ಮಹಾಭಾರತ ಹಾಗೂ ರಾಮಾಯಣ ಈ ಎರಡೂ ದೈನಂದಿನ ಬದುಕಿಗೆ ಎರಡು ಕಣ್ಣುಗಳಿದ್ದಂತೆ. ಸರಿ- ತಪ್ಪುಗಳ ವಿಶ್ಲೇಷಣೆಯನ್ನು ಯಾವ ದೃಷ್ಟಿಯಲ್ಲಿ ನೋಡಬೇಕು ಎಂಬುದಕ್ಕೆ ಈ ಎರಡೂ ಕಣ್ಣುಗಳು ಇವೆ. ಅಂಥ ಮಹಾಭಾರತದ ಶಾಂತಿ ಪರ್ವದಲ್ಲಿ ಅಡಕವಾಗಿರುವ ‘ಆಪದ್ಧರ್ಮ’ ಉಪದೇಶವು ರಾಜಕೀಯ, ನೈತಿಕತೆ ಮತ್ತು ಮಾನವನ ಅಸ್ತಿತ್ವದ ಸಂಘರ್ಷಗಳ ಕುರಿತಾದ ಒಂದು ಆಳವಾದ ಅಧ್ಯಯನ. ಭೀಷ್ಮರು ಶರಶಯ್ಯೆಯ ಮೇಲೆ ಮಲಗಿದ್ದಾಗ ಧರ್ಮರಾಜನಿಗೆ ಜೀವನದ ಅತ್ಯಂತ ಕಠಿಣ ಪರಿಸ್ಥಿತಿಗಳನ್ನು ಹೇಗೆ ಎದುರಿಸಬೇಕೆಂದು ಬೋಧಿಸಿದ ಸಾರಾಂಶವಿದು.
ಆಪದ್ಧರ್ಮದ ಪ್ರಸ್ತಾವ
ಕುರುಕ್ಷೇತ್ರ ಯುದ್ಧವು ಕೇವಲ ಭೂಮಿಗಾಗಿ ನಡೆದ ಯುದ್ಧವಾಗಿರಲಿಲ್ಲ, ಅದು ಮೌಲ್ಯಗಳ ಸಂಘರ್ಷವಾಗಿತ್ತು. ಯುದ್ಧದ ನಂತರ ಯುಧಿಷ್ಠಿರನ ಮನಸ್ಸು ಜುಗುಪ್ಸೆಯಿಂದ ತುಂಬಿತ್ತು. “ನಾನು ಸಿಂಹಾಸನಕ್ಕಾಗಿ ನನ್ನವರನ್ನೇ ಕೊಂದೆನೇ?” ಎಂಬ ಅಪರಾಧ ಪ್ರಜ್ಞೆ ಅವನನ್ನು ಕಾಡುತ್ತಿತ್ತು. ಈ ಸಮಯದಲ್ಲಿ ಶ್ರೀಕೃಷ್ಣನು ಯುಧಿಷ್ಠಿರನನ್ನು ಭೀಷ್ಮರ ಬಳಿ ಕರೆದೊಯ್ಯುತ್ತಾನೆ.
ಯುಧಿಷ್ಠಿರನ ಪ್ರಶ್ನೆ ಸರಳವಾಗಿತ್ತು: “ಧರ್ಮದ ಹಾದಿ ಕಠಿಣವಾದಾಗ, ಸಂಪನ್ಮೂಲಗಳು ಇದಿದ್ದಾಗ, ಶತ್ರುಗಳು ಸುತ್ತುವರಿದಾಗ ಒಬ್ಬ ವ್ಯಕ್ತಿ ಅಥವಾ ರಾಜನು ತನ್ನ ಅಸ್ತಿತ್ವವನ್ನು ಹೇಗೆ ಉಳಿಸಿಕೊಳ್ಳಬೇಕು?” ಇದಕ್ಕೆ ಭೀಷ್ಮರು ನೀಡಿದ ಉತ್ತರವೇ ಆಪದ್ಧರ್ಮ.
ಆಪದ್ಧರ್ಮದ ತಾತ್ವಿಕ ಹಿನ್ನೆಲೆ
ಧರ್ಮವು ಸ್ಥಿರವಲ್ಲ, ಅದು ದೇಶ, ಕಾಲ ಮತ್ತು ಪಾತ್ರಕ್ಕೆ (ಸಂದರ್ಭಕ್ಕೆ) ಅನುಗುಣವಾಗಿ ಬದಲಾಗುತ್ತದೆ ಎಂಬುದು ಭೀಷ್ಮರ ವಾದ.
ಮೂಲ ಶ್ಲೋಕ:
ಯಸ್ಮಿನ್ ಧರ್ಮೋ ವಿಧೀಯೇತ ಸ ಧರ್ಮಃ ಸುಖೋದಯಃ | ಸ ಚೇತ್ ಪೀಡಾಕರೋ ಲೋಕೇ ನ ಸ ಧರ್ಮಃ ಕುಧರ್ಮಕಃ ||(ಯಾವ ಧರ್ಮವು ಸುಖವನ್ನು ನೀಡುತ್ತದೆಯೋ ಅದುವೇ ಧರ್ಮ. ಒಂದು ವೇಳೆ ಅದು ಲೋಕಕ್ಕೆ
ಪೀಡಾಕರವಾಗಿದ್ದರೆ ಅದು ಧರ್ಮವಲ್ಲ, ಕುಧರ್ಮ).
ಆಪದ್ಧರ್ಮ ಎಂದರೆ ಧರ್ಮವನ್ನು ಬಿಡುವುದಲ್ಲ, ಬದಲಾಗಿ ಉನ್ನತವಾದ ಧರ್ಮವನ್ನು (ಪ್ರಾಣ ರಕ್ಷಣೆ ಅಥವಾ ಸಮಾಜದ ಹಿತ) ಉಳಿಸಿಕೊಳ್ಳಲು ಸಣ್ಣ ನಿಯಮಗಳನ್ನು ತಾತ್ಕಾಲಿಕವಾಗಿ ಸಡಿಲಗೊಳಿಸುವುದು.
ವರ್ಷದ 364 ದಿನ ಶ್ರೀಗಂಧದ ಲೇಪನದಲ್ಲಿರುವ ನರಸಿಂಹ! ಸಿಂಹಾಚಲಂ ಕ್ಷೇತ್ರದ ಪೌರಾಣಿಕ ಹಿನ್ನೆಲೆ ನಿಮಗೆ ಗೊತ್ತೇ?
ರಾಜನಿಗೆ ಆಪದ್ಧರ್ಮದ ಬೋಧನೆ
ಒಬ್ಬ ರಾಜನು ಕಷ್ಟಕಾಲದಲ್ಲಿ ಅನುಸರಿಸಬೇಕಾದ ನೀತಿಗಳನ್ನು ಭೀಷ್ಮರು ಹದಿನಾರು ಅಧ್ಯಾಯಗಳಲ್ಲಿ ವಿವರಿಸಿದ್ದಾರೆ.
ಕೋಶ ಸಂಗ್ರಹ (ಖಜಾನೆಯ ರಕ್ಷಣೆ)
ಸಾಮಾನ್ಯ ಕಾಲದಲ್ಲಿ ಪ್ರಜೆಗಳಿಂದ ಅಲ್ಪ ತೆರಿಗೆ ಪಡೆಯಬೇಕು. ಆದರೆ ರಾಜ್ಯವು ಯುದ್ಧದ ಭೀತಿಯಲ್ಲಿದ್ದಾಗ ಅಥವಾ ಆರ್ಥಿಕ ಮುಗ್ಗಟ್ಟು ಎದುರಾದಾಗ ರಾಜನು ಶ್ರೀಮಂತರಿಂದ ಮತ್ತು ಧಾರ್ಮಿಕ ಸಂಸ್ಥೆಗಳಿಂದಲೂ ಧನವನ್ನು ಸಂಗ್ರಹಿಸಬಹುದು. ತತ್ವ: ರಾಜ್ಯವಿಲ್ಲದಿದ್ದರೆ ಪ್ರಜೆಗಳಿಲ್ಲ, ಪ್ರಜೆಗಳಿಲ್ಲದಿದ್ದರೆ ಧರ್ಮವಿಲ್ಲ. ಆದ್ದರಿಂದ ರಾಜ್ಯವನ್ನು ಉಳಿಸಲು ಧನ ಸಂಗ್ರಹ ಅನಿವಾರ್ಯ.
ಶತ್ರು ಮತ್ತು ಮಿತ್ರನ ನಡುವಿನ ಅಸ್ಪಷ್ಟತೆ
ಆಪತ್ತಿನ ಕಾಲದಲ್ಲಿ ಶತ್ರು ಯಾರು, ಮಿತ್ರ ಯಾರು ಎಂದು ನಿರ್ಧರಿಸುವುದು ಕಷ್ಟ. ಭೀಷ್ಮರು ಇಲ್ಲಿ ‘ಮಾರ್ಜಾಲ-ಮೂಷಕ’ (ಬೆಕ್ಕು ಮತ್ತು ಇಲಿ)ಕಥೆಯನ್ನು ಹೇಳುತ್ತಾರೆ. ಪ್ರಾಣಾಪಾಯ ಬಂದಾಗ ಇಲಿ ಮತ್ತು ಬೆಕ್ಕು ಹೇಗೆ ತಾತ್ಕಾಲಿಕವಾಗಿ ಒಪ್ಪಂದ ಮಾಡಿಕೊಳ್ಳುತ್ತವೆಯೋ ಹಾಗೆಯೇ ರಾಜನು ಬಲಶಾಲಿಯಾದ ಶತ್ರುವನ್ನು ಎದುರಿಸಲು ಮತ್ತೊಬ್ಬ ಶತ್ರುವಿನ ಸಹಾಯ ಪಡೆಯಬಹುದು.
ವಿಶ್ವಾಮಿತ್ರ ಮತ್ತು ನಾಯಿ ಮಾಂಸದ ಕಥೆ (ಕ್ಷುದ್ರ ಧರ್ಮ)
ಆಪದ್ಧರ್ಮದ ಗಹನತೆಯನ್ನು ವಿವರಿಸಲು ಭೀಷ್ಮರು ವಿಶ್ವಾಮಿತ್ರ ಮಹರ್ಷಿಗಳ ಉದಾಹರಣೆ ನೀಡುತ್ತಾರೆ. ಹನ್ನೆರಡು ವರ್ಷಗಳ ಭೀಕರ ಕ್ಷಾಮ ಬಂದಾಗ, ಹಸಿವಿನಿಂದ ಸಾಯುವ ಸ್ಥಿತಿಯಲ್ಲಿದ್ದ ವಿಶ್ವಾಮಿತ್ರರು ಒಬ್ಬ ಚಂಡಾಲನ ಮನೆಯಿಂದ ನಾಯಿ ಮಾಂಸವನ್ನು ಕಳ್ಳತನ ಮಾಡುತ್ತಾರೆ.
ಯುಧಿಷ್ಠಿರನು ಇದನ್ನು ಕೇಳಿ ಆಶ್ಚರ್ಯಚಕಿತನಾದಾಗ ಭೀಷ್ಮರು ಹೇಳುತ್ತಾರೆ: “ಪ್ರಾಣವಿದ್ದರೆ ಮಾತ್ರ ತಪಸ್ಸು ಮಾಡಲು ಸಾಧ್ಯ. ಅಶಕ್ತನಾದವನು ಧರ್ಮ ಪಾಲಿಸಲಾರ. ಆದ್ದರಿಂದ ಆಪತ್ತಿನ ಕಾಲದಲ್ಲಿ ಹಸಿವು ನೀಗಿಸಿಕೊಳ್ಳುವುದು ಪಾಪವಲ್ಲ.”
ವಿದುರ ನೀತಿ: ಜೀವನದ ಯಶಸ್ಸಿಗೆ ದಿಕ್ಸೂಚಿಯಂತಿರುವ 35 ಅದ್ಭುತ ಸೂತ್ರಗಳು ಮತ್ತು ಜೀವನ ಪಾಠಗಳು!
ಸತ್ಯದ ಸ್ವರೂಪ
ಸತ್ಯ ನುಡಿಯುವುದು ಶ್ರೇಷ್ಠ. ಆದರೆ ಎಲ್ಲ ಸಂದರ್ಭದಲ್ಲೂ ಸತ್ಯವೇ ಧರ್ಮವಾಗುವುದಿಲ್ಲ.
- ಒಬ್ಬ ವ್ಯಕ್ತಿಯ ಪ್ರಾಣ ಉಳಿಸಲು ಹೇಳುವ ಸುಳ್ಳು ಸತ್ಯಕ್ಕಿಂತ ಮಿಗಿಲು.
- ದರೋಡೆಕೋರರಿಗೆ ದಾರಿ ತೋರಿಸುವಾಗ ಸತ್ಯ ಹೇಳಿ ನಿರಪರಾಧಿಗಳ ಸಾವಿಗೆ ಕಾರಣವಾದರೆ ಅದು ಅಧರ್ಮವಾಗುತ್ತದೆ.
ಶ್ಲೋಕ:
ಭವತಿ ಸತ್ಯಮಸತ್ಯಂ ಚ ಸತ್ಯಂ ಚಾಪ್ಯಸತ್ಯತಾಮ್ | (ಕೆಲವೊಮ್ಮೆ ಸತ್ಯವು ಅಸತ್ಯವಾಗುತ್ತದೆ ಮತ್ತು ಅಸತ್ಯವು ಸತ್ಯವಾಗುತ್ತದೆ).
ಆಪದ್ಧರ್ಮದ ಐದು ಪ್ರಮುಖ ಸೂತ್ರಗಳು
ಭೀಷ್ಮರು ಆಪತ್ತಿನ ಕಾಲದಲ್ಲಿ ಈ ಐದು ತತ್ವಗಳನ್ನು ನೆನಪಿಡಲು ಹೇಳುತ್ತಾರೆ:
- ಆತ್ಮರಕ್ಷಣೆ: ನೀವು ಬದುಕಿದ್ದರೆ ಮಾತ್ರ ಲೋಕಕ್ಕೆ ಒಳ್ಳೆಯದು ಮಾಡಲು ಸಾಧ್ಯ.
- ಬುದ್ಧಿವಂತಿಕೆ: ಬಲಕ್ಕಿಂತ ಬುದ್ಧಿ ದೊಡ್ಡದು. ಕಷ್ಟಕಾಲದಲ್ಲಿ ಭಾವನಾತ್ಮಕವಾಗಿ ಇರುವುದಕ್ಕಿಂತ ತಾರ್ಕಿಕವಾಗಿ ಯೋಚಿಸಿ.
- ಅನಗತ್ಯ ತ್ಯಾಗ ಬೇಡ: ಗೆಲ್ಲುವ ಸಾಧ್ಯತೆ ಇಲ್ಲದ ಕಡೆ ಪ್ರಾಣತ್ಯಾಗ ಮಾಡುವುದು ಮೂರ್ಖತನ.
- ಸಮಯ ಪ್ರಜ್ಞೆ: ಕಾಲವು ಎಲ್ಲವನ್ನೂ ಬದಲಾಯಿಸುತ್ತದೆ. ಕಷ್ಟದ ಕಾಲದಲ್ಲಿ ಮೌನವಾಗಿದ್ದು, ಸಮಯ ಬಂದಾಗ ಪ್ರತಿಕ್ರಿಯಿಸಿ.
- ಪ್ರಾಯಶ್ಚಿತ್ತ: ಆಪತ್ತಿನ ಕಾಲದಲ್ಲಿ ಮಾಡಿದ ಅಧರ್ಮದ ಕಾರ್ಯಗಳಿಗೆ ಸಂಕಷ್ಟ ಮುಗಿದ ಮೇಲೆ ದಾನ, ಧರ್ಮಗಳ ಮೂಲಕ ಶುದ್ಧರಾಗಿ.
ರಾವಣ ಸಂಹಿತೆ: ಜೀವನದ ಅದೃಷ್ಟ ಬದಲಿಸಬಲ್ಲ 100 ಜ್ಯೋತಿಷ್ಯ ರಹಸ್ಯಗಳು ಮತ್ತು ಪರಿಹಾರಗಳು!
ಭೀಷ್ಮೋಪದೇಶ: ಕಣಿಕ ನೀತಿ
ಆಪತ್ತಿನ ಕಾಲದಲ್ಲಿ ರಾಜನು ಕೇವಲ ಆದರ್ಶವಾದಿಯಾಗಿ ಇರದೆ ಪ್ರಾಯೋಗಿಕವಾಗಿರಬೇಕು ಎಂಬುದು ಭೀಷ್ಮರ ನಿಲುವು. ಇದಕ್ಕಾಗಿ ಅವರು ಮಹಾಭಾರತದ ಶಾಂತಿ ಪರ್ವದಲ್ಲಿ ಈ ಕೆಳಗಿನ ತತ್ವಗಳನ್ನು ವಿವರಿಸುತ್ತಾರೆ.
ಕಣಿಕ ನೀತಿ
ಕಣಿಕನು ಒಬ್ಬ ಪ್ರಖ್ಯಾತ ರಾಜಕೀಯ ಮುತ್ಸದ್ದಿ. ಅವನು ಶತ್ರು ಸಂಹಾರದ ವಿಷಯದಲ್ಲಿ ಅತ್ಯಂತ ಕಠಿಣವಾದ ಆದರೆ ಪ್ರಾಯೋಗಿಕವಾದ ನೀತಿಗಳನ್ನು ಪ್ರತಿಪಾದಿಸುತ್ತಾನೆ. ಭೀಷ್ಮರು ಇದನ್ನು ಯುಧಿಷ್ಠಿರನಿಗೆ ತಿಳಿಸುತ್ತಾ, “ರಾಜನು ಯಾವಾಗಲೂ ಮೃದುವಾಗಿರಬಾರದು” ಎಂದು ಎಚ್ಚರಿಸುತ್ತಾರೆ.
ಕಣಿಕ ನೀತಿಯ ಮುಖ್ಯಾಂಶಗಳು:
- ದೌರ್ಬಲ್ಯ ಪ್ರದರ್ಶಿಸಬೇಡಿ: ರಾಜನು ತನ್ನ ದೌರ್ಬಲ್ಯವನ್ನು ಶತ್ರುವಿಗೆ ಎಂದಿಗೂ ತೋರಿಸಬಾರದು. ಶತ್ರುವು ಬಲಶಾಲಿಯಾಗಿದ್ದಾಗ ಬಗ್ಗಿದಂತೆ ನಟಿಸಬೇಕು, ಆದರೆ ಸಮಯ ಬಂದಾಗ ದಾಳಿ ಮಾಡಬೇಕು.
- ಶತ್ರುಶೇಷ ಇರಬಾರದು: ಬೆಂಕಿ, ಸಾಲ ಮತ್ತು ಶತ್ರುವನ್ನು ಸ್ವಲ್ಪವೂ ಉಳಿಸಬಾರದು. ಅವು ಪುನಃ ಚಿಗುರಿ ಅಪಾಯ ತರಬಹುದು.
- ಮಾತಿನಲ್ಲಿ ಮೃದುತ್ವ, ಕೃತಿಯಲ್ಲಿ ಕಠಿಣತೆ: ಶತ್ರುವಿನ ಪ್ರಾಣ ತೆಗೆಯುವ ಮುನ್ನವೂ ಅವನೊಂದಿಗೆ ಅತ್ಯಂತ ಮಧುರವಾಗಿ ಮಾತನಾಡಿ ಅವನ ವಿಶ್ವಾಸ ಗಳಿಸಬೇಕು.
- ತಂತ್ರಗಾರಿಕೆ: “ಕೈ ಮುಗಿದು ಕಾಲು ತುಳಿಯುವುದು” ಎಂಬಂತೆ, ರಾಜನು ಕಾರ್ಯ ಸಾಧನೆಯಾಗುವವರೆಗೆ ವಿನಯಶೀಲನಾಗಿರಬೇಕು.
ಮೂಲ ಶ್ಲೋಕದ ಸಾರ: ಧರ್ಮವನ್ನೇ ಗುರಿಯಾಗಿಟ್ಟುಕೊಂಡು ಸದಾ ಯುದ್ಧ ಮಾಡುವ ರಾಜನು ಶತ್ರುಗಳಿಗೆ ಆಹಾರವಾಗುತ್ತಾನೆ. ಆದ್ದರಿಂದ ಸಮಯಕ್ಕೆ ತಕ್ಕಂತೆ ತನ್ನ ಯುಕ್ತಿಯನ್ನು ಬಳಸಬೇಕು.
ಕಾಕ-ಉಲೂಕ ನ್ಯಾಯ
ಶತ್ರು ಮತ್ತು ಮಿತ್ರರ ನಡುವಿನ ಸಂಬಂಧವನ್ನು ವಿವರಿಸಲು ಭೀಷ್ಮರು ಈ ‘ಕಾಗೆ ಮತ್ತು ಗೂಬೆ’ಯ ಕಥೆಯನ್ನು ಹೇಳುತ್ತಾರೆ. ಇದು ವಿಶೇಷವಾಗಿ ಆಪತ್ತಿನ ಕಾಲದಲ್ಲಿ ಮಾಡಿಕೊಳ್ಳುವ ತಾತ್ಕಾಲಿಕ ಮೈತ್ರಿಯ ಬಗ್ಗೆ ತಿಳಿಸುತ್ತದೆ.
ನ್ಯಾಯದ ಹಿನ್ನೆಲೆ: ಹಗಲಿನಲ್ಲಿ ಕಾಗೆಗಳು ಗೂಬೆಗಳನ್ನು ಕೊಲ್ಲುತ್ತವೆ, ರಾತ್ರಿಯಲ್ಲಿ ಗೂಬೆಗಳು ಕಾಗೆಗಳನ್ನು ಸಾಯಿಸುತ್ತವೆ. ಇವು ಜನ್ಮಜಾತ ಶತ್ರುಗಳು. ಆದರೆ ಒಮ್ಮೆ ಇಬ್ಬರಿಗೂ ಸಮಾನವಾದ ಪ್ರಾಣಾಪಾಯ (ಉದಾಹರಣೆಗೆ ಬೇಟೆಗಾರನ ಬಲೆ) ಎದುರಾದಾಗ ಅವು ಹೇಗೆ ವರ್ತಿಸಬೇಕು?
ಬೋಧನೆ:
- ತಾತ್ಕಾಲಿಕ ಮೈತ್ರಿ: ಆಪತ್ತಿನ ಕಾಲದಲ್ಲಿ ಪರಮ ಶತ್ರುವಿನೊಂದಿಗೂ ಒಪ್ಪಂದ ಮಾಡಿಕೊಳ್ಳಬೇಕು. “ಸತ್ತ ನಂತರ ಸ್ವರ್ಗಕ್ಕೆ ಹೋಗುವುದಕ್ಕಿಂತ, ಬದುಕಿ ಧರ್ಮ ಪಾಲಿಸುವುದು ಮುಖ್ಯ” ಎಂಬುದು ಇಲ್ಲಿನ ತರ್ಕ.
- ಅತೀವ ನಂಬಿಕೆ ಸಲ್ಲದು: ಮೈತ್ರಿ ಮಾಡಿಕೊಂಡರೂ ಶತ್ರುವಿನ ಮೇಲೆ ಸದಾ ಕಣ್ಣಿರಲಿ. ಕೆಲಸ ಮುಗಿದ ತಕ್ಷಣ ಶತ್ರುವಿನಿಂದ ದೂರ ಸರಿಯಬೇಕು.
- ಸಮಯ ಸಾಧನೆ: ಶತ್ರುವು ಕಷ್ಟದಲ್ಲಿದ್ದಾಗ ಅವನಿಗೆ ಸಹಾಯ ಮಾಡುವಂತೆ ನಟಿಸಿ, ನಿಮ್ಮನ್ನು ನೀವು ರಕ್ಷಿಸಿಕೊಳ್ಳುವುದು ರಾಜಧರ್ಮದ ಒಂದು ಭಾಗ.
ಶತ್ರು-ಮಿತ್ರ ವಿವೇಚನೆ
ಯುಧಿಷ್ಠಿರನಿಗೆ ಭೀಷ್ಮರು ಹೇಳುತ್ತಾರೆ: “ಲೋಕದಲ್ಲಿ ಯಾರೂ ಯಾರಿಗೂ ಕಾಯಂ ಮಿತ್ರರೂ ಅಲ್ಲ, ಶತ್ರುಗಳೂ ಅಲ್ಲ. ಕೇವಲ ‘ಸ್ವಾರ್ಥ’ ಅಥವಾ ‘ಅವಶ್ಯಕತೆ’ ಸಂಬಂಧಗಳನ್ನು ಬೆಸೆಯುತ್ತದೆ.”
- ಮಿತ್ರರೂ ಶತ್ರುಗಳಾಗಬಹುದು: ಸಂಪತ್ತು ಅಥವಾ ಅಧಿಕಾರಕ್ಕಾಗಿ ಮಿತ್ರರು ಶತ್ರುಗಳಾಗಬಹುದು.
- ಶತ್ರುಗಳೂ ಮಿತ್ರರಾಗಬಹುದು: ಪ್ರಾಣ ರಕ್ಷಣೆಗಾಗಿ ಶತ್ರುವು ಮಿತ್ರನಾಗಬಹುದು.
ಆಪದ್ಧರ್ಮದಲ್ಲಿ ರಾಜನು ಈ ಬದಲಾವಣೆಗಳನ್ನು ಗುರುತಿಸಿ ತನ್ನ ರಾಜ್ಯವನ್ನು ಉಳಿಸಿಕೊಳ್ಳಬೇಕು.
ಕಣಿಕ ನೀತಿಯ 16 ಸೂತ್ರಗಳ ವಿವರಣೆ ಹೀಗಿದೆ:
ಕಣಿಕನು ಬೋಧಿಸಿದ ಈ 16 ಸೂತ್ರಗಳು ಶತ್ರುವಿನ ನಾಶ ಮತ್ತು ರಾಜ್ಯದ ಭದ್ರತೆಗೆ ಅಡಿಪಾಯವಾಗಿವೆ.
| ಕ್ರ.ಸಂ | ಸೂತ್ರದ ಹೆಸರು | ವಿಸ್ತೃತ ವಿವರಣೆ (ಕಣಿಕನ ಸಿದ್ಧಾಂತದಂತೆ) |
| 1 | ಸದಾ ಉದ್ಯುಕ್ತ | ರಾಜನು ಯಾವಾಗಲೂ ಯುದ್ಧಕ್ಕೆ ಸಿದ್ಧನಿರುವಂತೆ ಜಾಗರೂಕನಾಗಿರಬೇಕು. ಸನ್ನದ್ಧ ಸ್ಥಿತಿಯಲ್ಲಿರುವ ನಾಯಕನಿಗೆ ಮಾತ್ರ ಸಮಾಜವು ವಿಧೇಯವಾಗಿರುತ್ತದೆ. |
| 2 | ರಂಧ್ರ ಅನ್ವೇಷಣೆ | ಶತ್ರುವಿನ ಪ್ರತಿಯೊಂದು ಚಟುವಟಿಕೆಯನ್ನು ಗಮನಿಸಿ ಅವನ ಸಣ್ಣ ದೌರ್ಬಲ್ಯ ಅಥವಾ ತಪ್ಪನ್ನು ಪತ್ತೆ ಹಚ್ಚಬೇಕು. ಅದೇ ಅವನನ್ನು ಸೋಲಿಸಲು ದಾರಿಯಾಗುತ್ತದೆ. |
| 3 | ಸ್ವ–ರಂಧ್ರ ರಕ್ಷಣೆ | ಆಮೆಯು ತನ್ನ ಅಂಗಗಳನ್ನು ಚಿಪ್ಪಿನೊಳಗೆ ಅಡಗಿಸಿಕೊಳ್ಳುವಂತೆ, ರಾಜನು ತನ್ನ ಗುಟ್ಟು ಮತ್ತು ದೌರ್ಬಲ್ಯಗಳನ್ನು ಶತ್ರುವಿಗೆ ತಿಳಿಯದಂತೆ ರಕ್ಷಿಸಬೇಕು. |
| 4 | ಪೂರ್ಣ ಸಂಹಾರ | ಶತ್ರುವನ್ನು ಅರ್ಧಕ್ಕೆ ಬಿಡುವುದು ಅಪಾಯಕಾರಿ. ಬೆಂಕಿ ಅಥವಾ ಶತ್ರುವನ್ನು ಸ್ವಲ್ಪವೂ ಉಳಿಸದೆ ಪೂರ್ಣವಾಗಿ ನಿರ್ಮೂಲನೆ ಮಾಡುವುದು ಸುರಕ್ಷಿತ. |
| 5 | ಸಮಯ ಸಾಧನೆ | ಶತ್ರು ಬಲಶಾಲಿ ಆಗಿದ್ದಾಗ ಅವನ ಮುಂದೆ ವಿನಯ ಪ್ರದರ್ಶಿಸಬೇಕು. ಇದು ದೌರ್ಬಲ್ಯವಲ್ಲ, ಬದಲಾಗಿ ಅವನನ್ನು ಎದುರಿಸಲು ಬೇಕಾದ ಸಮಯವನ್ನು ಗಳಿಸುವ ತಂತ್ರ. |
| 6 | ಸಿಹಿ ಮಾತು | ಶತ್ರುವಿನೊಂದಿಗೆ ಅತ್ಯಂತ ಮಧುರವಾಗಿ ಮಾತನಾಡಿ ಅವನ ವಿಶ್ವಾಸ ಗಳಿಸಿ. ಆದರೆ ಒಳಗಿನಿಂದ ಅವನ ವಿನಾಶಕ್ಕೆ ಬೇಕಾದ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಿ. |
| 7 | ಚತುರೋಪಾಯ | ಕೇವಲ ಶಕ್ತಿಯಲ್ಲದೆ ಸಾಮ, ದಾನ, ಭೇದ ಮತ್ತು ದಂಡ ಎಂಬ ನಾಲ್ಕು ಮಾರ್ಗಗಳನ್ನು ಸಂದರ್ಭಕ್ಕೆ ತಕ್ಕಂತೆ ಯೋಜಿಸಿ ಕಾರ್ಯ ಸಿದ್ಧಿಸಿಕೊಳ್ಳಬೇಕು. |
| 8 | ಅತಿ ನಂಬಿಕೆ ಸಲ್ಲದು | ನಂಬಿಕೆಯೇ ವಿನಾಶಕ್ಕೆ ಮೂಲ ಕಾರಣ. ಪರಿಚಿತರಾಗಲಿ ಅಥವಾ ಅಪರಿಚಿತರಾಗಲಿ, ಅತಿಯಾದ ವಿಶ್ವಾಸವು ರಾಜಕೀಯದಲ್ಲಿ ಆತ್ಮಹತ್ಯೆಗೆ ಸಮಾನ. |
| 9 | ಕೋಪ ನಿಯಂತ್ರಣ | ಆಕ್ರೋಶವು ಬುದ್ಧಿಯನ್ನು ಮಬ್ಬುಗೊಳಿಸುತ್ತದೆ. ರಾಜನು ತನ್ನ ಭಾವನೆಗಳನ್ನು ಹತ್ತಿಕ್ಕಿ, ತಣ್ಣಗಿನ ಮತ್ತು ಸ್ಥಿರ ಬುದ್ಧಿಯಿಂದ ತಂತ್ರಗಳನ್ನು ರೂಪಿಸಬೇಕು. |
| 10 | ತೀಕ್ಷ್ಣ ದೃಷ್ಟಿ | ಹದ್ದಿನ ದೂರದೃಷ್ಟಿ, ಕೊಕ್ಕರೆಯ ಏಕಾಗ್ರತೆ, ನಾಯಿಯ ಜಾಗರೂಕತೆ ಮತ್ತು ಸಿಂಹದ ಪರಾಕ್ರಮವನ್ನು ರಾಜನು ತನ್ನಲ್ಲಿ ಅಳವಡಿಸಿಕೊಳ್ಳಬೇಕು. |
| 11 | ಶತ್ರುವಿನ ಶತ್ರು ಮಿತ್ರ | ನಿಮ್ಮ ಶತ್ರುವಿಗೆ ಯಾರ ಮೇಲೆ ದ್ವೇಷವಿದೆಯೋ ಅಂತಹವರನ್ನು ನಿಮ್ಮ ಮೈತ್ರಿ ಕೂಟಕ್ಕೆ ಸೇರಿಸಿಕೊಳ್ಳಿ. ಇದರಿಂದ ಶತ್ರು ಏಕಾಂಗಿಯಾಗುತ್ತಾನೆ. |
| 12 | ಸಂಪತ್ತಿನ ರಕ್ಷಣೆ | ಖಜಾನೆಯು ರಾಜನ ಮೂಲ ಶಕ್ತಿ. ಹಣವಿದ್ದರೆ ಮಾತ್ರ ಸೈನ್ಯ ಮತ್ತು ಗೂಢಚರ ಜಾಲವನ್ನು ಸುಸ್ಥಿತಿಯಲ್ಲಿಡಲು ಸಾಧ್ಯವಾಗುತ್ತದೆ. |
| 13 | ತಪ್ಪು ಕ್ಷಮಿಸದಿರುವುದು | ರಾಜ್ಯದ್ರೋಹಿಗಳು ಎಷ್ಟೇ ಆಪ್ತರಾಗಿದ್ದರೂ ಅವರಿಗೆ ಶಿಕ್ಷೆ ನೀಡಲೇಬೇಕು. ರಾಜನ ಮೃದುತ್ವವು ರಾಜ್ಯದ ಭದ್ರತೆಗೆ ಅಪಾಯ ತರಬಾರದು. |
| 14 | ಗುಪ್ತಚರ ಬಳಕೆ | ರಾಜ್ಯದ ಪ್ರತಿಯೊಂದು ಮೂಲೆ ಮತ್ತು ಶತ್ರು ಪಾಳೆಯದ ಚಲನವಲನಗಳನ್ನು ಅರಿಯಲು ನಂಬಿಕಸ್ತ ಗುಪ್ತಚರರನ್ನು ನೇಮಿಸಿಕೊಳ್ಳುವುದು ಅನಿವಾರ್ಯ. |
| 15 | ನಕಲಿ ವಿನಯದ ಶಂಕೆ | ಶತ್ರುವು ಇದ್ದಕ್ಕಿದ್ದಂತೆ ವಿಪರೀತ ವಿನಯ ಅಥವಾ ಪ್ರೀತಿ ತೋರಿಸುತ್ತಿದ್ದರೆ ಅದನ್ನು ಮುಂದಿನ ದಾಳಿಯ ಸಿದ್ಧತೆ ಎಂದು ಭಾವಿಸಿ ಜಾಗರೂಕರಾಗಬೇಕು. |
| 16 | ಪ್ರಾಯಶ್ಚಿತ್ತ | ಆಪತ್ತಿನ ಕಾಲದಲ್ಲಿ ಅನಿವಾರ್ಯವಾಗಿ ಮಾಡಿದ ಅಧರ್ಮದ ಕೆಲಸಗಳಿಗೆ ಮುಂದೆ ದಾನ, ಧರ್ಮ ಮತ್ತು ತಪಸ್ಸಿನ ಮೂಲಕ ಶುದ್ಧರಾಗಬೇಕು. |
ಭೀಷ್ಮರ ಎಚ್ಚರಿಕೆ
ಕಣಿಕ ನೀತಿಯನ್ನು ವಿವರಿಸಿದ ನಂತರ ಭೀಷ್ಮರು ಯುಧಿಷ್ಠಿರನಿಗೆ ಹೀಗೆನ್ನುತ್ತಾರೆ: “ಈ ನೀತಿಗಳು ಕೇವಲ ಸ್ವಾರ್ಥಕ್ಕಾಗಿಯಲ್ಲ, ಧರ್ಮದ ರಕ್ಷಣೆಗಾಗಿ ಮತ್ತು ಅಧರ್ಮವನ್ನು ಮಟ್ಟಹಾಕಲು ಮಾತ್ರ ಬಳಸಬೇಕು.”
ಭೀಷ್ಮರ ಜೀವನದ ಪ್ರಮುಖ ವಿವರಗಳು
| ವಿವರ | ಮಾಹಿತಿ |
| ಮೂಲ ಹೆಸರು | ದೇವವ್ರತ |
| ತಂದೆ | ಹಸ್ತಿನಾಪುರದ ರಾಜ ಶಂತನು |
| ತಾಯಿ | ಗಂಗಾದೇವಿ (ಗಂಗೆ) |
| ಗುರುಗಳು | 1. ಮಹರ್ಷಿ ವಸಿಷ್ಠರು (ವೇದ ಮತ್ತು ವೇದಾಂತ ಬೋಧನೆ)
2. ಪರಶುರಾಮರು (ಶಸ್ತ್ರವಿದ್ಯೆ ಮತ್ತು ಸಮರಕಲೆ) 3. ಬೃಹಸ್ಪತಿ (ರಾಜನೀತಿ ಶಾಸ್ತ್ರ) 4. ಶುಕ್ರಾಚಾರ್ಯರು (ನೀತಿ ಶಾಸ್ತ್ರ) |
| ಅಂತ್ಯಕಾಲದ ವಯಸ್ಸು | ವಿವಿಧ ಪುರಾಣಗಳ ಲೆಕ್ಕಾಚಾರದ ಪ್ರಕಾರ ಕುರುಕ್ಷೇತ್ರ ಯುದ್ಧದ ಸಮಯದಲ್ಲಿ ಮತ್ತು ಪ್ರಾಣತ್ಯಾಗ ಮಾಡುವಾಗ ಭೀಷ್ಮರಿಗೆ ಸರಿಸುಮಾರು 140 ರಿಂದ 150 ವರ್ಷಗಳು ಆಗಿತ್ತು ಎನ್ನಲಾಗುತ್ತದೆ. (ಕೆಲವು ಸಂಶೋಧನೆಗಳ ಪ್ರಕಾರ ಇದು ಇನ್ನೂ ಹೆಚ್ಚಿರಬಹುದು). |
| ಪ್ರಾಣತ್ಯಾಗದ ದಿನ | ಮಾಘ ಮಾಸದ ಶುಕ್ಲ ಪಕ್ಷದ ಅಷ್ಟಮಿಯಂದು (ಭೀಷ್ಮಾಷ್ಟಮಿ) ಉತ್ತರಾಯಣ ಪುಣ್ಯಕಾಲದಲ್ಲಿ ಪ್ರಾಣತ್ಯಾಗ ಮಾಡಿದರು. |
| ವಿಶೇಷ ವರ | ತಮ್ಮ ತಂದೆ ಶಂತನು ಮಹಾರಾಜನಿಂದ ಪಡೆದ ‘ಇಚ್ಛಾ ಮರಣ‘ ವರ. |
ಲೇಖನ- ಶ್ರೀನಿವಾಸ ಮಠ





