“ಸೋದೆ ಮಠದ ವಿಶ್ವವಲ್ಲಭ ತೀರ್ಥರು ಅಲ್ಲದೆ ಬೇರೆ ಯಾರೇ ಈ ಪ್ರಸ್ತಾವ ಇಟ್ಟಿದ್ದರೂ ನಾವು ಒಪ್ಪುತ್ತಿದ್ದೆವಾ ಎಂದು ಖಚಿತವಾಗಿ ಹೇಳುವುದು ಕಷ್ಟ,” ಅಂತಲೇ ಮಾತಿಗೆ ಆರಂಭಿಸಿದರು ಶೀರೂರು ಮಠದ ವೇದವರ್ಧನ ತೀರ್ಥರ ಪೂರ್ವಾಶ್ರಮದ ಡಾ.ಎಂ. ಅರುಣ್ ಕುಮಾರ್ ಸರಳತ್ತಾಯ. ಹತ್ತನೇ ತರಗತಿಯ ಓದಿನಿಂದ ಅಷ್ಟಮಠಗಳಲ್ಲಿ ಒಂದಾದ ಶೀರೂರು ಮಠದ ಪೀಠಕ್ಕೆ ವೇದವರ್ಧನರಾಗಿ ಏರುವ ತನಕದ ಘಟನೆಗಳನ್ನು ಶ್ರೀಗುರುಭ್ಯೋ.ಕಾಮ್ ಜತೆಗೆ ಎಕ್ಸ್ ಕ್ಲೂಸಿವ್ ಆಗಿ ಹಂಚಿಕೊಂಡರು. ಲಕ್ಷ್ಮೀವರ ತೀರ್ಥರು ವೈಕುಂಠ ವಾಸಿಗಳಾದ ನಂತರದಲ್ಲಿ ಅಲ್ಲಿಗೆ ಒಬ್ಬರು ಸ್ವಾಮಿಗಳನ್ನು ಆಯ್ಕೆ ಮಾಡಬೇಕಾದ ಜವಾಬ್ದಾರಿಯು ಅದರ ದ್ವಂದ್ವ ಮಠವಾದ ಸೋದೆ ಮಠದ ವಿಶ್ವವಲ್ಲಭ ತೀರ್ಥರಿಗೆ ಬಂದಿತು. ಆ ಪ್ರಯತ್ನದಲ್ಲಿಯೇ ಸೂಕ್ತ ವ್ಯಕ್ತಿಗಾಗಿ ಸುಮಾರು ಎರಡು ವರ್ಷಗಳ ಕಾಲ ಹಲವಾರು ಜನರ ಜಾತಕ ಪರಾಮರ್ಶೆ ಮಾಡಲಾಗಿದೆ.
ಒಮ್ಮೆ ಮಾತನಾಡುವಾಗ, ಇಷ್ಟೆಲ್ಲ ನೋಡುವ ಬದಲಿಗೆ ನಿಮ್ಮ ಮಗ ಅನಿರುದ್ಧನೇ ಆಗಿದ್ದರೆ ಆ ಜವಾಬ್ದಾರಿ ನೀಡಬಹುದಿತ್ತು ಎಂದು ವಿಶ್ವವಲ್ಲಭ ತೀರ್ಥರು ಅರುಣ್ ಕುಮಾರ್ ಅವರಿಗೆ ಹೇಳಿದ್ದಾರೆ. ಅರುಣ್ ಕುಮಾರ್ ಅವರ ಕುಟುಂಬ ಸೋದೆ ಮಠಕ್ಕೆ ನಡೆದುಕೊಳ್ಳುತ್ತದೆ. ತತ್ವಶಾಸ್ತ್ರ, ವೇದ ಅಧ್ಯಯನ ಮಾಡಿರುವ ಅರುಣ್ ಕುಮಾರ್ ಅವರು ಸನ್ಯಾಸ ಸ್ವೀಕರಿಸಿದ ಆರಂಭದಲ್ಲಿ ವಿಶ್ವವಲ್ಲಭರಿಗೆ ಪಾಠ ಮಾಡುತ್ತಿದ್ದರಂತೆ. ಅದೇ ಅವಧಿಯಲ್ಲಿ ತಮ್ಮ ಮಗ ಅನಿರುದ್ಧನನ್ನೂ ಜೊತೆಗೆ ಕರೆದುಕೊಂಡು ಹೋಗುತ್ತಿದ್ದರಂತೆ. ಉಳಿದವರ ಪಾಲಿಗೆ ವಿಶ್ವವಲ್ಲಭರ ಬಗೆಗಿನ ಭಕ್ತಿ, ಗೌರವ ಇತ್ಯಾದಿಗಳ ಕಾರಣಕ್ಕೆ ತುಂಬ ಹತ್ತಿರ ಹೋಗಲು ಸಹ ಹಿಂಜರಿಕೆ ಮಾಡುತ್ತಿದ್ದಾಗ ಪುಟ್ಟ ಮಗು ಅನಿರುದ್ಧ ಸ್ವಾಮಿಗಳ ಜೊತೆಗೆ ಸಲುಗೆಯಿಂದ ಭುಜದ ಮೇಲೆ ಹತ್ತುವುದು, ತೊಡೆಯ ಮೇಲೆ ಕೂರುವುದು ಮಾಡುತ್ತಿದ್ದನಂತೆ. ಹೀಗೆ ಬಾಲ್ಯದಿಂದಲೂ ವಿಶ್ವವಲ್ಲಭರು ನೋಡುತ್ತಾ ಬಂದಿದ್ದ ಅನಿರುದ್ಧನಿಗೆ ಮನೆಯಲ್ಲಿ ಸಿಗುತ್ತಿದ್ದ ವೇದಪಾಠ, ಆ ಬಾಲಕನ ಸಂಸ್ಕಾರ, ಭಕ್ತಿ ಭಾವ ಇತ್ಯಾದಿಗಳ ಬಗ್ಗೆ ತಿಳಿದಿತ್ತು.
ಸರಿ, ಒಮ್ಮೆ ಜಾತಕ ಪರಿಶೀಲನೆ ಮಾಡಿಸೋಣ ಎಂದುಕೊಂಡ ಅರುಣ್ ಕುಮಾರ್ ಸರಳತ್ತಾಯರು ಉಡುಪಿಯ ಸಂಸ್ಕೃತ ಕಾಲೇಜಿನಲ್ಲಿ ತಮ್ಮ ವಿದ್ಯಾರ್ಥಿಗಳಿಗೆ ಮಗನ ಜಾತಕವನ್ನು ಅಧ್ಯಯನದ ರೀತಿಯಲ್ಲಿ ನೀಡಿದ್ದಾರೆ. ಅದು ತಮ್ಮ ಮಗನ ಜಾತಕ ಎಂದು ತಿಳಿಸಿಲ್ಲ. ಆಗ ಈ ಜಾತಕಕ್ಕೆ ಸನ್ಯಾಸ ಯೋಗ, ಪೀಠಾಧ್ಯಕ್ಷ ಯೋಗ ಇದೆ ಎಂಬ ಅಭಿಪ್ರಾಯ ಬಂದಿದೆ. ಆ ನಂತರ ತಿರುಪತಿಯಲ್ಲಿ ತಮ್ಮ ಜೊತೆಗೆ ಓದುತ್ತಿದ್ದ ಕೆಲವು ಸಹಪಾಠಿಗಳಿಗೂ ಸರಳತ್ತಾಯರು ಮಗನ ಜಾತಕ ಎಂಬ ಗುಟ್ಟು ಬಿಟ್ಟುಕೊಡದೆ ಸನ್ಯಾಸಿ ಮಾಡುವುದಕ್ಕೆ ಯೋಗ್ಯ ಜಾತಕವಾ ಎಂಬ ಪರೀಕ್ಷೆ ಮಾಡಿದ್ದಾರೆ. ಅವರಿಂದಲೂ ಸಕಾರಾತ್ಮಕ ಉತ್ತರ ಬಂದಿದೆ. ಆ ನಂತರ ಸರದಿಯಲ್ಲಿ ನಾಗಪುರ, ಬನಾರಸ್ ವಿದ್ಯಾಲಯ, ಕೇರಳ, ಕಾಶಿ ಹೀಗೆ ವಿವಿಧ ಕಡೆಯ ಪಂಡಿತರಿಂದ ಜಾತಕ ವಿಮರ್ಶೆ ಮಾಡಿಸಿದ್ದಾರೆ. ಎಲ್ಲರಿಂದಲೂ “ಇದು ಸನ್ಯಾಸ ಸ್ವೀಕಾರಕ್ಕೆ ಸೂಕ್ತ ಜಾತಕ” ಎಂಬ ಉತ್ತರವೇ ಬಂದಿದೆ.
ಕೊನೆಗೆ ಬರಿಂಗಾಯ ಎಂಬಲ್ಲಿ ಅಷ್ಟಮಂಗಲ ಪ್ರಶ್ನೆ ಸಂದರ್ಭದಲ್ಲಿ, ಇನ್ನು ಆರು ತಿಂಗಳಲ್ಲಿ ನಿಮ್ಮ ಕುಟುಂಬದ ಒಬ್ಬ ವ್ಯಕ್ತಿ ಮಠದ ಸ್ವಾಮಿಯಾಗಿ ಹೋಗಲಿದ್ದಾರೆ ಎಂಬ ಉತ್ತರ ಬಂದಿದೆ. ಸೋದೆ ಮಠದ ಸ್ವಾಮಿಗಳ ಮಾತನ್ನು ಬಹುತೇಕ ಮರೆತು ಬಿಟ್ಟಿದ್ದಾರೆ ಎಂಬಂತೆ ತಮ್ಮಷ್ಟಕ್ಕೆ ತಾವಿದ್ದ ವೇಳೆಯಲ್ಲಿ, ಕೊರೊನಾ ಸಂದರ್ಭ ವಿಶ್ವವಲ್ಲಭ ತೀರ್ಥರು ಅರುಣ್ ಕುಮಾರ್ ರನ್ನು ಕರೆಸಿಕೊಂಡು, ಶೀರೂರು ಮಠದಲ್ಲಿ ಈಗಾಗಲೇ ಅವ್ಯವಸ್ಥೆ ಆಗಿಹೋಗಿದೆ. ಇನ್ನು ತಡ ಮಾಡುವುದು ಬೇಡ, ನಿಮ್ಮ ಮಗನನ್ನು ಸ್ವಾಮಿಗಳಾಗಿ ಮಾಡೋಣ, ನಮ್ಮ ಮಠದಲ್ಲಿಯೇ ಆರಂಭದ ಅಧ್ಯಯನ ಆಗಲಿ ಎಂದಿದ್ದಾರೆ. ಆ ಹಂತದಲ್ಲಿ ನಿರ್ಧಾರ ಆಖೈರು ಆಗಿ, ಶೀರೂರು ಮಠದ ಪೀಠಾಧಿಪತಿಯಾಗಿ ವೇದವರ್ಧನ ತೀರ್ಥ ಎಂಬ ಹೆಸರಿನೊಂದಿಗೆ ಸನ್ಯಾಸ ಸ್ವೀಕಾರ ನಡೆಯಿತು.
ಈ ಮಧ್ಯೆ ಉಡುಪಿಯಲ್ಲಿ ಅವರು ಖರೀದಿ ಮಾಡಿದ್ದ ಒಂದು ಮನೆಯಲ್ಲಿ ರಾಮಚಂದ್ರ ಮೂರ್ತಿಯ ವಿಗ್ರಹವೊಂದು ಅಯಾಚಿತವಾಗಿ ಅರುಣ್ ಕುಮಾರ್ ಅವರಿಗೆ ಬಂದಿತ್ತು. ಆ ಮನೆಯ ಹಿಂದಿನ ಮಾಲೀಕರು ವಿಗ್ರಹವನ್ನು ಅಲ್ಲಿಯೇ ಬಿಟ್ಟು ಹೋಗಿ, ಅದನ್ನು ನೀವೇ ಇರಿಸಿಕೊಳ್ಳಿ ಅಂದಿದ್ದರಂತೆ. ಆ ವಿಗ್ರಹವು ಶೀರೂರಿನ ಮಠಕ್ಕೆ ಸೇರಿದ ರಾಮಚಂದ್ರನ ವಿಗ್ರಹ ಆಗಿತ್ತಂತೆ. ಲಕ್ಷ್ಮೀಂದ್ರ ತೀರ್ಥರಿಂದ ಬಂದಂಥ ವಿಗ್ರಹ ಅದಾಗಿತ್ತು. ಅದನ್ನು ಅರುಣ್ ಕುಮಾರ್ ಅವರು ಪೂಜೆ ಮಾಡುತ್ತಾ ಬಂದಿದ್ದು ಸಹ ಒಂದು ಸೂಚನೆ ಎಂಬುದು ಆ ನಂತರ ಅನಿಸಿತು ಎಂದು ನೆನೆಸಿಕೊಂಡರು. ಶೀರೂರು ಮಠದ ಹಿಂದಿನ ಸ್ವಾಮಿಗಳಾದ ಲಕ್ಷ್ಮೀವರ ತೀರ್ಥರ ಎರಡನೇ ಪರ್ಯಾಯದ ವೇಳೆಯಲ್ಲಿ ಸಕ್ರಿಯರಾಗಿ ಅರುಣ್ ಕುಮಾರ್ ಸರಳತ್ತಾಯ ಅವರು ಪಾಲ್ಗೊಂಡಿದ್ದನ್ನು ಸ್ಮರಿಸುತ್ತಾರೆ.
ಮಗ ಅನಿರುದ್ಧ ಧರಿಸುತ್ತಿದ್ದ ಬಟ್ಟೆ ಕಾವಿಗೆ ಬದಲಾಯಿತೇ ವಿನಾ, ಮೂಲದಲ್ಲಿ ಗುಣ- ಸ್ವಭಾವ ದೇವರ ಪೂಜೆ ಕಡೆಗೆ ವೇದವರ್ಧನರಿಗೆ ಸೆಳೆಯುತ್ತಿತ್ತು. ಸಮಾಜದ ಒಳಿತಿಗೆ ಕೊಡುಗೆ ನೀಡಬೇಕು ಎಂಬ ತಪನೆ ಇಲ್ಲಿಯವರೆಗಿನ ಹಾದಿಗೆ ನಡೆಸಿದೆ. ಇಷ್ಟು ನಡೆಸಿದ ಆ ಕೃಷ್ಣ ಖಂಡಿತವಾಗಿಯೂ ಮುನ್ನಡೆಸುತ್ತಾನೆ, ಉತ್ತಮ ಕೆಲಸ ಮಾಡಿಸುತ್ತಾನೆ ಎಂದು ಮಾತು ಮುಗಿಸಿದರು ಅರುಣ್ ಕುಮಾರ್ ಸರಳತ್ತಾಯ.
ಲೇಖನ- ಶ್ರೀನಿವಾಸ ಮಠ





