ಈ ವರ್ಷ ಯಾವ ರಾಶಿಯವರು ಯಾವ ದೇವಸ್ಥಾನಕ್ಕೆ (ದೇವಾಲಯ ದರ್ಶನ- ದೇಗುಲ ದರ್ಶನ) ಭೇಟಿ ನೀಡಿ, ಏನು ಸೇವೆ ಮಾಡಿಸಿದಲ್ಲಿ ಅವರಿಗೆ ಜ್ಯೋತಿಷ್ಯ ರೀತಿಯಾಗಿ ಇರುವಂಥ ಗ್ರಹಗಳ ನಕಾರಾತ್ಜಕ ಪ್ರಭಾವ ಕಡಿಮೆ ಆಗುತ್ತದೆ, ಅದೇ ವೇಳೆ ಉತ್ತಮವಾದ ಗ್ರಹದ ಬಲ ಮತ್ತೂ ಹೆಚ್ಚಾಗುತ್ತದೆ ಎಂಬ ಬಗೆಗಿನ ಲೇಖನ ಇದು. ಜ್ಯೋತಿಷಿ ವಿಠ್ಠಲ್ ಭಟ್ ಅವರು ಸವಿಸ್ತಾರವಾಗಿ ಈ ಮಾಹಿತಿಯನ್ನು ನೀಡಿದ್ದಾರೆ. ಅವರ ಸಂದರ್ಶನದಲ್ಲಿ ನೀಡಿದ್ದ ಮಾಹಿತಿಯ ಸಂಪೂರ್ಣ ವಿವರಣೆ ಇದಾಗಿದೆ. ಜ್ಯೋತಿಷ್ಯ ಶಾಸ್ತ್ರಕ್ಕೆ ಅನಾದಿ ಕಾಲದ ಇತಿಹಾಸವಿದೆ. ಮನುಷ್ಯನ ಜೀವನದ ಏರಿಳಿತಗಳು ಅವನ ಜನ್ಮ ರಾಶಿ ಮತ್ತು ಗ್ರಹಗತಿಗಳ ಮೇಲೆ ಅವಲಂಬಿತವಾಗಿರುತ್ತದೆ ಎಂಬುದು ನಂಬಿಕೆ. ಗ್ರಹದೋಷಗಳ ನಿವಾರಣೆಗಾಗಿ ಮತ್ತು ಜೀವನದಲ್ಲಿ ನೆಮ್ಮದಿ, ಸಮೃದ್ಧಿ ಪಡೆಯಲು ಆಯಾ ರಾಶಿಗಳಿಗೆ ಅನುಗುಣವಾಗಿ ನಿರ್ದಿಷ್ಟ ದೇವಸ್ಥಾನಗಳಿಗೆ ಭೇಟಿ ನೀಡುವುದು ಮತ್ತು ವಿಶೇಷ ಸೇವೆಗಳನ್ನು ಮಾಡಿಸುವುದು ಅತ್ಯಂತ ಫಲಪ್ರದ. ಹನ್ನೆರಡು ರಾಶಿಗಳವರು ಸಂದರ್ಶಿಸಬೇಕಾದ ಪುಣ್ಯಕ್ಷೇತ್ರಗಳು ಮತ್ತು ಅಲ್ಲಿ ಮಾಡಿಸಬೇಕಾದ ಸೇವೆಗಳ ವಿವರ ಇಲ್ಲಿದೆ.
1. ಮೇಷ ಮತ್ತು ಮೀನ ರಾಶಿ: ಶನೈಶ್ಚರನ ಅನುಗ್ರಹಕ್ಕಾಗಿ ತಿರುನೆಲ್ಲಾರ್
ಮೇಷ ಮತ್ತು ಮೀನ ರಾಶಿಯವರಿಗೆ ಶನಿ ದೋಷದ ಪ್ರಭಾವವಿದ್ದು, ಜೀವನದಲ್ಲಿ ಅಡೆತಡೆಗಳು ಎದುರಾಗುವುದರಿಂದ ತಮಿಳುನಾಡಿನ ತಿರುನೆಲ್ಲಾರ್ ಅತ್ಯಂತ ಶಕ್ತಿಯುತ ಕ್ಷೇತ್ರವಾಗಿದ್ದು, ಅಲ್ಲಿಯ ದರ್ಶನ ಮಾಡಬೇಕು.
- ಕ್ಷೇತ್ರದ ಮಹಿಮೆ: ಇದು ನವಗ್ರಹ ಕ್ಷೇತ್ರಗಳಲ್ಲಿ ಒಂದಾಗಿದ್ದು, ಶನೈಶ್ಚರನಿಗೆ ಸಮರ್ಪಿತವಾಗಿದೆ. ನಳ ಮಹಾರಾಜನು ಇಲ್ಲಿನ ‘ನಳ ತೀರ್ಥ’ದಲ್ಲಿ ಸ್ನಾನ ಮಾಡಿ ತನ್ನ ಶನಿ ದೋಷದಿಂದ ಮುಕ್ತಿ ಪಡೆದನು ಎಂಬ ಪುರಾಣ ಪ್ರಸಿದ್ಧ ಕಥೆಯಿದೆ.
- ಮಾಡಬೇಕಾದ ಸೇವೆ: ಶನಿವಾರದಂದು ಇಲ್ಲಿನ ಪವಿತ್ರ ನಳ ತೀರ್ಥದಲ್ಲಿ ಸ್ನಾನ ಮಾಡಿ, ಆ ನಂತರ ಶನೈಶ್ಚರ ದರ್ಶನ ಪಡೆಯುವುದು ವಿಶೇಷ. ಎಣ್ಣೆ ಸ್ನಾನ ಮಾಡುವುದು ಇಲ್ಲಿನ ಪ್ರಮುಖ ವಿಧಿ. ಇದು ಮನಸ್ಸಿನ ಆತಂಕವನ್ನು ದೂರ ಮಾಡಿ, ಸ್ಥಿರತೆಯನ್ನು ನೀಡುತ್ತದೆ.

2. ವೃಷಭ ರಾಶಿ: ಶಕ್ತಿ ದೇವತೆಯ ಆರಾಧನೆ – ಕರಿಕಾನ ದುರ್ಗಾ ಪರಮೇಶ್ವರಿ
ವೃಷಭ ರಾಶಿಯವರಿಗೆ ಮಾನಸಿಕ ಶಾಂತಿ ಮತ್ತು ಕೌಟುಂಬಿಕ ಅಭಿವೃದ್ಧಿಗಾಗಿ ಶಕ್ತಿ ದೇವತೆಯ ಆರಾಧನೆ ಅಗತ್ಯ.
- ಕ್ಷೇತ್ರದ ಮಹಿಮೆ: ಹೊನ್ನಾವರ ತಾಲ್ಲೂಕಿನ ಕರಿಕಾನ ದುರ್ಗಾ ಪರಮೇಶ್ವರಿ ದೇವಸ್ಥಾನವು ಅತ್ಯಂತ ಸುಂದರ ಪ್ರಕೃತಿಯ ಮಡಿಲಿನಲ್ಲಿದೆ. ಬೆಟ್ಟದ ಮೇಲಿರುವ ಈ ತಾಯಿ ಭಕ್ತರ ಕಷ್ಟಗಳನ್ನು ನಿವಾರಿಸುವ ಕರುಣಾಮಯಿ.
- ಮಾಡಬೇಕಾದ ಸೇವೆ: ಇಲ್ಲಿ ತಾಯಿಗೆ ತ್ರಿಶತಿ ಕುಂಕುಮಾರ್ಚನೆ ಮಾಡಿಸುವುದು ವಿಶೇಷ ಫಲ ನೀಡುತ್ತದೆ. ಅಷ್ಟೇ ಅಲ್ಲದೆ, ಚಂಡಿಕಾ ಪಾರಾಯಣ ಮಾಡಿಸುವುದರಿಂದ ಶತ್ರು ಬಾಧೆ ನಿವಾರಣೆಯಾಗಿ, ಸಕಲ ಕಾರ್ಯಗಳಲ್ಲಿ ಜಯ ಸಿಗುತ್ತದೆ.
3. ಮಿಥುನ ರಾಶಿ: ಧರ್ಮದ ನೆಲೆವೀಡು ಧರ್ಮಸ್ಥಳ
ಮಿಥುನ ರಾಶಿಯವರು ತಮ್ಮ ಕರ್ಮ ದೋಷಗಳ ನಿವಾರಣೆಗಾಗಿ ಮತ್ತು ಆಯುಷ್ಯದ ವೃದ್ಧಿಗಾಗಿ ಮಂಜುನಾಥ ಸ್ವಾಮಿಯ ಮೊರೆ ಹೋಗಬೇಕು.
- ಕ್ಷೇತ್ರದ ಮಹಿಮೆ: ದಕ್ಷಿಣ ಕನ್ನಡದ ಧರ್ಮಸ್ಥಳವು ಸತ್ಯ ಮತ್ತು ಧರ್ಮದ ಸಂಕೇತ. ಇಲ್ಲಿ ಮಂಜುನಾಥ ಸ್ವಾಮಿಯ ರೂಪದಲ್ಲಿ ಶಿವನು ನೆಲೆಸಿದ್ದಾನೆ.
- ಮಾಡಬೇಕಾದ ಸೇವೆ: ನೇತ್ರಾವತಿ ನದಿಯಲ್ಲಿ ಪುಣ್ಯ ಸ್ನಾನ ಮಾಡಿ, ಆ ನಂತರ ದೇವಸ‌್ಥಾನಕ್ಕೆ ಬಂದು, ಅಲ್ಲಿ ತೀರ್ಥಸ್ನಾನವನ್ನು ಮಾಡಬೇಕು. ಆ ಮೇಲೆ ಸ್ವಾಮಿಗೆ ರುದ್ರಾಭಿಷೇಕ ಮಾಡಿಸಬೇಕು. ವಿಶೇಷವಾಗಿ ಹರಕೆಯ ರೂಪದಲ್ಲಿ ಅಕ್ಕಿ ತುಲಾಭಾರ ನೀಡುವುದರಿಂದ ಆರ್ಥಿಕ ಸಂಕಷ್ಟಗಳು ದೂರವಾಗುತ್ತದೆ.
ಈ ಗಣಪತಿಗೆ ಛಾವಣಿಯೂ ಇಲ್ಲ, ಗೋಡೆಯೂ ಇಲ್ಲ! ಪ್ರಕೃತಿಯೇ ಗರ್ಭಗುಡಿಯಾದ ಸೌತಡ್ಕದ ವಿಶೇಷತೆ ನಿಮಗೆ ಗೊತ್ತೆ?
4. ಕರ್ಕಾಟಕ ರಾಶಿ: ಸೌತಡ್ಕದ ಬಯಲು ಗಣಪತಿ
ಭಾವನಾತ್ಮಕ ವ್ಯಕ್ತಿಗಳಾದ ಕರ್ಕಾಟಕ ರಾಶಿಯವರಿಗೆ ವಿಘ್ನವಿನಾಶಕನ ಆರಾಧನೆ ಅತ್ಯಂತ ಅವಶ್ಯಕ.
- ಕ್ಷೇತ್ರದ ಮಹಿಮೆ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಸಮೀಪವಿರುವ ಸೌತಡ್ಕ ಗಣಪತಿ ದೇವಸ್ಥಾನವು ವಿಶಿಷ್ಟವಾದುದು. ಇಲ್ಲಿ ದೇವರಿಗೆ ಯಾವುದೇ ಗರ್ಭಗುಡಿ ಇಲ್ಲ, ಬಯಲೇ ಆಲಯ.
- ಮಾಡಬೇಕಾದ ಸೇವೆ: ಗಣಪತಿಗೆ ಹೂವು, ಹಣ್ಣುಗಳ ಸಮರ್ಪಣೆ ಮತ್ತು ವಿಶೇಷ ಸೇವೆಗಳನ್ನು ಮಾಡಿಸುವುದರಿಂದ ಮನಸ್ಸಿನ ಇಷ್ಟಾರ್ಥಗಳು ಈಡೇರುತ್ತವೆ. ಇಲ್ಲಿನ ಗಂಟೆಗಳ ಹರಕೆ ಬಹಳ ಪ್ರಸಿದ್ಧವಾಗಿದ್ದು, ಮನಸ್ಸಿನ ಗೊಂದಲಗಳನ್ನು ಪರಿಹರಿಸಲು ಇದು ಸೂಕ್ತ ಕ್ಷೇತ್ರ.
5. ಸಿಂಹ ಮತ್ತು ವೃಶ್ಚಿಕ ರಾಶಿ: ವೈಕುಂಠನಾಥನ ದರ್ಶನ – ತಿರುಪತಿ
ಸಿಂಹ ರಾಶಿಯವರ ಆತ್ಮವಿಶ್ವಾಸ ಮತ್ತು ವೃಶ್ಚಿಕ ರಾಶಿಯವರ ಸವಾಲುಗಳನ್ನು ಎದುರಿಸುವ ಶಕ್ತಿಗಾಗಿ ತಿರುಪತಿ ವೆಂಕಟೇಶ್ವರನ ದರ್ಶನ ಅನಿವಾರ್ಯ.
- ಕ್ಷೇತ್ರದ ಮಹಿಮೆ: ಆಂಧ್ರಪ್ರದೇಶದ ತಿರುಪತಿಯು ಕಲಿಯುಗದ ವೈಕುಂಠ ಎಂದೇ ಪ್ರಸಿದ್ಧ.
- ಮಾಡಬೇಕಾದ ಸೇವೆ: ಶನಿವಾರದಂದು ಭಕ್ತಿಯಿಂದ ನಡೆದುಕೊಂಡು ಬೆಟ್ಟ ಹತ್ತಿ ಶ್ರೀನಿವಾಸನ ದರ್ಶನ ಪಡೆಯುವುದು ವಿಶೇಷ. ದೈಹಿಕ ಶ್ರಮದ ಮೂಲಕ ದೇವರಿಗೆ ಶರಣಾಗುವುದು ಅಹಂಕಾರವನ್ನು ಕಳೆದು ದೇಹ- ಮನಸ್ಸನ್ನು ಪವಿತ್ರಗೊಳಿಸುತ್ತದೆ. ಇದು ಆರ್ಥಿಕ ಲಾಭ ಮತ್ತು ಪದೋನ್ನತಿಗೆ ಸಹಕಾರಿ.
6. ಕನ್ಯಾ ರಾಶಿ: ಅಗ್ನಿ ತತ್ವದ ಅರುಣಾಚಲೇಶ್ವರ – ತಿರುವಣ್ಣಾಮಲೈ
ಕನ್ಯಾ ರಾಶಿಯವರಿಗೆ ಆಧ್ಯಾತ್ಮಿಕ ಜಾಗೃತಿ ಮತ್ತು ಕರ್ಮ ವಿಮೋಚನೆಗಾಗಿ ಅಗ್ನಿ ಲಿಂಗದ ದರ್ಶನ ಉತ್ತಮ.
- ಕ್ಷೇತ್ರದ ಮಹಿಮೆ: ತಮಿಳುನಾಡಿನ ತಿರುವಣ್ಣಾಮಲೈಯಲ್ಲಿ ಶಿವನು ನೆಲೆಸಿದ್ದಾನೆ. ಇದು ಪ್ರಪಂಚದ ಅತಿ ಹಳೆಯ ಆಧ್ಯಾತ್ಮಿಕ ಕೇಂದ್ರಗಳಲ್ಲಿ ಒಂದು.
- ಮಾಡಬೇಕಾದ ಸೇವೆ: ಇಲ್ಲಿ ಅರುಣಾಚಲೇಶ್ವರ ದರ್ಶನದ ಜೊತೆಗೆ ಗಿರಿಪ್ರದಕ್ಷಿಣೆ (ಬೆಟ್ಟದ ಸುತ್ತಲೂ ನಡೆಯುವುದು) ಮಾಡುವುದು ಅತ್ಯಂತ ಫಲದಾಯಕ. 14 ಕಿಲೋಮೀಟರ್ ದೂರದ ಈ ನಡಿಗೆಯು ಜೀವನದ ಸಕಲ ಪಾಪಗಳನ್ನು ಸುಟ್ಟು ಹಾಕುತ್ತದೆ ಎಂಬ ನಂಬಿಕೆಯಿದೆ.
7. ತುಲಾ ರಾಶಿ: ಗುರುವಿನ ಅನುಗ್ರಹ – ಗಾಣಗಾಪುರ
ವ್ಯಾಪಾರ ಮತ್ತು ಕೌಟುಂಬಿಕ ಜೀವನದ ಸಮತೋಲನಕ್ಕಾಗಿ ತುಲಾ ರಾಶಿಯವರು ದತ್ತಾತ್ರೇಯರ ಮೊರೆ ಹೋಗಬೇಕು.
- ಕ್ಷೇತ್ರದ ಮಹಿಮೆ: ಕಲಬುರಗಿ ಜಿಲ್ಲೆಯ ಗಾಣಗಾಪುರವು ದತ್ತಾತ್ರೇಯ ಸ್ವಾಮಿಯ ಅವತಾರವಾದ ಶ್ರೀ ನರಸಿಂಹ ಸರಸ್ವತಿ ಸ್ವಾಮಿಗಳ ನೆಲೆಬೀಡು.
- ಮಾಡಬೇಕಾದ ಸೇವೆ: ಸಂಗಮ ಸ್ನಾನದ ನಂತರ ದತ್ತಾತ್ರೇಯರ ದರ್ಶನ ಪಡೆದು, ಮಧುಕರ ಸೇವೆ (ಐದು ಮನೆಗಳಿಂದ ಭಿಕ್ಷೆ ಪಡೆದು ಅರ್ಪಿಸುವುದು) ಮಾಡುವುದು ವಿಶೇಷ. ಇದು ಅಹಂಕಾರವನ್ನು ಕಡಿಮೆ ಮಾಡಿ ದೈವಿಕ ಕೃಪೆಗೆ ಪಾತ್ರರಾಗುವಂತೆ ಮಾಡುತ್ತದೆ.
ತಿರುನೆಲ್ಲಾರ್ ದರ್ಬಾರಣ್ಯೇಶ್ವರ ದೇಗುಲ: ಶನಿ ದೋಷ ಮುಕ್ತಿಗೆ ದಕ್ಷಿಣ ಭಾರತದ ಮಹಾ ಕ್ಷೇತ್ರ
8. ಧನುಸ್ಸು ರಾಶಿ: ಪವಿತ್ರ ದರ್ಬಾರಣ್ಯೇಶ್ವರ ಮತ್ತು ನಳ ತೀರ್ಥ
ಧನುಸ್ಸು ರಾಶಿಯವರು ಉನ್ನತ ಜ್ಞಾನ ಮತ್ತು ಶನಿಯ ಪ್ರಭಾವದಿಂದ ಮುಕ್ತಿ ಹೊಂದಲು ತಿರುನೆಲ್ಲಾರ್‌ಗೆ ಭೇಟಿ ನೀಡಬೇಕು.
- ಸೇವೆ: ಶನಿವಾರದಂದು ಪವಿತ್ರವಾದ ನಳ ತೀರ್ಥದಲ್ಲಿ ಸ್ನಾನ ಮಾಡಬೇಕು. ಇಲ್ಲಿನ ಮೂಲ ದೈವ ದರ್ಬಾರಣ್ಯೇಶ್ವರ (ಶಿವ) ನನ್ನು ಪೂಜಿಸುವುದರಿಂದ ಜೀವನದ ಕಠಿಣ ಪರಿಸ್ಥಿತಿಗಳು ಸರಳವಾಗುತ್ತವೆ.
9. ಮಕರ ರಾಶಿ: ತಾಯಿ ಮೂಕಾಂಬಿಕೆಯ ಶರಣಾಗತಿ
ಶನಿ ಗ್ರಹದ ಅಧಿಪತ್ಯ ಹೊಂದಿರುವ ಮಕರ ರಾಶಿಯವರಿಗೆ ಜ್ಞಾನ ಮತ್ತು ರಕ್ಷಣೆಗಾಗಿ ಕೊಲ್ಲೂರು ಕ್ಷೇತ್ರ ಪವಿತ್ರವಾದುದು.
- ಕ್ಷೇತ್ರದ ಮಹಿಮೆ: ಉಡುಪಿ ಜಿಲ್ಲೆಯ ಕೊಲ್ಲೂರು ಮೂಕಾಂಬಿಕಾ ಕ್ಷೇತ್ರವು ಸಿದ್ಧಿ ಕ್ಷೇತ್ರವಾಗಿದೆ.
- ಮಾಡಬೇಕಾದ ಸೇವೆ: ತಾಯಿಗೆ ಆರು ತುಪ್ಪದ ದೀಪಗಳನ್ನು ಹಚ್ಚುವುದು ಮತ್ತು ತ್ರಿ ಮಧು ಸೇವೆಯನ್ನು ಮಾಡಿಸುವುದು ವಿಶೇಷ. ಇದರಿಂದ ಬುದ್ಧಿಶಕ್ತಿ ಚುರುಕಾಗುತ್ತದೆ ಮತ್ತು ಆರೋಗ್ಯ ಸಮಸ್ಯೆಗಳು ನಿವಾರಣೆಯಾಗುತ್ತವೆ.
10. ಕುಂಭ ರಾಶಿ: ಇಡುಗುಂಜಿ ಮಹಾಗಣಪತಿಯ ಆಶೀರ್ವಾದ
ಕುಂಭ ರಾಶಿಯವರು ತಮ್ಮ ವಿಭಿನ್ನ ಆಲೋಚನೆಗಳು ಕಾರ್ಯರೂಪಕ್ಕೆ ಬರಲು ಇಡುಗುಂಜಿ ಗಣಪತಿಯನ್ನು ಪ್ರಾರ್ಥಿಸಬೇಕು.
- ಕ್ಷೇತ್ರದ ಮಹಿಮೆ: ಉತ್ತರ ಕನ್ನಡದ ಇಡುಗುಂಜಿ ಗಣಪತಿಯು ದ್ವಿಭುಜ ಹೊಂದಿರುವ ವಿಶಿಷ್ಟ ಮೂರ್ತಿಯಾಗಿದೆ.
- ಮಾಡಬೇಕಾದ ಸೇವೆ: ದೇವರಿಗೆ ಅತ್ಯಂತ ಪ್ರಿಯವಾದ ಪಂಚಕಜ್ಜಾಯ ಸೇವೆಯನ್ನು ಮಾಡಿಸುವುದರಿಂದ ಕೆಲಸದಲ್ಲಿನ ಅಡೆತಡೆಗಳು ನಿವಾರಣೆಯಾಗಿ ಯಶಸ್ಸು ಲಭಿಸುತ್ತದೆ.
ಕೊನೆಮಾತು
ನಂಬಿಕೆ ಮತ್ತು ಭಕ್ತಿ ಮನುಷ್ಯನ ಜೀವನದ ದೊಡ್ಡ ಶಕ್ತಿಗಳು. ಈ ಮೇಲೆ ತಿಳಿಸಿದ ದೇವಸ್ಥಾನಗಳಿಗೆ ಭೇಟಿ ನೀಡುವುದು ಕೇವಲ ಧಾರ್ಮಿಕ ವಿಧಿಯಲ್ಲ, ಅದು ನಮ್ಮ ಮನಸ್ಸನ್ನು ಶುದ್ಧೀಕರಿಸುವ ಮತ್ತು ಧನಾತ್ಮಕ ಶಕ್ತಿಯನ್ನು ತುಂಬುವ ಪ್ರಕ್ರಿಯೆಯಾಗಿದೆ. ಶ್ರದ್ಧೆಯಿಂದ ಈ ಸೇವೆಗಳನ್ನು ಕೈಗೊಂಡಾಗ ಗ್ರಹದೋಷಗಳು ನಿವಾರಣೆಯಾಗಿ ಸುಖ, ಶಾಂತಿ ಲಭಿಸುತ್ತದೆ.
ಲೇಖನ- ಶ್ರೀನಿವಾಸ ಮಠ





