ವೈದಿಕ ಜ್ಯೋತಿಷ್ಯ ಶಾಸ್ತ್ರದಲ್ಲಿ ಮಂಗಳ ಮತ್ತು ಚಂದ್ರನ ಸಂಯೋಗಕ್ಕೆ (ಒಂದೇ ರಾಶಿಯಲ್ಲಿ ಇರುವಂಥ ಸ್ಥಿತಿ) ಅತ್ಯಂತ ಪ್ರಾಮುಖ್ಯ ಇದೆ. ಮಂಗಳನು ಶಕ್ತಿಯ ಸಂಕೇತವಾದರೆ, ಚಂದ್ರನು ಮನಸ್ಸಿನ ಕಾರಕ. ಫೆಬ್ರವರಿ 15, 16 ಮತ್ತು 17 ರಂದು ಮಕರ ರಾಶಿಯಲ್ಲಿ ಉಚ್ಚ ಸ್ಥಿತಿಯಲ್ಲಿರುವ ಮಂಗಳನೊಂದಿಗೆ ಚಂದ್ರನು ಸೇರುತ್ತಾನೆ. ಈ ಸಂಯೋಜನೆಯನ್ನು ‘ಚಂದ್ರ-ಮಂಗಳ ಯೋಗ’ ಅಥವಾ ‘ಶಶಿ-ಮಂಗಳ ಯೋಗ’ ಎನ್ನಲಾಗುತ್ತದೆ. ಮಕರವು ಶನಿಯ ಮನೆಯಾಗಿದ್ದು, ಇಲ್ಲಿ ಮಂಗಳನು ಅತ್ಯಂತ ಬಲಿಷ್ಠನಾಗಿರುತ್ತಾನೆ (ಉಚ್ಚ ಸ್ಥಿತಿ). ಈ ಅವಧಿಯಲ್ಲಿ ಜನರಲ್ಲಿ ಧೈರ್ಯ ಮತ್ತು ಭಾವನೆಗಳ ಸಮ್ಮಿಲನ ಕಂಡುಬರುತ್ತದೆ.
ಹನ್ನೆರಡು ರಾಶಿಗಳ ಫಲಗಳು:
- ಮೇಷ: ನಿಮ್ಮ ರಾಶ್ಯಾಧಿಪತಿ ಮಂಗಳನು ಹತ್ತನೇ ಮನೆಯಲ್ಲಿ ಚಂದ್ರನೊಂದಿಗೆ ಇರುವುದರಿಂದ ವೃತ್ತಿ ಕ್ಷೇತ್ರದಲ್ಲಿ ಅಭೂತಪೂರ್ವ ಯಶಸ್ಸು ಸಿಗಲಿದೆ. ಹೊಸ ಉದ್ಯೋಗದ ಅವಕಾಶಗಳು ಮತ್ತು ಬಾಕಿ ಇದ್ದ ಕೆಲಸಗಳು ಪೂರ್ಣಗೊಳ್ಳಲಿವೆ.
- ವೃಷಭ: ಒಂಬತ್ತನೇ ಮನೆಯಲ್ಲಿ ಈ ಯೋಗ ನಡೆಯುವುದರಿಂದ ಅದೃಷ್ಟ ನಿಮ್ಮ ಪರ ಇರಲಿದೆ. ತಂದೆಯ ಕಡೆಯಿಂದ ಆಸ್ತಿ ಬರುವ ಸಂಭವವಿದೆ. ಧಾರ್ಮಿಕ ಪ್ರವಾಸಗಳು ನಿಮ್ಮ ಮನಸ್ಸಿಗೆ ಶಾಂತಿ ನೀಡಲಿವೆ.
- ಮಿಥುನ: ಎಂಟನೇ ಮನೆಯಲ್ಲಿ ಈ ಯೋಗವಿರುವುದರಿಂದ ಆರೋಗ್ಯದ ಬಗ್ಗೆ ಅತೀವ ಜಾಗರೂಕತೆ ಅವಶ್ಯಕ. ವಾಹನ ಚಾಲನೆ ಮಾಡುವಾಗ ಎಚ್ಚರವಿರಲಿ. ಹಣಕಾಸಿನ ವಿಚಾರದಲ್ಲಿ ಯಾರನ್ನೂ ಅತಿಯಾಗಿ ನಂಬಬೇಡಿ.
- ಕರ್ಕಾಟಕ: ಏಳನೇ ಮನೆಯಲ್ಲಿ ಮಂಗಳ-ಚಂದ್ರ ಸಂಯೋಗವು ದಾಂಪತ್ಯದಲ್ಲಿ ಕಿರಿಕಿರಿ ಉಂಟುಮಾಡಬಹುದು. ಆದರೆ ವ್ಯವಹಾರದಲ್ಲಿ ಪಾಲುದಾರರೊಂದಿಗೆ ಉತ್ತಮ ಲಾಭ ಗಳಿಸುವಿರಿ.
- ಸಿಂಹ: ಆರನೇ ಮನೆಯಲ್ಲಿ ಈ ಯೋಗವು ನಿಮ್ಮ ಶತ್ರುಗಳನ್ನು ನಾಶಪಡಿಸುತ್ತದೆ. ಹಳೆಯ ಕಾಯಿಲೆಗಳಿಂದ ಮುಕ್ತಿ ಸಿಗಲಿದೆ. ಕೋರ್ಟ್ ಕಚೇರಿ ಕೆಲಸಗಳಲ್ಲಿ ನಿಮಗೆ ಜಯ ಸಿಗುವ ಸಾಧ್ಯತೆ ದಟ್ಟವಾಗಿದೆ.
- ಕನ್ಯಾ: ಐದನೇ ಮನೆಯಲ್ಲಿ ಈ ಯೋಗವು ವಿದ್ಯಾರ್ಥಿಗಳಿಗೆ ವರದಾನ ಆಗಲಿದೆ. ಕಲೆ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಇರುವವರಿಗೆ ಹೊಸ ಆಲೋಚನೆಗಳು ಹೊಳೆಯಲಿವೆ. ಸಂತಾನ ಲಾಭದ ಯೋಗವಿದೆ.
- ತುಲಾ: ನಾಲ್ಕನೇ ಮನೆಯಲ್ಲಿ ಈ ಯೋಗವಿರುವುದರಿಂದ ಭೂಮಿ ಮತ್ತು ವಾಹನ ಸುಖ ಸಿಗಲಿದೆ. ಮನೆಯ ನವೀಕರಣಕ್ಕಾಗಿ ಹಣ ಖರ್ಚು ಮಾಡುವಿರಿ. ತಾಯಿಯ ಆರೋಗ್ಯದ ಕಡೆ ಗಮನವಿರಲಿ.
- ವೃಶ್ಚಿಕ: ಮೂರನೇ ಮನೆಯಲ್ಲಿ ಮಂಗಳ ಇರುವುದರಿಂದ ನಿಮ್ಮ ಪರಾಕ್ರಮ ಹೆಚ್ಚಲಿದೆ. ಕಿರಿಯ ಸಹೋದರರಿಂದ ಸಹಕಾರ ಸಿಗಲಿದೆ. ಸಣ್ಣ ಪ್ರವಾಸಗಳು ಹೆಚ್ಚಿನ ಲಾಭ ತಂದುಕೊಡಲಿವೆ.
- ಧನು: ಎರಡನೇ ಮನೆಯಲ್ಲಿ ಈ ಯೋಗವಿರುವುದರಿಂದ ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಸಿಕ್ಕಿಹಾಕಿಕೊಂಡಿದ್ದ ಹಣ ವಾಪಸ್ ಬರಲಿದೆ. ಆದರೆ ಮಾತಿನ ಮೇಲೆ ನಿಯಂತ್ರಣವಿರಲಿ, ಕಟು ಮಾತುಗಳು ಸಂಬಂಧ ಕೆಡಿಸಬಹುದು.
- ಮಕರ: ನಿಮ್ಮದೇ ರಾಶಿಯಲ್ಲಿ ಈ ಯೋಗವಿರುವುದರಿಂದ ದೈಹಿಕ ಶಕ್ತಿ ಹೆಚ್ಚಲಿದೆ. ಆತುರದ ನಿರ್ಧಾರಗಳು ಬೇಡ. ರಕ್ತದೊತ್ತಡ ಇರುವವರು ನಿಯಮಿತವಾಗಿ ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ.
- ಕುಂಭ: ಹನ್ನೆರಡನೇ ಮನೆಯಲ್ಲಿ ಈ ಯೋಗ ಇರುವುದರಿಂದ ಅನಗತ್ಯ ಖರ್ಚುಗಳು ಹೆಚ್ಚಾಗಲಿವೆ. ವಿದೇಶ ಪ್ರಯಾಣದ ಕನಸು ಕಾಣುತ್ತಿರುವವರಿಗೆ ಈ ಸಮಯ ಪೂರಕವಾಗಿದೆ.
- ಮೀನ: ಹನ್ನೊಂದನೇ ಮನೆಯಲ್ಲಿ ಈ ಯೋಗವು ಭಾರಿ ಧನಲಾಭವನ್ನು ಸೂಚಿಸುತ್ತದೆ. ಸಮಾಜದ ಗಣ್ಯ ವ್ಯಕ್ತಿಗಳ ಪರಿಚಯವಾಗಲಿದೆ. ಸ್ನೇಹಿತರಿಂದ ನಿರೀಕ್ಷಿತ ಸಹಾಯ ದೊರೆಯಲಿದೆ.
ಲೇಖನ- ಶ್ರೀನಿವಾಸ ಮಠ





