2026ನೇ ಇಸವಿಯ ವರ್ಷಭವಿಷ್ಯದಲ್ಲಿ ಕರ್ಕಾಟಕ ರಾಶಿ ಫಲಾಫಲವನ್ನು ಈ ಲೇಖನದಲ್ಲಿ ತಿಳಿಸಲಾಗುವುದು. ಈ ಸರಣಿಯಲ್ಲಿ ಮೇಷದಿಂದ ಮೀನದ ತನಕ ಹನ್ನೆರಡು ರಾಶಿಗಳ ಜ್ಯೋತಿಷ್ಯ ರೀತಿಯಾದ ವರ್ಷಭವಿಷ್ಯವನ್ನು ನೀಡಲಾಗುತ್ತಿದೆ. ಇದಕ್ಕಾಗಿ ಗ್ರಹಗಳ ಗೋಚಾರ ಸ್ಥಿತಿಯನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ. ಅದರಲ್ಲಿಯೂ ದೀರ್ಘಕಾಲ ಒಂದೇ ರಾಶಿಯಲ್ಲಿ ಇರುವಂಥ ಗ್ರಹಗಳಾದ ಶನಿ, ರಾಹು- ಕೇತು ಹಾಗೂ ಗುರು ಗ್ರಹದ ಸಂಚಾರವನ್ನು ಆಧರಿಸಿ, ಇಲ್ಲಿನ ಫಲಾಫಲವನ್ನು ತಿಳಿಸಲಾಗಿದೆ. ಇಲ್ಲಿ ನೀಡಲಾಗಿರುವ ವರ್ಷಫಲವು 2026ನೇ ಇಸವಿಯ ಜನವರಿ 1ನೇ ತಾರೀಕಿನಿಂದ ಡಿಸೆಂಬರ್ 31ನೇ ತಾರೀಕಿನ ತನಕ ಅನ್ವಯ ಆಗುತ್ತದೆ. ನೆನಪಿನಲ್ಲಿಡಿ, ಇದು ಯುಗಾದಿ ಸಂವತ್ಸರ ಫಲ ಅಥವಾ ಯುಗಾದಿ ಭವಿಷ್ಯ ಅಲ್ಲ, ಇದು ಹೆಚ್ಚು ಜನಪ್ರಿಯ ಆಗಿರುವ ಜನವರಿಯಿಂದ ಡಿಸೆಂಬರ್ ತನಕದ ಕ್ಯಾಲೆಂಡರ್ ವರ್ಷ ಭವಿಷ್ಯ.
ಗ್ರಹ ಸಂಚಾರದ ವಿವರ ಹೀಗಿದೆ:
ಶನಿ ಗ್ರಹ ಇಡೀ ವರ್ಷ ಮೀನ ರಾಶಿಯಲ್ಲಿ ಸಂಚರಿಸುತ್ತದೆ.
ರಾಹು- ಕೇತು: ಜನವರಿಯಿಂದ ಡಿಸೆಂಬರ್ 5ನೇ ತಾರೀಕಿನ ತನಕ ರಾಹು ಕುಂಭ ರಾಶಿಯಲ್ಲಿ, ಕೇತು ಸಿಂಹ ರಾಶಿಯಲ್ಲಿ ಇರುತ್ತದೆ. ಆ ನಂತರ ವರ್ಷಾಂತ್ಯದ ತನಕ ರಾಹು ಮಕರ ರಾಶಿಯಲ್ಲೂ ಕೇತು ಕರ್ಕಾಟಕ ರಾಶಿಯಲ್ಲಿ ಇರುತ್ತದೆ.
ಗುರು: ಜನವರಿಯಿಂದ ಜೂನ್ ಒಂದನೇ ತಾರೀಕಿನ ತನಕ ಗುರು ಗ್ರಹ ಮಿಥುನ ರಾಶಿಯಲ್ಲಿ ಸಂಚರಿಸುತ್ತದೆ. ಆ ನಂತರ ಅಕ್ಟೋಬರ್ 31ನೇ ತಾರೀಕಿನ ತನಕ ಕರ್ಕಾಟಕ ರಾಶಿಯಲ್ಲಿ ಬೃಹಸ್ಪತಿ ಸಂಚರಿಸುತ್ತದೆ, ಆ ಮೇಲೆ ವರ್ಷಾಂತ್ಯದ ತನಕ ಸಿಂಹ ರಾಶಿಯಲ್ಲಿ ಗುರು ಸಂಚಾರ ಇರುತ್ತದೆ.
ಮಿಥುನ- ಪುನರ್ವಸು ನಕ್ಷತ್ರದ ನಾಲ್ಕನೇ ಪಾದ, ಪುಷ್ಯ ನಕ್ಷತ್ರ ನಾಲ್ಕೂ ಪಾದ ಹಾಗೂ ಆಶ್ಲೇಷಾ ನಕ್ಷತ್ರದ ನಾಲ್ಕೂ ಪಾದ ಸೇರಿ ಕರ್ಕಾಟಕ ರಾಶಿ ಆಗುತ್ತದೆ. ಪುನರ್ವಸು ನಕ್ಷತ್ರಕ್ಕೆ ಗುರು ಅಧಿಪತಿ, ಪುಷ್ಯ ನಕ್ಷತ್ರಕ್ಕೆ ಶನಿ ಹಾಗೂ ಆಶ್ಲೇಷಾ ನಕ್ಷತ್ರಕ್ಕೆ ಬುಧ ಅಧಿಪತಿ ಆಗುತ್ತಾನೆ. ಇನ್ನು ಕರ್ಕಾಟಕ ರಾಶ್ಯಾಧಿಪತಿ ಚಂದ್ರ ಆಗುತ್ತದೆ. ಚರ ರಾಶಿ, ಜಲ ತತ್ವದ ಕಾಲಪುರುಷನ ಚಕ್ರದ ನಾಲ್ಕನೇ ರಾಶಿ ಕರ್ಕಾಟಕ.
ಡಯಾಬಿಟೀಸ್ ನಿಯಂತ್ರಣಕ್ಕೆ ನಂಬಿಕೆಯ ದೇಗುಲ: ಸಾವಿರ ವರ್ಷಗಳ ಇತಿಹಾಸದ ಕರುಂಬೇಶ್ವರರ್ ದೇವಾಲಯ
ಕರ್ಕಾಟಕ ರಾಶಿ ವರ್ಷ ಭವಿಷ್ಯ ಹೀಗಿದೆ:
ಶನಿ ಗೋಚಾರ ಫಲ: ಜನವರಿಯಿಂದ ಡಿಸೆಂಬರ್ ತನಕ ಶನೈಶ್ಚರ ನಿಮ್ಮ ರಾಶಿಗೆ ಒಂಬತ್ತನೇ ಮನೆಯಲ್ಲಿ ಸಂಚರಿಸುತ್ತದೆ. ಕರ್ಕಾಟಕ ರಾಶಿ ಕಳತ್ರ (ಏಳನೇ ಸ್ಥಾನ) ಹಾಗೂ ಆಯುಷ್ಯ ಸ್ಥಾನ (ಎಂಟನೇ ಸ್ಥಾನ) ಅಧಿಪತಿ ಆಗುವಂಥ ಶನಿ ಗ್ರಹ ಒಂಬತ್ತರಲ್ಲಿ ಸಂಚರಿಸುವುದರಿಂದ ವಿವಾಹ ವಯಸ್ಕರು ಮದುವೆಗಾಗಿ ಮಾಡುವ ಪ್ರಯತ್ನಗಳಲ್ಲಿ ವೃಥಾ ಅಲೆದಾಟ ಇರುತ್ತದೆ. ಕುಟುಂಬ ಸದಸ್ಯರ ಬೆಂಬಲ ಸರಿಯಾಗಿ ದೊರೆಯುವುದಿಲ್ಲ. ಪಾರ್ಟನರ್ ಷಿಪ್ ವ್ಯವಹಾರದಲ್ಲಿ ಶ್ರಮ ಹೆಚ್ಚು, ಫಲಿತ ಕಡಿಮೆ ಎಂಬ ಸ್ಥಿತಿ ಇರುತ್ತದೆ. ಆರೋಗ್ಯಕ್ಕಾಗಿ ನೀವು ಅನುಸರಿಸುವ ವೈದ್ಯಕೀಯ ಪದ್ಧತಿ ಬಗ್ಗೆ ಗಮನ ನೀಡಿ. ಪದೇಪದೇ ಬದಲಾಯಿಸಬೇಡಿ. ಜಠರ, ಕರುಳು, ಕಾಲಿನ ಮೀನಖಂಡ ಈ ಅಂಗಗಳಿಗೆ ಸಂಬಂಧಿಸಿದ ಅನಾರೋಗ್ಯ ಕಾರಣಗಳಿಗೆ ಅಂತಲೇ ಪದೇಪದೇ ಆಸ್ಪತ್ರೆ ಅಲೆದಾಟ ಇರುತ್ತದೆ. ತಂದೆಯ ಜತೆಗೆ ಜಗಳ- ಮನಸ್ತಾಪದಿಂದ ನಾನಾ ರೀತಿಯಲ್ಲಿ ನಷ್ಟವನ್ನು ಅನುಭವಿಸುವಂತೆ ಆಗುತ್ತದೆ. ಬಡ್ಡಿಗೆ ಹಣ ಕೊಡುವಂಥವರಿಗೆ ಅನಿರೀಕ್ಷಿತವಾದ ನಷ್ಟವಾಗುತ್ತದೆ.
ರಾಹು- ಕೇತು ಗೋಚಾರ ಫಲ: ಬಹುತೇಕ ಇಡೀ ವರ್ಷ ರಾಹು ಎಂಟನೇ ಮನೆಯಾದ ಕುಂಭ ರಾಶಿಯಲ್ಲಿ ಸಂಚರಿಸುವಾಗ ಚರ್ಮಕ್ಕೆ ಸಂಬಂಧಿಸಿದ ವ್ಯಾಧಿ ಕಾಣಿಸಿಕೊಳ್ಳುತ್ತದೆ. ಈಗಾಗಲೇ ಆ ಸಮಸ್ಯೆ ಇದೆ ಎಂದಾದಲ್ಲಿ ಉಲ್ಬಣ ಆಗುತ್ತದೆ. ಹೂಡಿಕೆ ಉದ್ದೇಶಕ್ಕೆ ಸಾಲವನ್ನು ತೆಗೆದುಕೊಳ್ಳಬೇಡಿ. ಷೇರು ಮಾರ್ಕೆಟ್, ಕಮಾಡಿಟಿ ಮಾರ್ಕೆಟ್ ಅಥವಾ ಬೇರೆ ಯಾವುದೇ ಸಟ್ಟಾ ವ್ಯವಹಾರಕ್ಕೆ ಹಣ ಹಾಕುವುದಕ್ಕೆ ಹೋಗಬೇಡಿ. ಅಷ್ಟಮದಲ್ಲಿ ಶನಿ ಗ್ರಹ ಇರುವಾಗ ನೀಡುವ ಫಲ ಎಷ್ಟು ಕ್ರೂರವಾಗಿರುತ್ತದೋ ಅದೇ ರೀತಿಯಾಗಿ ರಾಹು ಎಂಟನೇ ಮನೆಯಲ್ಲಿ ಫಲ ನೀಡುತ್ತದೆ. ಇತರರ ಸಾಲಗಳಿಗೆ ಜಾಮೀನು ನಿಲ್ಲಬೇಡಿ. ವಾಹನ ಚಾಲನೆಯಲ್ಲಿ ಬಹಳ ಜಾಗ್ರತೆಯಿಂದ ಇರಬೇಕು. ಎರಡನೇ ಮನೆಯಲ್ಲಿ ಕೇತು ಸಂಚರಿಸಲಿದ್ದು, ಸಾಂಸಾರಿಕವಾಗಿ ಅನುಮಾನ- ಸಂದೇಹಗಳು ನೆಮ್ಮದಿಯನ್ನು ಹಾಳು ಮಾಡುತ್ತವೆ. ವಿವಾಹದ ಆಚೆಗೆ ಯಾವುದೇ ಸೆಳೆತಕ್ಕೆ ಬೀಳಬೇಡಿ. ಹಣಕಾಸಿನ ಹರಿವು ನಿರೀಕ್ಷಿತ ಮಟ್ಟದಲ್ಲಿ ಇರುವುದಿಲ್ಲ. ಕೆಲಸ- ಕಾರ್ಯಗಳಲ್ಲಿನ ನಿರಾಸಕ್ತಿ ಆದಾಯ ಪ್ರಮಾಣ ಕಡಿಮೆ ಆಗುವುದಕ್ಕೆ ಕಾರಣ ಆಗಲಿದೆ.
ಗುರು ಗೋಚಾರ ಫಲ: ಜನವರಿಯಿಂದ ಜೂನ್ ತಿಂಗಳ ತನಕ ವ್ಯಯಸ್ಥಾನವಾದ ಹನ್ನೆರಡನೇ ಮನೆಯಲ್ಲಿ ಗುರು ಗ್ರಹದ ಸಂಚಾರ ಇರುತ್ತದೆ. ಖರ್ಚನ್ನು ಕಡಿಮೆ ಮಾಡಿಕೊಳ್ಳುವುದು ಅಸಾಧ್ಯ ಎಂಬಂತೆ ಆಗುತ್ತದೆ. ಪ್ರತಿಷ್ಠೆಗೆ ಬಿದ್ದು ವಿಲಾಸಿ ವಸ್ತುಗಳ ಖರೀದಿ ಮಾಡಬೇಡಿ. ಇನ್ನು ನಿಮ್ಮದೇ ಆಸ್ತಿಯ ಮಾರಾಟ ಮಾಡಿ, ಹೊಸದಾಗಿ ಇನ್ನೊಂದು ಖರೀದಿಗೆ ಮುಂದಾದಾಗ ಸಹ ನಷ್ಟವನ್ನು ಕಾಣುವಂತೆ ಆಗಲಿದೆ. ಕೋರ್ಟ್- ಕೇಸು, ಪೊಲೀಸ್ ಸ್ಟೇಷನ್ ಇಂಥ ವಿಚಾರಗಳಿಗೆ ಮಾಡುವ ಅಲೆದಾಟ ಸಹ ಹೆಚ್ಚು ಹಣ ಕಳೆಯುತ್ತದೆ. ಸಕ್ಕರೆ ಕಾಯಿಲೆ ಬಗ್ಗೆ ಜಾಗ್ರತೆ ತೆಗೆದುಕೊಳ್ಳಬೇಕು. ಜೂನ್ ನಿಂದಾ ಅಕ್ಟೋಬರ್ ತನಕ ನಿಮ್ಮದೇ ಜನ್ಮ ರಾಶಿಯಲ್ಲಿ ಗುರು ಸಂಚರಿಸುವಾಗ ಕುಟುಂಬ, ಮಕ್ಕಳು, ಆರೋಗ್ಯದ ವಿಚಾರದಲ್ಲಿ ಭಾರೀ ಏರಿಳಿತದ ಅನುಭವ ಆಗುತ್ತದೆ. ಅನಿರೀಕ್ಷಿತ ಬೆಳವಣಿಗೆಗಳು ದುಃಖವನ್ನು ಉಂಟು ಮಾಡುತ್ತವೆ. ಆತ್ಮವಿಶ್ವಾಸ ಕುಗ್ಗುವಂತೆ ಆಗಲಿದೆ. ನವೆಂಬರ್ – ಡಿಸೆಂಬರ್ ತಿಂಗಳಲ್ಲಿ ಎರಡನೇ ಮನೆಯಲ್ಲಿ ಗುರು ಸಂಚಾರದ ವೇಳೆ ಹಣಕಾಸಿನ ಹರಿವು ಸುಧಾರಿಸುತ್ತದೆ. ಮದುವೆ ಪ್ರಯತ್ನಗಳು ಫಲ ನೀಡುತ್ತವೆ. ನಿಮ್ಮ ಮಾತು ಪ್ರಭಾವಿಯಾಗಿ ಇರುತ್ತದೆ. ಕೆಲವು ಸಮಸ್ಯೆಯಿಂದ ಹೊರಬರುವುದಕ್ಕೆ ಆಗ ಮಾರ್ಗೋಪಾಯ ಗೋಚರ ಆಗಲಿದೆ.
ಪರಿಹಾರ: ದುರ್ಗಾದೇವಿ ಹಾಗೂ ಗಣಪತಿ ಆರಾಧನೆಯನ್ನು ಮಾಡಿ, ನವಗ್ರಹ ಧಾನ್ಯವನ್ನು ದಾನ ಮಾಡಿ.
ಲೇಖನ- ಶ್ರೀನಿವಾಸ ಮಠ





