ಲೇಖನ- ಪ್ರಕಾಶ್ ಅಮ್ಮಣ್ಣಾಯ, ಜ್ಯೋತಿಷಿ, ಕಾಪು (ಉಡುಪಿ ಜಿಲ್ಲೆ)
ಭೃಗು- ಅಂಗಾರಕ ಯೋಗದ ಬಗ್ಗೆ ಆಸಕ್ತಿಕರವಾದ ಮಾಹಿತಿ ಇಲ್ಲಿದೆ. ಫೆಬ್ರವರಿ ಜೋತಿಷ್ಯ ಶಾಸ್ತ್ರದ ದೃಷ್ಟಿಕೋನದಲ್ಲಿ ಶುಕ್ರ (ಭೃಗು) ಮತ್ತು ಮಂಗಳ (ಅಂಗಾರಕ) ಗ್ರಹಗಳ ಯುತಿಯು ಅತ್ಯಂತ ಪ್ರಭಾವಶಾಲಿ ಹಾಗೂ ಸಂಕೀರ್ಣವಾದದ್ದು. ಈ ಯುತಿಯು ಜಾಗತಿಕ ರಾಜಕೀಯ ಮತ್ತು ವ್ಯಕ್ತಿಯ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಜೋತಿಷ್ಯ ಶಾಸ್ತ್ರದಲ್ಲಿ ಶುಕ್ರ (ಭೃಗು) ಪ್ರೇಮ, ಐಹಿಕ ಸುಖ ಮತ್ತು ಸೃಜನಶೀಲತೆಯ ಸಂಕೇತವಾದರೆ, ಮಂಗಳ (ಅಂಗಾರಕ) ಶಕ್ತಿ, ಆಕ್ರಮಣಕಾರಿ ಸ್ವಭಾವ ಮತ್ತು ಯುದ್ಧದ ಕಾರಕ. ಈ ಎರಡು ಭಿನ್ನ ಪ್ರಕೃತಿಯ ಗ್ರಹಗಳು ಒಂದೇ ರಾಶಿಯಲ್ಲಿ ಸೇರಿದಾಗ (ಯುತಿ), ಅದು ಸಮಾಜ ಮತ್ತು ವೈಯಕ್ತಿಕ ಜೀವನದಲ್ಲಿ ದೊಡ್ಡ ಮಟ್ಟದ ಏರುಪೇರುಗಳನ್ನು ಉಂಟುಮಾಡುತ್ತದೆ.
ಫೆಬ್ರವರಿ 22ನೇ ತಾರೀಕಿನಂದು ಕುಜ ಗ್ರಹವು ಕುಂಭ ರಾಶಿಯನ್ನು ಪ್ರವೇಶಿಸಿ, ಕುಜ- ಶುಕ್ರ ಯುತಿಗೆ ಕಾರಣ ಆಯಿತು. ಮಾರ್ಚ್ 1ನೇ ತಾರೀಕಿನ ತನಕ ಈ ಯುತಿ ಕುಂಭದಲ್ಲಿ ಇರುತ್ತದೆ. ಮಾರ್ಚ್ ಒಂದನೇ ತಾರೀಕಿನ ತನಕ ಈ ಪ್ರಭಾವ ತೀವ್ರವಾಗಿ ಇರಲಿ. ಇನ್ನು ಮಾರ್ಚ್ ಮೂರನೇ ತಾರೀಕಿನಂದು ಸಿಂಹ ರಾಶಿಯಲ್ಲಿ ಕೇತು ಗ್ರಸ್ತ ಚಂದ್ರ ಗ್ರಹಣವೂ ಇದೆ. ಆದ್ದರಿಂದಾಗಿ ಮಳೆ ನಿಂತರೂ ಹನಿ ನಿಲ್ಲಲ್ಲ ಎಂಬಂತೆ ಇನ್ನೂ ಕೆಲ ದಿನ ಈ ಪರಿಸ್ಥಿತಿ ಮುಂದುವರಿಯುತ್ತದೆ.
1. ಜಾಗತಿಕ ಸಂಘರ್ಷ ಮತ್ತು ಯುದ್ಧದ ಹಾದಿ
ಶುಕ್ರ-ಮಂಗಳರ ಯುತಿಯು ಧನು ರಾಶಿಯಿಂದ ಕುಂಭ ರಾಶಿಯವರೆಗೆ ಸಾಗಿಬಂದ ಹಾದಿಯನ್ನು ಗಮನಿಸಿದರೆ, ವಿಶ್ವದಾದ್ಯಂತ ಅಶಾಂತಿಯ ವಾತಾವರಣ ಎದ್ದುಕಾಣುತ್ತಿದೆ:
- ಧನು ರಾಶಿಯಲ್ಲಿ ಯುತಿ: ಇದು ಬೆಂಕಿಯ ತತ್ವದ ರಾಶಿಯಾದ್ದರಿಂದ, ಯುದ್ಧದ ಕಿಚ್ಚು ತಾರಕಕ್ಕೇರಿತು. ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ಶಸ್ತ್ರಾಸ್ತ್ರ ಸಂಘರ್ಷಕ್ಕೆ ನಾಂದಿ ಹಾಡಿದವು.
- ಮಕರ ರಾಶಿಯಲ್ಲಿ ಯುತಿ: ಮಕರವು ಶನಿಯ ಮನೆಯಾಗಿದ್ದು, ಇಲ್ಲಿ ಮಂಗಳ ಉಚ್ಛನಾಗುತ್ತಾನೆ. ಆರಂಭದಲ್ಲಿ ಸಂಯಮ ಕಂಡುಬಂದರೂ ಒಳಗೊಳಗೇ ಸಂಚು ರೂಪಿತವಾಗಿ ಮತ್ತೆ ಹತ್ಯಾಕಾಂಡಗಳು ಮತ್ತು ರಕ್ತಪಾತಗಳು ಮುಂದುವರಿದವು.
- ಕುಂಭ ರಾಶಿಯಲ್ಲಿನ ಪ್ರಸ್ತುತ ಸ್ಥಿತಿ: ಪ್ರಸ್ತುತ ಕುಂಭ ರಾಶಿಯಲ್ಲಿ ಈ ಯುತಿ ನಡೆಯುತ್ತಿದ್ದು, ಇದು ವಾಯು ತತ್ವದ ರಾಶಿಯಾಗಿದೆ. ಇಲ್ಲಿಯೂ ಸಹ ಆರಂಭಿಕ ಶಾಂತಿಯ ನಂತರ ಈಗ ಸಂಘರ್ಷ ಸ್ಫೋಟಗೊಂಡಿದೆ. ಉದಾಹರಣೆಗೆ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ಗಡಿಭಾಗದಲ್ಲಿ ನಡೆಯುತ್ತಿರುವ ಯುದ್ಧವು ಇದಕ್ಕೆ ಸಾಕ್ಷಿ.

2. ಅಧಿಕಾರ ಮದ ಮತ್ತು ರಾಜಕೀಯ ವ್ಯತಿರಿಕ್ತತೆ
ಈ ಯುತಿಯನ್ನು ‘ಅಧಿಕಾರ ಯೋಗ’ ಎಂದೂ ಕರೆಯಲಾಗುತ್ತದೆ. ಆದರೆ ಈ ಯೋಗವು ಜ್ಯೋತಿಷ್ಯದ ದೃಷ್ಟಿಯಲ್ಲಿ ದ್ವಂದ್ವ ಫಲ ನೀಡುತ್ತದೆ:
- ಅರ್ಹ ವ್ಯಕ್ತಿಗಳಿಗೆ ಉನ್ನತ ಅಧಿಕಾರ ಸಿಕ್ಕರೆ, ಅಹಂಕಾರಿಗಳಲ್ಲಿ ‘ಅಧಿಕಾರ ಮದ’ ನೆತ್ತಿಗೇರುತ್ತದೆ.
- ಇದರ ಪರಿಣಾಮವಾಗಿ ಆಡಳಿತಗಾರರಲ್ಲಿ ಹಠಮಾರಿ ಧೋರಣೆ ಹೆಚ್ಚಾಗಿ, ಆಂತರಿಕ ಕಲಹ ಅಥವಾ ನೆರೆಹೊರೆಯ ರಾಷ್ಟ್ರಗಳೊಂದಿಗೆ ಗುದ್ದಾಟಕ್ಕೆ ಕಾರಣವಾಗುತ್ತದೆ.
3. ಆರೋಗ್ಯದ ಮೇಲೆ ತೀವ್ರ ಪರಿಣಾಮ (ಹೊಟ್ಟೆಯ ಕೆಳಭಾಗ)
ದೈಹಿಕವಾಗಿ ಈ ಯುತಿಯು ‘ಕಿರು ಹೊಟ್ಟೆ’ (Lower Abdomen) ಭಾಗದ ಮೇಲೆ ನೇರ ಪ್ರಭಾವ ಬೀರುತ್ತದೆ. ಮಂಗಳನು ರಕ್ತ ಮತ್ತು ಸ್ನಾಯುಗಳಿಗೆ ಕಾರಕನಾದರೆ, ಶುಕ್ರನು ಸಂತಾನೋತ್ಪತ್ತಿ ಮತ್ತು ಮೂತ್ರ ವ್ಯವಸ್ಥೆಗೆ ಕಾರಕ.
- ಬಾಧಿತ ಅಂಗಗಳು: ಗರ್ಭಕೋಶ, ಮೂತ್ರಕೋಶ (Urinary Bladder), ಕಿಡ್ನಿ (Kidneys).
- ಸಂಭವನೀಯ ತೊಂದರೆಗಳು: ಕಿಡ್ನಿ ಸ್ಟೋನ್ (ಮೂತ್ರಪಿಂಡದ ಕಲ್ಲು), ಮೂತ್ರನಾಳದ ಸೋಂಕು, ಮತ್ತು ಗರ್ಭಕೋಶದ ಸಮಸ್ಯೆಗಳು ಈ ಸಮಯದಲ್ಲಿ ಹೆಚ್ಚಾಗುವ ಸಾಧ್ಯತೆ ಇರುತ್ತದೆ. “ಹೊಟ್ಟೆಯೊಳಗಿನ ಕಿತಾಪತಿ” ಕಾರಣಕ್ಕೆ ಶಸ್ತ್ರಚಿಕಿತ್ಸೆಯ ಅವಶ್ಯಕತೆಯೂ ಬರಬಹುದು.
4. ಮುಂದಿನ ನಾಲ್ಕೈದು ದಿನಗಳ ಎಚ್ಚರಿಕೆ
ಕುಂಭ ರಾಶಿಯಲ್ಲಿ ಇನ್ನು ಕೆಲವು ದಿನಗಳ ಕಾಲ ಈ ಯುತಿ ಮುಂದುವರಿಯಲಿದೆ. ಈ ಅವಧಿಯು ಅತ್ಯಂತ ಸೂಕ್ಷ್ಮವಾಗಿದೆ:
- ಸಾಮಾಜಿಕ ಸಮಸ್ಯೆಗಳು: ಮಂಗಳನ ಆಕ್ರಮಣಕಾರಿ ಬುದ್ಧಿ ಮತ್ತು ಶುಕ್ರನ ಕಾಮೋದ್ರೇಕದ ಮೇಳನದಿಂದಾಗಿ ಅತ್ಯಾಚಾರದಂತಹ ಘನಘೋರ ಕೃತ್ಯಗಳು ಅಥವಾ ಮಹಿಳೆಯರ ಮೇಲಿನ ದೌರ್ಜನ್ಯಗಳು ಹೆಚ್ಚಾಗಬಹುದು.
- ಮತ ಕಲಹ: ಧಾರ್ಮಿಕ ಅಸಹಿಷ್ಣುತೆ ಮತ್ತು ಮತೀಯ ಸಂಘರ್ಷಗಳು ತಲೆದೋರುವ ಸಾಧ್ಯತೆ ದಟ್ಟವಾಗಿದೆ.
ಪರಿಹಾರ ಮತ್ತು ಮುನ್ನೆಚ್ಚರಿಕೆ
ಈ ಸ್ಫೋಟಕ ಯುತಿಯ ಪ್ರಭಾವದಿಂದ ಪಾರಾಗಲು ತಾಳ್ಮೆ ಮತ್ತು ಸಂಯಮವೇ ಏಕೈಕ ಮದ್ದು.
- ವೈಯಕ್ತಿಕವಾಗಿ ಕೋಪವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಅವಶ್ಯಕ.
- ಆರೋಗ್ಯದ ದೃಷ್ಟಿಯಿಂದ ಹೆಚ್ಚಿನ ನೀರು ಸೇವನೆ ಮತ್ತು ಹೊಟ್ಟೆಯ ಭಾಗದ ಸ್ವಚ್ಛತೆಗೆ ಆದ್ಯತೆ ನೀಡಬೇಕು.
- ಸಾಮಾಜಿಕವಾಗಿ ಯಾವುದೇ ಪ್ರಚೋದನಕಾರಿ ಹೇಳಿಕೆಗಳಿಗೆ ಕಿವಿಗೊಡದೆ ಶಾಂತಿ ಕಾಪಾಡುವುದು ಇಂದಿನ ಅಗತ್ಯ.
ನಿರೂಪಣೆ– ಶ್ರೀನಿವಾಸ ಮಠ





