Sri Gurubhyo Logo

ಉಡುಪಿ ಶೀರೂರು ಮಠದ ಪರ್ಯಾಯ 2026: ವಾಮನ ತೀರ್ಥರಿಂದ ವೇದವರ್ಧನ ತೀರ್ಥರ ತನಕ ; ಇಲ್ಲಿದೆ ಮಠದ ಇತಿಹಾಸ, ಗುರು ಪರಂಪರೆ!

ಉಡುಪಿ ಪರ್ಯಾಯಕ್ಕೆ ಶೀರೂರು ಮಠದ ವೇದವರ್ಧನ ತೀರ್ಥರು ಹಾಗೂ ಶೀರೂರು ಮಠದ ಮುಖ್ಯ ದೇವತಾ ವಿಗ್ರಹಗಳು
ವೇದವರ್ಧನ ತೀರ್ಥರು (ಎಡಭಾಗದ ಚಿತ್ರ) ಬಲಭಾಗದಲ್ಲಿ ಶೀರೂರು ಮಠದ ಮುಖ್ಯ ದೇವರ ವಿಗ್ರಹಗಳು

ಇದೇ ಜನವರಿ 17-18 ವಿಶ್ವಪ್ರಸಿದ್ಧ ಉಡುಪಿ ಪರ್ಯಾಯ (Udupi Paryaya) ನಡೆಯುತ್ತದೆ. ಕೇವಲ ಧಾರ್ಮಿಕ ಉತ್ಸವವಲ್ಲ, ಅದು ಮಾಧ್ವ ಪರಂಪರೆಯ ಅಪ್ರತಿಮ ಸಂಸ್ಕೃತಿಯ ಸಂಕೇತ. ಜಗದ್ಗುರು ಶ್ರೀ ಮಧ್ವಾಚಾರ್ಯರಿಂದ (Sri Madhwacharya) ಸ್ಥಾಪಿತವಾದ ಅಷ್ಟಮಠಗಳ ಪೈಕಿ ಶೀರೂರು ಮಠ (Shiroor Matha) ಅತ್ಯಂತ ಪ್ರಮುಖವಾದುದು. ಎರಡು ವರ್ಷಗಳಿಗೊಮ್ಮೆ ನಡೆಯುವ ಈ ಪರ್ಯಾಯ ಪೀಠಾರೋಹಣವು ಈ ಬಾರಿ ಶೀರೂರು ಮಠದ ಪಾಲಿಗೆ ಬಂದಿದ್ದು, ಭಕ್ತರಲ್ಲಿ ಸಡಗರ ಮೂಡಿಸಿದೆ. ‘ಶೀರೂರು ಪರ್ಯಾಯ ನಮ್ಮ ಪರ್ಯಾಯ’ ಎಂಬುದು ಈ ಬಾರಿಯ ಘೋಷವಾಕ್ಯ. ಅನ್ನದಾನಕ್ಕೆ ಹಾಗೂ ಹಲವು ರೀತಿಯ ಸಾಮಾಜಿಕ ಕಾರ್ಯಗಳಿಗೆ ಶೀರೂರು ಮಠ ಪ್ರಸಿದ್ಧವಾದದ್ದು. ಮಠದ ಪೀಠಾಧಿಪತಿಗಳಾದ ವೇದವರ್ಧನ ತೀರ್ಥ ಶ್ರೀಪಾದರು (Sri Vedavardhana Teertha) ಇನ್ನು ಎರಡು ವರ್ಷಗಳ ಕಾಲ ಕೃಷ್ಣನ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಿದ್ದಾರೆ. ಶೀರೂರು ಮಠದ ಈ ಪರಂಪರೆಯು ಶತಮಾನಗಳ ಇತಿಹಾಸ ಹೊಂದಿದ್ದು, ವಿಶಿಷ್ಟ ಗುರು-ಶಿಷ್ಯ ಪರಂಪರೆಯನ್ನು ಉಳಿಸಿಕೊಂಡು ಬಂದಿದೆ. ಈ ಪವಿತ್ರ ಸಂದರ್ಭದಲ್ಲಿ ಮಠದ ಮೂಲ ಗುರುಗಳಿಂದ ಇಂದಿನವರೆಗೆ ಬಂದಿರುವ ಯತಿ ಪರಂಪರೆಯ ಪಟ್ಟಿ ಇಲ್ಲಿದೆ.

ಶೀರೂರು ಮಠದ ಗುರು ಪರಂಪರೆಯ ಪಟ್ಟಿ (Lineage of Shiroor Mutt)

ಕ್ರಮ ಸಂಖ್ಯೆ ಗುರುಗಳ ಹೆಸರು
1 ಶ್ರೀ ಮಧ್ವಾಚಾರ್ಯರು
2 ಶ್ರೀ ವಾಮನ ತೀರ್ಥರು
3 ಶ್ರೀ ವಾಸುದೇವ ತೀರ್ಥರು
4 ಶ್ರೀ ಪುಣ್ಯಶ್ಲೋಕ ತೀರ್ಥರು
5 ಶ್ರೀ ವೇದಾಗಮ್ಯ ತೀರ್ಥರು
6 ಶ್ರೀ ವೇದವ್ಯಾಸ ತೀರ್ಥರು
7 ಶ್ರೀ ವೇದವೇದ್ಯ ತೀರ್ಥರು
8 ಶ್ರೀ ಮಹೀಶ ತೀರ್ಥರು
9 ಶ್ರೀ ಕೃಷ್ಣ ತೀರ್ಥರು
10 ಶ್ರೀ ರಾಘವ ತೀರ್ಥರು
11 ಶ್ರೀ ಸುರೇಶ ತೀರ್ಥರು
12 ಶ್ರೀ ವೇದಭೂಷಣ ತೀರ್ಥರು
13 ಶ್ರೀ ಶ್ರೀನಿವಾಸ ತೀರ್ಥರು
14 ಶ್ರೀ ವೇದನಿಧಿ ತೀರ್ಥರು
15 ಶ್ರೀ ಶ್ರೀಧರ ತೀರ್ಥರು
16 ಶ್ರೀ ಯಾದವೋತ್ತಮ ತೀರ್ಥರು
17 ಶ್ರೀ ರಾಘವೋತ್ತಮ ತೀರ್ಥರು
18 ಶ್ರೀ ಲಕ್ಷ್ಮೀನಾರಾಯಣ ತೀರ್ಥರು
19 ಶ್ರೀ ವಿಶ್ವಭೂಷಣ ತೀರ್ಥರು
20 ಶ್ರೀ ಲಕ್ಷ್ಮೀಕಾಂತ ತೀರ್ಥರು
21 ಶ್ರೀ ಲಕ್ಷ್ಮೀನಾರಾಯಣ ತೀರ್ಥರು
22 ಶ್ರೀ ಲಕ್ಷ್ಮೀಪತಿ ತೀರ್ಥರು
23 ಶ್ರೀ ಲಕ್ಷ್ಮೀಧರ ತೀರ್ಥರು
24 ಶ್ರೀ ಲಕ್ಷ್ಮೀರಮಣ ತೀರ್ಥರು
25 ಶ್ರೀ ಲಕ್ಷ್ಮೀಮನೋಹರ ತೀರ್ಥರು
26 ಶ್ರೀ ಲಕ್ಷ್ಮೀಪ್ರಿಯ ತೀರ್ಥರು
27 ಶ್ರೀ ಲಕ್ಷ್ಮೀವಲ್ಲಭ ತೀರ್ಥರು
28 ಶ್ರೀ ಲಕ್ಷ್ಮೀಸಮುದ್ರ ತೀರ್ಥರು
29 ಶ್ರೀ ಲಕ್ಷ್ಮೀಂದ್ರ ತೀರ್ಥರು
30 ಶ್ರೀ ಲಕ್ಷ್ಮೀವರ ತೀರ್ಥರು
31 ಶ್ರೀ ವೇದವರ್ಧನ ತೀರ್ಥರು

ಉಡುಪಿ ಪರ್ಯಾಯ 2026: ಶ್ರೀಗುರುಭ್ಯೋ.ಕಾಮ್‌ನಲ್ಲಿ ಶೀರೂರು ಮಠದ ಶ್ರೀ ವೇದವರ್ಧನ ತೀರ್ಥರ ಎಕ್ಸ್‌ಕ್ಲೂಸಿವ್ ಸಂದರ್ಶನ

ಶೀರೂರು ಮಠ: ಇತಿಹಾಸ ಮತ್ತು ಮೂಲ ಮಠದ ಕುರಿತು ಪ್ರಶ್ನೋತ್ತರಗಳು

ಪ್ರಶ್ನೆ 1: ಶೀರೂರು ಮಠದ ‘ಮೂಲ ಮಠ’ ಎಲ್ಲಿದೆ? 

ಉತ್ತರ: ಶೀರೂರು ಮಠದ ಮೂಲ ಮಠವು ಉಡುಪಿ ಜಿಲ್ಲೆಯ ಉಡುಪಿ ತಾಲ್ಲೂಕಿನ ಶೀರೂರುಎಂಬ ಗ್ರಾಮದಲ್ಲಿದೆ. ಇದು ಉಡುಪಿಯಿಂದ ಹಿರಿಯಡ್ಕ ಮಾರ್ಗವಾಗಿ ಸುಮಾರು 20 ಕಿ.ಮೀ ದೂರದಲ್ಲಿದೆ. ಸ್ವರ್ಣ ನದಿಯ ತಟದಲ್ಲಿರುವ ಈ ಪ್ರದೇಶವು ಅತ್ಯಂತ ಪ್ರಶಾಂತವಾಗಿದ್ದು, ಮಠದ ಆಧ್ಯಾತ್ಮಿಕ ಕೇಂದ್ರವಾಗಿದೆ.

ಪ್ರಶ್ನೆ 2: ಶೀರೂರು ಮಠದ ಮೂಲ ವಿಗ್ರಹ (ಆರಾಧ್ಯ ದೈವ) ಯಾವುದು? 

ಉತ್ತರ: ಶ್ರೀ ಮಧ್ವಾಚಾರ್ಯರು ಶೀರೂರು ಮಠದ ಪ್ರಥಮ ಪೀಠಾಧಿಪತಿಗಳಾದ ಶ್ರೀ ವಾಮನ ತೀರ್ಥರಿಗೆ ‘ಶ್ರೀ ವಿಠ್ಠಲ’ (ದಿಗ್ವಿಜಯ ವಿಠ್ಠಲ) ವಿಗ್ರಹವನ್ನು ಪೂಜೆಗಾಗಿ ಅನುಗ್ರಹಿಸಿದರು. ಈ ವಿಗ್ರಹವು ಮಠದ ಅತ್ಯಂತ ಪವಿತ್ರವಾದ ಮೂಲ ವಿಗ್ರಹವಾಗಿದೆ. ಇದರೊಂದಿಗೆ ಶ್ರೀ ಲಕ್ಷ್ಮೀನಾರಾಯಣ ಮತ್ತು ಇತರ ದೇವತಾ ವಿಗ್ರಹಗಳನ್ನೂ ಮಠದಲ್ಲಿ ಪೂಜಿಸಲಾಗುತ್ತದೆ.

ಪ್ರಶ್ನೆ 3: ಈ ಮಠದ ಮೊದಲ ಪೀಠಾಧಿಪತಿಗಳು ಯಾರು? 

ಉತ್ತರ: ಶ್ರೀ ಮಧ್ವಾಚಾರ್ಯರ ನೇರ ಶಿಷ್ಯರಾದ ಶ್ರೀ ವಾಮನ ತೀರ್ಥರು ಶೀರೂರು ಮಠದ ಪರಂಪರೆಯ ಮೊದಲ ಯತಿಗಳು. ಇವರು ಶ್ರೀ ಮಧ್ವಾಚಾರ್ಯರಿಂದ ಸನ್ಯಾಸ ದೀಕ್ಷೆ ಮತ್ತು ಅನುಗ್ರಹವನ್ನು ಪಡೆದವರು.

ಪ್ರಶ್ನೆ 4: ಶೀರೂರು ಮಠಕ್ಕೆ ‘ವಾಮನ ತೀರ್ಥರ ಮಠ’ ಎಂಬ ಹೆಸರು ಬರಲು ಕಾರಣವೇನು? ಉತ್ತರ: 

ಮಠದ ಸ್ಥಾಪಕ ಯತಿಗಳಾದ ಶ್ರೀ ವಾಮನ ತೀರ್ಥರ ಹೆಸರಿನಿಂದಲೇ ಈ ಮಠಕ್ಕೆ ಮೊದಲು ಗುರುತಿಸಿಕೊಳ್ಳುವಿಕೆ ಇತ್ತು. ಕಾಲಕ್ರಮೇಣ ಮಠದ ಆಡಳಿತ ಕೇಂದ್ರವು ಶೀರೂರು ಗ್ರಾಮದಲ್ಲಿ ಸ್ಥಾಪಿತವಾದ ಕಾರಣ ಇದು ‘ಶೀರೂರು ಮಠ’ ಎಂದು ಪ್ರಸಿದ್ಧಿಯಾಯಿತು.

ಪ್ರಶ್ನೆ 5: ಉಡುಪಿ ಶ್ರೀಕೃಷ್ಣ ಮಠಕ್ಕೂ ಶೀರೂರು ಮಠಕ್ಕೂ ಇರುವ ಸಂಬಂಧವೇನು? 

ಉತ್ತರ: ಉಡುಪಿಯ ಅಷ್ಟಮಠಗಳಲ್ಲಿ ಶೀರೂರು ಮಠವೂ ಒಂದು. ಮಧ್ವಾಚಾರ್ಯರು ಕೃಷ್ಣನ ಪೂಜೆಗಾಗಿ ಎಂಟು ಮಠಗಳನ್ನು ಸ್ಥಾಪಿಸಿದಾಗ, ಶೀರೂರು ಮಠಕ್ಕೆ ಕೃಷ್ಣನ ಪೂಜೆಯ ಹಕ್ಕನ್ನು ನೀಡಿದರು. ಪರ್ಯಾಯ ಕ್ರಮದ ಪ್ರಕಾರ, ಪ್ರತಿ 14 ವರ್ಷಕ್ಕೊಮ್ಮೆ (ಈಗಿನ 2 ವರ್ಷದ ಅವಧಿಯಂತೆ) ಶೀರೂರು ಮಠದ ಯತಿಗಳಿಗೆ ಶ್ರೀಕೃಷ್ಣನ ಪೂಜಾ ಅಧಿಕಾರ ಲಭಿಸುತ್ತದೆ.

ಪ್ರಶ್ನೆ 6: ಈ ಬಾರಿಯ ಪರ್ಯಾಯದ ವಿಶೇಷತೆಯೇನು? 

ಉತ್ತರ: ಈ ಬಾರಿ (2026) ಶೀರೂರು ಮಠದ 31ನೇ ಪೀಠಾಧಿಪತಿಗಳಾದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಪರ್ಯಾಯ ಪೀಠವನ್ನೇರುತ್ತಿದ್ದಾರೆ. ಇದು ಅವರ ಮೊದಲ ಪರ್ಯಾಯವಾಗಿದ್ದು, ಮಠದ ಭಕ್ತವೃಂದಕ್ಕೆ ಇದು ಸಂಭ್ರಮದ ವಿಷಯವಾಗಿದೆ.

ಶ್ರೀ ವೇದವರ್ಧನ ತೀರ್ಥ ಶ್ರೀಪಾದರ ಪರಿಚಯ

ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಶೀರೂರು ಮಠದ 31ನೇ ಪೀಠಾಧಿಪತಿಗಳಾದ ಶ್ರೀ ವೇದವರ್ಧನ ತೀರ್ಥರು ಈ ಬಾರಿಯ ಪರ್ಯಾಯ ಪೀಠವನ್ನೇರುತ್ತಿರುವ ಯುವ ಯತಿಗಳು. ಇವರ ಪೂರ್ವಾಶ್ರಮದ ಹೆಸರು ಅನಿರುದ್ಧ ಸರಳತ್ತಾಯ. ಧರ್ಮಸ್ಥಳದ ಬಳಿಯ ನಿಡ್ಲೆ ಮೂಲದ ಪ್ರಸಿದ್ಧ ವಿದ್ವಾಂಸರಾದ ಉದಯಕುಮಾರ್ ಸರಳತ್ತಾಯ ಮತ್ತು ಶ್ರೀವಿದ್ಯಾ ಸರಳತ್ತಾಯ ಪೂರ್ವಾಶ್ರಮದ ತಂದೆ-ತಾಯಿ. ಜನನ ಆಗಿದ್ದು 2005ರ ಸೆಪ್ಟೆಂಬರ್ 30ರಂದು, ಉಡುಪಿಯಲ್ಲಿ. ಈಗ ವಯಸ್ಸು ಇಪ್ಪತ್ತು ವರ್ಷ. ಬಾಲ್ಯದಿಂದಲೂ ವೇದವರ್ಧನರಿಗೆ ಆಧ್ಯಾತ್ಮಿಕತೆಯ ಕಡೆಗೆ ಹೆಚ್ಚಿನ ಒಲವು ಇತ್ತು. 2018ರಲ್ಲಿ ಶೀರೂರು ಮಠದ ಶ್ರೀ ಲಕ್ಷ್ಮೀವರ ತೀರ್ಥರ ನಿಧನದ ನಂತರ ತೆರವಾಗಿದ್ದ ಪೀಠಕ್ಕೆ, ಸೋದೆ ಮಠದ ವಿಶ್ವವಲ್ಲಭ ತೀರ್ಥ ಶ್ರೀಪಾದರ ಮಾರ್ಗದರ್ಶನದಲ್ಲಿ ಇವರಿಗೆ 14-5-2021ರ ಅಕ್ಷಯ ತೃತೀಯದಂದು  ಸನ್ಯಾಸ ದೀಕ್ಷೆಯನ್ನು ನೀಡಲಾಯಿತು. ಶಿರಸಿಯ ಸೋದೆ ಮಠದಲ್ಲಿ ನಡೆದ ಈ ಧಾರ್ಮಿಕ ವಿಧಿಯ ನಂತರ ‘ವೇದವರ್ಧನ ತೀರ್ಥ’ ಎಂಬ ಹೆಸರಿನೊಂದಿಗೆ ಶೀರೂರು ಮಠದ ಉತ್ತರಾಧಿಕಾರಿಯಾಗಿ ನಿಯುಕ್ತರಾದರು. ಇವರು ಅಲ್ಪಾವಧಿಯಲ್ಲೇ ವೇದ-ವೇದಾಂತಗಳ ಅಭ್ಯಾಸ ಮಾಡಿ, ಶಾಸ್ತ್ರ ಪಾಂಡಿತ್ಯವನ್ನು ಗಳಿಸಿದ್ದಾರೆ.

ಶೀರೂರು ಮಠದ ಪ್ರಮುಖ ಮಾಹಿತಿಯ ಸಾರಾಂಶ

ವಿಶೇಷತೆ ವಿವರ
ಸ್ಥಾಪಕರು ಶ್ರೀ ಮಧ್ವಾಚಾರ್ಯರು
ಪ್ರಥಮ ಶಿಷ್ಯರು ಶ್ರೀ ವಾಮನ ತೀರ್ಥರು
ಮೂಲ ದೇವರು ಶ್ರೀ ವಿಠ್ಠಲ (ದಿಗ್ವಿಜಯ ವಿಠ್ಠಲ)
ಮೂಲ ಸ್ಥಳ ಶೀರೂರು ಗ್ರಾಮ (ಉಡುಪಿ ಸಮೀಪ)
ದ್ವಂದ್ವ ಮಠ ಸೋದೆ ಮಠ (ಶೀರೂರು ಮತ್ತು ಸೋದೆ ಮಠಗಳು ಪರಸ್ಪರ ದ್ವಂದ್ವ ಮಠಗಳು)

ಲೇಖನ- ಶ್ರೀನಿವಾಸ ಮಠ

ಶ್ರೀನಿವಾಸ ಮಠ

ಸಂಪಾದಕರು, ಶ್ರೀಗುರುಭ್ಯೋ.ಕಾಮ್

ಪತ್ರಿಕೋದ್ಯಮದಲ್ಲಿ ಹದಿನೆಂಟು ವರ್ಷಕ್ಕೂ ಹೆಚ್ಚು ಅನುಭವ ಇರುವ ಲೇಖಕ. ಕನ್ನಡದ ಪ್ರಮುಖ ದಿನಪತ್ರಿಕೆಗಳು ಹಾಗೂ ವಾರಪತ್ರಿಕೆ ಮತ್ತು ಆನ್ ಲೈನ್ ವೆಬ್ ಪೋರ್ಟಲ್ ಗಳಲ್ಲಿ ವಿವಿಧ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ವೈದಿಕ ಜ್ಯೋತಿಷ್ಯವನ್ನು ಪದ್ಧತಿಯಿಂದ ಅಭ್ಯಾಸ ಮಾಡಿರುವಂಥ ಇವರು, ಈ ತನಕ ಮೂರು ಸಾವಿರಕ್ಕೂ ಹೆಚ್ಚು ಜ್ಯೋತಿಷ್ಯ ಲೇಖನಗಳನ್ನು ವಿವಿಧ ವೆಬ್ ಪೋರ್ಟಲ್ ಗಳಿಗಾಗಿ ಬರೆದಿದ್ದಾರೆ. ಅಧ್ಯಾತ್ಮ, ಜ್ಯೋತಿಷ್ಯ ಹಾಗೂ ಧಾರ್ಮಿಕ ವಿಷಯಗಳಲ್ಲಿ ಅಳವಾದ ಜ್ಞಾನ ಮತ್ತು ನಿರಂತರ ಅಧ್ಯಯನ ಇರುವಂಥ ಶ್ರೀನಿವಾಸ ಮಠ ಸದ್ಯಕ್ಕೆ ಬೆಂಗಳೂರಿನಲ್ಲಿ ವಾಸವಿದ್ದು, ಜ್ಯೋತಿಷ್ಯವನ್ನು ವೃತ್ತಿಯಾಗಿ ಸ್ವೀಕರಿಸಿದ್ದಾರೆ.

Latest News

Related Posts