ಉಡುಪಿಯಲ್ಲಿ ಪರ್ಯಾಯ 2026 ಸಕಲ ರೀತಿಯಲ್ಲೂ ಸಜ್ಜುಗೊಂಡಿದೆ. ಊರ ತುಂಬಾ ಶೀರೂರು ಮಠದ ಪೀಠಾಧ್ಯಕ್ಷರಾದ ವೇದವರ್ಧನ ತೀರ್ಥರು ಇರುವಂಥ ಪೋಸ್ಟರ್, ಕಟೌಟ್. ಜೊತೆಗೆ ಶೀರೂರು ಮಠದ ಹಿಂದಿನ ಸ್ವಾಮಿಗಳು- ವೈಕುಂಠವಾಸಿಗಳಾದ ಲಕ್ಷ್ಮೀವರ ತೀರ್ಥರದೂ ಚಿತ್ರಗಳು. ‘ಶೀರೂರು ಪರ್ಯಾಯ ನಮ್ಮ ಪರ್ಯಾಯ’ ಎಂಬ ಸಾಲುಗಳು ಎಲ್ಲೆಲ್ಲೂ ರಾರಾಜಿಸುತ್ತಿವೆ. ಎರಡು ವರ್ಷಕ್ಕೆ ಒಮ್ಮೆ ನಡೆಯುವ ಉಡುಪಿ ಪರ್ಯಾಯ ಜನವರಿ 17-18ರಂದು ನಡೆಯಲಿದೆ. ಪುತ್ತಿಗೆ ಮಠದ ಸರದಿ ನಂತರದಲ್ಲಿ ಈಗ ಶೀರೂರು ಮಠದ ಪಾಳಿ. ಈ ಹಿನ್ನೆಲೆಯಲ್ಲಿ “ಶ್ರೀಗುರುಭ್ಯೋ.ಕಾಮ್” ವೆಬ್ ಸೈಟ್ ನಿಂದ ವೇದವರ್ಧನ ತೀರ್ಥರ ಸಂದರ್ಶನ ಮಾಡಲಾಯಿತು. ಅತಿಯಾದ ಓಡಾಟದ ಕಾರಣಕ್ಕೆ ಶೀತ- ಕಫದ ಅನಾರೋಗ್ಯ ಸಮಸ್ಯೆ ಇದ್ದರೂ ವೇದವರ್ಧನ ತೀರ್ಥರು ತುಂಬು ಸಮಾಧಾನ ಚಿತ್ತದಿಂದ ಉತ್ತರ ನೀಡಿದರು. ಪ್ರಶ್ನೋತ್ತರಗಳು ಇಲ್ಲಿವೆ:
ಶ್ರೀಗುರುಭ್ಯೋ.ಕಾಮ್: ಪರ್ಯಾಯ ಅಂದರೇನು? ಅದರ ಬಗ್ಗೆ ವಿವರಿಸುತ್ತೀರಾ?
ವೇದವರ್ಧನ ತೀರ್ಥರು: ಪರ್ಯಾಯ ಅಂದರೆ ಪಾಳಿ ಅಥವಾ ಸರದಿ ಅಂತ ಅರ್ಥ. ಶ್ರೀಕೃಷ್ಣ ಮಹಾ ಪೂಜೆಯನ್ನು ಮಾಡುವುದಕ್ಕೆ ಎಂಟು ಮಠಗಳು, ಅಲ್ಲಿನ ಯತಿಗಳಿಗೆ ಇರುವಂಥ ಸರದಿ ಪ್ರಕಾರದ ಅವಕಾಶ.
ಶ್ರೀಗುರುಭ್ಯೋ.ಕಾಮ್: ಇಷ್ಟು ಕಿರಿಯ ವಯಸ್ಸಿಗೆ ಇಷ್ಟು ದೊಡ್ಡ ಜವಾಬ್ದಾರಿ ಹೇಗನ್ನಿಸುತ್ತಿದೆ?
ವೇದವರ್ಧನ ತೀರ್ಥರು: ಆದ್ದರಿಂದಲೇ ನಾವು ಶ್ರೀಕೃಷ್ಣನ ಪೂಜೆಯನ್ನು ಮಾತ್ರ ಮಾಡುವವರು. ಈ ಬಾರಿಯ ಟ್ಯಾಗ್ ಲೈನ್ “ಶೀರೂರು ಪರ್ಯಾಯ ನಮ್ಮ ಪರ್ಯಾಯ” ಎಂದು ನೀಡಿದ್ದೇವೆ. ಈ ಬಾರಿ ಜನರೆಲ್ಲ ಸೇರಿ ನಡೆಸುವ ಪರ್ಯಾಯ.
ಶ್ರೀಗುರುಭ್ಯೋ.ಕಾಮ್: “ಶೀರೂರು ಪರ್ಯಾಯ ನಮ್ಮ ಪರ್ಯಾಯ” ಇದು ಹೇಗೆ ಮತ್ತು ಏನು ಎಂಬುದನ್ನು ವಿವರಿಸುವಿರಾ?
ವೇದವರ್ಧನ ತೀರ್ಥರು: ಜನರು ಸ್ವಯಂಸೇವಕರಾಗಿ ಪರ್ಯಾಯದಲ್ಲಿ ಪಾಲ್ಗೊಳ್ಳಬಹುದು. ತಮಗೆ ಸಾಧ್ಯವಾಗುವಂಥ ಸೇವೆಯನ್ನು ಸಾಧ್ಯವಾದಷ್ಟು ದಿನ ಬಂದು ಮಾಡಬಹುದು. ಇದಕ್ಕೆ ಈ ಬಾರಿಯ ವೆಬ್ ಸೈಟ್ ನಲ್ಲಿ ಮಾಹಿತಿ ನೀಡಲಾಗುವುದು. ಪ್ರವಾಸ- ಟ್ರೆಕ್ಕಿಂಗ್, ಹೋಮ್ ಸ್ಟೇಗೆ ತೆರಳಬೇಕು ಎಂದಿರುವವರು ಉಡುಪಿಗೆ ಬಂದು ಸೇವೆ ಸಲ್ಲಿಸಬಹುದು.
ಉಡುಪಿ ಪರ್ಯಾಯ 2026: ಶೀರೂರು ಮಠದ ಶ್ರೀ ವೇದವರ್ಧನ ತೀರ್ಥರ ಪೀಠಾರೋಹಣ, ಪರಂಪರೆಯ ಇತಿಹಾಸ
ಶ್ರೀಗುರುಭ್ಯೋ.ಕಾಮ್: ಶ್ರೀಕೃಷ್ಣನ ವಿಗ್ರಹ ಉಡುಪಿಗೆ ಬಂದದ್ದು ಹೇಗೆ ಎಂಬುದರ ಬಗ್ಗೆ ತಿಳಿಸ್ತೀರಾ?
ವೇದವರ್ಧನ ತೀರ್ಥರು: ದೇವಕಿಯಿಂದ ಕೃಷ್ಣನು ದೂರ ಉಳಿದ ನಂತರದಲ್ಲಿ ಒಮ್ಮೆ ಆ ತಾಯಿ ತನ್ನ ಮಗನಿಗೆ ಒಂದು ಮಾತು ಕಳಿಸುತ್ತಾಳೆ. ಬಾಲಕ ಕೃಷ್ಣನ ರೂಪವನ್ನು ನೋಡಬೇಕು ಎಂದೆನ್ನುತ್ತಾಳೆ. ಆಗ ಬಾಲ ರೂಪನ ಕೃಷ್ಣನ ವಿಗ್ರಹವನ್ನು ಸ್ವತಃ ವಿಶ್ವಕರ್ಮನ ಕೆತ್ತಿ, ಅದನ್ನು ದೇವಕಿಗೆ ಕಳಿಸಲಾಗುತ್ತದೆ. ದೇವಕಿಯಿಂದ ಅದು ರುಕ್ಮಿಣೀದೇವಿಗೆ ಸೇರುತ್ತದೆ. ಆಕೆ ಅದನ್ನು ಪೂಜೆ ಮಾಡುತ್ತಾಳೆ. ಕಾಲಾ ನಂತರದಲ್ಲಿ ಅದು ಗೋಪಿಚಂದನದ ಮೂಲಕ ವ್ಯಾಪಾರಿಗಳ ಹಡಗಿನಲ್ಲಿ ಉಡುಪಿಗೆ ಬರುವಾಗ ಆ ಹಡಗು ಸಮಸ್ಯೆಗೆ ಸಿಲುಕುತ್ತದೆ, ಅದನ್ನು ಮಧ್ವಾಚಾರ್ಯರು ರಕ್ಷಣೆ ಮಾಡುತ್ತಾರೆ. ಆ ಉಪಕಾರಕ್ಕೆ ಪ್ರತಿಯಾಗಿ ಏನು ಬೇಕಾದರೂ ನೀಡಲು ಸಿದ್ಧರಿದ್ದ ವರ್ತಕರಿಂದ ಗೋಪಿಚಂದನದ ಗಡ್ಡೆಯನ್ನು ಮಾತ್ರ ಆಚಾರ್ಯರು ಪಡೆಯುತ್ತಾರೆ. ಅದರಲ್ಲಿದ್ದ ಆ ಕೃಷ್ಣನ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡುತ್ತಾರೆ.
ಶ್ರೀಗುರುಭ್ಯೋ.ಕಾಮ್: ದ್ವಂದ್ವ ಮಠ ಅಂದರೇನು, ಅದರ ಹಿನ್ನೆಲೆ ವಿವರಿಸುತ್ತೀರಾ?
ವೇದವರ್ಧನ ತೀರ್ಥರು: ಮಧ್ವಾಚಾರ್ಯರು ನಾಲ್ಕು ಬಾಗಿಲಿನಿಂದ ಇಬ್ಬರು ಯತಿಗಳಂತೆ ಎಂಟು ಜನರಿಗೆ ಒಟ್ಟಿಗೆ ಒಳಗೆ ಬರುವುದಕ್ಕೆ ತಿಳಿಸಿದರಂತೆ. ಶೀರೂರು ಮಠ ಎಂದು ಈಗ ಕರೆಸಿಕೊಳ್ಳುತ್ತಿರುವ ಮಠದ ವಾಮನ ತೀರ್ಥರು ಹಾಗೂ ಸೋದೆ ಮಠದ ವಿಷ್ಣು ತೀರ್ಥರು ಒಟ್ಟಾಗಿ ಬರುತ್ತಾರೆ. ಆದ್ದರಿಂದ ಶೀರೂರು ಹಾಗೂ ಸೋದೆ ಮಠ ದ್ವಂದ್ವ ಮಠ ಆಯಿತು. ಅನಾರೋಗ್ಯ ಅಥವಾ ಮತ್ಯಾವುದಾದರೂ ಕಾರಣದಿಂದ ಒಂದು ಮಠದ ಸ್ವಾಮಿಗಳಿಗೆ ಪೂಜೆ ಸಾಧ್ಯವಾಗದ ಪಕ್ಷದಲ್ಲಿ ದ್ವಂದ್ವ ಮಠದ ಯತಿಗಳು ಆ ಜವಾಬ್ದಾರಿಯನ್ನು ನಿರ್ವಹಿಸಬೇಕು ಎಂದು ರೂಪಿಸಲಾದ ನಿಯಮವಿದು.
ಶ್ರೀಗುರುಭ್ಯೋ.ಕಾಮ್: ದೇವರ ಬಗ್ಗೆ ನಂಬಿಕೆ ಕಡಿಮೆ ಆಗುತ್ತಿದೆ ಎಂಬ ಭಾವನೆ ಮೂಡುವಂಥ ಸನ್ನಿವೇಶ ಇದೆ, ಇದಕ್ಕೆ ಏನು ಹೇಳ್ತೀರಿ?
ವೇದವರ್ಧನ ತೀರ್ಥರು: ಏನೇ ಮಾಡಿದರೂ ದೇವರ ಚಿಂತನೆ ಮಾಡುತ್ತಾ ಮಾಡಬೇಕು, ಊಟ- ತಿಂಡಿ ಹೀಗೆ ಏನನ್ನೇ ಆದರೂ ದೇವರ ಚಿಂತನೆಯೊಂದಿಗೆ ಮಾಡಬೇಕು. ಮನೆಗಳಲ್ಲಿ ದೇವರ ಕೋಣೆಯೇ ವಿಶೇಷ ಎಂಬ ಪರಿಸ್ಥಿತಿ ಬಂದುಹೋಗಿದೆ. ಅದಕ್ಕಾಗಿಯೇ ಶ್ರೀಕೃಷ್ಣನ ಸೇವೆಗೆ ಸ್ವಯಂಸೇವಕರಾಗಿ ಬರಬಹುದು. ಭಕ್ತರು ಬಂದು ತಮ್ಮಿಂದ ಆದ ಸೇವೆಯನ್ನು ಮಾಡುವುದಕ್ಕೆ ಅವಕಾಶ ಮಾಡಿಕೊಡುತ್ತಿದ್ದೇವೆ.
ಶೀರೂರು ಮಠದ ಪವಿತ್ರ ಪರಂಪರೆ, ದ್ವಂದ್ವ ಮಠದ ವಿಶಿಷ್ಟ ಬಾಂಧವ್ಯ: ಒಂದು ಅವಲೋಕನ
ಶ್ರೀಗುರುಭ್ಯೋ.ಕಾಮ್: ದೊಡ್ಡ ಗಾತ್ರದ ಅಷ್ಟೊಂದು ಪುಟಗಳ ಗ್ರಂಥಗಳನ್ನು ಓದುವುದು ಕಷ್ಟ ಎಂಬ ಕಾಲಘಟ್ಟದಲ್ಲಿ ನಾವಿದ್ದೇವೆ, ತತ್ವ ಪ್ರಸಾರಕ್ಕೆ ಯೋಜನೆ ರೂಪಿಸಿದ್ದೀರಾ?
ವೇದವರ್ಧನ ತೀರ್ಥರು: ಡಿಜಿಟಲ್ ಮಾಧ್ಯಮಗಳ ಮೂಲಕ ಜನರನ್ನು ತಲುಪುವುದಕ್ಕೆ ಹಲವು ಯೋಜನೆಗಳನ್ನು ಹಮ್ಮಿಕೊಳ್ಳಲಿದ್ದೇವೆ. ಅದು ಹಂತ ಹಂತವಾಗಿ ಗಮನಕ್ಕೆ ಬರಲಿದೆ. ಈ ಕಾರಣಕ್ಕಾಗಿ ದಾಸಸಾಹಿತ್ಯದ ಬಗ್ಗೆ ಜನರಲ್ಲಿ ಹೆಚ್ಚು ಪ್ರಚಾರ, ತಲುಪಿಸುವ ಕೆಲಸ ಆಗಬೇಕು. ಅಧ್ಯಾತ್ಮವನ್ನು ಜನರಿಗೆ ಸುಲಭವಾಗಿ ತಲುಪಿಸುವುದಕ್ಕೆ ಇರುವ ಅತ್ಯುತ್ತಮ ಮಾರ್ಗ ದಾಸ ಸಾಹಿತ್ಯದ ಪ್ರಚಾರ.
ಶ್ರೀಗುರುಭ್ಯೋ.ಕಾಮ್: ಬ್ರಾಹ್ಮಣ ಸಮಾಜದಲ್ಲಿ ಮದುವೆಗೆ ಗಂಡುಮಕ್ಕಳಿಗೆ ಹೆಣ್ಣು ಸಿಗುತ್ತಿಲ್ಲ ಎಂಬುದು ದೊಡ್ಡ ಸಮಸ್ಯೆಯಾಗಿದೆ, ಇದಕ್ಕೆ ಪರಿಹಾರ ಏನು?
ವೇದವರ್ಧನ ತೀರ್ಥರು: ಧಾರ್ಮಿಕವಾಗಿ, ಆಚಾರ- ವಿಚಾರಗಳೊಂದಿಗೆ ಬದುಕುತ್ತಿರುವವರಿಗೆ ಈ ಸಮಸ್ಯೆ ಇಲ್ಲ. ಧರ್ಮೋ ರಕ್ಷತಿ ರಕ್ಷಿತಃ ಎಂಬ ಮಾತು ಈ ವಿಚಾರಕ್ಕೂ ಅನ್ವಯ ಆಗಬೇಕು. ಈಗಾಗಲೇ ಅನ್ವಯ ಆಗುತ್ತಿರುವ ಕಡೆಗೆ ಸಮಸ್ಯೆ ಏನಿಲ್ಲ.
ತತ್ತ್ವವಾದದ ಹರಿಕಾರ ಮಧ್ವಾಚಾರ್ಯರು: ಜನ್ಮಕ್ಷೇತ್ರ ಪಾಜಕದಿಂದ ಉಡುಪಿ ಅಷ್ಟಮಠಗಳವರೆಗೆ
ಶ್ರೀಗುರುಭ್ಯೋ.ಕಾಮ್: ಭಗವದ್ಗೀತೆಯನ್ನು ಪಠ್ಯವಾಗಿ ಕಲಿಸಬೇಕಾ ಎಂಬ ಬಗ್ಗೆ ಚರ್ಚೆ ಆಗುತ್ತಿದೆ, ಆ ಬಗ್ಗೆ ನಿಮ್ಮ ಅಭಿಪ್ರಾಯ ಏನು?
ವೇದವರ್ಧನ ತೀರ್ಥರು: ಖಂಡಿತಾ ಕಲಿಸಬೇಕು. ಇಂಗ್ಲಿಷ್, ಕನ್ನಡ ಕವನ- ಸಾಹಿತ್ಯಗಳನ್ನು ಕಲಿಸುವುದಕ್ಕೆ ಇಲ್ಲದ ಚರ್ಚೆ, ಭಗವದ್ಗೀತೆ ಕಲಿಸುವುದಕ್ಕೆ ಯಾಕೆ ಆಗಬೇಕು? ಇದಕ್ಕಾಗಿ ನಾವು ಕೋರ್ಸ್ ಶುರು ಮಾಡಿದ್ದೀವಿ. ಎಲ್ಲರಿಗೂ ಭಗವದ್ಗೀತೆ ಕಲಿಸುವ ಸಂಕಲ್ಪ ಇದು.
ಸಂದರ್ಶನ- ಶ್ರೀನಿವಾಸ ಮಠ





