ಯಾವುದೇ ಕ್ಯಾಲೆಂಡರ್ ವರ್ಷದಲ್ಲಿ ಜ್ಯೋತಿಷ್ಯದ ಬಗ್ಗೆ ಏನಾದರೂ ಕೇಳಿದರೆ, ನಮಗೆ ಈ ವರ್ಷ ಹೇಗಿದೆ, ಆರ್ಥಿಕ ಪರಿಸ್ಥಿತಿ ಹೇಗಿರುತ್ತದೆ, ಆರೋಗ್ಯ ಹೇಗಿರುತ್ತದೆ ಈ ರೀತಿ ಪ್ರಾಮುಖ್ಯದ ಆಧಾರದಲ್ಲಿ ಕೇಳುವುದುಂಟು. ಈ ಲೇಖನದಲ್ಲಿ ಮೇಷ ರಾಶಿಯಿಂದ ಮೀನ ರಾಶಿಯ ತನಕ ಯಾವ ರಾಶಿಯವರಿಗೆ ಆದಾಯ- ಖರ್ಚು, ಸಾಮಾಜಿಕ ಮನ್ನಣೆ- ಸವಾಲು ಹೇಗೆ ಇರುತ್ತದೆ ಎಂಬುದನ್ನು ವಿವರಿಸಲಾಗಿದೆ. ಇದರಲ್ಲಿ ಸಾಮಾನ್ಯ ನಿಯಮಗಳನ್ನು ಅನುಸರಿಸಲಾಗಿದೆ. ಒಬ್ಬ ವ್ಯಕ್ತಿ ಈ ವಿಚಾರಗಳಿಗೆ ಸಂಬಂಧಪಟ್ಟಂತೆ ಮುಖ್ಯವಾದ ತೀರ್ಮಾನ ತೆಗೆದುಕೊಳ್ಳಬೇಕು ಅಂತಾದರೆ ವೈಯಕ್ತಿಕ ಜಾತಕವನ್ನು ಜ್ಯೋತಿಷಿಗಳ ಬಳಿ ತೋರಿಸಿಕೊಳ್ಳಬೇಕು. ದಶಾ- ಭುಕ್ತಿ, ಜನ್ಮಜಾತಕದಲ್ಲಿನ ಯೋಗಗಳು ಇತ್ಯಾದಿಯನ್ನು ಸಮಗ್ರವಾಗಿ ವಿಶ್ಲೇಷಣೆ ಮಾಡಿದ ನಂತರವಷ್ಟೇ ದೊಡ್ಡ ತೀರ್ಮಾನಗಳನ್ನು ಆಖೈರು ಮಾಡಿಕೊಳ್ಳಿ. ಉಳಿದಂತೆ ಇಲ್ಲಿರುವ ಮಾಹಿತಿ ಮಾರ್ಗದರ್ಶಿ ಇದ್ದಂತೆ. ಒಳ್ಳೆಯದಾಗಲಿ, ಒಳ್ಳೆಯದೇ ಆಗಲಿ.
ಇನ್ನು 2026ನೇ ಇಸವಿಯು ಗ್ರಹ ಸಂಚಾರದ ಆಧಾರದ ಮೇಲೆ ಮುಖ್ಯ ಬೆಳವಣಿಗೆ ಆಗುತ್ತದೆ. ಈ ವರ್ಷ ಬೃಹಸ್ಪತಿಯು (ಗುರು) ತನ್ನ ಉಚ್ಚ ರಾಶಿಯಾದ ಕರ್ಕಾಟಕದಲ್ಲಿ ಸಂಚರಿಸುತ್ತಾ ಜಗತ್ತಿಗೆ ಶುಭವನ್ನು ನೀಡಲಿದ್ದಾನೆ. ಮತ್ತೊಂದೆಡೆ, ಶನೈಶ್ಚರನು ಮೀನ ರಾಶಿಯಲ್ಲಿ ಸಂಚರಿಸುತ್ತಾ ಕುಂಭ, ಮೀನ ಹಾಗೂ ಮೇಷ ರಾಶಿಯವರಿಗೆ ಸಾಡೇಸಾತಿಯ ಪ್ರಭಾವವನ್ನು ಬೀರುತ್ತಿದ್ದಾನೆ. ಈ ಗ್ರಹಗತಿಗಳ ಹಿನ್ನೆಲೆಯಲ್ಲಿ ಪ್ರತಿ ರಾಶಿಯವರ ಆರ್ಥಿಕ- ಆರೋಗ್ಯ- ಸಾಮಾಜಿಕ ಸ್ಥಿತಿಗತಿಗಳು ಹೀಗಿವೆ:
1. ಮೇಷ ರಾಶಿ
• ಆಯ: 8, ವ್ಯಯ: 14 | ರಾಜಪೂಜ್ಯ: 2, ರಾಜಭಯ: 2
• ಆರ್ಥಿಕ ವಿಶ್ಲೇಷಣೆ: ಆಯಕ್ಕಿಂತ ವ್ಯಯದ ಪ್ರಮಾಣ ಹೆಚ್ಚಿದೆ. ಈ ವರ್ಷ ನೀವು ಹಣದ ಒಳ ಹರಿವಿಗಿಂತ ಹೊರಹರಿವಿನ ಬಗ್ಗೆ ಹೆಚ್ಚು ಚಿಂತಿಸಬೇಕಾಗುತ್ತದೆ. ಹೂಡಿಕೆ ಮಾಡುವಾಗ ನೂರು ಬಾರಿ ಯೋಚಿಸಿ.
• ಆರೋಗ್ಯ: ಶನಿಯ ಪ್ರಭಾವದಿಂದಾಗಿ ರಕ್ತಹೀನತೆ ಅಥವಾ ನರಗಳ ದೌರ್ಬಲ್ಯ ಕಾಡಬಹುದು. ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ತಲೆನೋವು ಸಮಸ್ಯೆ ಅಧಿಕವಾಗಬಹುದು.
• ತಿಂಗಳ ಆಧಾರದಲ್ಲಿ ವಿವರ:
ಜನವರಿಯಿಂದ ಮಾರ್ಚ್: ಕಠಿಣ ಪರಿಶ್ರಮದ ಕಾಲ. ಅನಿರೀಕ್ಷಿತ ಖರ್ಚುಗಳು ಎದುರಾಗುತ್ತವೆ.
ಏಪ್ರಿಲ್ ನಿಂದ ಜೂನ್: ಸ್ಥಿರಾಸ್ತಿ ಖರೀದಿ ಅಥವಾ ಮನೆ ನವೀಕರಣದ ಯೋಗವಿದೆ. ಜೂನ್ ತಿಂಗಳಲ್ಲಿ ಶುಭ ವಾರ್ತೆ ಕೇಳುವಿರಿ.
ಜುಲೈನಿಂದ ಸೆಪ್ಟೆಂಬರ್: ಉದ್ಯೋಗದಲ್ಲಿ ವರ್ಗಾವಣೆ ಅಥವಾ ಬದಲಾವಣೆ ಆಗಬಹುದು. ಮೇಲಧಿಕಾರಿಗಳೊಂದಿಗೆ ವಾಗ್ವಾದ ಬೇಡ.
ಅಕ್ಟೋಬರ್ ನಿಂದ ಡಿಸೆಂಬರ್: ವರ್ಷಾಂತ್ಯದಲ್ಲಿ ಸಾಲದ ಬಾಧೆ ತೀರಲಿದೆ. ಕೌಟುಂಬಿಕವಾಗಿ ಸುಖ ಇರಲಿದೆ.
2. ವೃಷಭ ರಾಶಿ
• ಆಯ: 2, ವ್ಯಯ: 8 | ರಾಜಪೂಜ್ಯ: 5, ರಾಜಭಯ: 5
• ಆರ್ಥಿಕ ವಿಶ್ಲೇಷಣೆ: ಆಯದ ಸಂಖ್ಯೆ ಅತ್ಯಲ್ಪವಾಗಿದ್ದರೂ ಗುರು ಬಲ ಇರುವುದರಿಂದ ನಿಮಗೆ ಅಗತ್ಯವಿರುವ ಸಮಯದಲ್ಲಿ ಧನಸಹಾಯ ದೊರೆಯಲಿದೆ. ಅದೃಷ್ಟಕ್ಕಿಂತ ಶ್ರಮವನ್ನೇ ನಂಬಿಕೊಳ್ಳಿ.
• ಆರೋಗ್ಯ: ಆಗಸ್ಟ್ ತಿಂಗಳಲ್ಲಿ ಫುಡ್ ಪಾಯಿಸನ್ ಆಗುವ ಸಾಧ್ಯತೆ ಇದೆ. ಹೊರಗಿನ ತಿಂಡಿ- ತಿನಿಸುಗಳ ಬಗ್ಗೆ ಜಾಗ್ರತೆ ಇರಲಿ.
• ತಿಂಗಳ ಆಧಾರದಲ್ಲಿ ವಿವರ:
ಜನವರಿಯಿಂದ ಮಾರ್ಚ್: ಆದಾಯದ ಮೂಲಗಳು ಸೃಷ್ಟಿ ಆಗಲಿವೆ. ಫೆಬ್ರವರಿಯಲ್ಲಿ ಚಿನ್ನಾಭರಣ ಖರೀದಿ ಯೋಗವಿದೆ.
ಏಪ್ರಿಲ್ ನಿಂದ ಜೂನ್: ಶತ್ರುಗಳ ಬಾಧೆ ಹೆಚ್ಚಾಗಬಹುದು. ಅದರಲ್ಲೂ ಕಣ್ಣಿಗೆ ಕಾಣದ, ಯಾರು ಎಂದು ಗೊತ್ತಾಗದ ಗುಪ್ತ ಶತ್ರುಗಳ ಬಗ್ಗೆ ಎಚ್ಚರವಿರಲಿ.
ಜುಲೈನಿಂದ ಸೆಪ್ಟೆಂಬರ್: ಮಕ್ಕಳ ಶಿಕ್ಷಣದ ಬಗ್ಗೆ ಚಿಂತೆ ಕಾಡಬಹುದು. ಸೆಪ್ಟೆಂಬರ್ನಲ್ಲಿ ಹಿರಿಯರಿಂದ ಆಸ್ತಿ ಸಿಗುವ ಸಾಧ್ಯತೆ ಇದೆ.
ಅಕ್ಟೋಬರ್ ನಿಂದ ಡಿಸೆಂಬರ್: ದೂರದ ಪ್ರಯಾಣಗಳು ಲಾಭ ತರಲಿವೆ. ವಾರಾಂತ್ಯಗಳಲ್ಲಿ ಕುಟುಂಬದೊಂದಿಗೆ ಕಾಲ ಕಳೆಯುವಿರಿ.
3. ಮಿಥುನ ರಾಶಿ
• ಆಯ: 5, ವ್ಯಯ: 5 | ರಾಜಪೂಜ್ಯ: 1, ರಾಜಭಯ: 1
• ಆರ್ಥಿಕ ವಿಶ್ಲೇಷಣೆ: ನಿಮ್ಮ ಜೀವನ ಈ ವರ್ಷ ‘ಸಮತೋಲನ’ದ ಮೇಲೆ ನಿಂತಿರುತ್ತದೆ. ಎಷ್ಟು ಗಳಿಸುವಿರೋ ಅಷ್ಟೇ ವೆಚ್ಚವಾಗಲಿದೆ. ಉಳಿತಾಯ ಮಾಡಲು ಸಾಧ್ಯವಾಗುವುದಿಲ್ಲ.
• ಆರೋಗ್ಯ: ಶೀತ ಮತ್ತು ಕಫ ಸಂಬಂಧಿ ಸಮಸ್ಯೆಗಳು ಕಾಡಬಹುದು. ನವೆಂಬರ್ ತಿಂಗಳಲ್ಲಿ ಎಚ್ಚರವಿರಲಿ.
• ತಿಂಗಳ ಆಧಾರದಲ್ಲಿ ವಿವರ:
ಜನವರಿಯಿಂದ ಮಾರ್ಚ್: ಹೊಸ ಉದ್ಯಮ ಆರಂಭಿಸಲು ಪೂರಕವಾದ ಕಾಲ. ಮಾರ್ಚ್ನಲ್ಲಿ ಗೌರವ ಪ್ರಾಪ್ತಿ.
ಏಪ್ರಿಲ್ ನಿಂದ ಜೂನ್: ಮಾತು ಬೆಳ್ಳಿ, ಮೌನ ಬಂಗಾರ. ಅನಗತ್ಯ ಮಾತುಗಳಿಂದ ವಿವಾದಕ್ಕೆ ಸಿಲುಕುವಿರಿ.
ಜುಲೈನಿಂದ ಸೆಪ್ಟೆಂಬರ್: ಆಗಸ್ಟ್ನಲ್ಲಿ ವೃತ್ತಿ ಕ್ಷೇತ್ರದಲ್ಲಿ ಬಡ್ತಿ ಸಿಗಬಹುದು. ಸೆಪ್ಟೆಂಬರ್ನಲ್ಲಿ ಮಿತ್ರರಿಂದ ವಂಚನೆ ಆಗುವ ಸಂಭವವಿದೆ.
ಅಕ್ಟೋಬರ್ ನಿಂದ ಡಿಸೆಂಬರ್: ವರ್ಷದ ಕೊನೆಯಲ್ಲಿ ಆಧ್ಯಾತ್ಮಿಕ ಒಲವು ಹೆಚ್ಚಾಗಲಿದೆ. ದೇವತಾ ಕಾರ್ಯಗಳಲ್ಲಿ ಪಾಲ್ಗೊಳ್ಳುವಿರಿ.
4. ಕರ್ಕಾಟಕ ರಾಶಿ
• ಆಯ: 14, ವ್ಯಯ: 2 | ರಾಜಪೂಜ್ಯ: 4, ರಾಜಭಯ: 4
• ಆರ್ಥಿಕ ವಿಶ್ಲೇಷಣೆ: ಈ ವರ್ಷದಲ್ಲಿ ಆರ್ಥಿಕವಾಗಿ ಅತ್ಯುತ್ತಮ ಸಂಖ್ಯೆ ಕಾಣಿಸುತ್ತಿದೆ. ಗರಿಷ್ಠ ಆಯ ಮತ್ತು ಕನಿಷ್ಠ ವ್ಯಯವು ಇರುವುದರಿಂದ ಹಳೇ ಹೂಡಿಕೆಗಳು ಲಾಭ ತರಲಿವೆ.
• ಆರೋಗ್ಯ: ಅತ್ಯುತ್ತಮ ಆರೋಗ್ಯವಿರುತ್ತದೆ. ಜುಲೈನಲ್ಲಿ ಸಣ್ಣ ಪ್ರಮಾಣದ ಕಣ್ಣಿನ ದೋಷ ಹೊರತುಪಡಿಸಿದರೆ ಉಳಿದಂತೆ ನಿಶ್ಚಿಂತೆ.
• ತಿಂಗಳ ಆಧಾರದಲ್ಲಿ ವಿವರ:
ಜನವರಿಯಿಂದ ಮಾರ್ಚ್: ವ್ಯಾಪಾರದಲ್ಲಿ ಯಶಸ್ಸು. ಕಳೆದುಹೋದ ವಸ್ತುಗಳು ಮರಳಿ ಸಿಗಲಿವೆ.
ಏಪ್ರಿಲ್ ನಿಂದ ಜೂನ್: ಮದುವೆ ಅಥವಾ ಸಂತಾನ ಭಾಗ್ಯದಂತಹ ಮಂಗಳ ಕಾರ್ಯಗಳು ಆಗಲಿವೆ.
ಜುಲೈನಿಂದ ಸೆಪ್ಟೆಂಬರ್: ಸಮಾಜದಲ್ಲಿ ನಿಮ್ಮ ಪ್ರತಿಷ್ಠೆ ಹೆಚ್ಚಲಿದೆ. ಅನಿರೀಕ್ಷಿತವಾಗಿ ಪ್ರಶಸ್ತಿಗಳು ಒಲಿದು ಬರಬಹುದು.
ಅಕ್ಟೋಬರ್ ನಿಂದ ಡಿಸೆಂಬರ್: ಹಳೆಯ ಸಾಲಗಳಿಂದ ಮುಕ್ತಿ. ಹೊಸ ವಾಹನ ಖರೀದಿ ಯೋಗವಿದೆ.
5. ಸಿಂಹ ರಾಶಿ
• ಆಯ: 2, ವ್ಯಯ: 11 | ರಾಜಪೂಜ್ಯ: 7, ರಾಜಭಯ: 7
• ಆರ್ಥಿಕ ವಿಶ್ಲೇಷಣೆ: ಆರ್ಥಿಕ ಪರಿಸ್ಥಿತಿ ಸಂಕಷ್ಟಮಯವಾಗಿರಲಿದೆ. ಹಠಾತ್ ಖರ್ಚುಗಳು ನಿಮ್ಮ ಬಜೆಟ್ ಅನ್ನು ಏರುಪೇರು ಮಾಡುತ್ತವೆ.
• ಆರೋಗ್ಯ: ಜೂನ್ ತಿಂಗಳಲ್ಲಿ ಹೃದಯ ಅಥವಾ ಬೆನ್ನು ಸಂಬಂಧಿ ಸಮಸ್ಯೆಗಳಿದ್ದರೆ ತಕ್ಷಣ ವೈದ್ಯರನ್ನು ಭೇಟಿ ಮಾಡಿ.
• ತಿಂಗಳ ಆಧಾರದಲ್ಲಿ ವಿವರ:
ಜನವರಿಯಿಂದ ಮಾರ್ಚ್: ಸರ್ಕಾರಿ ಅಧಿಕಾರಿಗಳೊಂದಿಗೆ ವ್ಯವಹರಿಸುವಾಗ ಸಂಯಮ ಇರಲಿ.
ಏಪ್ರಿಲ್ ನಿಂದ ಜೂನ್: ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ವಿಳಂಬವಾಗಬಹುದು. ಧೃತಿಗೆಡಬೇಡಿ.
ಜುಲೈನಿಂದ ಸೆಪ್ಟೆಂಬರ್: ಸೆಪ್ಟೆಂಬರ್ ನಂತರ ಪರಿಸ್ಥಿತಿ ತಿಳಿಯಾಗಲಿದೆ. ಹಿರಿಯರ ಆರೋಗ್ಯ ಸುಧಾರಿಸಲಿದೆ.
ಅಕ್ಟೋಬರ್ ನಿಂದ ಡಿಸೆಂಬರ್: ನವೆಂಬರ್ನಲ್ಲಿ ಸ್ವಲ್ಪ ಮಟ್ಟಿನ ಆರ್ಥಿಕ ನೆಮ್ಮದಿ ದೊರೆಯಲಿದೆ. ದಾನ- ಧರ್ಮದತ್ತ ಮನಸ್ಸು ಹೊರಳಲಿದೆ.
6. ಕನ್ಯಾ ರಾಶಿ
• ಆಯ: 5, ವ್ಯಯ: 5 | ರಾಜಪೂಜ್ಯ: 3, ರಾಜಭಯ: 3
• ಆರ್ಥಿಕ ವಿಶ್ಲೇಷಣೆ: ಹಣಕಾಸಿನ ವಿಚಾರದಲ್ಲಿ ಜಾಣತನ ಪ್ರದರ್ಶಿಸುವಿರಿ. ದೈನಂದಿನ ಖರ್ಚಿಗೆ ಕೊರತೆ ಆಗದು.
• ಆರೋಗ್ಯ: ಮೇ ಮತ್ತು ಜೂನ್ ತಿಂಗಳಲ್ಲಿ ಅತಿಯಾದ ಒತ್ತಡದಿಂದಾಗಿ ಮಾನಸಿಕ ಕಿರಿಕಿರಿ ಉಂಟಾಗುತ್ತದೆ.
• ತಿಂಗಳ ಆಧಾರದಲ್ಲಿ ವಿವರ:
ಜನವರಿಯಿಂದ ಮಾರ್ಚ್: ಹೊಸ ಹವ್ಯಾಸಗಳನ್ನು ಬೆಳೆಸಿಕೊಳ್ಳುವಿರಿ. ಜನವರಿಯಲ್ಲಿ ಅದೃಷ್ಟ ಒಲಿಯಲಿದೆ.
ಏಪ್ರಿಲ್ ನಿಂದ ಜೂನ್: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ. ಆದರೆ ಒಪ್ಪಂದಗಳಿಗೆ ಸಹಿ ಹಾಕುವಾಗ ಜಾಗ್ರತೆ.
ಜುಲೈನಿಂದ ಸೆಪ್ಟೆಂಬರ್: ಕೌಟುಂಬಿಕವಾಗಿ ಸುಖ ಇರಲಿದೆ. ಆಗಸ್ಟ್ನಲ್ಲಿ ಪ್ರವಾಸದ ಯೋಗವಿದೆ.
ಅಕ್ಟೋಬರ್ ನಿಂದ ಡಿಸೆಂಬರ್: ಕೆಲಸದಲ್ಲಿ ಸ್ಥಿರತೆ ಇರಲಿದೆ. ಡಿಸೆಂಬರ್ನಲ್ಲಿ ಆಕಸ್ಮಿಕ ಹಣ ಲಾಭದ ಮುನ್ಸೂಚನೆ ಇದೆ.
Astrology birth stars: ಅಶ್ವಿನಿಯಿಂದ ರೇವತಿ ತನಕ ಇಪ್ಪತ್ತೇಳು ನಕ್ಷತ್ರಗಳ ಗುಣ- ಸ್ವಭಾವದ ವಿವರಣೆ ಇಲ್ಲಿದೆ
7. ತುಲಾ ರಾಶಿ
• ಆಯ: 2, ವ್ಯಯ: 8 | ರಾಜಪೂಜ್ಯ: 6, ರಾಜಭಯ: 6
• ಆರ್ಥಿಕ ವಿಶ್ಲೇಷಣೆ: ಆರ್ಥಿಕವಾಗಿ ಹರಿವು, ಪ್ರಗತಿಯಲ್ಲಿ ಮಂದಗತಿ ಕಾಣಿಸಲಿದೆ. ವಿವಾಹಾದಿ ಶುಭ ಕಾರ್ಯಗಳಿಗೆ ಹೆಚ್ಚಿನ ಹಣ ವ್ಯಯವಾಗಲಿದೆ.
• ಆರೋಗ್ಯ: ಸೆಪ್ಟೆಂಬರ್ನಲ್ಲಿ ಮೂತ್ರಪಿಂಡ ಅಥವಾ ಗುಪ್ತ ಅಂಗಗಳ ಸಮಸ್ಯೆಗಳ ಬಗ್ಗೆ ಜಾಗ್ರತೆ ವಹಿಸಿ.
• ತಿಂಗಳ ಆಧಾರದಲ್ಲಿ ವಿವರ:
ಜನವರಿಯಿಂದ ಮಾರ್ಚ್: ಆಪ್ತರಿಂದ ಮೋಸವಾಗುವ ಸಂಭವವಿದೆ. ಯಾರನ್ನೂ ಅತಿಯಾಗಿ ನಂಬಬೇಡಿ.
ಏಪ್ರಿಲ್ ನಿಂದ ಜೂನ್: ಜೂನ್ ತಿಂಗಳಲ್ಲಿ ಧಾರ್ಮಿಕ ಕಾರ್ಯಗಳಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ.
ಜುಲೈನಿಂದ ಸೆಪ್ಟೆಂಬರ್: ಸ್ತ್ರೀಯರಿಂದ ಲಾಭ. ನಿಮ್ಮ ಕಲಾತ್ಮಕ ಕೆಲಸಗಳಿಗೆ ಮಾನ್ಯತೆ ದೊರೆಯಲಿದೆ.
ಅಕ್ಟೋಬರ್ ನಿಂದ ಡಿಸೆಂಬರ್: ಅಕ್ಟೋಬರ್ ನಂತರ ಭಾಗ್ಯೋದಯ. ಸಮಾಜದಲ್ಲಿ ನಿಮ್ಮ ಪ್ರಭಾವ ಹೆಚ್ಚಲಿದೆ.
8. ವೃಶ್ಚಿಕ ರಾಶಿ
• ಆಯ: 14, ವ್ಯಯ: 14 | ರಾಜಪೂಜ್ಯ: 2, ರಾಜಭಯ: 2
• ಆರ್ಥಿಕ ವಿಶ್ಲೇಷಣೆ: ಅತಿ ವೇಗವಾಗಿ ಹಣ ಬರುತ್ತದೆ ಮತ್ತು ಅಷ್ಟೇ ವೇಗವಾಗಿ ಕರಗುತ್ತದೆ. ಉಳಿತಾಯದ ಕಡೆಗೆ ಗಮನ ಹರಿಸಿ.
• ಆರೋಗ್ಯ: ಮಾರ್ಚ್ ಮತ್ತು ನವೆಂಬರ್ನಲ್ಲಿ ಅಪಘಾತದ ಸಂಭವವಿದೆ. ವಾಹನ ಚಾಲನೆ ಮಾಡುವಾಗ ಜಾಗ್ರತೆ ಬೇಕು.
• ತಿಂಗಳ ಆಧಾರದಲ್ಲಿ ವಿವರ:
ಜನವರಿಯಿಂದ ಮಾರ್ಚ್: ಉದ್ಯೋಗದಲ್ಲಿ ಕಿರಿಕಿರಿ. ಸಹೋದ್ಯೋಗಿಗಳೊಂದಿಗೆ ಸ್ಪರ್ಧೆ ಹೆಚ್ಚಾಗಲಿದೆ.
ಏಪ್ರಿಲ್ ನಿಂದ ಜೂನ್: ಮೇ ತಿಂಗಳಲ್ಲಿ ಶತ್ರುಗಳ ಮೇಲೆ ವಿಜಯ ಸಾಧಿಸುವಿರಿ. ಹಳೆಯ ಕೋರ್ಟ್ ಕೇಸುಗಳು ಇತ್ಯರ್ಥವಾಗಲಿವೆ.
ಜುಲೈನಿಂದ ಸೆಪ್ಟೆಂಬರ್: ಆಗಸ್ಟ್ ತಿಂಗಳು ಧನವೃಷ್ಟಿಯ ಕಾಲ. ವ್ಯಾಪಾರ ವಿಸ್ತರಣೆಗೆ ಸಕಾಲ.
ಅಕ್ಟೋಬರ್ ನಿಂದ ಡಿಸೆಂಬರ್: ಕೌಟುಂಬಿಕ ಅಶಾಂತಿ ಸಾಧ್ಯತೆ. ತಾಳ್ಮೆ ಮತ್ತು ಸಮಾಧಾನದಿಂದ ಸಮಸ್ಯೆ ಬಗೆಹರಿಸಿಕೊಳ್ಳಿ.
9. ಧನು ರಾಶಿ
• ಆಯ: 11, ವ್ಯಯ: 5 | ರಾಜಪೂಜ್ಯ: 5, ರಾಜಭಯ: 5
• ಆರ್ಥಿಕ ವಿಶ್ಲೇಷಣೆ: ನಿಮಗೆ ಈ ವರ್ಷ ಸಮೃದ್ಧಿಯ ವರ್ಷ. ಹೂಡಿಕೆ ಮಾಡಿದ ಹಣವು ದುಪ್ಪಟ್ಟು ಲಾಭ ತರಲಿದೆ.
• ಆರೋಗ್ಯ: ಪಚನ- ಜೀರ್ಣ ಶಕ್ತಿ ಕುಂಠಿತ ಆಗಬಹುದು. ಆಗಸ್ಟ್ನಲ್ಲಿ ಆಹಾರ ಪಥ್ಯದ ಬಗ್ಗೆ ಗಮನವಿರಲಿ.
• ತಿಂಗಳ ಆಧಾರದಲ್ಲಿ ವಿವರ:
ಜನವರಿಯಿಂದ ಮಾರ್ಚ್: ವಿದೇಶ ಯಾನದ ಕನಸು ನನಸಾಗಲಿದೆ. ಉನ್ನತ ವ್ಯಾಸಂಗ ಮಾಡುವವರಿಗೆ ಶುಭ ಕಾಲ.
ಏಪ್ರಿಲ್ ನಿಂದ ಜೂನ್: ಸರ್ಕಾರದಿಂದ ನಿರೀಕ್ಷಿಸಿದ ಸವಲತ್ತುಗಳು ದೊರೆಯಲಿವೆ. ಅಧಿಕಾರ ಪ್ರಾಪ್ತಿ.
ಜುಲೈನಿಂದ ಸೆಪ್ಟೆಂಬರ್: ಆಸ್ತಿ ವಿವಾದಗಳು ಸುಲಭವಾಗಿ ಬಗೆಹರಿಯಲಿವೆ. ಸೆಪ್ಟೆಂಬರ್ನಲ್ಲಿ ನೆಮ್ಮದಿ ಹೆಚ್ಚಲಿದೆ.
ಅಕ್ಟೋಬರ್ ನಿಂದ ಡಿಸೆಂಬರ್: ವರ್ಷದ ಕೊನೆಯಲ್ಲಿ ಸತ್ಕಾರ್ಯಗಳಿಗಾಗಿ ಹಣ ವಿನಿಯೋಗಿಸುವಿರಿ. ಕುಟುಂಬದಲ್ಲಿ ಸುಖ.
10. ಮಕರ ರಾಶಿ
• ಆಯ: 14, ವ್ಯಯ: 14 | ರಾಜಪೂಜ್ಯ: 1, ರಾಜಭಯ: 1
• ಆರ್ಥಿಕ ವಿಶ್ಲೇಷಣೆ: ಸ್ಥಿರವಾದ ಆರ್ಥಿಕತೆ ಇರಲಿದೆ. ಉದ್ಯೋಗದಲ್ಲಿನ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ.
• ಆರೋಗ್ಯ: ಜನವರಿ ಮತ್ತು ಫೆಬ್ರವರಿಯಲ್ಲಿ ಶೀತ ಸಂಬಂಧಿ ಕಾಯಿಲೆಗಳಿಂದ ಬಳಲುವ ಸಾಧ್ಯತೆ ಇದೆ.
• ತಿಂಗಳ ಆಧಾರದಲ್ಲಿ ವಿವರ:
ಜನವರಿಯಿಂದ ಮಾರ್ಚ್: ಕೆಲಸದಲ್ಲಿ ಅತಿಯಾದ ಜವಾಬ್ದಾರಿಗಳು ಹೆಗಲೇರಲಿವೆ. ದಣಿವು ಅಧಿಕವಾಗುವುದು.
ಏಪ್ರಿಲ್ ನಿಂದ ಜೂನ್: ಏಪ್ರಿಲ್ನಲ್ಲಿ ದೊಡ್ಡ ಯೋಜನೆಯೊಂದು ಕೈಗೂಡಲಿದೆ. ವ್ಯಾಪಾರಿಗಳಿಗೆ ಉತ್ತಮ ಕಾಲ.
ಜುಲೈನಿಂದ ಸೆಪ್ಟೆಂಬರ್: ಮಗ ಅಥವಾ ಮಗಳ ವಿವಾಹ ನಿಶ್ಚಯವಾಗಬಹುದು. ಮನೆಯಲ್ಲಿ ಸಂಭ್ರಮದ ವಾತಾವರಣ.
ಅಕ್ಟೋಬರ್ ನಿಂದ ಡಿಸೆಂಬರ್: ನವೆಂಬರ್ನಲ್ಲಿ ಮಾನಸಿಕವಾಗಿ ಸ್ವಲ್ಪ ಜಡತ್ವ ಉಂಟಾಗಬಹುದು. ಕೇತು- ಗುರು ಗ್ರಹದ ಆರಾಧನೆ ಅಗತ್ಯ.
11. ಕುಂಭ ರಾಶಿ
• ಆಯ: 14, ವ್ಯಯ: 14 | ರಾಜಪೂಜ್ಯ: 4, ರಾಜಭಯ: 4
• ಆರ್ಥಿಕ ವಿಶ್ಲೇಷಣೆ: ಆರ್ಥಿಕ ಏರಿಳಿತಗಳು ಕಾಣಿಸಲಿವೆ. ಶನಿ ಪ್ರಭಾವದಿಂದ ಹಠಾತ್ ಧನ ಹಾನಿ ಆಗಬಹುದು, ಜಾಗ್ರತೆ ವಹಿಸಿ.
• ಆರೋಗ್ಯ: ಜೂನ್ ತಿಂಗಳಲ್ಲಿ ಮೂಳೆ ಅಥವಾ ಕೀಲು ನೋವಿನ ಸಮಸ್ಯೆ ಕಾಡಬಹುದು.
• ತಿಂಗಳ ಆಧಾರದಲ್ಲಿ ವಿವರ:
ಜನವರಿಯಿಂದ ಮಾರ್ಚ್: ಮೊದಲ ಮೂರು ತಿಂಗಳು ಸಂಯಮದಿಂದ ಇರಬೇಕು. ಆರ್ಥಿಕವಾಗಿ ವಿಪರೀತ ಪ್ರಯೋಗಕ್ಕೆ ಇಳಿದಲ್ಲಿ ಸೋಲಾಗುವ ಸಂಭವವಿದೆ.
ಏಪ್ರಿಲ್ ನಿಂದ ಜೂನ್: ಜೂನ್ ನಂತರ ಪರಿಸ್ಥಿತಿ ನಿಮ್ಮ ಪರವಾಗಿ ತಿರುಗಲಿದೆ. ಬಂಧುಗಳ ನೆರವು ಸಿಗಲಿದೆ.
ಜುಲೈನಿಂದ ಸೆಪ್ಟೆಂಬರ್: ಆಗಸ್ಟ್ನಲ್ಲಿ ಅದೃಷ್ಟ ಪರೀಕ್ಷೆಗೆ ಹೋಗಬೇಡಿ. ಶ್ರಮವನ್ನೇ ನೆಚ್ಚಿಕೊಳ್ಳಿ.
ಅಕ್ಟೋಬರ್ ನಿಂದ ಡಿಸೆಂಬರ್: ತೀರ್ಥಯಾತ್ರೆ ಮಾಡುವ ಯೋಗವಿದೆ. ಪುಣ್ಯಕ್ಷೇತ್ರಗಳ ದರ್ಶನದಿಂದ ಮನಸ್ಸಿಗೆ ಶಾಂತಿ.
12. ಮೀನ ರಾಶಿ
• ಆಯ: 5, ವ್ಯಯ: 2 | ರಾಜಪೂಜ್ಯ: 7, ರಾಜಭಯ: 7
• ಆರ್ಥಿಕ ವಿಶ್ಲೇಷಣೆ: ಆರ್ಥಿಕವಾಗಿ ಸದೃಢರಾಗುವಿರಿ. ಉಳಿತಾಯದ ಪ್ರಮಾಣ ಹೆಚ್ಚಾಗಲಿದೆ.
• ಆರೋಗ್ಯ: ಸಾಡೇಸಾತಿಯ ಪ್ರಭಾವದಿಂದಾಗಿ ಪದೇ ಪದೇ ಸಣ್ಣಪುಟ್ಟ ಕಾಯಿಲೆಗಳು ಕಾಡಬಹುದು. ಮಾರ್ಚ್ ಮತ್ತು ಸೆಪ್ಟೆಂಬರ್ನಲ್ಲಿ ಜಾಗ್ರತೆ.
• ತಿಂಗಳ ಆಧಾರದಲ್ಲಿ ವಿವರ:
ಜನವರಿಯಿಂದ ಮಾರ್ಚ್: ಅತಿ ಹೆಚ್ಚಿನ ಗೌರವ ಪ್ರಾಪ್ತಿಯಾಗಲಿದೆ. ಆದರೆ ವಿರೋಧಿಗಳು ಹುಟ್ಟಿಕೊಳ್ಳಬಹುದು.
ಏಪ್ರಿಲ್ ನಿಂದ ಜೂನ್: ಮೇ ತಿಂಗಳಲ್ಲಿ ದೊಡ್ಡ ಹೂಡಿಕೆ ಮಾಡುವಿರಿ. ಜೂನ್ನಲ್ಲಿ ರಾಜಕೀಯ ಕ್ಷೇತ್ರದಲ್ಲಿ ಇರುವವರಿಗೆ ಲಾಭ ಸಿಗಬಹುದು.
ಜುಲೈನಿಂದ ಸೆಪ್ಟೆಂಬರ್: ಆಡಳಿತ ವರ್ಗದೊಂದಿಗೆ ಕಲಹ ಬೇಡ. ಸೆಪ್ಟೆಂಬರ್ನಲ್ಲಿ ಮಾನಸಿಕ ಶಾಂತಿಗಾಗಿ ಯೋಗಾಭ್ಯಾಸ ಮಾಡಿ.
ಅಕ್ಟೋಬರ್ ನಿಂದ ಡಿಸೆಂಬರ್: ವರ್ಷದ ಕೊನೆಯಲ್ಲಿ ಕಳೆದುಹೋದ ಸಂಪತ್ತು ಮರಳಿ ಬರುವ ಯೋಗವಿದೆ. ಕುಟುಂಬದಲ್ಲಿ ಪರಸ್ಪರ ಪ್ರೀತಿ ಹೆಚ್ಚಲಿದೆ.
2026ರ ವರ್ಷ ಫಲ:
2026ನೇ ಇಸವಿಯು ‘ಪರಿವರ್ತನೆ’ಯ ವರ್ಷವಾಗಿದೆ. ಕರ್ಕಾಟಕ, ಧನು ಮತ್ತು ಮೀನ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ. ಸಿಂಹ ಮತ್ತು ಮೇಷ ರಾಶಿಯವರು ಆರ್ಥಿಕವಾಗಿ ಹೆಚ್ಚಿನ ಜಾಗ್ರತೆ ವಹಿಸಬೇಕು. ಯಾವುದೇ ರಾಶಿಯವರಾದರೂ ಕಠಿಣ ಪರಿಶ್ರಮ ಮತ್ತು ದೈವಭಕ್ತಿ ಇರಲಿ, ಈ ವರ್ಷದ ಸವಾಲುಗಳನ್ನು ಎದುರಿಸಿ ಸುಖವಾಗಿ ಜೀವನ ನಡೆಸಬಹುದು.
ಲೇಖನ- ಶ್ರೀನಿವಾಸ ಮಠ





