ವೈಶಾಖ ಮಾಸದ ಶುಕ್ಲ ಪಕ್ಷ ಚುತುರ್ದಶಿ ಬಹಳ ವಿಶೇಷವಾದ ದಿನ. ಏಕೆಂದರೆ, ವಿಷ್ಣುವಿನ ನಾಲ್ಕನೇ ಅವತಾರ ನರಸಿಂಹನ ಸ್ವರೂಪದಲ್ಲಿ ಕಾಣಿಸಿಕೊಂಡ ದಿನ ಇದು ಎಂಬುದು ನಂಬಿಕೆ ಆಗಿದೆ. ವಿಷ್ಣುವಿನ ಉಳಿದ ಅವತಾರಗಳು ಎಂದು ನಂಬಿಕೆಯಲ್ಲಿ ಇರುವುದು ಒಂದೋ ಪ್ರಾಣಿ ರೂಪದಲ್ಲಿ (ಮತ್ಸ್ಯ, ಕೂರ್ಮ, ವರಾಹ ಹೀಗೆ) ಅಥವಾ ಮನುಷ್ಯ ರೂಪದಲ್ಲಿ ಇರುವಂಥದ್ದು (ಉದಾಹರಣೆಗೆ ವಾಮನ, ರಾಮ, ಕೃಷ್ಣ, ಪರಶುರಾಮ ಹೀಗೆ). ಆದರೆ ಈ ನರಸಿಂಹ ಅವತಾರ ಮಾತ್ರ ನರ, ಅಂದರೆ ಮನುಷ್ಯ ಹಾಗೂ ಸಿಂಹ ಎರಡರ ಮಿಶ್ರಣ ಆಗಿದೆ. ತನ್ನ ಪರಮ ಭಕ್ತ ಪ್ರಹ್ಲಾದನಿಗಾಗಿ ವಿಷ್ಣುವು ನರಸಿಂಹ ರೂಪದಲ್ಲಿ ಅವತರಿಸಿ, ಹಿರಣ್ಯಕಶ್ಯಪುವಿನ ವಧೆ ಮಾಡುತ್ತಾನೆ.
ಅಂಥ ನರಸಿಂಹ ಅವತಾರ ಆದ ದಿನವನ್ನು ನರಸಿಂಹ ಜಯಂತಿ ಎಂದು ಆಚರಿಸಲಾಗುತ್ತದೆ. ವಿಗ್ರಹ, ಚಿತ್ರಪಟ, ಸಾಲಿಗ್ರಾಮ ಹೀಗೆ ನಾನಾ ಸ್ವರೂಪದಲ್ಲಿ ನರಸಿಂಹ ದೇವರ ಆರಾಧನೆಯನ್ನು ಮಾಡಲಾಗುತ್ತದೆ. ಅದರಲ್ಲಿ ಸಾಲಿಗ್ರಾಮ ಸ್ವರೂಪದಲ್ಲಿ ಇರುವ ನರಸಿಂಹ ದೇವರ ಆರಾಧನೆ ಮಾಡುವುದು ಬಹಳ ವಿಶೇಷ. ಯಥೇಚ್ಛವಾದ ಗಂಧ, ತುಳಸಿ, ಬಿಳಿ ಹಾಗೂ ಕೆಂಪು ಹೂವುಗಳಿಂದ ಆರಾಧನೆ ಮಾಡುವುದಕ್ಕೆ ಮಹತ್ವ ಹೆಚ್ಚು. ಪಾರಿಜಾತ, ಮಲ್ಲಿಗೆ, ಚಂಪಕ, ಸಂಪಿಗೆ, ರೋಜಾ ಹೂವು ಇತ್ಯಾದಿಗಳಿಂದ ಆರಾಧನೆ ಮಾಡುವುದು ಶ್ರೇಷ್ಠ ಎನ್ನುತ್ತಾರೆ ಮೈಸೂರಿನ ಇರ್ವಿನ್ ರಸ್ತೆಯಲ್ಲಿ ಇರುವ ಆಂಜನೇಯ ಸ್ವಾಮಿ ಅರ್ಚಕರಾದ ವಿದ್ವಾನ್ ಕೃಷ್ಣಮೂರ್ತಿಯವರು.
ತೈಲ ಮಜ್ಜನ, ಮಧು ಅಭಿಷೇಕ
ಅದೇ ರೀತಿ ನರಸಿಂಹ ದೇವರಿಗೆ ತೈಲ ಮಜ್ಜನ, ಮಧು ಅಭಿಷೇಕ, ಪಂಚಾಮೃತ ಅಭಿಷೇಕ ಹಾಗೂ ಪಾನಕದಿಂದ ಮಾಡುವಂಥ ಅಭಿಷೇಕ ಹಾಗೂ ನೈವೇದ್ಯ ಕೂಡ ತುಂಬ ಶ್ರೇಷ್ಠವಾದದ್ದು. ದೇವರ ಆರಾಧನೆ ಮಾಡಬೇಕು ಎಂಬ ಇಚ್ಛೆ ಹಾಗೂ ಶ್ರದ್ಧೆ ಕೂಡ ಅಷ್ಟೇ ಮುಖ್ಯವಾದದ್ದು. ಸಕಲ ಸೃಷ್ಟಿಯೂ ಅವನದೇ ಆದ್ದರಿಂದ ಆ ದೇವರ ಆರಾಧನೆ ಮಾಡುವಾಗ ಸಮರ್ಪಣಾ ಭಾವ ಸಹ ಮುಖ್ಯವಾಗುತ್ತದೆ. ಅಧ್ಯಾತ್ಮದಲ್ಲಿ “ಶರಣಾಗತಿ ಭಾವ”ಕ್ಕೆ ವಿಶೇಷ ಪ್ರಾತಿನಿಧ್ಯ. ಭಗವಂತನಿಗೆ ಸಂಪೂರ್ಣವಾಗಿ ಶರಣಾಗಬೇಕು, ಅವನ ಬಗ್ಗೆ ಕಿಂಚಿತ್ತು ಸಹ ಅನುಮಾನಕ್ಕೆ ಎಡೆ ಇಲ್ಲದಂಥ ಭಕ್ತಿ ಇರಬೇಕು ಎಂಬುದು ಶರಣಾಗತಿ ಭಾವದ ಅರ್ಥ.
ಇನ್ನು ನರಸಿಂಹ ದೇವರಿಗೆ ಪಾನಕ, ಕೋಸಂಬರಿ, ದಾಳಿಂಬೆ, ವಿವಿಧ ಹಣ್ಣುಗಳ ನೈವೇದ್ಯವನ್ನು ಮಾಡಲಾಗುತ್ತದೆ. ಜತೆಗೆ ಈ ದಿನ ನರಸಿಂಹ ದೇವರ ಕುರಿತಾದ ಪ್ರವಚನ ಕೇಳುವುದು, ಸ್ತೋತ್ರವನ್ನು ಪಠಣ ಮಾಡುವುದು, ಕೇಳಿಸಿಕೊಳ್ಳುವುದು, ಮಂತ್ರಗಳ ಪಠಣ ಹಾಗೂ ಕೇಳಿಸಿಕೊಳ್ಳುವುದಕ್ಕೆ ಕೂಡ ವಿಶೇಷ ಆದ್ಯತೆಯನ್ನು ನೀಡಲಾಗಿದೆ. ತಂತಮ್ಮ ಮನೆಗಳಲ್ಲಿ ನರಸಿಂಹ ದೇವರ ಅವತಾರ ಹಾಗೂ ಆ ಸಂದರ್ಭ ಮತ್ತು ವಿಷ್ಣುವಿಗೆ ಸಂಬಂಧಿಸಿದ ವಿಚಾರಗಳನ್ನು ಸ್ಮರಣೆ ಮಾಡಬೇಕು ಎಂದು ಪಂಡಿತರ ಸಲಹೆಯಾಗಿದೆ.
ಆ ಭಗವಂತನೇ ರಾಮಾನುಜಾಚಾರ್ಯರಿಂದ ಮಂತ್ರೋಪದೇಶ ಪಡೆದು ವೈಷ್ಣವ ನಂಬಿ ಎನಿಸಿದ ವಿಶಿಷ್ಟ ಕ್ಷೇತ್ರ ತಿರುಕ್ಕುರುಂಗುಡಿ
ನರಸಿಂಹ ಸನ್ನಿಧಾನ
ಆಂಧ‌್ರಪ್ರದೇಶದ ಅಹೋಬಿಲಂನಲ್ಲಿ ಇರುವ ನರಸಿಂಹ ದೇವರ ದರ್ಶನ ಪಡೆಯುವುದು ತುಂಬ ವಿಶೇಷ. ಇಲ್ಲಿ ಒಂಬತ್ತು ನರಸಿಂಹ ದೇವಸ್ಥಾನಗಳಿವೆ. ಅದರಲ್ಲಿ ಅಹೋಬಿಲದ ಉಗ್ರ ನರಸಿಂಹ ಬಹಳ ಹಳೆಯ ಹಾಗೂ ತುಂಬ ವಿಶೇಷ ಪ್ರಾತಿನಿಧ್ಯ ಇರುವಂಥ ಸ್ಥಳ. ಅದೇ ರೀತಿ ಇಲ್ಲಿ ನವನರಸಿಂಹರ ಸನ್ನಿಧಾನ ಇದ್ದು, ಅವುಗಳ ಹೆಸರು ಹೀಗಿವೆ: ಶ್ರೀ ಕ್ರೋಧ ನರಸಿಂಹ, ಶ್ರೀ ಮಲೋಲ ನರಸಿಂಹ, ಶ್ರೀ ಜ್ವಾಲಾ ನರಸಿಂಹ, ಶ್ರೀ ಯೋಗಾನಂದ ನರಸಿಂಹ, ಶ್ರೀ ಚತ್ರವಥ ನರಸಿಂಹ, ಶ್ರೀ ಪಾವನ ನರಸಿಂಹ, ಶ್ರೀ ಭಾರ್ಗವ ನರಸಿಂಹ, ಶ್ರೀ ಕಾರಂಜ ನರಸಿಂಹ.
ಇನ್ನು ಕರ್ನಾಟಕದಲ್ಲಿ ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಎಂಟು ನೂರು ವರ್ಷಗಳ ಹಿಂದಿನ ಉಗ್ರ ನರಸಿಂಹ ದೇವರ ದೇವಾಲಯ ಇದೆ. ತುಮಕೂರು ಜಿಲ್ಲೆಯ ದೇವರಾಯನ ದುರ್ಗದಲ್ಲಿ ನರಸಿಂಹ ದೇವರ ದೇವಾಲಯ ಇದೆ. ಕೆರೆತೊಂಡನೂರಿನಲ್ಲಿ ಪ್ರಹ್ಲಾದರಿಂದ ಪ್ರತಿಷ್ಠಾಪನೆ ಆಗಿರುವ ಯೋಗಾ ನರಸಿಂಹ, ಮುಳಬಾಗಿಲಿನ ನರಸಿಂಹ ತೀರ್ಥದಲ್ಲಿ ಇರುವ ಯೋಗಾ ನರಸಿಂಹ, ಸೇಲಂನ ನಾಮಕ್ಕಲ್ ನಲ್ಲಿ ಇರುವ ನರಸಿಂಹ ದೇವರ ದೇವಾಲಯ, ಬೆಂಗಳೂರಿನ ನಾರ್ಥ್ ರೋಡ್ ಬಳಿ ಉತ್ತರಾದಿ ಮಠದಿಂದ ಆಗಿರುವ ದಿಗ್ವಿಜಯ ನರಸಿಂಹ ದೇವರ ದೇವಾಲಯ ಹೀಗೆ ಅನೇಕ ಕಡೆ ಭಕ್ತರು ತೆರಳಿ ದರ್ಶನ ಪಡೆಯುತ್ತಾರೆ.
ಸ್ವಾತಿ ನಕ್ಷತ್ರ ವಿಶೇಷ
ಸಾಮಾನ್ಯವಾಗಿ ಸ್ವಾತಿ ನಕ್ಷತ್ರ ಇರುವ ದಿನ ನರಸಿಂಹ ದೇವರಿಗೆ ವಿಶೇಷವಾದ ಆರಾಧನೆ ಮಾಡಲಾಗುತ್ತದೆ. ಏಕೆಂದರೆ ನರಸಿಂಹ ದೇವರದು ಸ್ವಾತಿ ನಕ್ಷತ್ರ. ಆ ನಕ್ಷತ್ರ ಇರುವ ದಿನ ವಿಶೇಷ ಬಗೆಗಳಲ್ಲಿ ಆ ದೇವರ ಆರಾಧನೆಯನ್ನು ಮಾಡಲಾಗುತ್ತದೆ. ಆರಂಭದಲ್ಲೇ ಹೇಳಿದಂತೆ ನರಸಿಂಹ ದೇವರ ವಿಗ್ರಹ ಅಥವಾ ಸಾಲಿಗ್ರಾಮಕ್ಕೆ ಪಾನಕ ನೈವೇದ್ಯ ಬಹಳ ಶ್ರೇಷ್ಠ. ಜತೆಗೆ ಅದರಲ್ಲಿ ಅಭಿಷೇಕವನ್ನು ಸಹ ಮಾಡಲಾಗುತ್ತದೆ. ಕೆಲವರು ಸ್ವಾತಿ ವ್ರತ ಎಂದು ಕೂಡ ಆಚರಣೆಯನ್ನು ಮಾಡುತ್ತಾರೆ. ಆ ದಿನ ಉಪವಾಸವಿದ್ದು, ಹಣ್ಣು ಅಥವಾ ಫಲಾಹಾರ (ಈರುಳ್ಳಿ, ಬೆಳ್ಳುಳ್ಳಿ ಬಳಸದೆ ಮಾಡಿರುವಂಥದ್ದು) ಸ್ವೀಕರಿಸುತ್ತಾರೆ. ಪಾನಕವನ್ನು ನೈವೇದ್ಯ ಮಾಡಿ, ಹಂಚಲಾಗುತ್ತದೆ.
ನರಸಿಂಹ ದೇವರ ಮಂತ್ರ
ಉಗ್ರಂ ವೀರಂ ಮಹಾವಿಷ್ಣುಂ ಜ್ವಲಂತಂ ಸರ್ವತೋಮುಖಂ
ನರಸಿಂಹಂ ಭೀಷಣಂ ಭದ್ರಂ ಮೃತ್ಯೋಮೃತ್ಯು ನಮಾಮ್ಯಹಂ
ಮಂಜುನಾಥ್ ಭಾರದ್ವಾಜ್ (ಜ್ಯೋತಿಷಿಗಳು- ಪುರೋಹಿತರು), ಜಾತಕಗಳನ್ನು ಮಾಡಿಸಲು, ಪೌರೋಹಿತ್ಯಕ್ಕೆ ಹಾಗೂ ಜ್ಯೋತಿಷಕ್ಕೆ ಸಂಬಂಧಿಸಿದಂತೆ ವೈಯಕ್ತಿಕವಾಗಿ ಭೇಟಿ ಮಾಡುವುದಕ್ಕೆ ಮೊಬೈಲ್ ಫೋನ್ ಸಂಖ್ಯೆ- 9980300790 ಸಂಪರ್ಕಿಸಿ.