Sri Gurubhyo Logo

2026 ಸಿಂಹ ರಾಶಿ ವರ್ಷಭವಿಷ್ಯ: ಆರೋಗ್ಯ, ವಿವಾಹ, ಹಣಕಾಸಿನಲ್ಲಿ ಎಚ್ಚರಿಕೆ ಅಗತ್ಯವೇ?

ಸಿಂಹ ರಾಶಿ ಚಿಹ್ನೆ – ಲಿಯೋ ಜೋಡಿಯಾಕ್ ಸಂಕೇತ (2026 ವರ್ಷಭವಿಷ್ಯ)
ಸಿಂಹ ರಾಶಿಯ ವರ್ಷ ಭವಿಷ್ಯ 2026- Leo Zodiac Sign

2026ನೇ ಇಸವಿಯ ವರ್ಷಭವಿಷ್ಯದಲ್ಲಿ ಸಿಂಹ ರಾಶಿ ಫಲಾಫಲವನ್ನು ಈ ಲೇಖನದಲ್ಲಿ ತಿಳಿಸಲಾಗುವುದು. ಈ ಸರಣಿಯಲ್ಲಿ ಮೇಷದಿಂದ ಮೀನದ ತನಕ ಹನ್ನೆರಡು ರಾಶಿಗಳ ಜ್ಯೋತಿಷ್ಯ ರೀತಿಯಾದ ವರ್ಷಭವಿಷ್ಯವನ್ನು ನೀಡಲಾಗುತ್ತಿದೆ. ಇದಕ್ಕಾಗಿ ಗ್ರಹಗಳ ಗೋಚಾರ ಸ್ಥಿತಿಯನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ. ಅದರಲ್ಲಿಯೂ ದೀರ್ಘಕಾಲ ಒಂದೇ ರಾಶಿಯಲ್ಲಿ ಇರುವಂಥ ಗ್ರಹಗಳಾದ ಶನಿ, ರಾಹು- ಕೇತು ಹಾಗೂ ಗುರು ಗ್ರಹದ ಸಂಚಾರವನ್ನು ಆಧರಿಸಿ, ಇಲ್ಲಿನ ಫಲಾಫಲವನ್ನು ತಿಳಿಸಲಾಗಿದೆ. ಇಲ್ಲಿ ನೀಡಲಾಗಿರುವ ವರ್ಷಫಲವು 2026ನೇ ಇಸವಿಯ ಜನವರಿ 1ನೇ ತಾರೀಕಿನಿಂದ ಡಿಸೆಂಬರ್ 31ನೇ ತಾರೀಕಿನ ತನಕ ಅನ್ವಯ ಆಗುತ್ತದೆ. ನೆನಪಿನಲ್ಲಿಡಿ, ಇದು ಯುಗಾದಿ ಸಂವತ್ಸರ ಫಲ ಅಥವಾ ಯುಗಾದಿ ಭವಿಷ್ಯ ಅಲ್ಲ, ಇದು ಹೆಚ್ಚು ಜನಪ್ರಿಯ ಆಗಿರುವ ಜನವರಿಯಿಂದ ಡಿಸೆಂಬರ್ ತನಕದ ಕ್ಯಾಲೆಂಡರ್ ವರ್ಷ ಭವಿಷ್ಯ. 

ಗ್ರಹ ಸಂಚಾರದ ವಿವರ ಹೀಗಿದೆ:

ಶನಿ ಗ್ರಹ ಇಡೀ ವರ್ಷ ಮೀನ ರಾಶಿಯಲ್ಲಿ ಸಂಚರಿಸುತ್ತದೆ. 

ರಾಹು- ಕೇತು: ಜನವರಿಯಿಂದ ಡಿಸೆಂಬರ್ 5ನೇ ತಾರೀಕಿನ ತನಕ ರಾಹು ಕುಂಭ ರಾಶಿಯಲ್ಲಿ, ಕೇತು ಸಿಂಹ ರಾಶಿಯಲ್ಲಿ ಇರುತ್ತದೆ. ಆ ನಂತರ ವರ್ಷಾಂತ್ಯದ ತನಕ ರಾಹು ಮಕರ ರಾಶಿಯಲ್ಲೂ ಕೇತು ಕರ್ಕಾಟಕ ರಾಶಿಯಲ್ಲಿ ಇರುತ್ತದೆ.

ಗುರು: ಜನವರಿಯಿಂದ ಜೂನ್ ಒಂದನೇ ತಾರೀಕಿನ ತನಕ ಗುರು ಗ್ರಹ ಮಿಥುನ ರಾಶಿಯಲ್ಲಿ ಸಂಚರಿಸುತ್ತದೆ. ಆ ನಂತರ ಅಕ್ಟೋಬರ್ 31ನೇ ತಾರೀಕಿನ ತನಕ ಕರ್ಕಾಟಕ ರಾಶಿಯಲ್ಲಿ ಬೃಹಸ್ಪತಿ ಸಂಚರಿಸುತ್ತದೆ, ಆ ಮೇಲೆ ವರ್ಷಾಂತ್ಯದ ತನಕ ಸಿಂಹ ರಾಶಿಯಲ್ಲಿ ಗುರು ಸಂಚಾರ ಇರುತ್ತದೆ.

ಸಿಂಹ- ಮಖಾ ನಕ್ಷತ್ರದ ನಾಲ್ಕೂ ಪಾದ, ಪುಬ್ಬಾ ಅಥವಾ ಪೂರ್ವ ಫಲ್ಗುಣಿ ನಕ್ಷತ್ರದ ನಾಲ್ಕೂ ಪಾದ ಹಾಗೂ ಉತ್ತರಾ ಫಲ್ಗುಣಿ ನಕ್ಷತ್ರದ ಒಂದನೇ ಪಾದ ಸೇರಿ ಸಿಂಹ ರಾಶಿ ಆಗುತ್ತದೆ. ಮಖಾ ನಕ್ಷತ್ರಕ್ಕೆ ಕೇತು ಅಧಿಪತಿ, ಪುಬ್ಬಾ ನಕ್ಷತ್ರಕ್ಕೆ ಶುಕ್ರ ಹಾಗೂ ಉತ್ತರಾ ನಕ್ಷತ್ರಕ್ಕೆ ರವಿ ಅಧಿಪತಿ ಆಗುತ್ತಾನೆ. ಇನ್ನು ಸಿಂಹ ರಾಶ್ಯಾಧಿಪತಿ ರವಿ ಆಗುತ್ತದೆ. ಸ್ಥಿರ ರಾಶಿ, ಅಗ್ನಿ ತತ್ವದ ಕಾಲಪುರುಷನ ಚಕ್ರದ ಐದನೇ ರಾಶಿ ಸಿಂಹ. 

ಡಯಾಬಿಟೀಸ್ ನಿಯಂತ್ರಣಕ್ಕೆ ನಂಬಿಕೆಯ ದೇಗುಲ: ಸಾವಿರ ವರ್ಷಗಳ ಇತಿಹಾಸದ ಕರುಂಬೇಶ್ವರರ್ ದೇವಾಲಯ

ಸಿಂಹ ರಾಶಿ ವರ್ಷ ಭವಿಷ್ಯ ಹೀಗಿದೆ:

ಶನಿ ಗೋಚಾರ ಫಲ: ನಿಮ್ಮ ರಾಶಿಗೆ ಆರು- ಏಳನೇ ಮನೆ ಅಧಿಪತಿ, ಅಂದರೆ ರಿಪು ಸ್ಥಾನ- ಕಳತ್ರ ಸ್ಥಾನದ ಅಧಿಪತಿ ಶನೈಶ್ಚರನು ಇಡೀ ವರ್ಷ ಎಂಟನೇ ಮನೆಯಲ್ಲಿ ಸಂಚರಿಸುತ್ತದೆ. ಆರೋಗ್ಯ ವಿಚಾರದಲ್ಲಿ ಬಹಳ ಎಚ್ಚರಿಕೆಯನ್ನು ವಹಿಸಬೇಕು. ಹೃದಯ, ನರಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಮಸ್ಯೆ ಇದೆ ಎಂದಾದಲ್ಲಿ ಸರಿಯಾದ ಫಾಲೋಅಪ್ ಹಾಗೂ ಔಷಧೋಪಚಾರದ ಕಡೆಗೆ ಗಮನವನ್ನು ನೀಡಬೇಕು. ಹಣದ ವ್ಯವಹಾರದಲ್ಲಿ ಅವಮಾನ ಎದುರಿಸುತ್ತೀರಿ. ನಿಮ್ಮ ಉಳಿತಾಯ ಅಥವಾ ಹೂಡಿಕೆ ಹಣವನ್ನು ತೆಗೆದು ವ್ಯಾಪಾರಕ್ಕೆ- ವ್ಯವಹಾರಕ್ಕೆ ಅಂತ ಹಾಕಬೇಡಿ. ಇನ್ನು ಎಫ್.ಡಿ., ಅಂಥದ್ದು ಇದ್ದಲ್ಲಿ ಹೆಚ್ಚಿನ ಬಡ್ಡಿ ಕೊಡುತ್ತಾರೆ ಎಂಬ ಕಾರಣಕ್ಕೆ ಸಾಲ ನೀಡುವುದಕ್ಕೆ ಹೋಗಬೇಡಿ. ದಂಪತಿ ಮಧ್ಯೆ ವಿರಸ ವಿಕೋಪಕ್ಕೆ ಹೋಗಿ, ಡೈವೋರ್ಸ್ ತೆಗೆದುಕೊಳ್ಳುವ ಮಟ್ಟದವರೆಗೂ ಹೋಗಬಹುದು. ಉದ್ಯೋಗವನ್ನು ನೀವಾಗಿಯೇ ಬಿಡುವುದಕ್ಕೆ ಹೋಗಬೇಡಿ. ಮದುವೆಗೆ ಪ್ರಯತ್ನ ಮಾಡುತ್ತಿರುವವರಿಗೆ ಒತ್ತಡ, ಆತಂಕ, ಚಿಂತೆ ಹೆಚ್ಚಾಗುತ್ತದೆ. ಜೀವನಶೈಲಿ ಸರಿಯಾಗಿ ಇಟ್ಟುಕೊಳ್ಳುವುದು ನಿಮ್ಮ ಹಲವು ಸಮಸ್ಯೆಗೆ ಪರಿಹಾರ ಆಗಲಿದೆ.

ರಾಹು- ಕೇತು ಗೋಚಾರ ಫಲ: ನಿಮ್ಮ ರಾಶಿಗೆ ಏಳನೇ ಮನೆಯಲ್ಲಿ ರಾಹು ಗ್ರಹದ ಸಂಚಾರ ಇರುತ್ತದೆ. ಉದ್ಯೋಗ- ವ್ಯಾಸಂಗದ ಕಾರಣಕ್ಕೆ ವಿದೇಶಕ್ಕೆ ಹೋಗಬೇಕು ಎಂದಿರುವವರು ದಾಖಲಾತಿ ಪತ್ರಗಳು, ನೀವು ತೆರಳಬೇಕು ಎಂದುಕೊಂಡಿರುವ ಸ್ಥಳದ ಪರಿಸ್ಥಿತಿ ಇತ್ಯಾದಿಗಳನ್ನು ಪರಾಂಬರಿಸಿಕೊಂಡು ತೆರಳುವುದು ಒಳ್ಳೆಯದು. ಹೆಚ್ಚಿನ ಹಣ ಕೊಟ್ಟರೆ ನಿಮಗೆ ಅನುಕೂಲ ಮಾಡಿಕೊಡುವುದಾಗಿ ಹೇಳಿದಲ್ಲಿ ಅಂಥ ವ್ಯವಹಾರಗಳಿಂದ ದೂರ ಇರಿ. ಪಾರ್ಟನರ್ ಷಿಪ್ ವ್ಯವಹಾರ ಮಾಡುವವರು ಪಾರದರ್ಶಕತೆಗೆ ಪ್ರಾಮುಖ್ಯ ನೀಡಿ. ದಂಪತಿಗೆ, ಪ್ರೀತಿಯಲ್ಲಿ ಇರುವವರಿಗೆ ಏನಾದರೊಂದು ಕಾರಣಕ್ಕೆ ವಿರಸ, ಅಭಿಪ್ರಾಯ ಭೇದ ಹಾಗೂ ಸಂದೇಹ ಮೂಡುತ್ತವೆ. ಮದುವೆಗೆ ಪ್ರಯತ್ನಿಸುತ್ತಾ ಇದ್ದಲ್ಲಿ ನಾನಾ ವಿಘ್ನಗಳು ಕಾಡುತ್ತವೆ. ಇನ್ನು ನಿಮ್ಮದೇ ಜನ್ಮ ರಾಶಿಯಲ್ಲಿ ಕೇತು ಸಂಚಾರ ಮಾಡುವುದರಿಂದ ಮಾನಸಿಕ ಖಿನ್ನತೆ, ನಿರುತ್ಸಾಹ ಹಾಗೂ ಆತ್ಮಬಲ ಕಡಿಮೆ ಆಗುತ್ತದೆ. ವಿನಾಕಾರಣದ ಖರ್ಚನ್ನು ನಿಲ್ಲಿಸುವ ಕಡೆಗೆ ಲಕ್ಷ್ಯ ನೀಡಿ.

ಗುರು ಗೋಚಾರ ಫಲ:  ಜನವರಿ ಒಂದನೇ ತಾರೀಕಿನಿಂದ ಜೂನ್ ಒಂದನೇ ತಾರೀಕಿನ ತನಕ ಹನ್ನೊಂದನೇ ಮನೆಯಲ್ಲಿ ಗುರು ಗ್ರಹದ ಸಂಚಾರ ಆಗುತ್ತದೆ. ಈ ಅವಧಿಯಲ್ಲಿ ಬರುವಂಥ ಆದಾಯವನ್ನು ಉಳಿಸಿಕೊಳ್ಳುವ ಕಡೆಗೆ ಪ್ರಯತ್ನ ಇರಲಿ. ಮದುವೆ- ಸಂತಾನಕ್ಕೆ ಪ್ರಯತ್ನ ಮಾಡುತ್ತಾ ಇರುವವರಿಗೆ ಶುಭ ಬೆಳವಣಿಗೆ ಆಗಲಿದೆ. ಆದರೆ ಜೂನ್ ತಿಂಗಳಿಗೂ ಮುಂಚೆ ಇವುಗಳನ್ನು ಮಾಡಿ. ಮನೆ, ಸೈಟು, ಫ್ಲ್ಯಾಟ್ ಹಾಗೂ ಕಾರು, ಸ್ಕೂಟರ್ ಹೀಗೇ ಏನೇ ಖರೀದಿಯಾದರೂ ಈ ಅವಧಿಯಲ್ಲಿ ಆಗಲಿದೆ. ಹಣಕಾಸಿನ ಸಮಸ್ಯೆ ಉದ್ಭವಿಸಿದರೂ ಯಾವುದಾದರೂ ಮೂಲದಿಂದ ಹೊಂದಾಣಿಕೆ ಆಗುತ್ತದೆ. ಜೂನ್ ಎರಡನೇ ತಾರೀಕಿನಿಂದ ಅಕ್ಟೋಬರ್ ಮೂವತ್ತೊಂದನೇ ತಾರೀಕಿನ ತನಕ ವ್ಯಯ ಸ್ಥಾನದಲ್ಲಿ ಸಂಚರಿಸುತ್ತದೆ. ಖರ್ಚಿನ ಕಡೆಗೆ ಗಮನ ಇರಲಿ. ಕಾನೂನು ವ್ಯಾಜ್ಯಗಳಿದ್ದಲ್ಲಿ ಹಿನ್ನಡೆ ಅನುಭವಿಸುವಂತೆ ಆಗಲಿದೆ. ಚಿನ್ನ- ಆಸ್ತಿ ಅಡಮಾನ ಮಾಡಿದ್ದಲ್ಲಿ ಸಾಲ ಮರುಪಾವತಿ ಸರಿಯಾದ ಸಮಯದಲ್ಲಿ ಮಾಡುವುದಕ್ಕೆ ಆದ್ಯತೆ ನೀಡಬೇಕು. ನವೆಂಬರ್- ಡಿಸೆಂಬರ್ ತಿಂಗಳಲ್ಲಿ ಜನ್ಮ ರಾಶಿಯಲ್ಲಿಯೇ ಗುರು ಸಂಚರಿಸುತ್ತದೆ. ಈ ಎರಡು ತಿಂಗಳು ಯಾವುದೇ ಮುಖ್ಯ ತೀರ್ಮಾನ ತೆಗೆದುಕೊಳ್ಳಬೇಡಿ. ಉದ್ಯೋಗ ಬಿಡುವ ಆಲೋಚನೆ ಯಾವ ಕಾರಣಕ್ಕೂ ಬೇಡ.

ಪರಿಹಾರ:  ನವಗ್ರಹ ಪೂಜೆ ಮಾಡಿ, ನವಧಾನ್ಯಗಳನ್ನು ದಾನ ಮಾಡಿ. 

ಲೇಖನ- ಶ್ರೀನಿವಾಸ ಮಠ

ಶ್ರೀನಿವಾಸ ಮಠ

ಸಂಪಾದಕರು, ಶ್ರೀಗುರುಭ್ಯೋ.ಕಾಮ್

ಪತ್ರಿಕೋದ್ಯಮದಲ್ಲಿ ಹದಿನೆಂಟು ವರ್ಷಕ್ಕೂ ಹೆಚ್ಚು ಅನುಭವ ಇರುವ ಲೇಖಕ. ಕನ್ನಡದ ಪ್ರಮುಖ ದಿನಪತ್ರಿಕೆಗಳು ಹಾಗೂ ವಾರಪತ್ರಿಕೆ ಮತ್ತು ಆನ್ ಲೈನ್ ವೆಬ್ ಪೋರ್ಟಲ್ ಗಳಲ್ಲಿ ವಿವಿಧ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ವೈದಿಕ ಜ್ಯೋತಿಷ್ಯವನ್ನು ಪದ್ಧತಿಯಿಂದ ಅಭ್ಯಾಸ ಮಾಡಿರುವಂಥ ಇವರು, ಈ ತನಕ ಮೂರು ಸಾವಿರಕ್ಕೂ ಹೆಚ್ಚು ಜ್ಯೋತಿಷ್ಯ ಲೇಖನಗಳನ್ನು ವಿವಿಧ ವೆಬ್ ಪೋರ್ಟಲ್ ಗಳಿಗಾಗಿ ಬರೆದಿದ್ದಾರೆ. ಅಧ್ಯಾತ್ಮ, ಜ್ಯೋತಿಷ್ಯ ಹಾಗೂ ಧಾರ್ಮಿಕ ವಿಷಯಗಳಲ್ಲಿ ಅಳವಾದ ಜ್ಞಾನ ಮತ್ತು ನಿರಂತರ ಅಧ್ಯಯನ ಇರುವಂಥ ಶ್ರೀನಿವಾಸ ಮಠ ಸದ್ಯಕ್ಕೆ ಬೆಂಗಳೂರಿನಲ್ಲಿ ವಾಸವಿದ್ದು, ಜ್ಯೋತಿಷ್ಯವನ್ನು ವೃತ್ತಿಯಾಗಿ ಸ್ವೀಕರಿಸಿದ್ದಾರೆ.

Latest News

Related Posts