Sri Gurubhyo Logo

Venus transit in Virgo: ಕನ್ಯಾ ರಾಶಿಗೆ ಶುಕ್ರ ಪ್ರವೇಶ; ಹನ್ನೆರಡು ರಾಶಿಗಳಿಗೂ ಏನೇನು ಎಚ್ಚರಿಕೆ?

Venus Transit
ಶುಕ್ರ ಗ್ರಹ

ಇದೇ ಆಗಸ್ಟ್ 24ನೇ ತಾರೀಕು ಶುಕ್ರ ಗ್ರಹ ಕನ್ಯಾ ರಾಶಿಯನ್ನು ಪ್ರವೇಶ ಮಾಡುತ್ತಿದೆ. ಅಲ್ಲಿಂದ ಸೆಪ್ಟೆಂಬರ್ 18ನೇ ತಾರೀಕಿನ ತನಕ ಅದೇ ರಾಶಿಯಲ್ಲಿ ಸಂಚರಿಸುತ್ತದೆ. ಶುಕ್ರನು ಕನ್ಯಾ ರಾಶಿಯನ್ನು ಪ್ರವೇಶಿಸುತ್ತಿದ್ದಂತೆಯೇ ನೀಚ ಸ್ಥಿತಿಯನ್ನು ತಲುಪುತ್ತಾನೆ. ಅಂದರೆ ಯಾರ್ಯಾರಿಗೆ ಜನ್ಮ ಜಾತಕದಲ್ಲಿ ಕನ್ಯಾ ರಾಶಿಯ ಶುಕ್ರ ಇದೆಯೋ ಅಂಥವರಿಗೆ ನೀಚ ಶುಕ್ರನ ಪ್ರಭಾವ ಇರುತ್ತದೆ. ಏನಿದು ಪ್ರಭಾವ ಅಂತ ಹೇಳುವುದಾದರೆ, ಮದುವೆ ವಿಚಾರದಲ್ಲಿ ವಿಳಂಬ ಅಥವಾ ನಿಶ್ಚಿತಾರ್ಥದ ತನಕ ಆಗಿ, ಆ ನಂತರ ಮದುವೆ ಮುರಿದು ಬೀಳುವುದು, ಲೈಂಗಿಕ ಆಸಕ್ತಿ ಕಡಿಮೆ ಆಗುವುದು ಅಥವಾ ಲೈಂಗಿಕ ವಿಚಾರದಲ್ಲಿ ಅತೃಪ್ತಿ, ವ್ಯಾಪಾರ- ವ್ಯವಹಾರಗಳಲ್ಲಿ ನಿರೀಕ್ಷಿತ ಮಟ್ಟದ ಯಶಸ್ಸು ಇರುವುದಿಲ್ಲ, ಷೇರು ಮಾರ್ಕೆಟ್ ವ್ಯವಹಾರಗಳು ಇವರಿಗೆ ಆಗಿಬರುವುದಿಲ್ಲ. ಇನ್ನು ಸಿನಿಮಾ ಕ್ಷೇತ್ರದಲ್ಲಿ ಯಶಸ್ಸು ಸಿಗುವುದಿಲ್ಲ, ಒಂದು ವೇಳೆ ಸಿಕ್ಕಿದರೂ ಅದನ್ನು ಉಳಿಸಿಕೊಳ್ಳುವುದಕ್ಕೋ ಅಲ್ಲಿಂದ ಮುಂದುವರಿಸುವುದಕ್ಕೋ ಸಾಧ್ಯವಾಗುವುದಿಲ್ಲ. ಸ್ತ್ರೀಯರ ಜತೆಗೆ ವಿನಾಕಾರಣದ ವೈಮನಸ್ಯ ಅಥವಾ ಭಿನ್ನಾಭಿಪ್ರಾಯ, ಜಗಳ- ಕಲಹ, ಕದನಗಳು ಏರ್ಪಡುತ್ತವೆ. 

ಬೃಹತ್ ಪರಾಶರ ಹೋರಾಶಾಸ್ತ್ರಮ್ ಗ್ರಂಥದಲ್ಲಿ ಶುಕ್ರನನ್ನು ಹೀಗೆ ವರ್ಣಿಸಿದ್ದಾರೆ: ಶುಕ್ರನು ಸುಖಿ, ಸುಂದರ ಶರೀರ ಇರುವಂಥವನು, ಅದೇ ರೀತಿ ಸುಂದರವಾದ ಕಣ್ಣು, ಕಫ ವಾತ ಪ್ರಕೃತಿ, ಕಾವ್ಯ ರಚಿಸುವಂಥವನು, ಗುಂಗುರು ಕೇಶ ಹಾಗೂ ಶುಭ ಗ್ರಹ ಎಂದು ಹೇಳಲಾಗಿದೆ.

ನೀಚಭಂಗ ರಾಜಯೋಗ

ಇನ್ನು ಕನ್ಯಾ ರಾಶಿಯಲ್ಲಿ ಶುಕ್ರ ಗ್ರಹ ಇದ್ದರೂ ಅದೇ ಸಮಯದಲ್ಲಿ ಬುಧನೂ ಜೊತೆಗಿದ್ದಲ್ಲಿ ನೀಚಭಂಗ ರಾಜಯೋಗ ಆಗುತ್ತದೆ. ಹಾಗಂದರೆ ಶುಕ್ರನ ನೀಚತ್ವವು ಭಂಗವಾಗಿ, ರಾಜಯೋಗವಾಗುತ್ತದೆ. ಆದ್ದರಿಂದ ಜನ್ಮ ಜಾತಕದಲ್ಲಿ ಕನ್ಯಾದಲ್ಲಿರುವ ಶುಕ್ರನ ಜೊತೆಗೆ ಬುಧ ಗ್ರಹ ಇದೆಯೇ ಎಂಬುದನ್ನು ಗಮನಿಸಬೇಕು. 

ಶುಕ್ರ ಗ್ರಹ ಜನ್ಮ ಜಾತಕದಲ್ಲಿ ನೀಚನಾದಲ್ಲಿ ಅದಕ್ಕೆ ಸಂಬಂಧಿಸಿದಂತೆ ಶಾಂತಿ- ಪೂಜೆ, ಪುನಸ್ಸರಗಳನ್ನು ಮಾಡಿಸಿಕೊಳ್ಳಲು ಸೂಚಿಸಲಾಗಿದೆ. ಲಕ್ಷ್ಮೀ ದೇವಿಯ ಆರಾಧನೆಯನ್ನು ಮಾಡಬೇಕು, ಶುಕ್ರ ಗ್ರಹದ ಬೀಜಮಂತ್ರವಾದ ಓಂ ದ್ರಂ ದ್ರೀಂ ದ್ರೌಂ ಸಹ್ ಶುಕ್ರಾಯ ನಮಃ ಎಂಬುದನ್ನು ಇಪ್ಪತ್ತು ಸಾವಿರ ಬಾರಿ ಪಠಣ ಮಾಡಬೇಕು. ಇದಕ್ಕಾಗಿ ಇಪ್ಪತ್ತು ದಿನದ ಸಮಯವನ್ನು ಇಟ್ಟುಕೊಳ್ಳಬಹುದು. ಅಷ್ಟರೊಳಗೆ ಈ ಸಂಖ್ಯೆಯ ಜಪವನ್ನು ಮಾಡಿದರೆ ಒಳಿತಾಗುತ್ತದೆ. ಇನ್ನು ಬಿಳಿ ಬಟ್ಟೆಯಲ್ಲಿ ಅವರೇಕಾಳು ಧಾನ್ಯವನ್ನು ಕಟ್ಟಿ, ಅದನ್ನು ದೇವರ ಮುಂದೆ ಇರಿಸಿ, ಆ ನಂತರ ಶುಕ್ರವಾರದ ದಿನದಂದು ಬಾಳೇಹಣ್ಣು, ವೀಳ್ಯದೆಲೆ, ಅಡಿಕೆ, ದಕ್ಷಿಣೆ, ತೆಂಗಿನಕಾಯಿ ಸಹಿತ ದಾನ ಮಾಡಬೇಕು.

ಬಾಳೇಹಣ್ಣುಪ್ರಿಯ ಉಡುಪಿ ಜಿಲ್ಲೆಯ ಪೆರ್ಡೂರು ಅನಂತ ಪದ್ಮನಾಭ ದೇವಾಲಯದ ವೈಶಿಷ್ಟ್ಯ ನಿಮಗೆ ಗೊತ್ತೆ?

ಶುಕ್ರವಾರದಂದು ಕಮಲದ ಹೂವುಗಳಿಂದ ಲಕ್ಷ್ಮೀ ದೇವಿಗೆ ಅರ್ಚನೆಯನ್ನು ಮಾಡಬೇಕು. ಎಷ್ಟು ಜಾಸ್ತಿ ಸಂಖ್ಯೆಯಲ್ಲಿ ಹೂವುಗಳನ್ನು ಹೊಂದಿಸುವುದಕ್ಕೆ ಸಾಧ್ಯವೋ ಅಷ್ಟು ಜಾಸ್ತಿ ಸಂಖ್ಯೆಯಲ್ಲಿ ಮಾಡಿ. ದೇವಿಗೆ ಸಿಹಿ ಪದಾರ್ಥಗಳ ನೈವೇದ್ಯವನ್ನು ಮಾಡಿ, ಐದು ಜನ ಮುತ್ತೈದೆಯರಿಗೆ ಬಾಗಿನವನ್ನು ನೀಡಿ, ಸಾಧ್ಯವಾದಲ್ಲಿ ಅವರಿಗೆ ಊಟದ ವ್ಯವಸ್ಥೆಯನ್ನು ಮಾಡಿದರೆ ಒಳ್ಳೆಯದು. 

ವಜ್ರವನ್ನು ಧರಿಸಬಾರದು

ಯಾರಿಗೆ ಜಾತಕದಲ್ಲಿ ಶುಕ್ರ ನೀಚ ಸ್ಥಿತಿಯಲ್ಲಿ ಇರುತ್ತದೋ ಅಂಥವರು ವಜ್ರವನ್ನು ಧಾರಣೆ ಮಾಡಬಾರದು. ಹೀಗೆ ಮಾಡುವುದರಿಂದ ಚರ್ಮ ರೋಗಗಳು ಬಾಧಿಸುತ್ತವೆ. ಮುಖವು ಕಳಾಹೀನ ಆಗುತ್ತದೆ. ಮದುವೆ ಆಗಿರುವವರಲ್ಲಿ ದಂಪತಿ ಮಧ್ಯೆ ವಿನಾಕಾರಣದ ಜಗಳ- ಕಲಹಗಳು ಏರ್ಪಡುತ್ತವೆ. 

ಇನ್ನು ಶುಕ್ರ ಗ್ರಹ ಅಸ್ತವಾಗಿರುವಾಗಿ ಮದುವೆ ಮಾಡಬಾರದು. ಕೆಲವರು ಶುಕ್ರ ಶಾಂತಿಯನ್ನು ಮಾಡಿ, ಮುಂದುವರಿಯಬಹುದು ಎನ್ನುತ್ತಾರೆ. ಆದರೆ ಅನಿವಾರ್ಯ ಪಕ್ಷದಲ್ಲಿ ಇದನ್ನು ಪರಿಗಣಿಸಬಹುದೇ ವಿನಾ ಇಲ್ಲದಿದ್ದಲ್ಲಿ ಶುಕ್ರಾಸ್ತವಾಗಿದ್ದಾಗ ಮದುವೆ ಮುಹೂರ್ತವನ್ನು ಇಡಬಾರದು. 

ಮೀನದಲ್ಲಿ ಉಚ್ಚ

ಕನ್ಯಾ ರಾಶಿಯಲ್ಲಿ ಶುಕ್ರನಿದ್ದರೆ ನೀಚ ಸ್ಥಿತಿ ಅಂತ ಹೇಳಿದಿರಿ, ಆದರೆ ಯಾವ್ಯಾವ ರಾಶಿಯಲ್ಲಿ ಇದ್ದರೆ ಉತ್ತಮ ಎಂಬುದನ್ನು ತಿಳಿಸಲಿಲ್ಲವಲ್ಲ ಅಂದುಕೊಳ್ಳಬೇಡಿ. ವೃಷಭ- ತುಲಾ ರಾಶಿಯು ಸ್ವಕ್ಷೇತ್ರವಾಗುತ್ತದೆ. ಇನ್ನು ಮೀನ ರಾಶಿಯ ಶುಕ್ರ ಉಚ್ಚ ಸ್ಥಾನವಾಗುತ್ತದೆ. 

ಇನ್ನು ಶುಕ್ರ ದಶೆ ಇಪ್ಪತ್ತು ವರ್ಷಗಳ ಕಾಲ ಇರುತ್ತದೆ. ಶುಕ್ರ ದಶೆ ಮುಗಿದು, ರವಿ ದಶೆ ಆರಂಭವಾಗುವಾದ ದಶಾ ಸಂಧಿ ಶಾಂತಿಯನ್ನು ಮಾಡಿಕೊಳ್ಳಬೇಕಾಗುತ್ತದೆ. ಇದನ್ನು ಶುಕ್ರಾದಿತ್ಯ ಸಂಧಿ ಶಾಂತಿ ಎನ್ನಲಾಗುತ್ತದೆ. ರವಿ ದಶೆ ಶುರುವಾಗುವ ಮುಂಚೆಯೇ ಜನ್ಮ ನಕ್ಷತ್ರವು ಇರುವ ದಿನ ದಶಾಸಂಧಿ ಶಾಂತಿಯನ್ನು ಮಾಡಿಕೊಳ್ಳುವುದು ಕ್ಷೇಮ. 

ಆಗಸ್ಟ್ 24ರಿಂದ ಸೆಪ್ಟೆಂಬರ್ 18ನೇ ತಾರೀಕಿನ ತನಕ ದ್ವಾದಶ ರಾಶಿಗಳವರು ಎಲ್ಲರೂ ಅಂದರೆ ಮೇಷದ ಮೀನದ ತನಕ ಯಾವ ವಿಚಾರದಲ್ಲಿ ಎಚ್ಚರಿಕೆಯಿಂದ ಇರಬೇಕು ಎಂಬುದನ್ನು ಇಲ್ಲಿ ತಿಳಿಸಲಾಗುತ್ತಿದೆ.

ಮೇಷ: ಸ್ತ್ರೀಯರ ಜತೆಗೆ ವೈಮನಸ್ಯ, ಜಗಳ- ಕಲಹಗಳು ಏರ್ಪಡಬಹುದು. ವ್ಯಾಜ್ಯಗಳಾಗಿ ಕೋರ್ಟ್- ಕಚೇರಿ ಮೆಟ್ಟಿಲೇರುವಂಥ ಸಂದರ್ಭ ಸಹ ಸೃಷ್ಟಿ ಆಗಲಿದೆ.

ವೃಷಭ: ನಿಮ್ಮಲ್ಲಿ ಯಾರಿಗೆ ಹೆಣ್ಣುಮಕ್ಕಳು ಇದ್ದಾರೋ ಅಂಥವರ ಆರೋಗ್ಯ, ಶಿಕ್ಷಣ, ಮದುವೆ ವಿಚಾರದಲ್ಲಿ ಜಾಗ್ರತೆಯಿಂದ ಇರಬೇಕು. ನೀವೇ ಮಾಡಿದ ಹೂಡಿಕೆ ಅಥವಾ ಇತರರಿಗೆ ಸಲಹೆ ನೀಡಿ ಮಾಡಿಸಿದಂಥ ಹೂಡಿಕೆಯಲ್ಲಿ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.

ಮಿಥುನ: ವಾಹನ ರಿಪೇರಿ, ಮನೆ ದುರಸ್ತಿ, ನವೀಕರಣ ಇತ್ಯಾದಿಗಳನ್ನು ಮಾಡಿಸುವುದಕ್ಕೆ ಹೆಚ್ಚಿನ ಖರ್ಚಾಗಲಿದೆ. ತಾಯಿ ಜತೆಗೆ ಅಭಿಪ್ರಾಯ ಭೇದ, ಮನಸ್ತಾಪಗಳು ಆಗಲಿವೆ.

ಕರ್ಕಾಟಕ: ನಿಮ್ಮ ಹೆಸರಿಗೆ ಚ್ಯುತಿ ಬರುವ, ನಿಮ್ಮ ವಿರುದ್ಧ ಆಕ್ಷೇಪಗಳು- ದೂರುಗಳು ಕೇಳಿಬರುವ ಸಾಧ್ಯತೆಗಳಿವೆ. ಸಿನಿಮಾ ರಂಗದಲ್ಲಿ ಇರುವಂಥವರು ವಿವಾದಗಳು ಆಗದಂತೆ ನೋಡಿಕೊಳ್ಳಬೇಕು.

ಸಿಂಹ: ಮಾತಿನಿಂದ ಸಮಸ್ಯೆಗಳನ್ನು ಮಾಡಿಕೊಳ್ಳುತ್ತೀರಿ. ನೀವು ನಿರೀಕ್ಷೆ ಮಾಡಿದಂತೆ ಹಣಕಾಸಿನ ಹರಿವು ಇರುವುದಿಲ್ಲ. ಸಾಂಸಾರಿಕವಾಗಿ ಸಮಸ್ಯೆಗಳನ್ನು ಎದುರಿಸುವಂತೆ ಆಗುತ್ತದೆ.

ಕನ್ಯಾ: ಆರೋಗ್ಯ, ಹಣಕಾಸು ವಿಚಾರ, ನಿಮ್ಮ ವರ್ಚಸ್ಸು ಈ ಎಲ್ಲವೂ ಕೈ ಕೊಡುವ ಸಾಧ್ಯತೆ ಹೆಚ್ಚು. ಪಿತ್ರಾರ್ಜಿತ ಆಸ್ತಿ ವಿವಾದಗಳು ಇದ್ದಲ್ಲಿ ನಿಮ್ಮ ವಿರುದ್ಧವಾದ ಬೆಳವಣಿಗೆಗಳು ಆಗಲಿವೆ.

ತುಲಾ: ವಿಪರೀತವಾದ ಖರ್ಚಾಗಲಿದೆ. ಪ್ರೇಮಿಗಳು ಅಥವಾ ದಂಪತಿ ಮಧ್ಯೆ ಹಣಕಾಸಿನ ವಿಚಾರಕ್ಕೆ, ಸಂಬಂಧಕ್ಕೆ ಸಂಬಂಧಿಸಿದ ವಿಚಾರಕ್ಕೆ ಕಲಹಗಳು ಆಗಲಿವೆ. ಪರಿಸ್ಥಿತಿ ವಿಕೋಪಕ್ಕೆ ಹೋದರೆ ದಂಪತಿ ಮಧ್ಯೆ ಡೈವೋರ್ಸ್ ತನಕ ಜಗಳ ಹೋಗಬಹುದು.

ವೃಶ್ಚಿಕ: ನೀವು ಅಂದುಕೊಂಡ ಮಟ್ಟಕ್ಕೆ ಲಾಭವು ಬರುವುದಿಲ್ಲ. ನಷ್ಟದ ಪ್ರಮಾಣ ಜಾಸ್ತಿ ಆಗುತ್ತದೆ. ಸರ್ಕಾರಕ್ಕೆ ದಂಡ ಕಟ್ಟುವಂಥ ಸನ್ನಿವೇಶ ಸೃಷ್ಟಿ ಆಗಲಿದೆ.

ಧನುಸ್ಸು: ಉದ್ಯೋಗ ಸ್ಥಳದಲ್ಲಿ ಸ್ತ್ರೀ ಸಹೋದ್ಯೋಗಿಗಳ ಜೊತೆಗೆ ಅಥವಾ ಸ್ತ್ರೀ ಮೇಲಧಿಕಾರಿಗಳ ಜತೆಗೆ ವಾಗ್ವಾದ, ಜಗಳ, ಮನಸ್ತಾಪಗಳು ಆಗಲಿವೆ.

ಮಕರ: ಈ ಹಿಂದೆ ನಿಮ್ಮಿಂದ ಆಗಿರುವ ಕೆಲಸಗಳಲ್ಲಿನ ಲೋಪ- ದೋಷಗಳನ್ನು ಎತ್ತಾಡಿ, ಅವಮಾನಗಳಾಗುವ ಸಾಧ್ಯತೆಗಳಿವೆ. ಅದರಲ್ಲೂ ಹಣಕಾಸಿನ ವಿಚಾರಕ್ಕೆ ನೀವು ತೆಗೆದುಕೊಂಡ ತೀರ್ಮಾನಕ್ಕೆ ಆಕ್ಷೇಪ- ಟೀಕೆಗಳು ಕೇಳಿಬರಲಿವೆ.

ಕುಂಭ: ನಿಮ್ಮ ಆರೋಗ್ಯದಲ್ಲಿ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಈಗಾಗಲೇ ಆರೋಗ್ಯ ವಿಚಾರದಲ್ಲಿ ತೊಂದರೆ ಇದೆ ಎಂದಾದಲ್ಲಿ ಅದು ಉಲ್ಬಣ ಆಗಲಿದೆ. ದೂರದ ಊರುಗಳಿಂದ ಕೆಟ್ಟ ಅಥವಾ ಅಶುಭ ಸುದ್ದಿಯನ್ನು ಕೇಳುವಂತಾಗುತ್ತದೆ.

ಮೀನ: ಮದುವೆಗಾಗಿ ಪ್ರಯತ್ನ ಮಾಡುತ್ತಿರುವವರಿಗೆ ಅಡೆತಡೆ, ದಂಪತಿ ಮಧ್ಯೆ ವಿರಸ, ನಿಶ್ಚಿತಾರ್ಥಗಳು ಆಗಿದ್ದಲ್ಲಿ ಮುರಿದು ಬೀಳುವುದು, ಪಾರ್ಟನರ್ ಷಿಪ್ ವ್ಯವಹಾರಗಳಲ್ಲಿ ಅನುಮಾನ- ಸಂದೇಹಗಳು ಇವೆಲ್ಲವೂ ಆಗಬಹುದು.

(ಲೇಖಕರು- ವಿದ್ವಾನ್ ಮಂಜುನಾಥ್ ಭಾರದ್ವಾಜ್ (ಜ್ಯೋತಿಷಿಗಳು- ಪುರೋಹಿತರು), ಜಾತಕಗಳನ್ನು ಮಾಡಿಸಲು, ಪೌರೋಹಿತ್ಯಕ್ಕೆ ಹಾಗೂ ಜ್ಯೋತಿಷಕ್ಕೆ ಸಂಬಂಧಿಸಿದಂತೆ ವೈಯಕ್ತಿಕವಾಗಿ ಭೇಟಿ ಮಾಡುವುದಕ್ಕೆ ಮೊಬೈಲ್ ಫೋನ್ ಸಂಖ್ಯೆ- 8050789904, 9980300790 ಸಂಪರ್ಕಿಸಿ.)

Latest News

Related Posts