“ಪರ್ಯಾಯದ ಅವಧಿಯಲ್ಲಿ ಶ್ರೀಗಳಿಂದ ಎಂಥ ಕಾರ್ಯಗಳನ್ನು ನಿರೀಕ್ಷೆ ಮಾಡುತ್ತೀರಿ?” ಎಂಬ ಪ್ರಶ್ನೆಯನ್ನು ಮುಂದಿಟ್ಟಾಗ, “ನನಗೆ ಅವೆಲ್ಲ ಗೊತ್ತಾಗಲ್ಲ, ಒಳ್ಳೆ ಕೆಲಸಗಳಂತೂ ಆಗಬೇಕು. ಅವುಗಳನ್ನು ಮಾಡುವ ಉದ್ದೇಶ- ಪ್ರಯತ್ನ ಎರಡೂ ಅವರಲ್ಲಿದೆ. ಆದ್ದರಿಂದ ನನಗೆ ನಿರೀಕ್ಷೆ ಎಂಬ ರೀತಿಯಲ್ಲಿ ಏನೂ ಇಲ್ಲ,” ಅಂತ ಮಾತಿಗೆ ಆರಂಭಿಸಿದರು ಶೀರೂರು ಶ್ರೀಗಳಾದ ವೇದವರ್ಧನ ತೀರ್ಥರ ಪೂರ್ವಾಶ್ರಮದ ತಾಯಿ ಶ್ರೀವಿದ್ಯಾ ಸರಳತ್ತಾಯ. ಉಡುಪಿಯ ಪರ್ಯಾಯೋತ್ಸವ (ಶೀರೂರು ಪರ್ಯಾಯ ನಮ್ಮ ಪರ್ಯಾಯ) ಹಿನ್ನೆಲೆಯಲ್ಲಿ ಶ್ರೀಗುರುಭ್ಯೋ.ಕಾಮ್ ನಿಂದ ಅವರನ್ನು ಮಾತನಾಡಿಸಲಾಯಿತು. ಸಂಕೋಚದಿಂದ ಮುದ್ದೆಯಾಗಿದ್ದ ಅವರು, ಇತ್ತೀಚೆಗೆ ಕನಸಿನಲ್ಲಿಯೂ ಇಂಟರ್ ವ್ಯೂಗಳಿಗೆ ಉತ್ತರ ಹೇಳುತ್ತಿರುವಂತೆ ಅನಿಸುತ್ತದೆ, ಮಾಧ್ಯಮಗಳ ಎದುರು ಹೆಚ್ಚು ಮಾತನಾಡಿ ಹೀಗೆ ಅನಿಸುತ್ತಾ ಇರಬಹುದು ಎಂದು ನಕ್ಕರು.
ಶೀರೂರು ಮಠದ ಪೀಠಾಧ್ಯಕ್ಷ ಹುದ್ದೆಗೆ ಸೂಕ್ತ ವ್ಯಕ್ತಿಯ ಹುಡುಕಾಟದಲ್ಲಿ ಇರುವ ಸಮಯದಲ್ಲಿ ಅದಕ್ಕೆ ತಮ್ಮ ಮಗ ಅನಿರುದ್ಧನ (ವೇದವರ್ಧನ ತೀರ್ಥರ ಪೂರ್ವಾಶ್ರಮದ ಹೆಸರು) ಜಾತಕ ಸೂಕ್ರವಾಗಿದೆ ಎಂದು ಪತಿ ಅರುಣ್ ಕುಮಾರ್ ಸರಳತ್ತಾಯ ಅವರು ಹೇಳಿದಾಗ, “ಜಾತಕದಲ್ಲಿ ದೋಷ ಇದ್ದಾಗ ಹೇಗೆ ಪೂಜೆ- ಪುನಸ್ಕಾರ, ಶಾಂತಿಗಳನ್ನು ಮಾಡಿಸುತ್ತಾರೋ ಆ ರೀತಿ ಸನ್ಯಾಸ ಪೀಠ ಸ್ವೀಕರಿಸುವ ವ್ಯಕ್ತಿಗೂ ಶಾಸ್ತ್ರೋಕ್ತವಾದ ಶಾಂತಿ- ಕರ್ಮಗಳನ್ನು ಮಾಡಿ, ಆ ನಂತರ ಜವಾಬ್ದಾರಿ ಕೊಡುವುದಕ್ಕೆ ಸಾಧ್ಯವಿಲ್ಲವೆ? ನಮ್ಮ ಮಗನ ಜಾತಕ ಸೂಕ್ತ ಎಂಬ ಕಾರಣವೊಂದರಿಂದ ಸನ್ಯಾಸ ಸ್ವೀಕರಿಸಬೇಕೆ?” ಎಂದು ಕೇಳಿದ್ದರಂತೆ ಶ್ರೀವಿದ್ಯಾ. ಸನ್ಯಾಸ ಸ್ವೀಕರಿಸಬೇಕಾದ ವ್ಯಕ್ತಿಯ ಜಾತಕದ ವಿಚಾರದಲ್ಲಿ ಯಾಕೆ ಇಂಥ ಶಾಂತಿ- ಪೂಜೆಗಳು ಮಾಡಿ, ಮುಂದುವರಿಯಲು ಸಾಧ್ಯವಿಲ್ಲ ಎಂಬುದನ್ನು ಜ್ಯೋತಿಷ್ಯವನ್ನೂ ಬಲ್ಲಂಥ ಪತಿ ಅರುಣ್ ಕುಮಾರ್ ಸರಳತ್ತಾಯ ಅವರು ವಿವರಿಸಿದ್ದರಂತೆ.
ಶೀರೂರು ಶ್ರೀಗಳು ತಮ್ಮ ಪೂರ್ವಾಶ್ರಮದಲ್ಲಿ ಉಪನಯನದ ನಂತರ ಒಂದು ದಿನವೂ ದೇವರ ಪೂಜೆಯನ್ನು ತಪ್ಪಿಸಿದವರಲ್ಲವಂತೆ. ಶಿಬಿರಕ್ಕೆ ತೆರಳಿದ್ದ ವೇಳೆಯಲ್ಲೂ ತಮ್ಮ ಜೊತೆಗೆ ಸಾಲಿಗ್ರಾಮಮವನ್ನು ತೆಗೆದುಕೊಂಡು ಹೋಗಿ ಪೂಜೆ ಮಾಡುತ್ತಿದ್ದರು. ವಿಜ್ಞಾನಿ ಆಗಬೇಕು, ಅದರ ಮೂಲಕ ಜನರಿಗೆ- ಜಗತ್ತಿಗೆ ಸಹಾಯ ಆಗುವ ವಸ್ತುಗಳ ಅನ್ವೇಷಣೆ ಮಾಡಬೇಕು ಎಂದು ಬಯಸುತ್ತಿದ್ದ ತಮ್ಮ ಮಗ ಅನಿರುದ್ಧ, ಈಗ ಶೀರೂರು ಮಠದ ಪೀಠಾಧ್ಯಕ್ಷರಾಗಿ- ವೇದವರ್ಧನ ತೀರ್ಥರೆಂಬ ಹೆಸರಿಂದ ಸಮಾಜದ ವಿಜ್ಞಾನಿಯ ಹುದ್ದೆ ಅಲಂಕರಿಸಿ, ದೊಡ್ಡ ಸಮೂಹವನ್ನು ಮುನ್ನಡೆಸುವ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಕೃಷ್ಣಪೂಜೆ ಮಾಡುವುದು ಶ್ರೀಗಳಿಗೆ ಬಹಳ ಇಷ್ಟವಾದದ್ದು. ಅವರು ಈ ಹಿಂದೆ ಧರಿಸುತ್ತಿದ್ದ ಬಟ್ಟೆಯಲ್ಲಿ ಬದಲಾವಣೆ ಆಗಿ, ಕಾವಿ ಅಂತಾಗಿದೆ. ಆದರೆ ಸ್ವಭಾವ ಮತ್ತೂ ಗಟ್ಟಿಯಾಗಿ ದೇವರ ಪೂಜೆ- ಆರಾಧನೆಯಲ್ಲಿ ನೆಟ್ಟಿದೆ ಎಂದು ಅವರು ಹೇಳಿದರು.
ಪೂರ್ವಾಶ್ರಮದಲ್ಲಿ ತಮ್ಮ ಮಗನ ತಮಾಷೆ ಸ್ವಭಾವವನ್ನು ವಿವರಿಸಿದ ಶ್ರೀವಿದ್ಯಾ ಅವರು, ಮನೆಯಲ್ಲಿ ಇರುವಾಗ ಎಲ್ಲರನ್ನೂ ನಗಿಸುತ್ತಿದ್ದ. ಒಂದು ವಿಚಾರವನ್ನು ಚೆನ್ನಾಗಿ ಬೆಳೆಸುವುದು, ಅದರಿಂದ ತಮಾಷೆ ಮಾಡುವುದು, ಮನೆಯಲ್ಲಿ ಎಲ್ಲರ ನಗುವಿಗೆ ಕಾರಣ ಆಗುತ್ತಿದ್ದ. ಸನ್ಯಾಸ ಸ್ವೀಕಾರ ಮಾಡುತ್ತಾರೆ ಎಂಬ ಆರಂಭದ ಕೆಲ ದಿನಗಳು ಮನಸಲ್ಲಿ ಕಸಿವಿಸಿ ಆಗುತ್ತಿತ್ತು. ಆದರೆ ಮನೆಯವರ ಧಾರ್ಮಿಕ ಪ್ರವಚನವನ್ನು ಕೇಳಿಸಿಕೊಳ್ಳುತ್ತಾ ಗಟ್ಟಿಯಾಗುತ್ತಾ ಹೋದೆ. ಅಂತಿಮವಾಗಿ ಮಗ ಏನು ಇಷ್ಟಪಡುತ್ತಿದ್ದನೋ ಅದು ಸಾಧ್ಯವಾಗಿದೆ. ಆ ದೇವರ ಸೇವೆಗೆ ಅವಕಾಶ ಸಿಕ್ಕಿದೆ. ಇದು ಸಂತೋಷದ ವಿಷಯವೇ ಎಂದು ಮಾತು ಮುಗಿಸಿದರು.
ಲೇಖನ- ಶ್ರೀನಿವಾಸ ಮಠ





