ಕುಂಭ ರಾಶಿಯಲ್ಲಿ ಜನಿಸಿದವರಿಗೆ ಪರಾಭವ ನಾಮ ಸಂವತ್ಸರದಲ್ಲಿ ಯುಗಾದಿ ವರ್ಷಫಲ ಹೇಗಿದೆ? ಶುಭ ಫಲಗಳು ಏನೇನು? ಗುರು ಬಲ ಇದೆಯಾ? ಎಚ್ಚರಿಕೆಗಳು ಯಾವ್ಯಾವು? 2026ರ ಪರಾಭವ ನಾಮ ಸಂವತ್ಸರವು ಕುಂಭ ರಾಶಿಯವರಿಗೆ ಪರಿವರ್ತನೆಯ ವರ್ಷ. ಶನಿಯು ಕುಂಭ ರಾಶಿಯವರಿಗೆ ಎರಡನೇ ಮನೆಯಾದ ಮೀನ ರಾಶಿಯನ್ನು ಪ್ರವೇಶಿಸಿರುವುದು ಮತ್ತು ಗುರುವಿನ ಸಂಚಾರವು ನಿಮ್ಮ ಜೀವನದ ಮೇಲೆ ಮಹತ್ವದ ಪರಿಣಾಮ ಬೀರಲಿದೆ. ನಿಮ್ಮ ರಾಶಿಯ ಸಂಪೂರ್ಣ ಭವಿಷ್ಯ ಇಲ್ಲಿದೆ:
ಕುಂಭ ರಾಶಿ ಗುಣ ಸ್ವಭಾವ
ಕುಂಭ ರಾಶಿಯವರು ಧನಿಷ್ಠಾ (3, 4ನೇ ಪಾದ), ಶತಭಿಷ ಮತ್ತು ಪೂರ್ವಾಭಾದ್ರಪದ ನಕ್ಷತ್ರದ 1, 2 ಮತ್ತು 3ನೇ ಪಾದದಲ್ಲಿ ಜನಿಸಿದವರು. ಶನಿ ಈ ರಾಶಿಯ ಅಧಿಪತಿ. ಇವರು ಸ್ವತಂತ್ರ ಮನೋಭಾವದವರು, ಬುದ್ಧಿವಂತರು ಮತ್ತು ಮಾನವೀಯತೆ ಉಳ್ಳವರು. ಹೊಸ ಆಲೋಚನೆಗಳನ್ನು ಜಾರಿಗೆ ತರುವುದರಲ್ಲಿ ಇವರು ಎತ್ತಿದ ಕೈ. ಸಮಾಜದ ಬಗ್ಗೆ ಕಳಕಳಿ ಹೊಂದಿರುವವರು, ಇತರರಿಗಿಂತ ವಿಭಿನ್ನವಾಗಿ ಯೋಚಿಸುತ್ತಾರೆ. ಸ್ನೇಹಜೀವಿಗಳಾದ ಇವರು ತಮ್ಮ ತತ್ವಗಳಿಗಾಗಿ ಬದ್ಧರಾಗಿರುತ್ತಾರೆ.
ಶನಿ ಸಂಚಾರ (ಏಳೂವರೆ ಶನಿಯ ಅಂತಿಮ ಹಂತ)
ಈ ಸಂವತ್ಸರದಲ್ಲಿ ಶನಿ ಗ್ರಹವು ನಿಮ್ಮ ರಾಶಿಯನ್ನು ಬಿಟ್ಟು ಎರಡನೇ ಮನೆಯಾದ ಮೀನ ರಾಶಿಯಲ್ಲಿ ಸಂಚರಿಸಲಿದೆ. ಇದು ಕುಂಭ ರಾಶಿಯವರಿಗೆ ಏಳೂವರೆ ಶನಿಯ ಅಂತಿಮ ಘಟ್ಟವಾದ ‘ಪಾದ ಶನಿ’ಯ ಪ್ರಭಾವದ ಕಾಲ.
- ಪರಿಣಾಮ: ಎರಡನೇ ಮನೆಯಲ್ಲಿ ಶನಿ ಇರುವುದರಿಂದ ಆರ್ಥಿಕ ಶಿಸ್ತು ಬಹಳ ಮುಖ್ಯ. ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಿ. ಕುಟುಂಬ ಸದಸ್ಯರೊಂದಿಗೆ ಮಾತನಾಡುವಾಗ ತಾಳ್ಮೆ ಇರಲಿ; ನೇರ ಮಾತುಗಳು ವೈಮನಸ್ಸಿಗೆ ಕಾರಣವಾಗಬಹುದು.
- ಧನಾತ್ಮಕ ಅಂಶ: ಏಳೂವರೆ ಶನಿಯ ಕೊನೆಯ ಹಂತ ಇದಾಗಿರುವುದರಿಂದ, ಈ ಹಿಂದೆ ಅನುಭವಿಸಿದ ಕಷ್ಟಗಳು ನಿಧಾನವಾಗಿ ಬಗೆಹರಿಯಲಿವೆ. ಹಳೆಯ ಬಾಕಿ ವಸೂಲಾಗಬಹುದು. ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಖಂಡಿತ ಸಿಗಲಿದೆ.
ಗುರು ಸಂಚಾರ
ಈ ವರ್ಷ ಗುರುವಿನ ಸಂಚಾರವು ನಿಮ್ಮ ಪಾಲಿಗೆ ದೊಡ್ಡ ಆಶೀರ್ವಾದ:
- ಜೂನ್ 1ರ ತನಕ: ಗುರುವು 5ನೇ ಮನೆಯಲ್ಲಿದ್ದು (ಪಂಚಮ ಗುರು) ಅತ್ಯಂತ ಶುಭ ಫಲಗಳನ್ನು ನೀಡಲಿದ್ದಾನೆ. ಸಂತಾನ ಯೋಗ, ವಿದ್ಯಾಭ್ಯಾಸದಲ್ಲಿ ಪ್ರಗತಿ ಮತ್ತು ಆರ್ಥಿಕ ಲಾಭವಾಗಲಿದೆ. ಮದುವೆ ಪ್ರಸ್ತಾಪಗಳು ಕೈಗೂಡಲಿವೆ.
- ಜೂನ್ 2ರಿಂದ ಅಕ್ಟೋಬರ್ 31: ಗುರುವು 6ನೇ ಮನೆಗೆ ಪ್ರವೇಶಿಸುತ್ತಾನೆ. ಈ ಸಮಯದಲ್ಲಿ ಆರೋಗ್ಯ ಮತ್ತು ಗುಪ್ತ ಶತ್ರುಗಳ ಬಗ್ಗೆ ಎಚ್ಚರಿಕೆ ಇರಲಿ. ಸಾಲದ ವ್ಯವಹಾರ ಮಾಡುವಾಗ ಜಾಗರೂಕರಾಗಿರಿ.
- ನವೆಂಬರ್ 1ರಿಂದ ಜನವರಿ 24: ಗುರುವು 7ನೇ ಮನೆಗೆ ಪ್ರವೇಶಿಸುವುದರಿಂದ ಪುನಃ ‘ಗುರುಬಲ’ ಲಭಿಸಲಿದೆ. ದಾಂಪತ್ಯ ಜೀವನ ಸುಖವಾಗಿರಲಿದ್ದು, ಸಮಾಜದಲ್ಲಿ ಗೌರವ ಹೆಚ್ಚಾಗಲಿದೆ.
- ಜನವರಿ 25ರ ನಂತರ: ಗುರುವು ಪುನಃ 6ನೇ ಮನೆಗೆ ಬರುವುದರಿಂದ ಕೆಲಸದಲ್ಲಿ ಸ್ವಲ್ಪ ಅಡೆತಡೆಗಳು ಕಂಡುಬರಬಹುದು.
ರಾಹು-ಕೇತು ಸಂಚಾರ
ವರ್ಷದ ಆರಂಭದಿಂದ ಡಿಸೆಂಬರ್ 5ರ ತನಕ ರಾಹುವು ನಿಮ್ಮ ರಾಶಿಯಲ್ಲೇ (1ನೇ ಮನೆ) ಮತ್ತು ಕೇತು 7ನೇ ಮನೆಯಲ್ಲಿ ಸಂಚರಿಸಲಿದ್ದಾರೆ.
- ರಾಹು 1ರಲ್ಲಿ: ಮಾನಸಿಕವಾಗಿ ಗೊಂದಲ ಅಥವಾ ಭ್ರಮೆ ಉಂಟಾಗಬಹುದು. ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ಹಿರಿಯರ ಸಲಹೆ ಪಡೆಯಿರಿ.
- ಕೇತು 7ರಲ್ಲಿ: ಪಾಲುದಾರಿಕೆ ವ್ಯವಹಾರದಲ್ಲಿ ಮತ್ತು ವೈಯಕ್ತಿಕ ಸಂಬಂಧಗಳಲ್ಲಿ ಪಾರದರ್ಶಕತೆ ಇರಲಿ.
ಡಿಸೆಂಬರ್ 5ರ ನಂತರ: ರಾಹು 12ನೇ ಮನೆಗೆ ಮತ್ತು ಕೇತು 6ನೇ ಮನೆಗೆ ಪ್ರವೇಶಿಸುವುದರಿಂದ ವಿದೇಶ ಪ್ರಯಾಣದ ಯೋಗ ಮತ್ತು ಶತ್ರುಗಳ ಮೇಲೆ ಜಯ ಸಿಗಲಿದೆ.
ಪರಿಹಾರಗಳು
- ಶನಿ ಸೇವೆ: ಶನಿವಾರದಂದು ಹನುಮಂತನಿಗೆ ವೀಳ್ಯದೆಲೆ ಮಾಲೆ ಅರ್ಪಿಸಿ ಅಥವಾ ಶನಿ ದೇವರಿಗೆ ಎಳ್ಳೆಣ್ಣೆ ದೀಪ ಹಚ್ಚಿ.
- ಗುರು ಪ್ರಾರ್ಥನೆ: ಗುರುವಾರಗಳಂದು ಗುರು ಚರಿತ್ರೆ ಪಠಿಸಿ ಅಥವಾ ರಾಘವೇಂದ್ರ ಸ್ವಾಮಿಗಳ ಸೇವೆ ಮಾಡಿ.
- ದಾನ: ನಿರ್ಗತಿಕರಿಗೆ ಕಪ್ಪು ಎಳ್ಳು ಅಥವಾ ಅನ್ನದಾನ ಮಾಡುವುದು ಶುಭಕರ.
- ಧ್ಯಾನ: ಪ್ರತಿದಿನ ‘ಓಂ ನಮಃ ಶಿವಾಯ’ ಮಂತ್ರವನ್ನು ಜಪಿಸಿ.
ಕುಂಭ ರಾಶಿಯವರ ಗುಣ-ಸ್ವಭಾವ: ಬುದ್ಧಿವಂತಿಕೆಯೇ ಬಂಡವಾಳವಾದರೂ ಗೊಂದಲದ ಬದುಕು ಇವರದ್ದೇಕೆ?
ಕೊನೆಮಾತು
“ಏಳೂವರೆ ಶನಿಯ ಅಂತಿಮ ಹಂತದಲ್ಲಿರುವುದರಿಂದ ಆರ್ಥಿಕವಾಗಿ ಸ್ವಲ್ಪ ಎಚ್ಚರಿಕೆ ವಹಿಸಿ. ಜೂನ್ ವರೆಗಿನ ಅದ್ಭುತ ಗುರುಬಲವನ್ನು ನಿಮ್ಮ ಉನ್ನತಿಗೆ ಬಳಸಿಕೊಳ್ಳಿ.”
ಲೇಖನ– ಶ್ರೀನಿವಾಸ ಮಠ





