ರಾಮಾಯಣದಲ್ಲಿ ಬಹಳ ಮುಖ್ಯವಾದ ಪಾತ್ರಗಳದೊಂದು ಪಟ್ಟಿ ಮಾಡುವುದಾದರೆ ಜಟಾಯು ಹಾಗೂ ಸಂಪಾತಿ ಹೆಸರು ಸಹ ಕಂಡುಬರುತ್ತದೆ. ಕರ್ನಾಟಕ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷರ ಹೆಲಿಕಾಪ್ಟರ್ ಗೆ ಗರುಡ/ಹದ್ದು ಡಿಕ್ಕಿಯಾಗಿ, ಕಾಪ್ಟರ್ ಗಾಜು ಒಡೆದ ಸಂದರ್ಭದಲ್ಲಿ ತುರ್ತು ಭೂ ಸ್ಪರ್ಶ ಮಾಡಲಾಯಿತು. ಇಂಥ ಸನ್ನಿವೇಶದಲ್ಲಿ ಮತ್ತೆ ಜಟಾಯುವಿನ ಬಗ್ಗೆ ಚರ್ಚೆ ಮುನ್ನೆಲೆಗೆ ಬಂದಿದೆ. ಈ ಸಮಯಕ್ಕೆ ಹೋಲಿಕೆ ಸರಿಯೋ ತಪ್ಪೋ ಎಂಬುದು ಚಿಂತನೆ ಮಾಡುವವರಿಗೆ ಬಿಟ್ಟಂಥ ವಿಚಾರ. ಆದರೆ ಇಲ್ಲಿ ಜಟಾಯುವಿನ ಬಗ್ಗೆ ಪ್ರಸ್ತಾವ ಬಂದಿದೆಯಾದ್ದರಿಂದ ಯಾರು ಈ ಜಟಾಯ ಎಂಬ ಬಗ್ಗೆ ಮಾಹಿತಿ ನೀಡಲಾಗಿದೆ. ಜತೆಗೆ ಆತನ ಅಣ್ಣನಾದ ಸಂಪಾತಿಯ ಬಗ್ಗೆಯೂ ಮಾಹಿತಿ ಇದೆ.
ಆಧ್ಯಾತ್ಮಿಕ ಚಿಂತಕರು- ಹಿರಿಯರೂ ಆದ ಉತ್ತರಾದಿ ಮಠದ ಪಂಡಿತ್ ಭೀಮಸೇನಾಚಾರ್ ಅತನೂರ ಅವರು ಜಟಾಯು ಹಾಗೂ ಸಂಪಾತಿ ಬಗ್ಗೆ ಮಾಹಿತಿಪೂರ್ಣವಾದ ವಿವರಗಳನ್ನು ನೀಡಿದ್ದಾರೆ. ಅವರು ಹೇಳಿದ್ದರ ಧ್ವನಿಯ ವಿವರಣೆ ಇಲ್ಲಿ ನೀಡಲಾಗಿದೆ. ಜತೆಗೆ ಅದರಲ್ಲಿ ಅವರು ತಿಳಿಸಿದ್ದರ ಆಯ್ದ ಅಂಶಗಳನ್ನು ಮಾತ್ರ ಮುಂದೆ ನೀಡಲಾಗಿದೆ; ಓದಿಕೊಳ್ಳಿ.
ರಾಮಾಯಣದಲ್ಲಿ ರಾವಣನು ಸೀತಾಪಹರಣ ಮಾಡುವಾಗ ಜಟಾಯು ಕಂಡು, ಅವನಿಂದ ಸೀತೆಯನ್ನು ರಕ್ಷಿಸಲು ಬಹಳ ಹೋರಾಡುತ್ತಾನೆ. ಅಂಥ ದಶಕಂಠ, ಮಹಾನ್ ಪರಾಕ್ರಮಿ ರಾವಣನಿಗೂ ಜಟಾಯುವಿನ ದಾಳಿ ಅನಿರೀಕ್ಷಿತ ಹಾಗೂ ಬಹಳ ಭೀಕರವಾಗಿರುತ್ತದೆ.
ಕೊನೆಗೆ ರಾವಣನು ತನ್ನ ಖಡ್ಗದಿಂದ ಜಟಾಯುವನ್ನು ಇರಿದು, ನೆಲಕ್ಕೆ ಕೆಡುವುತ್ತಾನೆ. ಸೀತೆಯನ್ನು ಹುಡುಕಿಕೊಂಡು ಬರುವಾಗ ಜಟಾಯು ಕಂಡುಬರುತ್ತಾನೆ. ಆಗ ಅವನು ರಾಮನಿಗೆ ರಾವಣನ ಬಗ್ಗೆ ಹಾಗೂ ಆತನಿಂದ ಸೀತೆಯನ್ನು ರಕ್ಷಿಸಲು ಪಟ್ಟ ಶ್ರಮದ ಬಗ್ಗೆ ಮಾಹಿತಿಯನ್ನು ನೀಡುತ್ತಾನೆ. ಹಾಗೇ ಕೊನೆಯುಸಿರು ಎಳೆಯುತ್ತಾನೆ.
ಆ ನಂತರ ರಾಮನೇ ಜಟಾಯುವಿನ ಅಂತ್ಯಸಂಸ್ಕಾರವನ್ನು ಮಾಡುತ್ತಾನೆ. ಮಾಯಾಜಿಂಕೆಯ ರೂಪ ತಳೆದು ರಾಮನಿಂದ ಸೀತೆಯನ್ನು ದೂರ ಮಾಡುವ ಪ್ರಯತ್ನದಲ್ಲಿ ಮಾರೀಚ ತನ್ನ ಪ್ರಾಣವನ್ನೇ ಕಳೆದುಕೊಳ್ಳುತ್ತಾನೆ. ತನಗೆ ಸಹಾಯ ಮಾಡಲು ಬಂದ ಮಾರೀಚನಿಗೆ ಅಂತ್ಯಕ್ರಿಯೆಗಳನ್ನು ಮಾಡುವ ಬಗ್ಗೆ ಕೂಡ ರಾವಣ ಮುಂದಾಗುವುದಿಲ್ಲ.
ಆದರೆ, ತನಗೆ ಸಹಾಯ ಮಾಡಿದ ಹಾಗೂ ಪತ್ನಿ ಸೀತೆಯನ್ನು ರಕ್ಷಿಸಲು ಹೋರಾಟ ಮಾಡಿದ ಜಟಾಯುವಿಗಾಗಿ ರಾಮ ಅಂತ್ಯಕ್ರಿಯೆ ಮಾಡುತ್ತಾನೆ. ಸಜ್ಜನ ಹಾಗೂ ದುರ್ಜನರ ಗುಣ- ಸ್ವಭಾವದ ವ್ಯತ್ಯಾಸ ತಿಳಿಯುವುದಕ್ಕೆ ಈ ನಿದರ್ಶನ ಸಾಕು.
ಇನ್ನು ಇಲ್ಲಿರುವ ಪ್ರವಚನದ ಆಡಿಯೋದಲ್ಲಿ ಜಟಾಯುವಿನ ಅಣ್ಣ ಸಂಪಾತಿಯ ಬಗ್ಗೆ ಕೂಡ ಮಾಹಿತಿ ಇದೆ.
ಮಾಹಿತಿ: ಪಂಡಿತ್ ಭೀಮಸೇನಾಚಾರ್ ಅತನೂರ, ಪ್ರವಚನಕಾರರು ಕರ್ನಾಟಕದಾದ್ಯಂತ ಧರ್ಮ, ಜ್ಞಾನ ಪ್ರಸಾರ ಮಾಡುತ್ತಿರುವವರು ಹಾಗೂ ಹಲವಾರು ಟೀವಿ ಕಾರ್ಯಕ್ರಮಗಳಲ್ಲಿ ಭಾಗೀ ಆಗಿರುವವರು, ಬೆಂಗಳೂರಿನ ಉತ್ತರಾದಿ ಮಠದಲ್ಲಿ ವಿದ್ಯಾರ್ಥಿಗಳಿಗೆ ಪಾಠವನ್ನು ಸಹ ಮಾಡುತ್ತಾರೆ