ಮೇಲುಕೋಟೆ ಎಂಬ ಪ್ರಸಿದ್ಧ ಯಾತ್ರಾ ಸ್ಥಳ ಯಾರಿಗೆ ಪರಿಚಯವಿಲ್ಲ! ಆದರೆ ಅದರ ಸಮೀಪದಲ್ಲೇ ಇರುವ ಕೆರೆ ತೊಂಡನೂರು ಎಂಬ ಆಧ್ಯಾತ್ಮಿಕವಾಗಿ ಪ್ರಾಮುಖ್ಯವಾದ ಸ್ಥಳದ ಬಗ್ಗೆ ಬಹಳ ಮಂದಿಗೆ ಪರಿಚಯ ಇಲ್ಲ. ಮಂಡ್ಯ ಜಿಲ್ಲೆಯ ಪಾಂಡವಪುರ ಸಮೀಪ ಈ ಕ್ಷೇತ್ರ ಇದೆ. ರಾಜಧಾನಿ ಬೆಂಗಳೂರು ನಗರದಿಂದ ಇಲ್ಲಿಗೆ ನೂರಾ ನಲವತ್ತು ಕಿಲೋಮೀಟರ್ ದೂರ ಆಗುತ್ತದೆ. ತೊಂಡರ್ ಎಂಬ ಪದದಿಂದ ಬಂದಿರುವ ಹೆಸರು ತೊಂಡನೂರು. ಹೀಗಂದರೆ ಭಕ್ತರು ಅಥವಾ ಅನುಯಾಯಿಗಳು ಎಂದರ್ಥ. ಕೆರೆ ತೊಂಡನೂರಿನಲ್ಲಿ ಕೃತ ಯುಗದಲ್ಲಿ ಪ್ರಹ್ಲಾದರಿಂದ ಪ್ರತಿಷ್ಠಾಪಿಸಿದ ಯೋಗ ನರಸಿಂಹ ದೇವರು, ಸರ್ಪ ರೂಪದಲ್ಲಿ ಇರುವ ರಾಮಾನುಜಾಚಾರ್ಯರ ವಿಗ್ರಹ, ನಂಬಿ ನಾರಾಯಣ, ಧರ್ಮರಾಯನಿಂದ ಪ್ರತಿಷ್ಠಾಪನೆಯಾದ ಪಾರ್ಥಸಾರಥಿ ಅಥವಾ ವೇಣುಗೋಪಾಲ, ತ್ರಿಭಂಗ ಕೃಷ್ಣ ಇಷ್ಟೂ ಇದೆ. ಅಂದ ಹಾಗೆ ಇಲ್ಲಿಯ ಉತ್ಸವಮೂರ್ತಿ ವೇಣುಗೋಪಾಲ. ಈ ಪೈಕಿ ಯೋಗ ನರಸಿಂಹ ದೇವರ ದೇವಸ್ಥಾನ ಹಾಗೂ ಆ ದೇಗುಲದಲ್ಲಿ ರಾಮಾನುಜರ ವಿಗ್ರಹ ಇದ್ದು, ಸಣ್ಣ ಬೆಟ್ಟದ ಮೇಲೆ ಈ ದೇವಾಲಯ ಇದೆ.
ತ್ರಿಭಂಗ ಕೃಷ್ಣ ಎಂಬುದು ಕಲೆಯ ಅದ್ಭುತವನ್ನು ಬಿಂಬಿಸುವ ಮುದ್ದಾದ ಮೂರ್ತಿ. ವಿಗ್ರಹದ ಮೂಗು, ಮೊಣಕೈ ಹಾಗೂ ಹಾಗೂ ಕಾಲಿನ ಹೆಬ್ಬೆರಳು ಒಂದೇ ಸಾಲಿನಲ್ಲಿ ಗೆರೆ ಎಳೆದಂತೆ ಇದೆ. ಆದ್ದರಿಂದ ಇದನ್ನು ತ್ರಿಭಂಗ ಕೃಷ್ಣ ಎನ್ನಲಾಗುತ್ತದೆ. ಈ ದೇಗುಲಗಳಿಗೆ ರಾಮಾನುಜಾಚಾರ್ಯರ ಕಾಲದಿಂದ ಇತಿಹಾಸ ಇದೆ. ಜೈನ ಧರ್ಮವನ್ನು ಅನುಸರಿಸುತ್ತಿದ್ದ ಬಿಟ್ಟಿದೇವ ಎಂಬಾತ ರಾಮಾನುಜಾಚಾರ್ಯರ ಪ್ರಭಾವದಿಂದ ವೈಷ್ಣವ ದೀಕ್ಷೆ ಪಡೆದುಕೊಂಡು, ವಿಷ್ಣುವರ್ಧನ ಎನಿಸಿಕೊಂಡ. ಆತನ ಪ್ರಜೆಗಳು ಸಹ ಶ್ರೀವೈಷ್ಣವರಾದರು.
ಈ ಸ್ಥಳದ ಬಗ್ಗೆ ಮತ್ತೂ ಒಂದು ಆಸಕ್ತಿಕರ ಘಟನೆಯನ್ನು ಹೇಳಲಾಗುತ್ತದೆ. ರಾಮಾನುಜಾಚಾರ್ಯರು ಏಕಕಾಲಕ್ಕೆ ಸಾವಿರ ಮಂದಿಯ ಪ್ರಶ್ನೆಗಳಿಗೆ ಏಕಕಾಲಕ್ಕೆ ಉತ್ತರ ನೀಡಿದರಂತೆ. ಆ ಸಂದರ್ಭದಲ್ಲಿ ತೆರೆಯನ್ನು ಎಳೆಯಲಾಗಿತ್ತಂತೆ. ಅಂಥದ್ದರಲ್ಲೂ ಒಬ್ಬ ವ್ಯಕ್ತಿಯನ್ನು ಅದನ್ನು ಸರಿಸಿ ನೋಡಿದಾಗ ಸಾವಿರ ತಲೆಯ ಸರ್ಪ (ರಾಮಾನುಜಾಚಾರ್ಯರನ್ನು ಆದಿಶೇಷನ ಅಂಶ ಎನ್ನಲಾಗುತ್ತದೆ) ಕಂಡುಬಂದಿತ್ತಂತೆ.
ಯೋಗ ನರಸಿಂಹ ದೇವರಿಗೆ ವಸ್ತ್ರ ಸಮರ್ಪಣೆ
ಇನ್ನು ಆರಂಭದಲ್ಲಿಯೇ ಹೇಳಿದಂತೆ, ಪ್ರಹ್ಲಾದರಿಂದ ಪ್ರತಿಷ್ಠಾಪಿಸಲಾದ ಯೋಗ ನರಸಿಂಹ ದೇವರಿಗೆ ವಸ್ತ್ರ ಸಮರ್ಪಣೆ ಮಾಡುವ ಪರಿಪಾಠ ಇದೆ. ಮನಸ್ಸಿನಲ್ಲಿ ಬೇಡಿಕೆಗಳಿದ್ದು, ಅದನ್ನು ಅನುಗ್ರಹಿಸುವಂತೆ ಭಕ್ತರು ಇಲ್ಲಿಗೆ ವಸ್ತ್ರವನ್ನು ಅರ್ಪಿಸುತ್ತಾರೆ. ಅಂದರೆ ಬಿಳಿ ಪಂಚೆಯನ್ನು ನರಸಿಂಹ ದೇವರ ವಿಗ್ರಹಕ್ಕೆ ಬಳಸಿಕೊಳ್ಳುವಂತೆ ಕೇಳಲಾಗುತ್ತದೆ. ಅದೇ ರೀತಿ ಗರ್ಭ ಗುಡಿಯ ಸಮೀಪದಲ್ಲೇ ಇರುವ ರಾಮಾನುಜಾಚಾರ್ಯರ ವಿಗ್ರಹಕ್ಕೆ ಕಾಷಾಯ ವಸ್ತ್ರ (ಸಂನ್ಯಾಸಿಗಳಾದವರಿಗೆ ಅರ್ಪಿಸುವಂಥ ವಸ್ತ್ರ) ಅರ್ಪಿಸುವ ಪದ್ಧತಿ ಇದೆ.
ಆ ಭಗವಂತನೇ ರಾಮಾನುಜಾಚಾರ್ಯರಿಂದ ಮಂತ್ರೋಪದೇಶ ಪಡೆದು ವೈಷ್ಣವ ನಂಬಿ ಎನಿಸಿದ ವಿಶಿಷ್ಟ ಕ್ಷೇತ್ರ ತಿರುಕ್ಕುರುಂಗುಡಿ
ಉದ್ಯೋಗ ಸಮಸ್ಯೆ, ಮನೆಯಲ್ಲಿ ಸಮಸ್ಯೆಗಳು, ವಿವಾಹ ಪ್ರತಿಬಂಧಕ, ಗ್ರಹಗಳ ದುಷ್ಪರಿಣಾಮಗಳು ಸೇರಿದಂತೆ ಇತರ ತೊಂದರೆಗಳನ್ನು ನಿವಾರಿಸುವಂತೆ ಕೋರಿಕೊಂಡು, ಯೋಗ ನರಸಿಂಹ ದೇವರಿಗೆ ವಸ್ತ್ರ ಸಮರ್ಪಣೆಯನ್ನು ಮಾಡಲಾಗುತ್ತದೆ. ಇದೇ ಸಂದರ್ಭದಲ್ಲಿ ರಾಮಾನುಜಾಚಾರ್ಯರ ವಿಗ್ರಹಕ್ಕೂ ಕಾಷಾಯ ವಸ್ತ್ರವನ್ನು ಅರ್ಪಿಸಲಾಗುತ್ತದೆ. ಇಲ್ಲಿಗೆ ತೆರಳಬೇಕಿದ್ದಲ್ಲಿ ಬೆಳಗ್ಗೆ ದೇವರಿಗೆ ಅಭಿಷೇಕ ಮಾಡುವ ಹೊತ್ತಿಗೆ ಈ ಸ್ಥಳದಲ್ಲಿ ಇರುವಂತೆ ಸಮಯ ಮಾಡಿಕೊಂಡು ಹೋಗುವುದು ಉತ್ತಮ.
ದಂಡ ಸ್ಪರ್ಶದಿಂದ ನೆಗೆಟಿವ್ ಎನರ್ಜಿ ದೂರ
ಇನ್ನು ಯೋಗ ನರಸಿಂಹ ದೇವರ ಆಲಯದಲ್ಲಿ ದಂಡವೊಂದು ಇದ್ದು, ಇದರ ಸ್ಪರ್ಶ ಮಾತ್ರದಿಂದ ನೆಗೆಟಿವ್ ಎನರ್ಜಿ ಎಂದೆನಿಕೊಂಡಿರುವುದು ಆ ವ್ಯಕ್ತಿಯಿಂದ ದೂರವಾಗುತ್ತದೆ ಎಂಬುದು ಪ್ರತೀತಿ. ನೆಗೆಟಿವ್ ಎನರ್ಜಿ ಎಂಬುದರ ಅರ್ಥ ತುಂಬ ವಿಶಾಲವಾದದ್ದು. ಆದ್ದರಿಂದ ಇಲ್ಲಿಗೆ ಬರುವ ಎಲ್ಲ ಭಕ್ತರೂ ದಂಡದ ಸ್ಪರ್ಶ ಮಾಡಿಸಿಕೊಳ್ಳುತ್ತಾರೆ. ಇನ್ನು ವಸ್ತ್ರ ಸಮರ್ಪಣೆ ಎಂಬುದು ಆಯಾ ಭಕ್ತರ ವಿವೇಚನೆಗೆ ಬಿಟ್ಟಂಥ ಸಂಗತಿ. ಉಳಿದಂತೆ ಯಾವುದೇ ನರಸಿಂಹ ದೇವರ ದೇಗುಲಕ್ಕೆ ತೆರಳುವಾಗ ಸ್ವಾತಿ ನಕ್ಷತ್ರ ಇರುವಂಥ ದಿನ ತೆರಳುವುದು ವಿಶೇಷ ಫಲ. ಏಕೆಂದರೆ ನರಸಿಂಹ ದೇವರ ನಕ್ಷತ್ರ ಸ್ವಾತಿ ನಕ್ಷತ್ರ ಎಂಬ ಕಾರಣದಿಂದ ಹೀಗೆ ಹೇಳಲಾಗುತ್ತದೆ.
ಸಾಮಾನ್ಯವಾಗಿಯೇ ಹೇಳುವುದಾದರೆ ಯಾವುದೇ ದಿನ ಆ ಭಗವಂತನ ದರ್ಶನ ಮಾಡುವುದು ಶ್ರೇಷ್ಠವೇ ಹೌದು. ಮಂಡ್ಯ ಜಿಲ್ಲೆಯ ಪಾಂಡವಪುರಕ್ಕೆ ಸಮೀಪ ಇರುವ ಈ ಕ್ಷೇತ್ರಕ್ಕೆ ತೆರಳಿದ ಮೇಲೆ ಇಲ್ಲಿನ ತೊಂಡನೂರು ಕೆರೆ, ಮೇಲುಕೋಟೆಯ ಚೆಲುವನಾರಾಯಣ, ಮದ್ದೂರಿನ ಬಳಿ ಇರುವ ಎಂಬಾರ್ ವೃಂದಾವನ (ಇವರು ರಾಮಾನುಜಾಚಾರ್ಯರ ಪೂರ್ವಾಶ್ರಮದ ಸೋದರ) ಇವಿಷ್ಟನ್ನೂ ನೋಡಿಕೊಂಡು ಬರಬಹುದು. ಇನ್ನು ಕೆರೆ ತೊಂಡನೂರು ದೇವಾಲಯದ ಪೂಜಾ ಕೈಂಕರ್ಯ ಮಾಡುವ ರಘುರಾಮ ಭಟ್ಟರ ಸಂಪರ್ಕ ಸಂಖ್ಯೆ ಮೊಬೈಲ್ ಫೊನ್- 94493-72453. ದೇಗುಲದ ಸಮಯ ಬೆಳಗ್ಗೆ 9.30ರಿಂದ ಸಂಜೆ 5.30ರ ತನಕ ಇರುತ್ತದೆ.
ತಲುಪುವುದು ಹೇಗೆ?
ಬೆಂಗಳೂರಿನಿಂದ 140 ಕಿಲೋಮೀಟರ್ ಮತ್ತು ಮೈಸೂರಿನಿಂದ 30 ಕಿಲೋಮೀಟರ್ ಮತ್ತು ಮೇಲುಕೋಟೆಯಿಂದ 20 ಕಿಲೋಮೀಟರ್ ಆಗುತ್ತದೆ. ಇದು ರಸ್ತೆ ಮತ್ತು ರೈಲು ಮೂಲಕ ಉತ್ತಮ ಸಂಪರ್ಕ ಹೊಂದಿದೆ. ಇನ್ನು ಹತ್ತಿರದ ರೈಲು ನಿಲ್ದಾಣ ಅಂದರೆ ಪಾಂಡವಪುರ.