Sri Gurubhyo Logo

ಕರುಂಗಾಲಿ ಮಾಲೆ ಧರಿಸಿದರೆ ಸಿಗುವ ಲಾಭಗಳೇನು? ದಿಂಡಿಗಲ್ ಪಾತಾಳ ಮುರುಗನ್ ದೇವಸ್ಥಾನದ ವಿಶೇಷತೆ, ನಂಬಿಕೆಗಳು

ಪಾತಾಳ ಮುರುಗನ್ ದೇವಸ್ಥಾನ ಮತ್ತು ಕರುಂಗಾಲಿ ಮಾಲೆ (Karungali Pathala Murugan Temple and Mala).
ಪಾತಾಳ ಮುರುಗನ್ ಹಾಗೂ ಕರುಂಗಾಲಿ ಮಾಲೆ ಪ್ರಾತಿನಿಧಿಕ ಚಿತ್ರ

ಇತ್ತೀಚಿನ ದಿನಗಳಲ್ಲಿ ಕರುಂಗಾಲಿ (Karungali) ಮಾಲೆ ಬಗ್ಗೆ ಹೆಚ್ಚೆಚ್ಚು ಕೇಳಿಬರುತ್ತಿದೆ. ಕೆಲವರು ಇದನ್ನು ಅದೃಷ್ಟದ ಸಂಕೇತ ಎಂದು ನಂಬಿದರೆ, ಮತ್ತೆ ಕೆಲವರು ಮನಸ್ಸಿಗೆ ಧೈರ್ಯ ನೀಡುವ ಆಧ್ಯಾತ್ಮಿಕ ವಸ್ತು ಎಂದು ನೋಡುತ್ತಾರೆ. ಇತ್ತೀಚೆಗೆ ಕರುಂಗಾಲಿ ಮಾಲೆಯ ಜನಪ್ರಿಯತೆ ಹೆಚ್ಚಲು ಪ್ರಮುಖ ಕಾರಣ ಸೆಲೆಬ್ರಿಟಿಗಳು. ತಮಿಳು ಚಿತ್ರರಂಗದ ಸ್ಟಾರ್‌ಗಳಾದ ಧನುಷ್, ಲೋಕೇಶ್ ಕನಕರಾಜ್, ಶಿವಕಾರ್ತಿಕೇಯನ್ ಮತ್ತು ಇತ್ತೀಚೆಗೆ ಕ್ರಿಕೆಟಿಗ ರವೀಂದ್ರ ಜಡೇಜಾ ಅವರು ಸಾರ್ವಜನಿಕವಾಗಿ ಈ ಮಾಲೆ ಧರಿಸಿ ಕಾಣಿಸಿಕೊಂಡಿದ್ದಾರೆ. ಸಂಗೀತ ನಿರ್ದೇಶಕ ಇಳಯರಾಜ ಅವರು ಕೂಡ ಇದರ ಆರಾಧಕರು. ತಮ್ಮ ಕಠಿಣ ಸಮಯ ಮತ್ತು ವೃತ್ತಿಜೀವನದ ಯಶಸ್ಸಿಗಾಗಿ ಇವರು ಈ ಮಾಲೆಯನ್ನು ನಂಬಿದ್ದಾರೆ. ಆದರೆ ಕರುಂಗಾಲಿ ಮಾಲೆಯ ಜೊತೆ ತಮಿಳುನಾಡಿನ ಪಾತಾಳ ಮುರುಗನ್ ದೇವಸ್ಥಾನದ ಹೆಸರು ಜೋಡಣೆ ಆಗಿರುವುದಕ್ಕೆ ಒಂದು ಹಿನ್ನೆಲೆ ಇದೆ ಎಂಬುದು ಬಹುತೇಕ ಜನರಿಗೆ ಗೊತ್ತಿಲ್ಲ.

ಪಾತಾಳ ಮುರುಗನ್ ದೇವಸ್ಥಾನ ಎಲ್ಲಿದೆ?

ಪಾತಾಳ ಮುರುಗನ್ ದೇವಸ್ಥಾನವು  ತಮಿಳುನಾಡಿನ ದಿಂಡಿಗಲ್ ಜಿಲ್ಲೆ, ರಾಮಲಿಂಗಂಪಟ್ಟಿ ಗ್ರಾಮದಲ್ಲಿ ಇದೆ. ದಿಂಡಿಗಲ್ ಪಟ್ಟಣದಿಂದ ಸುಮಾರು 15ರಿಂದ 18 ಕಿಲೋಮೀಟರ್ ದೂರದಲ್ಲಿರುವ ಈ ಸನ್ನಿಧಿ, ಪಶ್ಚಿಮ ಘಟ್ಟಗಳ ಅಂಚಿನಲ್ಲಿರುವ ಪ್ರದೇಶದಲ್ಲಿ ನೆಲೆಸಿದೆ. ಈ ದೇವಸ್ಥಾನಕ್ಕೆ ‘ಪಾತಾಳ ಮುರುಗನ್’ ಎಂಬ ಹೆಸರು ಬರಲು ಕಾರಣ, ಮುರುಗನ್ ಸ್ವಾಮಿಯ ಗರ್ಭಗುಡಿ ಭೂಮಿಯ ಒಳಭಾಗದಲ್ಲಿದೆ ಎಂಬ ನಂಬಿಕೆ. ಇಲ್ಲಿ ಇಳಿದು ದರ್ಶನ ಪಡೆಯುವಾಗ ಭಕ್ತರಿಗೆ ಒಂದು ವಿಶಿಷ್ಟ ಅನುಭವ ಸಿಗುತ್ತದೆ ಎಂದು ಹಲವರು ಹೇಳುತ್ತಾರೆ.

ಈ ಸನ್ನಿಧಿಯ ವಿಶೇಷತೆ ಏನು?

ಇದು ದೊಡ್ಡ ಪ್ರವಾಸಿ ಕ್ಷೇತ್ರವಲ್ಲ. ಗದ್ದಲವೂ ಇಲ್ಲ, ವ್ಯಾಪಾರವೂ ಕಡಿಮೆ. ಆದರೆ ಇಲ್ಲಿಗೆ ಬರುವ ಭಕ್ತರು ಹೇಳುವ ಒಂದು ಮಾತಿದೆ – “ಇಲ್ಲಿಗೆ ಬಂದ ಮೇಲೆ ಮನಸ್ಸು ಸಮಾಧಾನವಾಗುತ್ತದೆ.” ಮುರುಗನ್ ಸ್ವಾಮಿಯನ್ನು ಮಂಗಳ ಗ್ರಹದ ಅಧಿಪತಿ ಎಂದು ನಂಬುವ ಸಂಪ್ರದಾಯದ ಹಿನ್ನೆಲೆಯಲ್ಲಿ ಮಂಗಳ ದೋಷ, ಜೀವನದ ಅಡೆತಡೆಗಳು, ಮನಸ್ಸಿನ ಅಶಾಂತಿ ಇತ್ಯಾದಿಗಳಿಗೆ ಇಲ್ಲಿ ಪ್ರಾರ್ಥನೆ ಮಾಡಲಾಗುತ್ತದೆ.

ಕರುಂಗಾಲಿ ಮರದ ಬಗ್ಗೆ ಇರುವ ನಂಬಿಕೆ

ಕರುಂಗಾಲಿ ಮರವನ್ನು ದಕ್ಷಿಣ ಭಾರತದ ಸಂಪ್ರದಾಯಗಳಲ್ಲಿ ಪವಿತ್ರವಾಗಿ ನೋಡಲಾಗುತ್ತದೆ. ಹಿರಿಯರು ಹೇಳುವಂತೆ, ಈ ಮರವು ನಕಾರಾತ್ಮಕ ಶಕ್ತಿಯನ್ನು ಹೀರಿಕೊಳ್ಳುವ ಗುಣ ಹೊಂದಿದೆ. ಅದಕ್ಕಾಗಿಯೇ ಕರುಂಗಾಲಿ ಮರದಿಂದ ಮಾಡಿದ ಮಾಲೆ, ಉಂಗುರ ಅಥವಾ ಪೂಜಾ ವಸ್ತುಗಳಿಗೆ ವಿಶೇಷ ಗೌರವ ಇದೆ. ಕರುಂಗಾಲಿ ಮರವನ್ನು ಕೆಲವರು ‘ಕಪ್ಪು ವಜ್ರ’ ಎಂದು ಕರೆಯುವುದೂ ಇದೆ. ಕಾರಣ – ಇದು ಸಾಮಾನ್ಯ ಮರದಂತೆ ಕಾಣಿಸಿದರೂ ಅದರೊಳಗೆ ಅಪಾರ ಶಕ್ತಿ ಇದೆ ಎಂಬ ನಂಬಿಕೆ.

ಜನನ ವಾರ ಭವಿಷ್ಯ: ನೀವು ಜನಿಸಿದ ವಾರ ನಿಮ್ಮ ವ್ಯಕ್ತಿತ್ವದ ಬಗ್ಗೆ ಏನು ಹೇಳುತ್ತದೆ?

ಪಾತಾಳ ಮುರುಗನ್ ಮತ್ತು ಕರುಂಗಾಲಿ ಮಾಲೆಯ ಸಂಬಂಧ

ಪಾತಾಳ ಮುರುಗನ್ ದೇವಸ್ಥಾನಕ್ಕೆ ಬರುವ ಅನೇಕ ಭಕ್ತರು ಇಲ್ಲಿ ಕರುಂಗಾಲಿ ಮಾಲೆಯನ್ನು ಪೂಜಿಸಿ ಧರಿಸುತ್ತಾರೆ. ಮುರುಗನ್ ಸ್ವಾಮಿ ಮಂಗಳನ ಅಧಿಪತಿ, ಕರುಂಗಾಲಿ ಮರವು ಮಂಗಳನ ಶಕ್ತಿಯನ್ನು ತನ್ನೊಳಗೆ ಹೀರಿಕೊಳ್ಳುತ್ತದೆ ಎಂಬ ನಂಬಿಕೆಯೇ ಈ ಸಂಬಂಧಕ್ಕೆ ಮೂಲ. ಇದು ಶಾಸ್ತ್ರೋಕ್ತ ನಿಯಮ ಏನಲ್ಲ. ಆದರೆ ವರ್ಷಗಳಿಂದ ಇಲ್ಲಿಗೆ ಬರುವ ಭಕ್ತರ ಅನುಭವಗಳಿಂದ ಈ ನಂಬಿಕೆ ಗಟ್ಟಿಯಾಗಿ ಬೆಳೆದಿದೆ.

ಮಾಲೆ ಧರಿಸುವ ವಿಧಿ-ವಿಧಾನಗಳು

ಕರುಂಗಾಲಿ ಮಾಲೆಯನ್ನು ನೇರವಾಗಿ ಅಂಗಡಿಯಿಂದ ತಂದು ಧರಿಸುವುದಕ್ಕಿಂತ, ಈ ಕೆಳಗಿನ ಕ್ರಮ ಅನುಸರಿಸುವುದು ಉತ್ತಮ:

ಶುದ್ಧೀಕರಣ: ಮಾಲೆಯನ್ನು ಹಸಿ ಹಾಲಿನಲ್ಲಿ ಮತ್ತು ಗಂಗಾಜಲದಲ್ಲಿ ಪ್ರೋಕ್ಷಣೆ ಮಾಡಬೇಕು.

ಸಮಯ: ಮಂಗಳವಾರದಂದು ಬೆಳಿಗ್ಗೆ ಸೂರ್ಯೋದಯದ ಸಮಯದಲ್ಲಿ ಅಥವಾ ‘ಕೃತಿಕಾ’ ನಕ್ಷತ್ರದ ದಿನದಂದು ಧರಿಸುವುದು ಅತ್ಯಂತ ಶ್ರೇಷ್ಠ.

ಮೂಲ ಮಂತ್ರ: ಮಾಲೆ ಧರಿಸುವಾಗ “ಓಂ ಶರವಣ ಭವ” ಅಥವಾ “ಓಂ ಅಂಗಾರಕಾಯ ನಮಃ” ಎಂಬ ಮಂತ್ರವನ್ನು ನೂರಾ ಎಂಟು ಬಾರಿ ಜಪಿಸುವುದು ಫಲದಾಯಕ.

ಜೀವನಶೈಲಿಯ ಮೇಲೆ ಪ್ರಭಾವ:

ಕರುಂಗಾಲಿ ಮಾಲೆಯನ್ನು ಧರಿಸಿದಾಗ ವ್ಯಕ್ತಿಯು ಸಾತ್ವಿಕ ಜೀವನಕ್ಕೆ ಒಗ್ಗಿಕೊಳ್ಳಬೇಕು. ಮಾಂಸಾಹಾರ ಮತ್ತು ಕೆಟ್ಟ ಚಟಗಳಿಂದ ದೂರವಿದ್ದಷ್ಟು ಮಾಲೆಯ ಶಕ್ತಿ ಮತ್ತು ಮನಸ್ಸಿನ ಏಕಾಗ್ರತೆ ಹೆಚ್ಚಾಗುತ್ತದೆ. ಇದು ಕೇವಲ ಧಾರ್ಮಿಕ ವಸ್ತುವಲ್ಲ, ಇದು ವ್ಯಕ್ತಿಯ ಶಿಸ್ತಿನ ಸಂಕೇತವೂ ಹೌದು.

ಆಯುರ್ವೇದದ ಮೌಲ್ಯ: 

ಕರುಂಗಾಲಿ ಮರವನ್ನು ಆಯುರ್ವೇದದಲ್ಲಿ ಚರ್ಮದ ಕಾಯಿಲೆಗಳು ಮತ್ತು ರಕ್ತ ಶುದ್ಧೀಕರಣಕ್ಕೆ ಬಳಸಲಾಗುತ್ತದೆ. ಈ ಮರದ ಮಾಲೆ ಚರ್ಮಕ್ಕೆ ತಾಗುತ್ತಿದ್ದರೆ ದೇಹದ ಉಷ್ಣತೆ ಸಮತೋಲನಕ್ಕೆ ಬರುತ್ತದೆ.

ಧರಿಸುವಾಗ ಪಾಲಿಸುವ ಸಂಪ್ರದಾಯ

ಕರುಂಗಾಲಿ ಮಾಲೆಯನ್ನು ಸಾಮಾನ್ಯವಾಗಿ ದೇವರ ಮುಂದೆ ಇಟ್ಟು ಪ್ರಾರ್ಥಿಸಿದ ನಂತರ ಧರಿಸಲಾಗುತ್ತದೆ. ಶುದ್ಧ ಮನಸ್ಸು, ನಂಬಿಕೆ ಮತ್ತು ಸಾದಾ ಜೀವನಶೈಲಿ ಇದ್ದರೆ ಅದರ ಪ್ರಭಾವ ಹೆಚ್ಚು ಅನುಭವಕ್ಕೆ ಬರುತ್ತದೆ ಎಂಬ ನಂಬಿಕೆ ಇದೆ. ಮಹಿಳೆಯರು ಮಾಸಿಕ ಋತುಸ್ರಾವದ ಸಮಯದಲ್ಲಿ ಧರಿಸದಿರುವುದು ಸಂಪ್ರದಾಯದ ಭಾಗವಾಗಿದೆ.

ಕರುಂಗಾಲಿ ಮಾಲೆ ಧರಿಸಿದರೆ ಸಿಗುವ ಅನುಗ್ರಹ

ಭಕ್ತರು ತಮ್ಮ ಅನುಭವದ ಆಧಾರದಲ್ಲಿ ಹೇಳುವಂತೆ:

  • ಮನಸ್ಸಿಗೆ ಧೈರ್ಯ ಮತ್ತು ಸ್ಥಿರತೆ ಬರುತ್ತದೆ
  • ಅನಗತ್ಯ ಭಯ, ಆತಂಕ ಕಡಿಮೆಯಾಗುತ್ತದೆ
  • ಉದ್ಯೋಗ ಅಥವಾ ವ್ಯಾಪಾರದಲ್ಲಿ ಆತ್ಮವಿಶ್ವಾಸ ಹೆಚ್ಚಾಗುತ್ತದೆ
  • ಕೆಟ್ಟ ದೃಷ್ಟಿ ಅಥವಾ ನಕಾರಾತ್ಮಕ ಪ್ರಭಾವ ಕಡಿಮೆಯಾಗುತ್ತದೆ ಎಂಬ ಭಾವನೆ ಮೂಡುತ್ತದೆ

ಇವು ಪ್ರತಿಯೊಬ್ಬರಿಗೂ ಒಂದೇ ರೀತಿ ಆಗಬೇಕು ಎಂಬ ನಿಯಮ ಇಲ್ಲ. ಇದು ಸಂಪೂರ್ಣವಾಗಿ ನಂಬಿಕೆ ಮತ್ತು ಮನಸ್ಥಿತಿಗೆ ಸಂಬಂಧಿಸಿದ ವಿಷಯ.

ನಿಮ್ಮ ನಕ್ಷತ್ರ ಯಾವುದು? ಅಶ್ವಿನಿಯಿಂದ ರೇವತಿ ಪರ್ಯಂತ 27 ನಕ್ಷತ್ರಗಳ ವ್ಯಕ್ತಿತ್ವದ ರಹಸ್ಯ ಇಲ್ಲಿದೆ!

ಅಸಲಿ ಕರುಂಗಾಲಿ ಮಾಲೆ ಗುರುತಿಸುವ ಬಗ್ಗೆ

ಇತ್ತೀಚೆಗೆ ಕರುಂಗಾಲಿ ಮಾಲೆಗೆ ಬೇಡಿಕೆ ಹೆಚ್ಚಿರುವುದರಿಂದ ನಕಲಿ ಮಾಲೆಗಳೂ ಮಾರುಕಟ್ಟೆಯಲ್ಲಿ ಕಂಡುಬರುತ್ತಿವೆ ಎಂಬ ಮಾತು ಕೇಳಿಬರುತ್ತದೆ. ಭಕ್ತರು ಹೇಳುವ ಸರಳ ಪರೀಕ್ಷೆ ಎಂದರೆ – ನೀರಿನಲ್ಲಿ ಹಾಕಿದಾಗ ಮಣಿ ಕೆಳಗೆ ಹೋಗಬೇಕು ಎಂಬುದು. ಆದರೆ ಇದು ಶೇ.100 ಖಚಿತ ವಿಧಾನವಲ್ಲ. ಅದಕ್ಕಿಂತ ವಿಶ್ವಾಸಾರ್ಹ ಸ್ಥಳ ಅಥವಾ ನಂಬಿಕೆಯ ವ್ಯಕ್ತಿಯಿಂದಲೇ ಮಾಲೆ ಪಡೆಯುವುದು ಉತ್ತಮ ಎಂಬುದೇ ಹಿರಿಯರ ಸಲಹೆ.

ಅಸಲಿ ಕರುಂಗಾಲಿ ಮಾಲೆ ಖರೀದಿ ಮಾಡಬೇಕು ಎಂದಿದ್ದಲ್ಲಿ ಪದ್ಮನಾಭನಗರದಲ್ಲಿ ಇರುವ ಜೆಎಸ್ ಜೆಮ್ಸ್ ಅಂಡ್ ಜ್ಯುವೆಲ್ಲರಿಯಲ್ಲಿ ಖರೀದಿ ಮಾಡಬಹುದು. ಇವರ ಬಳಿ ಅದೃಷ್ಟ ರತ್ನ- ಉಪರತ್ನಗಳು ಪ್ರಮಾಣಪತ್ರದ ಸಹಿತವಾಗಿ ದೊರೆಯುತ್ತದೆ. ಮೊಬೈಲ್ ಫೋನ್ ಸಂಖ್ಯೆ- 72047 36365.

ಕೊನೆಯ ಮಾತು

ಕರುಂಗಾಲಿ ಮಾಲೆ ಮತ್ತು ಪಾತಾಳ ಮುರುಗನ್ ದೇವಸ್ಥಾನ – ಈ ಎರಡರ ನಡುವಿನ ಸಂಬಂಧವು ವಿಜ್ಞಾನಕ್ಕಿಂತಲೂ ನಂಬಿಕೆ, ಅನುಭವ ಮತ್ತು ಪರಂಪರೆಯ ಮೇಲೆ ನಿಂತಿದೆ. ಇದನ್ನು ಎಲ್ಲ ಸಮಸ್ಯೆಗಳಿಗೂ ಪರಿಹಾರ ಎಂದು ನೋಡಬಾರದು. ಆದರೆ ದೇವರ ಮೇಲೆ ನಂಬಿಕೆ ಇಟ್ಟು, ಮನಸ್ಸಿಗೆ ಧೈರ್ಯ ಮತ್ತು ಶಾಂತಿ ಪಡೆಯಲು ಇದು ಅನೇಕ ಭಕ್ತರಿಗೆ ಒಂದು ಆಧ್ಯಾತ್ಮಿಕ ಆಶ್ರಯವಾಗಿದೆ. ನಂಬಿಕೆ ಇದ್ದರೆ ಮಾತ್ರ ಶಕ್ತಿಯ ಅನುಭವ ಸಾಧ್ಯ – ಇದೇ ಈ ಸನ್ನಿಧಿಯ  ಸಂದೇಶ.

ಲೇಖನ- ಶ್ರೀನಿವಾಸ ಮಠ

ಶ್ರೀನಿವಾಸ ಮಠ

ಸಂಪಾದಕರು, ಶ್ರೀಗುರುಭ್ಯೋ.ಕಾಮ್

ಪತ್ರಿಕೋದ್ಯಮದಲ್ಲಿ ಹದಿನೆಂಟು ವರ್ಷಕ್ಕೂ ಹೆಚ್ಚು ಅನುಭವ ಇರುವ ಲೇಖಕ. ಕನ್ನಡದ ಪ್ರಮುಖ ದಿನಪತ್ರಿಕೆಗಳು ಹಾಗೂ ವಾರಪತ್ರಿಕೆ ಮತ್ತು ಆನ್ ಲೈನ್ ವೆಬ್ ಪೋರ್ಟಲ್ ಗಳಲ್ಲಿ ವಿವಿಧ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ವೈದಿಕ ಜ್ಯೋತಿಷ್ಯವನ್ನು ಪದ್ಧತಿಯಿಂದ ಅಭ್ಯಾಸ ಮಾಡಿರುವಂಥ ಇವರು, ಈ ತನಕ ಮೂರು ಸಾವಿರಕ್ಕೂ ಹೆಚ್ಚು ಜ್ಯೋತಿಷ್ಯ ಲೇಖನಗಳನ್ನು ವಿವಿಧ ವೆಬ್ ಪೋರ್ಟಲ್ ಗಳಿಗಾಗಿ ಬರೆದಿದ್ದಾರೆ. ಅಧ್ಯಾತ್ಮ, ಜ್ಯೋತಿಷ್ಯ ಹಾಗೂ ಧಾರ್ಮಿಕ ವಿಷಯಗಳಲ್ಲಿ ಅಳವಾದ ಜ್ಞಾನ ಮತ್ತು ನಿರಂತರ ಅಧ್ಯಯನ ಇರುವಂಥ ಶ್ರೀನಿವಾಸ ಮಠ ಸದ್ಯಕ್ಕೆ ಬೆಂಗಳೂರಿನಲ್ಲಿ ವಾಸವಿದ್ದು, ಜ್ಯೋತಿಷ್ಯವನ್ನು ವೃತ್ತಿಯಾಗಿ ಸ್ವೀಕರಿಸಿದ್ದಾರೆ.

Latest News

Related Posts