Sri Gurubhyo Logo

ಶೀರೂರು ಶ್ರೀಗಳ ಸನ್ಯಾಸ ಸ್ವೀಕಾರ ‘ದೈವ ಸಂಕಲ್ಪ’: ನಾಡೀ ಜ್ಯೋತಿಷ್ಯದಲ್ಲೇ ನುಡಿದಿದ್ದ ಭವಿಷ್ಯದ ಬಗ್ಗೆ ಪೂರ್ವಾಶ್ರಮದ ದೊಡ್ಡಪ್ಪ ಮಧುಕರ್ ಸರಳತ್ತಾಯ ಎಕ್ಸ್‌ಕ್ಲೂಸಿವ್ ಮಾತುಗಳು

ಪರ್ಯಾಯ ಪೀಠದ ಶೀರೂರು ಮಠದ ಪೂರ್ವಾಶ್ರಮ ತಂದೆ ಡಾ. ಅರುಣ್ ಕುಮಾರ್ ಸರಳತ್ತಾಯ
ವೇದವರ್ಧನ ತೀರ್ಥರ ಪೂರ್ವಾಶ್ರಮದ ತಂದೆ ಡಾ. ಅರುಣ್ ಕುಮಾರ್ ಸರಳತ್ತಾಯ

“ನಾವು ನಾಡೀ ಜ್ಯೋತಿಷಿಗಳಲ್ಲಿ ಒಬ್ಬರ ಬಳಿ ಕೇಳಿದ್ದೆವು. ಅವರು ನೆಲಮಂಗಲದಲ್ಲಿ ಇದ್ದರು; ಹೆಸರು ಚಂದ್ರು. ನಮ್ಮ ಕುಟುಂಬದಿಂದ ಒಬ್ಬರು ಮಠಕ್ಕೆ ಸ್ವಾಮಿಗಳಾಗಿ ತೆರಳುತ್ತಾರೆ ಎಂಬುದನ್ನು ಹೇಳಿದ್ದರು. ನಮ್ಮ ತಂದೆಯವರಿಗೆ ಆರು ಜನ ಮಕ್ಕಳು. ಅದರಲ್ಲಿ ಆರನೆಯವರು ಅರುಣ್ (ಅರುಣ್ ಕುಮಾರ್ ಸರಳತ್ತಾಯ). ಮಠಗಳ ಸಂಪರ್ಕ ಹಾಗೂ ವಿದ್ಯಾವಂತ ಅಂತ ಇದ್ದದ್ದು ನಮ್ಮ ಕುಟುಂಬದಲ್ಲಿ ಅವನಿಗೊಬ್ಬನಿಗೇ. ಆದ್ದರಿಂದ ನಮಗೆ ಅನಿರುದ್ಧ (ಶೀರೂರು ವೇದವರ್ಧನ ತೀರ್ಥರ ಪೂರ್ವಾಶ್ರಮದ ಹೆಸರು) ಆಗುತ್ತಾನೆ ಎಂಬುದು ತಿಳಿದಿತ್ತು. ಚಿಕ್ಕವಯಸ್ಸಿನಿಂದಲೂ ಆಯುರ್ವೇದ ಔಷಧವನ್ನು ಬಿಟ್ಟು ಬೇರೆ ಔಷಧ ಪದ್ಧತಿಯನ್ನು ಅನುಸರಿಸದ ಶ್ರೀಗಳು, ಅವರ ಪೂರ್ವಾಶ್ರಮದ ಸ್ವಭಾವ ಇವೆಲ್ಲವೂ ನಮಗೆ ಸೂಚನೆ ಕೊಟ್ಟಿದ್ದವು,” ಹೀಗೆ ಹೇಳಿದವರು ಈ ಬಾರಿ ಉಡುಪಿ ಪರ್ಯಾಯ ಪೀಠಕ್ಕೆ ಏರಲಿರುವ ಶೀರೂರು ಮಠದ ವೇದವರ್ಧನ ತೀರ್ಥರ ಪೂರ್ವಾಶ್ರಮದ ದೊಡ್ಡಪ್ಪ ಮಧುಕರ್ ಸರಳತ್ತಾಯ.

ಶ್ರೀಗುರುಭ್ಯೋ.ಕಾಮ್ ಜತೆಗೆ ಎಕ್ಸ್ ಕ್ಲೂಸಿವ್ ಆಗಿ ಮಾತನಾಡಿದ ಮಧುಕರ್ ಅವರು, ಎಲ್ಲವೂ ದೈವ ಸಂಕಲ್ಪ ಎಂಬುದು ಹೇಗಿರುತ್ತದೆ ಅಂದರೆ, ನಮ್ಮ ಕುಟುಂಬದಲ್ಲಿ ತತ್ವಶಾಸ್ತ್ರ, ಮಠಗಳ ಸಂಪರ್ಕ, ವೇದಾಧ್ಯಯನ, ಪ್ರವಚನಗಳು ಇವೆಲ್ಲ ಇರುವುದು ಅರುಣ್ ಕುಮಾರ್ ಗೆ ಮಾತ್ರ. ನಮಗೆ ನಾಡೀ ಜ್ಯೋತಿಷ್ಯವೊಂದರಲ್ಲಿಯೇ ಅಲ್ಲ, ಬರಿಂಗಾಯ ಎಂಬ ಸ್ಥಳದಲ್ಲಿ ಅಷ್ಟಮಂಗಲ ಪ್ರಶ್ನೆಯನ್ನು ಮಾಡಿಸಲಾಯಿತು. ಆ ಸಂದರ್ಭದಲ್ಲಿ ಬಂದ ಉತ್ತರ ಏನೆಂದರೆ, ಇಲ್ಲಿಗೂ ಉಡುಪಿಯ ಅಷ್ಟಮಠಕ್ಕೂ ಸಂಬಂಧವಿದೆ. ನಿಮ್ಮ ಕುಟುಂಬದಿಂದ ಒಬ್ಬರು ಸ್ವಾಮಿಗಳಾಗುತ್ತಾರೆ ಎಂಬ ಉತ್ತರ ಬಂದಿತ್ತು. ನಮ್ಮದು ಮೂಲತಃ ಧರ್ಮಸ್ಥಳ ಹತ್ತಿರದ ನಿಡ್ಲೆ. ನಮ್ಮ ಮನೆಯು ಒಂದು ಕಾಲದಲ್ಲಿ ವೇದ ಪಾಠಶಾಲೆ ಆಗಿತ್ತಂತೆ. ಅಲ್ಲಿಗೆ ವಾದಿರಾಜ ಯತಿಗಳು ಬಂದಿದ್ದರಂತೆ. ತುಂಬ ವೈಭವದಿಂದ ಪಾಠಗಳು ನಡೆದ ಜಾಗ ಅದು. ಮತ್ತೆ ಅಲ್ಲಿ ಆ ವೈಭವ ಕಾಣುವಂತೆ ಆಗುತ್ತದೆ ಎಂದು ಸಹ ಸೂಚನೆ ಸಿಕ್ಕಿತ್ತು ಎಂಬ ಮಾತನ್ನು ಮಧುಕರ್ ಸರಳತ್ತಾಯ ಅವರು ಹೇಳಿದರು.

ಅರುಣ್ ಕುಮಾರ್ ಸರಳತ್ತಾಯ ಸಹ ಬಾಲ್ಯದಿಂದಲೇ ವಿಪರೀತವಾದ ದೈವಭಕ್ತಿ ಇದ್ದಂಥ ಹುಡುಗನಾಗಿದ್ದ. ಅವನ ಆಟಿಕೆಗಳು ಸಹ ಅದೇ ರೀತಿ ಇರುತ್ತಿದ್ದವು. ತನಗೆ ದೇವರಪೂಜೆ ಮಾಡುವುದಕ್ಕೆ ಅಂತಲೇ ಜಾಗ ಮಾಡಿಕೊಡಬೇಕು ಎಂದು ನಮ್ಮ ತಂದೆಯವರಲ್ಲಿ ಆಗಲೇ ಕೇಳಿದ್ದ. ಅವನೊಬ್ಬನು ಆಟ ಆಡುವುದಕ್ಕೆ ಅಂತ ಅವರು ಸಹ ಪ್ರತ್ಯೇಕ ಜಾಗ ಮಾಡಿಕೊಟ್ಟಿದ್ದರು. ನನ್ನ ತಮ್ಮ ತಿರುಪತಿಯಲ್ಲಿ ಓದನ್ನು ಮುಗಿಸಿದ ಮೇಲೆ ಬೇರೆ ಎಲ್ಲಿಗಾದರೂ ಹೋಗಬಹುದಿತ್ತು. ಆದರೆ ಉಡುಪಿಗೆ ಬಂದ, ವಿವಿಧ ಮಠಗಳ ಸ್ವಾಮಿಗಳ ಸಂಪರ್ಕಕ್ಕೆ ಬಂದ. ಹಾಗೆ ಅವನ ಸ್ವಭಾವ ಹಾಗೂ ಅದರಿಂದ ಪ್ರಭಾವಕ್ಕೆ ಒಳಗಾದ ಮಗ ಅನಿರುದ್ಧ ಸಾಧನೆಯ ಹಾದಿಯಲ್ಲಿ ಸಾಗಿ ಬಂದದ್ದು ಹೀಗೆ ಎಂದು ವಿವರಿಸಿದರು. ಚಿಕ್ಕವಯಸ್ಸಿನಿಂದಲೂ ಅವರಿಗೆ ನಿದ್ದೆ ಜಾಸ್ತಿ. ಈಗಲೂ ಅವರಿಗೆ ಕೆಲವು ಬಾರಿ ಹಾಗೆ ಆಗುತ್ತದೆ ಎಂದು ನೆನಪಿಸಿಕೊಂಡರು.

ಉಡುಪಿ ಪರ್ಯಾಯ 2026: ಶ್ರೀಗುರುಭ್ಯೋ.ಕಾಮ್‌ನಲ್ಲಿ ಶೀರೂರು ಮಠದ ಶ್ರೀ ವೇದವರ್ಧನ ತೀರ್ಥರ ಎಕ್ಸ್‌ಕ್ಲೂಸಿವ್ ಸಂದರ್ಶನ

ಆರಂಭದಲ್ಲಿಯೇ ಹೇಳಿದಂತೆ ಶೀರೂರು ಶ್ರೀಗಳ ಪೂರ್ವಾಶ್ರಮದ ತಂದೆ ಡಾ.ಎಂ. ಅರುಣ್ ಕುಮಾರ್ ಸರಳತ್ತಾಯ ಅವರ ಅಣ್ಣಂದಿರ ಮಕ್ಕಳು ಬೇರೆ ಬೇರೆ ವೃತ್ತಿಯಲ್ಲಿ ಇದ್ದಾರೆ. ಇನ್ನು ಕುಟುಂಬದಲ್ಲಿ ಯಾರೂ ಮಠದ ಸ್ವಾಮಿಗಳಾದ ಹಿನ್ನೆಲೆ ಇಲ್ಲ. ಕಾಶ್ಯಪ ಗೋತ್ರದವರಾದ, ಧರ್ಮಸ್ಥಳ ಬಳಿಯ ನಿಡ್ಲೆಯಲ್ಲಿ ನೆಲೆ ಕಂಡುಕೊಂಡ ಈ ಕುಟುಂಬದ ಮೂಲದಲ್ಲಿ ಹಿರಿಯರೊಬ್ಬರು ಇದೇ ಉಡುಪಿಯಲ್ಲಿ ದುರ್ಗಾದೇವಿಯ ಪೂಜೆಯನ್ನು ಮಾಡಿಕೊಂಡು ಇದ್ದಂಥವರಾಗಿದ್ದರು ಎಂಬುದನ್ನು ಮಧುಕರ್ ಅವರು ನೆನಪಿಸಿಕೊಂಡರು.

ಲೇಖನ- ಶ್ರೀನಿವಾಸ ಮಠ

ಶ್ರೀನಿವಾಸ ಮಠ

ಸಂಪಾದಕರು, ಶ್ರೀಗುರುಭ್ಯೋ.ಕಾಮ್

ಪತ್ರಿಕೋದ್ಯಮದಲ್ಲಿ ಹದಿನೆಂಟು ವರ್ಷಕ್ಕೂ ಹೆಚ್ಚು ಅನುಭವ ಇರುವ ಲೇಖಕ. ಕನ್ನಡದ ಪ್ರಮುಖ ದಿನಪತ್ರಿಕೆಗಳು ಹಾಗೂ ವಾರಪತ್ರಿಕೆ ಮತ್ತು ಆನ್ ಲೈನ್ ವೆಬ್ ಪೋರ್ಟಲ್ ಗಳಲ್ಲಿ ವಿವಿಧ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ವೈದಿಕ ಜ್ಯೋತಿಷ್ಯವನ್ನು ಪದ್ಧತಿಯಿಂದ ಅಭ್ಯಾಸ ಮಾಡಿರುವಂಥ ಇವರು, ಈ ತನಕ ಮೂರು ಸಾವಿರಕ್ಕೂ ಹೆಚ್ಚು ಜ್ಯೋತಿಷ್ಯ ಲೇಖನಗಳನ್ನು ವಿವಿಧ ವೆಬ್ ಪೋರ್ಟಲ್ ಗಳಿಗಾಗಿ ಬರೆದಿದ್ದಾರೆ. ಅಧ್ಯಾತ್ಮ, ಜ್ಯೋತಿಷ್ಯ ಹಾಗೂ ಧಾರ್ಮಿಕ ವಿಷಯಗಳಲ್ಲಿ ಅಳವಾದ ಜ್ಞಾನ ಮತ್ತು ನಿರಂತರ ಅಧ್ಯಯನ ಇರುವಂಥ ಶ್ರೀನಿವಾಸ ಮಠ ಸದ್ಯಕ್ಕೆ ಬೆಂಗಳೂರಿನಲ್ಲಿ ವಾಸವಿದ್ದು, ಜ್ಯೋತಿಷ್ಯವನ್ನು ವೃತ್ತಿಯಾಗಿ ಸ್ವೀಕರಿಸಿದ್ದಾರೆ.

Latest News

Related Posts