Sri Gurubhyo Logo

ಗ್ರಹಣಗಳ ಸಾಲು, ಗ್ರಹಗತಿಗಳ ಏರುಪೇರು: ಜಗತ್ತಿಗೆ ಕಾದಿದೆಯೇ ಸಂಕಷ್ಟದ ಕಾಲ?

A conceptual digital art showing a dramatic volcanic eruption, an earthquake splitting the ground, and a solar/lunar eclipse in a dark sky with zodiac symbols. The map of India is highlighted in red, symbolizing the area under potential natural disaster risk as per astrological predictions.
ಗ್ರಹಗತಿಗಳ ಬದಲಾವಣೆ ಮತ್ತು ಪ್ರಾಕೃತಿಕ ವಿಕೋಪದ ಮುನ್ಸೂಚನೆ: ಜ್ಯೋತಿಷ್ಯ ಶಾಸ್ತ್ರದ ಒಂದು ವಿಶ್ಲೇಷಣೆ.

ಲೇಖನ- ಪ್ರಕಾಶ್ ಅಮ್ಮಣ್ಣಾಯ

“ರವಿ ಗ್ರಹವು ಕುಂಭ ರಾಶಿಯ ಪ್ರವೇಶ ಮಾಡಿಯಾಗಿದೆ. ಈಗಿನ ಗ್ರಹ ಸ್ಥಿತಿ ಗಮನಿಸಿದರೆ ಇನ್ನು ವಾರದೊಳಗೆ ಪ್ರಮುಖವಾದ ಭೂಕಂಪನ, ಜ್ವಾಲಾಮುಖಿ ಹೀಗೆ ಪ್ರಾಕೃತಿಕ ವಿಕೋಪದಿಂದ ದೊಡ್ಡ ಅನಾಹುತ ಸಂಭವಿಸುವ ಸೂಚನೆ ದೊರೆಯುತ್ತಿದೆ,” ಎಂದು ಹೇಳಿದರು ಕರ್ನಾಟಕದ ಖ್ಯಾತ ಜ್ಯೋತಿಷಿಗಳಾದ, ಕಾಪು ಮೂಲದ ಪ್ರಕಾಶ್ ಅಮ್ಮಣ್ಣಾಯ. ಶ್ರೀಗುರುಭ್ಯೋ.ಕಾಮ್ ಜೊತೆಗೆ ಎಕ್ಸ್ ಕ್ಲೂಸಿವ್ ಆಗಿ ಮಾತನಾಡಿದ ಅವರು, “ಜ್ಯೋತಿಷ್ಯ ಅಧ್ಯಯನ ಎಂಬುದು ಲೆಕ್ಕಾಚಾರ ಹಾಗೂ ಅದರ ಫಲಿತಾಂಶ ಎರಡನ್ನೂ ನಿಖರವಾಗಿ ಮಿಳಿತ ಮಾಡುವ ಒಂದು ಕ್ರಿಯೆ. ಅದರ ಪ್ರಕಾರ ಗಮನಿಸಿದರೆ ಭಾರತದ ಪೂರ್ವ ಈಶಾನ್ಯ ಭಾಗದಲ್ಲಿ ಈ ರೀತಿಯ ಪ್ರಾಕೃತಿಕ ವಿಕೋಪಗಳು ಸಂಭವಿಸುವ ಸೂಚನೆ ಇದಾಗಿದೆ,” ಎಂದು ಹೇಳಿದರು.

ಅನಾಹುತದ ವಿಧ:

ಹೀಗೆ, ಕುಂಭ ರಾಶಿಗೆ ರವಿಯ ಪ್ರವೇಶಕ್ಕೂ ಈ ರೀತಿ ಪ್ರಾಕೃತಿಕ ವಿಕೋಪ ಸಂಭವಿಸುವುದಕ್ಕೂ ಏನು ಸಂಬಂಧ ಎಂಬ ಬಗ್ಗೆ ಇನ್ನಷ್ಟು ವಿವರವಾಗಿ ತಿಳಿಸುವಂತೆ ಅವರನ್ನು ಕೇಳಿದಾಗ, “ರವಿ ಗ್ರಹವು ಫೆಬ್ರವರಿ ಹದಿಮೂರರಂದು ಕುಂಭ ರಾಶಿಗೆ ಪ್ರವೇಶ ಮಾಡಿದ್ದಾನೆ. ಅಲ್ಲಿಂದ ಎಂಬತ್ತು ಡಿಗ್ರಿ, ಅಂದರೆ ಒಂದು ರಾಶಿಗೆ ಮೂವತ್ತು ಡಿಗ್ರಿ ಆಗುತ್ತದೆ. ಎಂಬತ್ತು ಡಿಗ್ರಿ ಅಂತಾದರೆ ಮೇಷ ರಾಶಿ ಆಗುತ್ತದೆ. ಅಗ್ನಿ ತತ್ತ್ವದ ಕುಜ ಆಧಿಪತ್ಯದ ಮೇಷ ರಾಶಿಯು ಹೀಗೆ ರವಿಯಿಂದ ಎಂಬತ್ತು ಡಿಗ್ರಿ ಆಗುವುದು ಹಾಗೂ ಇದೇ ಸಮಯದಲ್ಲಿಯೇ  ಮೇಷವನ್ನು ಮಕರ ರಾಶಿಯಲ್ಲಿ ಉಚ್ಚ ಸ್ಥಿತಿಯಲ್ಲಿ ಇರುವಂಥ ಕುಜ ಗ್ರಹ (ನಾಲ್ಕನೇ ದೃಷ್ಟಿಯಿಂದ) ವೀಕ್ಷಣೆ ಮಾಡುತ್ತಾನೆ. ಆ ಕಾರಣಕ್ಕೆ ಭೂಕಂಪನ, ಜ್ವಾಲಾಮುಖಿ, ಅಗ್ನಿ- ವಿದ್ಯುತ್ ಅವಘಡ ಇತ್ಯಾದಿಗಳನ್ನು ನಿರೀಕ್ಷಿಸಬಹುದು.

ಭಾರತದಲ್ಲಿ ಗೋಚರಿಸದ ಸೂರ್ಯ ಗ್ರಹಣ: ಯಾವ ರಾಶಿಗೆ ಲಾಭ? ಯಾರಿಗೆ ನಷ್ಟ? ಸಮಗ್ರ ಮಾಹಿತಿ

ಗ್ರಹಣಗಳ ಪ್ರಭಾವ:

“ಫೆಬ್ರವರಿ 13ನೇ ತಾರೀಕಿನಿಂದ 22ನೇ ತಾರೀಕಿನ ತನಕ ಇದೇ ಗ್ರಹ ಸ್ಥಿತಿ ಇರುವುದರಿಂದ ಅನಾಹುತದ ತೀವ್ರತೆ- ತೀಕ್ಷ್ಣತೆ ಬಹಳ ಹೆಚ್ಚಾಗಿಯೇ ಇರುತ್ತದೆ ಎಂಬುದು ಸೂಚನೆಯಂತೆ ಗೋಚರಿಸುತ್ತಾ ಇದೆ. ಇನ್ನು ಇದೇ ವೇಳೆ ಎರಡು ಗ್ರಹಣಾಚರಣೆಗಳು ಬಹಳ ಹತ್ತಿರದಲ್ಲಿವೆ. ಅಂದರೆ ಫೆಬ್ರವರಿ 17ನೇ ತಾರೀಕು ರಾಹುಗ್ರಸ್ತ ಸೂರ್ಯ ಗ್ರಹಣ ಇದೆ. ಭಾರತದಲ್ಲಿ ಇದರ ಗೋಚಾರ ಇಲ್ಲ, ಅಂದರೆ ಆಚರಣೆಯೂ ಇಲ್ಲ. ಆದರೆ ಪರಿಣಾಮಗಳು ಖಂಡಿತಾ ಇರುತ್ತದೆ. ಇನ್ನು ಮಾರ್ಚ್ 3ನೇ ತಾರೀಕಿನಂದು ಕೇತುಗ್ರಸ್ತ ಚಂದ್ರ ಗ್ರಹಣ ಇದೆ. ಅದರ ಗೋಚರ ಹಾಗೂ ಗ್ರಹಣಾಚರಣೆಗಳು ಇವೆ. ಗ್ರಹಣಗಳು ಮುಖ್ಯವಾಗಿ ಪರಿಣಾಮ ಬೀರುವುದು ಪ್ರಕೃತಿಯ ಮೇಲೆ. ಅದರ ಪರೋಕ್ಷ ಪರಿಣಾಮ ಪ್ರತಿ ವ್ಯಕ್ತಿಯ ಮೇಲೂ ಆಗುತ್ತದೆ. ತಂದೆ (ರವಿ) ಹಾಗೂ ತಾಯಿ (ಚಂದ್ರ) ಇಬ್ಬರೂ ತಂತಮ್ಮ ಶಕ್ತಿಯನ್ನು ಸ್ವಲ್ಪ ಸಮಯಕ್ಕಾದರೂ ಕಳೆದುಕೊಂಡಲ್ಲಿ ಮಕ್ಕಳನ್ನು ಆಸ್ಥೆಯಿಂದ ನೋಡಿಕೊಳ್ಳುವವರು ಯಾರು?

ಪೀಡಿತ ಪ್ರದೇಶ:

“ಸದ್ಯಕ್ಕೆ ಅಂಥದ್ದೊಂದು ಸವಾಲಿನ ಸಮಯದ ಎದುರಿಗೆ ನಾವಿದ್ದೇವೆ. ಮೊದಲಿಗೆ ನಾವು ಭಾರತದ ಸ್ಥಿತಿಯನ್ನು ಗಮನಿಸಬೇಕು ಆದ್ದರಿಂದ ಭಾರತದ ಪೂರ್ವ ಈಶಾನ್ಯದ ಮೇಲೆ ಇದರ ಪ್ರಭಾವ- ಪರಿಣಾಮ ಇರಲಿದೆ ಎಂಬುದನ್ನು ಹೇಳಿದೆ. ಆದರೆ ಇಡೀ ಜಗತ್ತಿನ ಮೇಲೆ ಈ ಗ್ರಹ ಸ್ಥಿತಿ ಹಾಗೂ ಗ್ರಹಣಾಚರಣೆಯ ಪ್ರಭಾವ ಖಂಡಿತಾ ಇರುತ್ತದೆ. ಸೂರ್ಯ- ಚಂದ್ರರು ಈ ಭೂಮಿಯ ಮೇಲಿನ ಜನರಿಗೆ ಕಾಣಿಸಿಕೊಳ್ಳುವ ಸಮಯ ಒಂದೊಂದು ರೀತಿ ಇರಬಹುದು, ಆದರೆ ಇರುವುದು ಒಬ್ಬನೇ ಸೂರ್ಯ ಹಾಗೂ ಒಬ್ಬನೇ ಚಂದ್ರ. ಆದ್ದರಿಂದ ಪರಿಣಾಮವೂ ಒಂದೇ. ಈ ಮೇಲೆ ತಿಳಿಸಿದ ಅನಾಹುತಗಳು ಜಗತ್ತಿನ ನಾನಾ ಬಗೆಯಿಂದ ವರದಿ ಆಗುತ್ತವೆ. 

ಕೇತುಗ್ರಸ್ತ ಚಂದ್ರ ಗ್ರಹಣ ಮಾರ್ಚ್ ಮೂರಕ್ಕೆ ಸಿಂಹ ರಾಶಿಯಲ್ಲಿ; ಮೇಷದಿಂದ ಮೀನದ ತನಕ ಯಾರಿಗೆ ಏನು ಫಲ?

ಮುನ್ನೆಚ್ಚರಿಕೆ:

“ಭೂಕಂಪ ಪದೇಪದೇ ಆಗುವ ಪ್ರದೇಶದಲ್ಲಿ ಇರುವವರು ತಮ್ಮಿಂದ ಸಾಧ್ಯವಾಗುವಂಥ, ವಿವೇಕಕ್ಕೆ ಹೊಳೆಯುವಂಥ ಸಂಗತಿಗಳನ್ನು ಅಳವಡಿಸಿಕೊಂಡು ಮುಂಜಾಗ್ರತೆ ವಹಿಸಬೇಕು. ಇನ್ನು ಜ್ವಾಲಾಮುಖಿಯು ಜೀವಂತ ಇರುವಂಥ ಪ್ರದೇಶಗಳಲ್ಲಿ ಸಹ ಹೀಗೆ ಮನುಷ್ಯ ಮಾತ್ರರಿಂದ ಏನೇನು ಮುಂಜಾಗ್ರತೆ ತೆಗೆದುಕೊಳ್ಳುವುದಕ್ಕೆ ಸಾಧ್ಯವಿದೆಯೋ ಅದನ್ನು ಮಾಡಲೇಬೇಕು. 

ಬಿಳಿ ಬಣ್ಣದ ಕುರ್ತಾ ಮತ್ತು ನೀಲಿ ಬಣ್ಣದ ಶಾಲು ಧರಿಸಿರುವ ಪ್ರಕಾಶ್ ಅಮ್ಮಣ್ಣಾಯ ಅವರು ನಕ್ಷತ್ರಪುಂಜದ ಹಿನ್ನೆಲೆಯಲ್ಲಿರುವ ಭಾವಚಿತ್ರ.
ಪ್ರಕಾಶ್ ಅಮ್ಮಣ್ಣಾಯ

“ಭಗವಂತನನ್ನು ಪ್ರಾರ್ಥನೆ ಮಾಡುವುದು ಎಲ್ಲಕ್ಕೂ ಇರುವ ಏಕೈಕ ಪರಿಹಾರ ಮಾರ್ಗ. ಆದರೆ ಈ ಗ್ರಹ ಸ್ಥಿತಿಯ ಮಧ್ಯೆಯೇ ಸೂರ್ಯ- ಚಂದ್ರ ಗ್ರಹಣವೂ ಇರುವುದರಿಂದ ಬುದ್ಧಿಗೆ ಮಂಕು ಕವಿಯುತ್ತದೆ. ಆಗುವುದಿದ್ದರೆ ಆಗುತ್ತದೆ, ಮನೆಯಲ್ಲಿ ಇದ್ದರೂ ಅಗುತ್ತದೆ ಎಲ್ಲಿದ್ದರೂ ಆಗುತ್ತದೆ ಎಂಬ ‘ಅಹಂಭಾವ’ವೊಂದು ತಲೆ ಹೊಕ್ಕಿ ಕುಳಿತುಕೊಳ್ಳುತ್ತದೆ. ಇದು ಕೂಡ ಅದೇ ಗ್ರಹ ಸ್ಥಿತಿ ಹಾಗೂ ಗ್ರಹಣದ ಪರಿಣಾಮ ಮತ್ತು ಪ್ರಭಾವ. ಒಬ್ಬ ಜ್ಯೋತಿಷಿಯಾಗಿ ಆ ದೇವರಲ್ಲಿ ನಾನು ಕೇಳಿಕೊಳ್ಳಬಹುದಾದದ್ದು ಏನೆಂದರೆ, ಲೋಕಾ ಸಮಸ್ತ ಸುಖಿನೋ ಭವಂತು. ಸಕಲ ಚರಾಚರ ಜೀವರಾಶಿಗಳಿಗೆ ಒಳಿತಾಗಲಿ, ಒಳಿತಷ್ಟೇ ಆಗಲಿ,” ಎಂದು ಪ್ರಕಾಶ್ ಅಮ್ಮಣ್ಣಾಯ ಅವರು ಮಾತು ಮುಗಿಸಿದರು.

ಅಂಶ ವಿವರಣೆ
ಪ್ರಮುಖ ಗ್ರಹ ಬದಲಾವಣೆ ರವಿ ಗ್ರಹದ ಕುಂಭ ರಾಶಿ ಪ್ರವೇಶ (ಫೆಬ್ರವರಿ 13)
ವಿಶೇಷ ದೃಷ್ಟಿ ಮಕರದಲ್ಲಿರುವ ಉಚ್ಚ ಕುಜನ 4ನೇ ದೃಷ್ಟಿ
ಅಪಾಯದ ಅವಧಿ ಫೆಬ್ರವರಿ 13 ರಿಂದ ಫೆಬ್ರವರಿ 22
ಸೂರ್ಯ ಗ್ರಹಣ ಫೆಬ್ರವರಿ 17 (ರಾಹುಗ್ರಸ್ತ)
ಚಂದ್ರ ಗ್ರಹಣ ಮಾರ್ಚ್ 3 (ಕೇತುಗ್ರಸ್ತ – ಭಾರತದಲ್ಲಿ ಗೋಚರ)
ಸಂಭವನೀಯ ಅನಾಹುತ ಭೂಕಂಪ, ಜ್ವಾಲಾಮುಖಿ, ಅಗ್ನಿ ಅವಘಡಗಳು
ಹೆಚ್ಚಿನ ಪ್ರಭಾವದ ವಲಯ ಭಾರತದ ಪೂರ್ವ-ಈಶಾನ್ಯ ಭಾಗ ಮತ್ತು ಜಾಗತಿಕ ಮಟ್ಟ

ನಿರೂಪಣೆ- ಶ್ರೀನಿವಾಸ ಮಠ

ಶ್ರೀನಿವಾಸ ಮಠ

ಸಂಪಾದಕರು, ಶ್ರೀಗುರುಭ್ಯೋ.ಕಾಮ್

ಪತ್ರಿಕೋದ್ಯಮದಲ್ಲಿ ಹದಿನೆಂಟು ವರ್ಷಕ್ಕೂ ಹೆಚ್ಚು ಅನುಭವ ಇರುವ ಲೇಖಕ. ಕನ್ನಡದ ಪ್ರಮುಖ ದಿನಪತ್ರಿಕೆಗಳು ಹಾಗೂ ವಾರಪತ್ರಿಕೆ ಮತ್ತು ಆನ್ ಲೈನ್ ವೆಬ್ ಪೋರ್ಟಲ್ ಗಳಲ್ಲಿ ವಿವಿಧ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ವೈದಿಕ ಜ್ಯೋತಿಷ್ಯವನ್ನು ಪದ್ಧತಿಯಿಂದ ಅಭ್ಯಾಸ ಮಾಡಿರುವಂಥ ಇವರು, ಈ ತನಕ ಮೂರು ಸಾವಿರಕ್ಕೂ ಹೆಚ್ಚು ಜ್ಯೋತಿಷ್ಯ ಲೇಖನಗಳನ್ನು ವಿವಿಧ ವೆಬ್ ಪೋರ್ಟಲ್ ಗಳಿಗಾಗಿ ಬರೆದಿದ್ದಾರೆ. ಅಧ್ಯಾತ್ಮ, ಜ್ಯೋತಿಷ್ಯ ಹಾಗೂ ಧಾರ್ಮಿಕ ವಿಷಯಗಳಲ್ಲಿ ಅಳವಾದ ಜ್ಞಾನ ಮತ್ತು ನಿರಂತರ ಅಧ್ಯಯನ ಇರುವಂಥ ಶ್ರೀನಿವಾಸ ಮಠ ಸದ್ಯಕ್ಕೆ ಬೆಂಗಳೂರಿನಲ್ಲಿ ವಾಸವಿದ್ದು, ಜ್ಯೋತಿಷ್ಯವನ್ನು ವೃತ್ತಿಯಾಗಿ ಸ್ವೀಕರಿಸಿದ್ದಾರೆ.

Latest News

Related Posts