“ನೀನ್ಯಾಕೆ ಯಾಚನೆ ಮಾಡ್ತೀ, ನಿನ್ನ ಪರವಾಗಿ ನಾನಿದ್ದೀನಿ. ಯಾವುದು ಒಳಿತೋ, ಯಾವುದು ಧರ್ಮಸಮ್ಮತವೋ ಅಂಥದ್ದನ್ನು ಧೈರ್ಯವಾಗಿ ಮಾಡು” – ಸುಮ್ಮನೆ ಯೋಚಿಸಿ ನೋಡಿ. ರೋಗದಿಂದ ಸುಸ್ತಾದಾಗ, ವ್ಯಾಪಾರ-ವ್ಯವಹಾರಗಳಲ್ಲಿ ನಷ್ಟ ಅನುಭವಿಸಿದಾಗ, ಮುಂದೇನು ಎಂಬುದು ತೋಚದೇ ಮನಸ್ಸು ಕಂಗಾಲಾದಾಗ ನಮ್ಮ ಅಕ್ಕನೋ, ಗೆಳೆಯನೋ, ತಂದೆಯೋ ಹೀಗೊಂದು ಭರವಸೆ ಕೊಟ್ಟರೆ ಹೇಗಿರುತ್ತೆ? ಪರಿಮಿತ ಶಕ್ತಿಯಿರುವ ಹಿತೈಷಿಗಳ ಬಾಯ್ಮಾತಿನ ಭರವಸೆಗಳೇ ನಮ್ಮಲ್ಲಿ ಹೊಸ ಹುಮ್ಮಸ್ಸು ಹುಟ್ಟಿಸಿ ಬದುಕನ್ನು ಜೀವನ್ಮುಖಿಯಾಗಿಸುತ್ತೆ. ಅಂಥದ್ದರಲ್ಲಿ ಆದರೆ ನಿಜಕ್ಕೂ ನಮ್ಮನ್ನು ಅನವರತ ಕಾಪಾಡಿಕೊಳ್ಳುವ, ಸದಾ ನಮ್ಮ ಪರವಾಗಿಯೇ ಇರುವ, ನಮ್ಮೆಲ್ಲ ಸಮಸ್ಯೆಗಳನ್ನು ಪರಿಹರಿಸುವ ಅಪರಿಮಿತ ಸಾಮರ್ಥ್ಯ ಇರುವ ಸಾಕ್ಷಾತ್ ಶ್ರೀಹರಿಯೇ ನಮ್ಮೆದುರು ನಿಂತು ಇಂಥದ್ದೊಂದು ಭರವಸೆ ಕೊಟ್ಟರೆ ಹೇಗಿರುತ್ತದೆ?
ನಿಜ ಎಂದರೆ, ದೇವರು ಎಂದೋ ನಮಗೆಲ್ಲರಿಗೂ ಅಂಥದ್ದೊಂದು ಭರವಸೆ ಕೊಟ್ಟುಬಿಟ್ಟಿದ್ದಾನೆ. ಅಷ್ಟೇ ಅಲ್ಲ, ಸಾವಿರಾರು ವರ್ಷಗಳ ಹಿಂದೆ ಕೊಟ್ಟಿರುವ ಆ ಮಾತಿಗೆ ಇಂದಿಗೂ ಕಟ್ಟುಬಿದ್ದು ನಮ್ಮನ್ನು ಕಾಪಾಡುತ್ತಲೇ ಇದ್ದಾನೆ. ಅದು ದೇವರಿಗೂ-ಜೀವಿಗಳಿಗೂ ಆಗಿರುವ ಕಾಲಮಿತಿಯೇ ಇಲ್ಲದ ಒಪ್ಪಂದ. ಆದರೆ ಈ ಭರವಸೆ ಈಡೇರಿಸಲು ದೇವರು ಇಟ್ಟಿರುವ ಷರತ್ತು ಒಂದೇ ಒಂದು, ಅದನ್ನು ನಾನು-ನೀವೆಲ್ಲರೂ ಅನುಸರಿಸುವುದೂ ಅತ್ಯಂತ ಸುಲಭ. “ನನ್ನನ್ನು ಮನಃಪೂರ್ವಕ ನಂಬಿ” ಎಂಬುದೊಂದೇ ದೇವರು ಮನುಷ್ಯರಿಗೆ ವಿಧಿಸಿರುವ ಷರತ್ತು.
ಸದಾ ಈ ಷರತ್ತಿನ ನೆರಳಿನಲ್ಲೇ, ದೇವರನ್ನು ಎಂದಿಗೂ ಮರೆಯದ ಜೀವನಪದ್ಧತಿ ಭೂಮಿಯಲ್ಲಿದ್ದಾಗ ಈ ಭರವಸೆಯನ್ನು ಪದೇಪದೆ ನೆನಪಿಸಬೇಕಾದ ಅಗತ್ಯವೂ ದೇವರಿಗೆ ಇರಲಿಲ್ಲ. ಆದರೆ ಕಾಲಾನುಕ್ರಮದಲ್ಲಿ ದೇವರ ಅಸ್ತಿತ್ವವನ್ನು ಮರೆಯುವವರ ಸಂಖ್ಯೆ ಹೆಚ್ಚಾಯಿತು. ನಾನು ಎನ್ನುವ ಅಹಂಕಾರ ವ್ಯಾಪಿಸಿಕೊಂಡಾಗ ದೇವರೂ ತುಸು ಹಿಂದೆ ಸರಿದು ನಿಂತ. “ಸರಿ, ನಿಮ್ಮಿಂದಲೇ ಎಲ್ಲ ಎನಿಸುತ್ತಿದೆಯಲ್ಲವೇ? ಹಾಗಿದ್ದರೆ ನಿಮ್ಮ ಬದುಕನ್ನು ನೀವೇ ಸಂಭಾಳಿಸಿಕೊಳ್ಳಿ” ಎಂಬ ನಿಲುವು ತಳೆದ. ಕಷ್ಟನಷ್ಟಗಳಲ್ಲಿ ತೊಳಲಿ ಬೆಂಡಾದ ಮನುಷ್ಯರು ಅಸಹಾಯಕತೆಯಿಂದ ನರಳತೊಡಗಿದಾಗ ಮತ್ತೊಮ್ಮೆ ತನ್ನದೇ ವಾಕ್ಯವನ್ನು ಪುನಃ ನೆನಪಿಸಿಕೊಟ್ಟ. ಆಗ ರೂಪುಗೊಂಡಿದ್ದು ವಿಷ್ಣುಸಹಸ್ರನಾಮ.
ನಿತ್ಯವೂ ಪಾರಾಯಣ ಮಾಡಬೇಕಾದ, ಶ್ರವಣ ಮಾಡಬೇಕಾದ ಶ್ಲೋಕಗಳ ಪೈಕಿ ಶ್ರೀ ವಿಷ್ಣುಸಹಸ್ರನಾಮಕ್ಕೆ ತನ್ನದೇ ಆದ ವಿಶಿಷ್ಟ ಸ್ಥಾನವಿದೆ. ವಿಷ್ಣುಸಹಸ್ರನಾಮದ ಅಲೌಕಿಕ, ಅಧ್ಯಾತ್ಮಿಕ ಫಲಗಳು ಜನಜನಿತ. ಅದರ ಜೊತೆಗೆ ನಮ್ಮಂಥ ಹುಲುಮಾನವರಿಗೆ ಅಧ್ಯಾತ್ಮದ ಸೆಳೆತ ಹುಟ್ಟಲಿ ಎನ್ನುವ ಕಾರಣಕ್ಕೆ ಈ ಶ್ಲೋಕಗಳಿಗೆ ಲೌಕಿಕ ಫಲಗಳನ್ನೂ ಹೇಳಲಾಗಿದೆ. ಲೌಕಿಕ ಫಲಗಳ ಆಸೆಗಾಗಿ ಸಹಸ್ರನಾಮ ಪಾರಾಯಣ ಮಾಡಿದರೆ ಕರುವಿನ ಹಿಂದೆ ಹಸುವೂ ಬರುವಂತೆ ಪುಣ್ಯ ಸಂಚಯನವೂ ಆಗುತ್ತದೆ. ವಿಷ್ಣುಸಹಸ್ರನಾಮದ ಪಾರಾಯಣದ ಫಲವನ್ನು ಇದೇ ಮಂತ್ರದ ಕೊನೆಯಲ್ಲಿ ಸುದೀರ್ಘವಾಗಿ ವಿವರಿಸಲಾಗಿದೆ. ಅದರಲ್ಲಿ ಅತ್ಯಂತ ಮುಖ್ಯವಾದುದೆಂದರೆ “ನ ವಾಸುದೇವ ಭಕ್ತಾನಾಂ ಅಶುಭಂ ವಿದ್ಯತೇ ಕ್ವಚಿತ್” ಎನ್ನುವುದು. ಇದರ ಕನ್ನಡ ಅರ್ಥ “ವಾಸುದೇವನ ಭಕ್ತರಿಗೆ ಎಲ್ಲೂ ಕೇಡು (ಅಶುಭ) ಎನ್ನುವುದು ಇರುವುದಿಲ್ಲ” ಎಂದಾಗುತ್ತದೆ. ಫಲಶ್ರುತಿಯ ಈ ಶ್ಲೋಕವು ಮುಂದುವರಿದು, “ಜನ್ಮಮೃತ್ಯುಜರಾವ್ಯಾಧಿ ಭಯಂ ನೈವೋಪಜಾಯತೇ” ಎಂದು ಮುಕ್ತಾಯವಾಗುತ್ತದೆ. ಅಂದರೆ, “ಭಗವಂತನನ್ನು ನಂಬಿದವರಿಗೆ, ಲೌಕಿಕ ಕೆಡುಕು ಇರುವುದಿಲ್ಲ. ಅಷ್ಟೇ ಅಲ್ಲ, ಅಂಥವರು ಹುಟ್ಟು, ಸಾವು, ಮುಪ್ಪು, ರುಜಿನ, ಭಯಗಳ ಸಮಸ್ಯೆಗಳಿಂದ ಮುಕ್ತರಾಗುತ್ತಾರೆ” ಎಂಬ ಭರವಸೆ ಸಿಗುತ್ತದೆ.
ದೇವರಿಂದ ಮನುಷ್ಯರಿಗಾಗಿ ರೂಪುಗೊಂಡ ಕೃತಿ
ಮಹಾಭಾರತದ ಭೀಷ್ಮ ಪರ್ವದಲ್ಲಿ ಬರುವ ಪ್ರಸಿದ್ಧ ಭಾಗ ‘ವಿಷ್ಣುಸಹಸ್ರನಾಮ’. ಉಪದೇಶ ಮಾಡಿದವರ ಹೆಸರಿನ ಮೇಲೆ ಕೃತಿಯನ್ನು ಕರೆಯುವ ಮಾದರಿಯಲ್ಲಿ ಅಂದರೆ; ಭಗವದ್ಗೀತೆ, ಉದ್ಧವಗೀತೆಗಳಂತೆ ಕರೆದರೆ ವಿಷ್ಣುಸಹಸ್ರನಾಮಕ್ಕೆ ‘ಭೀಷ್ಮಗೀತೆ’ ಎನ್ನಬಹುದು. ತನ್ನ ಪ್ರೀತಿಯ ಮೊಮ್ಮಗನಾದ ಅರ್ಜುನ ನಿರ್ಮಿಸಿಕೊಟ್ಟ ಬಾಣಗಳ ಹಾಸಿಗೆಯಲ್ಲಿ (ಶರಶಯ್ಯೆ) ಯಾತನೆಪಡುತ್ತಾ ಮಲಗಿದ್ದ ಭೀಷ್ಮರು ಶ್ರೀಕೃಷ್ಣನ ಸೂಚನೆಯಂತೆ ಧರ್ಮರಾಯನಿಗೆ ಧರ್ಮೋಪದೇಶ ಮಾಡುವಾಗ ಹೊಮ್ಮಿದ ಭಾವಧಾರೆ ಇದು. ಬುದ್ಧಿಭಾವಗಳನ್ನು ದೇವರು ವ್ಯಾಪಿಸಿಕೊಂಡು, ಭೀಷ್ಮರ ಮನಸ್ಸನ್ನು ಆವರಿಸಿ ನಿಂತಾದ ವಿಶ್ವವೆಲ್ಲಾ ವ್ಯಾಪಿಸಿಕೊಂಡಿರುವ ಬೃಹತ್ ಶಕ್ತಿಯೂ ಶಬ್ದಗಳಲ್ಲಿ ಏಕೀಭವಿಸಿ ಹೊಮ್ಮಿದ ಓತಪ್ರೋತ ಮಂತ್ರಧಾರೆ ಇದು.
ಶ್ರೀಕೃಷ್ಣ ಎದುರು ಪಕ್ಷದಲ್ಲಿ ನಿಂತ ಭೀಷ್ಮಾಚಾರ್ಯರಿಗೆ ಶರಶಯ್ಯೆಯಲ್ಲಿ ಮಲಗಿದ್ದಾಗಲೂ “ನಾನು ತಪ್ಪು ಮಾಡಿದೆನಾ? ದೇವರ ವಿರುದ್ಧ ನಿಂತು ಹೋರಾಡಬಾರದಿತ್ತಾ” ಎಂಬ ಗೊಂದಲಗಳು ಕಾಡುತ್ತಿದ್ದವು. ಆದರೆ ಪರಮಾತ್ಮನಾದ ಕೃಷ್ಣನಿಗೆ ಭೀಷ್ಮರ ಬಗ್ಗೆ, ಅವರ ಭಕ್ತಿಯ ಬಗ್ಗೆ ಹೊಸದಾಗಿ ತಿಳಿಯಬೇಕಾದ್ದು ಏನೂ ಇರಲಿಲ್ಲ. ಆದರೆ “ನನಗೆ ನಿಮ್ಮ ಮೇಲೆ ಸಿಟ್ಟಿಲ್ಲ” ಎಂದು ಭೀಷ್ಮರಿಗೆ ಶ್ರೀಕೃಷ್ಣನು ತಿಳಿಸಿ ಹೇಳಬೇಕಿತ್ತು. ಇನ್ನೊಂದೆಡೆ ಕುರುಕ್ಷೇತ್ರ ಯುದ್ಧ ಗೆದ್ದರೂ ಧರ್ಮರಾಯ ಪಾಪಪ್ರಜ್ಞೆಯಲ್ಲಿ ಕನಲುತ್ತಿದ್ದ. ರಾಜ್ಯದ ಮುಂದಿನ ವ್ಯವಸ್ಥೆಗಾಗಿ ಧರ್ಮರಾಯನನ್ನು ಈ ಮನಃಸ್ಥಿತಿಯಿಂದ ಹೊರಗೆ ತರಬೇಕಾದ್ದು ಅನಿವಾರ್ಯವಾಗಿತ್ತು.
ಅಷ್ಟೊತ್ತಿಗಾಗಲೇ ಭಗವದ್ಗೀತೆಯ ಮೂಲಕ ಅರ್ಜುನನಲ್ಲಿ ಆತ್ಮಸ್ಥೈರ್ಯ ತುಂಬಿದ್ದ ಶ್ರೀಕೃಷ್ಣನಿಗೆ ಮತ್ತೊಂದು ಧರ್ಮೋಪದೇಶ ದೊಡ್ಡ ವಿಚಾರವೇ ಆಗಿರಲಿಲ್ಲ. ಆದರೆ ಈ ಬಾರಿ ಉಪದೇಶದ ಅವಕಾಶವನ್ನು ಭೀಷ್ಮರಿಗೆ ಕೊಡಲು ದೇವರು ಸಂಕಲ್ಪ ಮಾಡಿದ. ಧರ್ಮರಾಯನನ್ನು ಭೀಷ್ಮರ ಎದುರು ನಿಲ್ಲಿಸಿ, “ನೀವು ಮಹಾ ಮೇಧಾವಿ, ಅನುಭವಿ. ನಿಮ್ಮ ಅನುಭವ ವ್ಯರ್ಥವಾಗಬಾರದು. ಉಪದೇಶ ಮಾಡಿ” ಎಂದು ಆಜ್ಞೆ ಮಾಡಿದ. ಭೀಷ್ಮರು, “ನನಗೆ ಶಕ್ತಿಯಿಲ್ಲ ಪರಮಾತ್ಮ” ಎಂದು ಬೇಡಿಕೊಂಡಾಗ “ನೀವು ಸಂಕಲ್ಪ ಮಾಡಿ, ನಾನು ನಾಲಿಗೆಯಲ್ಲಿ ನಿಂತು ನುಡಿಸುತ್ತೇನೆ” ಎಂಬ ಅಭಯ ಕೃಷ್ಣನ ಕಡೆಯಿಂದ ಬಂತು. ಮಹಾಭಾರತದ ಆದಿಯಲ್ಲಿ ಕಾಣಿಸಿಕೊಳ್ಳುವ ಪಾತ್ರ ಭೀಷ್ಮರದು. ಅದು ಬದುಕಿನ ನೋವು-ನಲಿವುಗಳನ್ನು ಕಂಡುಂಡು ಮಾಗಿದ ಜೀವವೂ ಹೌದು. ಇಂಥ ಪಾತ್ರವು ಕೊನೆಯ ಕ್ಷಣಗಳನ್ನು ಎಣಿಸುತ್ತಾ ಮಲಗಿದ್ದಾಗ ಮಾಡುವ ಉಪದೇಶದ ಭಾಗವಾಗಿ ಹೊಮ್ಮಿದ್ದು ವಿಷ್ಣುಸಹಸ್ರನಾಮ.
ಈ ಸಂದರ್ಭವನ್ನು ಸಮರ್ಪಕ ರೀತಿಯಲ್ಲಿ ವಿಚಾರ ಮಾಡಿದರೆ ಇದು ಪರಮಾತ್ಮನ ನುಡಿ. ಹೀಗಾಗಿಯೇ ವಿಷ್ಣುಸಹಸ್ರನಾಮಕ್ಕೆ ಅಷ್ಟು ಶಕ್ತಿ, ಅಷ್ಟೊಂದು ಪ್ರಾಮುಖ್ಯತೆ. ಒಟ್ಟು ನೂರಾ ಇಪ್ಪತ್ತು ಶ್ಲೋಕಗಳ ಮೂಲಕ ಭೀಷ್ಮಾಚಾರ್ಯರು ಭಗವಂತನ ಸಾವಿರ ರೂಪಗಳನ್ನು ಚಿಂತಿಸಿದ್ದಾರೆ. ಪುರುಷಸೂಕ್ತ, ರುದ್ರಪ್ರಶ್ನ, ನಾರಾಯಣಸೂಕ್ತ, ಗಾಯತ್ರಿ ಮಂತ್ರ, ಅಷ್ಟಾಕ್ಷರ ಮಂತ್ರಗಳ ಅರ್ಥಗಳನ್ನು ಹುಡುಕಿ ಹೋದರೆ ಅವು ಕೊನೆಗೆ ವಿಷ್ಣುಸಹಸ್ರನಾಮದೆಡೆಗೇ ನಮ್ಮನ್ನು ಕರೆತರುತ್ತವೆ.
ನಾಮಪದಗಳು ಮತ್ತು ಗುಣವಾಚಕಗಳು
ವಿಷ್ಣುಸಹಸ್ರನಾಮದ ಪ್ರಾಮುಖ್ಯತೆಯನ್ನು ಹೆಚ್ಚಿಸುವ ಮತ್ತೊಂದು ಪ್ರಸ್ತಾವವೂ ಫಲಶ್ರುತಿಯ ನಂತರ ಅದೇ ಶ್ಲೋಕಗುಚ್ಛದಲ್ಲಿ ಬರುತ್ತದೆ. ಜಗತ್ತಿನ ತಂದೆ-ತಾಯಿರಾದ ಈಶ್ವರ-ಪಾರ್ವತಿಯರು ಒಮ್ಮೆ ಕೈಲಾಸದಲ್ಲಿ ಹೀಗೆಯೇ ಮಾತನಾಡುತ್ತಾ ಕುಳಿತಾಗ, ಪಾರ್ವತಿಯು ಪರಮೇಶ್ವರನನ್ನು, “ಕೇನೋಪಾಯೇನ ಲಘುನಾ ವಿಷ್ಣೋರ್ನಾಮಸಹಸ್ರಕಂ । ಪಠ್ಯತೇ ಪಂಡಿತೈರ್ನಿತ್ಯಂ ಶ್ರೋತುಮಿಚ್ಛಾಮ್ಯಹಂ ಪ್ರಭೋ” (ವಿಷ್ಣುಸಹಸ್ರನಾಮವನ್ನು ಸುಲಭವಾಗಿ ಪಠಿಸಲು ಪಂಡಿತರು ಕಂಡುಕೊಂಡಿರುವ ಮಾರ್ಗ ಯಾವುದು ಪ್ರಭು) ಎಂದು ಕೇಳುತ್ತಾಳೆ. ಆಗ ಈಶ್ವರನು, “ಶ್ರೀರಾಮ ರಾಮ ರಾಮೇತಿ ರಮೇ ರಾಮೇ ಮನೋರಮೇ । ಸಹಸ್ರನಾಮ ತತ್ತುಲ್ಯಂ ರಾಮನಾಮ ವರಾನನೇ” (ಶ್ರೀರಾಮ ನಾಮಕ್ಕೆ ಸಹಸ್ರನಾಮದ ತೂಕ ಇದೆ) ಎಂದು ಉತ್ತರಿಸುತ್ತಾನೆ.
ಈ ಪ್ರಸಂಗವನ್ನು ತುಸು ವಿಶ್ಲೇಷಿಸೋಣ. ಶ್ರೀರಾಮ ನಾಮಕ್ಕೆ ಅಷ್ಟು ಪ್ರಾಮುಖ್ಯತೆಯಿದೆ ಎಂದು ಈಶ್ವರ ಹೇಳಿದ ಎನ್ನುವುದು ಒಂದು ಅರ್ಥವಾದರೆ, ವಿಷ್ಣುಸಹಸ್ರನಾಮದಲ್ಲಿ ಪ್ರಸ್ತಾಪವಾಗುವ ಪ್ರತಿ ಪದಕ್ಕೂ ಇರುವ ಪ್ರಾಮುಖ್ಯತೆ ಅಷ್ಟು ಮಹತ್ವದ್ದು ಎಂದು ಮತ್ತೊಂದು ರೀತಿಯಲ್ಲಿಯೂ ವ್ಯಾಖ್ಯಾನಿಸಬಹುದು. ಏಕೆಂದರೆ ತತ್ವಶಾಸ್ತ್ರದ ಒಂದು ಸಿದ್ಧಾಂತದ ಪ್ರಕಾರದ (ದ್ವೈತ) ವಿಷ್ಣುವಿನ ಅವತಾರಗಳಿಗೆ ಭೇದವಿಲ್ಲ.
ವಿಷ್ಣುಸಹಸ್ರನಾಮದಲ್ಲಿ ಬರುವ ಸಾವಿರ ನಾಮಗಳು ಭಗವಂತನ ಗುಣವಾಚಕ ನಾಮಗಳಾಗಿವೆ. ಉಳಿದ ಹೆಸರುಗಳಂತೆ ಕೇವಲ ಸಂಬೋಧನೆಗೆ ಬಳಕೆಯಾಗುವ ನಾಮಪದಗಳಲ್ಲ ಅವು. ಇಲ್ಲಿ ಬರುವ ಭಗವಂತನ ಪ್ರತಿಯೊಂದು ನಾಮಕ್ಕೂ ನೂರು ಅರ್ಥಗಳಿವೆ ಎಂಬ ಮಾತು ಪ್ರಚಲಿತದಲ್ಲಿದೆ. ಹಲವು ಹೆಸರುಗಳು ಒಂದಕ್ಕಿಂತ ಹೆಚ್ಚು ಸಲ ಪುನರಾವರ್ತನೆಗೊಂಡಿವೆ. ಪ್ರತಿ ಬಾರಿ ಪುನರಾವರ್ತನೆಗೊಂಡಿರುವ ಒಂದೇ ಹೆಸರಿನ ಪದಕ್ಕೂ ಪ್ರತ್ಯೇಕವಾಗಿ ನೂರು ಅರ್ಥಗಳಿವೆ ಎಂದು ವಿಶ್ಲೇಷಿಸುತ್ತಾರೆ ವಿದ್ವಾಂಸರಾದ ದಿವಂಗತ ಬನ್ನಂಜೆ ಗೋವಿಂದಾಚಾರ್ಯರು. “ದೇವರ ಹೆಸರಲ್ಲದ, ದೇವರನ್ನು ವರ್ಣಿಸದ ಪದ ಯಾವುದೇ ಭಾಷೆಯಲ್ಲಿ ಇಲ್ಲ. ಭಾಷೆಯ ಮಾತೇಕೆ, ಒಂದು ಶಬ್ದವೂ ಇಲ್ಲ. ಮೌನವೂ ದೇವರನ್ನೇ ವರ್ಣಿಸುತ್ತದೆ” ಎಂದು ಅವರು ತಮ್ಮ ಉಪನ್ಯಾಸವೊಂದರಲ್ಲಿ ವಿವರಿಸಿದ್ದಾರೆ.
ಎಲ್ಲವೂ ಶುಭ, ಸದಾ ಒಳಿತು
ವಿಷ್ಣುಸಹಸ್ರನಾಮದ ಎಲ್ಲ ಶ್ಲೋಕಗಳಿಗೂ ವಿಶಿಷ್ಟ ಅರ್ಥಗಳಿವೆ. ಆದರೆ ಅಶುಭದ ಬಗ್ಗೆ ಪ್ರಸ್ತಾಪಿಸುವ “ನ ವಾಸುದೇವ ಭಕ್ತಾನಾಂ ಅಶುಭಂ ವಿದ್ಯತೇ ಕ್ವಚಿತ್” ಎನ್ನುವ ಶ್ಲೋಕವು ಹಲವು ಕಾರಣಗಳಿಂದ ಹೆಚ್ಚು ಮುಖ್ಯ ಎನಿಸುತ್ತದೆ. ಅಧ್ಯಾತ್ಮ ಪ್ರಪಂಚದಲ್ಲಿ ಅಶುಭ ಎನ್ನುವುದು ಇಲ್ಲವೇ ಇಲ್ಲ ಎನ್ನುವುದು ಸಾರ್ವಕಾಲಿಕ ಸತ್ಯ. ಆದರೆ ಅದನ್ನು ವಿಷ್ಣುಸಹಸ್ರನಾಮವು ಲೌಕಿಕಕ್ಕೆ ಅನ್ವಯಿಸಿ ವಿವರಿಸಿರುವ ರೀತಿ ಮಾತ್ರ ಅದ್ಭುತ ಎನ್ನುವಂತೆ ಇದೆ. ಭಗವಂತನ ಭಕ್ತರಿಗೆ ‘ಅಶುಭ’ ಎನ್ನುವುದು ಎಂದಿಗೂ ಇರುವುದೇ ಇಲ್ಲ ಎಂದು ಶ್ಲೋಕದ ಮೊದಲ ಪಾದದಲ್ಲಿ ಘೋಷಿಸಿದರೆ, ಎರಡನೇ ಪಾದದಲ್ಲಿ ಲೌಕಿಕ ಜಗತ್ತು ಅಶುಭ ಎಂದು ಭಾವಿಸುವ ಕೆಲ ವಿಚಾರಗಳನ್ನು ಪ್ರಸ್ತಾಪಿಸುತ್ತಾರೆ. ಹುಟ್ಟು-ಸಾವು, ಮುಪ್ಪು-ರೋಗ ಮತ್ತು ಭಯ ಎಂದಿಗೂ ವಾಸುದೇವನ ಭಕ್ತರನ್ನು ಬಾಧಿಸುವುದಿಲ್ಲ ಎಂದು ಭೀಷ್ಮರು ಭರವಸೆ ಕೊಡುತ್ತಾರೆ.
ಶುಭ-ಅಶುಭಗಳ ಬಗ್ಗೆ ಭಾರತೀಯ ಅಧ್ಯಾತ್ಮ ಪರಂಪರೆ ಸಾಕಷ್ಟು ಚಿಂತನೆ ನಡೆಸಿದೆ. ಇದರ ಸಂಗ್ರಹರೂಪ ಎನ್ನುವಂತೆ ಪುರಂದರದಾಸರು ‘ಆದದ್ದೆಲ್ಲಾ ಒಳಿತೇ ಆಯಿತು’ ಎಂದು ಮನಮುಟ್ಟುವಂತೆ ಕೀರ್ತನೆಯೊಂದನ್ನು ಮಾಡಿದ್ದಾರೆ. ‘ಕೆಟ್ಟದಾಗೋದೆಲ್ಲಾ ಒಳ್ಳೇದಕ್ಕೆ’ ಎನ್ನುವ ಗಾದೆ ಮಾತೊಂದು ಸಹ ಕನ್ನಡದಲ್ಲಿ ಪ್ರಚಲಿತದಲ್ಲಿದೆ. ಕಿರಿಯರು ದೈಹಿಕ ಅಥವಾ ಮಾನಸಿಕ ನೋವಿನಿಂದ ಕಂಗೆಟ್ಟಿರುವಾಗ ಸಮಾಧಾನ ಮಾಡಲು ಹಿರಿಯರು ಈ ಗಾದೆ ಹೇಳಿ, ‘ಮುಂದೆ ನಿನಗೆ ಏನೋ ಒಳ್ಳೆಯದು ಆಗುವುದು ಇದೆ. ಅದಕ್ಕೆ ಈಗ ಹೀಗಾಗಿದೆ. ಕೆಟ್ಟದ್ದು ತಾತ್ಕಾಲಿಕ, ಅದರ ಹಿಂದೆ ಏನೋ ಒಂದು ಕಾರಣವಿರುತ್ತೆ. ಅದು ನಮಗೆ ತಿಳಿಯಲೇ ಬೇಕು ಎಂದೆನಿಲ್ಲ. ಮುಂದೆ ಎಲ್ಲವೂ ಒಳ್ಳೆಯದೇ ಆಗುತ್ತದೆ’ ಎಂದು ಸಮಾಧಾನ ಹೇಳುವುದು ವಾಡಿಕೆ.
ಈ ಮಾತು ಎಷ್ಟು ನಿಜ ಅಲ್ಲವೇ? ಎಸ್ಎಸ್ಎಲ್ಸಿ ಫೇಲ್ ಆಯಿತು ಎಂದು ಕಂಗೆಟ್ಟ ಹುಡುಗನೊಬ್ಬ ಸೋಲನ್ನೇ ಸವಾಲಾಗಿ ಸ್ವೀಕರಿಸಿ, ಮುಂದಿನ ಪ್ರಯತ್ನದಲ್ಲಿ ಫಸ್ಟ್ ಕ್ಲಾಸ್ನಲ್ಲಿ ಪಾಸ್ ಆದ ಉದಾಹರಣೆಗಳು ಅದೆಷ್ಟೋ ಇವೆ. ಉದ್ಯಮದ ವಿಚಾರದಲ್ಲಿಯೂ ಅಷ್ಟೇ. ಒಂದು ಶುರು ಮಾಡಿ, ಸಾಕಷ್ಟು ಕಷ್ಟನಷ್ಟಗಳೊಂದಿಗೆ ಅನುಭವ ಸಂಪಾದಿಸಿ, ಆ ಅನುಭವವನ್ನೇ ಆಧಾರವಾಗಿಸಿಕೊಂಡು ಮತ್ತೊಂದಕ್ಕೆ ಹೊರಳಿ ಬೆಳೆದವರು ಸಾಕಷ್ಟು ಜನರು.
ಇದು ಲೌಕಿಕದ ಕಥೆ. ಇನ್ನು ಅಧ್ಯಾತ್ಮದ ಜಗತ್ತಿನಲ್ಲಿ ಅಶುಭ ಎನ್ನುವ ಪದವೇ ಅಪ್ರಸ್ತುತ. ‘ಇಂದಿನ ದಿನವೇ ಶುಭ ದಿನವು, ಇಂದಿನ ಕಾಲ ಶುಭ ಕಾಲ, ಇಂದಿನ ಗಳಿಗೆ ಶುಭ ಗಳಿಗೆ‘ ಹೀಗೆ ಎಲ್ಲ ಕಾಲವೂ ಶುಭವೇ, ಆಗುವುದೆಲ್ಲವೂ ಒಳ್ಳೆಯದೇ. ಏಕೆಂದರೆ ಜಗತ್ತಿನ ಎಲ್ಲ ಆಗುಹೋಗುಗಳಿಗೆ ಕಾರಣವೊಂದು ಇರುತ್ತದೆ. ಎಷ್ಟೋ ಸಲ ಅದು ನಮಗೆ ತಿಳಿಯುವುದಿಲ್ಲ. ಆದರೆ ಕೊನೆಗೆ ಎಲ್ಲವೂ ಶುಭದಲ್ಲಿಯೇ ಪರ್ಯಾವಸನಗೊಳ್ಳುತ್ತದೆ. ಅದನ್ನು ಅರ್ಥೈನಿಸಿಕೊಳ್ಳುವ ಸಾಮರ್ಥ್ಯ, ವಿಧಿಯಾಟ ಜೀರ್ಣಿಸಿಕೊಳ್ಳುವ ತಾಕತ್ತು ನಮಗೆ ಬೇಕಷ್ಟೇ. ವಿಷ್ಣುಸಹಸ್ರನಾಮದಂಥ ಶ್ಲೋಕಗಳನ್ನು ಪಠಿಸುವುದರಿಂದ ದೇವರು ನಮ್ಮ ಮನಸ್ಸಿಗೆ ಅಂಥ ಸಾಮರ್ಥ್ಯ ಕೊಡುತ್ತಾನೆ.
ಜಗತ್ತಿನಲ್ಲಿ ಉಳಿದವರೆಲ್ಲರಿಗಿಂತಲೂ ನಮ್ಮನ್ನು ಅಪಾರವಾಗಿ ಪ್ರೀತಿಸುವವನು ದೇವರು. ದೇವರು ಎಂದರೆ ಎಲ್ಲವನ್ನೂ ಬಲ್ಲ, ಎಲ್ಲವನ್ನೂ ನಿಯಂತ್ರಿಸುವ ದೊಡ್ಡ ಶಕ್ತಿ. ಅಂಥ ಪರಮಾತ್ಮನು ಕೆಲವೊಮ್ಮೆ ಅನಿವಾರ್ಯವಾಗಿ ನಮಗೆ ಪಾಠ ಕಲಿಸಲೇಬೇಕಾಗುತ್ತದೆ. ಅದು ಅಪ್ಪ-ಅಮ್ಮ ಮಕ್ಕಳನ್ನು ತಿದ್ದಿದಂತೆ. ಎಷ್ಟೋ ಸಲ ನಾವು ಅಂದುಕೊಂಡಿದ್ದು ಆಗುವುದಿಲ್ಲ. ಬಹುತೇಕ ಸಂದರ್ಭಗಳಲ್ಲಿ ಅಂಥವನ್ನು ನಾವು ಅಶುಭ ಅಥವಾ ಹಿಂಸೆ ಎಂದುಕೊಳ್ಳುತ್ತೇವೆ. ಆದರೆ ಮುಂದೆಂದೋ ಏನೋ ಒಳ್ಳೆಯದು ಆಗುವುದಕ್ಕೆ ಇದು ಬುನಾದಿ, ಈ ಅನುಭವದಿಂದ ಕಲಿತ ಪಾಠ ಮುಂದೆ ನಮಗೆ ಉಪಯೋಗಕ್ಕೆ ಬರುತ್ತದೆ ಎನ್ನುವ ಚಿಂತನೆ ರೂಢಿಸಿಕೊಂಡರೆ ಎಂಥ ಪರಿಸ್ಥಿತಿಯಲ್ಲಿಯೂ ಮನಸ್ಸು ಅಶಾಂತಿಗೆ ಜಾರುವುದಿಲ್ಲ.
‘ನ ವಾಸುದೇವ ಭಕ್ತಾನಾಂ ಅಶುಭಂ ವಿದ್ಯತೇ ಕ್ವಚಿತ್’ ಎನ್ನುವ ಮೂಲಕ ವಿಷ್ಣುಸಹಸ್ರನಾಮದ ಫಲಶ್ರುತಿಯೂ ನಮ್ಮಲ್ಲಿ ಇದೇ ಭರವಸೆಯನ್ನು ಬಿತ್ತಲು ಯತ್ನಿಸುತ್ತಿದೆ. ನಮ್ಮ-ನಿಮ್ಮ ಮನೆಗಳಲ್ಲಿಯೂ ಇರುವ ಭೀಷ್ಮಾಚಾರ್ಯರಂಥ ಹಿರಿಯರ ಮಾತು ಆಲಿಸಿದರೆ, ಅನುಸರಿಸಿದರೆ ಎಲ್ಲಕ್ಕೂ ಶುಭವೇ ಆಗುತ್ತದೆ. ಕೇಳುವ ವ್ಯವಧಾನ, ಅನುಸರಿಸುವ ಇಚ್ಛಾಶಕ್ತಿಯನ್ನು ರೂಢಿಸಿಕೊಳ್ಳೋಣ.
(ಈ ಬರಹದ ನಿರೂಪಣೆ ನನ್ನದಾದರೂ ಚಿಂತನೆಗೆ ಹಲವು ಕೃತಿಗಳು ಹಾಗೂ ಉಪನ್ಯಾಸಗಳ ಕೊಡುಗೆ ಇದೆ. ಭಾರತ ದರ್ಶನ ಪ್ರಕಾಶನದ ಮಹಾಭಾರತ ಸಂಪುಟ, ಬನ್ನಂಜೆ ಗೋವಿಂದಾಚಾರ್ಯರ ವಿಷ್ಣುಸಹಸ್ರನಾಮ ಉಪನ್ಯಾಸ, ಉತ್ತರಾದಿಮಠದ ಶ್ರೀ ಸತ್ಯಾತ್ಮ ತೀರ್ಥರ ಉಮಾ-ಮಹೇಶ್ವರ ಸಂವಾದ ಉಪನ್ಯಾಸ, ಸಾಮವೇದಂ ಷಣ್ಮುಖ ಶರ್ಮಾ ಅವರ ರುದ್ರ ಭಾಷ್ಯಮ್ ಉಪನ್ಯಾಸಗಳು ಅದರಲ್ಲಿ ಮುಖ್ಯವಾದವು)
Vishnu Sahasranama, Vishnu Sahasranama Meaning, Vishnu Sahasranama Meaning in Kannada, Sri Vishnu Sahasranama, Hindu Belief, Spirituality, Mahabharata, Sri Krishna, Bheeshmacharya, Dharmaraya, Vedavyasa, Lord Krishna, Lord Vishnu, Dvaita, Vaishnava, Sri Vaishnava, ವಿಷ್ಣು ಸಹಸ್ರನಾಮ, ವಿಷ್ಣುಸಹಸ್ರನಾಮ, ವೇದವ್ಯಾಸ, ಭೀಷ್ಮಾಚಾರ್ಯ, ಶ್ರೀಕೃಷ್ಣ, ಭಗವಾನ್ ಶ್ರೀಕೃಷ್ಣ, ಈಶ್ವರ, ಪಾರ್ವತಿ, ಪರಮೇಶ್ವರ, ಹಿಂದೂ ನಂಬಿಕೆಗಳು, ಹಿಂದೂ ಧರ್ಮ, ಮಹಾಭಾರತ