Sri Gurubhyo Logo

ಮುಂಜಾನೆಯಿಂದ ರಾತ್ರಿಯವರೆಗೆ ಶೀರೂರು ಶ್ರೀಗಳ ನಿರಂತರ ಅಧ್ಯಯನ ಮತ್ತು ಅನುಷ್ಠಾನ: ಇಲ್ಲಿದೆ ವಿಶೇಷ ಮಾಹಿತಿ

Shirur Mutt Vedavardhana Tirtha
ಶೀರೂರು ಮಠದ ವೇದವರ್ಧನ ತೀರ್ಥರು

ಉಡುಪಿಯಲ್ಲಿ ಪರ್ಯಾಯ 2026ರ ಕೇಂದ್ರಬಿಂದು ಆಗಿರುವಂಥ ಶೀರೂರು ಮಠದ ವೇದವರ್ಧನ ತೀರ್ಥರ ದಿನಚರಿ ಹೇಗಿರುತ್ತದೆ ಎಂಬ ಬಗ್ಗೆ ಕುತೂಹಲದಿಂದ ಶ್ರೀಗಳ ಕಾರ್ಯದರ್ಶಿ ಆದ ರಾಮಮೂರ್ತಿ ಅವರನ್ನು ಶ್ರೀಗುರುಭ್ಯೋ.ಕಾಮ್ ನಿಂದ ಮಾತನಾಡಿಸಲಾಯಿತು. ಈ ಬಗ್ಗೆ ಅವರು ಆಸಕ್ತಿಕರವಾದ ಮಾಹಿತಿಯನ್ನು ನೀಡಿದ್ದಾರೆ. ಅವರ ಮಾತುಗಳಲ್ಲೇ ಇಲ್ಲಿ ನಿಮ್ಮೆದುರು ಇಡಲಾಗಿದೆ.

“ಸ್ವಾಮಿಗಳು ಸಾಮಾನ್ಯವಾಗಿ ಬೆಳಗ್ಗೆ ಐದರಿಂದ ಐದೂವರೆ ಹೊತ್ತಿಗೆ ಏಳುತ್ತಾರೆ. ಪ್ರಾತಃಕಾಲದಲ್ಲಿ ಅವರ ಜಪ- ಆಹ್ನಿಕ ಇರುತ್ತದೆ. ಆ ನಂತರದಲ್ಲಿ ಏಳು ಗಂಟೆ ಹೊತ್ತಿಗೆ ಯಾರಿಂದ ಪಾದಪೂಜೆಗೆ ಆಹ್ವಾನ ಬಂದಿರುತ್ತದೋ ಅದರ ಪ್ರಕಾರವಾಗಿ ಮನೆಮನೆಗೆ ತೆರಳುತ್ತಾರೆ. ಸಾಧಾರಣವಾಗಿ ಇದು ಏಳರಿಂದ ಒಂಬತ್ತು ಗಂಟೆ ತನಕ ಆಗುತ್ತದೆ. ಒಂಬತ್ತೂವರೆಯಿಂದ ಹತ್ತೂವರೆ ತನಕ ಬೆಳಗಿನ ಪಾಠ ಇರುತ್ತದೆ. ಲಕ್ಷ್ಮೀನಾರಾಯಣ ಭಟ್ ಎಂಬುವರಿಂದ ಪಾಠ ಇರುತ್ತದೆ. ಹತ್ತೂವರೆಯಿಂದ ಸಂಸ್ಥಾನದ ಪೂಜೆ ಆರಂಭವಾಗುತ್ತದೆ. ಮಧ್ಯಾಹ್ನ ಒಂದು- ಒಂದೂವರೆ ಒಳಗಾಗಿ ಮುಗಿಯುತ್ತದೆ. ಎರಡು ಗಂಟೆಯ ಹೊತ್ತಿಗೆ ಅವರ ಭಿಕ್ಷಾ ಮುಗಿಯುತ್ತದೆ. ಆ ನಂತರ ಮತ್ತೆ ಎಲ್ಲೆಲ್ಲಿಗೆ ತೆರಳಬೇಕಾಗಿರುತ್ತದೋ ಯೋಜನೆಯಂತೆ ಅಲ್ಲಿಗೆ ಹೋಗುತ್ತಾರೆ. ಸಾಮಾನ್ಯವಾಗಿ ಕ್ಷೇತ್ರದರ್ಶನ ಇಂಥದ್ದು ಇರುತ್ತದೆ.

ಶೀರೂರು ಮಠದ ವೇದವರ್ಧನ ಶ್ರೀಗಳ ಕಾರ್ಯದರ್ಶಿ
ಶೀರೂರು ಮಠದ ವೇದವರ್ಧನ ಶ್ರೀಗಳ ಕಾರ್ಯದರ್ಶಿ ರಾಮಮೂರ್ತಿ

“ಮತ್ತೆ ಸಾಧಾರಣವಾಗಿ ಸಂಜೆ ನಾಲ್ಕರಿಂದ ಐದೂವರೆ ಐದು ಮುಕ್ಕಾಲಿನ ತನಕ ಸಾಯಂಕಾಲದ ಪಾಠ ಇರುತ್ತದೆ. ಅದು ಕೃಷ್ಣಾಪುರ ಮಠದ ಸ್ವಾಮಿಗಳಾದ ವಿದ್ಯಾಸಾಗರ ತೀರ್ಥರಿಂದ ಆಗುತ್ತದೆ. ಅವರು ಸಾಮಾನ್ಯವಾಗಿ ಸಂಜೆ ನಾಲ್ಕರಿಂದ ಐದೂವರೆ ಐದು ಮುಕ್ಕಾಲಿನ ತನಕ ಆಗುತ್ತದೆ. ಇವೆಲ್ಲ ಆನ್ ಲೈನ್ ನಲ್ಲಿಯೇ ಪಾಠ ಆಗುತ್ತದೆ. ಸಂಜೆ ಆರೂವರೆಗೆ ಮತ್ತೆ ಸ್ನಾನ ಆಗುತ್ತದೆ. ಏಳೂವರೆ- ಎಂಟು ಗಂಟೆ ಒಳಗೆ ರಾತ್ರಿ ಪೂಜೆ ಹಾಗೂ ಫಲಾಹಾರವನ್ನು ಮುಗಿಸಿ, ರಾತ್ರಿ ಒಂಬತ್ತರಿಂದ ಹತ್ತು ಗಂಟೆ ಒಳಗೆ ಮತ್ತೆ ಪಾಠ ಇರುತ್ತದೆ. ಅದು ಅಮೃತೇಶಾಚಾರ್ ಎಂಬುವರು ಆ ಅವಧಿಯಲ್ಲಿ ಪಾಠ ಮಾಡುತ್ತಾರೆ. ಹತ್ತು ಗಂಟೆಗೆ ವಿಶ್ರಾಂತಿ ತೆಗೆದುಕೊಳ್ಳುತ್ತಾರೆ. ಅಮೃತೇಶಾಚಾರ್ ಎಂಬುವರು ಉಡುಪಿ ಸಂಸ್ಕೃತ ಕಾಲೇಜಿನಲ್ಲಿಯೇ ಲೆಕ್ಚರರ್ ಆಗಿದ್ದಾರೆ,” ಎಂದು ಮಾತು ಮುಗಿಸಿದರು ರಾಮಮೂರ್ತಿ.

ಉಡುಪಿ ಪರ್ಯಾಯ 2026: ಶ್ರೀಗುರುಭ್ಯೋ.ಕಾಮ್‌ನಲ್ಲಿ ಶೀರೂರು ಮಠದ ಶ್ರೀ ವೇದವರ್ಧನ ತೀರ್ಥರ ಎಕ್ಸ್‌ಕ್ಲೂಸಿವ್ ಸಂದರ್ಶನ

ಇನ್ನು ಜನವರಿ ಹದಿನಾಲ್ಕನೇ ತಾರೀಕು ಏಕಾದಶಿ ದಿನದಂದು ವೇದವರ್ಧನ ಸ್ವಾಮಿಗಳು ದೇವರ ಪೂಜೆ ಮಾಡುವಂಥದ್ದನ್ನು ತುಂಬ ಹತ್ತಿರದಿಂದ ನೋಡುವ ಅವಕಾಶ ಸಿಕ್ಕಿತು. ಅವರ ಪೂಜೆಗೆ ಅಣಿ ಮಾಡಿಕೊಡುತ್ತಾ ಇದ್ದವರು ಲಕ್ಷ್ಮೀಶ. ಅವರು ಮೂಲತಃ ಉಡುಪಿಯವರು. “ಬೆಂಗಳೂರಿನ ವಿದ್ಯಾಪೀಠದಲ್ಲಿ ಒಮ್ಮೆ ಸ್ವಾಮಿಗಳ ಪೂಜಾ ಕಾರ್ಯಗಳಿಗೆ ಅಣಿ ಮಾಡಿಕೊಡುವ ಅವಕಾಶ ಸಿಕ್ಕಿತು. ಆಗಿನಿಂದ ಅವರ ಜತೆಯಲ್ಲಿ ಇದ್ದು, ಹೀಗೆ ಹೊರಗೆ ಪೂಜೆಗೆ ಬಂದಾಗ ಅಣಿ ಮಾಡಿಕೊಡುತ್ತೇನೆ. ಈ ಎಲ್ಲ ಸಿದ್ಧತೆಗೆ ಮಾರ್ಗದರ್ಶನ ಅವರದೇ. ಅವರು ನೀಡಿದ ಧೈರ್ಯದಿಂದಲೇ ಹೀಗೆ ಸಾಂಗವಾಗಿ ವ್ಯವಸ್ಥೆ ಮಾಡುವುದಕ್ಕೆ ಸಾಧ್ಯವಾಗುತ್ತಾ ಇದೆ,” ಎಂದು ಹೇಳಿದರು ಲಕ್ಷ್ಮೀಶ.

ವೇದವರ್ಧನ ತೀರ್ಥರಿಗೆ ಪೂಜೆಗೆ ಸಹಾಯ ಮಾಡುವ ಲಕ್ಷ್ಮೀಶ
ವೇದವರ್ಧನ ತೀರ್ಥರ ಸಹಾಯಕ ಲಕ್ಷ್ಮೀಶ

ಸಂಸ್ಥಾನದ ಪೂಜೆ ಅಂದಾಗ ಶೀರೂರು ಮಠದಲ್ಲಿಯೇ ಆಗುವಾಗ ಸಹಾಯಕ್ಕೆ ಬೇರೆಯವರು ಇರುತ್ತಾರೆ. ಇನ್ನು ಸಂಚಾರದಲ್ಲಿ ಇರುವಾಗ ಶೀರೂರು ಮುಖ್ಯವಾದ ಸಾಲಿಗ್ರಾಮಗಳು, ಮುಖ್ಯ ವಿಗ್ರಹಗಳನ್ನು ಜತೆಯಲ್ಲಿಯೇ ಒಯ್ಯುವ ವೇದವರ್ಧನರು ಅವುಗಳ ಪೂಜೆಯನ್ನು ಮಾಡುತ್ತಾರೆ. ವೇದವರ್ಧನ ತೀರ್ಥರಿಗೆ ಪ್ರಾಥಮಿಕವಾಗಿ ವೇದ ಪಾಠ ಆಗಿರುವುದು ಪೂರ್ವಾಶ್ರಮದ ತಂದೆಯಾದ ಡಾ.ಎಮ್. ಉದಯ್ ಕುಮಾರ್ ಸರಳತ್ತಾಯ ಅವರಿಂದ. ಬಾಲ್ಯದಿಂದಲೂ ದೇವರ ಪೂಜೆ ಕಡೆಗೆ ಹೆಚ್ಚು ಒಲವಿದ್ದ ಸ್ವಾಮಿಗಳ ಸ್ವಭಾವದ ಬಗ್ಗೆ ಸರಳತ್ತಾಯ ಅವರು ನೆನಪಿಸಿಕೊಳ್ಳುತ್ತಾರೆ.

ಲೇಖನ- ಶ್ರೀನಿವಾಸ ಮಠ   

ಶ್ರೀನಿವಾಸ ಮಠ

ಸಂಪಾದಕರು, ಶ್ರೀಗುರುಭ್ಯೋ.ಕಾಮ್

ಪತ್ರಿಕೋದ್ಯಮದಲ್ಲಿ ಹದಿನೆಂಟು ವರ್ಷಕ್ಕೂ ಹೆಚ್ಚು ಅನುಭವ ಇರುವ ಲೇಖಕ. ಕನ್ನಡದ ಪ್ರಮುಖ ದಿನಪತ್ರಿಕೆಗಳು ಹಾಗೂ ವಾರಪತ್ರಿಕೆ ಮತ್ತು ಆನ್ ಲೈನ್ ವೆಬ್ ಪೋರ್ಟಲ್ ಗಳಲ್ಲಿ ವಿವಿಧ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ವೈದಿಕ ಜ್ಯೋತಿಷ್ಯವನ್ನು ಪದ್ಧತಿಯಿಂದ ಅಭ್ಯಾಸ ಮಾಡಿರುವಂಥ ಇವರು, ಈ ತನಕ ಮೂರು ಸಾವಿರಕ್ಕೂ ಹೆಚ್ಚು ಜ್ಯೋತಿಷ್ಯ ಲೇಖನಗಳನ್ನು ವಿವಿಧ ವೆಬ್ ಪೋರ್ಟಲ್ ಗಳಿಗಾಗಿ ಬರೆದಿದ್ದಾರೆ. ಅಧ್ಯಾತ್ಮ, ಜ್ಯೋತಿಷ್ಯ ಹಾಗೂ ಧಾರ್ಮಿಕ ವಿಷಯಗಳಲ್ಲಿ ಅಳವಾದ ಜ್ಞಾನ ಮತ್ತು ನಿರಂತರ ಅಧ್ಯಯನ ಇರುವಂಥ ಶ್ರೀನಿವಾಸ ಮಠ ಸದ್ಯಕ್ಕೆ ಬೆಂಗಳೂರಿನಲ್ಲಿ ವಾಸವಿದ್ದು, ಜ್ಯೋತಿಷ್ಯವನ್ನು ವೃತ್ತಿಯಾಗಿ ಸ್ವೀಕರಿಸಿದ್ದಾರೆ.

Latest News

Related Posts