ಭಾರತ ದೇಶದ ಪಾಲಿಗೆ ಇನ್ನೆರಡು ವರ್ಷ ಅತಿ ಮುಖ್ಯವಾದದ್ದು. ದೇಶದ ಪಾಲಿನ ಬಾಹ್ಯ ಹಾಗೂ ಆಂತರಿಕ ಶತ್ರುಗಳ ನಿರ್ನಾಮ ಆಗುತ್ತದೆ, ಈ ನೆಲ ಸುಭಿಕ್ಷವಾಗುತ್ತದೆ. ಹಾಗಂತ ಸವಾಲುಗಳಿಲ್ಲ ಅಂತಲ್ಲ. ಆದರೆ ಈ ಬಾರಿ ಅವೆಲ್ಲವನ್ನೂ ದಾಟಿ, ಅಂದುಕೊಂಡಂಥ ಗುರಿ ತಲುಪುವುದು ನಿಶ್ಚಿತ ಎಂದು ಉಡುಪಿಯ ಕಾಪು ಮೂಲದ ಜ್ಯೋತಿಷಿಗಳಾದ ಪ್ರಕಾಶ್ ಅಮ್ಮಣ್ಣಾಯ ಅವರು ‘ಶ್ರೀಗುರುಭ್ಯೋ.ಕಾಮ್’ಗೆ ತಿಳಿಸಿದ್ದಾರೆ. ಹೀಗೆ ಭವಿಷ್ಯ ನುಡಿಯುವುದಕ್ಕೆ ಕಾರಣ ಏನು ಎಂಬುದನ್ನು ಭಾರತ ಸ್ವತಂತ್ರಗೊಂಡ ಸಮಯದ ಕುಂಡಲಿಯನ್ನು ರಚಿಸಿ, ಆಗಿನ ಗ್ರಹಸ್ಥಿತಿ, ದ್ರೇಕ್ಕಾಣ ಹಾಗೂ ಗೋಚಾರ ಸ್ಥಾನದಲ್ಲಿನ ಗ್ರಹಗಳ ಸಂಚಾರದ ಆಧಾರದ ಮೇಲೆ ಅವರು ವಿವರಿಸಿದ್ದಾರೆ. ಅದನ್ನೇ ನಿಮ್ಮ ಮುಂದೆ ಇಡಲಾಗುತ್ತಿದೆ.
ಈ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಾಗ ಇದ್ದ ಲಗ್ನ ಕುಂಡಲಿಯನ್ನು ಇಲ್ಲಿ ನೀಡಲಾಗಿದೆ. ಇಲ್ಲಿ ನಾವೀಗ ಕೆಲ ದ್ರೇಕ್ಕಾಣ (ಮುಖ್ಯವಾದದ್ದು) ವಿಶ್ಲೇಷಣೆ ಮಾಡಿದ್ದೇವೆ. ಅಂದ ಹಾಗೆ ದ್ರೇಕ್ಕಾಣ ಎಂದರೆ, ಒಂದು ರಾಶಿಗೆ 30° (ಮೂವತ್ತು ಡಿಗ್ರಿ) ಆಗುತ್ತದೆ. ಅದನ್ನು ಹತ್ತು ಡಿಗ್ರಿಯಿಂದ ಭಾಗ ಮಾಡಿದರೆ ಬರುವಂಥದ್ದು. ಅಂದರೆ 30°÷10°. ಈಗ ಆ ಕುರಿತು ಚಿಂತನೆ ಮಾಡೋಣ.
ಲಗ್ನ ಚತುರ್ಥಕ್ಕೆ ಕೋಲ ( ಹಂದಿ) ದ್ರೇಕ್ಕಾಣ ಬರುತ್ತದೆ. ಆಡಳಿತ, ಅಧಿಕಾರವನ್ನು ದ್ರೇಕ್ಕಾಣ ಮೂಲಕ ತಿಳಿಯಬೇಕು ಎಂದಿದೆ ಜ್ಯೋತಿಷ್ಯ. ಅಂದರೆ ಗಾಢ ನಿದ್ದೆಯಲ್ಲಿ ಗೊರಕೆ. ಬೇರಾವ ಯೋಚನೆಯೂ ಇಲ್ಲ. ಅಷ್ಟಮದಲ್ಲಿ ಭುಜಂಗ ದ್ರೇಕ್ಕಾಣ. ಅಂದರೆ ಘಟ ಸರ್ಪ. ವಿಷ. ಅಲ್ಲೇ ಕೇತು ಸ್ಥಿತಿ. ಈ ಸನ್ನಿವೇಶದಲ್ಲಿ ಯಾರು ವಿಷ ಎಂಬುದನ್ನು ಅರ್ಥ ಮಾಡಿಕೊಳ್ಳಿ. ಇನ್ನು ಕರ್ಮ ಸ್ಥಾನ ಮಕರವಾಗುತ್ತದೆ. ಅಲ್ಲೇ ಮೊದಲ ಹತ್ತು ಡಿಗ್ರಿಯಲ್ಲಿ ನೀಗಡ ದ್ರೇಕ್ಕಾಣ. ಇದು ಬಂಧನ, ಕರ್ಮ ಬಂಧನ, ಸಂಕೋಲೆ ಇತ್ಯಾದಿಗಳ ಸೂಚಕವಾಗುತ್ತದೆ. ಈ ಕರ್ಮ ಸ್ಥಾನಕ್ಕೆ ಬಾಧಾ ರಾಶಿ ವೃಶ್ಚಿಕ. ಅಲ್ಲೇ ಕೇತು ಸರ್ಪ ದ್ರೇಕ್ಕಾಣದಲ್ಲಿ ಇರುವುದು. ಆಗ ಈ ಕರ್ಮ( ನಿಯಮ, ಶಾಸನ)ಕ್ಕೆ ಯಾವುದು ಅಡ್ಡಿ ಎಂದು ಯೋಚಿಸಬಹುದು.
ಸದ್ಯಕ್ಕೆ ಗೋಚರದಲ್ಲಿ ಕರ್ಕ ಶನಿಗೆ ಹಾಗೂ ಕರ್ಕ ರಾಶಿಗೆ ಅಷ್ಟಮ ಶನಿ ಇದೆ. ಲಗ್ನಕ್ಕೆ ಲಾಭದಲ್ಲಿ ಶನಿ.ಒಂದೆಡೆ ಈ ಬಂಧನದಿಂದ ಲಾಭ ತಂದರೂ ಅಂದರೆ ಮುಕ್ತಿ ಕೊಟ್ಟರೂ ಮತ್ತೊಂದೆಡೆ ಚಂದ್ರಾಷ್ಟಮ, ಮಂದಾಷ್ಟಮ ಶನಿಯು ವಿಪರೀತ ಹಿಂಸೆಯನ್ನೂ ಕೊಡಲಿದ್ದಾನೆ.
ಇದನ್ನು ಹೇಗೆ ಅರ್ಥ ಮಾಡಿಕೊಳ್ಳಬೇಕು? ಹೇಗೆಂದರೆ, ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ ಆಗುತ್ತದೆ. ಹಾಗಂತ ಇದು ಸುಲಭಕ್ಕೆ ಆಗಲ್ಲ, ಇದರಲ್ಲಿ ಕಷ್ಟವೂ ಇದೆ, ಅಪಾಯಕ್ಕೂ ಕಾರಣವಾಗುತ್ರದೆ. ರೈತ ಮಸೂದೆ ಜಾರಿಗೆ ಮುಂದಾದಾಗ ಕೊನೆಗೆ ಪ್ರಧಾನ ಮಂತ್ರಿಯವರನ್ನೇ ತಡೆದ ಉದಾಹರಣೆ ಸ್ಮರಿಸಬಹುದು.
Jupiter – Venus Conjunction: ಗುರು- ಶುಕ್ರ ಸಂಯೋಗದಿಂದ ಮೇಷದಿಂದ ಮೀನದ ತನಕ ಯಾರಿಗೆ ಶುಭ- ಯಾರಿಗೆ ಅಶುಭ?
ಒಟ್ಟಿನಲ್ಲಿ ಇನ್ನೆರಡು ವರ್ಷದಲ್ಲಿ ಸಾಧನೆಗೆ ಗೆಲುವು, ದೇವರ ದಯೆ ಇದೆ. ಆದರೂ ಹಿಂಸೆ, ಅಪಾಯ, ತೊಂದರೆಯೂ ಇಲ್ಲ ಎನ್ನಲಾಗದು. ಆದರೆ ಚಾಣಾಕ್ಷ ಆಡಳಿತದಿಂದ ಇದನ್ನೆಲ್ಲ ಸೌಹಾರ್ದಯುತವಾಗಿ, ಶಾಂತಿಯುತವಾಗಿ ನಿಭಾಯಿಸಲಿದೆ ಆಡಳಿತ ನಡೆಸುತ್ತಿರುವ ಸರ್ಕಾರ. ಇನ್ನು ಆರಂಭದಲ್ಲೇ ಹೇಳಿದಂತೆ ದೇಶ ಸುಭಿಕ್ಷವಾಗಲಿದೆ. ದುಷ್ಟರಿಗೆ ಬಲ ನೀಡುವವರು ಆರ್ಥಿಕವಾಗಿ ದುರ್ಬಲರಾಗುತ್ತಿರುವುದು ಕಂಡುಬರುತ್ತದೆ. ಉದಾಹರಣೆಗೆ ಪಾಕಿಸ್ತಾನ, ಅಮೆರಿಕ, ಟರ್ಕಿ, ದೇಶದೊಳಗಿನ ಶಾಂತಿ ಕದಡುವ ಪಟ್ಟಭದ್ರ ಹಿತಾಸಕ್ತಿಗಳು ಇತ್ಯಾದಿ ದುರ್ಬಲ ಆಗುತ್ತಿವೆ ಹಾಗೂ ಇನ್ನೂ ಬಲ ಕಳೆದುಕೊಳ್ಳುತ್ತವೆ. ಇದುವೇ ನಮಗೆ ದೈವ ಬಲದ ಸೂಚನೆ.
ಲೇಖಕರು: ಪ್ರಕಾಶ್ ಅಮ್ಮಣ್ಣಾಯ, ಉಡುಪಿ ಜಿಲ್ಲೆಯ ಕಾಪು ಮೂಲದ ಜ್ಯೋತಿಷಿಗಳು. ವಿವಿಧ ಚುನಾವಣೆಗಳ ಸಂದರ್ಭದಲ್ಲಿ ಕರಾರುವಾಕ್ ಭವಿಷ್ಯ ನುಡಿದು, ಇಡೀ ರಾಜ್ಯದ ಗಮನ ಸೆಳೆದವರು. ವಿವಿಧ ಜ್ಯೋತಿಷ್ಯ ಸಮಸ್ಯೆಗಳಿಗೆ ಪರಿಣಾಮಕಾರಿಯಾದ ಪರಿಹಾರವನ್ನು ಸೂಚಿಸುವುದಕ್ಕೆ ಖ್ಯಾತಿ ಪಡೆದಿದ್ದಾರೆ.