Sri Gurubhyo Logo

Upanayanam explainer: ಉಪನಯನ ಯಾವ ವಯಸ್ಸಿನಲ್ಲಿ ಮಾಡಬೇಕು, ಗುರು ಬಲ, ಗರಿಷ್ಠ ವಯಸ್ಸೇನು ಇತ್ಯಾದಿ ಮಾಹಿತಿ ಇಲ್ಲಿದೆ

Astrologer Manjunath Bharadwaj
ಮಂಜುನಾಥ್ ಭಾರದ್ವಾಜ್

ಈ ಲೇಖನದಲ್ಲಿ ಉಪನಯನ ಅಥವಾ ಬ್ರಹ್ಮೋಪದೇಶದ ವಿಚಾರವಾಗಿ ಶಾಸ್ತ್ರ ಸಮ್ಮತವಾದ ಸಂಗತಿಗಳನ್ನು ಇಲ್ಲಿ ನೀಡಲಾಗುತ್ತದೆ. ಈ ಬಗ್ಗೆ ವಿವಿಧ ಶಾಸ್ತ್ರಕಾರರು, ಋಷಿಗಳು, ಮಹಾಮಹಿಮರು ತಂತಮ್ಮ ಅಭಿಪ್ರಾಯಗಳನ್ನು ದಾಖಲಿಸಿದ್ದಾರೆ. ಈಗ ಪ್ರಶ್ನೋತ್ತರ ರೂಪದಲ್ಲಿ ಉಪನಯನದ ಕುರಿತು ಮಾಹಿತಿ ಹಂಚಿಕೊಳ್ಳಲಾಗುತ್ತಿದೆ. ಇಲ್ಲಿರುವ ಪ್ರಶ್ನೆಗಳ ಹೊರತಾಗಿಯೂ ಇನ್ನೇನಾದರೂ ಸಂದೇಹಗಳಿದ್ದಲ್ಲಿ ಲೇಖನದ ಕೊನೆಯಲ್ಲಿ ನೀಡಲಾಗುವ ಸಂಪರ್ಕ ಸಂಖ್ಯೆಗೆ ಕರೆ ಮಾಡಬಹುದು

# ಯಾವ ವಯಸ್ಸಿನಲ್ಲಿ ಉಪನಯನ ಮಾಡಬೇಕು?

ಗರ್ಭಾಷ್ಟಮ, ಅಂದರೆ ತಾಯಿಯ ಗರ್ಭದಿಂದ ಲೆಕ್ಕ ಹಿಡಿದು ಎಂಟನೇ ವಯಸ್ಸಿನಲ್ಲಿ, ಐದು ಅಥವಾ ಏಳನೇ ವಯಸ್ಸಿನಲ್ಲಿ ಬ್ರಾಹ್ಮಣನ ಉಪನಯನ ಆಗಬೇಕು. ಕ್ಷತ್ರಿಯ ಹನ್ನೊಂದನೇ ವಯಸ್ಸಿನಲ್ಲಿ ಯಜ್ಞೋಪವೀತ ಧಾರಣೆ ಮಾಡಿಕೊಳ್ಳಬೇಕು. ಈ ವಿಚಾರದಲ್ಲಿ ಇನ್ನೂ ಮುಂದುವರಿದು, ಬ್ರಹ್ಮತೇಜಸ್ಸನ್ನು ಬಯಸುವ ಬ್ರಾಹ್ಮಣ ಐದನೇ ವಯಸ್ಸಿನಲ್ಲಿ, ಬಲದ ವೃದ್ಧಿ ಬಯಸುವ ಕ್ಷತ್ರಿಯ ಆರನೇ ವಯಸ್ಸಿನಲ್ಲಿ, ಸಂಪತ್ತು ಪ್ರಾಪ್ತಿ ನಿರೀಕ್ಷೆ ಮಾಡುವ ವೈಶ್ಯ ವರ್ಣದವರು ಎಂಟನೇ ವಯಸ್ಸಿನಲ್ಲಿ ಉಪನಯನ ಮಾಡಿಕೊಳ್ಳಬೇಕು ಎಂಬುದು ಮನು ವಾಕ್ಯವಾಗಿದೆ. ಇನ್ನು ವಿಷ್ಣುವಿನ ಪ್ರಕಾರ, ಧನದ ಇಚ್ಛೆಯುಳ್ಳವನು ಆರನೇ ವಯಸ್ಸಿನಲ್ಲೂ, ವಿದ್ಯಾಕಾಂಕ್ಷಿಯಾದವನು ಏಳನೇ ವರ್ಷದಲ್ಲಿ, ಎಲ್ಲ ವಸ್ತುಗಳನ್ನು ಬಯಸುವಂಥವನು ಎಂಟನೇ ವಯಸ್ಸಿನಲ್ಲಿ, ಕಾಂತಿ- ತೇಜಸ್ಸು ಬಯಸುವ ವ್ಯಕ್ತಿ ಒಂಬತ್ತನೇ ವರ್ಷದಲ್ಲಿ  ಉಪನಯನ ಆಗಬೇಕು. ಬಹುತೇಕ ಶಾಸ್ತ್ರಕಾರರು ಗರ್ಭಾಷ್ಟಮ, ಅಂದರೆ ಏಳನೇ ವಯಸ್ಸಿನಲ್ಲಿ ಉಪನಯನ ಮಾಡುವುದರ ಪರವಾದ ಅಭಿಪ್ರಾಯ ಹೊಂದಿದ್ದಾರೆ. ಆರನೇ ವರ್ಷದಲ್ಲಿ ಉಪನಯನ ಆಗುವುದಕ್ಕೆ ಬಹುತೇಕ ಶಾಸ್ತ್ರಜ್ಞರ ಸಹಮತ ಇಲ್ಲ.

Saturn transit in Aquarius: ಕುಂಭ ರಾಶಿಯ ಶನಿ ಸಂಚಾರದಿಂದ ಮೇಷ ರಾಶಿಯಿಂದ ಮೀನದ ತನಕ ಶುಭಾಶುಭ ಫಲಗಳೇನು?

ಅಪಸ್ತಂಬರ ಪ್ರಕಾರ, ಬ್ರಹ್ಮತೇಜಸ್ಸನ್ನು ಬಯಸುವವರು ಏಳನೇ ವಯಸ್ಸಿನಲ್ಲಿ, ಆಯುಷ್ಯವನ್ನು ಬಯಸುವವರು ಎಂಟನೇ ವಯಸ್ಸಿನಲ್ಲಿ, ತೇಜಸ್ಸು- ಕಾಂತಿಯ ಅಪೇಕ್ಷಿತರು ಒಂಬತ್ತನೇ ವಯಸ್ಸಿನಲ್ಲಿ, ಅನ್ನ ಇತ್ಯಾದಿ ಸಮೃದ್ಧಿ ಬಯಸುವಂಥವರು ಹತ್ತನೇ ವರ್ಷದಲ್ಲಿ, ಇಂದ್ರಿಯಗಳಿಂದ ಅಪೇಕ್ಷಿಸುವಂಥವರು ಹನ್ನೊಂದರನೇ ವಯಸ್ಸಲ್ಲಿ, ಪಶು ಸಂಪತ್ತು ವೃದ್ಧಿಯನ್ನು ಬಯಸುವಂತಹವನು ಹನ್ನೆರಡನೇ ವರ್ಷದಲ್ಲಿ ಯಜ್ಞೋಪವೀತ ಧರಿಸಬೇಕು ಎಂದು ಹೇಳಲಾಗಿದೆ.

# ಉಪನಯನಕ್ಕೆ ಗರಿಷ್ಠ ವಯೋಮಿತಿ ಹೇಳಲಾಗಿದೆಯಾ?

ಹೌದು. ಬ್ರಾಹ್ಮಣನಿಗೆ ಹದಿನಾರು ವರ್ಷ, ಕ್ಷತ್ರಿಯನಿಗೆ ಇಪ್ಪತ್ತೆರಡು ವರ್ಷ ಹಾಗೂ ವೈಶ್ಯರಿಗೆ ಇಪ್ಪತ್ನಾಲ್ಕು ವರ್ಷ ಎಂದು ಹೇಳಲಾಗಿದೆ. 

# ಉಪನಯನ ಮಾಡುವುದಕ್ಕೆ ಸೂಕ್ತ ಕಾಲ ಯಾವುದು?

ಬ್ರಾಹ್ಮಣರಿಗೆ ವಸಂತ ಋತುವಿನಲ್ಲಿ, ಕ್ಷತ್ರಿಯರಿಗೆ ಗ್ರೀಷ್ಮದಲ್ಲಿ ಹಾಗೂ ವೈಶ್ಯರಿಗೆ  ವರ್ಷ ಋತುವಿನ ಅಂತ್ಯದಲ್ಲಿ ಎಂದು ಹೇಳಲಾಗಿದೆ. ಮಾಘ ಮಾಸದಿಂದ ಜ್ಯೇಷ್ಠ ಮಾಸದ ತನಕ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮೂರೂ ವರ್ಣದವರಿಗೆ ಶುಭ ಎನ್ನಲಾಗಿದೆ. ಮಾಘದಿಂದ ಆಷಾಢದ ತನಕ ಆರು ತಿಂಗಳಲ್ಲಿ ಉಪನಯನ, ಚೌಲ, ಅನ್ನಪ್ರಾಶನ ಇವುಗಳನ್ನು ಮಾಡಬಹುದು. ಶ್ರಾವಣಾದಿ ಮಾಸಗಳಲ್ಲಿ ಮಾಡಬಾಎದಯ ಎಂದು ಶಾಸ್ತ್ರಕಾರರ ಅಭಿಪ್ರಾಯ ಇದೆ. ಇನ್ನು ಮೈತ್ರೇಯ ಸೂತ್ರ ಹೇಳುವಂತೆ, ವಸಂತ ಋತುವಿನಲ್ಲಿ ಬ್ರಾಹ್ಮಣ, ಗ್ರೀಷ್ಮದಲ್ಲಿ ಕ್ಷತ್ರಿಯ ಮತ್ತು ಶರದ್ ಋತುವಿನಲ್ಲಿ ವೈಶ್ಯರು ಉಪನಯನ ಮಾಡಬಹುದು. ಅಥವಾ ಮಾಘದಿಂದ ಆಷಾಢದ ತನಕ ಆರು ತಿಂಗಳು ಉತ್ತರಾಯಣದಲ್ಲಿ ಉಪನಯನಕ್ಕೆ ಪ್ರಶಸ್ತವಾದ ಕಾಲ.

# ಯಾವ ಸಮಯದಲ್ಲಿ ಉಪನಯನ ಮಾಡಬಾರದು?

ಬೃಹಸ್ಪತಿಯ ವಚನದಂತೆ, ಜನ್ಮನಕ್ಷತ್ರ, ಜನ್ಮಮಾಸ, ಜನ್ಮದಿನ ಹಾಗೂ ಜನ್ಮ ಸಮಯದಲ್ಲಿ ಮತ್ತು ಜ್ಯೇಷ್ಠ ಮಾಸದಲ್ಲಿ ಒಬ್ಬನೇ ಮಗ ಅಥವಾ ಮಗಳು ಇರುವವರು ಯಾವುದೇ ಶುಭ ಕಾರ್ಯ ಮಾಡಬಾರದು.

# ಗುರು ಶಾಂತಿ ಹಾಗೂ ಅದಕ್ಕೆ ಹೊರತಾದ ಸಂಗತಿಗಳೇನು?

ಉಪನಯನದ ವೇಳೆ ಜನ್ಮ ರಾಶಿಯಿಂದ ಒಂದು, ಮೂರು, ಆರನೇ ಅಥವಾ ಹತ್ತನೇ ಮನೆಯಲ್ಲಿ ಗುರು ಸಂಚಾರ ಇತ್ತೆಂದರೆ, ಒಂದು ಸಲ ಗುರು ಶಾಂತಿ ಆಗಬೇಕು. ಎಂಟನೇ ವಯಸ್ಸಿನಲ್ಲಿ ಬಾಲಕನಿಗೆ ಗುರು ಬಲ ಇಲ್ಲ ಎಂದಾದಲ್ಲಿ ಚೈತ್ರ ಮಾಸದಲ್ಲಿ ಮತ್ತು ಮೀನ ರಾಶಿಯಲ್ಲಿ ರವಿ ಗ್ರಹ ಇರುವಾಗ ಉಪನಯನ ಮಾಡಬೇಕು. ಆ ವಯಸ್ಸು ಮೀರಿದೆ, ಗುರು ಗ್ರಹವು ನಾಲ್ಕು, ಎಂಟು, ಹನ್ನೆರಡನೇ ಮನೆಯಲ್ಲಿ ಇದೆ ಎಂದಾಗ ಎರಡು ಸಲ ಗುರು ಶಾಂತಿ ಆಗಬೇಕು. ಇಲ್ಲಿ ಇನ್ನೂ ಒಂದು ವಿಚಾರ ಇದೆ. ಜನ್ಮರಾಶಿ, ಎಂಟನೇ ಮನೆ, ಸಿಂಹ ರಾಶಿಯಲ್ಲಿ ಅಥವಾ ಗುರುವಿಗೆ ನೀಚ ಸ್ಥಿತಿಯಾದ ಮಕರದಲ್ಲೇ ಗುರು ಇದ್ದರೂ ಮೀನ ರಾಶಿಯಲ್ಲಿ ರವಿ ಇದ್ದಾಗ ಉಪನಯನ ಶುಭ ಎಂದು ಹೇಳಲಾಗಿದೆ. ನಾರದ ಮಹರ್ಷಿಗಳ ಅಭಿಮತದಂತೆ, ಗುರುಬಲಯುಕ್ತನಾಗಿ ಇಲ್ಲ ಎಂದಾಗ ಬೃಹಸ್ಪತಿ ಶಾಂತಿ ಮಾಡಿದಲ್ಲಿ ಬಲ ದೊರೆಯುತ್ತದೆ. ಆದ್ದರಿಂದ ಇತರ ವರ್ಷಗಳಲ್ಲಿ ಉಪನಯನ ಮಾಡಬೇಕು ಎಂದುಕೊಂಡಾಗ ಈ ಅಂಶ ಗಮನದಲ್ಲಿ ಇರಬೇಕು.

# ಉಪನಯನಕ್ಕೆ ಸೂಕ್ತ ತಿಥಿ ಯಾವುದು?

ಕೃಷ್ಣ ಹಾಗೂ ಶುಕ್ಲ ಈ ಎರಡೂ ಪಕ್ಷಗಳಲ್ಲಿ  ತೃತೀಯಾ, ಪಂಚಮಿ, ಷಷ್ಠಿ, ದ್ವಿತೀಯಾ ಹಾಗೂ ಸಪ್ತಮಿ ತಿಥಿಗಳು ಉಪನಯನಕ್ಕೆ ಶುಭ ಎಂಬ ಅಭಿಪ್ರಾಯ ಇದೆ. ಆದರೆ ಸಪ್ತಮಿ ತಿಥಿಯಂದು ಉಪನಯನ ನಿಗದಿ ಮಾಡಬೇಕು ಎಂದಾದರೆ ಚಂದ್ರ ಶುಭ ಸ್ಥಾನದಲ್ಲಿರಬೇಕು, ಲಗ್ನ ಬಲವಾಗಿರಬೇಕು ಎಂದು ತಿಳಿಸಲಾಗಿದೆ.

# ಯಾವ ನಕ್ಷತ್ರವು ಉಪನಯನಕ್ಕೆ ಶ್ರೇಷ್ಠ?

ನಾರದರ ಪ್ರಕಾರ, ಹಸ್ತಾ, ಚಿತ್ತಾ, ಸ್ವಾತಿ, ರೇವತಿ, ಪುಷ್ಯ, ಪುನರ್ವಸು, ಉತ್ತರಾ ಫಲ್ಗುಣಿ, ಉತ್ತರಾಷಾಢ, ಶ್ರವಣ, ಧನಿಷ್ಠಾ, ಶತಭಿಷಾ, ಅಶ್ವಿನಿ, ಅನೂರಾಧ, ರೋಹಿಣಿ ಈ ನಕ್ಷತ್ರಗಳು ಇರುವ ದಿನ ಉಪನಯನಕ್ಕೆ ಶುಭ. ಬೃಹಸ್ಪತಿಯ ಪ್ರಕಾರ ಮೃಗಶಿರಾ ನಕ್ಷತ್ರ ಕೂಡ ಶುಭ. ಬ್ರಾಹ್ಮಣರು ಪುನರ್ವಸು ನಕ್ಷತ್ರ ಇರುವ ದಿನ ಉಪನಯನ ಮಾಡಿಕೊಳ್ಳಬಾರದು ಎಂಬ ಅಭಿಪ್ರಾಯ ಇದೆ.

# ಬ್ರಹ್ಮೋಪದೇಶಕ್ಕೆ ಯಾವ ವಾರ ಸೂಕ್ತ?

ನಾರದರು ಹೇಳಿರುವಂತೆ, ಗುರುವಾರ, ಶುಕ್ರವಾರ ಹಾಗೂ ಬುಧವಾರ ಎಲ್ಲರಿಗೂ ಶುಭ. ಸೋಮವಾರ, ಭಾನುವಾರ ಮಧ್ಯಮ. ಸಾಮವೇದದವರಿಗೆ ಹಾಗೂ ಕ್ಷತ್ರಿಯರಿಗೆ ಮಂಗಳವಾರ ಶುಭ. ಬೃಹಸ್ಪತಿ ತಿಳಿಸಿರುವಂತೆ, ಋಗ್ವೇದಿಗಳಿಗೆ ಗುರುವಾರ, ಯಜುರ್ವೇದಿಗಳಿಗೆ ಬುಧವಾರ, ಸಾಮವೇದಿಗಳಿಗೆ ಮಂಗಳವಾರ ಮತ್ತು ಅಥರ್ವವೇದಿಗಳಿಗೆ ಭಾನುವಾರ ಒಳ್ಳೆಯದಾಗಿರುತ್ತದೆ. ಅಂದ ಹಾಗೆ ಮುಹೂರ್ತ ವಿಚಾರವಾಗಿ ಜ್ಯೋತಿಷಿಗಳನ್ನು ಕೇಳಲೇಬೇಕು.

# ಉಪನಯನ ಮಾಡಿಸುವುದಕ್ಕೆ ಯಾರ್ಯಾರಿಗೆ ಅಧಿಕಾರ ಇರುತ್ತದೆ?

ಬ್ರಾಹ್ಮಣರ ವಿಚಾರದಲ್ಲಿ ತಂದೆಯೇ ಮಗನ ಉಪನಯನ ಮಾಡಬೇಕು. ಹಾಗೊಂದು ವೇಳೆ ತಂದೆಯು ಇಲ್ಲದಿದ್ದಲ್ಲಿ ಅಥವಾ ಉಪನಯನ ಮಾಡುವ ಸ್ಥಿತಿಯಲ್ಲಿ ಇಲ್ಲ ಅಂತಾದರೆ ಆಗ ಕ್ರಮವಾಗಿ ಅಜ್ಜ (ತಂದೆಯ ತಂದೆ), ಅಣ್ಣ, ಸಜಾತೀಯ, ಸಗೋತ್ರಿ ಹಾಗೂ ಬ್ರಾಹ್ಮಣ ಹೀಗೆ ಅಧಿಕಾರ ಬರುತ್ತದೆ. ದೊಡ್ಡಪ್ಪ, ಚಿಕ್ಕಪ್ಪನಿಗೆ ಅಣ್ಣನಿಗಿಂತ ಮುಂಚಿನ ಅಧಿಕಾರ ಇರುತ್ತದೆ. ಕ್ಷತ್ರಿಯರು, ವೈಶ್ಯರಿಗೆ  ಪುರೋಹಿತರೇ ಉಪನಯನ ಮಾಡಿಸುತ್ತಾರೆ. ಯಾಜ್ಞವಲ್ಕ್ಯರ ಪ್ರಕಾರ ಈಗಾಗಲೇ ಉಪನಯನ ಆದ ಅಣ್ಣನು ತನ್ನ ತಮ್ಮಂದಿರ ಬ್ರಹ್ಮೋಪದೇಶ ಮಾಡಬಹುದು.

 ಲೇಖಕರು- ವಿದ್ವಾನ್ ಮಂಜುನಾಥ್ ಭಾರದ್ವಾಜ್ (ಜ್ಯೋತಿಷಿಗಳು- ಪುರೋಹಿತರು), ಜಾತಕಗಳನ್ನು ಮಾಡಿಸಲು, ಪೌರೋಹಿತ್ಯಕ್ಕೆ ಹಾಗೂ ಜ್ಯೋತಿಷಕ್ಕೆ ಸಂಬಂಧಿಸಿದಂತೆ ವೈಯಕ್ತಿಕವಾಗಿ ಭೇಟಿ ಮಾಡುವುದಕ್ಕೆ ಮೊಬೈಲ್ ಫೋನ್ ಸಂಖ್ಯೆ- 8050789904 ಸಂಪರ್ಕಿಸಿ.

Latest News

Related Posts