Sri Gurubhyo Logo

ಮಲ್ಪೆಯ ವಡಭಾಂಡೇಶ್ವರ: ವ್ಯಾಧಿ ನಿವಾರಿಸಿ ಮನದ ಇಷ್ಟಾರ್ಥ ಪೂರೈಸುವ ಬಲರಾಮ ಕ್ಷೇತ್ರ

ಮಲ್ಪೆಯ ಶ್ರೀ ವಡಭಾಂಡೇಶ್ವರ ದೇವಸ್ಥಾನದ ಶ್ರೀ ಬಲರಾಮ ದೇವರ ಸುಂದರ ಅಲಂಕೃತ ವಿಗ್ರಹ.
ಶ್ರೀ ಮಧ್ವಾಚಾರ್ಯರಿಂದ ಪ್ರತಿಷ್ಠಾಪಿಸಲಾಸ ಮಲ್ಪೆಯ ಪುಣ್ಯಕ್ಷೇತ್ರ ವಡಭಾಂಡೇಶ್ವರದ ಬಲರಾಮ ಸನ್ನಿಧಿ

ಉಡುಪಿ ಎಂದರೆ ನೆನಪಾಗುವುದು ಕೃಷ್ಣ. ಆದರೆ ಆ ಕೃಷ್ಣನಿಗಿಂತ ಮುನ್ನ ದರ್ಶನ ಪಡೆಯಬೇಕಾದ ಕೃಷ್ಣನ ಅಣ್ಣ ಬಲರಾಮ ನೆಲೆಸಿರುವುದು ಮಲ್ಪೆಯ ವಡಭಾಂಡೇಶ್ವರದಲ್ಲಿ. ಅಪರೂಪದ ಬಲರಾಮ ದೇವಸ್ಥಾನಗಳಲ್ಲಿ ಇದು ಪ್ರಮುಖವಾದುದು. 

ಈ ಸ್ಥಳದ ಪುರಾಣ ಹೀಗಿದೆ: 

ವಡಭಾಂಡ ಎಂಬ ಹೆಸರಿನ ಋಷಿಯೊಬ್ಬರು ತಪಸ್ಸು ಮಾಡುತ್ತಿದ್ದ ಕ್ಷೇತ್ರ ಇದಾಗಿತ್ತು. ಅವರಿಗೆ ಮಹಾ ವ್ಯಾಧಿಯೊಂದು ಬಾಧೆಯಾಗಿ ಕಾಡುತ್ತದೆ. ಅದರ ನಿವಾರಣೆ ಎಂದು ಪ್ರಾರ್ಥಿಸಿ ಸುಬ್ರಹ್ಮಣ್ಯನನ್ನು ಆರಾಧನೆ ಮಾಡುತ್ತಾರೆ. ಆ ನಂತರ ವ್ಯಾಧಿಯಿಂದ ಗುಣಮುಖರಾಗುತ್ತಾರೆ. ಆ ಬಳಿಕ ಅವರು ಸುಬ್ರಹ್ಮಣ್ಯ ದೇವರ ಪ್ರತಿಷ್ಠಾಪನೆ ಮಾಡುತ್ತಾರೆ. ವಡಭಾಂಡ ಋಷಿಗಳ ಸಂಕಲ್ಪದ ಕಾರಣಕ್ಕೆ ಈ ಸ್ಥಳವು ವಡಭಾಂಡೇಶ್ವರ ಎಂಬ ಹೆಸರು ಪಡೆದುಕೊಂಡಿದೆ ಎಂಬುದು ಸ್ಥಳೀಯವಾಗಿ ಜನಪ್ರಿಯವಾದ ಕಥನ. ಈ ಹೆಸರಿಗೆ ಸಂಬಂಧಿಸಿದಂತೆ ಇನ್ನೂ ಒಂದು ಉಲ್ಲೇಖ ಹೇಳಲಾಗುತ್ತದೆ. ‘ವಡ’ ಎಂದರೆ ಹಡಗು, ‘ಭಾಂಡ’ ಎಂದರೆ ಸಾಮಗ್ರಿ ಅಥವಾ ಭಾಜನ. ಹಡಗಿನ ಮೂಲಕ ಬಂದ ವಿಗ್ರಹ ಇಲ್ಲಿ ಪ್ರತಿಷ್ಠಾಪನೆಯಾದ ಕಾರಣ ಈ ಸ್ಥಳಕ್ಕೆ ‘ವಡಭಾಂಡೇಶ್ವರ’ ಎಂಬ ಹೆಸರು ಬಂದಿದೆ ಎಂದೂ ಹೇಳಲಾಗುತ್ತದೆ.

ಇನ್ನು ಮಲ್ಪೆಯಲ್ಲಿನ ಸಮುದ್ರದ ಬಿರುಗಾಳಿಗೆ ಸಿಲುಕಿದ ಹಡಗನ್ನು ಜಗತ್ತಿಗೆ ತತ್ತ್ವವಾದವನ್ನು ನೀಡಿದ ಮಧ್ವಾಚಾರ್ಯರು ತಮ್ಮ ಕಾವಿ ಬಟ್ಟೆಯನ್ನು ಬೀಸಿ ಕಾಪಾಡುತ್ತಾರೆ. ಆ ಹಡಗಿನಲ್ಲಿದ್ದವರು ಆಚಾರ್ಯರಿಗೆ, ನೀವು ಈ ಹಡಗಿನಲ್ಲಿರುವ ಯಾವ ವಸ್ತುವನ್ನಾದರೂ ತೆಗೆದುಕೊಳ್ಳಿ ಎನ್ನುತ್ತಾರೆ. ಆಗ ಮಣ್ಣಿನ (ಗೋಪಿಯ) ಮೂರು ದೊಡ್ಡ ಮುದ್ದೆಗಳನ್ನು ಆಚಾರ್ಯರು ತೆಗೆದುಕೊಳ್ಳುತ್ತಾರೆ. ಮಲ್ಪೆಯಿಂದ ಉಡುಪಿಗೆ ಆ ಮುದ್ದೆಗಳ ಜೊತೆ ಮರಳುವಾಗ ಒಂದು ಕೆಳಗೆ ಉರುಳಿ ಬೀಳುತ್ತದೆ. ಅದರಿಂದ ಕಾಣಿಸಿಕೊಂಡದ್ದೇ ಬಲರಾಮ ಮೂರ್ತಿ. ಹೀಗೆ ಎಲ್ಲಿ ಆ ಮೂರ್ತಿಯು ಬಿತ್ತೋ ಅದೇ ಸ್ಥಳದಲ್ಲಿ ಪ್ರತಿಷ್ಠಾಪನೆಗೆ ವ್ಯವಸ್ಥೆ ಮಾಡುತ್ತಾರೆ ಆಚಾರ್ಯ ಮಧ್ವರು. ಅದೇ ಬಲರಾಮ ಕ್ಷೇತ್ರ ಆಗಿ ಬೆಳೆಯುತ್ತದೆ.

ಬಾಳೇಹಣ್ಣುಪ್ರಿಯ ಉಡುಪಿ ಜಿಲ್ಲೆಯ ಪೆರ್ಡೂರು ಅನಂತ ಪದ್ಮನಾಭ ದೇವಾಲಯದ ವೈಶಿಷ್ಟ್ಯ ನಿಮಗೆ ಗೊತ್ತೆ?

ಉಳಿದ ಎರಡು ಗೋಪಿಯ ಮುದ್ದೆಯ ಪೈಕಿ ಒಂದರಲ್ಲಿ ಶ್ರೀಕೃಷ್ಣ, ಮತ್ತೊಂದರಲ್ಲಿ ಜನಾರ್ದನ ಪ್ರತಿಮೆ ಇತ್ತು. ಈಗ ಉಡುಪಿಯಲ್ಲಿ ಅಷ್ಟ ಮಠದ ಸ್ವಾಮಿಗಳು ಪೂಜೆ ಮಾಡುವುದು ಇದೇ ಶ್ರೀಕೃಷ್ಣನನ್ನು. ಇನ್ನು ಮಧ್ವಾಚಾರ್ಯರೆ ಆ ಜನಾರ್ದನ ಮೂರ್ತಿಯನ್ನು ಎರ್ಮಾಳಿನ ದೇವಸ್ಥಾನಕ್ಕೆ ನೀಡಿದರು ಎಂಬ ಉಲ್ಲೇಖ ಹೇಳಲಾಗುತ್ತದೆ. ಇನ್ನು ವಡಭಾಂಡೇಶ್ವರದಲ್ಲಿ ಸಾಕ್ಷೀಶ್ವರ ದೇವರ ಸನ್ನಿಧಿ ಇದ್ದು, ಸಮುದ್ರದಲ್ಲಿ ಸ್ನಾನ ಮಾಡಿ ಬಂದು, ಬಲರಾಮನ ದರ್ಶನ ಮಾಡಿದ ಸಾಕ್ಷಿಗಾಗಿ ಈ ಸಾಕ್ಷೀಶ್ವರ ಲಿಂಗ ಇದೆ. ನಾಗ ಸನ್ನಿಧಾನ, ದೇವಸ್ಥಾನಕ್ಕೆ ಸಂಬಂಧಿಸಿದ ಸರೋವರ ಇವೆಲ್ಲ ಸೇರಿ ಈ ಕ್ಷೇತ್ರದ ಪ್ರಶಾಂತ ವಾತಾವರಣ- ಭಕ್ತಿಪ್ರೇರಕ ಪರಿಸರಕ್ಕೆ ಮೆರುಗು ತಂದಿವೆ.

ಇಲ್ಲಿ ಅನೇಕ ಧಾರ್ಮಿಕ ಸೇವೆಗಳು ನಡೆಯುತ್ತವೆ, ಅದರಲ್ಲಿ ಕೆಲವು ಬಹಳ ವಿಶೇಷ:

  • ಬಲರಾಮ ಪೂಜೆ: ಬಲರಾಮನಿಗೆ ನಡೆಯುವ ಹಾಲಿನ ಅಭಿಷೇಕ, ವಿಶೇಷ ಪಂಚಾಮೃತ ಅಭಿಷೇಕವು ಇಲ್ಲಿನ ಪ್ರಮುಖ ಸೇವೆ.
  • ರಂಗಪೂಜೆ: ಸಂಜೆಯ ಸಮಯದಲ್ಲಿ ದೇವಸ್ಥಾನದ ಪ್ರಾಂಗಣದಲ್ಲಿ ಹಣತೆಗಳನ್ನು ಬೆಳಗಿಸಿ ಮಾಡುವ ರಂಗಪೂಜೆ ಬಹಳ ನಯನಮನೋಹರ ಮತ್ತು ಪುಣ್ಯದಾಯಕ.
  • ಹೂವಿನ ಪೂಜೆ: ದೇವರಿಗೆ ಬಗೆಬಗೆಯ ಪುಷ್ಪಗಳಿಂದ ಅಲಂಕಾರ ಮಾಡುವ ಸೇವೆ.

ಪ್ರಮುಖ ಉತ್ಸವಗಳು

  • ಬಲರಾಮ ಜಯಂತಿ: ಇಲ್ಲಿನ ಅತ್ಯಂತ ದೊಡ್ಡ ಹಬ್ಬ. ಈ ದಿನ ವಿಶೇಷ ಪೂಜೆ ಮತ್ತು ಉತ್ಸವಗಳು ನಡೆಯುತ್ತವೆ.
  • ಮಧ್ವ ನವಮಿ: ಶ್ರೀ ಮಧ್ವಾಚಾರ್ಯರಿಗೆ ಸಂಬಂಧಿಸಿದ ವಿಶೇಷ ದಿನದಂದು ಇಲ್ಲಿ ವಿಶೇಷ ಕಾರ್ಯಕ್ರಮಗಳು ಆಯೋಜಿಸುತ್ತಾರೆ.
  • ವಾರ್ಷಿಕ ರಥೋತ್ಸವ: ವರ್ಷಕ್ಕೊಮ್ಮೆ ನಡೆಯುವ ರಥೋತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಳ್ಳುತ್ತಾರೆ.

Kadandale Subrahmanya Swamy Temple: ತ್ರೇತಾಯುಗದ ವಾಲಿಯಿಂದ ಪೂಜೆ ಆಗಿರುವ ಕಡಂದಲೆ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಬಗ್ಗೆ ಇಲ್ಲಿದೆ ಮಾಹಿತಿ

ಹರಕೆ ಮತ್ತು ಫಲಶ್ರುತಿ

ಇಲ್ಲಿನ ಬಲರಾಮನು ಭಕ್ತರ ಅಳಲನ್ನು ಬೇಗ ಆಲಿಸುತ್ತಾನೆ ಎಂಬ ನಂಬಿಕೆಯಿದೆ:

● ರೋಗ ಮತ್ತು ದೀರ್ಘಕಾಲದ ವ್ಯಾಧಿಗಳಲ್ಲಿ ಉಪಶಮನ
ವಡಭಾಂಡ ಋಷಿಗಳ ವ್ಯಾಧಿ ನಿವಾರಣೆಯ ಕಥನದ ಹಿನ್ನೆಲೆಯಿಂದಾಗಿ, ಈ ದೇಗುಲವನ್ನು ರೋಗ ನಿವಾರಣೆಯ ನಂಬಿಕೆಯ ತಾಣವೆಂದು ಭಕ್ತರು ಭಾವಿಸುತ್ತಾರೆ. ದೈಹಿಕ ಹಾಗೂ ಮಾನಸಿಕ ಸಂಕಟಗಳಿಂದ ಬಳಲುವವರು ಇಲ್ಲಿ ಬಂದು ಪ್ರಾರ್ಥಿಸಿದರೆ ಮನಸ್ಸಿಗೆ ಧೈರ್ಯ ಸಿಗುತ್ತದೆ ಎಂಬ ನಂಬಿಕೆ ಇದೆ. ದೀರ್ಘಕಾಲದ ಕಾಯಿಲೆಗಳಿಂದ ಬಳಲುವವರು, ಚಿಕಿತ್ಸೆ ನಡೆಯುತ್ತಿದ್ದರೂ ಮನಸ್ಸಿನಲ್ಲಿ ಭಯ ಇರುವವರು, ದೈಹಿಕ–ಮಾನಸಿಕ ದುರ್ಬಲತೆ ಅನುಭವಿಸುವವರು ಇಲ್ಲಿಗೆ ಭೇಟಿ ನೀಡಿ, ದೇವರ ದರ್ಶನ ಪಡೆದರೆ ಸಮಸ್ಯೆ ಪರಿಹಾರಕ್ಕೆ ಮಾರ್ಗ ಗೋಚರಿಸುತ್ತದೆ ಎಂಬ ನಂಬಿಕೆ ಇದೆ.

● ಕೃಷಿ ಮತ್ತು ಸಮೃದ್ಧಿ: ಬಲರಾಮನು ‘ಹಲಾಯುಧ’ (ನೇಗಿಲನ್ನು ಆಯುಧವಾಗಿ ಹೊಂದಿದವನು). ಹಾಗಾಗಿ ಕೃಷಿಕರು ತಮ್ಮ ಬೆಳೆ ಚೆನ್ನಾಗಿ ಬರಲೆಂದು ಮತ್ತು ಹೈನುಗಾರಿಕೆ ಅಭಿವೃದ್ಧಿಯಾಗಲೆಂದು ಇಲ್ಲಿ ಬಂದು ಹರಕೆ ಅರ್ಪಿಸುತ್ತಾರೆ.

● ಮಾನಸಿಕ ಅಶಾಂತಿ ಮತ್ತು ಭಯ ನಿವಾರಣೆ
ಸಮುದ್ರದ ಹತ್ತಿರ ಇರುವ ಶಾಂತ ವಾತಾವರಣ ಮತ್ತು ಬಲರಾಮನ ದರ್ಶನದಿಂದ ಮನಸ್ಸಿನ ಗೊಂದಲ, ಭಯ ಹಾಗೂ ಒತ್ತಡ ಕಡಿಮೆಯಾಗುತ್ತದೆ ಎಂದು ಭಕ್ತರು ನಂಬುತ್ತಾರೆ.

● ಕುಟುಂಬ ಕಲಹ ಮತ್ತು ಸಂಬಂಧಗಳ ಸಮಸ್ಯೆಗಳಿಗೆ ಶಾಂತಿ
ಬಲರಾಮನು ಸ್ಥಿರತೆ ಮತ್ತು ಸಹನಶೀಲತೆಯ ಸಂಕೇತವೆಂದು ಭಾವಿಸಲಾಗುತ್ತದೆ. ಕುಟುಂಬದ ಅಶಾಂತಿ, ದಾಂಪತ್ಯ ಕಲಹ ಅಥವಾ ಸಂಬಂಧಗಳ ನಡುವಿನ ದೂರ ನಿವಾರಣೆಗೆ ಜನರು ಇಲ್ಲಿ ಪ್ರಾರ್ಥನೆ ಸಲ್ಲಿಸುತ್ತಾರೆ.

● ಜೀವನದಲ್ಲಿ ಸ್ಥಿರತೆ ಮತ್ತು ಧೈರ್ಯ
ಉದ್ಯೋಗ, ವ್ಯವಹಾರ ಅಥವಾ ಜೀವನದ ದಿಕ್ಕಿನ ಬಗ್ಗೆ ಗೊಂದಲ ಇರುವವರು ಇಲ್ಲಿ ಬಂದು ಪ್ರಾರ್ಥಿಸಿದರೆ ಮುಂದುವರಿಯುವ ಧೈರ್ಯ ಮತ್ತು ಸ್ಥಿರತೆ ಸಿಗುತ್ತದೆ ಎಂಬ ನಂಬಿಕೆ ಇದೆ.

● ಸಂಕಟದ ಸಮಯದಲ್ಲಿ ದಾರಿ ತೋರಿಸುವ ಸ್ಥಳ
ಎಲ್ಲ ದಾರಿಗಳು ಮುಚ್ಚಿದಂತೆ ಅನಿಸಿದಾಗ, ಇಲ್ಲಿ ಬಂದು ಮೌನವಾಗಿ ಕುಳಿತು ಪ್ರಾರ್ಥಿಸಿದರೆ ಸಮಸ್ಯೆಗಳನ್ನು ಎದುರಿಸುವ ಶಕ್ತಿ ದೊರಕುತ್ತದೆ ಎಂದು ಜನರು ಹೇಳುತ್ತಾರೆ.

● ಸಂತಾನ ಅಪೇಕ್ಷೆ 

ಸಂತಾನ ಅಪೇಕ್ಷೆಯೊಂದಿಗೆ ಈ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸುತ್ತಾರೆ. 

● ಸಮುದ್ರಯಾತ್ರೆ ಮತ್ತು ಸುರಕ್ಷತೆಯ ನಂಬಿಕೆ
ಕರಾವಳಿ ಪ್ರದೇಶದ ಮೀನುಗಾರರು ಮತ್ತು ಸಮುದ್ರಯಾತ್ರೆ ಮಾಡುವವರು, ಯಾತ್ರೆ ಸುರಕ್ಷಿತವಾಗಿರಲಿ ಎಂಬ ಆಶಯದಿಂದ ಇಲ್ಲಿ ಬಂದು ಪ್ರಾರ್ಥನೆ ಸಲ್ಲಿಸುವುದು ಸಾಮಾನ್ಯ.

● ನಾಗದೋಷ ನಿವಾರಣೆ: ಬಲರಾಮನು ಶೇಷದೇವರ ಅವತಾರವಾದ್ದರಿಂದ, ನಾಗದೋಷ ಅಥವಾ ಜಾತಕದಲ್ಲಿನ ದೋಷಗಳ ಪರಿಹಾರಕ್ಕೆ ಈ ಕ್ಷೇತ್ರವು ಅತ್ಯಂತ ಶ್ರೇಷ್ಠವಾದುದು.

ಚರ್ಮ ವ್ಯಾಧಿ ನಿವಾರಿಸುವ ಅಪರೂಪದ ಗಂಧ ಪ್ರಸಾದ: ಮುಗ್ವಾ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಅದ್ಭುತ ಮಹಿಮೆ ಇಲ್ಲಿದೆ

ದೇವಸ್ಥಾನದ ಸಮಯ ಮತ್ತು ಸೇವೆಗಳು

ಭಕ್ತರು ಈ ಕೆಳಗಿನ ಸಮಯದಲ್ಲಿ ದೇವರ ದರ್ಶನ ಪಡೆಯಬಹುದು:

  • ಬೆಳಗ್ಗೆ: 6ರಿಂದ ಮಧ್ಯಾಹ್ನ 1 ರವರೆಗೆ.
  • ಸಂಜೆ: 5ರಿಂದ ರಾತ್ರಿ 8.30ರವರೆಗೆ.

ತಲುಪುವುದು ಹೇಗೆ?: ಉಡುಪಿ ಬಸ್ ನಿಲ್ದಾಣದಿಂದ ಮಲ್ಪೆಗೆ ಹೋಗುವ ಸಿಟಿ ಬಸ್ ಅಥವಾ ಆಟೋಗಳ ಮೂಲಕವೂ ಸುಲಭವಾಗಿ ತಲುಪಬಹುದು. ಇನ್ನು ಮಂಗಳೂರು ರೈಲು ನಿಲ್ದಾಣ ಹಾಗೂ ಮಂಗಳೂರು ವಿಮಾನ ನಿಲ್ದಾಣ ಇಲ್ಲಿಗೆ ಸಮೀಪ.

ಲೇಖನಶ್ರೀನಿವಾಸ ಮಠ

ಶ್ರೀನಿವಾಸ ಮಠ

ಸಂಪಾದಕರು, ಶ್ರೀಗುರುಭ್ಯೋ.ಕಾಮ್

ಪತ್ರಿಕೋದ್ಯಮದಲ್ಲಿ ಹದಿನೆಂಟು ವರ್ಷಕ್ಕೂ ಹೆಚ್ಚು ಅನುಭವ ಇರುವ ಲೇಖಕ. ಕನ್ನಡದ ಪ್ರಮುಖ ದಿನಪತ್ರಿಕೆಗಳು ಹಾಗೂ ವಾರಪತ್ರಿಕೆ ಮತ್ತು ಆನ್ ಲೈನ್ ವೆಬ್ ಪೋರ್ಟಲ್ ಗಳಲ್ಲಿ ವಿವಿಧ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ವೈದಿಕ ಜ್ಯೋತಿಷ್ಯವನ್ನು ಪದ್ಧತಿಯಿಂದ ಅಭ್ಯಾಸ ಮಾಡಿರುವಂಥ ಇವರು, ಈ ತನಕ ಮೂರು ಸಾವಿರಕ್ಕೂ ಹೆಚ್ಚು ಜ್ಯೋತಿಷ್ಯ ಲೇಖನಗಳನ್ನು ವಿವಿಧ ವೆಬ್ ಪೋರ್ಟಲ್ ಗಳಿಗಾಗಿ ಬರೆದಿದ್ದಾರೆ. ಅಧ್ಯಾತ್ಮ, ಜ್ಯೋತಿಷ್ಯ ಹಾಗೂ ಧಾರ್ಮಿಕ ವಿಷಯಗಳಲ್ಲಿ ಅಳವಾದ ಜ್ಞಾನ ಮತ್ತು ನಿರಂತರ ಅಧ್ಯಯನ ಇರುವಂಥ ಶ್ರೀನಿವಾಸ ಮಠ ಸದ್ಯಕ್ಕೆ ಬೆಂಗಳೂರಿನಲ್ಲಿ ವಾಸವಿದ್ದು, ಜ್ಯೋತಿಷ್ಯವನ್ನು ವೃತ್ತಿಯಾಗಿ ಸ್ವೀಕರಿಸಿದ್ದಾರೆ.

Latest News

Related Posts