ವಿವಾಹ ವಯಸ್ಸು ಮೀರಿದರೂ ಮದುವೆ ನಿಶ್ಚಯ ಆಗುತ್ತಿಲ್ಲವೇ? ಗ್ರಹ ದೋಷಗಳಿಗೆ ಸಂಬಂಧಿಸಿದ ಪೂಜೆ-ಪುನಸ್ಕಾರಗಳ ಬಳಿಕವೂ ಅಡೆತಡೆ ಮುಂದುವರಿದಿದೆಯೇ? ಅಂಥವರಿಗಾಗಿ ತಮಿಳುನಾಡಿನ ತಿರುಮಣಂಚೆರಿಯ ಕಲ್ಯಾಣ ಸುಂದರೇಶ್ವರ ದೇವಸ್ಥಾನ ವಿಶೇಷ ಶಕ್ತಿಯ ಸ್ಥಳವಾಗಿ ನಂಬಲಾಗಿದೆ. ವಿವಾಹ ಹಾಗೂ ಸಂತಾನ ಸಮಸ್ಯೆಗಳಿಗೆ ಪರಿಹಾರ ನೀಡುವ ಈ ದೇವಾಲಯದ ಮಹಿಮೆ ಇಲ್ಲಿದೆ.
ಕಾವೇರಿ ನದಿ ಸಮೀಪದ ಸುಂದರ ಸ್ಥಳ:
ತಮಿಳುನಾಡು ಮೈಲಾಡುದೊರೈ ಜಿಲ್ಲೆಯ ಕುಟ್ಟಾಲಂ ತಾಲ್ಲೂಕಿನಲ್ಲಿನ ತಿರುಮಣಂಚೆರಿಯ ಕಲ್ಯಾಣ ಸುಂದರೇಶ್ವರ ದೇವಸ್ಥಾನಕ್ಕೆ ಒಮ್ಮೆ ಭೇಟಿ ಕೊಡಿ. ಕಾವೇರಿ ನದಿ ಬಳಿ ಇರುವಂಥ ಅತ್ಯಂತ ಸುಂದರವಾದ ಸ್ಥಳ ಈ ತಿರುಮಣೆಂಚೆರಿ. ತಿರುಮಣಂ ಅಂದರೆ ಅರ್ಥ ಮದುವೆ ಹಾಗೂ ಚೆರಿ ಅಂದರೆ ಹಳ್ಳಿ. ಇಲ್ಲಿ ವಿವಾಹಕ್ಕೆ ಸಂಬಂಧಿಸಿದ ಅಡೆತಡೆಗಳ ನಿವಾರಣೆಗೆ ಹಾಗೂ ಸಂತಾನಕ್ಕೆ ತೊಂದರೆಗಳು ಏನಾದರೂ ಇದ್ದಲ್ಲಿ ಅದರ ನಿವಾರಣೆಗಾಗಿ ವಿಶೇಷ ಪೂಜೆಗಳನ್ನು ಮಾಡಲಾಗುತ್ತದೆ.
ಕಲ್ಯಾಣ ಸ್ವರೂಪದಲ್ಲಿ ಶಿವ- ಪಾರ್ವತಿ:
ಈ ದೇವಸ್ಥಾನದಲ್ಲಿನ ವಿಶೇಷ ಏನೆಂದರೆ, ಆದಿ ದಂಪತಿಯಾದ ಶಿವ- ಪಾರ್ವತಿ ಕಲ್ಯಾಣ ಮಾಡಿಕೊಳ್ಳುವ ಸ್ವರೂಪದಲ್ಲಿ ಇದ್ದಾರೆ. ವಿವಾಹ ವಯಸ್ಕ ಯುವಕ- ಯುವತಿಯರು ಈ ದೇವಸ್ಥಾನಕ್ಕೆ ಭೇಟಿ ನೀಡಿ, ವಿವಾಹ ಆಗಲಿ ಎಂದು ಬೇಡಿಕೊಂಡು, ಇಲ್ಲಿ ಹೂವಿನ ಮಾಲೆಯನ್ನು ಸಮರ್ಪಣೆ ಮಾಡುತ್ತಾರೆ. ಹೀಗೆ ಮಾಡಿದ ಒಂದು ವರ್ಷದೊಳಗಾಗಿ ಉತ್ತಮ ಸಂಬಂಧ ದೊರೆಯುತ್ತದೆ. ಆ ನಂತರ ದಂಪತಿ ಒಟ್ಟಾಗಿ ಬಂದು, ಮತ್ತೊಮ್ಮೆ ದೇವಸ್ಥಾನದಲ್ಲಿ ದರ್ಶನ ಪಡೆಯುತ್ತಾರೆ.
ಸಂತಾನ ಅಪೇಕ್ಷಿತರು ಪೌರ್ಣಮಿಯಂದು ದರ್ಶನ:
ತಾಯಿ ಪಾರ್ವತಿಯು ಶಿವನನ್ನೇ ವಿವಾಹ ಆಗಬೇಕು ಎಂದು ಬಯಸಿದಳಂತೆ. ಅದಕ್ಕಾಗಿ ಶಿವನನ್ನು ಪ್ರಾರ್ಥಿಸಿ, ಜಪ- ತಪಗಳನ್ನು ಮಾಡಿದಳಂತೆ. ಕೊನೆಗೆ ಪಾರ್ವತಿಯ ತಪಸ್ಸಿಗೆ ಒಲಿದ ಶಿವನು ಮದುವೆಗೆ ಒಪ್ಪಿದನಂತೆ. ಈಗ ತಿರುಮಣೆಂಚರಿ ದೇವಸ್ಥಾನ ಇದೆಯಲ್ಲಾ ಅದೇ ಜಾಗದಲ್ಲಿ ಪಾರ್ವತಿ ತಪಸ್ಸು ಮಾಡಿದ್ದು ಹಾಗೂ ಶಿವ- ಪಾರ್ವತಿಯರ ವಿವಾಹ ಆದ ಸ್ಥಳವೂ ಇದೇ ಎಂಬ ಐತಿಹ್ಯ ಇದೆ. ಇನ್ನು ದೀರ್ಘ ಸಮಯದಿಂದ ಸಂತಾನ ಇಲ್ಲದ ದಂಪತಿ ಇಲ್ಲಿಗೆ ಪೌರ್ಣಮಿಯಂದು ಭೇಟಿ ನೀಡಿ, ದೇವರ ಬಳಿ ಪ್ರಾರ್ಥನೆ ಮಾಡಿದಲ್ಲಿ ಅಂಥವರಿಗೆ ಇಷ್ಟಾರ್ಥ ಈಡೇರುತ್ತದೆ ಎಂಬ ನಂಬಿಕೆ ಇದೆ. ಅದರಲ್ಲೂ ರಾಹು ದೋಷದಿಂದಾಗಿ ಸಂತಾನ ಸಮಸ್ಯೆ ಎದುರಿಸುತ್ತಾ ಇರುವವರಿಗೆ ಇಲ್ಲಿ ದೋಷ ನಿವಾರಣೆ ಆಗುತ್ತದೆ ಎಂಬ ಪ್ರತೀತಿ ಇದೆ.
ದೇವಾಲಯಕ್ಕೆ ಹತ್ತಿರದ ನಿಲ್ದಾಣಗಳು:
ಬೆಳಗ್ಗೆ ಆರು ಗಂಟೆಗೆ ದೇವಾಲಯದ ಬಾಗಿಲು ತೆರೆದರೆ ಮಧ್ಯಾಹ್ನ ಒಂದೂವರೆ ತನಕ ಹಾಗೂ ಮಧ್ಯಾಹ್ನ ಮೂರೂವರೆಯಿಂ ರಾತ್ರಿ ಎಂಟೂ ಮೂವತ್ತರ ತನಕ ದರ್ಶನಕ್ಕೆ ಲಭ್ಯ ಇರುತ್ತದೆ. ಕಲ್ಯಾಣ ಸುಂದರೇಶ್ವರ ದೇವಸ್ಥಾನ ಅಂತಲೇ ಖ್ಯಾತಿ ಪಡೆದ ಈ ಸ್ಥಳವು ಕುಂಭಕೋಣಂನಿಂದ 35 ಕಿಲೋಮೀಟರ್ ಆಗುತ್ತದೆ. ಈ ದೇವಸ್ಥಾನಕ್ಕೆ ತೆರಳಲು ಹತ್ತಿರವಾದ ರೈಲು ನಿಲ್ದಾಣ ಅಂದರೆ ಮೈಲಾಡುದೊರೈ ಮತ್ತು ಕುಂಭಕೋಣಂ. ಇನ್ನು ಹತ್ತಿರದ ವಿಮಾನ ನಿಲ್ದಾಣ ಅಂದರೆ ತಿರುಚಿರಾಪಲ್ಲಿ.
ದೇವರ ಮುಂದೆ ಇಟ್ಟುಕೊಡುವ ಹೂವಿನ ಹಾರ:
ವಿವಾಹದ ಅಡೆತಡೆ ನಿವಾರಣೆ ಆಗಲಿ ಎಂದು ಪ್ರಾರ್ಥಿಸಿ, ಇಲ್ಲಿಗೆ ಬರುವಂಥವರು ಹೂವಿನ ಮಾಲೆಯನ್ನು ನೀಡುತ್ತಾರೆ. ಅದನ್ನು ದೇವರ ಮುಂದೆ ಇಟ್ಟು, ವಾಪಸ್ ನೀಡಲಾಗುತ್ತದೆ. ಹಾಗೆ ಕೊಟ್ಟಂಥ ಹೂವಿನ ಮಾಲೆಯನ್ನು ದೇವರ ಮನೆಯಲ್ಲಿ ಇಟ್ಟು, ಪೂಜೆ ಮಾಡುವಂತೆ ಸೂಚಿಸಲಾಗುತ್ತದೆ. ಹೀಗೆ ತಂದಿಟ್ಟುಕೊಂಡ ಒಂದು ವರ್ಷದೊಳಗೆ ವಿವಾಹ ನಿಶ್ಚಯ ಆಗುತ್ತದೆ ಎಂಬುದು ಇಲ್ಲಿನ ಭೇಟಿ ನೀಡುವ ಜನರ ನಂಬಿಕೆ ಆಗಿದೆ. ವಿವಾಹ ಆದ ಮೇಲೆ ನವ ದಂಪತಿ ಆ ಹಾರವನ್ನು ಮತ್ತೆ ದೇವಸ್ಥಾನಕ್ಕೆ ತೆಗೆದುಕೊಂಡು ಹೋಗಿ, ಅಲ್ಲಿ ಸೂಚಿಸುವ ರೀತಿಯಲ್ಲಿ ಸಮರ್ಪಣೆ ಮಾಡಬೇಕಾಗುತ್ತದೆ.
ಲೇಖನ- ಶ್ರೀನಿವಾಸ ಮಠ





