Sri Gurubhyo Logo

ಸೋಂದಾ ಕ್ಷೇತ್ರದಲ್ಲಿ ಫೆ. 25 ರಿಂದ ಮಾರ್ಚ್ 7 ರವರೆಗೆ ರಮಾತ್ರಿವಿಕ್ರಮ ರಥೋತ್ಸವ, ವಾದಿರಾಜರ ಆರಾಧನೆ: ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ

Sode Rama Trivikram God Temple and Swami Vishwa Vallabha Tirtharu
ಸೋದೆಯಲ್ಲಿ ಇರುವಂಥ ರಮಾತ್ರಿವಿಕ್ರಮರ ಸನ್ನಿಧಿ

2026ನೇ ಇಸವಿಯ ಮಾರ್ಚ್ 4ರಂದು ರಮಾತ್ರಿವಿಕ್ರಮ ದೇವರ ಮಹಾ ರಥೋತ್ಸವ ಹಾಗೂ ಮಾರ್ಚ್ 6ನೇ ತಾರೀಕಿನಂದು ಭಾವಿ ಸಮೀರ, ಸೋದೆ ಮಠದ ವಾದಿರಾಜ ಗುರು ಸಾರ್ವಭೌಮರ ಆರಾಧನಾ ಮಹೋತ್ಸವವು ಸೋಂದಾದಲ್ಲಿ ನಡೆಯುಲಿದೆ. ಅದಕ್ಕೂ ಮುನ್ನ ಫೆಬ್ರವರಿ 25ನೇ ತಾರೀಕಿನಿಂದ ಆರಂಭವಾಗಿ ಮಾರ್ಚ್ 7ನೇ ತಾರೀಕಿನವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಸೋಂದಾ ಕ್ಷೇತ್ರದಲ್ಲಿ ನಡೆಯಲಿವೆ. ಆ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನೀಡಲಾಗುತ್ತಿದೆ. ಇಲ್ಲಿರುವ ಮಾಹಿತಿಯಿಂದ ಯಾವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಹುದು ಎಂಬ ಬಗ್ಗೆ ಪೂರ್ವಭಾವಿಯಾಗಿ ಯೋಜನೆ ಮಾಡಿಕೊಳ್ಳಬಹುದು.

ಫೆಬ್ರವರಿ 25, 2026, ಬುಧವಾರ (ನವಮಿ)– ಭೇರೀತಾಡನ, ಮೃತ್ತಿಕಾಹರಣಪೂರ್ವಕ ಅಂಕುರಾರೋಪಣ

ಫೆಬ್ರವರಿ 26, 2026, ಗುರುವಾರ (ದಶಮಿ)– ಧ್ವಜಾರೋಹಣ (ಧ್ವಜಬುತ್ತಿ), ರಾತ್ರಿ: ರತ್ನ ಮಂಟಪೋತ್ಸವ

ಫೆಬ್ರವರಿ 27, 2026, ಶುಕ್ರವಾರ (ಏಕಾದಶಿ)– ರಾತ್ರಿ: ಸಿಂಹೋತ್ಸವ

ಫೆಬ್ರವರಿ 28, 2026, ಶನಿವಾರ (ದಶಮಿ)– ರಾತ್ರಿ: ವಸಂತೋತ್ಸವ, ಗಜೋತ್ಸವ

ಮಾರ್ಚ್ 1, 2026, ಭಾನುವಾರ (ತ್ರಯೋದಶಿ)– ಶೇಷೋತ್ಸವ

ಮಾರ್ಚ್ 2, 2026, ಸೋಮವಾರ (ಚತುರ್ದಶಿ)– ರಾತ್ರಿ: ಭೂತರಾಜರ ವಿಶೇಷ ಪೂಜೆ, ದಂಡೆಬಲಿ, ಗರುಡೋತ್ಸವ

ಮಾರ್ಚ್ 3, 2026, ಮಂಗಳವಾರ (ಹುಣ್ಣಿಮೆ)– ರಾತ್ರಿ: ಬ್ರಹ್ಮರಥೋತ್ಸವ

ಮಾರ್ಚ್ 4, 2026, ಬುಧವಾರ (ಪಾಡ್ಯ)– ಬೆಳಗ್ಗೆ: ರಮಾತ್ರಿವಕ್ರಮ ದೇವರ ಕಲ್ಯಾಣೋತ್ಸವ, ಅವಭೃತ ಸ್ನಾನ, ಧ್ವಜಾವರೋಹಣ. ರಾತ್ರಿ: ವೇಣುಗೋಪಾಲಕೃಷ್ಣ ದೇವರು, ಮುಖ್ಯಪ್ರಾಣ ದೇವರು ಹಾಗೂ ರುದ್ರದೇವರ ಸನ್ನಿಧಿಯಲ್ಲಿ ರಂಗಪೂಜೆ

ಮಾರ್ಚ್ 5, 2026, ಗುರುವಾರ (ದ್ವಿತೀಯಾ)– ರಾತ್ರಿ: ಶಾಕೋತ್ಸವ

ಮಾರ್ಚ್ 6, 2026, ಶುಕ್ರವಾರ (ತೃತೀಯಾ)– ಬೆಳಗ್ಗೆ:  ವಾದಿರಾಜ ಗುರುಸಾರ್ವಭೌಮರ ಆರಾಧನಾ ಮಹೋತ್ಸವ, ಶ್ರೀಗುರುರಾಜರ ಗದ್ದುಗೆ ಪೂಜೆ. ರಾತ್ರಿ: ಗುರುರಾಜರ ಮಹಾರಥೋತ್ಸವ

ಮಾರ್ಚ್ 7, 2026, ಶನಿವಾರ (ಚತುರ್ಥಿ)– ರಾತ್ರಿ: ಭೂತರಾಜರ ಕ್ಷಮಾಪಣಾ ಪೂಜೆ. 

ಸೋದೆ ವಾದಿರಾಜ ಮಠ ವೆಬ್ ಸೈಟ್ ವಿಳಾಸ: https://www.sodematha.in/index.html

ಉಡುಪಿ ಪರ್ಯಾಯ 2026: ಎರಡು ವರ್ಷದ ಪದ್ಧತಿ ತಂದ ಕ್ರಾಂತಿಕಾರಿ ಯತಿ ಶ್ರೀ ವಾದಿರಾಜ ತೀರ್ಥರ ಅಪೂರ್ವ ಜೀವನ ಚರಿತ್ರೆ

ವಾದಿರಾಜರ ಜನನ ಮತ್ತು ಪೂರ್ವಾಶ್ರಮ

ವಾದಿರಾಜರು ಕ್ರಿ.ಶ. 1480ರಲ್ಲಿ ಕುಂದಾಪುರ ತಾಲೂಕಿನ ಹೂವಿನಕೆರೆ ಎಂಬ ಪುಟ್ಟ ಹಳ್ಳಿಯಲ್ಲಿ ಜನಿಸಿದರು.

  • ಪೂರ್ವಾಶ್ರಮದ ಹೆಸರು: ಭೂವರಾಹ.
  • ತಂದೆ-ತಾಯಿ: ರಾಮಾಚಾರ್ಯ ಮತ್ತು ಗೌರಿ ದೇವಿ. ಈ ದಂಪತಿಗಳಿಗೆ ಮಕ್ಕಳಿರಲಿಲ್ಲ. ಶ್ರೀ ವಾಗೀಶ ತೀರ್ಥರ ಅನುಗ್ರಹದಿಂದ ಜನಿಸಿದ ಇವರು, “ಮಗು ಮನೆಯೊಳಗೆ ಹುಟ್ಟಿದರೆ ಸಂಸಾರಕ್ಕೆ, ಮನೆಯ ಹೊರಗೆ ಹುಟ್ಟಿದರೆ ಮಠಕ್ಕೆ” ಎಂಬ ವಾಗ್ದಾನದಂತೆ ಹೊಲದಲ್ಲಿ ಜನಿಸಿದ್ದರಿಂದ, ಸನ್ಯಾಸ ದೀಕ್ಷೆ ಪಡೆದರು. 

 ಸೋದೆ ಮಠದ ಪರಂಪರೆ

ಉಡುಪಿಯ ಎಂಟು ಮಠಗಳನ್ನು (ಅಷ್ಟಮಠಗಳನ್ನು) ಶ್ರೀ ಮಧ್ವಾಚಾರ್ಯರು ಸ್ಥಾಪಿಸಿದರು. ಈ ಪೈಕಿ ಸೋದೆ ಮಠವೂ ಒಂದು.

  • ಪ್ರಥಮ ಯತಿಗಳು: ಶ್ರೀ ಮಧ್ವಾಚಾರ್ಯರ ಪೂರ್ವಾಶ್ರಮದ ಸಹೋದರರಾದ ಶ್ರೀ ವಿಷ್ಣು ತೀರ್ಥರು ಸೋದೆ ಮಠದ ಮೊದಲ ಯತಿಗಳು.
  • ವಾದಿರಾಜರ ಸ್ಥಾನ: ಶ್ರೀ ವಾದಿರಾಜ ತೀರ್ಥರು ಈ ಸೋದೆ ಮಠದ ಪರಂಪರೆಯಲ್ಲಿ ಬಂದ 20ನೇ ಯತಿಗಳು.
  • ಹೆಸರು ಬರಲು ಕಾರಣ: ಈ ಮಠಕ್ಕೆ ಮೊದಲು ‘ಕುಂಭಾಸಿ ಮಠ’ ಎಂಬ ಹೆಸರಿತ್ತು. ವಾದಿರಾಜರು ಉತ್ತರ ಕನ್ನಡದ ಶಿರಸಿ ಬಳಿ ಸೋದೆ (ಸ್ವಾದಿ) ಎಂಬಲ್ಲಿ ನೆಲೆ ನಿಂತು, ಅಲ್ಲಿಂದ ಆಡಳಿತ ನಡೆಸಿದ್ದರಿಂದ ಈ ಮಠಕ್ಕೆ ‘ಸೋದೆ ಮಠ’ ಎಂಬ ಹೆಸರು ಸ್ಥಿರವಾಯಿತು.
ಸೋದೆ ವಾದಿರಾಜ ಮಠದ ವಿಶ್ವವಲ್ಲಭ ತೀರ್ಥ ಶ್ರೀಪಾದಂಗಳವರು

ಪರ್ಯಾಯ ಪದ್ಧತಿಯ ಕ್ರಾಂತಿಕಾರಿ ಸುಧಾರಣೆ

ವಾದಿರಾಜರಿಗಿಂತ ಮೊದಲು ಉಡುಪಿ ಕೃಷ್ಣನ ಪೂಜಾ ಅಧಿಕಾರವು ಪ್ರತಿ ಮಠಕ್ಕೆ ಕೇವಲ ಎರಡು ತಿಂಗಳ ಅವಧಿಗೆ ಮಾತ್ರ ಸೀಮಿತವಾಗಿತ್ತು. ಇದರಿಂದಾಗಿ ದೇವಸ್ಥಾನದ ಸಮಗ್ರ ಅಭಿವೃದ್ಧಿ ಸಾಧ್ಯವಾಗುತ್ತಿಲ್ಲ ಎಂದು ಅರಿತ ವಾದಿರಾಜರು:

  • ಪೂಜೆಯ ಅವಧಿಯನ್ನು ಎರಡು ತಿಂಗಳಿಂದ ಎರಡು ವರ್ಷಕ್ಕೆ ಏರಿಸಿದರು.
  • ಈ ಪದ್ಧತಿಯನ್ನು ‘ಪರ್ಯಾಯ ಪದ್ಧತಿ’ ಎಂದು ಕರೆಯಲಾಯಿತು. ಇದರಿಂದ ಮಠಗಳಿಗೆ ದೇವಸ್ಥಾನದ ಆಡಳಿತ ಮತ್ತು ಭಕ್ತರ ಸೇವೆಯಲ್ಲಿ ತೊಡಗಿಸಿಕೊಳ್ಳಲು ಹೆಚ್ಚಿನ ಸಮಯ ಸಿಕ್ಕಂತಾಯಿತು.

ಆರಾಧ್ಯ ದೈವ ಮತ್ತು ‘ವಾದಿರಾಜ ಗುಳ್ಳ’

ವಾದಿರಾಜರ ಇಷ್ಟದೈವ ಶ್ರೀ ಹಯಗ್ರೀವ ದೇವರು. ಅವರು ದೇವರಿಗೆ ‘ಹಯಗ್ರೀವ ಮಡ್ಡಿ’ ಎಂಬ ನೈವೇದ್ಯವನ್ನು ಅರ್ಪಿಸುತ್ತಿದ್ದರು. ಈ ಸಂದರ್ಭದಲ್ಲಿ ಸಾಕ್ಷಾತ್ ಭಗವಂತನೇ ಕುದುರೆಯ ರೂಪದಲ್ಲಿ ಬಂದು ನೈವೇದ್ಯ ಸ್ವೀಕರಿಸುತ್ತಿದ್ದ ಎಂಬ ಕಥೆ ಐತಿಹಾಸಿಕವಾಗಿ ಪ್ರಸಿದ್ಧವಾಗಿದೆ. ಉಡುಪಿಯ ‘ಮಟ್ಟು’ ಗ್ರಾಮದ ರೈತರು ಬೆಳೆದ ಬದನೆಕಾಯಿಯನ್ನು ವಾದಿರಾಜರು ವಿಷಮುಕ್ತಗೊಳಿಸಿ ಶ್ರೀಕೃಷ್ಣನಿಗೆ ಅರ್ಪಿಸಿದ ನಂತರ, ಆ ತಳಿ ‘ವಾದಿರಾಜ ಗುಳ್ಳ’ (ಮಟ್ಟು ಗುಳ್ಳ) ಎಂದೇ ಪ್ರಖ್ಯಾತಿಯಾಯಿತು. ಇಂದಿಗೂ ಪರ್ಯಾಯೋತ್ಸವದಲ್ಲಿ ಈ ಬದನೆಕಾಯಿಗೆ ವಿಶೇಷ ಪ್ರಾಮುಖ್ಯತೆ ಇದೆ.

ಸಾಹಿತ್ಯ ಮತ್ತು ಕೃತಿ ರಚನೆ

ವಾದಿರಾಜರು ಬಹುಭಾಷಾ ಪಂಡಿತರು. ಸಂಸ್ಕೃತದಲ್ಲಿ ಅವರು ಬರೆದ ‘ಯುಕ್ತಿ ಮಲ್ಲಿಕಾ’, ‘ರುಗ್ಮಿಣೀಶ ವಿಜಯ’ ಹಾಗೂ ‘ತೀರ್ಥ ಪ್ರಬಂಧ’ ಶ್ರೇಷ್ಠ ಕೃತಿಗಳಾಗಿವೆ. ಕನ್ನಡದಲ್ಲಿ ‘ಹಯವದನ’ ಎಂಬ ಅಂಕಿತದಲ್ಲಿ ದಾಸ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಇವರು ರಚಿಸಿದ ‘ಲಕ್ಷ್ಮೀ ಶೋಭಾನೆ’ ಹಾಡು ಇಂದಿಗೂ ಮಂಗಳಕರ ಕಾರ್ಯಗಳಲ್ಲಿ ಹಾಡಲಾಗುತ್ತದೆ.

ಮಾಘ ಪೌರ್ಣಮಿ ವಿಶೇಷ: ಗಜೇಂದ್ರ ಮೋಕ್ಷದ ಪುಣ್ಯಕಥೆ ಮತ್ತು ವಾದಿರಾಜ ತೀರ್ಥರ ಭಕ್ತಿ ಲಹರಿ

ಸಶರೀರ ವೃಂದಾವನ ಪ್ರವೇಶ

ವಾದಿರಾಜರು ಸುಮಾರು 120 ವರ್ಷಗಳ ಕಾಲ ಸಮಾಜದ ಉದ್ಧಾರಕ್ಕಾಗಿ ಶ್ರಮಿಸಿ, ಕ್ರಿ.ಶ. 1600ರಲ್ಲಿ ಸೋದೆಯಲ್ಲಿ ಜೀವಂತವಾಗಿ (ಸಶರೀರ) ವೃಂದಾವನಸ್ಥರಾದರು. ವಾದಿರಾಜರು ತತ್ತ್ವವಾದ ಸಿದ್ಧಾಂತಕ್ಕೆ ಹೊಸ ಭಾಷ್ಯ ಬರೆದವರು ಮಾತ್ರವಲ್ಲ, ಉಡುಪಿಯ ಧಾರ್ಮಿಕ ಚೌಕಟ್ಟನ್ನು ವ್ಯವಸ್ಥಿತಗೊಳಿಸಿದ ಮಹಾನ್ ಪುರುಷರು. ಅವರ ಜೀವನ ಮತ್ತು ಸಾಧನೆಗಳು ಇಂದಿಗೂ ಭಕ್ತರಿಗೆ ದಾರಿದೀಪವಾಗಿವೆ.

ಲೇಖನ- ಶ್ರೀನಿವಾಸ ಮಠ

ಶ್ರೀನಿವಾಸ ಮಠ

ಸಂಪಾದಕರು, ಶ್ರೀಗುರುಭ್ಯೋ.ಕಾಮ್

ಪತ್ರಿಕೋದ್ಯಮದಲ್ಲಿ ಹದಿನೆಂಟು ವರ್ಷಕ್ಕೂ ಹೆಚ್ಚು ಅನುಭವ ಇರುವ ಲೇಖಕ. ಕನ್ನಡದ ಪ್ರಮುಖ ದಿನಪತ್ರಿಕೆಗಳು ಹಾಗೂ ವಾರಪತ್ರಿಕೆ ಮತ್ತು ಆನ್ ಲೈನ್ ವೆಬ್ ಪೋರ್ಟಲ್ ಗಳಲ್ಲಿ ವಿವಿಧ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ವೈದಿಕ ಜ್ಯೋತಿಷ್ಯವನ್ನು ಪದ್ಧತಿಯಿಂದ ಅಭ್ಯಾಸ ಮಾಡಿರುವಂಥ ಇವರು, ಈ ತನಕ ಮೂರು ಸಾವಿರಕ್ಕೂ ಹೆಚ್ಚು ಜ್ಯೋತಿಷ್ಯ ಲೇಖನಗಳನ್ನು ವಿವಿಧ ವೆಬ್ ಪೋರ್ಟಲ್ ಗಳಿಗಾಗಿ ಬರೆದಿದ್ದಾರೆ. ಅಧ್ಯಾತ್ಮ, ಜ್ಯೋತಿಷ್ಯ ಹಾಗೂ ಧಾರ್ಮಿಕ ವಿಷಯಗಳಲ್ಲಿ ಅಳವಾದ ಜ್ಞಾನ ಮತ್ತು ನಿರಂತರ ಅಧ್ಯಯನ ಇರುವಂಥ ಶ್ರೀನಿವಾಸ ಮಠ ಸದ್ಯಕ್ಕೆ ಬೆಂಗಳೂರಿನಲ್ಲಿ ವಾಸವಿದ್ದು, ಜ್ಯೋತಿಷ್ಯವನ್ನು ವೃತ್ತಿಯಾಗಿ ಸ್ವೀಕರಿಸಿದ್ದಾರೆ.

Latest News

Related Posts