತಾನಕ್ಕೆ ಪ್ರಯತ್ನಿಸುತ್ತಾ ಇರುವವರಿಗೆ ಏಪ್ರಿಲ್ ನಂತರದಲ್ಲಿ ಅನುಕೂಲ ಒದಗಿ ಬರಲಿದೆ. ಹೊಸದಾಗಿ ಉದ್ಯೋಗ ಜೀವನ ಶುರು ಮಾಡುವವರು ಕೆಲವು ರಾಜೀ ಮಾಡಿಕೊಳ್ಳಬೇಕಾಗುತ್ತದೆ. ದೇಹದ ತೂಕಕ್ಕೆ ಸಂಬಂಧಿಸಿದ ಕೆಲವು ಅನಾರೋಗ್ಯ ಸಮಸ್ಯೆಗಳು ನಿಮ್ಮನ್ನು ಕಾಡಬಹುದು. ಫ್ಲ್ಯಾಟ್, ಸಣ್ಣ ಅಳತೆಯ ಕಟ್ಟಿರುವ ಮನೆ ಖರೀದಿ ಮಾಡಬೇಕಿರುವವರಿಗೆ ಅನುಕೂಲ ಇದೆ.

ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4:

ಈ ಜನ್ಮ ಸಂಖ್ಯೆಯಲ್ಲಿ ಹುಟ್ಟಿದವರ ಅಧಿಪತಿ ರಾಹು. ಇತರರ ಮೇಲೆ ನಿರೀಕ್ಷೆ ಇಟ್ಟುಕೊಂಡು ಕೆಲಸ- ಕಾರ್ಯಗಳಲ್ಲಿ ತೊಡಗಿಕೊಳ್ಳುವ ಮುಂಚೆ ಆಲೋಚನೆ ಮಾಡಿ. ಮನೆ- ಸೈಟು, ಜಮೀನು ಹೀಗೆ ಯಾವುದಕ್ಕೇ ಆದರೂ ದೊಡ್ಡ ಮೊತ್ತದ ಅಡ್ವಾನ್ಸ್ ನೀಡುವ ಮುಂಚೆ ನೀವು ಅಂದುಕೊಂಡ ಮೂಲದಿಂದ ಹಣದ ವ್ಯವಸ್ಥೆ ಆಗಬಹುದಾ ಎಂಬುದನ್ನು ಖಾತ್ರಿ ಮಾಡಿಕೊಂಡು, ಮುಂದಕ್ಕೆ ಹೆಜ್ಜೆ ಇಡಿ. ನಿಮಗೆ ಬಂದ ಅವಕಾಶಗಳನ್ನು ಕೌಟುಂಬಿಕ ಕಾರಣಕ್ಕಾಗಿ ಬೇಡ ಎಂದು ಬಿಟ್ಟುಕೊಡಬೇಕಾಗುತ್ತದೆ. ಸೆಕೆಂಡ್ ಹ್ಯಾಂಡ್ ವಿಲಾಸಿ ಬ್ರ್ಯಾಂಡ್ ಕಾರು ಖರೀದಿ ಮಾಡಬೇಕು ಎಂದೇನಾದರೂ ಇದ್ದಲ್ಲಿ ಅಂಥ ನಿರ್ಧಾರ ಕೈಬಿಡುವುದು ಒಳ್ಳೆಯದು. ಪೈಲ್ಸ್, ಫಿಷರ್, ಪಿಸ್ತುಲಾ ಈ ರೀತಿ ತೊಂದರೆ ಕಾಣಿಸಿಕೊಳ್ಳಬಹುದು. ಮುಖ್ಯವಾಗಿ ನಿಮ್ಮ ಕರುಳಿನ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ. ಮದುವೆ ಪ್ರಯತ್ನ ಮಾಡುತ್ತಿರುವವರಿಗೆ ಒಂದಲ್ಲಾ ಒಂದು ಕಾರಣಕ್ಕೆ ಮನಸ್ಸಿಗೆ ಒಪ್ಪುವಂಥ ಸಂಬಂಧ ಕಂಡುಬರಲ್ಲ. ಆದರೆ ಪ್ರೀತಿಯಲ್ಲಿ ಇರುವವರಿಗೆ ವಿವಾಹ ಆಗುವಂಥ ಯೋಗವಿದೆ.

Astrology birth stars: ಅಶ್ವಿನಿಯಿಂದ ರೇವತಿ ತನಕ ಇಪ್ಪತ್ತೇಳು ನಕ್ಷತ್ರಗಳ ಗುಣ- ಸ್ವಭಾವದ ವಿವರಣೆ ಇಲ್ಲಿದೆ

ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5:

ಈ ಜನ್ಮ ಸಂಖ್ಯೆಯಲ್ಲಿ ಹುಟ್ಟಿದವರ ಅಧಿಪತಿ ಬುಧ. ಈ ಹಿಂದಿನ ವರ್ಷಗಳಲ್ಲಿ ಅಂದುಕೊಂಡ ದೊಡ್ಡ ಸಂಗತಿಗಳನ್ನು ಶತಾಯಗತಾಯ ಪೂರ್ಣಗೊಳಿಸುವ ಕಡೆಗೆ ಲಕ್ಷ್ಯ ಇರುತ್ತದೆ. ಇದೇ ವಿಚಾರಕ್ಕೆ ದಂಪತಿ ಮಧ್ಯೆ ಜೋರು ಧ್ವನಿಯ ಮಾತುಕತೆ ಆಗಲಿದೆ. ಕೆಲವರು ಮಾತು ಬಿಡುವ ಮಟ್ಟಕ್ಕೆ ಹೋಗಬಹುದು. ವ್ಯಾಪಾರ- ವ್ಯವಹಾರದಲ್ಲಿ ಆದಾಯ ನಿಮ್ಮ ನಿರೀಕ್ಷೆ ಮಟ್ಟಕ್ಕೆ ಹೋಗುವುದಿಲ್ಲ. ಹೊಸದಾಗಿ ಯಾವುದೇ ಹಣಕಾಸಿನ ಹೂಡಿಕೆ ಮಾಡದಿರುವುದು ಕ್ಷೇಮ. ಉದ್ಯೋಗಿಗಳಿಗೆ ಸವಾಲಿನ- ದೊಡ್ಡ ಪ್ರಾಜೆಕ್ಟ್ ಮುನ್ನಡೆಸುವ ಜವಾಬ್ದಾರಿ ಬರಲಿದೆ. ಇದರಿಂದಾಗಿ ಕೌಟುಂಬಿಕ ವಿಚಾರಗಳ ಕಡೆ ಲಕ್ಷ್ಯ ನೀಡಲು ಸಾಧ್ಯವಾಗುವುದಿಲ್ಲ. ಸಂತಾನಕ್ಕೆ ಪ್ರಯತ್ನಿಸುತ್ತಾ ಇರುವವರು ಕಡ್ಡಾಯವಾಗಿ ವೈದ್ಯರನ್ನು ಭೇಟಿಯಾಗಿ, ಸೂಕ್ತ ಸಲಹೆ- ಔಷಧೋಪಚಾರ ಪಡೆಯಿರಿ. ಈಗ ನಿಮ್ಮ ಬಳಿ ಇರುವ ಸೈಟು ಅಥವಾ ಮನೆಯನ್ನು ಮಾರಿ, ಹೊಸದನ್ನು ಖರೀದಿಸುವ ಉದ್ದೇಶ ಇದ್ದಲ್ಲಿ ಅದರಲ್ಲಿ ಸಫಲರಾಗುತ್ತೀರಿ. ಸ್ನೇಹಿತರ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿ.

ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6:

ಈ ಜನ್ಮ ಸಂಖ್ಯೆಯಲ್ಲಿ ಹುಟ್ಟಿದವರ ಅಧಿಪತಿ ಶುಕ್ರ. ವಿಶೇಷವಾದ ವರ್ಷ ಇದಾಗಿರಲಿದೆ. ಸನ್ಮಾನ, ಗೌರವ, ಬಹುಮಾನ ದೊರೆಯುವಂಥ ವರ್ಷ ಇದಾಗಿರುತ್ತದೆ. ದೊಡ್ಡ ದೊಡ್ಡ ಯೋಜನೆ ಸಾಕಾರ ಆಗಲಿದೆ. ಜ್ಯುವೆಲ್ಲರಿ ಅಂಗಡಿಗಳನ್ನು ನಡೆಸುವವರಿಗೆ, ಸಿನಿಮಾ ನಿರ್ಮಾಪಕರಿಗೆ, ಪರ್ಫ್ಯೂಮ್ ಮಾರಾಟ ಮಳಿಗೆ ನಡೆಸುತ್ತಾ ಇರುವವರಿಗೆ ಆದಾಯದಲ್ಲಿ ಏರಿಕೆ ಆಗುವ ಅವಕಾಶಗಳಿವೆ. ಹೊಸ ಸ್ಥಳಗಳಲ್ಲಿ ವ್ಯವಹಾರ ವಿಸ್ತರಿಸಬೇಕು ಎಂದುಕೊಳ್ಳುತ್ತಾ ಇರುವವರಿಗೆ ಉತ್ತಮ ಸಮಯವಿದು. ಎರಡನೇ ಮದುವೆಗಾಗಿ ಪ್ರಯತ್ನ ಮಾಡುತ್ತಾ ಇರುವವರಿಗೆ ಅದರಲ್ಲಿ ಯಶಸ್ಸು ದೊರೆಯಲಿದೆ. ಉದ್ಯೋಗದಲ್ಲಿ ಹೆಚ್ಚಿನ ಪ್ರಯಾಣ ಮಾಡಬೇಕಾಗಿ ಬರಲಿದ್ದು, ಇದರಿಂದಾಗಿ ಆರೋಗ್ಯದ ಮೇಲೆ ಪರಿಣಾಮ ಆಗಲಿದೆ. ಮುಖ್ಯವಾಗಿ ಗಂಟಲು, ಕೂದಲಿನ ಸಮಸ್ಯೆ ಕಾಡಬಹುದು. ನಿಮ್ಮ ವೃತ್ತಿ- ವ್ಯವಹಾರಕ್ಕೆ ಬೇಕಾದ ಯಂತ್ರೋಪಕರಣಗಳಿಗೆ ಹಣವನ್ನು ವೆಚ್ಚ ಮಾಡಲಿದ್ದೀರಿ. ಬಾಡಿಗೆ ಆದಾಯ ಬರುವಂಥ ಮನೆ ಅಥವಾ ವಾಣಿಜ್ಯ ಸ್ವತ್ತನ್ನು ಖರೀದಿ ಮಾಡುವ ಯೋಗ ಇದೆ. 

ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7:

ಈ ಜನ್ಮ ಸಂಖ್ಯೆಯಲ್ಲಿ ಹುಟ್ಟಿದವರ ಅಧಿಪತಿ ಕೇತು. ಹಲವು ಅನಿರೀಕ್ಷಿತವನ್ನು ಎದುರುಗೊಳ್ಳುವ ವರ್ಷ ಇದಾಗಿರಲಿದೆ. ಹಣಕಾಸಿನ ಹರಿವಿನಲ್ಲಿ ಏರಿಳಿತ ಇರುತ್ತದೆ. ಉಳಿತಾಯಕ್ಕೆ ಆದ್ಯತೆ ನೀಡಬೇಕು. ನಿಮ್ಮ ಕೈ ಸೇರದ ಹಣಕ್ಕೆ ಮೊದಲೇ ಖರ್ಚಿನ ಲೆಕ್ಕಾಚಾರ ಹಾಕಿಕೊಳ್ಳಬೇಡಿ. ಸಂಬಂಧಿಕರ ರೆಫರೆನ್ಸ್ ನಿಂದ ಬರುವಂಥ ವಿವಾಹ ಸಂಬಂಧ ಅನುಕೂಲವಾಗಿ ಮಾರ್ಪಡಲಿದೆ. ಸಾಲ ತೀರಿಸುವುದಕ್ಕೆ ಬೆಳ್ಳಿ- ಚಿನ್ನದ ಮಾರಾಟ ಮಾಡುವ ಬಗ್ಗೆ ಆಲೋಚನೆ ಮಾಡಲಿದ್ದೀರಿ. ಕಾಂಟ್ರಾಕ್ಟ್ ಆಧಾರದಲ್ಲಿ ಕೆಲವು ವರ್ಷಗಳ ಮಟ್ಟಿಗೆ ಮಾತ್ರ ಕೆಲಸ ಇದೆ ಎಂಬ ರೆಫರೆನ್ಸ್ ನಿಮ್ಮ ಸ್ನೇಹಿತರ ಮೂಲಕ ಬರಲಿದೆ. ಆಸ್ತಿ ವ್ಯವಹಾರದಲ್ಲಿ ಕಾನೂನು ವ್ಯಾಜ್ಯಗಳು ಬಗೆಹರಿಸಿಕೊಳ್ಳುವುದಕ್ಕೆ ಹೆಚ್ಚು ಸಮಯವನ್ನು ಮೀಸಲಿಡಬೇಕಾಗುತ್ತದೆ. ಕಿಡ್ನಿ ಸ್ಟೋನ್, ಬಿಪಿ, ಯೂರಿಕ್ ಆಸಿಡ್ ಸಮಸ್ಯೆ ಇಂಥವುಗಳು ಕಾಡಬಹುದು. ನೀರು ಸೇವನೆಗೆ ಆದ್ಯತೆಯನ್ನು ನೀಡಿ. ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿ ಇರುವವರು ವಿವಾದಕ್ಕೆ ಗುರಿ ಆಗುವ ಸಾಧ್ಯತೆ ಇದೆ. ತಾಳ್ಮೆಯಿಂದ ವರ್ತಿಸಿ.

ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8:

ಈ ಜನ್ಮ ಸಂಖ್ಯೆಯಲ್ಲಿ ಹುಟ್ಟಿದವರ ಅಧಿಪತಿ ಶನಿ. ಬೇರೆ ಪ್ರದೇಶಕ್ಕೆ, ದೇಶಕ್ಕೆ ಸ್ಥಳಾಂತರ ಆಗುವ ಬಗ್ಗೆ ಆಲೋಚನೆ ಮಾಡಲಿದ್ದೀರಿ. ಇದಕ್ಕೆ ಪೂರಕವಾಗಿ ಉದ್ಯೋಗದ ವ್ಯವಸ್ಥೆ ಸಹ ಆಗುವ ಅವಕಾಶ ಇದೆ. ತೆರಿಗೆ, ಸರ್ಕಾರಕ್ಕೆ ಕಟ್ಟಬೇಕಾದ ಹಣ ಇಂಥವುಗಳ ಬಗ್ಗೆ ಹೆಚ್ಚಿನ ಗಮನವನ್ನು ನೀಡಿ. ಸ್ವಂತ ವ್ಯವಹಾರ ಮಾಡುತ್ತಿರುವವರು ಹೊಸದಾಗಿ ಹೂಡಿಕೆ ಮಾಡುವುದಕ್ಕೆ ಪಾರ್ಟನರ್ ಗಳನ್ನು ಹುಡುಕಿಕೊಳ್ಳುವ ಸಾಧ್ಯತೆ ಇದೆ. ಮದುವೆ ನಿಶ್ವಯ ಆಗುವಂಥ ಯೋಗ ಇದ್ದು, ನೇರವಂತಿಕೆ ಹಾಗೂ ಪಾರದರ್ಶಕತೆಯಿಂದ ನಡೆದುಕೊಳ್ಳಿ. ಏಕೆಂದರೆ, ನಿಮಗೆ ನಿರುಪದ್ರವಿ ಎನಿಸಿದ ಸುಳ್ಳಿಗೆ ಭಾರೀ ಬೆಲೆ ತೆರುವಂತೆ ಆಗುತ್ತದೆ. ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಇರುವವರಿಗೆ ಡಿಜಿಟಲ್ ಪ್ರಮೋಷನ್ ನಿಂದ ಆದಾಯದಲ್ಲಿ ಏರಿಕೆ ಮಾಡಿಕೊಳ್ಳುವ ಅವಕಾಶ ಸಿಗಲಿದೆ. ವಾಸ್ತು, ಜ್ಯೋತಿಷ್ಯ ಇಂಥ ವೃತ್ತಿಯಲ್ಲಿ ಇರುವವರು ನೀವು ಜನರನ್ನು ತಲುಪುವುದಕ್ಕೆ ಇರುವ ಮಾಧ್ಯಮ ಮಾರ್ಗಗಳನ್ನು ಬದಲಿಸಿಕೊಳ್ಳುವ ಸಾಧ್ಯತೆ ಇದೆ. ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡುವಂಥ ವರ್ಷ ಇದು. 

Sade Sati Shani: ಸಾಡೇಸಾತ್ ಶನಿ ಎಂದರೇನು, ಈ ಅವಧಿಯಲ್ಲಿ ತೆಗೆದುಕೊಳ್ಳಬೇಕಾದ 7 ಮುಂಜಾಗ್ರತೆಗಳೇನು?

ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9:

ಈ ಜನ್ಮ ಸಂಖ್ಯೆಯಲ್ಲಿ ಹುಟ್ಟಿದವರ ಅಧಿಪತಿ ಕುಜ. ನೀವು ಯಾವುದೇ ಕ್ಷೇತ್ರದಲ್ಲಿ ಕಾರ್ಯ ನಿರ್ವಹಣೆ ಮಾಡುವವರಾದರೂ ಕೌಶಲವನ್ನು ಹೆಚ್ಚು ಮಾಡಿಕೊಳ್ಳಲು ಆದ್ಯತೆ ನೀಡುತ್ತೀರಿ. ರಿಸ್ಕ್ ತೆಗೆದುಕೊಂಡ, ಮಾಡಿದಂಥ ಹೂಡಿಕೆಗಳು ಉತ್ತಮ ರಿಟರ್ನ್ಸ್ ನೀಡಲಿವೆ. ಸ್ನೇಹಿತರು- ಸಂಬಂಧಿಗಳು ನಿಮ್ಮಿಂದ ನೆರವನ್ನು ಅಪೇಕ್ಷಿಸಿ ಬರಲಿದ್ದು, ನೀವೂ ಶಕ್ತಿ ಮೀರಿ ಸಹಾಯವನ್ನು ಮಾಡುತ್ತೀರಿ. ಸಂಗಾತಿಯ ಆರೋಗ್ಯ ವಿಚಾರ ಆದ್ಯತೆ ಆಗಲಿದೆ. ಪ್ರೀತಿಯಲ್ಲಿ ಇರುವವರು ಉದ್ದೇಶಪೂರ್ವಕವಾಗಿ ಅಂತರ ಕಾಯ್ದುಕೊಳ್ಳಲು ಪ್ರಯತ್ನಿಸುತ್ತೀರಿ. ನಿಮ್ಮ ಸೈಟು ಅಥವಾ ಜಮೀನು ಮಾರಿ, ಕೆಲವು ದೀರ್ಘಾವಧಿ ಸಾಲಗಳನ್ನು ತೀರಿಸುವುದಕ್ಕೆ ಪ್ರಯತ್ನಿಸುತ್ತೀರಿ. ಇನ್ನೂ ಕೆಲವರು ನಿಶ್ಚಿತ ಆದಾಯಕ್ಕೆ ದಾರಿ ಮಾಡಿಕೊಳ್ಳುತ್ತೀರಿ. ಸಂಬಂಧಿಗಳು ವಿದೇಶದಲ್ಲಿ ಇದ್ದು, ಅವರು ನಿಮ್ಮನ್ನು ಕರೆಸಿಕೊಳ್ಳುವಂಥ ಸಾಧ್ಯತೆ ಇದೆ. ಉದ್ಯೋಗ ಮಾಡುವವರು ಅದರ ಜೊತೆಗೆ ಉಪ ಆದಾಯ ಬರುವಂತೆ ಮಾಡಿಕೊಳ್ಳಲಿದ್ದೀರಿ. ದೊಡ್ಡ ಮೊತ್ತದ ಹೂಡಿಕೆ ಮಾಡುವ ಮುನ್ನ ಸರಿಯಾಗಿ ಆಲೋಚಿಸಿ.

ಲೇಖನ- ಶ್ರೀನಿವಾಸ ಮಠ

ಶ್ರೀನಿವಾಸ ಮಠ

ಸಂಪಾದಕರು, ಶ್ರೀಗುರುಭ್ಯೋ.ಕಾಮ್

ಪತ್ರಿಕೋದ್ಯಮದಲ್ಲಿ ಹದಿನೆಂಟು ವರ್ಷಕ್ಕೂ ಹೆಚ್ಚು ಅನುಭವ ಇರುವ ಲೇಖಕ. ಕನ್ನಡದ ಪ್ರಮುಖ ದಿನಪತ್ರಿಕೆಗಳು ಹಾಗೂ ವಾರಪತ್ರಿಕೆ ಮತ್ತು ಆನ್ ಲೈನ್ ವೆಬ್ ಪೋರ್ಟಲ್ ಗಳಲ್ಲಿ ವಿವಿಧ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ವೈದಿಕ ಜ್ಯೋತಿಷ್ಯವನ್ನು ಪದ್ಧತಿಯಿಂದ ಅಭ್ಯಾಸ ಮಾಡಿರುವಂಥ ಇವರು, ಈ ತನಕ ಮೂರು ಸಾವಿರಕ್ಕೂ ಹೆಚ್ಚು ಜ್ಯೋತಿಷ್ಯ ಲೇಖನಗಳನ್ನು ವಿವಿಧ ವೆಬ್ ಪೋರ್ಟಲ್ ಗಳಿಗಾಗಿ ಬರೆದಿದ್ದಾರೆ. ಅಧ್ಯಾತ್ಮ, ಜ್ಯೋತಿಷ್ಯ ಹಾಗೂ ಧಾರ್ಮಿಕ ವಿಷಯಗಳಲ್ಲಿ ಅಳವಾದ ಜ್ಞಾನ ಮತ್ತು ನಿರಂತರ ಅಧ್ಯಯನ ಇರುವಂಥ ಶ್ರೀನಿವಾಸ ಮಠ ಸದ್ಯಕ್ಕೆ ಬೆಂಗಳೂರಿನಲ್ಲಿ ವಾಸವಿದ್ದು, ಜ್ಯೋತಿಷ್ಯವನ್ನು ವೃತ್ತಿಯಾಗಿ ಸ್ವೀಕರಿಸಿದ್ದಾರೆ.

Latest News

Related Posts