ಸೂರ್ಯನ ಆರಾಧನೆಗೆ ಮೀಸಲಾದ ಅತ್ಯಂತ ಪವಿತ್ರ ದಿನ ‘ರಥಸಪ್ತಮಿ’. ಮಾಘ ಮಾಸದ ಶುಕ್ಲ ಪಕ್ಷದ ಸಪ್ತಮಿಯಂದು ಆಚರಿಸಲಾಗುವ ಈ ಹಬ್ಬದ ಕುರಿತಾದ ಲೇಖನ ಇಲ್ಲಿದೆ: ಭಾರತೀಯ ಸಂಸ್ಕೃತಿಯಲ್ಲಿ ಸೂರ್ಯನನ್ನು ‘ಪ್ರತ್ಯಕ್ಷ ದೈವ’ ಎಂದು ಕರೆಯಲಾಗುತ್ತದೆ. ಸೂರ್ಯನ ಚಲನೆಯಲ್ಲಿನ ಬದಲಾವಣೆ ಮತ್ತು ಆತನ ಜನ್ಮದಿನವನ್ನು ಪ್ರತಿನಿಧಿಸುವ ಹಬ್ಬವೇ ರಥಸಪ್ತಮಿ. ಇದನ್ನು ‘ಮಾಘ ಸಪ್ತಮಿ’ ಅಥವಾ ‘ಸೂರ್ಯ ಜಯಂತಿ’ ಎಂದೂ ಕರೆಯಲಾಗುತ್ತದೆ.
ರಥಸಪ್ತಮಿ ಯಾವಾಗ?
ಹಿಂದೂ ಪಂಚಾಂಗದ ಪ್ರಕಾರ, ಈ ವರ್ಷ 2026ರ ಜನವರಿ 25, ಭಾನುವಾರದಂದು ರಥಸಪ್ತಮಿಯನ್ನು ಆಚರಿಸಲಾಗುತ್ತದೆ. ಭಾನುವಾರವು ಸೂರ್ಯನಿಗೆ ಪ್ರಿಯವಾದ ದಿನವಾದ್ದರಿಂದ ಈ ಬಾರಿ ಈ ಹಬ್ಬಕ್ಕೆ ಮತ್ತಷ್ಟು ವಿಶೇಷತೆ ಬಂದಿದೆ.
ಹಿನ್ನೆಲೆ ಮತ್ತು ಪುರಾಣದ ಉಲ್ಲೇಖ
- ಸೂರ್ಯನ ಜನ್ಮದಿನ: ಪುರಾಣಗಳ ಪ್ರಕಾರ, ಕಶ್ಯಪ ಮುನಿ ಮತ್ತು ಅದಿತಿ ದಂಪತಿಗೆ ಸೂರ್ಯದೇವನು ಜನಿಸಿದ ದಿನವಿದು. ಜಗತ್ತಿಗೆ ಬೆಳಕು ನೀಡಲು ಸೂರ್ಯನು ಮೊದಲ ಬಾರಿಗೆ ಕಾಣಿಸಿಕೊಂಡಿದ್ದರಿಂದ ಇದನ್ನು ಸೂರ್ಯ ಜಯಂತಿ ಎನ್ನಲಾಗುತ್ತದೆ.
- ದಿಕ್ಕು ಬದಲಾವಣೆ: ಉತ್ತರಾಯಣ ಪುಣ್ಯಕಾಲದ ಆರಂಭದ ನಂತರ, ಸೂರ್ಯನು ತನ್ನ ಏಳು ಕುದುರೆಗಳ ರಥವನ್ನು ಉತ್ತರ ದಿಕ್ಕಿನತ್ತ ತಿರುಗಿಸಿ ಸಂಚರಿಸುವ ದಿನವೇ ರಥಸಪ್ತಮಿ. ಈ ಏಳು ಕುದುರೆಗಳು ವಾರದ ಏಳು ದಿನಗಳನ್ನು ಮತ್ತು ರಥದ ಹನ್ನೆರಡು ಚಕ್ರಗಳು ವರ್ಷದ ಹನ್ನೆರಡು ರಾಶಿಗಳನ್ನು ಸಂಕೇತಿಸುತ್ತವೆ.
ಷೇರು ಮಾರುಕಟ್ಟೆ ಹೂಡಿಕೆ: ಯಾವ ರಾಶಿಯವರ ಹೂಡಿಕೆ ಶೈಲಿ ಹೇಗಿರುತ್ತದೆ? ಇಲ್ಲಿದೆ ಪೂರ್ಣ ವಿವರ
ಧಾರ್ಮಿಕ ಮತ್ತು ಆರೋಗ್ಯದ ಮಹತ್ವ
- ಆರೋಗ್ಯ ವೃದ್ಧಿ: “ಆರೋಗ್ಯಂ ಭಾಸ್ಕರಾದಿಚ್ಛೇತ್” ಅಂದರೆ ಆರೋಗ್ಯಕ್ಕಾಗಿ ಸೂರ್ಯನನ್ನು ಪ್ರಾರ್ಥಿಸಬೇಕು ಎಂಬ ನಾಣ್ನುಡಿಯಿದೆ. ರಥಸಪ್ತಮಿಯಂದು ಸೂರ್ಯಕಿರಣಗಳು ದೇಹದ ಮೇಲೆ ಬೀಳುವುದರಿಂದ ಚರ್ಮವ್ಯಾಧಿಗಳು ದೂರವಾಗಿ ಚೈತನ್ಯ ಲಭಿಸುತ್ತದೆ.
- ಸೂರ್ಯನಮಸ್ಕಾರ: ಈ ದಿನ ಸೂರ್ಯನಮಸ್ಕಾರ ಮಾಡುವುದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ಸುಧಾರಿಸುತ್ತದೆ.
ಆಚರಿಸುವ ವಿಧಾನ (ನಿಯಮಗಳು)
ರಥಸಪ್ತಮಿಯಂದು ವಿಶೇಷವಾಗಿ ‘ಅರ್ಘ್ಯ’ ನೀಡುವುದು ಅತ್ಯಂತ ಮುಖ್ಯ:
- ಎಕ್ಕದ ಎಲೆಗಳ ಸ್ನಾನ: ಈ ದಿನ ತಲೆಯ ಮೇಲೆ ಏಳು ಎಕ್ಕದ ಎಲೆಗಳನ್ನು (ತಲೆಯ ಮೇಲೆ ಒಂದು, ಭುಜಗಳ ಮೇಲೆ ಎರಡು, ಮಂಡಿಗಳ ಮೇಲೆ ಎರಡು ಹಾಗೂ ಪಾದಗಳ ಮೇಲೆ ಎರಡು) ಇಟ್ಟುಕೊಂಡು ಸ್ನಾನ ಮಾಡುವುದು ಪದ್ಧತಿ. ಇದು ಶರೀರದ ಕಲ್ಮಶಗಳನ್ನು ಹೋಗಲಾಡಿಸುತ್ತದೆ ಎಂದು ನಂಬಲಾಗಿದೆ.
- ಅರ್ಘ್ಯ ಪ್ರದಾನ: ನದಿಯಲ್ಲಿ ಅಥವಾ ಮನೆಯಲ್ಲಿ ಸ್ನಾನದ ನಂತರ ಸೂರ್ಯನಿಗೆ ಅಭಿಮುಖವಾಗಿ ನಿಂತು ಕೆಂಪು ಹೂವು, ಅಕ್ಷತೆ ಮಿಶ್ರಿತ ನೀರನ್ನು ಅರ್ಪಿಸಬೇಕು.
- ರಂಗೋಲಿ: ಮನೆಯ ಅಂಗಳದಲ್ಲಿ ಸೂರ್ಯನ ರಥದ ರಂಗೋಲಿಯನ್ನು ಹಾಕಿ ಪೂಜಿಸಬೇಕು.
- ಪರಮಾನ್ನ (ಹಾಲು ಉಕ್ಕಿಸುವುದು): ಸೂರ್ಯನ ಕಿರಣಗಳು ಬೀಳುವ ಜಾಗದಲ್ಲಿ ಒಲೆ ಹೂಡಿ, ಹಾಲು ಉಕ್ಕಿಸಿ ಅದರಲ್ಲಿ ಹೊಸ ಅಕ್ಕಿಯ ಪಾಯಸ ಅಥವಾ ಪರಮಾನ್ನವನ್ನು ತಯಾರಿಸಿ ಸೂರ್ಯನಿಗೆ ನೈವೇದ್ಯ ಮಾಡಲಾಗುತ್ತದೆ.
ದಾನ ಮತ್ತು ಫಲ
ಈ ದಿನ ಸಕ್ಕರೆ, ವಸ್ತ್ರ ಮತ್ತು ಗೋಧಿಯನ್ನು ದಾನ ಮಾಡುವುದು ಶ್ರೇಷ್ಠ. ರಥಸಪ್ತಮಿಯ ದಿನ ಮಾಡುವ ಪೂಜೆಯು ಏಳು ಜನ್ಮಗಳ ಪಾಪಗಳನ್ನು ಪರಿಹರಿಸುತ್ತದೆ ಎಂಬ ನಂಬಿಕೆಯಿದೆ.
ಲೇಖನ- ಶ್ರೀನಿವಾಸ ಮಠ





