Sri Gurubhyo Logo

ಸೋಂದಾ ಕ್ಷೇತ್ರದಲ್ಲಿ ವೈಭವದ ಆರಾಧನೆ ಮಾರ್ಚ್ 6ಕ್ಕೆ: ಶ್ರೀ ವಾದಿರಾಜರ ಸ್ತುತಿ ಮತ್ತು ಮಠದ ಪರಂಪರೆಯ ಸ್ಮರಣೆ

ಶಿರಸಿ ಹತ್ತಿರದ ಸೋದೆ ಮಠದಲ್ಲಿ ನಡೆದ ವಾರ್ಷಿಕ ಮಹಾಭಿಷೇಕದ ಸಂದರ್ಭದಲ್ಲಿನ ವೃಂದಾವನದ ಚಿತ್ರ
ಸೋದೆಯಲ್ಲಿ ಭಾವೀ ಸಮೀರ ವಾದಿರಾಜ ತೀರ್ಥರ ವಾರ್ಷಿಕ ಮಹಾಭಿಷೇಕ ಸಂದರ್ಭ (ಚಿತ್ರ ಕೃಪೆ- ಸೋದೆ ಮಠದ ವೆಬ್ ಸೈಟ್ ಗ್ಯಾಲರಿ) - ಫೈಲ್ ಚಿತ್ರ

ಇದೇ ಮಾರ್ಚ್ 6, 2026, ಶುಕ್ರವಾರ (ತೃತೀಯಾ) ಸೋದೆ  ವಾದಿರಾಜ ಗುರುಸಾರ್ವಭೌಮರ ಆರಾಧನಾ ಮಹೋತ್ಸವ, ಶ್ರೀಗುರುರಾಜರ ಗದ್ದುಗೆ ಪೂಜೆ ಇದೆ. ಆ ಹಿನ್ನೆಲೆಯಲ್ಲಿ ಮಠದ ಗುರು ಪರಂಪರೆಯನ್ನು ಸ್ಮರಿಸುವ ಪ್ರಯತ್ನವಾಗಿ ಈ ಲೇಖನ ನಿಮ್ಮ ಮುಂದಿದೆ. ಇದರಲ್ಲಿ ವೇದವೇದ್ಯ ತೀರ್ಥರು ರಚಿಸಿದಂಥ ವಾದಿರಾಜರ ಸ್ತುತಿಯೂ ಇದೆ. ಉಡುಪಿಯ ಅಷ್ಟ ಮಠಗಳಲ್ಲಿ ಒಂದಾದ ಸೋದೆ ಮಠವು (ಸೋಂದಾ ಮಠ) ಅತ್ಯಂತ ಪುರಾತನ ಮತ್ತು ಪವಿತ್ರವಾದ ಇತಿಹಾಸವನ್ನು ಹೊಂದಿದೆ. ಜಗದ್ಗುರು ಶ್ರೀ ಮಧ್ವಾಚಾರ್ಯರು ತಮ್ಮ ಎಂಟು ಮಂದಿ ಶಿಷ್ಯರಿಗೆ ಸನ್ಯಾಸ ದೀಕ್ಷೆ ನೀಡಿ, ಉಡುಪಿಯ ಶ್ರೀ ಕೃಷ್ಣನ ಪೂಜಾ ಕೈಂಕರ್ಯಕ್ಕಾಗಿ ಅಷ್ಟ ಮಠಗಳನ್ನು ಸ್ಥಾಪಿಸಿದರು. ಈ ಪೈಕಿ ಸೋದೆ ಮಠವೂ ಒಂದು. ಈ ಮಠದ ಮೂಲ ಪುರುಷರು ಶ್ರೀ ಮಧ್ವಾಚಾರ್ಯರ ಪೂರ್ವಾಶ್ರಮದ ಸಹೋದರರಾದ ಶ್ರೀ ವಿಷ್ಣುತೀರ್ಥರು.

ಇತಿಹಾಸ ಮತ್ತು ಮಹತ್ವ:

ಆರಂಭದಲ್ಲಿ ಈ ಮಠಕ್ಕೆ ‘ಕುಂಭಾಸಿ ಮಠ’ ಎಂಬ ಹೆಸರಿತ್ತು. ಆದರೆ ಪರಂಪರೆಯ 20ನೇ ಯತಿಗಳಾದ ಶ್ರೀ ವಾದಿರಾಜ ತೀರ್ಥರ ಕಾಲದಲ್ಲಿ ಮಠಕ್ಕೆ ಹೆಚ್ಚಿನ ಖ್ಯಾತಿ ಬಂದಿತು. ಶ್ರೀ ವಾದಿರಾಜರು ತಮ್ಮ ತಪೋಶಕ್ತಿಯಿಂದ ಉತ್ತರ ಕನ್ನಡ ಜಿಲ್ಲೆಯ ಸೋದೆ (ಸೋಂದಾ) ಎಂಬಲ್ಲಿ ಮಠದ ಮುಖ್ಯ ಕೇಂದ್ರವನ್ನು ಸ್ಥಾಪಿಸಿದರು. ಅಂದಿನಿಂದ ಇದು ‘ಸೋದೆ ಮಠ’ ಎಂದು ಪ್ರಸಿದ್ಧವಾಯಿತು. ಈ ಮಠದಲ್ಲಿ ಶ್ರೀ ಭೂವರಾಹ ಮತ್ತು ಶ್ರೀ ಹಯಗ್ರೀವ ದೇವರುಗಳನ್ನು ಮುಖ್ಯ ಆರಾಧ್ಯ ದೈವಗಳಾಗಿ ಪೂಜಿಸಲಾಗುತ್ತದೆ.

ಗುರು ಪರಂಪರೆಯ ಪಟ್ಟಿ:

ಸಂಖ್ಯೆ ಯತಿಗಳ ಹೆಸರು
1 ಶ್ರೀ ವಿಷ್ಣುತೀರ್ಥರು
2 ಶ್ರೀ ವೇದವ್ಯಾಸ ತೀರ್ಥರು
3 ಶ್ರೀ ವೇದ್ಯ ತೀರ್ಥರು
4 ಶ್ರೀ ವೇದಗರ್ಭ ತೀರ್ಥರು
5 ಶ್ರೀ ವಾರೇಶ ತೀರ್ಥರು
6 ಶ್ರೀ ವಾಮನ ತೀರ್ಥರು
7 ಶ್ರೀ ವಾಸುದೇವ ತೀರ್ಥರು
8 ಶ್ರೀ ವೇದವ್ಯಾಸ ತೀರ್ಥರು (ದ್ವಿತೀಯ)
9 ಶ್ರೀ ವರಾಹ ತೀರ್ಥರು
10 ಶ್ರೀ ವೇದಾತ್ಮ ತೀರ್ಥರು
11 ಶ್ರೀ ವಿಶ್ವವಂದ್ಯ ತೀರ್ಥರು (ಪ್ರಥಮ)
12 ಶ್ರೀ ರತ್ನಗರ್ಭ ತೀರ್ಥರು
13 ಶ್ರೀ ವೇದಾಂಗ ತೀರ್ಥರು
14 ಶ್ರೀ ವಿದ್ಯಾಪತಿ ತೀರ್ಥರು
15 ಶ್ರೀ ವಿಶ್ವವಂದ್ಯ ತೀರ್ಥರು (ದ್ವಿತೀಯ)
16 ಶ್ರೀ ವಿಶ್ವ ತೀರ್ಥರು
17 ಶ್ರೀ ವಿಠ್ಠಲ ತೀರ್ಥರು
18 ಶ್ರೀ ವರದರಾಜ ತೀರ್ಥರು (ಪ್ರಥಮ)
19 ಶ್ರೀ ವಾಗೀಶ ತೀರ್ಥರು
20 ಶ್ರೀ ವಾದಿರಾಜ ತೀರ್ಥರು
21 ಶ್ರೀ ವೇದವೇದ್ಯ ತೀರ್ಥರು 
22 ಶ್ರೀ ವಿದ್ಯಾನಿಧಿ ತೀರ್ಥರು
23 ಶ್ರೀ ವೇದನಿಧಿ ತೀರ್ಥರು
24 ಶ್ರೀ ವರದರಾಜ ತೀರ್ಥರು (ದ್ವಿತೀಯ)
25 ಶ್ರೀ ವಿಶ್ವಾಧೀರಾಜ ತೀರ್ಥರು
26 ಶ್ರೀ ವಾದಿವಂದ್ಯ ತೀರ್ಥರು
27 ಶ್ರೀ ವಿಶ್ವವಂದ್ಯ ತೀರ್ಥರು (ತೃತೀಯ)
28 ಶ್ರೀ ವಿಬುಧವರ್ಯ ತೀರ್ಥರು
29 ಶ್ರೀ ವಿಶ್ವನಿಧಿ ತೀರ್ಥರು
30 ಶ್ರೀ ವಿಶ್ವಾಧೀಶ ತೀರ್ಥರು (ಪ್ರಥಮ)
31 ಶ್ರೀ ವಿಶ್ವೇಶ ತೀರ್ಥರು
32 ಶ್ರೀ ವಿಶ್ವಪ್ರಿಯ ತೀರ್ಥರು
33 ಶ್ರೀ ವಿಶ್ವಾಧೀಶ ತೀರ್ಥರು (ದ್ವಿತೀಯ)
34 ಶ್ರೀ ವಿಶ್ವೇಂದ್ರ ತೀರ್ಥರು
35 ಶ್ರೀ ವಿಶ್ವೋತ್ತಮ ತೀರ್ಥರು
36 ಶ್ರೀ ವಿಶ್ವವಲ್ಲಭ ತೀರ್ಥರು (ಪ್ರಸ್ತುತ ಪೀಠಾಧಿಪತಿಗಳು)

ವಾದಿರಾಜ ತೀರ್ಥರ ವಿಶೇಷತೆ:

ಶ್ರೀ ವಾದಿರಾಜ ತೀರ್ಥರು ಈ ಮಠದ ಅತ್ಯಂತ ಪ್ರಭಾವಿ ಯತಿಗಳು. ಇವರು 120 ವರ್ಷಗಳ ಕಾಲ ಜೀವಿಸಿದ್ದು, ಅನೇಕ ಗ್ರಂಥಗಳನ್ನು ರಚಿಸಿದ್ದಾರೆ. ಸೋದೆಯಲ್ಲಿ ಇವರು ‘ಪಂಚ ವೃಂದಾವನ’ಗಳಲ್ಲಿ ಸಶರೀರರಾಗಿ ಮರೆಯಾದರು ಎಂಬ ನಂಬಿಕೆ ಇದೆ. ಇಂದಿಗೂ ಸೋದೆ ಕ್ಷೇತ್ರವು ಒಂದು ಜಾಗೃತ ಪುಣ್ಯಕ್ಷೇತ್ರವಾಗಿ ಭಕ್ತರನ್ನು ಸೆಳೆಯುತ್ತಿದೆ. ಪ್ರಸ್ತುತ ಶ್ರೀ ವಿಶ್ವವಲ್ಲಭ ತೀರ್ಥರು ಮಠದ ಪರಂಪರೆಯನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ.

ಉಡುಪಿ ಪರ್ಯಾಯ 2026: ಎರಡು ವರ್ಷದ ಪದ್ಧತಿ ತಂದ ಕ್ರಾಂತಿಕಾರಿ ಯತಿ ಶ್ರೀ ವಾದಿರಾಜ ತೀರ್ಥರ ಅಪೂರ್ವ ಜೀವನ ಚರಿತ್ರೆ

ಶ್ರೀ ವಾದಿರಾಜಸ್ತುತಿಃ (ವೇದವೇದ್ಯತೀರ್ಥ ವಿರಚಿತ)

ಚಂದ್ರಾರ್ಕ-ಕೋಟಿ-ಲಾವಣ್ಯ-ಲಕ್ಷ್ಮೀಶ-ಕರುಣಾಲಯಮ್ |
ವಂದಿತಾಂಘ್ರಿ-ಯುಗಂ ಸದ್ಭಿರ್ವಾದಿರಾಜಂ ನತೋಽಸ್ಮ್ಯಹಮ್ || ೧ ||

ಇಂದ್ರಾದಿ-ದೇವತಾರಾಧ್ಯ-ಮಧ್ವಂಶಜ-ಮಾದರಾತ್ |
ವಂದಿತಾಂಘ್ರಿ-ಯುಗಂ ಸದ್ಭಿರ್ವಾದಿರಾಜಂ ನತೋಽಸ್ಮ್ಯಹಮ್ || ೨ ||

ಶ್ರೀ-ಹಯಾಸ್ಯಾರ್ಚನ-ರತಂ ಸಾಧು-ವೇದಾರ್ಥ-ಬೋಧಕಮ್ |
ವಂದಿತಾಂಘ್ರಿ-ಯುಗಂ ಸದ್ಭಿರ್ವಾದಿರಾಜಂ ನತೋಽಸ್ಮ್ಯಹಮ್ || ೩ ||

ದುರ್ವಾದಿವ-ಮತ್ತ-ವಿಧ್ವಂಸ-ಕಂಠೀರವ-ಮಹರ್ನಿಶಮ್ |
ವಂದಿತಾಂಘ್ರಿ-ಯುಗಂ ಸದ್ಭಿರ್ವಾದಿರಾಜಂ ನತೋಽಸ್ಮ್ಯಹಮ್ || ೪ ||

ಸರ್ವ-ಕಾಮ-ಪ್ರದಂ ಶ್ರೀ-ಮದ್-ದ್ವಿಜೇಂದ್ರ-ಕುಲಶೇಖರಮ್ |
ವಂದಿತಾಂಘ್ರಿ-ಯುಗಂ ಸದ್ಭಿರ್ವಾದಿರಾಜಂ ನತೋಽಸ್ಮ್ಯಹಮ್ || ೫ ||

ಮಂತ್ರ-ಕ್ರಮ-ವಿಚಾರಜ್ಞಂ ತಂತ್ರ-ಶಾಸ್ತ್ರಪ್ರವರ್ತಕಮ್ |
ವಂದಿತಾಂಘ್ರಿ-ಯುಗಂ ಸದ್ಭಿರ್ವಾದಿರಾಜಂ ನತೋಽಸ್ಮ್ಯಹಮ್ || ೬ ||

ಜ್ಞಾನಾದಿ-ಗುಣ-ಸಂಪನ್ನಮಶೇಷಾಘ-ಹರಂ ವಿಭುಮ್ |
ವಂದಿತಾಂಘ್ರಿ-ಯುಗಂ ಸದ್ಭಿರ್ವಾದಿರಾಜಂ ನತೋಽಸ್ಮ್ಯಹಮ್ || ೭ ||

ಪ್ರದಕ್ಷಿಣೀ-ಕೃತಭುವಂ ಸ್ವಕ್ಷ-ಮಾಲಾಧರಂ ವಿಭುಮ್ |
ವಂದಿತಾಂಘ್ರಿ-ಯುಗಂ ಸದ್ಭಿರ್ವಾದಿರಾಜಂ ನತೋಽಸ್ಮ್ಯಹಮ್ || ೮ ||

ವಿಚಿತ್ರ-ಮುಕುಟೋಪೇತಮ್-ಅಚಿಂತ್ಯಾದ್ಭುತ-ದರ್ಶನಮ್ |
ವಂದಿತಾಂಘ್ರಿ-ಯುಗಂ ಸದ್ಭಿರ್ವಾದಿರಾಜಂ ನತೋಽಸ್ಮ್ಯಹಮ್ || ೯ ||

ಪುರತೋ ವಾಸುದೇವಸ್ಯ ನಿವಸಂತಂ ಮಹಾದ್ಯುತಿಮ್ |
ವಂದಿತಾಂಘ್ರಿ-ಯುಗಂ ಸದ್ಭಿರ್ವಾದಿರಾಜಂ ನತೋಽಸ್ಮ್ಯಹಮ್ || ೧೦ ||

|| ಇತಿ ಶ್ರೀವೇದವೇದ್ಯತೀರ್ಥಕೃತಾ ಶ್ರೀವಾದಿರಾಜಗುರುಸ್ತುತಿಃ ||

ಸೋದೆ ಮಠದ ಪ್ರಸ್ತುತ ಪೀಠಾಧಿಪತಿಗಳು: ಶ್ರೀ ವಿಶ್ವವಲ್ಲಭ ತೀರ್ಥರು

ಶ್ರೀ ಸೋದೆ ವಾದಿರಾಜ ಮಠದ ಗುರು ಪರಂಪರೆಯ 36ನೇ ಯತಿಗಳಾಗಿರುವ ಶ್ರೀ ವಿಶ್ವವಲ್ಲಭ ತೀರ್ಥರು ಇಂದು ಮಾಧ್ವ ಪರಂಪರೆಯಲ್ಲಿ ಅತ್ಯಂತ ಕ್ರಿಯಾಶೀಲ ಮತ್ತು ವಿದ್ವತ್ಪೂರ್ಣ ಯತಿಗಳಾಗಿ ಗುರುತಿಸಿಕೊಂಡಿದ್ದಾರೆ.

ಪೂರ್ವಾಶ್ರಮ ಮತ್ತು ಬಾಲ್ಯ:

ಶ್ರೀಗಳು ಪೂರ್ವಾಶ್ರಮದಲ್ಲಿ ಉಡುಪಿಯ ಸಮೀಪದ ಪಾಡಿಗಾರು ಎಂಬಲ್ಲಿ 24-03-1991 ರಂದು ಶ್ರೀ ಶ್ರೀನಿವಾಸ ತಂತ್ರಿ ಮತ್ತು ಶ್ರೀಮತಿ ವೇದವತಿ ದಂಪತಿಗಳ ಪುತ್ರರಾಗಿ ಜನಿಸಿದರು. ಶ್ರೀಗಳ ಜನ್ಮನಾಮ ‘ರಾಘವ’. ಇವರ ಅಜ್ಜ ವಿದ್ವಾನ್ ಶ್ರೀ ಗುರುರಾಜ ತಂತ್ರಿಗಳು ಶ್ರೇಷ್ಠ ವಿದ್ವಾಂಸರಾಗಿದ್ದರು. ರಾಘವರು ಬಾಲ್ಯದಿಂದಲೇ ಏಕಾಂತಪ್ರಿಯರಾಗಿದ್ದು, ಶಿಸ್ತುಬದ್ಧ ಜೀವನವನ್ನು ರೂಢಿಸಿಕೊಂಡಿದ್ದರು.

ಸನ್ಯಾಸ ಸ್ವೀಕಾರ ಮತ್ತು ಶಿಕ್ಷಣ:

ತಮ್ಮ 15ನೇ ವಯಸ್ಸಿನಲ್ಲಿಯೇ ಅಂದರೆ 14-06-2006 ರಂದು ಸೋದೆಯ ಮೂಲ ಮಠದಲ್ಲಿ ಶ್ರೀ ವಿಶ್ವೋತ್ತಮ ತೀರ್ಥರಿಂದ ಸನ್ಯಾಸ ದೀಕ್ಷೆಯನ್ನು ಸ್ವೀಕರಿಸಿ ‘ಶ್ರೀ ವಿಶ್ವವಲ್ಲಭ ತೀರ್ಥ’ ಎಂಬ ನಾಮಧೇಯವನ್ನು ಪಡೆದರು. ಇವರು ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರ ಮಾರ್ಗದರ್ಶನದಲ್ಲಿ ಶಾಸ್ತ್ರಾಧ್ಯಯನ ಮಾಡಿದರು. ಇವರ ಗ್ರಹಣ ಶಕ್ತಿ ಮತ್ತು ಶ್ರದ್ಧೆಯು ಅಪ್ರತಿಮವಾದುದಾಗಿದೆ.

ಪ್ರಮುಖ ಸಾಧನೆಗಳು ಮತ್ತು ಕಾರ್ಯಗಳು:

  1. ಶಿಕ್ಷಣ ಕ್ಷೇತ್ರ: ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ತಾಂತ್ರಿಕ ಶಿಕ್ಷಣ ಒದಗಿಸಲು ಬಂಟ್ಕಳದಲ್ಲಿ ‘ಶ್ರೀ ಮಧ್ವ ವಾದಿರಾಜ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್‌ಮೆಂಟ್’ (SMVITM) ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ಇನಾಂಜೆಯಲ್ಲಿ ಇಂಗ್ಲಿಷ್ ಮಾಧ್ಯಮ ಶಾಲೆಯನ್ನು ಪ್ರಾರಂಭಿಸಿದ್ದಾರೆ.
  2. ಸಂಶೋಧನೆ ಮತ್ತು ಪ್ರಕಟಣೆ: ಹಸ್ತಪ್ರತಿಗಳನ್ನು ಸಂರಕ್ಷಿಸಲು ‘ಶ್ರೀಮದ್ವೃಂದಾವನಾಚಾರ್ಯ ಸಂಶೋಧನಾ ಹಾಗೂ ಪ್ರಕಾಶನ ಕೇಂದ್ರ’ವನ್ನು ಸ್ಥಾಪಿಸಿದ್ದಾರೆ. ಇವರ ಮಾರ್ಗದರ್ಶನದಲ್ಲಿ ‘ಯುಕ್ತಿಮಲ್ಲಿಕಾ’, ‘ಮಹಾಭಾರತ ತಾತ್ಪರ್ಯ ನಿರ್ಣಯ’ (ಭಾವಪ್ರಕಾಶಿಕಾ ವ್ಯಾಖ್ಯಾನ ಸಹಿತ) ಮುಂತಾದ ಅಮೂಲ್ಯ ಗ್ರಂಥಗಳು ಕನ್ನಡ ಅನುವಾದದೊಂದಿಗೆ ಪ್ರಕಟಗೊಂಡಿವೆ.
  3. ಸೋದೆ ಕ್ಷೇತ್ರದ ಅಭಿವೃದ್ಧಿ: ಸೋದೆಯಲ್ಲಿ ಐತಿಹಾಸಿಕ ‘ರಾಜಧಾಮ’ದ ನಿರ್ಮಾಣ, ಸುಸಜ್ಜಿತ ಗೋಶಾಲೆ ಮತ್ತು ಯಾಗಶಾಲೆಯ ನಿರ್ಮಾಣವನ್ನು ಮಾಡಿದ್ದಾರೆ.
  4. ತತ್ವ ಪ್ರಚಾರ: ‘ತತ್ತ್ವಮಲ್ಲಿಕಾ’ ಎಂಬ ಧಾರ್ಮಿಕ ಮತ್ತು ಸಾಂಸ್ಕೃತಿಕ ಮಾಸಪತ್ರಿಕೆಯನ್ನು ನಡೆಸುತ್ತಿದ್ದಾರೆ.

ಸೋಂದಾ ಕ್ಷೇತ್ರದಲ್ಲಿ ಫೆ. 25 ರಿಂದ ಮಾರ್ಚ್ 7 ರವರೆಗೆ ರಮಾತ್ರಿವಿಕ್ರಮ ರಥೋತ್ಸವ, ವಾದಿರಾಜರ ಆರಾಧನೆ: ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ

ಪರ್ಯಾಯ ವೈಭವ:

ಇವರು ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ 2012-2014 ರ ಅವಧಿಯಲ್ಲಿ ನಡೆಸಿದ ಪರ್ಯಾಯವು ಅತ್ಯಂತ ವೈಭವಯುತವಾಗಿತ್ತು. ನೂತನವಾಗಿ ‘ಬ್ರಹ್ಮರಥ’ವನ್ನು ಮಾಡಿಸುವ ಮೂಲಕ ಇತಿಹಾಸ ನಿರ್ಮಿಸಿದರು. ‘ನ ಭೂತೋ ನ ಭವಿಷ್ಯತಿ’ ಎಂಬಂತೆ ಇವರ ಪರ್ಯಾಯ ಕಾಲದಲ್ಲಿ ಅನ್ನದಾನ, ಜ್ಞಾನದಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆದವು. ಶ್ರೀ ವಿಶ್ವವಲ್ಲಭ ತೀರ್ಥರು ತಮ್ಮ ಗುರುಗಳಾದ ಶ್ರೀ ವಿಶ್ವೋತ್ತಮ ತೀರ್ಥರ ಹಾದಿಯಲ್ಲೇ ಸಾಗುತ್ತಾ, ಧರ್ಮ ಪ್ರಚಾರದ ಜೊತೆಗೆ ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. 

ಲೇಖನ- ಶ್ರೀನಿವಾಸ ಮಠ

ಶ್ರೀನಿವಾಸ ಮಠ

ಸಂಪಾದಕರು, ಶ್ರೀಗುರುಭ್ಯೋ.ಕಾಮ್

ಪತ್ರಿಕೋದ್ಯಮದಲ್ಲಿ ಹದಿನೆಂಟು ವರ್ಷಕ್ಕೂ ಹೆಚ್ಚು ಅನುಭವ ಇರುವ ಲೇಖಕ. ಕನ್ನಡದ ಪ್ರಮುಖ ದಿನಪತ್ರಿಕೆಗಳು ಹಾಗೂ ವಾರಪತ್ರಿಕೆ ಮತ್ತು ಆನ್ ಲೈನ್ ವೆಬ್ ಪೋರ್ಟಲ್ ಗಳಲ್ಲಿ ವಿವಿಧ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ವೈದಿಕ ಜ್ಯೋತಿಷ್ಯವನ್ನು ಪದ್ಧತಿಯಿಂದ ಅಭ್ಯಾಸ ಮಾಡಿರುವಂಥ ಇವರು, ಈ ತನಕ ಮೂರು ಸಾವಿರಕ್ಕೂ ಹೆಚ್ಚು ಜ್ಯೋತಿಷ್ಯ ಲೇಖನಗಳನ್ನು ವಿವಿಧ ವೆಬ್ ಪೋರ್ಟಲ್ ಗಳಿಗಾಗಿ ಬರೆದಿದ್ದಾರೆ. ಅಧ್ಯಾತ್ಮ, ಜ್ಯೋತಿಷ್ಯ ಹಾಗೂ ಧಾರ್ಮಿಕ ವಿಷಯಗಳಲ್ಲಿ ಅಳವಾದ ಜ್ಞಾನ ಮತ್ತು ನಿರಂತರ ಅಧ್ಯಯನ ಇರುವಂಥ ಶ್ರೀನಿವಾಸ ಮಠ ಸದ್ಯಕ್ಕೆ ಬೆಂಗಳೂರಿನಲ್ಲಿ ವಾಸವಿದ್ದು, ಜ್ಯೋತಿಷ್ಯವನ್ನು ವೃತ್ತಿಯಾಗಿ ಸ್ವೀಕರಿಸಿದ್ದಾರೆ.

Latest News

Related Posts