ಎಲ್ಲ ಕಾಲದಲ್ಲಿಯೂ ದೇವರಿಗೆ ಮಾಡುವ ಪೂಜೆ ಶ್ರೇಷ್ಠವೇ. ಆದರೆ ಕೆಲವು ಮಾಸ- ಪರ್ವ ಕಾಲಗಳಲ್ಲಿ ಹೆಚ್ಚು ಸಂಪ್ರೀತನಾಗುವ ದೇವರು, ತನ್ನ ಭಕ್ತರಿಗೆ ಅಕ್ಷಯವಾದ ಫಲವನ್ನು ನೀಡುತ್ತಾನೆ ಎಂಬುದು ಶ್ರದ್ಧೆಯನ್ನು ಮತ್ತೂ ಹೆಚ್ಚು ಮಾಡಿಕೊಳ್ಳಲು ಕಂಡುಕೊಂಡಿರುವ ಮಾರ್ಗ. ಧನುರ್ಮಾಸದಲ್ಲಿ ದೇವರ ಆರಾಧನೆಗೆ, ಆ ಮೂಲಕ ಅಧ್ಯಾತ್ಮ ಸಾಧನೆಗೆ ಹೆಚ್ಚು ಮಹತ್ವ. ಅದು ವಿಷ್ಣುವಿನ ಆರಾಧನೆ ಇರಬಹುದು ಅಥವಾ ಶಿವನ ಆರಾಧನೆ ಇರಬಹುದು. ಹಾಗಿದ್ದರೆ ಹೇಗೆ ದೇವರ ಆರಾಧನೆ ಮಾಡಬೇಕು ಎಂಬ ಪ್ರಶ್ನೆ ಮೂಡುತ್ತದೆ. ಅಲಂಕಾರ ಪ್ರಿಯೋ ವಿಷ್ಣುಃ, ಅಭಿಷೇಕ ಪ್ರಿಯಃ ಶಿವಃ ಎಂಬ ಮಾತಿದೆ. ಹೀಗಂದರೆ, ವಿಷ್ಣುವಿಗೆ ಅಲಂಕಾರ ಪ್ರೀತಿಯಾದರೆ, ಶಿವನಿಗೆ ಅಭಿಷೇಕ ಪ್ರೀತಿಯಂತೆ. ರುದ್ರಾಭಿಷೇಕವು ಶಿವನ ಆರಾಧನೆಯಲ್ಲಿ ಅತ್ಯಂತ ಶ್ರೇಷ್ಠ ಹಾಗೂ ಶಕ್ತಿಯುತವಾದ ಪೂಜಾ ವಿಧಾನ. “ರುದ್ರ” ಎಂದರೆ ಸಂಕಟಗಳನ್ನು ದೂರ ಮಾಡುವವನು ಮತ್ತು “ಅಭಿಷೇಕ” ಎಂದರೆ ಪವಿತ್ರ ದ್ರವ್ಯಗಳಿಂದ ಸ್ನಾನ ಮಾಡಿಸುವುದು ಎಂದರ್ಥ. ಶಿವನು ಅಭಿಷೇಕ ಪ್ರಿಯನಾಗಿರುವುದರಿಂದ, ಭಕ್ತಿಯಿಂದ ಮಾಡುವ ರುದ್ರಾಭಿಷೇಕವು ಭಕ್ತರ ಸಕಲ ಕಷ್ಟಗಳನ್ನು ನಿವಾರಿಸಿ, ಸುಖ-ಶಾಂತಿ ಮತ್ತು ಸಮೃದ್ಧಿಯನ್ನು ಕರುಣಿಸುತ್ತದೆ.
ವಿವಿಧ ದ್ರವ್ಯಗಳಿಂದ ಮಾಡುವ ಅಭಿಷೇಕದ ಫಲಗಳು ಹೀಗಿವೆ:
ಶಿವಪುರಾಣದ ಪ್ರಕಾರ, ಜಗತ್ತಿನ ಸೃಷ್ಟಿ, ಸ್ಥಿತಿ ಮತ್ತು ಲಯಕ್ಕೆ ಕಾರಣನಾದ ಶಿವನು ರುದ್ರ ರೂಪದಲ್ಲಿ ಎಲ್ಲ ನಕಾರಾತ್ಮಕ ಶಕ್ತಿಗಳನ್ನು ನಾಶ ಮಾಡುತ್ತಾನೆ. ಯಜುರ್ವೇದದ ‘ಶ್ರೀ ರುದ್ರಂ’ ಪಠಣದೊಂದಿಗೆ ಮಾಡುವ ಈ ಪೂಜೆಯು ಆತ್ಮಶುದ್ಧಿ ಮತ್ತು ಪರಿಸರದ ಶುದ್ಧೀಕರಣಕ್ಕೆ ಸಹಕಾರಿ. ಗ್ರಹದೋಷಗಳ ನಿವಾರಣೆಗೆ, ಅದರಲ್ಲೂ ವಿಶೇಷವಾಗಿ ಶನಿ ಮತ್ತು ರಾಹು-ಕೇತುಗಳ ನಕಾರಾತ್ಮಕ ಪ್ರಭಾವವು ಕಡಿಮೆ ಆಗುವುದಕ್ಕೆ ರುದ್ರಾಭಿಷೇಕವು ಪರಿಣಾಮಕಾರಿ.
ರುದ್ರಾಭಿಷೇಕದಲ್ಲಿ ಬಳಸುವ ಪ್ರತಿ ವಸ್ತುವಿಗೂ ತನ್ನದೇ ಆದ ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಹಿನ್ನೆಲೆಯಿದೆ. ಅಭಿಷೇಕಕ್ಕೆ ಅರಿಶಿನ, ಕಬ್ಬಿನ ಹಾಲು ಮತ್ತು ಜೇನುತುಪ್ಪದ ಜೊತೆಗೆ ಇತರ ಮುಖ್ಯ ವಸ್ತುಗಳನ್ನು ಬಳಸುವುದರಿಂದ ಯಾವಾ ಕಾಮ್ಯಗಳು ಈಡೇರುತ್ತವೆ ಎಂಬುದರ ವಿವರ ಹೀಗಿದೆ:
ಅರಿಶಿನ:
ಅರಿಶಿನವು ಸೌಭಾಗ್ಯ ಮತ್ತು ಶುದ್ಧಿಯ ಸಂಕೇತ. ಶಿವಲಿಂಗಕ್ಕೆ ಅರಿಶಿನದ ನೀರಿನಿಂದ ಅಥವಾ ಅರಿಶಿನದಿಂದ ಅಭಿಷೇಕ ಮಾಡುವುದರಿಂದ ಕುಟುಂಬದಲ್ಲಿ ಮಾಂಗಲ್ಯ ಭಾಗ್ಯ ದೊರೆಯುತ್ತದೆ. ಅವಿವಾಹಿತರಿಗೆ ವಿವಾಹ ಯೋಗ ಕೂಡಿಬರುತ್ತದೆ. ಸೌಂದರ್ಯ ಮತ್ತು ತೇಜಸ್ಸು ವೃದ್ಧಿಯಾಗುತ್ತದೆ.
ಕಬ್ಬಿನ ಹಾಲು:
ಕಬ್ಬಿನ ಹಾಲಿನಿಂದ ಶಿವನಿಗೆ ಅಭಿಷೇಕವನ್ನು ಮಾಡುವುದು ಅತ್ಯಂತ ವಿಶೇಷವಾದದ್ದು. ಇದನ್ನು ‘ಇಕ್ಷು ರಸ’ ಎಂದೂ ಕರೆಯುತ್ತಾರೆ. ಕಬ್ಬಿನ ಹಾಲಿನಿಂದ ಅಭಿಷೇಕ ಮಾಡುವುದರಿಂದ ಲಕ್ಷ್ಮಿ ದೇವಿಯ ಅನುಗ್ರಹ ದೊರೆತು, ಸಾಲಬಾಧೆ ನೀಗಿ ಸಂಪತ್ತು ಹೆಚ್ಚುತ್ತದೆ. ಕೈಗೊಂಡ ಕಾರ್ಯಗಳಲ್ಲಿ ವಿಘ್ನಗಳು ದೂರವಾಗಿ ಯಶಸ್ಸು ಪ್ರಾಪ್ತಿಯಾಗುತ್ತದೆ.
ಜೇನುತುಪ್ಪ:
ಜೇನುತುಪ್ಪವು ಮಧುರತೆ ಮತ್ತು ಶಕ್ತಿಯ ಸಂಕೇತ. ಜೀವನದಲ್ಲಿ ಸಿಹಿಯನ್ನು ತರುತ್ತದೆ, ಅಂದರೆ ಕೌಟುಂಬಿಕ ಕಲಹಗಳು ದೂರವಾಗಿ ಸಂಬಂಧಗಳಲ್ಲಿ ಮಧುರತೆ ಉಂಟಾಗುತ್ತದೆ. ಅಹಂಕಾರ ಮತ್ತು ಕೆಟ್ಟ ಆಲೋಚನೆಗಳನ್ನು ದೂರ ಮಾಡಿ ಮನಸ್ಸನ್ನು ಶುದ್ಧಗೊಳಿಸುತ್ತದೆ.
ರಾಜ ಶ್ಯಾಮಲಾ ದೇವಿ: ಜ್ಞಾನ, ವಾಕ್ ಸಿದ್ಧಿ, ಕಲೆ ಮತ್ತು ರಾಜಕೀಯ ಯಶಸ್ಸಿನ ಶಕ್ತಿದೇವತೆ
ಹಸುವಿನ ಹಾಲು:
ಶಿವನಿಗೆ ಹಾಲಿನ ಅಭಿಷೇಕ ಮಾಡುವುದರಿಂದ ದೀರ್ಘಾಯುಷ್ಯ ಪ್ರಾಪ್ತಿಯಾಗುತ್ತದೆ. ಸಂತಾನ ಭಾಗ್ಯವಿಲ್ಲದವರಿಗೆ ಸತ್ಸಂತಾನ ಪ್ರಾಪ್ತಿಯಾಗುತ್ತದೆ ಎಂದು ನಂಬಲಾಗಿದೆ.
ಮೊಸರು:
ವಾಹನ ಯೋಗ ಮತ್ತು ಆಸ್ತಿ ಖರೀದಿ ಮಾಡಲು ಬಯಸುವವರು ಮೊಸರಿನ ಅಭಿಷೇಕ ಮಾಡುವುದು ಶ್ರೇಷ್ಠ. ಇದು ಪಶು ಸಂಪತ್ತು ಮತ್ತು ಸಮೃದ್ಧಿಯನ್ನು ನೀಡುತ್ತದೆ.
ತುಪ್ಪ:
ಹಸುವಿನ ಶುದ್ಧ ತುಪ್ಪದಿಂದ ಈಶ್ವರಿನಿಗೆ ಅಭಿಷೇಕ ಮಾಡುವುದರಿಂದ ದೈಹಿಕ ಕಾಯಿಲೆಗಳು ದೂರವಾಗಿ ದೃಢವಾದ ಆರೋಗ್ಯ ಲಭಿಸುತ್ತದೆ. ವಂಶೋದ್ಧಾರಕ್ಕೆ ಇದು ಮಂಗಳಕರ.
ಎಳನೀರು:
ಎಳನೀರಿನಿಂದ ಈಶ್ವರನಿಗೆ ಅಭಿಷೇಕ ಮಾಡುವುದರಿಂದ ಸರ್ವ ಸುಖಗಳು ದೊರೆಯುತ್ತವೆ. ವಿಶೇಷವಾಗಿ ಮಾನಸಿಕ ಶಾಂತಿ ದೊರೆಯುತ್ತದೆ.
ಗಂಧದ ನೀರು:
ಶಿವಲಿಂಗಕ್ಕೆ ಗಂಧದ ಲೇಪನ ಅಥವಾ ಗಂಧವನ್ನು ನೀರಿನಲ್ಲಿ ಬೆರೆಸಿ ಅಭಿಷೇಕ ಮಾಡುವುದರಿಂದ ಸಮಾಜದಲ್ಲಿ ಗೌರವ, ಕೀರ್ತಿ ಮತ್ತು ಪ್ರತಿಷ್ಠೆ ಲಭಿಸುತ್ತದೆ.
ಡಯಾಬಿಟೀಸ್ ನಿಯಂತ್ರಣಕ್ಕೆ ನಂಬಿಕೆಯ ದೇಗುಲ: ಸಾವಿರ ವರ್ಷಗಳ ಇತಿಹಾಸದ ಕರುಂಬೇಶ್ವರರ್ ದೇವಾಲಯ
ಯಾವುದೇ ಫಲಾಪೇಕ್ಷೆ ಇಲ್ಲದೆಯೂ ರುದ್ರಾಭಿಷೇಕ ಮಾಡುವರಿಂದ ಆಗುವ ಸಾಮಾನ್ಯ ಲಾಭಗಳು ಹೀಗಿವೆ:
1. ಗ್ರಹ ದೋಷ ನಿವಾರಣೆ: ಜಾತಕದಲ್ಲಿರುವ ಚಂದ್ರ ದೋಷ, ಅರ್ಧಾಷ್ಟಮ ಶನಿ (ಜನ್ಮರಾಶಿಯಿಂದ ನಾಲ್ಕನೇ ಮನೆಯಲ್ಲಿ ಶನೈಶ್ವರ ಸಂಚಾರ) ಅಥವಾ ಸಾಡೇಸಾತ್ ಶನಿಯ ಪ್ರಭಾವವನ್ನು (ಜನ್ಮರಾಶಿಯಿಂದ ಹನ್ನೆರಡು, ಒಂದು ಹಾಗೂ ಎರಡನೇ ಮನೆಯಲ್ಲಿ ಶನಿ ಸಂಚಾರ ಕಾಲ) ಇದು ಕಡಿಮೆ ಮಾಡುತ್ತದೆ.
2. ನಕಾರಾತ್ಮಕ ಶಕ್ತಿಗಳ ದೋಷ ನಿವಾರಣೆ: ಗೃಹ ವಾಸ್ತು ದೋಷ ಅಥವಾ ದೃಷ್ಟಿ ದೋಷಗಳನ್ನು ಈ ಪೂಜೆಯು ನಿವಾರಣೆ ಮಾಡುತ್ತದೆ.
3. ಏಕಾಗ್ರತೆ: ವಿದ್ಯಾರ್ಥಿಗಳು ರುದ್ರಾಭಿಷೇಕ ಮಾಡುವುದರಿಂದ ಬುದ್ಧಿಶಕ್ತಿ ಮತ್ತು ಏಕಾಗ್ರತೆ ಹೆಚ್ಚುತ್ತದೆ.
4. ಆರೋಗ್ಯ ವೃದ್ಧಿ: ಅಕಾಲ ಮೃತ್ಯು ಭಯವನ್ನು ದೂರ ಮಾಡಿ, ಆಯುಷ್ಯವನ್ನು ವೃದ್ಧಿಸುತ್ತದೆ.
ಪೂಜೆಯ ಕಾಲ:
ರುದ್ರಾಭಿಷೇಕವನ್ನು ವರ್ಷದ ಯಾವುದೇ ದಿನ ಮಾಡಬಹುದಾದರೂ ಶ್ರಾವಣ ಮಾಸ, ಮಹಾಶಿವರಾತ್ರಿ, ಪ್ರದೋಷ ಕಾಲ ಮತ್ತು ಸೋಮವಾರದಂದು ಮಾಡುವುದು ಹೆಚ್ಚು ಫಲದಾಯಕ.
ಲೇಖನ- ಶ್ರೀನಿವಾಸ ಮಠ





