ಸನಾತನ ಧರ್ಮದಲ್ಲಿ ಜ್ಯೋತಿಷ್ಯ ಶಾಸ್ತ್ರಕ್ಕೆ ಅಪಾರ ಮನ್ನಣೆಯಿದೆ. ಮನುಷ್ಯ ಜೀವನದ ಹಾದಿ, ಸುಖ-ದುಃಖಗಳು ಮತ್ತು ಯಶಸ್ಸು ಜನಿಸಿದ ಸಮಯದಲ್ಲಿನ ಗ್ರಹಗಳ ಗತಿಯ ಮೇಲೆ ನಿರ್ಧಾರವಾಗುತ್ತದೆ ಎಂಬುದು ನಂಬಿಕೆ. ಈ ಗ್ರಹಗಳ ಅಶುಭ ಪ್ರಭಾವವನ್ನು ತಗ್ಗಿಸಿ, ಶುಭ ಫಲಗಳನ್ನು ಪಡೆಯಲು ಮಹರ್ಷಿ ವೇದವ್ಯಾಸರು ವಿರಚಿಸಿದ ನವಗ್ರಹ ಸ್ತೋತ್ರಗಳು ಅತ್ಯಂತ ಶಕ್ತಿಶಾಲಿ ಸಾಧನಗಳಾಗಿವೆ.
ನವಗ್ರಹ ಸ್ತೋತ್ರಗಳು ಮತ್ತು ಅವುಗಳ ವಿಸ್ತೃತ ಅರ್ಥ
ಪ್ರತಿಯೊಬ್ಬ ವ್ಯಕ್ತಿಯು ದಿನಕ್ಕೆ ಒಂದು ಬಾರಿಯಾದರೂ ಈ ಕೆಳಗಿನ ಒಂಬತ್ತು ಶ್ಲೋಕಗಳನ್ನು ಪಠಿಸುವುದರಿಂದ ಸಕಲ ಗ್ರಹಗಳ ಅನುಗ್ರಹಕ್ಕೆ ಪಾತ್ರರಾಗಬಹುದು.
1. ಸೂರ್ಯ (Sun) – ಆತ್ಮಕಾರಕ ಮತ್ತು ಆರೋಗ್ಯದಾತ
ಶ್ಲೋಕ: ಜಪಾಕುಸುಮ ಸಂಕಾಶಂ ಕಾಶ್ಯಪೇಯಂ ಮಹಾದ್ಯುತಿಮ್ | ತಮೋಽರಿಂ ಸರ್ವಪಾಪಘ್ನಂ ಪ್ರಣತೋಽಸ್ಮಿ ದಿವಾಕರಮ್ ||
- ಅರ್ಥ: ಕೆಂಪು ದಾಸವಾಳದ ಹೂವಿನಂತೆ ಪ್ರಕಾಶಮಾನವಾದವನು, ಕಶ್ಯಪ ಮುನಿಯ ಪುತ್ರನಾದವನು, ಸಕಲ ಕತ್ತಲೆಯ ಶತ್ರುವಾದವನು ಮತ್ತು ಭಕ್ತರ ಪಾಪಗಳನ್ನು ನಾಶಪಡಿಸುವ ಸೂರ್ಯದೇವನಿಗೆ (ದಿವಾಕರ) ನಾನು ನಮಸ್ಕರಿಸುತ್ತೇನೆ.
2. ಚಂದ್ರ (Moon) – ಮನಃಕಾರಕ ಮತ್ತು ಶಾಂತಿದಾತ
ಶ್ಲೋಕ: ದಧಿಶಂಖತುಷಾರಾಭಂ ಕ್ಷೀರೋದಾರ್ಣವ ಸಂಭವಮ್ | ನಮಾಮಿ ಶಶಿನಂ ಸೋಮಂ ಶಂಭೋರ್ಮುಕುಟ ಭೂಷಣಮ್ ||
- ಅರ್ಥ: ಮೊಸರು, ಬಿಳಿ ಶಂಖ ಅಥವಾ ಮಂಜಿನ ಹನಿಯಂತೆ ಬಿಳಿಯಾದ ಕಾಂತಿಯುಳ್ಳವನು, ಕ್ಷೀರಸಾಗರದಲ್ಲಿ ಜನಿಸಿದವನು ಮತ್ತು ಶಿವನ ಮುಡಿಯಲ್ಲಿ ಆಭರಣದಂತೆ ಶೋಭಿಸುವ ಚಂದ್ರನಿಗೆ ನನ್ನ ನಮನಗಳು.
3. ಮಂಗಳ (Mars) – ಧೈರ್ಯ ಮತ್ತು ಶಕ್ತಿಯ ಸಂಕೇತ
ಶ್ಲೋಕ: ಧರಣೀಗರ್ಭ ಸಂಭೂತಂ ವಿದ್ಯುತ್ಕಾಂತಿ ಸಮಪ್ರಭಮ್ | ಕುಮಾರಂ ಶಕ್ತಿಹಸ್ತಂ ಚ ಮಂಗಳಂ ಪ್ರಣಮಾಮ್ಯಹಮ್ ||
- ಅರ್ಥ: ಭೂದೇವಿಯ ಗರ್ಭದಿಂದ ಉದಿಸಿದವನು, ಮಿಂಚಿನಂತೆ ಪ್ರಜ್ವಲಿಸುವ ಕಾಂತಿಯುಳ್ಳವನು, ಶಕ್ತಿ ಎಂಬ ಆಯುಧವನ್ನು ಕೈಯಲ್ಲಿ ಹಿಡಿದಿರುವ ಯುವಕನಂತಿರುವ ಮಂಗಳನಿಗೆ (ಕುಜ) ವಂದಿಸುತ್ತೇನೆ.
ವಿದೇಶಿ ಉದ್ಯೋಗದ ಕನಸೇ? ನಿಮ್ಮ ಜಾತಕದಲ್ಲಿದೆಯೇ ವಿದೇಶ ಯೋಗ? ಇಲ್ಲಿದೆ ಸಮಗ್ರ ಮಾಹಿತಿ
4. ಬುಧ (Mercury) – ಬುದ್ಧಿ ಮತ್ತು ವಿದ್ಯಾಕಾರಕ
ಶ್ಲೋಕ: ಪ್ರಿಯಂಗು ಕಲಿಕಾಶ್ಯಾಮಂ ರೂಪೇಣಾಪ್ರತಿಮಂ ಬುಧಮ್ | ಸೌಮ್ಯಂ ಸೌಮ್ಯಗುಣೋಪೇತಂ ತಂ ಬುಧಂ ಪ್ರಣಮಾಮ್ಯಹಮ್ ||
- ಅರ್ಥ: ಪ್ರಿಯಂಗು ಗಿಡದ ಮೊಗ್ಗಿನಂತೆ ಶ್ಯಾಮ ವರ್ಣದವನು, ಅಪ್ರತಿಮ ಸೌಂದರ್ಯವಂತನು ಮತ್ತು ಸೌಮ್ಯ ಸ್ವಭಾವವುಳ್ಳವನಾದ ಚಂದ್ರಪುತ್ರ ಬುಧನಿಗೆ ನಾನು ನಮಸ್ಕರಿಸುತ್ತೇನೆ.
5. ಗುರು (Jupiter) – ಜ್ಞಾನ ಮತ್ತು ಸೌಭಾಗ್ಯದಾತ
ಶ್ಲೋಕ: ದೇವಾನಾಂ ಚ ಋಷೀಣಾಂ ಚ ಗುರುಂ ಕಾಂಚನ ಸನ್ನಿಭಮ್ | ಬುದ್ಧಿಭೂತಂ ತ್ರಿಲೋಕೇಶಂ ತಂ ನಮಾಮಿ ಬೃಹಸ್ಪತಿಮ್ ||
- ಅರ್ಥ: ಸಕಲ ದೇವತೆಗಳಿಗೆ ಮತ್ತು ಋಷಿಮುನಿಗಳಿಗೆ ಗುರುವಾದವನು, ಬಂಗಾರದಂತೆ ಹೊಳೆಯುವ ಮೈಬಣ್ಣವುಳ್ಳವನು ಮತ್ತು ಜ್ಞಾನದ ಮೂರ್ತಿಯಾದ ಬೃಹಸ್ಪತಿಗೆ ನನ್ನ ನಮನಗಳು.
6. ಶುಕ್ರ (Venus) – ಐಶ್ವರ್ಯ ಮತ್ತು ಕಲಾಕಾರಕ
ಶ್ಲೋಕ: ಹಿಮಕುಂದ ಮೃಣಾಲಾಭಂ ದೈತ್ಯಾನಾಂ ಪರಮಂ ಗುರುಮ್ | ಸರ್ವಶಾಸ್ತ್ರ ಪ್ರವಕ್ತಾರಂ ಭಾರ್ಗವಂ ಪ್ರಣಮಾಮ್ಯಹಮ್ ||
- ಅರ್ಥ: ಹಿಮ ಅಥವಾ ಬಿಳಿ ಕಮಲದ ನಾಲದಂತೆ ಬಿಳಿಯಾದವನು, ದೈತ್ಯರ (ರಾಕ್ಷಸರ) ಗುರುವಾದವನು ಮತ್ತು ಸಮಸ್ತ ಶಾಸ್ತ್ರಗಳ ಜ್ಞಾನವನ್ನು ಬೋಧಿಸುವ ಶುಕ್ರಾಚಾರ್ಯರಿಗೆ ಪ್ರಣಾಮಗಳು.
ನಿಮ್ಮ ಜನನ ಸಂಖ್ಯೆ ನಿಮ್ಮ ಬಗ್ಗೆ ಏನು ಹೇಳುತ್ತದೆ? 1 ರಿಂದ 9 ಸಂಖ್ಯೆಗಳ ಅದೃಷ್ಟದ ರಹಸ್ಯ ಇಲ್ಲಿದೆ!
7. ಶನಿ (Saturn) – ನ್ಯಾಯಾಧಿಪತಿ ಮತ್ತು ಕರ್ಮಫಲದಾತ
ಶ್ಲೋಕ: ನೀಲಾಂಜನ ಸಮಾಭಾಸಂ ರವಿಪುತ್ರಂ ಯಮಾಗ್ರಜಮ್ | ಛಾಯಾಮಾರ್ತಾಂಡ ಸಂಭೂತಂ ತಂ ನಮಾಮಿ ಶನೈಶ್ಚರಮ್ ||
- ಅರ್ಥ: ನೀಲ ವರ್ಣದ ಕಾಡಿಗೆಯಂತೆ ಕಪ್ಪಗಿರುವವನು, ಸೂರ್ಯನ ಪುತ್ರ ಮತ್ತು ಯಮಧರ್ಮನ ಅಣ್ಣನಾದವನು, ಛಾಯಾದೇವಿ ಹಾಗೂ ಸೂರ್ಯನಿಗೆ ಜನಿಸಿದ ಶನಿದೇವನಿಗೆ ತಲೆಬಾಗುತ್ತೇನೆ.
8. ರಾಹು (Rahu) – ನೆರಳು ಗ್ರಹ ಮತ್ತು ಸಾಹಸಕಾರಕ
ಶ್ಲೋಕ: ಅರ್ಧಕಾಯಂ ಮಹಾವೀರಂ ಚಂದ್ರಾದಿತ್ಯ ವಿಮರ್ದನಮ್ | ಸಿಂಹಿಕಾಗರ್ಭ ಸಂಭೂತಂ ತಂ ರಾಹುಂ ಪ್ರಣಮಾಮ್ಯಹಮ್ ||
- ಅರ್ಥ: ಅರ್ಧ ದೇಹವನ್ನು ಹೊಂದಿದ್ದರೂ ಮಹಾ ಪರಾಕ್ರಮಿಯಾದವನು, ಸೂರ್ಯ-ಚಂದ್ರರನ್ನು ಗ್ರಹಣ ಕಾಲದಲ್ಲಿ ಹಿಡಿಯುವವನು ಮತ್ತು ಸಿಂಹಿಕೆಯ ಮಗನಾದ ರಾಹುವಿಗೆ ನಮಸ್ಕರಿಸುತ್ತೇನೆ.
9. ಕೇತು (Ketu) – ಮೋಕ್ಷ ಮತ್ತು ಆಧ್ಯಾತ್ಮಕಾರಕ
ಶ್ಲೋಕ: ಪಲಾಶಪುಷ್ಪ ಸಂಕಾಶಂ ತಾರಕಾಗ್ರಹ ಮಸ್ತಕಮ್ | ರೌದ್ರಂ ರೌದ್ರಾತ್ಮಕಂ ಘೋರಂ ತಂ ಕೇತುಂ ಪ್ರಣಮಾಮ್ಯಹಮ್ ||
- ಅರ್ಥ: ಪಲಾಶದ ಹೂವಿನಂತೆ ಕೆಂಪಗಿರುವವನು, ನಕ್ಷತ್ರ ಮತ್ತು ಗ್ರಹಗಳಲ್ಲಿ ಶ್ರೇಷ್ಠನಾದವನು, ಭಯಂಕರ ಹಾಗೂ ರೌದ್ರ ರೂಪದವನಾದ ಕೇತುವಿಗೆ ನನ್ನ ನಮನಗಳು.
ನವಗ್ರಹ ಸತೋತ್ರ ಮಹತ್ವ ಮತ್ತು ಪ್ರಯೋಜನಗಳು
1. ಗ್ರಹ ದೋಷಗಳ ಶಾಂತಿ
ಜಾತಕದಲ್ಲಿ ಗ್ರಹಗಳು ನೀಚ ಸ್ಥಾನದಲ್ಲಿದ್ದಾಗ ಅಥವಾ ಅಶುಭ ಯೋಗಗಳಿದ್ದಾಗ (ಉದಾಹರಣೆಗೆ ಏಳೂವರೆ ಶನಿ, ಕುಜ ದೋಷ) ಈ ಸ್ತೋತ್ರಗಳು ರಕ್ಷಣಾ ಕವಚದಂತೆ ಕೆಲಸ ಮಾಡುತ್ತವೆ. ಇವುಗಳ ಪಠಣದಿಂದ ಗ್ರಹಗಳ ಕಾಟ ತಗ್ಗುತ್ತದೆ.
2. ಮಾನಸಿಕ ಮತ್ತು ದೈಹಿಕ ಆರೋಗ್ಯ
ಸೂರ್ಯ ಸ್ತೋತ್ರ ಆರೋಗ್ಯ ನೀಡಿದರೆ, ಚಂದ್ರ ಸ್ತೋತ್ರ ಮಾನಸಿಕ ಶಾಂತಿ ನೀಡುತ್ತದೆ. ದಿನನಿತ್ಯ ಪಠಿಸುವುದರಿಂದ ಏಕಾಗ್ರತೆ ಹೆಚ್ಚಿ, ನಕಾರಾತ್ಮಕ ಆಲೋಚನೆಗಳು ದೂರವಾಗುತ್ತವೆ.
3. ಸಕಲ ಕಾರ್ಯಗಳಲ್ಲಿ ಸಿದ್ಧಿ
ವಿದ್ಯಾರ್ಥಿಗಳಿಗೆ ಬುಧ ಮತ್ತು ಗುರುವಿನ ಸ್ತೋತ್ರಗಳು ಬುದ್ಧಿಶಕ್ತಿಯನ್ನು ನೀಡುತ್ತವೆ. ಉದ್ಯೋಗ ಮತ್ತು ವ್ಯವಹಾರದಲ್ಲಿರುವವರಿಗೆ ಶುಕ್ರ ಮತ್ತು ಶನಿಯ ಅನುಗ್ರಹದಿಂದ ಆರ್ಥಿಕ ಅಭಿವೃದ್ಧಿ ಲಭಿಸುತ್ತದೆ.
ನೀವು ಜನಿಸಿದ ‘ತಿಥಿ’ ನಿಮ್ಮ ವ್ಯಕ್ತಿತ್ವವನ್ನು ಹೇಗೆ ನಿರ್ಧರಿಸುತ್ತದೆ? ಇಲ್ಲಿದೆ ಪೂರ್ಣ ವಿವರ
ಪಠಿಸುವ ಸರಿಯಾದ ಕ್ರಮ (ವಿಧಿ-ವಿಧಾನ)
- ಶುಚಿತ್ವ: ಮುಂಜಾನೆ ಸ್ನಾನದ ನಂತರ ಶುಭ್ರವಾದ ಬಟ್ಟೆ ಧರಿಸಿ ಪೂಜಾ ಕೋಣೆಯಲ್ಲಿ ಕುಳಿತುಕೊಳ್ಳಿ.
- ದೀಪಾರಾಧನೆ: ಒಂದು ದೀಪವನ್ನು ಹಚ್ಚಿ, ನವಗ್ರಹಗಳ ಚಿತ್ರಪಟ ಅಥವಾ ದೇವರಿಗೆ ನಮಸ್ಕರಿಸಿ ಪಠಣ ಆರಂಭಿಸಿ.
- ದಿಕ್ಕು: ಉತ್ತರ ಅಥವಾ ಪೂರ್ವ ದಿಕ್ಕಿಗೆ ಮುಖ ಮಾಡಿ ಕುಳಿತುಕೊಳ್ಳುವುದು ಶ್ರೇಷ್ಠ.
- ಸಂಖ್ಯೆ: ಪ್ರತಿ ಗ್ರಹದ ಶ್ಲೋಕವನ್ನು 1, 3, 9 ಅಥವಾ 108 ಬಾರಿ ನಿಮ್ಮ ಸಮಯಕ್ಕೆ ಅನುಗುಣವಾಗಿ ಪಠಿಸಬಹುದು.
- ವಿಶೇಷ ದಿನ: ಆಯಾ ಗ್ರಹಕ್ಕೆ ಮೀಸಲಾದ ದಿನಗಳಂದು (ಉದಾಹರಣೆಗೆ ಶನಿವಾರ ಶನಿಗೆ, ಮಂಗಳವಾರ ಮಂಗಳನಿಗೆ) ಪಠಿಸುವುದರಿಂದ ಹೆಚ್ಚಿನ ಫಲ ಸಿಗುತ್ತದೆ.
ಕೊನೆಮಾತು: ನವಗ್ರಹ ಸ್ತೋತ್ರಗಳು ಕೇವಲ ಸಂಸ್ಕೃತದ ಸಾಲುಗಳಲ್ಲ, ಅವುಗಳು ಬ್ರಹ್ಮಾಂಡದ ಶಕ್ತಿಯೊಂದಿಗೆ ನಮ್ಮನ್ನು ಸಂಪರ್ಕಿಸುವ ಮಂತ್ರಗಳು. ಅಚಲವಾದ ಭಕ್ತಿ ಮತ್ತು ನಂಬಿಕೆಯಿಂದ ಇವುಗಳನ್ನು ಪಠಿಸಿದರೆ ಜೀವನದ ಸಕಲ ಸಂಕಷ್ಟಗಳು ದೂರವಾಗಿ ಸುಖ, ಶಾಂತಿ, ಸಮೃದ್ಧಿ ನೆಲೆಸುತ್ತದೆ.
ಲೇಖನ- ಶ್ರೀನಿವಾಸ ಮಠ





