Sri Gurubhyo Logo

ನಿಮ್ಮ ಅದೃಷ್ಟ ರತ್ನ ಯಾವುದು? ರಾಶಿ ಮತ್ತು ಲಗ್ನಕ್ಕೆ ಅನುಗುಣವಾಗಿ ರತ್ನ ಧರಿಸುವ ಶಾಸ್ತ್ರೋಕ್ತ ಕ್ರಮಗಳು

ಹಲವು ಬಣ್ಣದ ನೈಸರ್ಗಿಕ ನವರತ್ನಗಳು ಮತ್ತು ಜ್ಯೋತಿಷ್ಯ ಶಾಸ್ತ್ರದ ರಾಶಿ ಚಕ್ರದ ಹಿನ್ನೆಲೆ.
ಅದೃಷ್ಟ ರತ್ನಗಳು

ಈ ಲೇಖನವು ಅದೃಷ್ಟ ರತ್ನಗಳ ಬಗ್ಗೆ ಪ್ರಾಥಮಿಕವಾಗಿ ತಿಳಿದಿರಬೇಕಾದ ಮುಖ್ಯ ಸಂಗತಿಗಳನ್ನು ತೆರೆದಿಡುತ್ತದೆ. ಹೆಚ್ಚಿನ ಜನ ತಮ್ಮ ಜನ್ಮ ರಾಶಿಗೆ ಆಗಿಬರುವ ಅದೃಷ್ಟ ರತ್ನ ಯಾವುದು ಎಂದು ಕೇಳಿ ಧರಿಸುತ್ತಾರೆ. ಆದರೆ ಅದು ಸರಿಯಾದ ಕ್ರಮ ಅಲ್ಲ. ಏಕೆಂದರೆ ಅದೊಂದೇ ಅಂಶವನ್ನು ಮಾನದಂಡವಾಗಿ ಇಟ್ಟುಕೊಂಡು, ಅದೃಷ್ಟ ರತ್ನ ಧರಿಸುವುದು ಅಪಾಯಕಾರಿಯೂ ಹೌದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನವಗ್ರಹಗಳ ಪ್ರಭಾವವು ಮನುಷ್ಯನ ಜೀವನದ ಮೇಲೆ ನಿರಂತರವಾಗಿ ಇರುತ್ತದೆ. ಈ ಗ್ರಹಗಳ ಅಶುಭ ಫಲಗಳನ್ನು ತಗ್ಗಿಸಲು ಮತ್ತು ಶುಭ ಫಲಗಳನ್ನು ಹೆಚ್ಚಿಸಲು ಅದೃಷ್ಟ ರತ್ನಗಳ (Gemstones) ಧಾರಣೆಯು ಒಂದು ಪ್ರಬಲವಾದ ಪರಿಹಾರ ಮಾರ್ಗವಾಗಿದೆ. ಆದರೆ ರತ್ನಗಳನ್ನು ಧರಿಸುವಾಗ ಕೇವಲ ರಾಶಿ (Moon Sign) ಅಷ್ಟೇ ಅಲ್ಲದೆ, ಲಗ್ನ (Ascendant) ವನ್ನು ಪರಿಗಣಿಸುವುದು ಅತ್ಯಂತ ಶಾಸ್ತ್ರೋಕ್ತವಾದ ವಿಧಾನವಾಗಿದೆ. ಯಾಕೆಂದರೆ ಲಗ್ನವು ವ್ಯಕ್ತಿಯ ದೇಹ ಮತ್ತು ವ್ಯಕ್ತಿತ್ವವನ್ನು ಪ್ರತಿನಿಧಿಸುತ್ತದೆ. ಇನ್ನು ಮುಖ್ಯ ರತ್ನಗಳು ಹಾಗೂ ಉಪ ರತ್ನಗಳು ಎಂಬ ಎರಡು ವಿಭಾಗ ಇದೆ. ಉಪರತ್ನಗಳನ್ನು ಇಂಗ್ಲಿಷ್ ನಲ್ಲಿ ಸೆಮಿ ಪ್ರಿಷಿಯಸ್ ಸ್ಟೋನ್ ಅಂತ ಕರೆಯುತ್ತಾರೆ. 

ಜನ್ಮ ರಾಶಿ ಮತ್ತು ಲಗ್ನಕ್ಕೆ ಅನುಗುಣವಾಗಿ ರತ್ನಗಳ ವಿಂಗಡಣೆ

ಪ್ರತಿಯೊಂದು ಲಗ್ನಕ್ಕೂ ಕೆಲವು ಗ್ರಹಗಳು ‘ಯೋಗಕಾರಕ’ (ಶುಭ) ಆಗಿರುತ್ತವೆ ಮತ್ತು ಕೆಲವು ‘ಮಾರಕ’ (ಅಶುಭ) ಆಗಿರುತ್ತವೆ. ಶುಭ ಗ್ರಹಗಳ ರತ್ನಗಳನ್ನು ಧರಿಸುವುದರಿಂದ ಮಾತ್ರ ಯಶಸ್ಸು ಸಿಗುತ್ತದೆ.

1. ಮೇಷ (Aries)

  • ಅಧಿಪತಿ: ಮಂಗಳ.
  • ಅದೃಷ್ಟ ರತ್ನ: ಹವಳ (Coral).
  • ಫಲ: ಆತ್ಮವಿಶ್ವಾಸ ಹೆಚ್ಚಿಸುತ್ತದೆ, ಆರೋಗ್ಯ ಮತ್ತು ಭೂಮಿಗೆ ಸಂಬಂಧಿಸಿದ ಲಾಭ ನೀಡುತ್ತದೆ. ಲಗ್ನ ಮೇಷವಾಗಿದ್ದರೆ ಹವಳದ ಜೊತೆಗೆ ಮಾಣಿಕ್ಯ ಅಥವಾ ಪುಷ್ಯರಾಗವನ್ನು ಧರಿಸಬಹುದು.

2. ವೃಷಭ (Taurus)

  • ಅಧಿಪತಿ: ಶುಕ್ರ.
  • ಅದೃಷ್ಟ ರತ್ನ: ವಜ್ರ (Diamond) ಅಥವಾ ಬಿಳಿ ನೀಲ (White Sapphire).
  • ಫಲ: ಐಶ್ವರ್ಯ, ಸೌಂದರ್ಯ ಮತ್ತು ದಾಂಪತ್ಯ ಸುಖವನ್ನು ನೀಡುತ್ತದೆ. ವೃಷಭ ಲಗ್ನದವರಿಗೆ ಶನಿಯು ಮಿತ್ರನಾಗಿರುವುದರಿಂದ ‘ನೀಲ’ ರತ್ನವೂ ಕೂಡ ಶುಭ ನೀಡುತ್ತದೆ.

3. ಮಿಥುನ (Gemini)

  • ಅಧಿಪತಿ: ಬುಧ.
  • ಅದೃಷ್ಟ ರತ್ನ: ಪಚ್ಚೆ (Emerald).
  • ಫಲ: ಬುದ್ಧಿವಂತಿಕೆ, ವ್ಯವಹಾರದಲ್ಲಿ ಲಾಭ ಮತ್ತು ವಾಕ್ ಚಾತುರ್ಯವನ್ನು ಹೆಚ್ಚಿಸುತ್ತದೆ.

4. ಕರ್ಕಾಟಕ (Cancer)

  • ಅಧಿಪತಿ: ಚಂದ್ರ.
  • ಅದೃಷ್ಟ ರತ್ನ: ಮುತ್ತು (Pearl).
  • ಫಲ: ಮನಸ್ಸಿಗೆ ಶಾಂತಿ, ತಾಯಿಯ ಆರೋಗ್ಯ ಮತ್ತು ಮಾನಸಿಕ ಸ್ಥಿರತೆಯನ್ನು ಕಾಪಾಡುತ್ತದೆ.

5. ಸಿಂಹ (Leo)

  • ಅಧಿಪತಿ: ಸೂರ್ಯ.
  • ಅದೃಷ್ಟ ರತ್ನ: ಮಾಣಿಕ್ಯ (Ruby).
  • ಫಲ: ಅಧಿಕಾರ, ಗೌರವ, ತಂದೆಯಿಂದ ಲಾಭ ಮತ್ತು ಉನ್ನತ ಸ್ಥಾನಮಾನವನ್ನು ತಂದುಕೊಡುತ್ತದೆ.

6. ಕನ್ಯಾ (Virgo)

  • ಅಧಿಪತಿ: ಬುಧ.
  • ಅದೃಷ್ಟ ರತ್ನ: ಪಚ್ಚೆ (Emerald).
  • ಫಲ: ಶಿಕ್ಷಣದಲ್ಲಿ ಪ್ರಗತಿ, ಲೆಕ್ಕಾಚಾರದಲ್ಲಿ ನಿಖರತೆ ಮತ್ತು ಆರ್ಥಿಕ ಸುಧಾರಣೆ ನೀಡುತ್ತದೆ.

7. ತುಲಾ (Libra)

  • ಅಧಿಪತಿ: ಶುಕ್ರ.
  • ಅದೃಷ್ಟ ರತ್ನ: ವಜ್ರ (Diamond) ಅಥವಾ ಓಪಲ್ (Opal).
  • ಫಲ: ಕಲಾತ್ಮಕ ಸಿದ್ಧಿ, ಜೀವನದಲ್ಲಿ ಲಕ್ಸುರಿ ಮತ್ತು ಉತ್ತಮ ಸಂಬಂಧಗಳನ್ನು ವೃದ್ಧಿಸುತ್ತದೆ.

8. ವೃಶ್ಚಿಕ (Scorpio)

  • ಅಧಿಪತಿ: ಮಂಗಳ.
  • ಅದೃಷ್ಟ ರತ್ನ: ಹವಳ (Coral).
  • ಫಲ: ಧೈರ್ಯ, ರಕ್ಷಣಾ ಶಕ್ತಿ ಮತ್ತು ಆಸ್ತಿಪಾಸ್ತಿಗಳ ಲಾಭ ಸಿಗುತ್ತದೆ.

9. ಧನು (Sagittarius)

  • ಅಧಿಪತಿ: ಗುರು.
  • ಅದೃಷ್ಟ ರತ್ನ: ಕನಕ ಪುಷ್ಯರಾಗ (Yellow Sapphire).
  • ಫಲ: ದೈವಾನುಗ್ರಹ, ಜ್ಞಾನ, ಸಂಪತ್ತು ಮತ್ತು ದೀರ್ಘಾಯುಷ್ಯವನ್ನು ನೀಡುತ್ತದೆ.

10. ಮಕರ (Capricorn)

  • ಅಧಿಪತಿ: ಶನಿ.
  • ಅದೃಷ್ಟ ರತ್ನ: ನೀಲ (Blue Sapphire).
  • ಫಲ: ಕೆಲಸದಲ್ಲಿ ಶಿಸ್ತು, ಕರ್ಮಫಲದ ಸಿದ್ಧಿ ಮತ್ತು ವೃತ್ತಿಜೀವನದಲ್ಲಿ ಸ್ಥಿರತೆಯನ್ನು ತರುತ್ತದೆ.

11. ಕುಂಭ (Aquarius)

  • ಅಧಿಪತಿ: ಶನಿ.
  • ಅದೃಷ್ಟ ರತ್ನ: ನೀಲ (Blue Sapphire).
  • ಫಲ: ಸಂಶೋಧನೆ, ಸಮಾಜದಲ್ಲಿ ಗೌರವ ಮತ್ತು ಅನಿರೀಕ್ಷಿತ ಲಾಭಗಳನ್ನು ತರುತ್ತದೆ.

12. ಮೀನ (Pisces)

  • ಅಧಿಪತಿ: ಗುರು.
  • ಅದೃಷ್ಟ ರತ್ನ: ಕನಕ ಪುಷ್ಯರಾಗ (Yellow Sapphire).
  • ಫಲ: ಆಧ್ಯಾತ್ಮಿಕ ಚಿಂತನೆ, ಕುಟುಂಬ ಸುಖ ಮತ್ತು ಮಾನಸಿಕ ನೆಮ್ಮದಿಯನ್ನು ನೀಡುತ್ತದೆ.

ಮನೆಯ ಈ ದಿಕ್ಕಿನಲ್ಲಿ ‘ಪೈರೈಟ್’ ಫ್ರೇಮ್ ಇಟ್ಟರೆ ಸಾಕು; ಹಣವನ್ನು ಆಕರ್ಷಿಸುತ್ತೆ ಈ ‘ಮೂರ್ಖರ ಚಿನ್ನ’!

ರತ್ನ ಧಾರಣೆಯ ಮುನ್ನ ಗಮನಿಸಬೇಕಾದ ಪ್ರಮುಖ ಅಂಶಗಳು

ಮುಖ್ಯವಾಗಿ ಗಮನಿಸಬೇಕಾದದ್ದು ಏನೆಂದರೆ, ರತ್ನಗಳನ್ನು ಧರಿಸುವುದು ಕತ್ತಿಯ ಮೇಲೆ ನಡೆದಂತೆ. ನಿಮ್ಮ ಜಾತಕಕ್ಕೆ ಹೊಂದದ ರತ್ನವು ಜೀವನದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು.

  1. ಲಗ್ನ ಕುಂಡಲಿ ಪರಿಶೀಲನೆ: ನಿಮ್ಮ ಜನ್ಮ ಕುಂಡಲಿಯಲ್ಲಿ ಲಗ್ನ ಬಲಿಷ್ಠವಾಗಿದ್ದರೆ ಲಗ್ನದಿಂದ ಅಥವಾ ಚಂದ್ರ ಬಲಿಷ್ಠವಾಗಿದ್ದರೆ ಚಂದ್ರನಿಂದ ಆ ಗ್ರಹವು 6, 8, ಅಥವಾ 12ನೇ ಮನೆಯ ಅಧಿಪತಿಯಾಗಿದ್ದರೆ ಅಂಥ ಗ್ರಹದ ರತ್ನವನ್ನು ಎಂದಿಗೂ ಧರಿಸಬಾರದು.
  2. ರತ್ನದ ಶುದ್ಧತೆ: ರತ್ನವು ನೈಸರ್ಗಿಕವಾಗಿರಬೇಕು (Natural). ಬಿರುಕು ಬಿಟ್ಟ ಅಥವಾ ಕೃತಕವಾದ ರತ್ನಗಳಿಂದ ಯಾವುದೇ ಪ್ರಯೋಜನವಿಲ್ಲ.
  3. ತೂಕ (Ratti): ವ್ಯಕ್ತಿಯ ತೂಕಕ್ಕೆ ಅನುಗುಣವಾಗಿ ರತ್ನದ ಕ್ಯಾರೆಟ್ ನಿರ್ಧರಿಸಲಾಗುತ್ತದೆ (ಸಾಮಾನ್ಯವಾಗಿ 10 ಕೆಜಿ ದೇಹದ ತೂಕಕ್ಕೆ 1 ಕ್ಯಾರೆಟ್ ರತ್ನ). ಆದರೆ ಇದು ಎಲ್ಲ ರತ್ನಗಳಿಗೂ ಅನ್ವಯಿಸಬಿಟ್ಟರೆ ಖರೀದಿ ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ. ಆದ್ದರಿಂದ ಕನಿಷ್ಠ ಮೂರು ಕ್ಯಾರೆಟ್ ಅದೃಷ್ಟ ರತ್ನ ಧಾರಣೆ ಮಾಡಬೇಕು.
  4. ಧರಿಸುವ ಲೋಹ: ಕೆಲವು ರತ್ನಗಳನ್ನು ಚಿನ್ನದಲ್ಲಿ ಧರಿಸಬೇಕು (ಉದಾ: ಮಾಣಿಕ್ಯ, ಪುಷ್ಯರಾಗ), ಇನ್ನು ಕೆಲವನ್ನು ಬೆಳ್ಳಿಯಲ್ಲಿ ಧರಿಸಬೇಕು (ಉದಾ: ಮುತ್ತು, ನೀಲ).
  5. ದಿನ ಮತ್ತು ಸಮಯ: ಆಯಾ ಗ್ರಹಕ್ಕೆ ಮೀಸಲಾದ ವಾರ ಮತ್ತು ಹೊತ್ತಿನಲ್ಲಿ (ಹೋರಾ), ಶಾಸ್ತ್ರೋಕ್ತವಾಗಿ ಪೂಜೆ ಮಾಡಿ, ಅದಕ್ಕೆ ಶಕ್ತಿ ತುಂಬಿದ ನಂತರದಲ್ಲಿಯೇ ರತ್ನ ಧರಿಸಬೇಕು.

ಇನ್ನು ಮುಖ್ಯ ಸಂಗತಿ ಒಂದಿದೆ. ಸದ್ಯಕ್ಕೆ ಯಾವ ದಶಾ- ಭುಕ್ತಿ ನಡೆಯುತ್ತಾ ಇದೆ, ಆ ದಶಾ ನಾಥನಿಗೆ ಆಗಿಬರುವಂಥ ರತ್ನವಾ ಎಂಬುದನ್ನು ಸಹ ಪರಿಶೀಲಿಸಿಕೊಳ್ಳಬೇಕು. ಒಟ್ಟಾರೆ ಸಾರಾಂಶ ಏನೆಂದರೆ, ಅದೃಷ್ಟ ರತ್ನಧಾರಣೆಯನ್ನು ಪರಿಣತರ ಮಾರ್ಗದರ್ಶನ ಇಲ್ಲದೆ ಧರಿಸಬಾರದು. ಕೆಲವರು ಬಹಳ ಚಂದ ಕಾಣುತ್ತದೆ ಅಥವಾ ದುಬಾರಿ ಎಂಬ ಕಾರಣಕ್ಕೆ ವಜ್ರ, ನೀಲ, ರೂಬಿ, ಹವಳ ಇವುಗಳನ್ನು ಧರಿಸಿಬಿಡುತ್ತಾರೆ. ಶಾಸ್ತ್ರದ ಹಿನ್ನೆಲೆಯಿಂದ ನೋಡಿದರೆ ಹೀಗೆ ಮಾಡುವುದು ಸರಿಯಲ್ಲ. ಇನ್ನು ರಾಹುವಿಗಾಗಿ ಗೋಮೇಧಿಕಾ ಹಾಗೂ ಕೇತುವಿಗಾಗಿ ವೈಡೂರ್ಯವನ್ನು ಧರಿಸುತ್ತಾರೆ.

ಯಾವ ರತ್ನಗಳನ್ನು ಒಟ್ಟಿಗೆ ಧರಿಸಬಾರದು?

  • ಮಾಣಿಕ್ಯ ಮತ್ತು ನೀಲ: ಸೂರ್ಯ ಮತ್ತು ಶನಿ ಶತ್ರುಗ್ರಹಗಳಾದ್ದರಿಂದ ಇವುಗಳನ್ನು ಒಟ್ಟಿಗೆ ಧರಿಸಬಾರದು.
  • ಮುತ್ತು ಮತ್ತು ನೀಲ: ಚಂದ್ರ ಮತ್ತು ಶನಿಯ ಸಂಯೋಗವು ಮಾನಸಿಕ ಒತ್ತಡ ಉಂಟುಮಾಡಬಹುದು.
  • ಹವಳ ಮತ್ತು ಪಚ್ಚೆ: ಮಂಗಳ ಮತ್ತು ಬುಧರ ವೈರತ್ವದಿಂದಾಗಿ ಇವುಗಳ ಧಾರಣೆ ಅಶುಭ.

ಕೊನೆಯ ಮಾತು: ರತ್ನವು ಕೇವಲ ಒಂದು ಕಲ್ಲು ಅಲ್ಲ, ಅದು ಗ್ರಹದ ಕಿರಣಗಳನ್ನು ಹೀರಿ ಶರೀರಕ್ಕೆ ರವಾನಿಸುವ ಮಾಧ್ಯಮ. ಆದ್ದರಿಂದ ನಿಮ್ಮ ಜನ್ಮ ಲಗ್ನ ಮತ್ತು ದಶಾಭುಕ್ತಿಗಳನ್ನು ಪರಿಣಿತ ಜ್ಯೋತಿಷಿಗಳಿಂದ ವಿಶ್ಲೇಷಿಸಿ ನಂತರವೇ ಧರಿಸುವುದು ಸೂಕ್ತ.

ಇನ್ನು ಸರ್ಟಿಫೈಡ್ ಆದಂಥ ಅದೃಷ್ಟ ರತ್ನಗಳನ್ನು ಖರೀದಿ ಮಾಡಬೇಕು ಎಂದಿದ್ದಲ್ಲಿ ಪದ್ಮನಾಭನಗರದಲ್ಲಿ ಇರುವ ಜೆಎಸ್ ಜೆಮ್ಸ್ ಅಂಡ್ ಜ್ಯುವೆಲ್ಲರಿಯಲ್ಲಿ ಖರೀದಿ ಮಾಡಬಹುದು. ಇವರ ಬಳಿ ಪ್ರಮಾಣಪತ್ರದ ಸಹಿತವಾಗಿ ದೊರೆಯುತ್ತದೆ. ಮೊಬೈಲ್ ಫೋನ್ ಸಂಖ್ಯೆ- 72047 36365.

ಲೇಖನ- ಶ್ರೀನಿವಾಸ ಮಠ

ಶ್ರೀನಿವಾಸ ಮಠ

ಸಂಪಾದಕರು, ಶ್ರೀಗುರುಭ್ಯೋ.ಕಾಮ್

ಪತ್ರಿಕೋದ್ಯಮದಲ್ಲಿ ಹದಿನೆಂಟು ವರ್ಷಕ್ಕೂ ಹೆಚ್ಚು ಅನುಭವ ಇರುವ ಲೇಖಕ. ಕನ್ನಡದ ಪ್ರಮುಖ ದಿನಪತ್ರಿಕೆಗಳು ಹಾಗೂ ವಾರಪತ್ರಿಕೆ ಮತ್ತು ಆನ್ ಲೈನ್ ವೆಬ್ ಪೋರ್ಟಲ್ ಗಳಲ್ಲಿ ವಿವಿಧ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ವೈದಿಕ ಜ್ಯೋತಿಷ್ಯವನ್ನು ಪದ್ಧತಿಯಿಂದ ಅಭ್ಯಾಸ ಮಾಡಿರುವಂಥ ಇವರು, ಈ ತನಕ ಮೂರು ಸಾವಿರಕ್ಕೂ ಹೆಚ್ಚು ಜ್ಯೋತಿಷ್ಯ ಲೇಖನಗಳನ್ನು ವಿವಿಧ ವೆಬ್ ಪೋರ್ಟಲ್ ಗಳಿಗಾಗಿ ಬರೆದಿದ್ದಾರೆ. ಅಧ್ಯಾತ್ಮ, ಜ್ಯೋತಿಷ್ಯ ಹಾಗೂ ಧಾರ್ಮಿಕ ವಿಷಯಗಳಲ್ಲಿ ಅಳವಾದ ಜ್ಞಾನ ಮತ್ತು ನಿರಂತರ ಅಧ್ಯಯನ ಇರುವಂಥ ಶ್ರೀನಿವಾಸ ಮಠ ಸದ್ಯಕ್ಕೆ ಬೆಂಗಳೂರಿನಲ್ಲಿ ವಾಸವಿದ್ದು, ಜ್ಯೋತಿಷ್ಯವನ್ನು ವೃತ್ತಿಯಾಗಿ ಸ್ವೀಕರಿಸಿದ್ದಾರೆ.

Latest News

Related Posts