Sri Gurubhyo Logo

2026 ವೃಷಭ ರಾಶಿ ವರ್ಷಭವಿಷ್ಯ: ಈ ವರ್ಷ ಹಣ, ಉದ್ಯೋಗ ಮತ್ತು ಆಸ್ತಿ ವಿಚಾರದಲ್ಲಿ ಏನು ಬದಲಾವಣೆ?

Taurus Yearly Horoscope 2026
ವೃಷಭ ರಾಶಿ ಚಿಹ್ನೆ

2026ನೇ ಇಸವಿಯ ವರ್ಷಭವಿಷ್ಯದಲ್ಲಿ ವೃಷಭದ ಫಲಾಫಲವನ್ನು ಈ ಲೇಖನದಲ್ಲಿ ತಿಳಿಸಲಾಗುವುದು. ಈ ಸರಣಿಯಲ್ಲಿ ಮೇಷದಿಂದ ಮೀನದ ತನಕ ಹನ್ನೆರಡು ರಾಶಿಗಳ ಜ್ಯೋತಿಷ್ಯ ರೀತಿಯಾದ ವರ್ಷಭವಿಷ್ಯವನ್ನು ನೀಡಲಾಗುತ್ತಿದೆ. ಇದಕ್ಕಾಗಿ ಗ್ರಹಗಳ ಗೋಚಾರ ಸ್ಥಿತಿಯನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ. ಅದರಲ್ಲಿಯೂ ದೀರ್ಘಕಾಲ ಒಂದೇ ರಾಶಿಯಲ್ಲಿ ಇರುವಂಥ ಗ್ರಹಗಳಾದ ಶನಿ, ರಾಹು- ಕೇತು ಹಾಗೂ ಗುರು ಗ್ರಹದ ಸಂಚಾರವನ್ನು ಆಧರಿಸಿ, ಇಲ್ಲಿನ ಫಲಾಫಲವನ್ನು ತಿಳಿಸಲಾಗಿದೆ. ಇಲ್ಲಿ ನೀಡಲಾಗಿರುವ ವರ್ಷಫಲವು 2026ನೇ ಇಸವಿಯ ಜನವರಿ 1ನೇ ತಾರೀಕಿನಿಂದ ಡಿಸೆಂಬರ್ 31ನೇ ತಾರೀಕಿನ ತನಕ ಅನ್ವಯ ಆಗುತ್ತದೆ. ನೆನಪಿನಲ್ಲಿಡಿ, ಇದು ಯುಗಾದಿ ಸಂವತ್ಸರ ಫಲ ಅಥವಾ ಯುಗಾದಿ ಭವಿಷ್ಯ ಅಲ್ಲ, ಇದು ಹೆಚ್ಚು ಜನಪ್ರಿಯ ಆಗಿರುವ ಜನವರಿಯಿಂದ ಡಿಸೆಂಬರ್ ತನಕದ ಕ್ಯಾಲೆಂಡರ್ ವರ್ಷ ಭವಿಷ್ಯ. 

ಗ್ರಹ ಸಂಚಾರದ ವಿವರ ಹೀಗಿದೆ:

ಶನಿ ಗ್ರಹ ಇಡೀ ವರ್ಷ ಮೀನ ರಾಶಿಯಲ್ಲಿ ಸಂಚರಿಸುತ್ತದೆ.

ರಾಹು- ಕೇತು: ಜನವರಿಯಿಂದ ಡಿಸೆಂಬರ್ 5ನೇ ತಾರೀಕಿನ ತನಕ ರಾಹು ಕುಂಭ ರಾಶಿಯಲ್ಲಿ, ಕೇತು ಸಿಂಹ ರಾಶಿಯಲ್ಲಿ ಇರುತ್ತದೆ. ಆ ನಂತರ ವರ್ಷಾಂತ್ಯದ ತನಕ ರಾಹು ಮಕರ ರಾಶಿಯಲ್ಲೂ ಕೇತು ಕರ್ಕಾಟಕ ರಾಶಿಯಲ್ಲಿ ಇರುತ್ತದೆ.

ಗುರು: ಜನವರಿಯಿಂದ ಜೂನ್ ಒಂದನೇ ತಾರೀಕಿನ ತನಕ ಗುರು ಗ್ರಹ ಮಿಥುನ ರಾಶಿಯಲ್ಲಿ ಸಂಚರಿಸುತ್ತದೆ. ಆ ನಂತರ ಅಕ್ಟೋಬರ್ 31ನೇ ತಾರೀಕಿನ ತನಕ ಕರ್ಕಾಟಕ ರಾಶಿಯಲ್ಲಿ ಬೃಹಸ್ಪತಿ ಸಂಚರಿಸುತ್ತದೆ, ಆ ಮೇಲೆ ವರ್ಷಾಂತ್ಯದ ತನಕ ಸಿಂಹ ರಾಶಿಯಲ್ಲಿ ಗುರು ಸಂಚಾರ ಇರುತ್ತದೆ.

ವೃಷಭ– ಕೃತ್ತಿಕಾ ನಕ್ಷತ್ರದ ಎರಡು, ಮೂರು ಮತ್ತು ನಾಲ್ಕನೇ ಪಾದ, ರೋಹಿಣಿ ನಕ್ಷತ್ರದ ನಾಲ್ಕೂ ಪಾದ, ಮೃಗಶಿರಾ ನಕ್ಷತ್ರದ ಒಂದು, ಎರಡನೇ ಪಾದ ಸೇರಿ ವೃಷಭ ರಾಶಿ ಆಗುತ್ತದೆ. ಕೃತ್ತಿಕಾ ನಕ್ಷತ್ರದ ಅಧಿಪತಿ ರವಿ, ರೋಹಿಣಿಗೆ ಚಂದ್ರ ಹಾಗೂ ಮೃಗಶಿರಾ ನಕ್ಷತ್ರಕ್ಕ ಕುಜ ಅಧಿಪತಿ ಆಗುತ್ತಾನೆ. ಇನ್ನು ರಾಶ್ಯಾಧಿಪತಿ ಶುಕ್ರ ಆಗುತ್ತದೆ. ಸ್ಥಿರ ರಾಶಿ, ಪೃಥ್ವಿ ತತ್ವದ ಕಾಲಪುರುಷನ ಚಕ್ರದ ಎರಡನೇ ರಾಶಿ ವೃಷಭ. 

ಡಯಾಬಿಟೀಸ್ ನಿಯಂತ್ರಣಕ್ಕೆ ನಂಬಿಕೆಯ ದೇಗುಲ: ಸಾವಿರ ವರ್ಷಗಳ ಇತಿಹಾಸದ ಕರುಂಬೇಶ್ವರರ್ ದೇವಾಲಯ

ವೃಷಭ ರಾಶಿ ವರ್ಷ ಭವಿಷ್ಯ ಹೀಗಿದೆ:

ಶನಿ ಗೋಚಾರ ಫಲ: ನಿಮ್ಮ ರಾಶಿ ಪಿತೃ- ಅದೃಷ್ಟ ಸ್ಥಾನ ಹಾಗೂ ಕರ್ಮ ಸ್ಥಾನದ ಅಧಿಪತಿಯಾದ ಶನಿಯು ಗೋಚಾರದಲ್ಲಿ ಹನ್ನೊಂದನೇ ಮನೆಯಲ್ಲಿ ಸಂಚಾರ ಮಾಡುತ್ತದೆ. ಪಿತ್ರಾರ್ಜಿತ ಆಸ್ತಿ ವ್ಯಾಜ್ಯಗಳು ಇದ್ದಲ್ಲಿ ಬಗೆಹರಿಸಿಕೊಳ್ಳಲು ಸಾಧ್ಯವಾಗಲಿದೆ. ಕೆಲವು ತಪ್ಪಾದ ಅಭಿಪ್ರಾಯಗಳು ಉದ್ಭವಿಸಿ, ನಿಮಗೆ ನ್ಯಾಯಯುತವಾಗಿ ಸಿಗಬೇಕಾದ ಹಣ, ಆಸ್ತಿ, ಗೌರವ, ಸನ್ಮಾನ, ಮಾನ್ಯತೆ ಇಷ್ಟು ಸಮಯ ಸಿಗದೆ ಇದ್ದಲ್ಲಿ ಈ ಅವಧಿಯಲ್ಲಿ ದೊರೆಯಲಿದೆ. ಕೆಲವು ಆಯ್ಕೆಗಳನ್ನು ನಿಮಗೇ ಬಿಟ್ಟು, ಅಭಿಪ್ರಾಯವನ್ನು ನಿಮ್ಮನ್ನೇ ಕೇಳುತ್ತಾರೆ ಅಂತಾದಾಗ ಧರ್ಮ- ಕರ್ಮ ನೋಡಿಕೊಂಡು ವ್ಯವಹರಿಸಿ. ಕೆಲಸ- ಕಾರ್ಯಗಳು ವಿಳಂಬ ಆಗುತ್ತಾ ಬರುತ್ತಿದ್ದಲ್ಲಿ ಅದನ್ನು ಪೂರ್ಣ ಮಾಡುವುದಕ್ಕೆ ಬೇಕಾದ ಅನುಕೂಲಗಳು ಒದಗಿ ಬರಲಿವೆ. ಉದ್ಯೋಗ, ವೃತ್ತಿ, ವ್ಯಾಪಾರ- ವ್ಯವಹಾರ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಯಶಸ್ಸು ನಿಮ್ಮದಾಗಲಿದೆ. ತಡವಾಗಿ ಬಂದರೂ ಖಚಿತವಾಗಿ ನಿಮಗೆ ದೊರೆಯಲಿದೆ.  ಆಲಸ್ಯವೊಂದನ್ನು ಮಾಡಬೇಡಿ. ಸಿಕ್ಕ ಅವಕಾಶವನ್ನು ಬೇರೆಯವರಿಗೆ ಬಿಟ್ಟುಕೊಡುವುದು, ತಕ್ಷಣವೇ ಮಾಡಬೇಕಾದ ಕೆಲಸ- ಕಾರ್ಯಗಳನ್ನು ಮುಂದಕ್ಕೆ ಹಾಕುವುದು ಮಾಡುವುದರಿಂದ ಲಾಭದ ಪ್ರಮಾಣ ಕಡಿಮೆ ಆಗುತ್ತದೆ.

ರಾಹು- ಕೇತು ಗೋಚಾರ ಫಲ: ಹತ್ತನೇ ಮನೆಯಲ್ಲಿ ರಾಹು ಸಂಚರಿಸುವುದರಿಂದ ಉದ್ಯೋಗ ಕ್ಷೇತ್ರದಲ್ಲಿ ಖ್ಯಾತಿ- ಅಪಖ್ಯಾತಿ ಎರಡೂ ನಿಮ್ಮನ್ನು ಹುಡುಕಿಕೊಂಡು ಬರಲಿದೆ. ವಿದೇಶದಲ್ಲಿ ಕೆಲವರಿಗೆ ಉದ್ಯೋಗಾವಕಾಶ ಬಂದು, ನಿರ್ಧಾರ ಮಾಡಲಿಕ್ಕೆ ಸಾಧ್ಯವಾಗದೆ ಗೊಂದಲ ಸೃಷ್ಟಿ ಆಗುತ್ತದೆ. ಪಾಪ ಕರ್ಮಾಸಕ್ತಿ ಹೆಚ್ಚಾಗುತ್ತದೆ. ಉತ್ಸಾಹದ ಕಾರಣಕ್ಕಾಗಿ ದೈವಕ್ಕೆ ಅಪಚಾರ ಆಗುವ ಸಾಧ್ಯತೆ ಇರುತ್ತದೆ. ಇಂಥ ಸನ್ನಿವೇಶದಲ್ಲಿ ಹಿರಿಯರಿಗೂ ಅವಮಾನ ಅಗಬಹುದು. ಇಂಥ ಅಪಚಾರಗಳು ಆಗದಂತೆ ಎಚ್ಚರಿಕೆ ವಹಿಸಿ. ನಾಲ್ಕನೇ ಮನೆಯಲ್ಲಿ ಕೇತು ಸಂಚರಿಸುವ ವೇಳೆ ಬುದ್ಧಿಗೆ ಮಂಕು ಕವಿದಂತೆ ವರ್ತನೆ ಇರಲಿದೆ. ತಾಯಿ ಅಥವಾ ತಾಯಿ ಸಮಾನರಿಗೆ ಮಾನಸಿಕ ಖಿನ್ನತೆ ಕಾಡಬಹುದು. ಮನೆ ರಿನೊವೇಷನ್, ಸುಣ್ಣ- ಬಣ್ಣ, ಇಂಥದ್ದು ಮಾಡಿಸುವಂತಿದ್ದರೆ ಸರಿಯಾದ ಬಜೆಟ್- ಪ್ಲಾನಿಂಗ್ ಮುಖ್ಯ. ವಿದ್ಯಾರ್ಥಿಗಳಿಗೆ ಏರಿಳಿತದ ವರ್ಷ ಇದಾಗಿರುತ್ತದೆ.

ಗುರು ಗೋಚಾರ ಫಲ: ಮೇ ತಿಂಗಳ ಕೊನೆ ತನಕ ಹಣಕಾಸಿನ ಹರಿವು ಸರಾಗವಾಗಿ ಇರುತ್ತದೆ. ಕುಟುಂಬದಲ್ಲಿ ಸಂತೋಷ, ದಂಪತಿ ಮಧ್ಯೆ ಅನ್ಯೋನ್ಯತೆ, ಸಂತಾನಕ್ಕೆ ಪ್ರಯತ್ನಿಸುತ್ತಾ ಇರುವವರಿಗೆ ಶುಭವಾದ ಬೆಳವಣಿಗೆ ಇರಲಿದೆ. ಆರೋಗ್ಯ ಸಮಸ್ಯೆಗಳು ಇರುವವರಿಗೆ ಔಷಧೋಪಚಾರದಿಂದ ಮೇಲಾಗುತ್ತದೆ. ಪ್ರೀತಿ- ಪ್ರೇಮದಲ್ಲಿ ಇರುವವರಿಗೂ ಶುಭವಾದ ಸಮಯ ಇದು. ಮನೆ ನಿರ್ಮಾಣ, ಸೈಟು ಖರೀದಿ, ಜಮೀನು ಖರೀದಿ ಇಂಥ ಶುಭ ಫಲಗಳು ನಿಮಗೆ ಇವೆ. ಆ ನಂತರ ಅಕ್ಟೋಬರ್ ಕೊನೆ ತನಕ ಆರೋಗ್ಯ ಸಮಸ್ಯೆ, ಒಡಹುಟ್ಟಿದವರೇ  ನಿಮ್ಮ ವಿರುದ್ಧ ಕೋರ್ಟ್- ಕಚೇರಿ ಮೆಟ್ಟಿಲೇರುವುದು, ಸರ್ಕಾರಿ ಕೆಲಸಗಳಲ್ಲಿ ಹಿನ್ನಡೆ ಆಗುತ್ತದೆ. ನವೆಂಬರ್- ಡಿಸೆಂಬರ್ ನಲ್ಲಿ ಉದ್ಯೋಗ- ವ್ಯವಹಾರ ಅಥವಾ ಕುಟುಂಬದ ಕಾರಣಕ್ಕೆ ಅಂತಲೇ ವಿಲಾಸಿ ವಿಲ್ಲಾ, ಫ್ಲ್ಯಾಟ್ ಖರೀದಿ ಯೋಗ ಇದೆ. ಕೆಲವರು ವಾಹನಗಳನ್ನು ಸಹ ಖರೀದಿ ಮಾಡುತ್ತೀರಿ. ತಾಯಿ ಮನೆ ಕಡೆಯಿಂದ ಬರಬೇಕಾದ ಆಸ್ತಿ ವಿಚಾರಕ್ಕೆ ಕಿರಿಕಿರಿ ಇರುತ್ತದೆ. ನಿಮಗೆ ಅಹಂಕಾರಿ ಎಂಬ ಹಣೆಪಟ್ಟಿ ಬರುತ್ತದೆ.

ಪರಿಹಾರ: ದುರ್ಗಾ ಸೂಕ್ತ ಪಠಣ, ಶ್ರವಣ ಮಾಡಿ. ಗಣಪತಿ ಅಥರ್ವಶೀರ್ಷವನ್ನು ಹೇಳುವುದು ಅಥವಾ ಕೇಳಿಸಿಕೊಳ್ಳುವುದರಿಂದ ವಿಘ್ನಗಳ ನಿವಾರಣೆ.

ಲೇಖನ: ಶ್ರೀನಿವಾಸ ಮಠ

ಶ್ರೀನಿವಾಸ ಮಠ

ಸಂಪಾದಕರು, ಶ್ರೀಗುರುಭ್ಯೋ.ಕಾಮ್

ಪತ್ರಿಕೋದ್ಯಮದಲ್ಲಿ ಹದಿನೆಂಟು ವರ್ಷಕ್ಕೂ ಹೆಚ್ಚು ಅನುಭವ ಇರುವ ಲೇಖಕ. ಕನ್ನಡದ ಪ್ರಮುಖ ದಿನಪತ್ರಿಕೆಗಳು ಹಾಗೂ ವಾರಪತ್ರಿಕೆ ಮತ್ತು ಆನ್ ಲೈನ್ ವೆಬ್ ಪೋರ್ಟಲ್ ಗಳಲ್ಲಿ ವಿವಿಧ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ವೈದಿಕ ಜ್ಯೋತಿಷ್ಯವನ್ನು ಪದ್ಧತಿಯಿಂದ ಅಭ್ಯಾಸ ಮಾಡಿರುವಂಥ ಇವರು, ಈ ತನಕ ಮೂರು ಸಾವಿರಕ್ಕೂ ಹೆಚ್ಚು ಜ್ಯೋತಿಷ್ಯ ಲೇಖನಗಳನ್ನು ವಿವಿಧ ವೆಬ್ ಪೋರ್ಟಲ್ ಗಳಿಗಾಗಿ ಬರೆದಿದ್ದಾರೆ. ಅಧ್ಯಾತ್ಮ, ಜ್ಯೋತಿಷ್ಯ ಹಾಗೂ ಧಾರ್ಮಿಕ ವಿಷಯಗಳಲ್ಲಿ ಅಳವಾದ ಜ್ಞಾನ ಮತ್ತು ನಿರಂತರ ಅಧ್ಯಯನ ಇರುವಂಥ ಶ್ರೀನಿವಾಸ ಮಠ ಸದ್ಯಕ್ಕೆ ಬೆಂಗಳೂರಿನಲ್ಲಿ ವಾಸವಿದ್ದು, ಜ್ಯೋತಿಷ್ಯವನ್ನು ವೃತ್ತಿಯಾಗಿ ಸ್ವೀಕರಿಸಿದ್ದಾರೆ.

Latest News

Related Posts