ಮಾಧ್ವ ಯತಿಗಳಾದ ವಾದಿರಾಜರು ತಮ್ಮ ತೀರ್ಥಪ್ರಬಂಧದಲ್ಲಿ ಉಲ್ಲೇಖ ಮಾಡಿರುವಂಥ ಕ್ಷೇತ್ರಗಳಲ್ಲಿ ತಿರುಕೋಯಿಲೂರ್ ನಲ್ಲಿ ಇರುವಂಥ ತ್ರಿವಿಕ್ರಮ ದೇವಸ್ಥಾನವೂ ಒಂದು. ತುಂಬ ಅಪರೂಪದ ತ್ರಿವಿಕ್ರಮರ ಶಿಲಾ ಮೂರ್ತಿಯನ್ನು ಇಲ್ಲಿ ಕಾಣಬಹುದು. ತಮಿಳುನಾಡಿನ ಕಲ್ಲಕುರಿಚಿ ಜಿಲ್ಲೆಯಲ್ಲಿರುವ (ಈ ಹಿಂದೆ ವಿಲ್ಲುಪುರಂ) ತಿರುಕೋಯಿಲೂರ್ ಶ್ರೀ ತ್ರಿವಿಕ್ರಮ ದೇವಸ್ಥಾನವನ್ನು ಉಲಗಳಂದ ಪೆರುಮಾಳ್ ದೇವಸ್ಥಾನ ಎಂದೂ ಕರೆಯುತ್ತಾರೆ. ಅತ್ಯಂತ ಪುರಾತನ ಮತ್ತು ಪವಿತ್ರವಾದ ವಿಷ್ಣು ದೇವಾಲಯಗಳಲ್ಲಿ ಒಂದಾಗಿದೆ. ಈ ದೇವಾಲಯವು ಶ್ರೀವೈಷ್ಣವರ 108 ದಿವ್ಯದೇಶಗಳಲ್ಲಿ 42ನೇ ದಿವ್ಯದೇಶ ಎಂದು ಪ್ರಸಿದ್ಧಿಯಾಗಿದೆ. ತಿರುಕೋಯಿಲೂರ್ ನಲ್ಲಿ ಉತ್ತರಾದಿಮಠದ ಪರಂಪರೆಯಲ್ಲಿ ಬರುವಂಥ ರಘೂತ್ತಮ ತೀರ್ಥರು ವೃಂದಾವನವಿದೆ. ರಘೂತ್ತಮರ ವೃಂದಾವನಕ್ಕೆ ಅಭಿಷೇಕ ಮಾಡಿದ ನೀರನ್ನು ಪ್ರೋಕ್ಷಣೆ ಮಾಡಿಸಿಕೊಂಡರೆ ನಕಾರಾತ್ಮಕ ಶಕ್ತಿಗಳು ದೂರವಾಗುತ್ತವೆ ಎಂಬುದು ನಂಬಿಕೆ. ಈ ಕ್ಷೇತ್ರದ ಬಗ್ಗೆ ತಿಳಿಸುತ್ತಾ ಹೋದರೆ ಅದು ಮತ್ತೊಂದು ಲೇಖನವೇ ಆಗುತ್ತದೆ.
ಈಗ ಮತ್ತೆ ತಿರುಕೋಯಿಲೂರ್ ತ್ರಿವಿಕ್ರಮ ದೇವರ ದೇವಾಲಯದ ವಿವರಗಳಿಗೆ ಬರುವುದಾದರೆ,
ದೇವಾಲಯದ ಇತಿಹಾಸ ಮತ್ತು ಹಿನ್ನೆಲೆ
- ವಾಮನ ಅವತಾರ: ಇಲ್ಲಿ ಶ್ರೀಮನ್ನಾರಾಯಣನು ವಾಮನನಾಗಿ ಬಂದು, ಬಲಿ ಚಕ್ರವರ್ತಿಯ ಅಹಂಕಾರವನ್ನು ಅಳಿಸಿ, ತ್ರಿವಿಕ್ರಮನಾಗಿ ಬೆಳೆದು ಮೂರು ಲೋಕಗಳನ್ನು ಅಳೆದ ಸ್ಥಳವಿದು ಎಂದು ಪುರಾಣಗಳು ಹೇಳುತ್ತವೆ.
- ವಿಶಿಷ್ಟ ವಿಗ್ರಹ: ಇಲ್ಲಿನ ಮೂಲ ವಿಗ್ರಹವು ‘ದಾರು’ (ಮರ) ದಿಂದ ಮಾಡಲಾಗಿದೆ. ತ್ರಿವಿಕ್ರಮ ಸ್ವಾಮಿಯು ತನ್ನ ಬಲಗಾಲನ್ನು ಆಕಾಶಕ್ಕೆ ಎತ್ತಿ ಹಿಡಿದಿರುವ ಭಂಗಿಯಲ್ಲಿ ದರ್ಶನ ನೀಡುತ್ತಾನೆ. ಸಾಮಾನ್ಯವಾಗಿ ವಿಷ್ಣುವು ಬಲಗೈಯಲ್ಲಿ ಚಕ್ರ ಮತ್ತು ಎಡಗೈಯಲ್ಲಿ ಶಂಖವನ್ನು ಹಿಡಿದಿರುತ್ತಾನೆ, ಆದರೆ ಇಲ್ಲಿ ಚಕ್ರವು ಎಡಗೈಯಲ್ಲಿದೆ ಮತ್ತು ಶಂಖವು ಬಲಗೈಯಲ್ಲಿದೆ.
- ಆಳ್ವಾರುಗಳ ಸಂಗಮ: ಶ್ರೀವೈಷ್ಣವ ಪಂಥದ ಮೊದಲ ಮೂವರು ಆಳ್ವಾರುಗಳಾದ ಪೊಯ್ಗೈ ಆಳ್ವಾರ್, ಭೂತತ್ತಾಳ್ವಾರ್ ಮತ್ತು ಪೇಯಾಳ್ವಾರ್ ಅವರು ಒಟ್ಟಾಗಿ ಮೊದಲ ಬಾರಿಗೆ ಭೇಟಿಯಾದ ಪವಿತ್ರ ಸ್ಥಳವಿದು.
ದೇವಾಲಯದ ವಾಸ್ತುಶಿಲ್ಪ
ಈ ದೇವಾಲಯವು ದ್ರಾವಿಡ ಶೈಲಿಯಲ್ಲಿದೆ. ಇಲ್ಲಿನ ರಾಜಗೋಪುರವು ತಮಿಳುನಾಡಿನಲ್ಲೇ ಮೂರನೇ ಅತಿ ಎತ್ತರದ ಗೋಪುರವಾಗಿದ್ದು, ಸುಮಾರು 192 ಅಡಿ ಎತ್ತರವಿದೆ ಮತ್ತು 11 ಅಂತಸ್ತುಗಳನ್ನು ಹೊಂದಿದೆ.
ಭೇಟಿ ನೀಡುವುದರ ಫಲ
- ದೋಷ ನಿವಾರಣೆ: ಜಾತಕದಲ್ಲಿರುವ ರಾಹು-ಕೇತು ದೋಷಗಳು ಮತ್ತು ಶನಿಯ ಪ್ರಭಾವವನ್ನು ತಗ್ಗಿಸಲು ಈ ದೇವಸ್ಥಾನದ ಭೇಟಿ ಫಲಕಾರಿ ಎಂದು ನಂಬಲಾಗಿದೆ.
- ವಿವಾಹ ಮತ್ತು ಸಂತಾನ: ಇಲ್ಲಿನ ತಾಯಾರ್ (ಮಹಾಲಕ್ಷ್ಮಿ) ‘ಪೂಂಗೋತೈ’ ಅಥವಾ ‘ಪುಷ್ಪವಲ್ಲಿ’ ದೇವಿಯನ್ನು ಪೂಜಿಸುವುದರಿಂದ ವಿವಾಹದಲ್ಲಿನ ಅಡೆತಡೆಗಳು ನಿವಾರಣೆಯಾಗಿ, ಸಂತಾನ ಭಾಗ್ಯ ಲಭಿಸುತ್ತದೆ ಎಂಬ ನಂಬಿಕೆಯಿದೆ.
- ಅಹಂಕಾರ ನಾಶ ಮತ್ತು ಜಯ: ಬಲಿ ಚಕ್ರವರ್ತಿಯ ಅಹಂಕಾರ ಅಳಿದಂತೆ, ಇಲ್ಲಿಗೆ ಭೇಟಿ ನೀಡುವ ಭಕ್ತರಿಗೆ ಮಾನಸಿಕ ಶಾಂತಿ ಸಿಗುತ್ತದೆ ಮತ್ತು ಶತ್ರುಗಳ ಮೇಲೆ ಜಯ ಲಭಿಸುತ್ತದೆ ಎನ್ನಲಾಗುತ್ತದೆ.
ದೇವಾಲಯದ ಭೇಟಿ ಸಮಯ
ದೇವಸ್ಥಾನವು ದಿನವಿಡೀ ತೆರೆದಿರುವುದಿಲ್ಲ, ಪೂಜೆಯ ವಿಧಿವಿಧಾನಗಳಿಗಾಗಿ ಮಧ್ಯಾಹ್ನ ವಿರಾಮವಿರುತ್ತದೆ:
ಬೆಳಗ್ಗೆ 6ರಿಂದ ಮಧ್ಯಾಹ್ನ 12
ಸಂಜೆ 4ರಿಂದ ರಾತ್ರಿ 8.30
(ವಿಶೇಷ ಹಬ್ಬದ ದಿನಗಳಲ್ಲಿ ಮತ್ತು ವೈಕುಂಠ ಏಕಾದಶಿಯ ಸಮಯದಲ್ಲಿ ಸಮಯ ಬದಲಾಗಬಹುದು.)
ತಲುಪುವ ಹಾದಿ
- ರಸ್ತೆ ಮಾರ್ಗ: ತಿರುಕೋಯಿಲೂರ್ ಪಟ್ಟಣವು ತಿರುವಣ್ಣಾಮಲೆಯಿಂದ ಸುಮಾರು 35 ಕಿ.ಮೀ ಮತ್ತು ವಿಲ್ಲುಪುರಂನಿಂದ 40 ಕಿ.ಮೀ ದೂರದಲ್ಲಿದೆ.
- ರೈಲು ಮಾರ್ಗ: ತಿರುಕೋಯಿಲೂರ್ ರೈಲ್ವೆ ನಿಲ್ದಾಣವು ಹತ್ತಿರದ ನಿಲ್ದಾಣವಾಗಿದೆ (ವಿಲ್ಲುಪುರಂ-ಕಾಟ್ಪಾಡಿ ಮಾರ್ಗ).
ಲೇಖನ- ಶ್ರೀನಿವಾಸ ಮಠ





