ಶುಕ್ರ ಗ್ರಹದ ಹೆಸರು ಕೇಳಿದರೆ ಕಿವಿ ನೆಟ್ಟಗಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಸುಖ, ಸಮೃದ್ಧಿ, ಪ್ರೇಮ ಮತ್ತು ಐಷಾರಾಮಿ ಜೀವನದ ಅಧಿಪತಿಯಾದ ಶುಕ್ರನು 2026ರ ಜನವರಿ 13ರಂದು ಶನಿ ಗ್ರಹದ ಸ್ವಕ್ಷೇತ್ರವಾದ ಮಕರ ರಾಶಿಯನ್ನು ಪ್ರವೇಶಿಸಲಿದ್ದಾನೆ. ಫೆಬ್ರವರಿ 6ನೇ ತಾರೀಕಿನ ತನಕ ಅದೇ ರಾಶಿಯಲ್ಲಿ ಸಂಚಾರ ಮಾಡಲಿದ್ದಾನೆ. ಇನ್ನು ಮಕರವು ಪೃಥ್ವಿ ತತ್ವದ, ಶಿಸ್ತುಬದ್ಧ ರಾಶಿ ಆಗಿರುವುದರಿಂದ, ಇಲ್ಲಿ ಶುಕ್ರನ ಸಂಚಾರವು ಪ್ರೀತಿ ಮತ್ತು ಹಣಕಾಸಿನ ವಿಚಾರದಲ್ಲಿ ಹೆಚ್ಚು ಪ್ರಾಯೋಗಿಕ ಹಾಗೂ ಗಂಭೀರ ದೃಷ್ಟಿಕೋನವನ್ನು ನೀಡುತ್ತದೆ. ಶುಕ್ರ ಮತ್ತು ಮಕರ ರಾಶಿಯ ಅಧಿಪತಿಯಾದ ಶನಿಯು ಪರಸ್ಪರ ಮಿತ್ರ ಗ್ರಹಗಳಾಗಿದ್ದರೂ ಮಕರದಲ್ಲಿ ಶುಕ್ರನು ಸ್ವಲ್ಪ ‘ಗಂಭೀರ’ವಾಗಿ ವರ್ತಿಸುತ್ತಾನೆ. ಇಲ್ಲಿ ಪ್ರೇಮವು ಕೇವಲ ಆಕರ್ಷಣೆಯಾಗಿ ಉಳಿಯದೆ, ಜವಾಬ್ದಾರಿಯಾಗಿ ಬದಲಾಗುತ್ತದೆ. ಇನ್ನು ವೃಷಭ ಹಾಗೂ ತುಲಾ ರಾಶಿಗಳಿಗೆ ಶುಕ್ರನು ಅಧಿಪತಿ. ಮೀನ ರಾಶಿಯಲ್ಲಿ ಶುಕ್ರ ಉಚ್ಚ ಸ್ಥಿತಿಯನ್ನು ತಲುಪಿದರೆ, ಕನ್ಯಾ ರಾಶಿಯಲ್ಲಿ ನೀಚ ಸ್ಥಿತಿಯನ್ನು ತಲುಪುತ್ತಾನೆ. ಭರಣಿ, ಪುಬ್ಬಾ ಹಾಗೂ ಪೂರ್ವಾಷಾಢ ನಕ್ಷತ್ರಗಳಿಗೆ ಶುಕ್ರನು ಅಧಿಪತಿ ಆಗುತ್ತಾನೆ. ಇನ್ನು ಮಕರ ರಾಶಿಯಲ್ಲಿ ಶುಕ್ರ ಗ್ರಹದ ಈ ಸಂಚಾರದಿಂದ ಹನ್ನೆರಡು ರಾಶಿಗಳ ಮೇಲೆ ಆಗುವ ಪ್ರಭಾವ ಹೀಗಿದೆ:
ಮಕರ ರಾಶಿಯಲ್ಲಿ ಶುಕ್ರ ಪ್ರವೇಶ: ಯಾರಿಗೆ ಲಾಭ? ಯಾರಿಗೆ ಎಚ್ಚರಿಕೆ?
1. ಮೇಷ ರಾಶಿ (Aries)
ನಿಮ್ಮ ಹತ್ತನೇ ಮನೆಯಲ್ಲಿ ಶುಕ್ರನ ಸಂಚಾರ ನಡೆಯುವುದರಿಂದ ವೃತ್ತಿಜೀವನದಲ್ಲಿ ಅತ್ಯುತ್ತಮ ಪ್ರಗತಿ ಕಾಣಲಿದ್ದೀರಿ. ಕಚೇರಿಯಲ್ಲಿ ಸ್ತ್ರೀ ಸಹೋದ್ಯೋಗಿಗಳಿಂದ ಅನುಕೂಲ- ಲಾಭವಾಗಲಿದೆ. ಹೊಸ ಉದ್ಯೋಗದ ಹುಡುಕಾಟದಲ್ಲಿ ಇರುವವರಿಗೆ ಶುಭ ವಾರ್ತೆ ಸಿಗಲಿದೆ. ಸಮಾಜದಲ್ಲಿ ಗೌರವ ಹೆಚ್ಚಾಗಲಿದೆ.
2. ವೃಷಭ ರಾಶಿ (Taurus)
ಶುಕ್ರನು ನಿಮ್ಮ ರಾಶ್ಯಾಧಿಪತಿಯೇ ಆಗಿದ್ದು, ಭಾಗ್ಯ ಸ್ಥಾನದಲ್ಲಿ ಸಂಚರಿಸುತ್ತಿದ್ದಾನೆ. ಇದು ನಿಮಗೆ ಅದೃಷ್ಟದ ಕಾಲ. ಧಾರ್ಮಿಕ ಪ್ರವಾಸಗಳು ಕೈಗೂಡಲಿವೆ. ವಿದೇಶಿ ವ್ಯವಹಾರಗಳಿಂದ ಲಾಭವಾಗಲಿದೆ. ತಂದೆಯ ಜೊತೆಗಿನ ಸಂಬಂಧ ಸುಧಾರಿಸಲಿದ್ದು, ಆಸ್ತಿ ಹಂಚಿಕೆಯಲ್ಲಿ ಅನುಕೂಲ ಸಿಗಲಿದೆ.
3. ಮಿಥುನ ರಾಶಿ (Gemini)
ಎಂಟನೇ ಮನೆಯಲ್ಲಿ ಶುಕ್ರನ ಸಂಚಾರವು ಮಿಶ್ರ ಫಲ ನೀಡಲಿದೆ. ಅನಿರೀಕ್ಷಿತ ಧನಲಾಭವಾಗುವ ಸಂಭವವಿದ್ದರೂ, ಆರೋಗ್ಯದ ಬಗ್ಗೆ ಎಚ್ಚರವಿರಲಿ. ಗುಪ್ತ ಶತ್ರುಗಳ ಬಗ್ಗೆ ಜಾಗರೂಕರಾಗಿರಿ. ಸಂಶೋಧನಾ ಕ್ಷೇತ್ರದಲ್ಲಿ ಇರುವವರಿಗೆ ಇದು ಅತ್ಯುತ್ತಮವಾದ ಕಾಲ.
4. ಕಟಕ ರಾಶಿ (Cancer)
ಸಪ್ತಮ ಸ್ಥಾನದಲ್ಲಿ ಶುಕ್ರನ ಪ್ರವೇಶವು ವೈವಾಹಿಕ ಜೀವನದಲ್ಲಿ ಮಧುರತೆ ತರಲಿದೆ. ಪಾಲುದಾರಿಕೆ ವ್ಯವಹಾರದಲ್ಲಿ ದೊಡ್ಡ ಲಾಭವನ್ನು ನಿರೀಕ್ಷಿಸಬಹುದು. ಅವಿವಾಹಿತರಿಗೆ ವಿವಾಹ ಯೋಗ ಕೂಡಿಬರಲಿದೆ. ಸಾರ್ವಜನಿಕ ಜೀವನದಲ್ಲಿ ನಿಮ್ಮ ಇಮೇಜ್ ಸುಧಾರಿಸಲಿದೆ.
5. ಸಿಂಹ ರಾಶಿ (Leo)
ಆರನೇ ಮನೆಯಲ್ಲಿ ಶುಕ್ರನ ಸಂಚಾರವು ಶತ್ರುಗಳ ಮೇಲೆ ಜಯ ಸಾಧಿಸಲು ನೆರವಾಗಲಿದೆ. ಆದರೆ ಐಷಾರಾಮಿ ಜೀವನಕ್ಕಾಗಿ ಸಾಲ ಮಾಡುವುದನ್ನು ತಪ್ಪಿಸಿ. ಹಳೆಯ ಕಾಯಿಲೆಗಳು ಮರುಕಳಿಸದಂತೆ ಆಹಾರದ ಮೇಲೆ ನಿಯಂತ್ರಣವಿರಲಿ. ಕೋರ್ಟ್ ವ್ಯವಹಾರಗಳಲ್ಲಿ ಜಯ ಸಿಗಲಿದೆ.
6. ಕನ್ಯಾ ರಾಶಿ (Virgo)
ಪಂಚಮ ಸ್ಥಾನದಲ್ಲಿ ಶುಕ್ರನ ಸಂಚಾರವು ವಿದ್ಯಾರ್ಥಿಗಳಿಗೆ ಮತ್ತು ಕಲೆಯ ಕ್ಷೇತ್ರದವರಿಗೆ ವರದಾನವಾಗಲಿದೆ. ಪ್ರೇಮ ಸಂಬಂಧಗಳು ಗಟ್ಟಿಯಾಗಲಿವೆ. ಮಕ್ಕಳ ಪ್ರಗತಿಯಿಂದ ಮನಸ್ಸಿಗೆ ಶಾಂತಿ ಸಿಗಲಿದೆ. ಹೊಸ ಹೂಡಿಕೆಗಳಿಗೆ ಇದು ಅತ್ಯಂತ ಸೂಕ್ತ ಸಮಯ.
ಜನನ ವಾರ ಭವಿಷ್ಯ: ನೀವು ಜನಿಸಿದ ವಾರ ನಿಮ್ಮ ವ್ಯಕ್ತಿತ್ವದ ಬಗ್ಗೆ ಏನು ಹೇಳುತ್ತದೆ?
7. ತುಲಾ ರಾಶಿ (Libra)
ನಿಮ್ಮದೇ ರಾಶ್ಯಾಧಿಪತಿ ಚತುರ್ಥ ಸ್ಥಾನದಲ್ಲಿ ಸಂಚರಿಸುವುದರಿಂದ ಸುಖ-ಸೌಕರ್ಯಗಳು ಹೆಚ್ಚಾಗಲಿವೆ. ಹೊಸ ಮನೆ ಅಥವಾ ವಾಹನ ಖರೀದಿಸುವ ಯೋಗವಿದೆ. ತಾಯಿಯ ಆರೋಗ್ಯ ಸುಧಾರಿಸಲಿದೆ. ಮನೆಯಲ್ಲಿ ಮಂಗಳ ಕಾರ್ಯಗಳು ಜರುಗಲಿವೆ.
8. ವೃಶ್ಚಿಕ ರಾಶಿ (Scorpio)
ತೃತೀಯ ಸ್ಥಾನದಲ್ಲಿ ಶುಕ್ರನ ಸಂಚಾರವು ನಿಮ್ಮ ಪರಾಕ್ರಮವನ್ನು ಹೆಚ್ಚಿಸಲಿದೆ. ಸಣ್ಣ ಪ್ರವಾಸಗಳಿಂದ ಲಾಭವಾಗಲಿದೆ. ಸಹೋದರ-ಸಹೋದರಿಯರೊಂದಿಗೆ ಬಾಂಧವ್ಯ ಸುಧಾರಿಸಲಿದೆ. ಲೇಖಕರಿಗೆ ಮತ್ತು ಮಾಧ್ಯಮ ಕ್ಷೇತ್ರದವರಿಗೆ ಹೆಚ್ಚಿನ ಮನ್ನಣೆ ಸಿಗಲಿದೆ.
9. ಧನು ರಾಶಿ (Sagittarius)
ದ್ವಿತೀಯ ಸ್ಥಾನದಲ್ಲಿ ಶುಕ್ರನ ಸಂಚಾರವು ಆರ್ಥಿಕವಾಗಿ ನಿಮಗೆ ಬಲ ನೀಡಲಿದೆ. ಮಾತಿನ ಚಾತುರ್ಯದಿಂದ ಕಠಿಣ ಕೆಲಸಗಳನ್ನು ಸಾಧಿಸುವಿರಿ. ಕುಟುಂಬದಲ್ಲಿ ಸಂಭ್ರಮದ ವಾತಾವರಣವಿರಲಿದೆ. ಷೇರು ಮಾರುಕಟ್ಟೆಯಲ್ಲಿ ಲಾಭದ ಸಂಭವವಿದೆ.
10. ಮಕರ ರಾಶಿ (Capricorn)
ನಿಮ್ಮದೇ ರಾಶಿಯಲ್ಲಿ ಶುಕ್ರನ ಸಂಚಾರವು ನಿಮ್ಮ ವ್ಯಕ್ತಿತ್ವಕ್ಕೆ ಹೊಸ ಮೆರುಗು ನೀಡಲಿದೆ. ಜನರು ನಿಮ್ಮತ್ತ ಆಕರ್ಷಿತರಾಗುತ್ತಾರೆ. ವೈಯಕ್ತಿಕ ಜೀವನದಲ್ಲಿನ ಸುಧಾರಣೆಗೆ- ಸ್ಟೇಟಸ್ ಹೆಚ್ಚು ಮಾಡಿಕೊಳ್ಳಲು ಹಣ ಖರ್ಚು ಮಾಡುವಿರಿ. ಪ್ರೇಮ ಜೀವನವು ರೋಮಾಂಚನಕಾರಿಯಾಗಿರಲಿದೆ. ಆತ್ಮವಿಶ್ವಾಸ ಹೆಚ್ಚಾಗಲಿದೆ.
11. ಕುಂಭ ರಾಶಿ (Aquarius)
ಹನ್ನೆರಡನೇ ಮನೆಯಲ್ಲಿ ಶುಕ್ರನ ಸಂಚಾರವು ವಿದೇಶ ಪ್ರವಾಸದ ಯೋಗ ನೀಡಲಿದೆ. ಆದರೆ ಅನಗತ್ಯ ಖರ್ಚುಗಳ ಮೇಲೆ ನಿಗಾ ಇರಲಿ. ಹಾಸಿಗೆ- ಮಂಚ ಇಂಥವುಗಳಿಗೆ ಹೆಚ್ಚು ಹಣ ವ್ಯಯಿಸಬಹುದು. ಕಣ್ಣಿನ ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ. ಆಧ್ಯಾತ್ಮಿಕವಾಗಿ ಆಸಕ್ತಿ ಮೂಡಲಿದೆ.
12. ಮೀನ ರಾಶಿ (Pisces)
ಲಾಭ ಸ್ಥಾನದಲ್ಲಿ ಶುಕ್ರನ ಸಂಚಾರವು ನಿಮ್ಮ ಎಲ್ಲಾ ಆಸೆಗಳನ್ನು ಪೂರೈಸಲಿದೆ. ಹಿರಿಯ ಸಹೋದರರಿಂದ ಬೆಂಬಲ ಸಿಗಲಿದೆ. ಹೂಡಿಕೆಗಳಿಂದ ಭಾರಿ ಲಾಭವನ್ನು ನಿರೀಕ್ಷಿಸಬಹುದು. ಸಾಮಾಜಿಕ ವಲಯದಲ್ಲಿ ನಿಮ್ಮ ಪ್ರಭಾವ ಹೆಚ್ಚಾಗಲಿದೆ.
ಶುಕ್ರನು ಮಕರ ರಾಶಿಯಲ್ಲಿ ಇರುವ ಈ ಅವಧಿಯಲ್ಲಿ ಜಗತ್ತಿನ ಮೇಲೆ ಮತ್ತು ವ್ಯಕ್ತಿಗಳ ಮೇಲೆ ಕೆಲವು ವಿಶಿಷ್ಟ ಪ್ರಭಾವಗಳನ್ನು ಬೀರುತ್ತವೆ:
- ಆರ್ಥಿಕ ಶಿಸ್ತು: ಮಕರವು ಶನಿಯ ರಾಶಿಯಾದ್ದರಿಂದ, ಈ ಅವಧಿಯಲ್ಲಿ ಜನರು ಹಣಕಾಸಿನ ವಿಚಾರದಲ್ಲಿ ಸುಖಾಸುಮ್ಮನೆ ಖರ್ಚು ಮಾಡುವ ಬದಲು ಭವಿಷ್ಯದ ಉಳಿತಾಯದ ಬಗ್ಗೆ ಹೆಚ್ಚು ಗಂಭೀರವಾಗಿ ಯೋಚಿಸುತ್ತಾರೆ.
- ಸ್ಥಿರವಾದ ಸಂಬಂಧ: ಪ್ರೇಮ ಸಂಬಂಧಗಳಲ್ಲಿ ಕೇವಲ ಆಕರ್ಷಣೆಗಿಂತ ಹೆಚ್ಚಾಗಿ ‘ನಂಬಿಕೆ’ ಮತ್ತು ‘ಸ್ಥಿರತೆ’ಗೆ ಬೆಲೆ ಸಿಗುವ ಕಾಲವಿದು. ವಿವಾಹದ ಮಾತುಕತೆಗಳಿಗೆ ಈ 24 ದಿನಗಳು ಅತ್ಯಂತ ಪ್ರಶಸ್ತ.
- ರಿಯಲ್ ಎಸ್ಟೇಟ್ ಲಾಭ: ಭೂಮಿ ಮತ್ತು ಕಟ್ಟಡಗಳಿಗೆ ಸಂಬಂಧಿಸಿದ ವ್ಯವಹಾರಗಳು ಈ ಅವಧಿಯಲ್ಲಿ ಚುರುಕುಗೊಳ್ಳುತ್ತವೆ. ಮಕರವು ಪೃಥ್ವಿ ತತ್ವದ ರಾಶಿಯಾದ್ದರಿಂದ ಹೊಸ ಮನೆ ನಿರ್ಮಾಣ ಆರಂಭಿಸಲು ಇದು ಶುಭ ಕಾಲ.
- ಹಳೆಯ ವಸ್ತುಗಳಿಗೆ ಮೌಲ್ಯ: ಈ ಅವಧಿಯಲ್ಲಿ ಹಳೆಯ ಕಲೆ, ಪುರಾತನ ವಸ್ತುಗಳು ಅಥವಾ ಸಾಂಪ್ರದಾಯಿಕ ಉದ್ಯಮಗಳಿಗೆ ಹೆಚ್ಚಿನ ಬೇಡಿಕೆ ಮತ್ತು ಗೌರವ ಪ್ರಾಪ್ತಿಯಾಗಲಿದೆ.
ಸರಳ ಪರಿಹಾರ: ಶುಕ್ರನ ಕೃಪೆಗಾಗಿ ಪ್ರತಿದಿನ ಲಕ್ಷ್ಮಿ ದೇವಿಯನ್ನು ಆರಾಧಿಸಿ ಮತ್ತು ಶುಕ್ರವಾರದಂದು ಬಿಳಿ ಬಣ್ಣದ ವಸ್ತುಗಳನ್ನು (ಹಾಲು, ಸಕ್ಕರೆ ಅಥವಾ ಬಿಳಿ ವಸ್ತ್ರ) ದಾನ ಮಾಡಿ.
ಲೇಖನ– ಶ್ರೀನಿವಾಸ ಮಠ





