ಜ್ಯೋತಿಷ್ಯ ಶಾಸ್ತ್ರದಲ್ಲಿ ಬುಧನನ್ನು ‘ಗ್ರಹಗಳ ರಾಜಕುಮಾರ’ ಎಂದು ಕರೆಯಲಾಗುತ್ತದೆ. ಬುದ್ಧಿಶಕ್ತಿ, ವ್ಯಾಪಾರ, ಗಣಿತ ಮತ್ತು ಸಂವಹನ ಕಲೆಗೆ ಅಧಿಪತಿಯಾದ ಬುಧನು 2026ರ ಜನವರಿ 17ರಂದು ಮಕರ ರಾಶಿಯನ್ನು ಪ್ರವೇಶಿಸಲಿದ್ದಾನೆ. ಮಿಥುನ ಹಾಗೂ ಕನ್ಯಾ ರಾಶಿಗೆ ಬುಧನು ಅಧಿಪತಿಯಾಗುತ್ತಾನೆ. ಕನ್ಯಾ ರಾಶಿಯಲ್ಲಿ ಉಚ್ಚ ಸ್ಥಿತಿಯನ್ನು ತಲುಪುವ ಬುಧ, ಮೀನ ರಾಶಿಯಲ್ಲಿ ನೀಚ ಸ್ಥಿತಿ ಆಗುತ್ತದೆ. ಮಕರ ರಾಶಿಯು ಪೃಥ್ವಿ ತತ್ವದ ರಾಶಿಯಾದ್ದರಿಂದ, ಈ ಅವಧಿಯಲ್ಲಿ ಆಲೋಚನೆಗಳು ಹೆಚ್ಚು ಪ್ರಾಯೋಗಿಕವಾಗಿ ಮತ್ತು ಗುರಿ ಆಧಾರಿತವಾಗಿರುತ್ತವೆ.
ದಿನಾಂಕ ಮತ್ತು ಸಮಯ:
- ಬುಧನ ಮಕರ ಪ್ರವೇಶ: ಜನವರಿ 17, 2026 (ಶನಿವಾರ).
- ಅವಧಿ: ಬುಧನು ಫೆಬ್ರವರಿ 3, 2026ರವರೆಗೆ ಇದೇ ರಾಶಿಯಲ್ಲಿ ಸಂಚರಿಸಿ, ನಂತರ ಕುಂಭ ರಾಶಿಗೆ ಹೊರಡುತ್ತಾನೆ.
1. ಮೇಷ ರಾಶಿ (Aries): ಮೇಷ ರಾಶಿಯವರಿಗೆ ಬುಧನು ಹತ್ತನೇ ಮನೆಯಲ್ಲಿ ದಿಗ್ಬಲವನ್ನು ಹೊಂದುತ್ತಾನೆ. ವೃತ್ತಿ ಕ್ಷೇತ್ರದಲ್ಲಿ ಇದುವರೆಗಿನ ಗೊಂದಲಗಳು ಬಗೆಹರಿದು ನಿಮ್ಮ ಮಾತಿಗೆ ಮನ್ನಣೆ ಸಿಗಲಿದೆ. ವ್ಯಾಪಾರದಲ್ಲಿ ಹೊಸ ತಂತ್ರಜ್ಞಾನ ಅಳವಡಿಸಲು ಇದು ಸಕಾಲ. ಮೇಲಧಿಕಾರಿಗಳೊಂದಿಗೆ ಸಂವಹನ ನಡೆಸುವಾಗ ತರ್ಕಬದ್ಧವಾಗಿ ಮಾತನಾಡಿ.
2. ವೃಷಭ ರಾಶಿ (Taurus): ನಿಮ್ಮ ರಾಶ್ಯಾಧಿಪತಿ ಶುಕ್ರನ ಮಿತ್ರನಾದ ಬುಧನು ಒಂಬತ್ತನೇ ಮನೆಯಲ್ಲಿ ಸಂಚರಿಸುವುದು ಅದೃಷ್ಟದ ಬಾಗಿಲು ತೆರೆದಂತೆ. ದೀರ್ಘಕಾಲದ ಕಾನೂನು ಸಮಸ್ಯೆಗಳು ಮಾತುಕತೆಯ ಮೂಲಕ ಸುಖಾಂತ್ಯಗೊಳ್ಳಲಿವೆ. ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ ದಾಖಲೆಗಳ ಕೆಲಸಗಳು ಇಂದು ವೇಗ ಪಡೆಯಲಿವೆ.
3. ಮಿಥುನ ರಾಶಿ (Gemini): ನಿಮ್ಮ ರಾಶ್ಯಾಧಿಪತಿ ಬುಧನು ಎಂಟನೇ ಮನೆಯಲ್ಲಿರುವುದರಿಂದ ಜಾಗರೂಕರಾಗಿರಿ. ವಿಶೇಷವಾಗಿ ಆರ್ಥಿಕ ವ್ಯವಹಾರಗಳಲ್ಲಿ ಅಥವಾ ಸಹಿ ಮಾಡುವಾಗ ಎಚ್ಚರವಿರಲಿ. ಆದರೆ ವಿಜ್ಞಾನಿಗಳು ಮತ್ತು ಸಂಶೋಧಕರಿಗೆ ಇದು ಅರಿವಿಗೆ ಮೀರಿದ ವಿಷಯಗಳನ್ನು ಅರ್ಥ ಮಾಡಿಕೊಳ್ಳಲು ಅದ್ಭುತ ಸಮಯ.
4. ಕಟಕ ರಾಶಿ (Cancer): ಏಳನೇ ಮನೆಯ ಬುಧನು ನಿಮ್ಮ ವೈಯಕ್ತಿಕ ಸಂಬಂಧಗಳಲ್ಲಿ ಪಾರದರ್ಶಕತೆ ತರಲಿದ್ದಾನೆ. ಸಂಗಾತಿಯ ಹೆಸರಿನಲ್ಲಿ ಹೊಸ ಹೂಡಿಕೆ ಮಾಡಲು ಇದು ಪ್ರಶಸ್ತ ಕಾಲ. ಸಾರ್ವಜನಿಕವಾಗಿ ನಿಮ್ಮ ಇಮೇಜ್ ಸುಧಾರಿಸಲಿದ್ದು, ಹೊಸ ಒಪ್ಪಂದಗಳಿಗೆ ಇದು ನಾಂದಿಯಾಗಲಿದೆ.
5. ಸಿಂಹ ರಾಶಿ (Leo): ಆರನೇ ಮನೆಯಲ್ಲಿ ಬುಧನ ಸಂಚಾರವು ಸವಾಲುಗಳನ್ನು ತಂದರೂ ನಿಮ್ಮ ಬುದ್ಧಿವಂತಿಕೆಯಿಂದ ಅವುಗಳನ್ನು ಮೆಟ್ಟಿ ನಿಲ್ಲುವಿರಿ. ಸ್ಪರ್ಧಾತ್ಮಕ ಪರೀಕ್ಷೆ ಬರೆಯುವವರಿಗೆ ಏಕಾಗ್ರತೆ ಹೆಚ್ಚಲಿದೆ. ಕಚೇರಿಯಲ್ಲಿ ಸಹೋದ್ಯೋಗಿಗಳ ಸಣ್ಣಪುಟ್ಟ ರಾಜಕೀಯಕ್ಕೆ ತಲೆ ಕೆಡಿಸಿಕೊಳ್ಳಬೇಡಿ.
6. ಕನ್ಯಾ ರಾಶಿ (Virgo): ನಿಮ್ಮ ರಾಶ್ಯಾಧಿಪತಿ ಬುಧನು ಐದನೇ ಮನೆಯಲ್ಲಿ ಸಂಚರಿಸುತ್ತಿರುವುದು ನಿಮ್ಮ ಸೃಜನಶೀಲತೆಯನ್ನು ಹೆಚ್ಚಿಸಲಿದೆ. ಬರಹಗಾರರಿಗೆ, ಕಲಾವಿದರಿಗೆ ಹೊಸ ಅವಕಾಶಗಳು ಲಭಿಸಲಿವೆ. ಮಕ್ಕಳ ಶಿಕ್ಷಣದ ಕುರಿತು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ಇದು ಸರಿಯಾದ ಸಮಯ.
7. ತುಲಾ ರಾಶಿ (Libra): ನಾಲ್ಕನೇ ಮನೆಯ ಬುಧನು ನಿಮ್ಮ ಕೌಟುಂಬಿಕ ಜೀವನದಲ್ಲಿ ಶಾಂತಿ ತರಲಿದ್ದಾನೆ. ಮನೆ ರಿಪೇರಿ ಅಥವಾ ಪೀಠೋಪಕರಣಗಳ ಖರೀದಿಗೆ ಹಣ ವ್ಯಯವಾಗಬಹುದು. ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಇರುವವರಿಗೆ ನಿರೀಕ್ಷಿತ ದಾಖಲೆಗಳು ಕೈಸೇರಲಿವೆ.
ಕರುಂಗಾಲಿ ಮಾಲೆ ಧರಿಸಿದರೆ ಸಿಗುವ ಲಾಭಗಳೇನು? ದಿಂಡಿಗಲ್ ಪಾತಾಳ ಮುರುಗನ್ ದೇವಸ್ಥಾನದ ವಿಶೇಷತೆ, ನಂಬಿಕೆಗಳು
8. ವೃಶ್ಚಿಕ ರಾಶಿ (Scorpio): ಮೂರನೇ ಮನೆಯಲ್ಲಿ ಬುಧನು ನಿಮ್ಮ ಧೈರ್ಯ ಮತ್ತು ಸಂವಹನವನ್ನು ಸಮತೋಲನಗೊಳಿಸಲಿದ್ದಾನೆ. ನಿಮ್ಮ ಸಹೋದರ-ಸಹೋದರಿಯರೊಂದಿಗೆ ಇದ್ದ ಹಳೆಯ ವಿವಾದಗಳು ಬಗೆಹರಿಯಲಿವೆ. ಮಾರ್ಕೆಟಿಂಗ್ ಕ್ಷೇತ್ರದಲ್ಲಿ ಇರುವವರಿಗೆ ಹೊಸ ಟಾರ್ಗೆಟ್‌ಗಳನ್ನು ಮುಟ್ಟಲು ಇದು ಸುಲಭವಾಗಲಿದೆ.
9. ಧನು ರಾಶಿ (Sagittarius): ಎರಡನೇ ಮನೆಯಲ್ಲಿ ಬುಧನ ಸಂಚಾರವು ಆರ್ಥಿಕ ಲಾಭದ ಜೊತೆಗೆ ಮಾತಿನ ಚಾತುರ್ಯವನ್ನು ನೀಡಲಿದೆ. ಕುಟುಂಬದ ಹಿರಿಯರ ಸಲಹೆಯು ನಿಮಗೆ ಹೊಸ ಆರ್ಥಿಕ ಮೂಲವನ್ನು ತೋರಿಸಿಕೊಡಲಿದೆ. ಷೇರು ಮಾರುಕಟ್ಟೆಯಲ್ಲಿ ಸಣ್ಣ ಹೂಡಿಕೆಗಳು ಲಾಭ ನೀಡಲಿವೆ.
10. ಮಕರ ರಾಶಿ (Capricorn): ನಿಮ್ಮದೇ ರಾಶಿಯಲ್ಲಿ ಬುಧನ ಆಗಮನವು ನಿಮ್ಮನ್ನು ಹೆಚ್ಚು ಕ್ರಿಯಾಶೀಲರನ್ನಾಗಿ ಮಾಡಲಿದೆ. ಗೊಂದಲಗಳಿಲ್ಲದ ಸ್ಪಷ್ಟ ನಿರ್ಧಾರಗಳನ್ನು ತೆಗೆದುಕೊಳ್ಳುವಿರಿ. ಗಣಿತ, ಸಿಎ ಅಥವಾ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಇರುವವರಿಗೆ ಈ ದಿನಗಳು ಅತ್ಯಂತ ಲಾಭದಾಯಕವಾಗಿರಲಿವೆ.
11. ಕುಂಭ ರಾಶಿ (Aquarius): ಹನ್ನೆರಡನೇ ಮನೆಯಲ್ಲಿ ಬುಧ ಸಂಚಾರವಿರುವುದರಿಂದ ವಿದೇಶಿ ವ್ಯವಹಾರಗಳಲ್ಲಿ ಲಾಭವಾಗಲಿದೆ. ಆದರೆ ಆನ್‌ಲೈನ್ ವಂಚನೆಗಳ ಬಗ್ಗೆ ಎಚ್ಚರವಿರಲಿ. ಆಧ್ಯಾತ್ಮಿಕ ಲೇಖನಗಳ ಓದುವಿಕೆಯಿಂದ ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳುವಿರಿ.
12. ಮೀನ ರಾಶಿ (Pisces): ಲಾಭ ಸ್ಥಾನದಲ್ಲಿ ಬುಧನ ಸಂಚಾರವು ನಿಮ್ಮ ದೀರ್ಘಕಾಲದ ಕನಸುಗಳನ್ನು ನನಸಾಗಿಸಲು ನೆರವಾಗಲಿದೆ. ಸಾಮಾಜಿಕ ವಲಯದಲ್ಲಿ ನಿಮ್ಮ ಪ್ರಭಾವ ಹೆಚ್ಚಲಿದ್ದು, ಹೊಸ ಸ್ನೇಹಿತರಿಂದ ಭವಿಷ್ಯಕ್ಕೆ ಪೂರಕವಾದ ಮಾಹಿತಿ ಲಭಿಸಲಿದೆ.
ಲೇಖನ- ಶ್ರೀನಿವಾಸ ಮಠ





