Sri Gurubhyo Logo

ತತ್ತ್ವವಾದದ ಹರಿಕಾರ ಮಧ್ವಾಚಾರ್ಯರು: ಜನ್ಮಕ್ಷೇತ್ರ ಪಾಜಕದಿಂದ ಉಡುಪಿ ಅಷ್ಟಮಠಗಳವರೆಗೆ

Udupi Srikrishna Pooja performing by Sri Pottage Mutt Seer
ಉಡುಪಿ ಶ್ರೀಕೃಷ್ಣನಿಗೆ ಮಂಗಳಾರತಿ ಮಾಡುತ್ತಿರುವ ಶ್ರೀಗಳು

ಇದೇ ಜನವರಿ 18ನೇ ತಾರೀಕು ಉಡುಪಿಯಲ್ಲಿ ಪರ್ಯಾಯೋತ್ಸವದ ಸಂಭ್ರಮ. ಆ ಹಿನ್ನೆಲೆಯಲ್ಲಿ ಜಗತ್ತಿನ ಅತ್ಯಂತ ವಿಶಿಷ್ಟ ಹಾಗೂ ಹಳೆಯ ಧಾರ್ಮಿಕ ಪದ್ಧತಿಯನ್ನು ಪರಿಚಯಿಸಿದ ಮಧ್ವಾಚಾರ್ಯರು ಮತ್ತು ಅವರು ಜಗತ್ತಿಗೆ ನೀಡಿದ ತತ್ತ್ವವಾದ ಸಿದ್ಧಾಂತದ ಬಗ್ಗೆ ಪರಿಚಯಾತ್ಮಕವಾದ ಲೇಖನ ಇಲ್ಲಿದೆ. ಮಧ್ವಾಚಾರ್ಯರ ಅಧ್ಯಾತ್ಮ ಬದುಕು- ತತ್ತ್ವದ ಕೇಂದ್ರಬಿಂದು ಉಡುಪಿ. ಅವರ ಜನ್ಮಸ್ಥಳ ಪಾಜಕ ಕ್ಷೇತ್ರ ಮತ್ತು ಅವರು ಜಾರಿಗೆ ತಂದ ಪರ್ಯಾಯ ವ್ಯವಸ್ಥೆ ಭಾರತೀಯ ಧಾರ್ಮಿಕ ಇತಿಹಾಸದಲ್ಲಿ ಅತ್ಯಂತ ಮಹತ್ವದ ಸ್ಥಾನ ಪಡೆದಿವೆ. ಇವುಗಳ ಬಗ್ಗೆ ಸವಿಸ್ತಾರವಾದ ಮಾಹಿತಿ ಇಲ್ಲಿದೆ. ಅಂದಹಾಗೆ 2026ರಿಂದ 2028ರ ತನಕ ದ್ವೈವಾರ್ಷಿಕ ಉಡುಪಿ ಕೃಷ್ಣಮಠದ ಜವಾಬ್ದಾರಿ ಶೀರೂರು ಮಠಕ್ಕೆ. ಆ ಮಠದ ವೇದವರ್ಧನ ತೀರ್ಥರು ಈ ಬಾರಿಯ ಪರ್ಯಾಯ ಪೀಠವನ್ನು ಅಲಂಕರಿಸಲಿದ್ದಾರೆ. ಇನ್ನು ಮಧ್ವಾಚಾರ್ಯರು (ಕ್ರಿ.ಶ. 1238–1317) ಭಾರತೀಯ ತತ್ವಶಾಸ್ತ್ರದ ಇತಿಹಾಸದಲ್ಲಿ ‘ತತ್ತ್ವವಾದ’ ಸಿದ್ಧಾಂತದ ಪ್ರವರ್ತಕರಾಗಿ ಅಚ್ಚಳಿಯದ ಮುದ್ರೆ ಒತ್ತಿದವರು. ಅವರ ಜನನ ಮತ್ತು ಅವರು ಸಾಹಿತ್ಯ ಲೋಕಕ್ಕೆ ನೀಡಿದ ಕೊಡುಗೆಗಳ ವಿವರ ಇಲ್ಲಿದೆ:

ಮಧ್ವಾಚಾರ್ಯರ ಜನನ ಮತ್ತು ಬಾಲ್ಯ

ಮಧ್ವಾಚಾರ್ಯರು ಕರ್ನಾಟಕದ ಕರಾವಳಿ ಭಾಗದಲ್ಲಿ ಜನಿಸಿದರು. ಅವರ ಜೀವನದ ಆರಂಭಿಕ ವಿವರಗಳು ಹೀಗಿವೆ:

  • ಜನ್ಮ ಸ್ಥಳ: ಉಡುಪಿ ಜಿಲ್ಲೆಯ ಪಾಜಕ ಎಂಬ ಗ್ರಾಮ.
  • ತಂದೆ-ತಾಯಿ: ತಂದೆ ಮಧ್ಯಗೇಹ ಭಟ್ಟ ಮತ್ತು ತಾಯಿ ವೇದಾವತಿ. ದಂಪತಿಗಳಿಗೆ ದೀರ್ಘಕಾಲ ಮಕ್ಕಳಾಗದಿದ್ದಾಗ, ಉಡುಪಿಯ ಅನಂತೇಶ್ವರನಿಗೆ ಪ್ರಾರ್ಥಿಸಿದ ಫಲವಾಗಿ ಮಧ್ವಾಚಾರ್ಯರು ಜನಿಸಿದರು ಎಂಬ ನಂಬಿಕೆಯಿದೆ.
  • ಜನ್ಮ ನಾಮ: ಇವರ ಬಾಲ್ಯದ ಹೆಸರು ವಾಸುದೇವ.
  • ಅವತಾರ: ಪುರಾಣಗಳ ಪ್ರಕಾರ, ವಾಯುದೇವರ ಮೂರನೇ ಅವತಾರವೇ ಮಧ್ವಾಚಾರ್ಯರು (ಹನುಮ ಮತ್ತು ಭೀಮನ ನಂತರದ ಅವತಾರ).
  • ಸನ್ಯಾಸ ದೀಕ್ಷೆ: ಕೇವಲ 16ನೇ ವಯಸ್ಸಿನಲ್ಲಿ ಅಚ್ಯುತಪ್ರೇಕ್ಷ ತೀರ್ಥರಿಂದ ಸನ್ಯಾಸ ದೀಕ್ಷೆ ಪಡೆದರು. ಸನ್ಯಾಸದ ನಂತರ ಇವರಿಗೆ ‘ಪೂರ್ಣಪ್ರಜ್ಞ’ಮತ್ತು ‘ಆನಂದತೀರ್ಥ’ ಎಂಬ ಹೆಸರುಗಳು ಬಂದವು.

ಪ್ರಮುಖ ಆಕರ್ಷಣೆಗಳು ಮತ್ತು ವೈಶಿಷ್ಟ್ಯಗಳು:

  • ಮಧ್ವ ಜನ್ಮಸ್ಥಾನ: ಮಧ್ವಾಚಾರ್ಯರು (ಬಾಲ್ಯದ ಹೆಸರು ವಾಸುದೇವ) ಜನಿಸಿದ ಮನೆಯನ್ನು ಈಗ ಸ್ಮಾರಕವಾಗಿ ಸಂರಕ್ಷಿಸಲಾಗಿದೆ. ಇಲ್ಲಿ ಅವರ ಪಾದದ ಗುರುತುಗಳನ್ನು ಪೂಜಿಸಲಾಗುತ್ತದೆ.
  • ನಾಲ್ಕು ತೀರ್ಥಗಳು: ಮಧ್ವಾಚಾರ್ಯರು ತಮ್ಮ ದಂಡದಿಂದ ನಿರ್ಮಿಸಿದರೆನ್ನಲಾದ ನಾಲ್ಕು ಪವಿತ್ರ ಕೆರೆಗಳು (ಪರಶು ತೀರ್ಥ, ಧನುಷ್ ತೀರ್ಥ, ಗದಾ ತೀರ್ಥ ಮತ್ತು ಬಾಣ ತೀರ್ಥ) ಇಲ್ಲಿವೆ. ಈ ನಾಲ್ಕು ಕೆರೆಗಳಲ್ಲಿ ಸ್ನಾನ ಮಾಡುವುದು ಗಂಗೆಯಲ್ಲಿ ಸ್ನಾನ ಮಾಡಿದಷ್ಟೇ ಪುಣ್ಯವೆಂದು ನಂಬಲಾಗಿದೆ.
  • ಅನಂತಪದ್ಮನಾಭ ದೇವಾಲಯ: ಇದು ಮಧ್ವಾಚಾರ್ಯರ ಕುಲದೈವದ ದೇವಸ್ಥಾನ.
  • ಕುಂಜಾರುಗಿರಿ: ಪಾಜಕದ ಹತ್ತಿರದಲ್ಲೇ ಇರುವ ಬೆಟ್ಟದ ಮೇಲೆ ದುರ್ಗಾದೇವಿಯ ಹಳೆಯ ದೇವಸ್ಥಾನವಿದೆ. ಬಾಲ ವಾಸುದೇವನು ಒಂದು ಹಾರಿಗೆಯಲ್ಲಿ ಈ ಬೆಟ್ಟದಿಂದ ಪಾಜಕಕ್ಕೆ ಜಿಗಿದಿದ್ದನೆಂಬ ಐತಿಹ್ಯವಿದೆ.

ಶೀರೂರು ಮಠದ ಪವಿತ್ರ ಪರಂಪರೆ, ದ್ವಂದ್ವ ಮಠದ ವಿಶಿಷ್ಟ ಬಾಂಧವ್ಯ: ಒಂದು ಅವಲೋಕನ

ಮಧ್ವಾಚಾರ್ಯರ ಪ್ರಮುಖ ಕೃತಿಗಳು (ಸರ್ವಮೂಲ ಗ್ರಂಥಗಳು)

ಮಧ್ವಾಚಾರ್ಯರು ಸಂಸ್ಕೃತದಲ್ಲಿ ಒಟ್ಟು 37 ಗ್ರಂಥಗಳನ್ನು ರಚಿಸಿದ್ದಾರೆ. ಇವುಗಳನ್ನು ಒಟ್ಟಾಗಿ ‘ಸರ್ವಮೂಲ ಗ್ರಂಥಗಳು’ ಎಂದು ಕರೆಯಲಾಗುತ್ತದೆ. ಇವುಗಳಲ್ಲಿ ಪ್ರಮುಖವಾದವುಗಳನ್ನು ಈ ಕೆಳಗಿನಂತೆ ವರ್ಗೀಕರಿಸಬಹುದು:

ಭಾಷ್ಯಗಳು (ವಿಶ್ಲೇಷಣೆಗಳು)

ವೇದ ಮತ್ತು ಉಪನಿಷತ್ತುಗಳಿಗೆ ತತ್ತ್ವವಾದದ ದೃಷ್ಟಿಕೋನದಲ್ಲಿ ಇವರು ಹೊಸ ಭಾಷ್ಯ ಬರೆದರು.

  • ಬ್ರಹ್ಮಸೂತ್ರ ಭಾಷ್ಯ: ಇದು ಅವರ ಅತ್ಯಂತ ಪ್ರಮುಖ ಕೃತಿ.
  • ಅಣು ಭಾಷ್ಯ: ಬ್ರಹ್ಮಸೂತ್ರದ ಸಾರಾಂಶವನ್ನು ಅತ್ಯಂತ ಸಂಕ್ಷಿಪ್ತವಾಗಿ ನೀಡುವ ಕೃತಿ.
  • ಉಪನಿಷದ್ ಭಾಷ್ಯ: ಹತ್ತು ಪ್ರಮುಖ ಉಪನಿಷತ್ತುಗಳಿಗೆ (ಈಶ, ಕೇನ ಇತ್ಯಾದಿ) ಬರೆದ ವಿವರಣೆಗಳು.
  • ಗೀತಾ ಭಾಷ್ಯ ಮತ್ತು ಗೀತಾ ತಾತ್ಪರ್ಯ ನಿರ್ಣಯ: ಭಗವದ್ಗೀತೆಯ ತತ್ವಗಳ ವಿಶ್ಲೇಷಣೆ.

ಪುರಾಣ ಮತ್ತು ಇತಿಹಾಸದ ಮೇಲಿನ ಕೃತಿಗಳು

  • ಮಹಾಭಾರತ ತಾತ್ಪರ್ಯ ನಿರ್ಣಯ: ಇದು ಮಹಾಭಾರತದ ಘಟನೆಗಳನ್ನು ಆಧ್ಯಾತ್ಮಿಕ ಹಿನ್ನೆಲೆಯಲ್ಲಿ ವಿವರಿಸುವ ಬೃಹತ್ ಗ್ರಂಥ.
  • ಭಾಗವತ ತಾತ್ಪರ್ಯ ನಿರ್ಣಯ: ಭಾಗವತ ಪುರಾಣದ ಪ್ರಮುಖ ಅಂಶಗಳ ವಿವರಣೆ.

ಸ್ವತಂತ್ರ ಗ್ರಂಥಗಳು (ಪ್ರಕರಣ ಗ್ರಂಥಗಳು)

ಸಿದ್ಧಾಂತವನ್ನು ಪ್ರತಿಪಾದಿಸಲು ಇವರು 10 ಪ್ರಕರಣ ಗ್ರಂಥಗಳನ್ನು ಬರೆದರು.

  • ವಿಷ್ಣುತತ್ವ ನಿರ್ಣಯ: ವಿಷ್ಣುವೇ ಸರ್ವೋತ್ತಮ ಎಂಬುದನ್ನು ತಾರ್ಕಿಕವಾಗಿ ಸಾಬೀತುಪಡಿಸುವ ಗ್ರಂಥ.
  • ತತ್ವೋದ್ಯೋತ: ಅದ್ವೈತ ಸಿದ್ಧಾಂತದ ವಾದಗಳನ್ನು ಖಂಡಿಸಿ ತತ್ತ್ವವಾದವನ್ನು ಪ್ರತಿಪಾದಿಸುವ ಕೃತಿ.

ಸ್ತೋತ್ರಗಳು ಮತ್ತು ಪೂಜಾ ವಿಧಿಗಳು

  • ದ್ವಾದಶ ಸ್ತೋತ್ರ: ಶ್ರೀಕೃಷ್ಣನ ಸ್ತುತಿ ಮಾಡುವ 12 ಸುಂದರ ಸ್ತೋತ್ರಗಳ ಗುಚ್ಛ.
  • ಕೃಷ್ಣಾಮೃತ ಮಹಾರ್ಣವ: ಭಕ್ತಿ ಮತ್ತು ಆಚಾರಗಳ ಬಗ್ಗೆ ತಿಳಿಸುವ ಶ್ಲೋಕಗಳ ಸಂಗ್ರಹ.
  • ತಂತ್ರಸಾರ ಸಂಗ್ರಹ: ದೇವತಾರ್ಚನೆ, ವಿಗ್ರಹ ಪ್ರತಿಷ್ಠಾಪನೆ ಮತ್ತು ಮಂತ್ರಗಳ ಬಗ್ಗೆ ಮಾಹಿತಿ ನೀಡುವ ಕೃತಿ.

ಉಡುಪಿ ಪರ್ಯಾಯ 2026: ಶೀರೂರು ಮಠದ ಶ್ರೀ ವೇದವರ್ಧನ ತೀರ್ಥರ ಪೀಠಾರೋಹಣ, ಪರಂಪರೆಯ ಇತಿಹಾಸ

ಸನ್ಯಾಸಿಗಳಿಗೆ ಸಂವಿಧಾನ

ಯತಿಪ್ರಣವಕಲ್ಪ ಮಧ್ವಾಚಾರ್ಯರು ರಚಿಸಿದ ‘ಸರ್ವಮೂಲ ಗ್ರಂಥ’ಗಳಲ್ಲಿ ಒಂದಾದ ಸಣ್ಣ ಪ್ರಬಂಧ. ಇದು ಮುಖ್ಯವಾಗಿ ಸನ್ಯಾಸಿಗಳ ಧರ್ಮ ಮತ್ತು ಆಚರಣೆಗಳನ್ನು ತಿಳಿಸುತ್ತದೆ. ಸನ್ಯಾಸಿಗಳು ಪ್ರಣವ ಮಂತ್ರವನ್ನು (ಓಂಕಾರ) ಹೇಗೆ ಜಪಿಸಬೇಕು, ಅದರ ಅರ್ಥವೇನು ಮತ್ತು ಸನ್ಯಾಸ ದೀಕ್ಷೆಯ ವಿಧಿವಿಧಾನಗಳ ಬಗ್ಗೆ ಇಲ್ಲಿ ವಿವರಿಸಲಾಗಿದೆ. ಸನ್ಯಾಸಿಗಳು ಪಾಲಿಸಬೇಕಾದ ಶಿಸ್ತು ಹಾಗೂ ಭಗವಂತನ ಧ್ಯಾನದ ಕ್ರಮವನ್ನು ಈ ಕೃತಿಯು ಶಾಸ್ತ್ರೋಕ್ತವಾಗಿ ಪ್ರತಿಪಾದಿಸುತ್ತದೆ.

ಉಡುಪಿ ಪರ್ಯಾಯ ವ್ಯವಸ್ಥೆ

ಶ್ರೀ ಮಧ್ವಾಚಾರ್ಯರು ಉಡುಪಿಯಲ್ಲಿ ಶ್ರೀಕೃಷ್ಣನ ವಿಗ್ರಹವನ್ನು ಪ್ರತಿಷ್ಠಾಪಿಸಿದ ನಂತರ, ಅದರ ಪೂಜಾ ಕೈಂಕರ್ಯಗಳನ್ನು ನಡೆಸಲು ತಮ್ಮ ಎಂಟು ಮಂದಿ ಶಿಷ್ಯರಿಗೆ ದೀಕ್ಷೆ ನೀಡಿದರು. ಇವರೇ ‘ಅಷ್ಟಮಠ’ಗಳ ಯತಿಗಳು. ಈ ಮಠಾಧೀಶರು ಸರದಿಯ ಪ್ರಕಾರ ಕೃಷ್ಣನ ಪೂಜೆ ಮಾಡುವ ಪದ್ಧತಿಯೇ ಪರ್ಯಾಯ.

ಪರ್ಯಾಯದ ವಿಕಾಸ

  • ಆರಂಭಿಕ ಕಾಲ: ಮಧ್ವಾಚಾರ್ಯರ ಕಾಲದಲ್ಲಿ ಪ್ರತಿ ಮಠದ ಸ್ವಾಮಿಗಳು 2 ತಿಂಗಳ ಕಾಲ ಪೂಜೆ ಮಾಡುತ್ತಿದ್ದರು.
  • ವಾದಿರಾಜರ ಸುಧಾರಣೆ: 16ನೇ ಶತಮಾನದಲ್ಲಿ ಸೋದೆ ಮಠದ ವಾದಿರಾಜ ತೀರ್ಥರು ಈ ಅವಧಿಯನ್ನು 2 ತಿಂಗಳಿನಿಂದ 2 ವರ್ಷಗಳಿಗೆ ಏರಿಸಿದರು. ಅಂದಿನಿಂದ ಇಂದಿನವರೆಗೆ ಪ್ರತಿ ಎರಡು ವರ್ಷಕ್ಕೊಮ್ಮೆ ಪರ್ಯಾಯೋತ್ಸವ ನಡೆಯುತ್ತದೆ.

ಅಷ್ಟಮಠಗಳ ಪಟ್ಟಿ:

  1. ಪಲಿಮಾರು ಮಠ
  2. ಅದಮಾರು ಮಠ
  3. ಕೃಷ್ಣಾಪುರ ಮಠ
  4. ಪುತ್ತಿಗೆ ಮಠ
  5. ಶೀರೂರು ಮಠ
  6. ಸೋದೆ ಮಠ
  7. ಕಾಣಿಯೂರು ಮಠ
  8. ಪೇಜಾವರ ಮಠ

ಪರ್ಯಾಯದ ವಿಧಿವಿಧಾನಗಳು:

ಪರ್ಯಾಯವು ಕೇವಲ ಪೂಜೆಯ ಹಸ್ತಾಂತರವಲ್ಲ, ಅದೊಂದು ವ್ಯವಸ್ಥಿತ ಆಡಳಿತಾತ್ಮಕ ಬದಲಾವಣೆ. ಇದರ ಪ್ರಮುಖ ಹಂತಗಳು:

  • ಬಾಳೆ ಮುಹೂರ್ತ, ಅಕ್ಕಿ ಮುಹೂರ್ತ, ಕಟ್ಟಿಗೆ ಮುಹೂರ್ತ: ಪರ್ಯಾಯ ಆರಂಭವಾಗುವ ಒಂದು ವರ್ಷ ಮೊದಲೇ ಅನ್ನದಾಸೋಹಕ್ಕೆ ಬೇಕಾದ ಸಿದ್ಧತೆಗಳನ್ನು ಈ ಮುಹೂರ್ತಗಳ ಮೂಲಕ ಆರಂಭಿಸಲಾಗುತ್ತದೆ.
  • ಸರ್ವಜ್ಞ ಪೀಠಾರೋಹಣ: ಪರ್ಯಾಯದ ದಿನದಂದು ಹೊಸ ಸ್ವಾಮಿಗಳು ಅಕ್ಷಯ ಪಾತ್ರೆಯನ್ನು ಸ್ವೀಕರಿಸಿ ‘ಸರ್ವಜ್ಞ ಪೀಠ’ವನ್ನು ಅಲಂಕರಿಸುತ್ತಾರೆ.
  • ಅನ್ನದಾನ: “ಉಡುಪಿ ಅಡುಗೆ, ಅಡಿಗೆ ಉಡುಪಿ” ಎಂಬ ಮಾತಿನಂತೆ, ಪರ್ಯಾಯ ಅವಧಿಯಲ್ಲಿ ಭಕ್ತರಿಗೆ ನಿರಂತರ ಅನ್ನದಾನ ನಡೆಯುತ್ತದೆ.

ಕೊನೆಮಾತು

ಪಾಜಕವು ಮಧ್ವಾಚಾರ್ಯರ ದಿವ್ಯ ಜೀವನದ ಆರಂಭವನ್ನು ಸಾರಿದರೆ, ಉಡುಪಿಯ ಪರ್ಯಾಯ ವ್ಯವಸ್ಥೆಯು ಅವರು ಹಾಕಿಕೊಟ್ಟ ಶಿಸ್ತುಬದ್ಧ ಆರಾಧನಾ ಪದ್ಧತಿಯನ್ನು ಇಂದಿಗೂ ಜೀವಂತವಾಗಿರಿಸಿದೆ. ಇದು ವಿಶ್ವದ ಅತ್ಯಂತ ಸುದೀರ್ಘ ಮತ್ತು ಅವಿರತವಾಗಿ ನಡೆಯುತ್ತಿರುವ ಧಾರ್ಮಿಕ ಹಸ್ತಾಂತರ ಪ್ರಕ್ರಿಯೆಗಳಲ್ಲಿ ಒಂದಾಗಿದೆ.

ಲೇಖನ- ಶ್ರೀನಿವಾಸ ಮಠ

ಶ್ರೀನಿವಾಸ ಮಠ

ಸಂಪಾದಕರು, ಶ್ರೀಗುರುಭ್ಯೋ.ಕಾಮ್

ಪತ್ರಿಕೋದ್ಯಮದಲ್ಲಿ ಹದಿನೆಂಟು ವರ್ಷಕ್ಕೂ ಹೆಚ್ಚು ಅನುಭವ ಇರುವ ಲೇಖಕ. ಕನ್ನಡದ ಪ್ರಮುಖ ದಿನಪತ್ರಿಕೆಗಳು ಹಾಗೂ ವಾರಪತ್ರಿಕೆ ಮತ್ತು ಆನ್ ಲೈನ್ ವೆಬ್ ಪೋರ್ಟಲ್ ಗಳಲ್ಲಿ ವಿವಿಧ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ವೈದಿಕ ಜ್ಯೋತಿಷ್ಯವನ್ನು ಪದ್ಧತಿಯಿಂದ ಅಭ್ಯಾಸ ಮಾಡಿರುವಂಥ ಇವರು, ಈ ತನಕ ಮೂರು ಸಾವಿರಕ್ಕೂ ಹೆಚ್ಚು ಜ್ಯೋತಿಷ್ಯ ಲೇಖನಗಳನ್ನು ವಿವಿಧ ವೆಬ್ ಪೋರ್ಟಲ್ ಗಳಿಗಾಗಿ ಬರೆದಿದ್ದಾರೆ. ಅಧ್ಯಾತ್ಮ, ಜ್ಯೋತಿಷ್ಯ ಹಾಗೂ ಧಾರ್ಮಿಕ ವಿಷಯಗಳಲ್ಲಿ ಅಳವಾದ ಜ್ಞಾನ ಮತ್ತು ನಿರಂತರ ಅಧ್ಯಯನ ಇರುವಂಥ ಶ್ರೀನಿವಾಸ ಮಠ ಸದ್ಯಕ್ಕೆ ಬೆಂಗಳೂರಿನಲ್ಲಿ ವಾಸವಿದ್ದು, ಜ್ಯೋತಿಷ್ಯವನ್ನು ವೃತ್ತಿಯಾಗಿ ಸ್ವೀಕರಿಸಿದ್ದಾರೆ.

Latest News

Related Posts