ನಿಮ್ಮಲ್ಲಿ ಬಹಳ ಮಂದಿ ಕಾಳಸರ್ಪ ಯೋಗ ಎಂಬ ಪದವನ್ನು ಕೇಳಿರುತ್ತೀರಿ. ಹಾಗೆ ನೋಡಿದರೆ ಪ್ರತಿ ವ್ಯಕ್ತಿಯೂ ಸರ್ಪ ದೋಷದ ಪರಿಹಾರವನ್ನು ಮಾಡಿಸಿಕೊಳ್ಳಬೇಕಾಗುತ್ತದೆ. ಆದರೆ ನೆನಪಿನಲ್ಲಿ ಇಡಿ, ಇದು ಜನ್ಮ ಜಾತಕಕ್ಕೆ ಮಾತ್ರ ಅನ್ವಯಿಸುವಂಥದ್ದು. ರವಿ ಆದಿಯಾಗಿ ಏಳು ಗ್ರಹಗಳನ್ನು ಮಾತ್ರ ಪ್ರಾಚೀನ ಜ್ಯೋತಿಷ್ಯ ಗ್ರಂಥಗಳಲ್ಲಿ ಗಣನೆಗೆ ತೆಗೆದುಕೊಳ್ಳಲಾಗಿದೆ. ರಾಹು -ಕೇತುಗಳನ್ನು ಗಣನೆಗೆ ತೆಗೆದುಕೊಂಡಿಲ್ಲ. ಆದರೆ ಅನುಭವದಿಂದ ಬಂದಂಥ ಫಲಗಳ ಆಧಾರದಲ್ಲಿ ನೋಡುವುದಾದರೆ ಶನಿವತ್ ರಾಹು, ಕುಜವತ್ ಕೇತು ಎಂಬ ಅಭಿಪ್ರಾಯ ಬರುತ್ತದೆ. ಅಂದರೆ ಶನೈಶ್ಚರ ಗ್ರಹ ನೀಡುವಂಥ ಫಲವನ್ನು ರಾಹು ಹಾಗೂ ಕುಜ ನೀಡಿದಂತೆ ಕೇತು ಗ್ರಹ ಫಲವನ್ನು ನೀಡುತ್ತದೆ ಅಂತ ಅರ್ಥ. ಈಗ ಕಾಳಸರ್ಪ ದೋಷದಲ್ಲಿ ಇರುವಂಥ ವಿಧಗಳು ಹಾಗೂ ಅದರ ಫಲಗಳನ್ನು ಈ ಲೇಖನದಲ್ಲಿ ವಿವರಿಸಲಾಗುವುದು. ಮೊದಲಿಗೆ ಹನ್ನೆರಡು ಬಗೆಯ ಕಾಳಸರ್ಪ ದೋಷದ ವಿಧಗಳನ್ನು ತಿಳಿದುಕೊಳ್ಳಿ. ಅವು ಈ ರೀತಿ ಇವೆ.
ಅನಂತ ಕಾಳಸರ್ಪ ಯೋಗ
ಕುಲಿಕ ಕಾಳಸರ್ಪ ಯೋಗ
ವಾಸುಕಿ ಕಾಳಸರ್ಪ ಯೋಗ
ಶಂಖಪಾಲ ಕಾಳಸರ್ಪ ಯೋಗ
ಪದ್ಮ ಕಾಳಸರ್ಪ ಯೋಗ
ಮಹಾ ಪದ್ಮ ಕಾಳಸರ್ಪ ಯೋಗ
ತಕ್ಷಕ ಕಾಳಸರ್ಪ ಯೋಗ
ಕಾರ್ಕೋಟಕ ಕಾಳಸರ್ಪ ಯೋಗ
ಶಂಖಚೂಡ ಕಾಳಸರ್ಪ ಯೋಗ
ಘಾತಕ ಕಾಳಸರ್ಪಯೋಗ
ವಿಷಧರ ಕಾಳಸರ್ಪ ಯೋಗ
ಶೇಷನಾಗ ಕಾಳಸರ್ಪ ಯೋಗ
ಇಷ್ಟು ಬಗೆಯಲ್ಲಿ ಕಾಳಸರ್ಪ ಯೋಗಗಳಿದ್ದು, ರಾಹು- ಕೇತು ಗ್ರಹಗಳು ಲಗ್ನದಿಂದ ಎಷ್ಟನೇ ಮನೆಯಲ್ಲಿ ಇದ್ದರೆ ಅದು ಎಂಥ ಯೋಗ ಮತ್ತು ಅದರ ಪರಿಣಾಮವಾಗಿ ಆ ವ್ಯಕ್ತಿ ಏನು ಸಮಸ್ಯೆ ಅನುಭವಿಸಬಹುದು ತಿಳಿಯಿರಿ. ಇನ್ನು ರಾಹು- ಕೇತುಗಳು ಸಮ ಸಪ್ತಕಗಳು. ಏಳು ಮನೆಯ ಅಂತರದಲ್ಲಿ, ಅಪ್ರದಕ್ಷಿಣೆಯಾಗಿ ಸಂಚರಿಸುತ್ತವೆ. ಒಂದು ರಾಶಿಯಲ್ಲಿ ಹದಿನೆಂಟು ತಿಂಗಳು ಇರುತ್ತವೆ. ಇದೀಗ ಹನ್ನೆರಡೂ ಬಗೆಯ ಕಾಳಸರ್ಪ ದೋಷಗಳು ಹೇಗೆ ಸೃಷ್ಟಿ ಆಗುತ್ತವೆ ಮತ್ತು ಅದರಿಂದ ಫಲ ಏನು ಎಂಬುದನ್ನು ಮುಂದೆ ಓದಿ.
ಅನಂತ ಕಾಳಸರ್ಪ ಯೋಗ: ಅನಂತ ಕಾಳಸರ್ಪ ಯೋಗ ಎಂಬುದು ಯಾವ ವ್ಯಕ್ತಿಯ ಜಾತಕದಲ್ಲಿ ಲಗ್ನದಲ್ಲಿ ರಾಹು, ಏಳನೇ ಮನೆಯಲ್ಲಿ ಕೇತು ಇರುತ್ತದೋ ಅಂಥವರಿಗೆ ಹೇಳಲಾಗುತ್ತದೆ. ಹೀಗೆ ಜನ್ಮ ಜಾತಕದಲ್ಲಿ ಗ್ರಹ ಸ್ಥಿತಿ ಇರುವಂಥ ವ್ಯಕ್ತಿಯು ದೈಹಿಕ ಮತ್ತು ಮಾನಸಿಕ ಅಸ್ವಸ್ಥತೆಗೆ ಗುರಿ ಆಗಬಹುದು. ಇದರ ಜತೆಗೆ ಆ ವ್ಯಕ್ತಿಯು ಕಾನೂನು ಸಮಸ್ಯೆಗಳಲ್ಲಿ ಸಿಲುಕಿಕೊಳ್ಳುತ್ತಾರೆ. ಇಂಥ ಸವಾಲು ಎದುರಿಸುವ ವ್ಯಕ್ತಿಯಲ್ಲಿ ಸಹಜ ಎಂಬಂತೆ ವಿಶಾಲ ಮನಸ್ಸಿರುತ್ತದೆ ಮತ್ತು ಧೈರ್ಯಶಾಲಿಯಾಗಿ ಇರುತ್ತಾರೆ.
ಕುಲಿಕ ಕಾಳಸರ್ಪ ಯೋಗ: ಯಾವ ವ್ಯಕ್ತಿಯ ಜನ್ಮ ಜಾತಕದಲ್ಲಿ ಲಗ್ನದಿಂದ ಎರಡನೇ ಮನೆಯಲ್ಲಿ ರಾಹು, 8ನೇ ಮನೆಯಲ್ಲಿ ಕೇತು ಇದ್ದು ಮಧ್ಯದಲ್ಲಿರುವ ಇತರ ಗ್ರಹಗಳು ಕುಲಿಕ ಕಲಸರ್ಪ ಯೋಗವನ್ನು ಉಂಟುಮಾಡುತ್ತವೆ. ಇದರಿಂದಾಗಿ ಆ ವ್ಯಕ್ತಿ ಹಣಕಾಸಿನ ನಷ್ಟಗಳು ಪದೇ ಪದೇ ಅನುಭವಿಸುತ್ತಾರೆ, ಕೌಟುಂಬಿಕ ಸಮಸ್ಯೆಗಳು ಜಾಸ್ತಿ ಇರುತ್ತವೆ, ಅಷ್ಟೇ ಅಲ್ಲ ಸಾಮಾಜಿಕ ಜೀವನದಲ್ಲೂ ಉದ್ವಿಗ್ನತೆ ಹೆಚ್ಚಿರುತ್ತದೆ.
ವಾಸುಕಿ ಕಾಳಸರ್ಪ ಯೋಗ: ರಾಹು ಮತ್ತು ಕೇತು ಗ್ರಹಗಳು ಕ್ರಮವಾಗಿ ಲಗ್ನದಿಂದ 3 ಮತ್ತು 9 ನೇ ಮನೆಯಲ್ಲಿ ಇದ್ದಾಗ ವಾಸುಕಿ ಕಾಳಸರ್ಪ ಯೋಗ ಆಗುತ್ತದೆ. ಈ ರೀತಿಯ ಗ್ರಹ ಸ್ಥಿತಿ ಇರುವ ವ್ಯಕ್ತಿಯು ದುರದೃಷ್ಟವನ್ನು ಅನುಭವಿಸುತ್ತಲೇ ಇರುತ್ತಾರೆ. ವೈಯಕ್ತಿಕ ಜೀವನ ಮತ್ತು ಉದ್ಯೋಗದಲ್ಲಿ ಕಷ್ಟ ಪಡುತ್ತಲೇ ಇರುತ್ತಾರೆ ಮತ್ತು ಇತರರು ಈ ಜಾತಕರ ಮೇಲೆ ದಬ್ಬಾಳಿಕೆ, ದೌರ್ಜನ್ಯ ಮಾಡುತ್ತಾರೆ.
Upanayanam explainer: ಉಪನಯನ ಯಾವ ವಯಸ್ಸಿನಲ್ಲಿ ಮಾಡಬೇಕು, ಗುರು ಬಲ, ಗರಿಷ್ಠ ವಯಸ್ಸೇನು ಇತ್ಯಾದಿ ಮಾಹಿತಿ ಇಲ್ಲಿದೆ
ಶಂಖಪಾಲ ಕಾಳಸರ್ಪ ಯೋಗ: ಯಾವ ಜಾತಕದಲ್ಲಿ ಲಗ್ನದಿಂದ 4ನೇ ಮನೆಯಲ್ಲಿ ರಾಹು ಮತ್ತು 10ನೇ ಮನೆಯಲ್ಲಿ ಕೇತು ಇರುತ್ತದೋ ಅಂಥವರಿಗೆ ಶಂಖಪಾಲ ಕಾಳಸರ್ಪ ಯೋಗಕ್ಕೆ ಕಾರಣವಾಗುತ್ತದೆ. ಈ ರೀತಿಯ ಜಾತಕದ ಸ್ಥಿತಿಯಿದ್ದಲ್ಲಿ ಹಣಕಾಸಿನ ತೊಂದರೆಗಳು, ಮಾನಸಿಕ ಒತ್ತಡ, ಭೂಮಿಗೆ ಸಂಬಂಧಿಸಿದ ಸಮಸ್ಯೆಗಳು, ತಾಯಿ ಮತ್ತು ಸಂಬಂಧಿಕರ ಜತೆಗೆ ಮನಸಸ್ತಾಪಗಳು ಇರುತ್ತವೆ.
ಪದ್ಮ ಕಾಳಸರ್ಪ ಯೋಗ: ಯಾವ ಜಾತಕದಲ್ಲಿ ರಾಹು- ಕೇತು ಗ್ರಹಗಳು ಕ್ರಮವಾಗಿ ಲಗ್ನದಿಂದ 5 ಮತ್ತು 11ನೇ ಮನೆಯಲ್ಲಿ ಇರುತ್ತವೋ ಆಗ ಪದ್ಮ ಕಾಳಸರ್ಪ ಯೋಗವಾಗುತ್ತದೆ. ಇಂಥ ಜಾತಕರಿಗೆ ಸಂತಾನ ವಿಳಂಬ, ಅಡೆತಡೆ ಅಥವಾ ಪದೇ ಪದೇ ಗರ್ಭಪಾತ, ಗಂಡಸರಿಗಾದರೆ ವೀರ್ಯಾಣು ಸಮಸ್ಯೆ- ಹೆಂಗಸರಿಗಾದರೆ ಅಂಡಾಣು ಸಮಸ್ಯೆ ಕಾಡಬಹುದು. ಇನ್ನು ಉನ್ನತ ಶಿಕ್ಷಣ ಪಡೆಯುವುದಕ್ಕೆ ಕಷ್ಟವಾಗುತ್ತದೆ. ವೃದ್ಧಾಪ್ಯದಲ್ಲಿ ನಾನಾ ಸಮಸ್ಯೆ ಮತ್ತು ಅವಮಾನಗಳನ್ನು ಎದುರಿಸಬೇಕಾಗುತ್ತದೆ.
ಮಹಾ ಪದ್ಮ ಕಾಳಸರ್ಪ ಯೋಗ: ಯಾವ ವ್ಯಕ್ತಿಯ ಜನ್ಮ ಜಾತಕದ ಕುಂಡಲಿಯಲ್ಲಿ ಲಗ್ನದಿಂ 6-12ನೇ ಮನೆಗಳಲ್ಲಿ ರಾಹು-ಕೇತು ಗ್ರಹಗಳು ಸ್ಥಿತವಾಗಿರುತ್ತವೋ ಅಂಥವರಿಗೆ ಮಹಾಪದ್ಮ ಕಾಳಸರ್ಪ ಯೋಗ ಆಗುತ್ತದೆ. ಇವರಿಗೆ ದೈಹಿಕವಾಗಿ ದೃಢತೆ ಕಡಿಮೆ ಇರುತ್ತದೆ. ಪ್ರೀತಿ- ಪ್ರೇಮ ವಿಚಾರಗಳಲ್ಲಿ ಯಶಸ್ಸು ಸಿಗುವುದಿಲ್ಲ. ಜೀವನದಲ್ಲಿ ನಿರಾಶೆಯೇ ಹೆಚ್ಚಿರುತ್ತದೆ. ತಾಯಿಯ ಕಡೆ ಸಂಬಂಧಿಕರು, ಮುಖ್ಯವಾಗಿ ತಾಯಿಯ ಚಿಕ್ಕಪ್ಪನಿಂದ ನಾನಾ ಸಮಸ್ಯೆಗಳನ್ನು ಪಡಬೇಕಾಗುತ್ತದೆ.
ತಕ್ಷಕ ಕಾಳಸರ್ಪ ಯೋಗ: ಯಾವ ವ್ಯಕ್ತಿಯ ಜಾತಕದಲ್ಲಿ ಲಗ್ನದಿಂದ ಏಳನೇ ಮನೆಯಲ್ಲಿ ರಾಹು ಹಾಗೂ ಲಗ್ನದಲ್ಲೇ ಕೇತು ಇರುತ್ತದೋ ಅಂಥದ್ದಕ್ಕೆ ತಕ್ಷಕ ಕಾಳಸರ್ಪ ಯೋಗ ಎಂದು ಕರೆಯಲಾಗುತ್ತದೆ. ಈ ವ್ಯಕ್ತಿಗಳಿಗೆ ವೈವಾಹಿಕ ಜೀವನದಲ್ಲಿ ಒಂದಲ್ಲ ಒಂದು ಜಗಳ- ಕಲಹಗಳು ಇರುತ್ತವೆ. ಅದರಲ್ಲೂ ವ್ಯಾಪಾರ- ವ್ಯವಹಾರಗಳನ್ನು ಏನಾದರೂ ಪಾಲುದಾರಿಕೆಯಲ್ಲಿ ಮಾಡಿದರೆ ಸಿಕ್ಕಾಪಟ್ಟೆ ಒತ್ತಡ, ಸಮಸ್ಯೆಗಳು ಏರ್ಪಡುತ್ತವೆ.
ಕಾರ್ಕೋಟಕ ಕಾಳಸರ್ಪ ಯೋಗ: ಯಾರ ಜನ್ಮ ಜಾತಕದಲ್ಲಿ ಲಗ್ನದಿಂದ ಎಂಟನೇ ಮನೆಯಲ್ಲಿ ರಾಹು ಮತ್ತು ಎರಡನೇ ಮನೆಯಲ್ಲಿ ಕೇತು ಇರುತ್ತದೋ ಅಂಥವರಿಗೆ ಕಾರ್ಕೋಟಕ ಕಾಳಸರ್ಪ ಯೋಗವಾಗಿರುತ್ತದೆ. ಈ ವ್ಯಕ್ತಿಗಳು ಹಣಕಾಸಿನ ವಿಚಾರಕ್ಕೇ ಒತ್ತಡಗಳು ಮತ್ತು ನಷ್ಟಗಳು ಅನುಭವಿಸುತ್ತಾರೆ. ಕೋರ್ಟ್ ವ್ಯಾಜ್ಯ- ದಾವೆಗಳು ಅಂತ ಸುತ್ತಾಟವೇ ಹೆಚ್ಚಾಗುತ್ತದೆ. ಪದೇಪದೇ ಅಪಘಾತಗಳು ಆಗುತ್ತವೆ.
ಶಂಖಚೂಡ ಕಾಳಸರ್ಪ ಯೋಗ: ಯಾವ ವ್ಯಕ್ತಿಯ ಜನ್ಮಕುಂಡಲಿಯಲ್ಲಿ ಲಗ್ನದಿಂದ 9ನೇ ಮನೆಯಲ್ಲಿ ರಾಹು ಮತ್ತು 3ನೇ ಮನೆಯಲ್ಲಿ ಕೇತು ಇರುತ್ತದೋ ಅಂಥವರಿಗೆ ಶಂಖಚೂಡ ಕಾಳಸರ್ಪ ಯೋಗ ಇರುತ್ತದೆ. ಈ ಯೋಗ ಇರುವಂಥವರಿಗೆ ಸಂತೋಷ ಕಡಿಮೆ ಇರುತ್ತದೆ. ತಂದೆಯ ಪ್ರೀತಿ ಮತ್ತು ವಾತ್ಸಲ್ಯ ಸಿಗುವುದಿಲ್ಲ. ವ್ಯಾಪಾರದಲ್ಲಿ ಪದೇ ಪದೇ ನಷ್ಟವನ್ನು ಕಾಣಬೇಕಾಗುತ್ತದೆ.
ಐದು ವರ್ಷದೊಳಗಿನ ಮಕ್ಕಳ ಶ್ರೇಯಸ್ಸಿಗಾಗಿ ಮಾಡುವಂಥ ಬಾಲ ಮಾರ್ಕಂಡೇಯ ಹೋಮದ ಬಗ್ಗೆ ನಿಮಗೆಷ್ಟು ಗೊತ್ತು?
ಘಾತಕ ಕಾಳಸರ್ಪಯೋಗ: ಜನ್ಮ ಜಾತಕದಲ್ಲಿ ಲಗ್ನದಿಂದ 10ನೇ ಮನೆಯಲ್ಲಿ ರಾಹು ಮತ್ತು 4ನೇ ಮನೆಯಲ್ಲಿ ಕೇತು ಇದ್ದಲ್ಲಿ ಘಾತಕ ಕಾಳಸರ್ಪ ಯೋಗವು ರೂಪುಗೊಳ್ಳುತ್ತದೆ. ಈ ವ್ಯಕ್ತಿಗಳಿಗೆ ಕುಟುಂಬ ಸದಸ್ಯರ ಜತೆಗೆ ವಿರಸ, ಗಳ, ವ್ಯಾಜ್ಯಗಳು ಏರ್ಪಡುತ್ತವೆ. ಉದ್ಯೋಗದಲ್ಲಿ ನಾನಾ ಸಮಸ್ಯೆಗಳು ಎದುರಾಗಿ, ಜೀವನೋಪಾಯವೇ ಕಷ್ಟ ಎಂಬಂತೆ ಆಗುತ್ತದೆ.
ವಿಷಧರ ಕಾಳಸರ್ಪ ಯೋಗ: ಯಾವ ವ್ಯಕ್ತಿಯ ಜಾತಕದಲ್ಲಿ ಲಗ್ನದಿಂದ 11ನೇ ಸ್ಥಾನದಲ್ಲಿ ರಾಹು ಮತ್ತು 5ನೇ ಮನೆಯಲ್ಲಿ ಕೇತು ಇರುತ್ತದೋ ಅಂಥವರಿಗೆ ವಿಷಧರ ಕಾಳಸರ್ಪ ಯೋಗ ಆಗುತ್ತದೆ. ಈ ಜಾತಕರಿಗೆ ಮಕ್ಕಳ ವಿಚಾರದಲ್ಲಿ ನೆಮ್ಮದಿ ಇರುವುದಿಲ್ಲ, ಹೃದಯ, ಕಣ್ಣು ಸಮಸ್ಯೆ ಕಾಡುತ್ತದೆ. ಇದರ ಜತೆಗೆ ಸ್ಮರಣೆ ಶಕ್ತಿ ಕಳೆದುಕೊಳ್ಳಬಹುದು ಮತ್ತು ಉನ್ನತ ಶಿಕ್ಷಣಕ್ಕೆ ನಾನಾ ಅಡೆತಡೆಗಳು ಬರುತ್ತವೆ. ಜೀವನದ ಒಂದಲ್ಲ ಒಂದು ಹಂತದಲ್ಲಿ ಸಮಾಜದಲ್ಲಿ ಗೌರವ ಮತ್ತು ಘನತೆಯನ್ನು ಕಳೆದುಕೊಳ್ಳುತ್ತಾರೆ.
ಶೇಷನಾಗ ಕಾಳಸರ್ಪ ಯೋಗ: ಯಾವ ವ್ಯಕ್ತಿಯ ಜನ್ಮ ಜಾತಕದಲ್ಲಿ ಲಗ್ನದಿಂದ ಹನ್ನೆರಡನೇ ಮನೆಯಲ್ಲಿ ರಾಹು ಮತ್ತು ಆರನೇ ಮನೆಯಲ್ಲಿ ಕೇತು ಇರುತ್ತದೋ ಅವರಿಗೆ ಶೇಷನಾಗ ಕಾಳಸರ್ಪ ಯೋಗ ಸೃಷ್ಟಿ ಆಗುತ್ತದೆ. ಇವರು ಜೀವನ ಪೂರ್ತಿ ಶತ್ರುಗಳ ಜತೆಗೆ ಹೋರಾಡುತ್ತಲೇ ಇರಬೇಕಾಗುತ್ತದೆ. ಇವರ ಬೆನ್ನ ಹಿಂದೆ ಪಿತೂರಿ ಮಾಡುವವರೇ ಹೆಚ್ಚು. ನ್ಯಾಯಾಲಯದ ಪ್ರಕರಣಗಳು, ಮಾನನಷ್ಟ ಪ್ರಕರಣಗಳಿಂದ ಇವರು ಹೈರಾಣಾಗಿಬಿಡುತ್ತಾರೆ.
ಈ ಮೇಲ್ಕಂಡ ಯೋಗಗಳ ಬಲಾಬಲವನ್ನು ಪರೀಕ್ಷೆ ಮಾಡಬೇಕು ಎಂದಾದಲ್ಲಿ ಜನ್ಮಜಾತಕವನ್ನು ಪರಿಶೀಲನೆ ಮಾಡಬೇಕು. ಒಂದು ವೇಳೆ ಪ್ರಬಲ ಯೋಗಗಳು, ರಾಜ ಯೋಗಗಳು ಇದ್ದಲ್ಲಿ ಪರಿಣಾಮ ಕಡಿಮೆ ಆಗಬಹುದು ಅಥವಾ ಏನೂ ಪ್ರಭಾವವೇ ಬೀರದಿರಬಹುದು. ಆದರೆ ಅದನ್ನು ನಿರ್ಧರಿಸಬೇಕು ಎಂದಾದರೆ ಜನ್ಮ ಜಾತಕದ ಪರಿಶೀಲನೆಯನ್ನು ಮಾಡಬೇಕಾಗುತ್ತದೆ.
(ಲೇಖಕರು- ವಿದ್ವಾನ್ ಮಂಜುನಾಥ್ ಭಾರದ್ವಾಜ್ (ಜ್ಯೋತಿಷಿಗಳು- ಪುರೋಹಿತರು), ಜಾತಕಗಳನ್ನು ಮಾಡಿಸಲು, ಪೌರೋಹಿತ್ಯಕ್ಕೆ ಹಾಗೂ ಜ್ಯೋತಿಷಕ್ಕೆ ಸಂಬಂಧಿಸಿದಂತೆ ವೈಯಕ್ತಿಕವಾಗಿ ಭೇಟಿ ಮಾಡುವುದಕ್ಕೆ ಮೊಬೈಲ್ ಫೋನ್ ಸಂಖ್ಯೆ- 8050789904 ಸಂಪರ್ಕಿಸಿ.)