Sri Gurubhyo Logo

ಸಿಂಹ ರಾಶಿ ಯುಗಾದಿ ಫಲ 2026: ಅಷ್ಟಮ ಶನಿಯ ಕಾಟ, ಗುರುವಿನ ಅದೃಷ್ಟ; ಹೇಗಿರಲಿದೆ ನಿಮ್ಮ ಭವಿಷ್ಯ?

A majestic close-up portrait of a lion with a thick mane, looking directly into the camera with a calm and powerful expression against a dark background.
ಸಿಂಹ ರಾಶಿಯವರ ರಾಜಗಾಂಭೀರ್ಯ ಮತ್ತು ದೃಢ ವ್ಯಕ್ತಿತ್ವದ ಪ್ರತಿಬಿಂಬ.

2026ರ ಮಾರ್ಚ್ 19ರಿಂದ ಆರಂಭ ಆಗಲಿರುವ ‘ಪರಾಭವ ನಾಮ ಸಂವತ್ಸರ’ವು ಸಿಂಹ ರಾಶಿಯವರಿಗೆ ಒಂದು ಪರೀಕ್ಷಾ ಕಾಲ. ಈ ವರ್ಷ ಶನೈಶ್ಚರ ನಿಮ್ಮ ರಾಶಿಯಿಂದ ಎಂಟನೇ ಮನೆಯಲ್ಲಿ ಸಂಚರಿಸುತ್ತಿರುವುದು ಜೀವನದ ಮೇಲೆ ಯಾವ ರೀತಿಯ ಗಂಭೀರ ಪರಿಣಾಮ ಬೀರಲಿದೆ? ಅಷ್ಟಮ ಶನಿಯ ಕಾಟದ ನಡುವೆಯೂ ಗುರುವಿನ ಸಂಚಾರವು ನಿಮಗೆ ಯಾವ ರೀತಿ ರಕ್ಷಾಕವಚವಾಗಲಿದೆ? ಆರೋಗ್ಯ, ಹಣಕಾಸು ಮತ್ತು ವೃತ್ತಿ ಬದುಕಿನಲ್ಲಿ ನೀವು ಮಾಡಬೇಕಾದ ಮುನ್ನೆಚ್ಚರಿಕೆಗಳೇನು? ವಿಶ್ಲೇಷಣೆ ಇಲ್ಲಿದೆ.

ಸಿಂಹ ರಾಶಿಯವರ ಗುಣ ಸ್ವಭಾವ

ಸಿಂಹ ರಾಶಿಯವರು ಮಖಾ, ಪೂರ್ವಾ ಫಲ್ಗುಣಿ ಮತ್ತು ಉತ್ತರಾ ಫಲ್ಗುಣಿ ನಕ್ಷತ್ರದ ಮೊದಲ ಪಾದದಲ್ಲಿ ಜನಿಸಿದವರು. ರವಿ (ಸೂರ್ಯ) ಇವರ ರಾಶ್ಯಾಧಿಪತಿ ಆಗಿರುವುದರಿಂದ ಸಹಜವಾಗಿಯೇ ನಾಯಕರು, ಸ್ವಾಭಿಮಾನಿಗಳು ಮತ್ತು ಧೈರ್ಯವಂತರು. ವ್ಯಕ್ತಿತ್ವದಲ್ಲಿ ಒಂದು ರೀತಿಯ ರಾಜಗಾಂಭೀರ್ಯ ಇರುತ್ತದೆ. ಅನ್ಯಾಯದ ವಿರುದ್ಧ ಧ್ವನಿ ಎತ್ತುತ್ತಾರೆ, ಸಮಾಜದಲ್ಲಿ ಗೌರವಕ್ಕೆ ಹೆಚ್ಚಿನ ಬೆಲೆ ನೀಡುತ್ತಾರೆ. ಹಠವಾದಿಗಳಾದರೂ ಮೃದು ಮನಸ್ಸಿನವರು, ನಂಬಿದವರಿಗಾಗಿ ಏನು ಬೇಕಾದರೂ ಮಾಡಲು ಸಿದ್ಧರಿರುತ್ತಾರೆ. ಅಧಿಕಾರ ಚಲಾಯಿಸುವ ಗುಣ ಇವರಲ್ಲಿ ಸಹಜವಾಗಿಯೇ ಇರುತ್ತದೆ.

ಶನಿ ಸಂಚಾರ

ಈ ಸಂವತ್ಸರದಲ್ಲಿ ಶನಿ ಗ್ರಹವು ನಿಮ್ಮ ರಾಶಿಯಿಂದ ಎಂಟನೇ ಮನೆಯಾದ ಮೀನ ರಾಶಿಯಲ್ಲಿ ಸಂಚರಿಸಲಿದೆ. ಇದನ್ನು ಜ್ಯೋತಿಷ್ಯ ಶಾಸ್ತ್ರದಲ್ಲಿ ‘ಅಷ್ಟಮ ಶನಿ’ ಎಂದು ಕರೆಯಲಾಗುತ್ತದೆ. ಇದು ಅತ್ಯಂತ ಜಾಗರೂಕತೆಯಿಂದ ಇರಬೇಕಾದ ಸಮಯ. ಅನಗತ್ಯ ವಿವಾದಗಳು, ಮಾನಸಿಕ ಕ್ಲೇಶ ಮತ್ತು ಕೆಲಸಗಳಲ್ಲಿ ಅನಿರೀಕ್ಷಿತ ಅಡೆತಡೆಗಳು ಎದುರಾಗಬಹುದು. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ, ವಿಶೇಷವಾಗಿ ವಾಹನ ಚಾಲನೆಯಲ್ಲಿ ಎಚ್ಚರವಿರಲಿ. ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲು ವಿಳಂಬ ಆಗಬಹುದು. ಆದರೆ ಶನಿಯು ಆಸ್ತಿ ಅಥವಾ ವಿಮೆಯಂತಹ ಅನಿರೀಕ್ಷಿತ ಮೂಲಗಳಿಂದ ಧನಲಾಭ ನೀಡುವ ಸಾಧ್ಯತೆಯೂ ಇದೆ.

ಗುರು ಸಂಚಾರ

ಸಿಂಹ ರಾಶಿಯವರಿಗೆ ಈ ವರ್ಷ ಗುರುವು ಸಂಜೀವಿನಿಯಂತೆ ಕೆಲಸ ಮಾಡಲಿದ್ದಾನೆ. ಜೂನ್ 1ರ ತನಕ ಗುರು 11ನೇ ಮನೆಯಲ್ಲಿದ್ದು ಆರ್ಥಿಕ ಲಾಭ ನೀಡಲಿದ್ದಾನೆ. ಜೂನ್ 2ರಿಂದ ಅಕ್ಟೋಬರ್ 31ರ ತನಕ ಗುರುವು 12ನೇ ಮನೆಗೆ (ಕರ್ಕಾಟಕ) ಪ್ರವೇಶಿಸುವುದರಿಂದ ಶುಭ ಕಾರ್ಯಗಳಿಗಾಗಿ ಅಧಿಕ ಖರ್ಚು ಉಂಟಾಗಲಿದೆ. ನವೆಂಬರ್ 1ರಿಂದ ಜನವರಿ 24ರ ತನಕ ಗುರುವು ನಿಮ್ಮ ಜನ್ಮ ರಾಶಿಗೆ ಪ್ರವೇಶಿಸುತ್ತಾನೆ. ಶಾಸ್ತ್ರದ ಪ್ರಕಾರ ಜನ್ಮ ಗುರುವು ಸ್ಥಾನ ಬದಲಾವಣೆ ಅಥವಾ ಮಾನಸಿಕ ಒತ್ತಡ ತಂದರೂ ಶನಿಯ ದುಷ್ಪ್ರಭಾವವನ್ನು ತಗ್ಗಿಸುವ ಶಕ್ತಿ ಹೊಂದಿದ್ದಾನೆ. ಜನವರಿ 25ರ ನಂತರ ಗುರು ಪುನಃ 12ನೇ ಮನೆಗೆ ಹೋಗುವುದರಿಂದ ದೂರದ ಪ್ರಯಾಣದ ಯೋಗವಿದೆ.

ರಾಹು-ಕೇತು ಸಂಚಾರ

ವರ್ಷದ ಆರಂಭದಿಂದ ಡಿಸೆಂಬರ್ 5ರ ತನಕ ರಾಹುವು ನಿಮ್ಮ ರಾಶಿಯಿಂದ 7ನೇ ಮನೆಯಲ್ಲಿ (ಕುಂಭ) ಮತ್ತು ಕೇತುವು ಜನ್ಮ ರಾಶಿಯಲ್ಲಿ (ಸಿಂಹ) ಇರುತ್ತದೆ. ಇದು ದಾಂಪತ್ಯ ಜೀವನದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯ ಮತ್ತು ಪಾಲುದಾರಿಕೆ ವ್ಯವಹಾರದಲ್ಲಿ ಗೊಂದಲ ತರಬಹುದು. ಆದರೆ ಡಿಸೆಂಬರ್ 5ರ ನಂತರ ರಾಹುವು 6ನೇ ಮನೆಗೆ (ಮಕರ) ಮತ್ತು ಕೇತುವು 12ನೇ ಮನೆಗೆ (ಕರ್ಕಾಟಕ) ಪ್ರವೇಶಿಸುತ್ತದೆ. ಆರನೇ ಮನೆಯ ರಾಹುವು ಶತ್ರುನಾಶ ಮತ್ತು ಸಾಲಬಾಧೆಯಿಂದ ಮುಕ್ತಿ ನೀಡಲಿದ್ದಾನೆ. ಕೇತುವಿನ ಪ್ರಭಾವದಿಂದ ಆಧ್ಯಾತ್ಮಿಕ ಚಿಂತನೆ ಹೆಚ್ಚಲಿದೆ.

ಪರಿಹಾರಗಳು

  • ಶನಿ ಶಾಂತಿ: ಪ್ರತಿ ಶನಿವಾರ ಶನೈಶ್ಚರನಿಗೆ ಎಳ್ಳೆಣ್ಣೆ ದೀಪ ಹಚ್ಚಿ ಮತ್ತು ‘ಶನಿ ಅಷ್ಟೋತ್ತರ’ ಪಠಿಸಿ.
  • ಶಿವ ಆರಾಧನೆ: ಪ್ರತಿ ಸೋಮವಾರ ಶಿವನಿಗೆ ಅಭಿಷೇಕ ಮಾಡಿಸುವುದು ಅಷ್ಟಮ ಶನಿಯ ದೋಷವನ್ನು ತಗ್ಗಿಸುತ್ತದೆ.
  • ದಾನ: ಕಪ್ಪು ಎಳ್ಳು ಅಥವಾ ಕಬ್ಬಿಣದ ವಸ್ತುಗಳನ್ನು ದಾನ ಮಾಡಿ.
  • ಮಂತ್ರ: ಪ್ರತಿದಿನ ‘ಓಂ ಹ್ರಾಂ ಹ್ರೀಂ ಹ್ರೌಂ ಸಃ ಸೂರ್ಯಾಯ ನಮಃ’ ಮತ್ತು ಶನಿ ಮಂತ್ರವನ್ನು ಜಪಿಸಿ.

ಸಿಂಹ ರಾಶಿ ಫಲ: ಇವರ ಆರೋಗ್ಯ, ಹಣಕಾಸು ಮತ್ತು ಸಂಸಾರದಲ್ಲಿನ ಏರಿಳಿತಗಳಿಗೆ ಸರಳ ಪರಿಹಾರಗಳು

ಕೊನೆಮಾತು “ಅಷ್ಟಮ ಶನಿಯ ಪ್ರಭಾವ ಇರುವುದರಿಂದ ಹೊಸ ಸಾಲ ಮಾಡುವುದು ಅಥವಾ ಅಪರಿಚಿತರನ್ನು ಅತಿಯಾಗಿ ನಂಬುವುದು ಈ ವರ್ಷ ನಿಮಗೆ ಅಪಾಯಕಾರಿ.”

ಲೇಖನ- ಶ್ರೀನಿವಾಸ ಮಠ

ಶ್ರೀನಿವಾಸ ಮಠ

ಸಂಪಾದಕರು, ಶ್ರೀಗುರುಭ್ಯೋ.ಕಾಮ್

ಪತ್ರಿಕೋದ್ಯಮದಲ್ಲಿ ಹದಿನೆಂಟು ವರ್ಷಕ್ಕೂ ಹೆಚ್ಚು ಅನುಭವ ಇರುವ ಲೇಖಕ. ಕನ್ನಡದ ಪ್ರಮುಖ ದಿನಪತ್ರಿಕೆಗಳು ಹಾಗೂ ವಾರಪತ್ರಿಕೆ ಮತ್ತು ಆನ್ ಲೈನ್ ವೆಬ್ ಪೋರ್ಟಲ್ ಗಳಲ್ಲಿ ವಿವಿಧ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ವೈದಿಕ ಜ್ಯೋತಿಷ್ಯವನ್ನು ಪದ್ಧತಿಯಿಂದ ಅಭ್ಯಾಸ ಮಾಡಿರುವಂಥ ಇವರು, ಈ ತನಕ ಮೂರು ಸಾವಿರಕ್ಕೂ ಹೆಚ್ಚು ಜ್ಯೋತಿಷ್ಯ ಲೇಖನಗಳನ್ನು ವಿವಿಧ ವೆಬ್ ಪೋರ್ಟಲ್ ಗಳಿಗಾಗಿ ಬರೆದಿದ್ದಾರೆ. ಅಧ್ಯಾತ್ಮ, ಜ್ಯೋತಿಷ್ಯ ಹಾಗೂ ಧಾರ್ಮಿಕ ವಿಷಯಗಳಲ್ಲಿ ಅಳವಾದ ಜ್ಞಾನ ಮತ್ತು ನಿರಂತರ ಅಧ್ಯಯನ ಇರುವಂಥ ಶ್ರೀನಿವಾಸ ಮಠ ಸದ್ಯಕ್ಕೆ ಬೆಂಗಳೂರಿನಲ್ಲಿ ವಾಸವಿದ್ದು, ಜ್ಯೋತಿಷ್ಯವನ್ನು ವೃತ್ತಿಯಾಗಿ ಸ್ವೀಕರಿಸಿದ್ದಾರೆ.

Latest News

Related Posts