ಹೊಸ ಸಂವತ್ಸರದಲ್ಲಿ ಹಬ್ಬದ ಋತು ಆರಂಭವಾಗುವುದೇ ನಾಗರ ಪಂಚಮಿಯಿಂದ. ಆದ್ದರಿಂದ ನಮ್ಮ ಹಿರಿಯರು ಹೇಳಿದ್ದು “ನಾಗರ ಪಂಚಮಿ ನಾಡಿಗೇ ದೊಡ್ಡದು” ಎಂಬ ಮಾತನ್ನು. ಕರ್ಕಾಟಕ ರಾಶಿಯಲ್ಲಿ ಆಶ್ಲೇಷಾ ನಕ್ಷತ್ರ ಸಂಚಾರ ಕಾಲದಲ್ಲಿ ಶುಕ್ಲ ಪಕ್ಷದ ಪಂಚಮಿ ದಿನದಂದು ನಾಗರ ಪಂಚಮಿಯ ಸಮಾರೋಪ. ಪ್ರತಿ ಮಾಸದಲ್ಲಿ ಎರಡು ಬಾರಿ ಪಂಚಮಿ ಬರುತ್ತದೆ. ಒಂದು ಕೃಷ್ಣ ಪಕ್ಷದ ಅಥವಾ ಬಹುಳ ಪಂಚಮಿ, ಇನ್ನೊಂದು ಶುಕ್ಲ ಪಕ್ಷದಲ್ಲಿ ಅಥವಾ ಶುದ್ಧ ಪಂಚಮಿ. ಎಲ್ಲ ಪಂಚಮಿ ತಿಥಿಯಲ್ಲೂ ವ್ರತವನ್ನು ಆಚರಿಸುವುದಕ್ಕೆ ನಿರ್ಣಯ ಸಿಂಧು, ಧರ್ಮಸಿಂಧು ಮೊದಲಾದ ಪ್ರಮುಖ ಗ್ರಂಥಗಳಲ್ಲಿ ತಿಳಿಸಲಾಗಿದೆ. ಆದರೆ ಏನು ಮಾಡುವುದು ನಾವು ಇಂದಿಗೆ ಇರುವ ಪರಿಸ್ಥಿತಿ- ಮನಸ್ಥಿತಿ ಹಾಗೂ ಅನಿವಾರ್ಯ- ಅಗತ್ಯಗಳ ದಿನಮಾನಗಳಲ್ಲಿ ಒಂದು ಪಂಚಮಿ ವ್ರತವನ್ನು ಮಾಡುವುದೇ ಕಷ್ಟವಾಗಿದೆ. ಆದರೆ ಗೊತ್ತಿರಬೇಕಾದ ಸಂಗತಿ ಏನೆಂದರೆ, ವರ್ಷದ ಉಳಿದ ಪಂಚಮಿಗೆ ಹೋಲಿಸಿದರೆ ಕರ್ಕಾಟಕ ಮಾಸದ ಆಶ್ಲೇಷಾ ರವಿಯ ಸಂಚಾರ ಕಾಲದ ಪಂಚಮಿಯು ಬಹಳ ಶ್ರೇಷ್ಠ.
ಯಾಕೆ ಇದು ವಿಶೇಷ ಎಂಬ ಪ್ರಶ್ನೆ ಮೂಡುವುದು ಸಹಜ. ನಾಗದೇವರ ನಕ್ಷತ್ರವೇ ಆಶ್ಲೇಷಾ. ಇನ್ನು ಆಶ್ಲೇಷಾ- ಜ್ಯೇಷ್ಠಾ- ರೇವತಿ ಇವು ತ್ರಿಕೋಣ ನಕ್ಷತ್ರಗಳು. ಅದರಲ್ಲಿ ಆಶ್ಲೇಷಾ ನಕ್ಷತ್ರವು ಬಹಳ ಶ್ರೇಷ್ಠ. ಇನ್ನೂ ಮುಂದುವರಿದು ಹೇಳಬೇಕೆಂದರೆ, ನಾಗದೇವರನ್ನು ರಾಹುವಿನಿಂದ ಚಿಂತನೆ ಮಾಡಲಾಗುತ್ತದೆ. ಈ ವರ್ಷ ಬಹಳ ವಿಶೇಷ ಎಂಬುದನ್ನು ನೀವು ತಿಳಿದುಕೊಳ್ಳಬೇಕು. ಅದಕ್ಕೆ ಕಾರಣ ಏನೆಂದರೆ, ಕರ್ಕಾಟಕ ರಾಶಿಗೆ ತ್ರಿಕೋಣ ರಾಶಿಯಾದ ಮೀನ ರಾಶಿಯಲ್ಲಿ ರಾಹು ಗ್ರಹ ಸ್ಥಿತವಾಗಿದೆ. ಇದು ಅಧಿಕ ಫಲಪ್ರದವೂ ಹೌದು.
ನಾಗದೇವರಿಂದ ಯಾವ್ಯಾವ ವಿಚಾರಗಳ ಚಿಂತನೆ ಮಾಡಬೇಕು?
ನಾಗದೇವರ ಆರಾಧನೆ ಅಂತ ಬಂದರೆ ಯಾವ್ಯಾವ ವಿಚಾರ ಚಿಂತನೆ ಮಾಡಬೇಕು ಎಂಬುದನ್ನು ಮೊದಲಿಗೆ ತಿಳಿಯಬೇಕು. ಛಾಯಾಚಿತ್ರ ಕಲೆ, ತ್ವಚೆ, ಮನೋ ಚಿಂತನೆ, ಉದ್ವೇಗ, ಸಂಯಮ, ಪ್ರಾಮಾಣಿಕತೆ- ಅಪ್ರಾಮಾಣಿಕತೆ, ಆಸಿಡಿಟಿ ಇತ್ಯಾದಿಗಳ ವಿಚಾರ ಚಿಂತಿಸಬೇಕು. ಒಂದು ವೇಳೆ ನಾಗದೇವರ ಅವಕೃಪೆಯಾದರೆ ಈ ವಿಚಾರಗಳು ವಿಪರೀತಕ್ಕೆ ಹೋಗುತ್ತವೆ. ಅಂದರೆ ತುಂಬ ಪ್ರಾಮಾಣಿಕ ವ್ಯಕ್ತಿಯೂ ಅಪ್ರಾಮಾಣಿಕರಾಗುತ್ತಾರೆ. ಇನ್ನು ನಾಗ ಅಂದರೆ ನಿಧಿ ರಕ್ಷಕ. ನಿಧಿ ಅಂದರೆ ಜ್ಞಾನ ಅಂತ ತಿಳಿಯಬೇಕು. ಜ್ಞಾನ ನಿಧಿಯನ್ನು ರಕ್ಷಣೆ ಮಾಡುವುದು ಎಲ್ಲ ನಿಧಿಗಳಿಗಿಂತ ಶ್ರೇಷ್ಠವಾದದ್ದು. ಜ್ಞಾನ ಇದ್ದರಷ್ಟೇ ಪೂರ್ವಾಪರ ಚಿಂತನೆಗಳು ಇರುತ್ತವೆ. ಅನುಗ್ರಹ ಇಲ್ಲದಿದ್ದರೆ ಪೂರ್ವಾಪರದ ಜ್ಞಾನದ ಬದಲಿಗೆ ಪೂರ್ವಗ್ರಹ ಆಗುತ್ತದೆ. ಇದರಿಂದ ನೆಮ್ಮದಿ ಹಾಳಾಗುತ್ತದೆ.
ನಾಗಾರಾಧನೆ ಹೇಗೆ?
ಮನೆಯಲ್ಲಿ ಯಾವುದೂ ಇಲ್ಲದಿದ್ದರೆ ನಾಗದೇವರ ಸ್ಮರಣೆಯೇ ಮುಖ್ಯ. ದೇಹವೆಂಬ ದೇಗುಲದಲ್ಲಿ ಭಕ್ತಿಯಿಂದ ಸ್ಮರಣೆ ಮಾಡಿದರೂ ಪೂರ್ಣ ಫಲ ದೊರೆಯುತ್ತದೆ. ನಾಗ ಶಿಲೆ ಪ್ರತಿಷ್ಠೆ ಮಾಡಿದ್ದಿದ್ದರೆ ಅದಕ್ಕೆ ಪೂಜೆ ಮಾಡಬೇಕು. ನಾಗನಿಗೆ ಬಯಲು ಆಲಯ. ನಾಗ ಬನ ಎನ್ನುತ್ತಾರೆ. ಮೊದಲು ನಾಗ ಶಿಲೆಯನ್ನು ಶುದ್ಧ ನೀರಿನಿಂದ ತೊಳೆಯಬೇಕು. ಆ ನಂತರ ಕ್ಷೀರ(ಹಾಲು), ಜೇನು, ಆಕಳಿನ ತುಪ್ಪ, ಮೊಸರು, ಬಾಳೇಹಣ್ಣು ಇಟ್ಟು, ಎಳನೀರಿನ ಅಭಿಷೇಷಕ ಮಾಡಬೇಕು. ಇದಾದ ನಂತರ ಈ ಪಂಚಾಮೃತವನ್ನು ಶೇಖರಿಸಿಕೊಂಡು, ಪುನಃ ಶುದ್ಧ ನೀರಿನಿಂದ ತೊಳೆಯಬೇಕು.
ಅಂದ ಹಾಗೆ ಇದು ಅಭಿಷೇಕವಲ್ಲ. ಇದಾದ ನಂತರ ಮತ್ತೆ ಶುದ್ಧ ನೀರಿನಿಂದ ಅಭಿಷೇಕ ಆಗಬೇಕು. ಆ ನಂತರ ಅರಿಶಿಣ ಪುಡಿಯಿಂದ ನಾಗಶಿಲೆಯನ್ನು ಅಲಂಕರಿಸಬೇಕು. ಇದಾದ ಮೇಲೆ ಬಿಳಿ- ಹಳದಿ ಪುಷ್ಪಗಳಿಂದ ಅಲಂಕಾರ ಮಾಡಬೇಕು. ನಿಮಗೆ ಕಡ್ಡಾಯವಾಗಿ ನೆನಪಿರಬೇಕಾದ ಸಂಗತಿ ಏನೆಂದರೆ, ಕೆಂಪು ಪುಷ್ಪ ಇಡಬಾರದು. ಗುಡಾನ್ನ, ಪಾಯಸ, ಕಡುಬು ಇತ್ಯಾದಿ ವಿಶೇಷ ನೈವೇದ್ಯ ಸಮರ್ಪಣೆ ಮಾಡಬೇಕು. ಹೀಗೆ ಸಮರ್ಪಣೆ ಆದ ಬಳಿಕ ನಿರ್ಮಾಲ್ಯ ನೈವೇದ್ಯವನ್ನು ಹೊರಗಿಟ್ಟು, ಮತ್ತೆ ಅರಿಶಿಣ ಪುಡಿಯ ನೀರಿನಿಂದ ನೈವೇದ್ಯವಿಟ್ಟ ಜಾಗದ ಶುದ್ಧಿ ಮಾಡಬೇಕು.ಕೊನೆಗೆ ಫಲ ಸಮರ್ಪಣೆ ಆಗಬೇಕು. ತೆಂಗಿನ ಕಾಯಿ, ಕದಳೀ ಫಲ (ಬಾಳೇಹಣ್ಣು), ದಾಡಿಮ ಫಲ (ದಾಳಿಂಬೆ ಹಣ್ಣು) ಇತ್ಯಾದಿ ಫಲಗಳನ್ನು ಸಮರ್ಪಿಸಬೇಕು. ಇದೆಲ್ಲಾ ಕ್ರಿಯೆ ಮುಗಿದ ಮೇಲೆ ಮಹಾ ಮಂಗಳಾರತಿ ಮಾಡಿ, ಕೊನೆಯಲ್ಲಿ ನಾಗದೇವರಿಗೆ ಪ್ರಾರ್ಥನೆ ಸಲ್ಲಿಸಬೇಕು. ಪೂಜಾ ಸಮಾಪ್ತಿಗೆ ಕೃಷ್ಣಾರ್ಪಣವನ್ನು ಬಿಡಬೇಕು.
ಪೂಜೆಯ ಪರಿಪೂರ್ಣತೆ ಹೀಗೆ
ಇಂಥ ಪೂಜೆ ಮಾಡುವ ವೇಳೆ ಮನೆಗೆ ಆಗಮಿಸಿದ ಬಂಧು- ಮಿತ್ರರಿಗೆ ಪ್ರಸಾದ ವಿತರಣೆಯನ್ನು ಮಾಡಬೇಕು. ಸಾಧ್ಯವಾದಷ್ಟು ಮಟ್ಟಿಗೆ ಪೂಜಾ ಕಾಲದಲ್ಲಿ ಎಲ್ಲರೂ ಏಕಾಗ್ರಚಿತ್ತರಾಗಿ ಮೌನವಾಗಿದ್ದರೆ ಪೂಜೆಯ ಪರಿಪೂರ್ಣತೆ ಮತ್ತು ನಾಗದೇವರ ಪೂರ್ಣಾನುಗ್ರಹ ಲಭಿಸುತ್ತದೆ. ‘ನಾನಾ ವಿಧ ಫಲ- ಪುಷ್ಪ ನೈವೇದ್ಯಂ ಸಮರ್ಪಯಾಮಿ’ ಎಂದು ಸಂಜ್ಞೆಯ ಮೂಲಕ ‘ಪ್ರಾಣಾಯ ಸ್ವಾಹ, ಅಪಾನಾಯ ಸ್ವಾಹಾ, ವ್ಯಾನಯಸ್ವಾಹಾ, ಉದಾನಾಯ ಸ್ವಾಹಾ, ಸಮಾನಾಯ ಸ್ವಾಹಾ’ ಎಂದು ನಾಗದೇವರಿಗೆ ಫಲ- ಪುಷ್ಪಾದಿ ನೈವೇದ್ಯಗಳನ್ನು ಪಂಚ ಪ್ರಾಣಾಹುತಿಗಳಿಂದ ಸಮರ್ಪಣೆ ಮಾಡಿದಾಗ ಊರ್ಧ್ವಲೋಕದ ನಾಗದೇವರಿಗೆ ಸಮರ್ಪಣೆಯಾಗುತ್ತದೆ. ನಾಗದೇವರನ್ನು ಮಂತ್ರದಲ್ಲಿ “ಯೇದೋ ರೋಚನೇ……” ಎಂದು ತಿಳಿಸುತ್ತದೆ. ಅಂದರೆ ಊರ್ಧ್ವಲೋಕದ ಸಂಕರ್ಷಣಾ ಕಿರಣಗಳೇ ನಾಗ ದೇವರು ಎಂದರ್ಥ. ಅದರ ಸ್ವರೂಪವೇ ನಾಗರಾಜ.
ಮಹಾವಿಷ್ಣುವಿನ ಸಂಕರ್ಷಣಾ ರೂಪವೇ ನಾಗದೇವರು. ಇದು ಸುಬ್ರಹ್ಮಣ್ಯ ಶಕ್ತಿಯೂ ಆಗಿದೆ. ತುಳುನಾಡಿನಲ್ಲಿ ಸುಬ್ರಾಯ ದೇವರು ಎಂದೂ ಕರೆಯುತ್ತಾರೆ. ನಾಗದೇವರ ಈ ಮಂತ್ರವನ್ನು ಜಾತಿ- ಭೇದ ಇಲ್ಲದೆ ಹೇಳುವುದಕ್ಕೆ ಅಡ್ಡಿ ಇಲ್ಲ. ಆದರೆ ನಿಷ್ಕಳಂಕ ಮನಸ್ಸಿನಲ್ಲಿ, ಭಕ್ತಿಯಿಂದ, ಪರಿಶುದ್ಧಿಯಿಂದ ಹೇಳಬೇಕು: “ಓಂ ನಮೋ ಭಗವತೇ ಕಾಮರೂಪಿಣೇ ಮಹಾಬಲಾಯ ನಾಗಾಧಿಪತಯೇ ಅನಂತಾಯ ಸ್ವಾಹಾ.” ಇದನ್ನು ನಿತ್ಯವೂ ಪಠಿಸಿದರೆ ಮನೋಶುದ್ಧಿಯಾಗಿ, ಸದ್ಧರ್ಮ ಪಾಲನೆಯಿಂದ ಜೀವನದಲ್ಲಿ ಮೋಹವು ನಿಯಂತ್ರಣಗೊಂಡು ಯಶಸ್ಸು ದೊರೆಯುತ್ತದೆ.
ಲೇಖಕರು: ಪ್ರಕಾಶ್ ಅಮ್ಮಣ್ಣಾಯ, ಖ್ಯಾತ ಜ್ಯೋತಿಷಿ, ಅಧ್ಯಾತ್ಮ ಚಿಂತಕರು, ಕಾಪು (ಉಡುಪಿ ಜಿಲ್ಲೆ)