ಕಲಿಯುಗದ ಕಾಮಧೇನು, ಕಲ್ಪವೃಕ್ಷ ಎಂದೇ ಖ್ಯಾತರಾದ ಮಂತ್ರಾಲಯದ ಮಹಾನ್ ಯತಿಶ್ರೇಷ್ಠ ಶ್ರೀ ರಾಘವೇಂದ್ರ ತೀರ್ಥರ 431ನೇ ವರ್ಧಂತಿ ಮಹೋತ್ಸವವು ಈ ವರ್ಷ ಫೆಬ್ರವರಿ 24ರಂದು (ಫಾಲ್ಗುಣ ಶುಕ್ಲ ಸಪ್ತಮಿ) ನಡೆಯುತ್ತಿದೆ. ಭಕ್ತರ ಸಂಕಷ್ಟಗಳಿಗೆ ಸ್ಪಂದಿಸುವ, ‘ನಂಬಿದವರ ಕೈಬಿಡದ’ ಗುರುರಾಯರ ಜನ್ಮದಿನವು ಕೋಟ್ಯಂತರ ಭಕ್ತರಿಗೆ ಹಬ್ಬದ ಸಂಭ್ರಮವಾಗಿದೆ.
ಐತಿಹಾಸಿಕ ಹಿನ್ನೆಲೆ ಮತ್ತು ಜನನ
ಶ್ರೀ ಗುರುರಾಯರು ಕ್ರಿ.ಶ. 1595ರಲ್ಲಿ (ಮನ್ಮಥನಾಮ ಸಂವತ್ಸರ) ತಮಿಳುನಾಡಿನ ಭುವನಗಿರಿಯಲ್ಲಿ ವೀಣಾ ವಿದ್ವಾಂಸರಾದ ತಿಮ್ಮಣ್ಣ ಭಟ್ಟ ಮತ್ತು ಗೋಪಿಕಾಂಬೆಯ ಪುತ್ರನಾಗಿ ಜನಿಸಿದರು. ಇವರ ಪೂರ್ವಾಶ್ರಮದ ಹೆಸರು ವೆಂಕಟನಾಥ. ಬಾಲ್ಯದಿಂದಲೇ ಅಪ್ರತಿಮ ಪ್ರತಿಭಾವಂತರಾಗಿದ್ದ ಇವರು, ವಿದ್ಯಾಭ್ಯಾಸದ ನಂತರ ಸನ್ಯಾಸ ಸ್ವೀಕರಿಸಿ ‘ರಾಘವೇಂದ್ರ ತೀರ್ಥ’ರಾದರು.
ವರ್ಧಂತಿಯ ಮಹತ್ವ
ಸನ್ಯಾಸಿಗಳಿಗೆ ಸಾಮಾನ್ಯವಾಗಿ ಹುಟ್ಟಿದ ಹಬ್ಬವನ್ನು ಆಚರಿಸುವ ಪದ್ಧತಿಯಿಲ್ಲದಿದ್ದರೂ ರಾಯರ ಜನ್ಮದಿನವನ್ನು ‘ವರ್ಧಂತಿ’ಯಾಗಿ ಆಚರಿಸಲಾಗುತ್ತದೆ. ಇದು ಭಕ್ತರಿಗೆ ಗುರುವಿನ ಸ್ಮರಣೆ ಮಾಡಲು ಮತ್ತು ಅವರ ಅನುಗ್ರಹ ಪಡೆಯಲು ಒಂದು ಶ್ರೇಷ್ಠ ದಿನವಾಗಿದೆ.
- ಜ್ಞಾನದ ಸಂಕೇತ: ರಾಯರು ಕೇವಲ ಪವಾಡ ಪುರುಷರಲ್ಲ, ಅವರು ಮಹಾನ್ ವಿದ್ವಾಂಸರು. ಅವರು ಬರೆದ ವ್ಯಾಖ್ಯಾನಗಳು ಮತ್ತು ಕೃತಿಗಳು ಸನಾತನ ಧರ್ಮಕ್ಕೆ ಭದ್ರ ಬುನಾದಿ ಹಾಕಿವೆ.
- ಸಮಾನತೆಯ ಹರಿಕಾರ: ಜಾತಿ-ಮತಗಳ ಭೇದವಿಲ್ಲದೆ ಎಲ್ಲರಿಗೂ ಆಶೀರ್ವದಿಸುವ ಅವರ ದಯೆ ಅನನ್ಯ.
ಮಂತ್ರಾಲಯ ಪ್ರಭು ರಾಘವೇಂದ್ರ ಸ್ವಾಮಿಗಳು ಜನಿಸಿದ ಪುಣ್ಯಭೂಮಿ ಭುವನಗಿರಿ: ಈ ಕ್ಷೇತ್ರದ ವಿಶೇಷತೆಗಳೇನು?
ಆಚರಣೆ ಹೇಗೆ?
ಮಂತ್ರಾಲಯದ ಮಠ ಸೇರಿದಂತೆ ದೇಶದ ಮೂಲೆ ಮೂಲೆಗಳಲ್ಲಿರುವ ರಾಯರ ಮೃತ್ತಿಕಾ ಬೃಂದಾವನಗಳಲ್ಲಿ ವಿಶೇಷ ಪೂಜೆಗಳು ನಡೆಯಲಿವೆ:
- ಪಂಚಾಮೃತ ಅಭಿಷೇಕ: ಗುರುರಾಯರಿಗೆ ವಿಶೇಷ ಅಭಿಷೇಕ ಮತ್ತು ಅಲಂಕಾರ.
- ಗುರುಪಾದಪೂಜೆ ಮತ್ತು ಕನಕಾಭಿಷೇಕ: ವರ್ಧಂತಿಯ ಅಂಗವಾಗಿ ರಾಯರಿಗೆ ಸುವರ್ಣ ಪುಷ್ಪಾರ್ಚನೆ ಅಥವಾ ಕನಕಾಭಿಷೇಕ ಮಾಡುವುದು ಸಂಪ್ರದಾಯ.
- ಅನ್ನದಾನ: ‘ದಾಸೋಹ’ ರಾಯರಿಗೆ ಅತ್ಯಂತ ಪ್ರಿಯವಾದುದು, ಆದ್ದರಿಂದ ಈ ದಿನ ಹಸಿದವರಿಗೆ ಅನ್ನದಾನ ಮಾಡುವುದು ಪುಣ್ಯದಾಯಕ.
- ಪಾರಾಯಣ: “ಶ್ರೀ ರಾಘವೇಂದ್ರ ಸ್ತೋತ್ರ” ಅಥವಾ “ಓಂ ಶ್ರೀ ರಾಘವೇಂದ್ರಾಯ ನಮಃ” ಮಂತ್ರದ ಪಠಣವು ಈ ದಿನ ವಿಶೇಷ ಫಲ ನೀಡುತ್ತದೆ.
“ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮ ರತಾಯ ಚ | ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ ||”
ಗುರುರಾಯರ ಈ ಜನ್ಮದಿನವು ಎಲ್ಲರ ಬಾಳಿನಲ್ಲಿ ಸುಖ, ಶಾಂತಿ ಮತ್ತು ನೆಮ್ಮದಿಯನ್ನು ತರಲಿ ಎಂದು ಪ್ರಾರ್ಥಿಸೋಣ.
ಲೇಖನ- ಶ್ರೀನಿವಾಸ ಮಠ





